ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಫೆಲೋಶಿಪ್ ಗೆ ವಾಸುದೇವ ಆಯ್ಕೆ
ಹಿರಿಯ ಕಲಾವಿದ ಎಸ್.ಜಿ.ವಾಸುದೇವ ಅವರನ್ನುಕರ್ನಾಟಕ ಲಲಿತಕಲಾ ಅಕಾಡೆಮಿಯ 2016ನೇ ಸಾಲಿನ ಸುವರ್ಣ ಗೌರವ ಫೆಲೋಷಿಪ್‌ಗೆ ಆಯ್ಕೆ ಮಾಡಲಾಗಿದೆ. ‘ಫೆಲೋಷಿಪ್ ₹2 ಲಕ್ಷ ಗೌರವಧನ ಒಳಗೊಂಡಿದೆ.
ಸಂಶೋಧನಾ ಫೆಲೋಷಿಪ್:
- ‘ಅಕಾಡೆಮಿಯ ಸಂಶೋಧನಾ ಫೆಲೋಷಿಪ್‌ಗೆ 2016–17ನೇ ಸಾಲಿನಲ್ಲಿ 22 ಜನ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ ದೃಶ್ಯಕಲೆ, ಕಲಾ ಶಿಕ್ಷಣ, ಗ್ರಾಫಿಕ್ಸ್ ಕಲೆಗಳಲ್ಲಿ ಪರಿಣಿತಿ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಸೇರಿದ್ದಾರೆ
- ಸಂಶೋಧನೆಗಾಗಿ ಕಲಾವಿದರಿಗೆ ಮೂರು ಕಂತುಗಳಲ್ಲಿ ₹1 ಲಕ್ಷ ನೀಡಲಾಗುತ್ತಿದೆ’
ಸಂಶೋಧನಾ ಫೆಲೋಷಿಪ್ಗೆ ಆಯ್ಕೆಯಾದರು: ಆರ್.ನಿಂಗಪ್ಪ ನಾಯ್ಕರ್, ಎಫ್.ವಿ.ಚಿಕ್ಕಮಠ, ಡಾ.ರೇಣುಕಾ ಮಾರ್ಕಾಂಡೆ (ಧಾರವಾಡ), ಡಾ.ಪಿ.ವಿ.ಗವಾನಿ (ಬೆಳಗಾವಿ), ಡಿ.ಎಂ. ಡಾ.ಎಚ್.ಎನ್. ಕೃಷ್ಣೇಗೌಡ (ಮಂಡ್ಯ),ನಾರಾಯಣಪ್ಪ ಶೀನಪ್ಪ ಚಿತ್ರಗಾರ (ಕೊಪ್ಪಳ), ರಾಮದಾಸ ಅಡ್ಯಂತಾಯ (ಮೈಸೂರು), ಡಾ.ಸತೀಶ ಕುಮಾರ್ ಪಂಚಪ್ಪಾ ವಲ್ಲೇಪುರೆ (ಬೀದರ್), ಜಿ.ನೆಲ್ಲಗಿ ಅಶೋಕ, ಮ.ಸಂತೋಷ್‌ಕುಮಾರ್ ನಾಗರಾಳ (ವಿಜಯಪುರ), ಪ್ರದೀಪ್ ಕುಮಾರ್ (ದಾವಣಗೆರೆ), ಎಚ್.ಬಾಬುರಾವ್, ಮೀನಾಕ್ಷಿ, ಜಿ.ಸುಚಿತ್ರಾ ಲಿಂಗದಳ್ಳಿ, ಡಾ.ಡಿ.ಕಾಶೀನಾಥ, ಮಹ್ಮದ್ ಅಯಾಜುದ್ದೀನ್ ಪಟೇಲ್ (ಕಲಬುರ್ಗಿ), ಕೃಷ್ಣವೇಣಿ, ನಿಹಾಲ್ ವಿಕ್ರಮ್ ರಾಜು (ಬಳ್ಳಾರಿ), ರಮೇಶ ತೇರದಾಳ, ಬಿ.ವಿ. ಗುರುಸ್ವಾಮಿ (ಬೆಂಗಳೂರು), ಸೂರ್ಯಕಾಂತ ನಂದೂರ್,
ಅಗ್ನಿ-4 ಖಂಡಾಂತರ ಕ್ಷಿಪಣಿ ಅಂತಿಮ ಪರೀಕ್ಷೆ ಯಶಸ್ವಿ
ಸ್ವದೇಶಿ ನಿರ್ಮಿತ ಖಂಡಾಂತರ ಕ್ಷಿಪಣಿ ಅಗ್ನಿ-4ರ ಅಂತಿಮ ಪರೀಕ್ಷೆಯನ್ನು ಒಡಿಶಾ ಕರಾವಳಿಯಲ್ಲಿರುವ ಅಬ್ದುಲ್ ಕಲಾಂ ದ್ವೀಪದಲ್ಲಿ ನಡೆಸಲಾಗಿದ್ದು, ಯಶಸ್ವಿಯಾಗಿದೆ. ಅಗ್ನಿ-4 ಕ್ಷಿಪಣಿಗೆ ಅಳವಡಿಸಲಾಗಿರುವ ಹೊಸ ತಂತ್ರಜ್ಞಾನವನ್ನು ಮರುಪರೀಕ್ಷಿಸುವ ಸಲುವಾಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಅಗ್ನಿ-4 ಕ್ಷಿಪಣಿ ಬಗ್ಗೆ:
- ಅಗ್ನಿ-4 ಕ್ಷಿಪಣೆ ಎರಡು ಹಂತದ ಭೂಮಿಯಿಂದ ಭೂಮಿಗೆ ಹಾರಬಲ್ಲ ಖಂಡಾಂತರ ಕ್ಷಿಪಣಿಯಾಗಿದೆ.
- ಈ ಕ್ಷಿಪಣಿಯನ್ನು ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.
- ಅಗ್ನಿ-4 ಕ್ಷಿಪಣಿ 20ಮೀ ಉದ್ದವಿದ್ದು, 17 ಟನ್ ತೂಕವಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಈ ಕ್ಷಿಪಣೆ ಅಮೆರಿಕದ ಪೆರ್ಶಿಂಗ್ ಕ್ಷಿಪಣಿ ಸೇರಿದಂತೆ ಜಾಗತಿಕ ಕ್ಷಿಪಣಿಗಳ ಗುಣಮಟ್ಟಕ್ಕೆ ಸಮನಾಗಿದೆ.
- ರಿಂಗ್ ಲೇಸರ್ ಜೈರೊ ಬೇಸ್ಡ್ ಇನರ್ಷಿಯಲ್ ನೇವಿಗೇಷನ್ ಸಿಸ್ಟಮ್ (ಆರ್‌ಐಎನ್‌ಎಸ್) ಮತ್ತು ಸೂಕ್ಷ್ಮಪಥದರ್ಶಕ ವ್ಯವಸ್ಥೆಗಳನ್ನು (ಎಂಐಎಸ್‌ಎಸ್) ಅಳವಡಿಸಲಾಗಿದ್ದು, ನಿಖರವಾಗಿ ಗುರಿ ತಲುಪಬಲ್ಲದು.
- ಮೀತಿ: ಒಂದು ಟನ್ ಅಣ್ವಸ್ತ್ರ ಸಿಡಿತಲೆಗಳನ್ನು 4 ಸಾವಿರ ಕಿ.ಮೀ ವ್ಯಾಪ್ತಿಗೆ ಹೊತ್ತೊಯ್ಯುವ ಸಾಮರ್ಥ್ಯವನ್ನು ಇದು ಹೊಂದಿದೆ.
- ಇದು ಈ ಕ್ಷಿಪಣಿಯ ಆರನೇ ಪರೀಕ್ಷೆಯಾಗಿದ್ದು, ಇದರ 5ನೇ ಪರೀಕ್ಷೆ 2015ರ ನವೆಂಬರ್ 9 ರಂದು ನಡೆದಿತ್ತು.
ಭಾರತೀಯ ಕಾಲಮಾನ ಗಡಿಯಾರಕ್ಕೆ ಅಧಿಕ ಸೆಕೆಂಡ್ ಸೇರ್ಪಡೆ
ಭೂಮಿ ಸುತ್ತುವಿಕೆಯ ವೇಗದಲ್ಲಿನ ಬದಲಾವಣೆ ಸರಿದೂಗಿಸುವ ಸಲುವಾಗಿ ಭಾರತೀಯ ಕಾಲಮಾನದ ಗಡಿಯಾರದಲ್ಲಿ ಜನವರಿ 1ರ ಬೆಳಗಿನ ಜಾವ 5 ಗಂಟೆ 29 ನಿಮಿಷ, 59 ಸೆಕೆಂಡ್ ನಂತರ ಒಂದು ಅಧಿಕ ಕ್ಷಣ (ಲೀಪ್ ಸೆಕೆಂಡ್) ಸೇರಿಸಲಾಗಿದೆ. ಭೂಮಿಯ ತಿರುಗುವಿಕೆ ನಿಧಾನವಾಗಿರುವ ಕಾರಣ ಅದನ್ನು ಸರಿದೂಗಿಸುವ ಸಲುವಾಗಿ 2017ನೇ ವರ್ಷಕ್ಕೆ ಒಂದು ಅಧಿಕ ಸೆಕೆಂಡ್ ಅನ್ನು ಸೇರ್ಪಡೆಗೊಳಿಸಲಾಗಿದೆ.
ಅಧಿಕ ಸೆಕೆಂಡ್ ಸೇರ್ಪಡೆ ಏಕೆ?
ಭೂಮಿ ಮತ್ತು ಭೂಮಿ ತನ್ನ ಅಕ್ಷದ ಸುತ್ತ ತಿರುಗುವ ವೇಗ ಒಂದೇ ಸಮನಾಗಿರುವುದಿಲ್ಲ. ಚಂದ್ರನ ಗುರುತ್ವಾಕರ್ಷಣ ಬಲ ಹಾಗೂ ಭೂಕಂಪ ಇನ್ನಿತರ ಕಾರಣಗಳಿಂದ ಕೆಲವೊಮ್ಮೆ ಈ ವೇಗ ಹೆಚ್ಚಿದ್ದರೆ ಕೆಲವೊಮ್ಮೆ ಕಡಿಮೆ ಇರುತ್ತದೆ. ಇದರಿಂದಾಗಿ ಖಗೋಳ ಗಡಿಯಾರ ಮತ್ತು ಅಣು ಗಡಿಯಾರಗಳ ನಡುವಣ ವ್ಯತ್ಯಾಸ ಉಂಟಾಗುತ್ತದೆ. ಈ ವ್ಯತ್ಯಾಸ 0.9 ಸೆಕೆಂಡ್‌ಗಳನ್ನು ತಲುಪಿದಾಗ ಅದನ್ನು ಸರಿದೂಗಿಸಲು ಒಂದು ಅಧಿಕ ಕ್ಷಣವನ್ನು ಸೇರಿಸಲಾಗುತ್ತದೆ.
ಮಹತ್ವ:
- ಒಂದು ಕ್ಷಣದ ಸೇರ್ಪಡೆಯಿಂದ ಜನರ ದೈನಂದಿನ ಜೀವನದ ಮೇಲೆ ಯಾವುದೆ ಪರಿಣಾಮ ಉಂಟಾಗುವುದಿಲ್ಲ. ಆದರೆ ಉಪಗ್ರಹ ಸಂಚಾರ, ಖಗೋಳ ವಿಜ್ಞಾನ ಮತ್ತು ಸಂವಹನ ಸಂಪರ್ಕಗಳ ಮೇಲೆ ಇದು ಪರಿಣಾಮ ಬೀರುತ್ತದೆ.
ಹಿನ್ನಲೆ:
ಭಾರತದಲ್ಲಿ ಅಧಿಕ ಸೆಕೆಂಡ್ ಅನ್ನು ಭಾರತೀಯ ಕಾಲಮಾನ ಗಡಿಯಾರಕ್ಕೆ ಸೇರ್ಪಡಿಸುವ ಜವಬ್ದಾರಿ ಸಿಎಸ್ಐಆರ್ ನಡಿ ಕಾರ್ಯನಿರ್ವಹಿಸುವ ನ್ಯಾಷನಲ್ ಫಿಸಿಕಲ್ ಲ್ಯಾಬೋರೆಟರಿ (NPL)ಯದು. NPL ದೇಶದ ಅತ್ಯಂತ ಹಳೆಯ ಲ್ಯಾಬೋರೆಟರಿಗಳಲ್ಲಿ ಒಂದಾಗಿದ್ದು, ಐದು ಅಣು ಗಡಿಯಾರಗಳನ್ನು ಹೊಂದಿದೆ. ಅಣು ಗಡಿಯಾರಗಳು ಅತ್ಯಂತ ನಿಖರತೆಯನ್ನು ಹೊಂದಿವೆ.
NTR ಆರೋಗ್ಯ ರಕ್ಷಾ ಯೋಜನೆಯನ್ನು ಜಾರಿಗೊಳಿಸಿದ ಆಂಧ್ರ ಪ್ರದೇಶ
ಎಪಿಎಲ್ ರೇಖೆಗಿಂತ ಕೆಳಗಿರುವವರಿಗೆ ವಾರ್ಷಿಕ ರೂ 1200 ಪ್ರೀಮಿಯಂ ಪಾವತಿಯಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವ ಸಲುವಾಗಿ ಆಂಧ್ರ ಪ್ರದೇಶ ಸರ್ಕಾರ NTR ಆರೋಗ್ಯ ರಕ್ಷಾ ಯೋಜನೆಯನ್ನು ಜಾರಿಗೊಳಿಸಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರವರು ಈ ಯೋಜನೆಗೆ ವಿಜಯವಾಡದಲ್ಲಿ ಚಾಲನೆ ನೀಡಿದರು. ಪ್ರಸ್ತುತ ರಾಜ್ಯದಲ್ಲಿ ಜಾರಿಯಲ್ಲಿರುವ ಆರೋಗ್ಯ ಯೋಜನೆಗಳ ಫಲಾನುಭವಿಗಳಾಗದವರು ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
NTR ಆರೋಗ್ಯ ರಕ್ಷಾ ಯೋಜನೆ:
- NTR ಆರೋಗ್ಯ ರಕ್ಷಾ ಯೋಜನೆಯ ವ್ಯಾಪ್ತಿಗೆ 1044 ಕಾಯಿಲೆಗಳನ್ನು ತರಲಾಗಿದ್ದು, ರೂ 2 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಬಯಸುವವರು “ಮೀ ಸೇವಾ ಸೆಂಟರ್” ನಲ್ಲಿ ಫೆಬ್ರವರಿ 2017 ರವರೆಗೆ ನೋಂದಾಯಿಸಿಕೊಳ್ಳಬಹುದು.
- ಎಪಿಎಲ್ ರೇಖೆಗಿಂತ ಕೆಳಗಿರುವವರು ಯೋಜನೆಯ ಉಪಯೋಗವನ್ನು ಪಡೆಯಲು ವಾರ್ಷಿಕ ರೂ 1200 ಪ್ರೀಮಿಯಂ ಅನ್ನು ಪಾವತಿಸಬೇಕು. ಅಂದರೆ ಪ್ರತಿ ತಿಂಗಳಿಗೆ ಒಬ್ಬರಿಗೆ ರೂ 100.
- ಯೋಜನೆಯಡಿ 1044 ಕಾಯಿಲೆಗಳಿಗೆ ಕಾರ್ಪೋರೇಟ್ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುವುದು.
ಧರ್ಮ, ಭಾಷೆ ಆಧಾರದ ಮೇಲೆ ಮತಯಾಚನೆ ಅಕ್ರಮ: ಸುಪ್ರೀಂ ಕೋರ್ಟ್
ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳು ಧರ್ಮ, ಭಾಷೆ, ಜಾತಿ ಮತ್ತು ಸಮುದಾಯ ಆಧಾರದಲ್ಲಿ ಮತಯಾಚನೆ ಮಾಡಬಾರದೆಂದು ತೀರ್ಪು ನೀಡಿದೆ. ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ ಜೆ.ಎಸ್.ಠಾಕೂರ್ ಅವರನ್ನು ಒಳಗೊಂಡ ಏಳು ನ್ಯಾಯಮೂರ್ತಿಗಳ ಪೀಠ 4:3 ಬಹುಮತದ ತೀರ್ಪು ನೀಡಿದೆ. ಸುಪ್ರೀಂಕೋರ್ಟ್ ಆದೇಶದ ವಿರುದ್ದವಾಗಿ ಮತ ಯಾಚಿಸಿದರೆ ಅಂತವರನ್ನು ಚುನಾವಣೆಯಿಂದ ಸ್ಪರ್ಧಿಸದಂತೆ ಅನೂರ್ಜಿತಗೊಳಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಹಿನ್ನಲೆ:
ಪ್ರಜಾಪ್ರಾತಿನಿಧ್ಯ ಕಾಯ್ದೆಯ -1951 ಸೆಕ್ಷನ್ 123 (3) ತಿದ್ದುಪಡಿ ತರುವಂತೆ ಸಲ್ಲಿಸಲಾಗಿದ್ದು ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ. ಈ ಸೆಕ್ಷನ್ ಪ್ರಕಾರ ಜಾತಿ, ಧರ್ಮ, ಸಮುದಾಯ ಅಥವಾ ಭಾಷೆ ಆಧಾರದ ಮೇಲೆ ಮತಯಾಚನೆ ಮಾಡುವುದು ಕಾನೂನು ಬಾಹಿರ. ಈ ಹಿಂದೆ ಸುಪ್ರೀಂಕೋರ್ಟ್ ಹಿಂದೂತ್ವ ಆಧಾರದ ಮೇಲೆ ಮತಯಾಚನೆ ಮಾಡುವುದು ತಪ್ಪಲ್ಲವೆಂದು ತೀರ್ಪು ನೀಡಿತ್ತು. ಏಕೆಂದರೆ ಹಿಂದೂತ್ವವೆನ್ನುವುದು ಜೀವನ ನಡೆಸುವ ಒಂದು ರೀತಿ ವಿನ್ಹಾ ಧರ್ಮವಲ್ಲ ಎಂದು ಕೋರ್ಟ್ ಹೇಳಿತ್ತು.
ಕೋರ್ಟ್ ತೀರ್ಪಿನ ಪ್ರಮುಖಾಂಶಗಳು:
- ಪ್ರಭುತ್ವವು ಜಾತ್ಯತೀತವಾಗಿರುವ ಕಾರಣ, ಅದು ಯಾವುದೇ ಧರ್ಮದ ಜೊತೆ ಗುರುತಿಸಿಕೊಳ್ಳಲಾಗದು. ದೇವರು ಮತ್ತು ವ್ಯಕ್ತಿಯ ನಡುವಿನ ಸಂಬಂಧ ವೈಯುಕ್ತಿಕ ಎಂದು ಹೇಳಿದೆ.
- ದೇಶದ ಆಡಳಿತದಲ್ಲಿ ಧರ್ಮವು ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ಸರ್ಕಾರ ಎಲ್ಲಾ ಸಮಯದಲ್ಲೂ ಜ್ಯಾತ್ಯತೀತವಾಗಿರಬೇಕು.
- ಚುನಾವಣೆ ಎಂಬುದು ಸರ್ವ ಸ್ವತಂತ್ರ ಪ್ರಕ್ರಿಯೆ. ಇದು ಜಾತಿ-ಧರ್ಮಗಳ ಆಧಾರದಲ್ಲಿ ನಡೆಯಬಾರದು. ಚುನಾವಣಾ ಪ್ರತಿನಿಧಿಗಳು ಒಳಗೂ ಮತ್ತು ಹೊರಗೂ ಜ್ಯಾತ್ಯತೀತರಾಗಿರಬೇಕು.
- ಅಭ್ಯರ್ಥಿ ಅಥವಾ ಅಭ್ಯರ್ಥಿಯ ಏಜೆಂಟ್ ‘ಆತನ’ ಧರ್ಮ, ಜನಾಂಗ, ಜಾತಿ, ಸಮುದಾಯ ಅಥವಾ ಭಾಷೆಯ ನೆಲೆಯಲ್ಲಿ ಮತ ಯಾಚಿಸುವುದು ಅಥವಾ ಮತ ಚಲಾಯಿಸದಂತೆ ಮನವಿ ಮಾಡುವುದು ಚುನಾವಣಾ ಭ್ರಷ್ಟಾಚಾರ ಎಂದು ಸೆಕ್ಷನ್ 123(3)ಯಲ್ಲಿ ಹೇಳಲಾಗಿದೆ.
Thanks