ಬುಡಕಟ್ಟು ಜನರ ಅಭಿವೃದ್ದಿಯಲ್ಲಿ ಕಳಪೆ ಸಾಧನೆ: ವರದಿ

ಕೇಂದ್ರ ಬುಡಕಟ್ಟು ವ್ಯವಹಾರ ಸಚಿವಾಲಯ ಹೊರತಂದಿರುವ ವರದಿ ಪ್ರಕಾರ ದೇಶದಲ್ಲಿ ಬುಡಕಟ್ಟು ಜನರ ಅಭಿವೃದ್ದಿ ವಿವಿಧ ಸಾಮಾಜಿಕ ಆಯಾಮಗಳಲ್ಲಿ ಹಿತರೆ ವರ್ಗದವರಿಗಿಂತ ತೀರಾ ಹಿಂದೆ ಉಳಿದಿರುವುದಾಗಿ ತಿಳಿದು ಬಂದಿದೆ. ಶಿಶು ಮತ್ತುಮಕ್ಕಳ ಮರಣ, ಮಹಿಳೆಯರ ಆರೋಗ್ಯ, ಶಿಕ್ಷಣ ಮತ್ತು ಬಡತನದಲ್ಲಿ ತೀರಾ ಹಿಂದುಳಿದಿರುವುದಾಗಿ ಹೇಳಲಾಗಿದೆ.

ವರದಿಯ ಮುಖ್ಯಾಂಶಗಳು:

  • ಬುಡಕಟ್ಟು ಜನಸಂಖ್ಯೆಯ ಬಹುಪಾಲು ಸಂಖ್ಯೆ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ರಕ್ತ ಕ್ಷೀಣತೆಯಿಂದ ಬಳಲುತ್ತಿರುವ ಮಹಿಳೆಯ ಸಂಖ್ಯೆ ಬುಡಕಟ್ಟು ಜನರಲ್ಲಿ ಅಧಿಕವಾಗಿದೆ.
  • ಮರಣ ಪ್ರಮಾಣ: ಶಿಶು ಮತ್ತು ಮಕ್ಕಳ ಪ್ರಮಾಣ ಇತರೆ ವರ್ಗದವರಿಗಿಂತ ಬುಡಕಟ್ಟು ಜನರಲ್ಲಿ ಹೆಚ್ಚು ದಾಖಲಾಗಿದೆ.
  • ಶಿಕ್ಷಣ: ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಿಗೆ ಬುಡಕಟ್ಟು ಜನಾಂಗದ ಮಕ್ಕಳ ದಾಖಲಾತಿ ಪ್ರಮಾಣ 2013-14 ರಲ್ಲಿ 113.2 ಇದ್ದರೆ 2015-16 ರಲ್ಲಿ 109.4 ಕ್ಕೆ ಇಳಿದಿದೆ.
  • ಬಡತನ: ಬಡತನ ಪ್ರಮಾಣ ಕಳೆದ ವರ್ಷಗಳಿಗೆ ಹೋಲಿಸಿದರೆ ಹೆಚ್ಚಾಗಿದೆ. ಸಾಕಷ್ಟು ಬುಡಕಟ್ಟು ಜನರು ಈಗಲೂ ಬಡತನದಿಂದ ಬಳಲುತ್ತಿದ್ದಾರೆ.
  • ಆರೋಗ್ಯ: ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯ ವ್ಯವಸ್ಥೆ ಕೊರತೆ ತೀವ್ರವಾಗಿದೆ. ಮಾರ್ಚ್ 31, 2015 ಅಂತ್ಯಕ್ಕೆ ಮಾಹಿತಿ ಪ್ರಕಾರ 1, 267 ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು 309 ಸಮುದಾಯ ಆರೋಗ್ಯ ಕೇಂದ್ರಗಳ ಕೊರತೆ ಇದೆ.
  • ಪುನರ್ವಸತಿ ಕೊರತೆ: ವಿವಿಧ ಅಭಿವೃದ್ದಿ ಯೋಜನೆಗಳಿಂದ ಬುಡಕಟ್ಟು ಜನರು ವಿವಿಧ ಮೂಲಸೌಕರ್ಯಗಳಿಂದ ವಂಚಿತರಾಗಿದ್ದು, ಪುನರ್ವಸತಿ ಕೊರತೆ ಸಾಕಷ್ಟಿದೆ ಎನ್ನಲಾಗಿದೆ.

ಆಯುರ್ವೇದ ಔಷಧಿಗಳಲ್ಲಿ ಜಿಂಕೆಯ ಕೊಂಬು ಬಳಸಲು ಕೇಂದ್ರ ಸರ್ಕಾರದ ಅನುಮತಿ ಕೋರಿದ ಕೇರಳ

ಮಚ್ಚೆಯುಳ್ಳ ಜಿಂಕೆ ಮತ್ತು ಸಾಂಬಾರ್ ಜಿಂಕೆಯ ಕೊಂಬುಗಳನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲು ಅನುಮತಿ ನೀಡುವಂತೆ ಕೇರಳ ಸರ್ಕಾರ ಕೇಂದ್ರ ಸರ್ಕಾರದ ಮೊರೆ ಹೋಗಿದೆ. ಈ ಸಂಬಂಧ ಕೇರಳ ರಾಜ್ಯ ವನ್ಯಜೀವಿ ಮಂಡಳಿ ಅಧ್ಯಕ್ಷರೂ ಆಗಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರು ರಾಷ್ಟ್ರೀಯ ವನ್ಯಜೀವಿ ಮಂಡಳಿ ಮತ್ತು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆ ಮೂಲಕ ಕೇರಳ ರಾಜ್ಯ ವನ್ಯಜೀವಿ ಮಂಡಳಿಯೂ ವನ್ಯಜೀವಿ ಸಂರಕ್ಷಣೆ ಕಾಯಿದೆ-1972ಕ್ಕೆ ತಿದ್ದುಪಡಿ ತರಲು ಕೋರಿದೆ.

ಜಿಂಕೆ ಕೊಂಬುಗಳು?

ಜಿಂಕೆಗಳ ತಲೆ ಭಾಗದಿಂದ ಹೊರಚಾಚಿ ಬೆಳೆದಿರುವ ಭಾಗಗಳೆ ಕೊಂಬುಗಳು. ಮಚ್ಚೆಗಳನ್ನು ಹೊಂದಿರುವ ಜಿಂಕೆಗಳು, ಸಾಂಬಾರ್ ಜಿಂಕೆ ಮತ್ತು ಕೂಗುವ ಜಿಂಕೆಗಳು ಕೊಂಬುಗಳನ್ನು ಹೊಂದಿದ್ದು, ಕೇರಳದಲ್ಲಿ ಕಾಣಬಹುದಾಗಿದೆ. ಪ್ರತಿವರ್ಷ ಈ ಕೊಂಬುಗಳು ಕಳಚಿ ಬೀಳುತ್ತವೆ. ಈ ಕೊಂಬುಗಳು ಆಯುರ್ವೇದ ಔಷಧಿ ಗುಣಗಳನ್ನು ಹೊಂದಿದ್ದು, ರಕ್ತ ಪರಿಚಲನೆ, ಮೂಳೆ ಮತ್ತು ಮಾಂಸಖಂಡಗಳನ್ನು ಬಲಿಷ್ಠಗೊಳಿಸಲು ಬಳಸಲಾಗುತ್ತಿದೆ.

ಹಿನ್ನಲೆ:

ಮೃಗಾಲಯದಲ್ಲಿ ಕಳಚಿ ಬಿದ್ದಿರುವ ಜಿಂಕೆಗಳ ಕೊಂಬುಗಳನ್ನು ಸಂಗ್ರಹಿಸಿ ಆಯುರ್ವೇದ ಔಷಧಿ ತಯಾರಿಕೆಯಲ್ಲಿ ಬಳಸಲು ಅನುಮತಿ ನೀಡುವಂತೆ ಕೇರಳ ರಾಜ್ಯದ ಸ್ಥಳೀಯ ಆಯುರ್ವೇದ ಔಷಧಿ ತಯಾರಕರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ ವನ್ಯಜೀವಿ ಸಂರಕ್ಷಣೆ ಕಾಯಿದೆ-1972 ರಡಿ ಜಿಂಕೆಯ ಕೊಂಬುಗಳ ಮಾರಾಟ ಮತ್ತು ಬಳಸುವುದರ ಮೇಲೆ ನಿಷೇಧ ವಿಧಿಸಲಾಗಿದೆ. ಆಗಾಗಿ ಕೇರಳ ಸರ್ಕಾರ ವನ್ಯಜೀವಿ ಸಂರಕ್ಷಣೆ ಕಾಯಿದೆ-1972ಕ್ಕೆ ಸೂಕ್ತ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರದ ಮೊರೆ ಹೋಗಿದೆ.

ರಾಷ್ಟ್ರೀ ಕಾರಿಡಾರ್ ಅಭಿವೃದ್ದಿ ಸಂಸ್ಥೆ ಸ್ಥಾಪನೆಗೆ ಕೇಂದ್ರ ಸರ್ಕಾರ ಅಸ್ತು

ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ ಯೋಜನೆ ಅನುಷ್ಟಾನ ಟ್ರಸ್ಟ್ ನಿಧಿಯನ್ನು (DMICPTF) ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ದಿ ಮತ್ತು ಅನುಷ್ಟಾನ ಟ್ರಸ್ಟ್ (NICDIT) ಎಂದು ಮರು ಅಂಕಿತಗೊಳುಸಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. NICDIT ದೇಶದ ಎಲ್ಲ ಕೈಗಾರಿಕಾ ಕಾರಿಡಾರ್ನ ಸಮಗ್ರ ಅಭಿವೃದ್ದಿ ಮೇಲ್ವಿಚಾರಣೆ ನಡೆಸುವ ಸರ್ವೋನ್ನತ ಮಂಡಳಿಯಾಗಿರಲಿದೆ. ಆ ಮೂಲಕ ದೇಶದ ಐದು ಪ್ರಸ್ತಾವಿತ ಕೈಗಾರಿಕಾ ಕಾರಿಡಾರ್ ಅನುಷ್ಟಾನಗೊಳಿಸುವ ಜವಾಬ್ದಾರಿ ಇದರದು.

ಪ್ರಮುಖಾಂಶಗಳು:

  • ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಯಡಿ ಇದು ಕಾರ್ಯನಿರ್ವಹಿಸಲಿದೆ.
  • ಕೇಂದ್ರ ಸರ್ಕಾರದ ಕೈಗಾರಿಕಾ ಕಾರಿಡಾರ್ ಯೋಜನೆಗಳ ಅಭಿವೃದ್ದಿಯಲ್ಲಿ ಸಮನ್ವಯತೆ ಸಾಧಿಸುವುದು ಮತ್ತು ಅವುಗಳ ಅನುಷ್ಟಾನದ ಮೇಲೆ ನಿಗಾವಹಿಸುವ ಕರ್ತವ್ಯವನ್ನು ಹೊಂದಿರಲಿದೆ.
  • ಕೇಂದ್ರ ಸರ್ಕಾರ ಈಗಾಗಲೇ ಬಿಡುಗಡೆಗೊಳಿಸಿರುವ ಅನುದಾನ ಮತ್ತು ಬಿಡುಗಡೆಗೊಳಿಸಲಿರುವ ಅನುದಾನವನ್ನು ಬಳಸಿಕೊಳ್ಳಲು NICDITಗೆ ಅಧಿಕಾರವನ್ನು ನೀಡಲಾಗಿದೆ.
  • ಇದಲ್ಲದೇ, NICDITಯ ಚಟುವಟಿಕೆ ಮತ್ತು ಯೋಜನೆಗಳ ಪ್ರಗತಿಯನ್ನು ಪರಿಶೀಲಿನೆ ನಡೆಸಲು ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯಲ್ಲಿ ಅಪೆಕ್ಸ್ ಮಾನಿಟರಿಂಗ್ ಆಥಾರಿಟಿಯನ್ನು ಸ್ಥಾಪಿಸಲಾಗುವುದು. ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು, ರೈಲ್ವೆ ಸಚಿವರು, ನೀತಿ ಆಯೋಗದ ಉಪಾಧ್ಯಕ್ಷರು, ಸಂಬಂಧಿಸಿದ ರಾಜ್ಯಗಳ ಮುಖ್ಯಮಂತ್ರಿಗಳು ಇದರ ಸದಸ್ಯರಾಗಿರುತ್ತಾರೆ.

ಪ್ರಸ್ತಾವಿತ ಐದು ಕೈಗಾರಿಕಾ ಕಾರಿಡಾರ್

  • ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್, ಬೆಂಗಳೂರು-ಮುಂಬೈ ಆರ್ಥಿಕ ಕಾರಿಡಾರ್, ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್, ಅಮೃತ್ ಸರ-ಕೊಲ್ಕತ್ತಾ ಕೈಗಾರಿಕಾ ಕಾರಿಡಾರ್ ಮತ್ತು ವಿಶಾಖಪಟ್ಟಣಂ-ಚೆನ್ನೈ ಕೈಗಾರಿಕಾ ಕಾರಿಡಾರ್.

ಕೆನ್-ಬೇತ್ವಾ ನದಿ ಜೋಡಣೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಹಸಿರು ನಿಶಾನೆ

ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಹಸಿರು ನಿಶಾನೆ ತೋರಿದೆ. ಆ ಮೂಲಕ ಈ ಎರಡು ನದಿ ಜೋಡಣೆ ಕಾರ್ಯಕ್ಕೆ ಚಾಲನೆ ದೊರೆತಿದೆ. ಪನ್ನ ಹುಲಿ ಮೀಸಲು ಪ್ರದೇಶದಿಂದ ಅರಣ್ಯ ಭೂಮಿ ಅವಶ್ಯವಿದ್ದ ಕಾರಣ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಅವಶ್ಯಕತೆಯಿತ್ತು. ಆದಾಗ್ಯೂ ರಾಷ್ಟ್ರೀಯ ವನ್ಯಜೀವಿ ಮಂಡಳಿ ಕೆಲವು ನಿಬಂಧನೆಗಳನ್ನು ವಿಧಿಸಿದೆ, ಅವುಗಳೆಂದರೆ:

  • ರಾಣಿಪುರ ಮತ್ತು ರಾಣಿ ದುರ್ಗವತಿ ಅಭಯಾರಣ್ಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಪನ್ನ ಹುಲಿ ಮೀಸಲು ಪ್ರದೇಶದೊಂದಿಗೆ ಏಕೀಕರಣಗೊಳಿಸುವುದು ಮತ್ತು ಈ ಪ್ರದೇಶದಲ್ಲಿ ಗಣಿಗಾರಿಕೆ ಮೇಲೆ ಸಂಪೂರ್ಣ ನಿಷೇಧ ಹೇರುವುದು.
  • ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವೂ ಭಾರತೀಯ ವನ್ಯಜೀವಿ ಸಂಸ್ಥೆ ಮತ್ತು ರಾಜ್ಯ ಅರಣ್ಯ ಇಲಾಖೆ ಸಹಕಾರದೊಂದಿಗೆ ಯೋಜನೆಯ ಭೂಪ್ರದೇಶದ ಮೇಲೆ ನಿಗಾವಹಿಸುವುದು.

ಹಿನ್ನಲೆ:

ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ 2014ರಲ್ಲೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತಾದರೂ, ವನ್ಯಜೀವಿ ಸಂರಕ್ಷಣಕಾರರು ಮತ್ತು ಪರಿಸರವಾದಿಗಳು ಯೋಜನೆಯನ್ನು ವಿರೋಧಿಸಿದ ಕಾರಣ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಆದ್ದರಿಂದ ಯೋಜನೆಯ ಅನುಷ್ಟಾನ ವಿಳಂಬವಾಗಿತ್ತು. ಮಧ್ಯ ಪ್ರದೇಶದ ಪನ್ನ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಸುಮಾರು 8,650 ಹೆಕ್ಟೇರ್ ಪ್ರದೇಶ ಈ ಯೋಜನೆಯ ಅನುಷ್ಟಾನದಿಂದ ಮುಳುಗಡೆಯಾಗಲಿದೆ. ಆದ್ದರಿಂದ ಹುಲಿ ಮತ್ತಿತ್ತರ ವನ್ಯಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಪರಿಸರವಾದಿಗಳು ಮತ್ತು ವನ್ಯಜೀವಿ ಸಂರಕ್ಷಣಕಾರರು ಯೋಜನೆಗೆ ವಿರೋದ ವ್ಯಕ್ತಪಡಿಸುತ್ತಿದ್ದಾರೆ.

ಕೆನ್-ಬೇತ್ವಾ ಯೋಜನೆ ಬಗ್ಗೆ:

  • ಕೆನ್ ನದಿಯ ಹೆಚ್ಚುವರಿ ನೀರನ್ನು ಕಾಂಕ್ರಿಟ್ ಕಾಲುವೆ ಮೂಲಕ ಬೇತ್ವಾ ನದಿಗೆ ಹರಿಸಿ ಆ ಮೂಲಕ ದೇಶದ ಅತ್ಯಂತ ಬರಗಾಲ ಪೀಡಿತ ಬುಂದೇಲ್ ಖಂಡ್ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ಯೋಜನೆಯ ಉದ್ದೇಶ.
  • ಈ ಯೋಜನೆಯು ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದ 6 ಜಿಲ್ಲೆಗಳಗೆ ಕುಡಿಯುವ ನೀರು, ನೀರಾವರಿ ಮತ್ತು ವಿದ್ಯುತ್ ಸೌಕರ್ಯ ಒದಗಿಸಲಿದೆ.
  • 221 ಕಿ.ಮೀ ಉದ್ದದ ಕಾಂಕ್ರಿಟ್ ಕಾಲುವೆಯು ಉತ್ತರ ಪ್ರದೇಶದ ಜಾನ್ಸಿ, ಬಂಡ ಮತ್ತು ಮಹೊಬ ಜಿಲ್ಲೆ ಹಾಗೂ ಮಧ್ಯ ಪ್ರದೇಶದ ಛತ್ತರ್ ಪುರ್, ಟಿಕಮ್ ಘರ್, ಪನ್ನ ಜಿಲ್ಲೆಗಳ ಮೂಲಕ ಹಾದು ಹೋಗಲಿದೆ.

ರಾಜಸ್ತಾನದ ಸಾಹಿತಿ ಸತ್ಯ ನಾರಾಯಣ್ ರವರಿಗೆ 2016ಬಿಹಾರಿ ಪುರಸ್ಕಾರ

ರಾಜಸ್ತಾನದ ಪ್ರಖ್ಯಾತ ಸಾಹಿತಿ ಡಾ. ಸತ್ಯ ನಾರಾಯಣ್ ರವರನ್ನು ಕೆ.ಕೆ.ಬಿರ್ಲಾ ಪೌಂಡೇಶನ್ ನೀಡುವ 26ನೇ ಬಿಹಾರಿ 2016 ಪುರಸ್ಕಾರಕ್ಕೆ ಆಯ್ಕೆಮಾಡಲಾಗಿದೆ.  ಸತ್ಯನಾರಾಯಣ್ ರವರ “ಯೆಹ್ ಏಕ್ ದುನಿಯಾ” ಹಿಂದಿ ಪುಸ್ತಕಕ್ಕೆ ಈ ಪ್ರಶಸ್ತಿಯನ್ನು ನೀಡಲಾಗಿದೆ. 2010 ರಲ್ಲಿ ಈ ಪುಸ್ತಕ ಪ್ರಕಟಣೆಗೊಂಡಿದೆ.

ಡಾ.ಸತ್ಯ ನಾರಾಯಣ್ ಬಗ್ಗೆ:

  • ಡಾ.ಸತ್ಯ ನಾರಾಯಣ್ ರವರು ರಾಜಸ್ತಾನದ ಪ್ರಸಿದ್ದ ಸಾಹಿತಿ.
  • “ಪಾತಿ ಜಬ್ ಸೆ ಏಕ್ ದಿನ್”, “ಯಹಿನ್ ಕಹಿನ್ ನೀಂದ್ ತಿ”, “ರೆತ್ ಕಿ ಕೊಕ್ ಮೇನ್” ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.
  • ಡಾ. ಸತ್ಯನಾರಾಯಣ್ ರವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ. “ಆಚಾರ್ಯ ನಿರಂಜನಾಥ್ ಸಮ್ಮಾನ್”, ರಾಜಸ್ತಾನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅವುಗಳಲ್ಲಿ ಪ್ರಮುಖವಾದವು.

ಬಿಹಾರಿ ಪುರಸ್ಕಾರ:

  • ಕೆ.ಕೆ ಬಿರ್ಲಾ ಪೌಂಡೇಶನ್ ಈ ಪ್ರಶಸ್ತಿಯನ್ನು 1991 ರಲ್ಲಿ ಸ್ಥಾಪಿಸಿದೆ. ಖ್ಯಾತ ಹಿಂದಿ ಕವಿ ಬಿಹಾರಿ ಹೆಸರನ್ನು ಪ್ರಶಸ್ತಿಗೆ ಇಡಲಾಗಿದೆ.
  • ಪ್ರಶಸ್ತಿಯು ರೂ 2 ಲಕ್ಷ ನಗದು, ಫಲಕವನ್ನು ಒಳಗೊಂಡಿದೆ.
  • ಕಳೆದ ಹತ್ತು ವರ್ಷಗಳಲ್ಲಿ ರಾಜಸ್ತಾನಿ ಲೇಖಕರು ಹಿಂದಿ ಅಥವಾ ರಾಜಸ್ತಾನಿ ಭಾಷೆಯಲ್ಲಿ ಪ್ರಕಟಿಸಿದ ಅತ್ಯುತ್ತಮ ಪುಸ್ತಕಕ್ಕೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
  • 2015ನೇ ಸಾಲಿನ ಪ್ರಶಸ್ತಿಯನ್ನು ಲೇಖಕ “ಭಗವತಿ ಲಾಲ್ ವ್ಯಾಸ್” ರವರ ಕವನ ಸಂಕಲನ “ಕಥಾ ಸುನ್ ಅವೆ ಹೈ ಸಬದ್”ಗೆ ನೀಡಲಾಗಿತ್ತು.

Leave a Comment

This site uses Akismet to reduce spam. Learn how your comment data is processed.