ಬಿಸಿಸಿಐ ನಿಂದ ಅನುರಾಗ್ ಠಾಕೂರ್ ರವರನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್ ಬಿಸಿಸಿಐನ ಕಾರ್ಯದರ್ಶಿ ಸ್ಥಾನದಿಂದ ಅಜಯ್ ಶಿರ್ಕೆ ಅವರನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಲೋಧಾ ಸಮಿತಿ ವರದಿಯನ್ನು ಅನುಷ್ಟಾನಗೊಳಿಸಲು ವಿಫಲರಾದ ಕಾರಣ ಸುಪ್ರೀಂಕೋರ್ಟ್ ಈ ಕಠಿಣ ನಿರ್ಣಯವನ್ನು ಕೈಗೊಂಡಿದೆ. ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದ್ದು ಅನುರಾಗ್ ಠಾಕೂರ್ ಮತ್ತು ಅಜಯ್ ಶಿರ್ಕೆ ಈ ಹುದ್ದೆಯಲ್ಲಿ ಮುಂದುವರೆಯಲು ಯೋಗ್ಯತೆಯನ್ನು ಹೊಂದಿಲ್ಲ ಎಂದು ಕೋರ್ಟ್ ತಿಳಿಸಿದೆ.
ತೀರ್ಪಿನ ಮುಖ್ಯಾಂಶಗಳು:
- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ವ್ಯವಹಾರಗಳಿಂದ ದೂರ ಉಳಿಯುವಂತೆ ಈ ಇಬ್ಬರಿಗೂ ಸೂಚಿಸಲಾಗಿದೆ. ಆ ಮೂಲಕ ಭಾರತ ಕ್ರಿಕೆಟ್ ಆಟದ ಅತ್ಯುನ್ನತ ಸಂಸ್ಥೆಯಾದ ಬಿಸಿಸಿಐಯನ್ನು ಪುನರ್ ರಚಿಸಲು ಕೋರ್ಟ್ ಸಿದ್ದತೆ ನಡೆಸಿದೆ.
- ಬಿಸಿಸಿಐನ ಆಡಳಿತವನ್ನು ನಡೆಸಲು ಆಡಳಿತ ಸಮಿತಿಯನ್ನು ರಚಿಸುವುದಾಗಿ ಕೋರ್ಟ್ ಹೇಳಿದೆ. ಜನವರಿ 19ರಂದು ಈ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದೆ.
- ಸಮಿತಿ ರಚನೆಯಾಗುವವರೆಗೆ ಬಿಸಿಸಿಐನ ಹಿರಿಯ ಉಪಾಧ್ಯಕ್ಷರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
- ಆಡಳಿತ ಸಮಿತಿ ರಚನೆಯಾದ ಮೇಲೆ ಸುಪ್ರೀಂಕೋರ್ಟ್ ರಚಿಸಿದ್ದ ಲೋಧಾ ಸಮಿತಿಯ ಶಿಫಾರಸ್ಸಿನಂತೆ ಬಿಸಿಸಿಐ ನಿಯಮಾವಳಿಗಳನ್ನು ರಚಿಸಲಾಗುವುದು.
- ಬಿಸಿಸಿಐನ ಪದಾಧಿಕಾರಿಗಳ ಆಯ್ಕೆಗಾಗಿ ಹಿರಿಯ ವಕೀಲರಾದ ಫಾಲಿ ನಾರಿಮನ್ ಮತ್ತು ಗೋಪಾಲ್ ಸುಬ್ರಮಣಿಯನ್ ಅವರನ್ನು ಸುಪ್ರೀಂಕೋರ್ಟ್ ಅಮಿಕಸ್ ಕ್ಯೂರಿಗಳನ್ನಾಗಿ ನೇಮಿಸಿದೆ.
ಲೋಧಾ ಸಮಿತಿ:
ಸುಪ್ರೀಂ ಕೋರ್ಟ್ ಜನವರಿ, 2015ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಆಡಳಿತ ಮಂಡಳಿಗೆ ವ್ಯಾಪಕ ಸುಧಾರಣೆ ತರಲು ಹಾಗೂ ಮೌದ್ಗಿಲ್ ಸಮಿತಿ ವರದಿಯಲ್ಲಿ ಉಲ್ಲೇಖಿಸಿದ್ದ ಐಪಿಲ್ ಮ್ಯಾಚ್ ಫಿಕ್ಸಿಂಗ್ ತಪ್ಪಿತಸ್ಥರಿಗೆ ಶಿಕ್ಷೆ ಪ್ರಮಾಣ ನಿಗದಿಪಡಿಸಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಆರ್ ಎಂ ಲೋಧಾರವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಅದರಂತೆ ಸಮಿತಿಯು ತನ್ನ ವರದಿಯಲ್ಲಿ ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರಲು ಮಹತ್ವದ ಶಿಫಾರಸ್ಸುಗಳನ್ನು ನೀಡಿತ್ತು. ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳು ಬಿಸಿಸಿಐ ಹುದ್ದೆಯಲ್ಲಿ ಇರಬಾರದು ಹಾಗೂ 70 ವರ್ಷ ಮೀರಿದವರು ಹುದ್ದೆಯಲ್ಲಿ ಮುಂದುವರೆಯಬಾರದೆಂದು ಶಿಫಾರಸ್ಸು ಮಾಡಿತ್ತು. ಅಲ್ಲದೇ ಬಿಸಿಸಿಐಗೆ ಒಂಬುಡ್ಸಮನ್ ನೇಮಕಾತಿ ಮಾಡುವಂತೆ ಸಹ ಶಿಫಾರಸ್ಸು ಮಾಡಿದೆ.
ಸಾವಿತ್ರಿಭಾಯಿ ಪುಲೆ ರವರಿಗೆ ಗೂಗಲ್ ನಿಂದ ಗೌರವ
19ನೇ ಶತಮಾನದ ಸಾಮಾಜಿಕ ಸುಧಾರಕಿ ಸಾವಿತ್ರಿ ಭಾಯಿ ಪುಲೆ ರವರಿಗೆ ಸರ್ಚ್ ಎಂಜಿನ್ ದೈತ್ಯ ಗೂಗಲ್ ತನ್ನ ಡೂಡಲ್ ಮೂಲಕ ಗೌರವವನ್ನು ಅರ್ಪಿಸಿದೆ. ಪುಲೆ ಅವರ 184ನೇ ಜನ್ಮದಿನಾಚರಣೆ (ಜನವರಿ 3) ಅಂಗವಾಗಿ ಗೂಗಲ್ ತನ್ನ ವೆಬ್ ಪೇಜ್ ನಲ್ಲಿ ಪ್ರತ್ಯೇಕ ಡೂಡಲ್ ರಚಿಸುವ ಮೂಲಕ ಗೌರವನ್ನು ಅರ್ಪಿಸಿದೆ.
ಸಾವಿತ್ರಿ ಭಾಯಿ ಪುಲೆ:
- ಸಾವಿತ್ರಿ ಭಾಯಿ ಪುಲೆ ಅವರು ಮಹಿಳೆಯ ಪರ ಧ್ವನಿ ಎತ್ತಿದ ದೇಶದ ಮೊದಲ ಮಹಿಳೆ ಹಾಗೂ ಮೊದಲ ಮಹಿಳಾ ಶಿಕ್ಷಕಿ.
- ಸಾವಿತ್ರಿ ಭಾಯಿ ಪುಲೆ ರವರು ಹುಟ್ಟಿದ್ದು 3ನೇ ಜನವರಿ 1831ರಲ್ಲಿ. ಮಹಾರಾಷ್ಟ್ರದ ಸತಾರ ಜಿಲ್ಲೆಯ ನಾಯ್ಗಿನ್ ಎಂಬಲ್ಲಿ ಜನಿಸಿದರು. ಪುಲೆ ಅವರಿಗೆ 9ನೇ ವಯಸ್ಸಿನಲ್ಲಿಯೇ 13 ವರ್ಷದ ಜ್ಯೋತಿರಾವ್ ಪುಲೆ ರವರೊಂದಿಗೆ ಮದುವೆ ಮಾಡಿಕೊಡಲಾಯಿತು.
- ತಮ್ಮ ಪತಿಯಿಂದ ಮನೆಯಲ್ಲೇ ಓದು ಬರಹವನ್ನು ಪುಲೆ ಅವರು ಕಲಿತರು. ನಂತರ ಈ ದಂಪತಿಗಳು ಭಾರತದಲ್ಲೆ ಮೊದಲ ಬಾರಿಗೆ ಹೆಣ್ಣುಮಕ್ಕಳು ಹಾಗೂ ಮಹಿಳೆಯರಿಗಾಗಿ ಶಾಲೆಯೊಂದನ್ನು ಪುಣೆಯ ಭಿಡೆವಾಡದಲ್ಲಿ ತೆರೆದರು.
- ಬೇರೆ ಬೇರೆ ಜಾತಿಯ ಒಂಬತ್ತು ಹೆಣ್ಣು ಮಕ್ಕಳನ್ನು ನೋಂದಾಯಿಸಿಕೊಳ್ಳುವ ಮೂಲಕ ಶಾಲೆಯನ್ನು ಪ್ರಾರಂಭಿಸಲಾಯಿತು. ಸಂಪ್ರದಾಯಗಳಿಗೆ ಕಟ್ಟುಬಿದ್ದಿದ್ದ ಅಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಪಾಪವೆಂದೇ ಪರಿಗಣಿಸಲಾಗಿತ್ತು. ಅಂತಹ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಶಾಲೆಯನ್ನು ತೆರೆದಿದ್ದು ಐತಿಹಾಸಿಕ ಸಾಧನೆಯೆ ಸರಿ.
- ಬ್ರಿಟಿಷ್ ಆಡಳಿತ ಅವಧಿಯಲ್ಲಿ ಪುಲೆ ದಂಪತಿಗಳು ಜಾತಿ ಮತ್ತು ಲಿಂಗ ಆಧರಿತ ಸಾಮಾಜಿಕ ಶೋಷಣೆ ವಿರುದ್ದ ಹೋರಾಟವನ್ನು ಪ್ರಾರಂಭಿಸಿದರು ಹಾಗೂ ಮಹಿಳೆಯರ ಸಮಾನ ಹಕ್ಕುಗಳ ಬಗ್ಗೆ ಹೋರಾಟದ ಕಿಡಿಯನ್ನು ಹಚ್ಚಿದರು.
- ಪಿತೃಪ್ರಧಾನ ಹಾಗೂ ಸಾಂಪ್ರದಾಯಿಕ ಭಾರತೀಯ ಸಮಾಜ ಸಂದರ್ಭದಲ್ಲಿ ಮಹಿಳೆಯರು ಮಾತನಾಡಲು ಹೆದರುತ್ತಿದ್ದ ಸಂದರ್ಭದಲ್ಲಿ ಸಾವಿತ್ರಿ ಭಾಯಿ ರವರು ಧೈರ್ಯವಾಗಿ ಬಾಲ್ಯ ವಿವಾಹ, ಮಹಿಳಾ ಶಿಕ್ಷಣ, ಸತಿ ಪದ್ದತಿ, ಮಹಿಳೆಯರ ಸಮಾನ ಹಕ್ಕುಗಳ ವಿರುದ್ದ ಹೋರಾಟ ನಡೆಸಿದರು.
- 1890 ರಲ್ಲಿ ಜ್ಯೋತಿರಾವ್ ಪುಲೆ ಕೊನೆಯುಸಿರೆಳದ ಮೇಲೆ ಸಾವಿತ್ರಿ ಭಾಯಿ ರವರು ಸತ್ಯಶೋಧಕ ಸಮಾಜದ ಹೊಣೆಗಾರಿಕೆಯನ್ನು ತಮ್ಮ ಮೇಲೆ ಹಾಕಿಕೊಂಡು ಮುನ್ನೆಡಿಸಿದರು. ಪ್ಲೇಗ್ ರೋಗಿಗಳ ಹಾರೈಕೆ ಮಾಡುತ್ತಿದ್ದ ವೇಳೆ 1897 ರಲ್ಲಿ ಸಾವಿತ್ರಿ ಭಾಯಿ ರವರು ಮರಣ ಹೊಂದಿದರು.
- ಸಮಾಜ ಸುಧಾರಣೆ, ಶಿಕ್ಷಣ ಹೋರಾಟ ಮತ್ತು ಲಿಂಗ ಸಮಾನತೆಗೆ ಪುಲೆ ಅವರು ಹೋರಾಟದ ಮೂಲಕ ನೀಡಿರುವ ಕೊಡುಗೆಯನ್ನು ಗಮನಿಸಿ ಮಹಾರಾಷ್ಟ್ರ ಸರ್ಕಾರ ಪುಣೆ ವಿವಿಯನ್ನು ಸಾವಿತ್ರಿ ಭಾಯಿ ಪುಲೆ ವಿವಿಯೆಂದು ಮರುನಾಮಕರಣ ಮಾಡಿದೆ. ಅಲ್ಲದೇ ಭಾರತೀಯ ಅಂಚೆ ಇಲಾಖೆ ಪುಲೆ ಅವರ ಸ್ಮರಣಾರ್ಥ ಮಾರ್ಚ್ 10, 1998ರಲ್ಲಿ ಅಂಚೆ ಸ್ಟಾಂಪ್ ಅನ್ನು ಬಿಡುಗಡೆಗೊಳಿಸಿದೆ.
ಸುಪ್ರೀಂಕೋರ್ಟ್ನ 44ನೇ ಮುಖ್ಯ ನ್ಯಾಯಾಮೂರ್ತಿಯಾಗಿ ಜೆ.ಎಸ್.ಖೇಹರ್ ಪ್ರಮಾಣ ವಚನ
ನ್ಯಾಯಾಮೂರ್ತಿ ಜೆ.ಎಸ್.ಖೇಹರ್ ರವರು ಸುಪ್ರೀಂಕೋರ್ಟ್ನ 44ನೇ ಮುಖ್ಯನ್ಯಾಯಾಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರವರು ಖೇಹರ್ ರವರಿಗೆ ಪ್ರಮಾಣ ವಚನ ಬೋಧಿಸಿದರು. ಆ ಮೂಲಕ ಖೇಹರ್ ಅವರು ಮುಖ್ಯನ್ಯಾಯಾಮೂರ್ತಿ ಹುದ್ದೆಯನ್ನು ಅಲಂಕರಿಸಿದ ಸಿಖ್ ಸಮುದಾಯದ ಮೊದಲ ವ್ಯಕ್ತಿ ಎನಿಸಿದರು. ಟಿ.ಎಸ್. ಠಾಕೂರ್ ರವರ ಅವಧಿ ಜನವರಿ 3, 2017ಕ್ಕೆ ಅಂತ್ಯಗೊಂಡ ಕಾರಣ ಖೇಹರ್ ಅವರನ್ನು ಮುಖ್ಯನ್ಯಾಯಾಮೂರ್ತಿಯಾಗಿ ನೇಮಕ ಮಾಡಲಾಗಿತ್ತು. ಖೇಹರ್ ಅವರು ಜನವರಿ 4, 2017 ರಿಂದ ಆಗಸ್ಟ್ 4, 2017 ರವರೆಗೆ ಅಂದರೆ 65 ವರ್ಷ ತುಂಬವವರೆಗೆ ಅಧಿಕಾರದಲ್ಲಿ ಇರಲಿದ್ದಾರೆ.
ಜೆ.ಎಸ್.ಖೇಹರ್ ಬಗ್ಗೆ:
- ಖೇಹರ್ ರವರು 28ನೇ ಆಗಸ್ಟ್ 1952ರಲ್ಲಿ ಜನಿಸಿದ್ದಾರೆ. 1977 ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದುಕೊಂಡಿದ್ದಾರೆ. ನಂತರ 1979 ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಎಲ್ಎಲ್ಎಂ ಪದವಿಯನ್ನು ಪಡೆದುಕೊಂಡಿದ್ದಾರೆ.
- 1979 ರಲ್ಲಿ ವಕೀಲರಾಗಿ ಸೇವೆ ಆರಂಭಿಸಿದ ಖೇಹರ್ ರವರು ಪಂಜಾಬ್ ಮತ್ತು ಹೈಕೋರ್ಟ್ ನ್ಯಾಯಾಲಯ, ಚಂಡೀಗರ್ ನ್ಯಾಯಾಲಯ, ಹಿಮಾಚಲ ಪ್ರದೇಶ ಮತ್ತು ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದರು.
- ಖೇಹರ್ ರವರು 1999 ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಪೀಠಕ್ಕೆ ನೇಮಕಗೊಂಡರು. 2008 ಮತ್ತು 2009 ರಲ್ಲಿ ಎರಡು ಬಾರಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಆಕ್ಟಿಂಗ್ ಚೀಫ್ ಜಸ್ಟೀಸ್ ಆಗಿ ನೇಮಕಗೊಂಡಿದ್ದರು.
- 2009ರಲ್ಲಿ ಉತ್ತರಖಂಡ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿಯಾಗಿ ನೇಮಕಮಾಡಲಾಯಿತು. 2010ರಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.
- 2011ರಲ್ಲಿ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯಾಗಿ ನೇಮಕಗೊಂಡ ಖೇಹರ್ ಅವರು ಆಗಸ್ಟ್ 2017 ರಲ್ಲಿ ನಿವೃತ್ತಿ ಹೊಂದಲಿದ್ದಾರೆ.
- ರಾಷ್ಟ್ರೀಯ ನ್ಯಾಯಾಧೀಶರ ನೇಮಕಾತಿ ಸಮಿತಿ ಕಾಯಿದೆ ಮತ್ತು ನ್ಯಾಯಾಧೀಶರ ನೇಮಕಾತಿಗೆ ಸಂವಿಧಾನದ 99ನೇ ತಿದ್ದುಪಡಿ ಕಾಯಿದೆಯನ್ನು ಅಸಿಂಧೂಗೊಳಿಸಿದ ಸುಪ್ರೀಂಕೋರ್ಟ್ ಐದು ಜನರನ್ನು ಒಳಗೊಂಡದ ಪೀಠದ ನೇತೃತ್ವವಹಿಸಿದ್ದರು. ಅಲ್ಲದೇ ಜನವರಿ 2016 ರಲ್ಲಿ ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಸಂವಿಧಾನ ಬಾಹಿರವೆಂದು ತೀರ್ಪು ನೀಡಿದ ಪೀಠದ ನೇತೃತ್ವವನ್ನು ಸಹ ಖೇಹರ್ ವಹಿಸಿದ್ದರು.
ಐದು ರಾಜ್ಯಗಳ ವಿಧಾನಸಭಾ ಚುನಾವಣೆ ವೇಳಾಪಟ್ಟಿ ಘೋಷಿಸಿದ ಚುನಾವಣಾ ಆಯೋಗ
ಪಂಜಾಬ್, ಗೋವಾ, ಉತ್ತರ ಪ್ರದೇಶ, ಉತ್ತರಖಂಡ ಮತ್ತು ಮಣಿಪುರ ಈ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ವೇಳಾ ಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಗೊಳಿಸಿದೆ. ಚುನಾವಣೆ ವೇಳಾಪಟ್ಟಿ ಪ್ರಕಣೆಗೊಂಡ ಕಾರಣ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಈ ಐದು ರಾಜ್ಯಗಳ ಮತಎಣಿಕೆ 11ನೇ ಮಾರ್ಚ 2017ರಂದು ನಡೆಯಲಿದೆ.
ಪ್ರಮುಖಾಂಶಗಳು:
- ಉತ್ತರಖಂಡ, ಗೋವಾ ಮತ್ತು ಪಂಜಾಬ್ ನಲ್ಲಿ ಒಂದೇ ಹಂತದಲ್ಲಿ ಫೆಬ್ರವರಿ 4 ರಂದು ಚುನಾವಣೆ ನಡೆಯಲಿದ್ದು, ಗೋವಾದ ಒಟ್ಟು 40 ವಿಧಾನಸಭಾ ಕ್ಷೇತ್ರ ಹಾಗೂ ಪಂಜಾಬ್ ನ ಒಟ್ಟು 117 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
- ಉತ್ತರ ಪ್ರದೇಶ: ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ 403 ವಿಧಾನಸಭಾ ಕ್ಷೇತ್ರಗಳಿಗೆ 7 ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಏಳು ಹಂತಗಳೆಂದರೆ 11ನೇ ಫೆಬ್ರವರಿ, 15ನೇ ಫೆಬ್ರವರಿ, 19ನೇ ಫೆಬ್ರವರಿ, 23ನೇ ಫೆಬ್ರವರಿ, 27ನೇ ಫೆಬ್ರವರಿ, 4ನೇ ಮಾರ್ಚ್ ಮತ್ತು 8ನೇ ಮಾರ್ಚ್ 2017.
- ಮಣಿಪುರ: ಮಣಿಪುರದಲ್ಲಿ 60 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ 4 ಮತ್ತು 8ನೇ ಮಾರ್ಚ್ ರಂದು ನಡೆಯಲಿದೆ.
- ಈ ಐದು ಕ್ಷೇತ್ರಗಳಲ್ಲಿ ಸುಮಾರು 16 ಕೋಟಿ ಮತದಾರರು ಚುನಾವಣೆಯಲ್ಲಿ ಭಾಗವಹಿಸಲು ಅರ್ಹರಿದ್ದಾರೆ. ಪಂಜಾಬ್, ಉತ್ತರಖಂಡ ಮತ್ತು ಉತ್ತರ ಪ್ರದೇಶದಲ್ಲಿ ಪ್ರತಿ ಅಭ್ಯರ್ಥಿಗೆ ಚುನಾವಣೆ ವೆಚ್ಚವನ್ನು ರೂ 28 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ಗೋವಾ ಮತ್ತು ಮಣಿಪುರದಲ್ಲಿ ರೂ 20 ಲಕ್ಷ.
Nice