ನಂಜನಗೂಡಿನ ಅಡಕನಹಳ್ಳಿಯಲ್ಲಿ 17ನೇ ರಾಷ್ಟ್ರೀಯ ಜಾಂಬೂರಿಗೆ ಅದ್ಧೂರಿ ಚಾಲನೆ
ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 17ನೇ ರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರವರು 17ನೇ ರಾಷ್ಟ್ರೀಯ ಜಾಂಬೂರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತಕುಮಾರ್, ರಾಜಮಾತೆ ಡಾ.ಪ್ರಮೋದಾದೇವಿ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಉಪಸ್ಥಿತರಿದ್ದರು.
ಧ್ಯೇಯವಾಕ್ಯ: “ಉತ್ತಮ ಭವಿಷ್ಯಕ್ಕಾಗಿ ಸಮಸ್ತರೂ ಸೇರೋಣ’ ಎಂಬುದು 17ನೇ ರಾಷ್ಟ್ರೀಯ ಜಾಂಬೂರಿ ಕಾರ್ಯಕ್ರಮದ ಧ್ಯೇಯವಾಕ್ಯ.
ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿ:
- ಬಾಲಕರ ಸ್ಕೌಟ್ಸ್ ಚಳುವಳಿ 1907ರಲ್ಲಿ ಪ್ರಾರಂಭಗೊಂಡಿತು. ಅಂದಿನ ಮೇಜರ್ ಜನರಲ್ ಆಫ್ ಆರ್ಮಿ ಲಾರ್ಡ್ ಬಡೆನ್ ಪೊವೆಲ್ ರವರು ಇಂಗ್ಲೆಂಡ್ ನ “ಬ್ರೌನ್ ಸಿ ಐಲ್ಯಾಂಡ್” ನಲ್ಲಿ ಪ್ರಾಯೋಗಿಕವಾಗಿ ಆಯೋಜಿಸಿದರು. ಆ ನಂತರ “ಸ್ಕೌಟಿಂಗ್ ಫಾರ್ ಬಾಯ್ಸ್” ಪುಸ್ತಕವನ್ನು ಹೊರತರುವ ಮೂಲಕ ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿ ಬಿರುಸಿನ ಪ್ರಚಾರವನ್ನು ಪಡೆದುಕೊಂಡಿತು.
ಭಾರತದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿ:
- ಭಾರತದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿ ಮೊದಲು ಆರಂಭಗೊಂಡಿದ್ದು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ. 1909ರಲ್ಲಿ ಕ್ಯಾಪ್ಟನ್ ಟಿ.ಎಚ್.ಬೇಕರ್ ರವರು ಮೊದಲ ಸ್ಕೌಟ್ ಟ್ರೂಪ್ ಅನ್ನು ಆರಂಭಿಸಿದರು.
- ಪ್ರಾರಂಭದಲ್ಲಿ ಸ್ಕೌಟ್ಸ್ ಚಳುವಳಿಯಲ್ಲಿ ಭಾರತದ ಬಾಲಕರಿಗೆ ಅವಕಾಶವಿರದ ಕಾರಣ ಪಂಡಿತ್ ಮದನ್ ಮೋಹನ್ ಮಾಳ್ವಿಯ, ಪಂಡಿತ್ ಹೃದಯ್ ನಾಥ್ ಕುಂಜ್ರು ಮತ್ತು ಪಂಡಿತ್ ಶ್ರೀರಾಮ್ ಪಂಡಿತ್ ರವರು ಅಲಹಬಾದ್ ನಲ್ಲಿ ಸೇವಾ ಸಮಿತಿ ಸ್ಕೌಟ್ಸ್ ಒಕ್ಕೂಟವನ್ನು ಸ್ಥಾಪಿಸುವ ಮೂಲಕ ಭಾರತೀಯ ಯುವಕರಿಗೆ ಸ್ಕೌಟ್ಸ್ ಚಳುವಳಿಯನ್ನು ಮುಕ್ತಗೊಳಿಸಿದರು. ಡಾ. ಅನಿಬೆಸೆಂಡ್ ರವರು ಜಿ.ಎಸ್.ಅರುಣ್ ದಾಳೆ ರವರ ಸಹಕಾರದೊಂದಿಗೆ ಮದ್ರಾಸ್ ನಲ್ಲಿ ಪ್ರತ್ಯೇಕ ಸ್ಕೌಟ್ಸ್ ಅಸೋಸಿಯೇಷನ್ ಸ್ಥಾಪಿಸಿದರು.
- ಸ್ವಾತಂತ್ರ ಭಾರತದ ನಂತರ ಪ್ರತ್ಯೇಕ ಸ್ಕೌಟ್ಸ್/ಗೈಡ್ಸ್ ಅಸೋಸಿಯೇಷನ್ ಗಳನ್ನು ಒಗ್ಗೂಡಿಸುವ ಪ್ರಯತ್ನವನ್ನು ಮಾಡಲಾಯಿತು. ಅದರ ಫಲವಾಗಿ 7ನೇ ನವೆಂಬರ್, 1950 ರಂದು “ದಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್” ಜಾರಿಗೆ ಬಂದಿತು. 15ನೇ ಆಗಸ್ಟ್ 1951 ರಲ್ಲಿ ಬಾಲಕಿಯರ ಗೈಡ್ಸ್ ಒಕ್ಕೂಟವನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು.
“ದಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್”:
- ದಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ವಯಂಪ್ರೇರಿತ, ರಾಜಕೀಯ ಪ್ರೇರಿತವಲ್ಲದ ಹಾಗೂ ಜಾತ್ಯತೀತ ಸಂಸ್ಥೆಯಾಗಿದ್ದು, ಸೊಸೈಟಿ ನೋಂದಣಿ ಕಾಯಿದೆಯಡಿ ಸ್ಥಾಪಿಸಲಾಗಿದೆ. ಇದರ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ.
ರಾಷ್ಟ್ರೀಯ ಜಾಂಬೂರಿ ಕಾರ್ಯಕ್ರಮ:
- 1909ರಲ್ಲಿ ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಆರಂಭವಾದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ, ಕರ್ನಾಟಕದಲ್ಲಿ ಉತ್ತಮವಾದ ಬೆಳವಣಿಗೆ ಕಂಡಿದೆ. 3ನೇ ಬಾರಿಗೆ ರಾಜ್ಯದಲ್ಲಿ ರಾಷ್ಟ್ರೀಯ ಜಾಂಬೂರಿ ಉತ್ಸವ ಆಯೋಜನೆಗೊಂಡಿದೆ. 1916ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಜಾಂಬೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಂತರ 1986ರಲ್ಲಿ ಎರಡನೇ ಬಾರಿಗೆ ಆಯೋಜಿಸಲಾಗಿತ್ತು. 2015ರಲ್ಲಿ ಸಿಲ್ವರ್ ಎಲಿಫೆಂಟ್ ಆವಾರ್ಡ್ ಸೇರಿದಂತೆ ಕರ್ನಾಟಕದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಸಾಕಷ್ಟು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಜನವರಿ 4: ವಿಶ್ವ ಬ್ರೈಲಿ ಲಿಪಿ ದಿನ
ಪ್ರತಿ ವರ್ಷ ಜನವರಿ 4 ರಂದು ವಿಶ್ವ ಬ್ರೈಲಿ ಲಿಪಿಯನ್ನು ಆಚರಿಸಲಾಗುತ್ತದೆ. ಬ್ರೈಲಿ ಲಿಪಿ ಅಥವಾ ಬ್ರೈಲಿ ಕೋಡ್ ಅನ್ವೇಷಣಕಾರ ಲೂಯಿಸ್ ಬ್ರೈಲಿ ರವರ ಜನ್ಮದಿನವನ್ನು ಬ್ರೈಲಿ ಲಿಪಿ ದಿನವನ್ನಾಗಿ ಆಚರಿಸಲಾಗುತ್ತಿದೆ.
- ಬ್ರೈಲಿ ಭಾಷೆಯ ಮಹತ್ವವನ್ನು ಸಾರುವುದು ಹಾಗೂ ದೃಷ್ಠಿ ಮಾಂದ್ಯರಿಗೆ ಅನುಕೂಲವಾಗುವಂತೆ ಬ್ರೈಲಿ ಲಿಪಿಯಲ್ಲಿ ಹೆಚ್ಚೆಚ್ಚು ಅನ್ವೇಷಣಾ ಕೆಲಸವನ್ನು ಕೈಗೊಳ್ಳುವಂತೆ ಪ್ರೇರೇಪಿಸುವುದು ಈ ದಿನದ ಮಹತ್ವ.
- ಈ ದಿನಚರಣೆಯ ಅಂಗವಾಗಿ ವಿವಿಧ NGO ಗಳು ಹಾಗೂ ಸಂಸ್ಥೆಗಳು ಒಂದೆಡೆ ಸೇರಿ ದೃಷ್ಠಿ ಮಾಂದ್ಯರ ಬಗ್ಗೆ ಜನರಲ್ಲಿರುವ ಧೋರಣೆಯನ್ನು ನಿವಾರಿಸಿ ಇತರರಂತೆ ಸಮಾನತೆ ಕಾಪಾಡಲು ಶ್ರಮಿಸುತ್ತವೆ.
ಲೂಯಿಸ್ ಬ್ರೈಲಿ:
- ಅಂಧರು ಓದಲು ಮತ್ತು ಬರೆಯಲು ಅನುಕೂಲವಾಗುವ ಬ್ರೈಲಿ ಲಿಪಿಯನ್ನು ಸಂಶೋಧಿಸಿದ ಕೀರ್ತಿ ಲೂಯಿಸ್ ಬ್ರೈಲಿ ಅವರಿಗೆ ಸಲ್ಲುತ್ತದೆ.
- ಬ್ರೈಲಿ ರವರು ಫ್ರಾನ್ಸ್ ನಲ್ಲಿ ಜನವರಿ 4, 1809 ರಲ್ಲಿ ಜನಿಸಿದ್ದರು. ತಮ್ಮ ಮೂರನೇ ವಯಸ್ಸಿನಲ್ಲಿಯೇ ಅಪಘಾತವೊಂದರಲ್ಲಿ ಕಣ್ಣುಗಳನ್ನು ಕಳೆದುಕೊಂಡು ಅಂಧರಾದರು.
- ಇವರು ಸಂಶೋಧಿಸಿದ ಬ್ರೈಲಿ ಲಿಪಿ ಇವತ್ತು ಲಕ್ಷಾಂತರ ಅಂಧರಿಗೆ ಓದಲು ಮತ್ತು ಬರೆಯಲು ಅವಕಾಶ ಕಲ್ಪಿಸಿಕೊಟ್ಟಿದೆ.
2017 ವರ್ಷವನ್ನು ವನ್ಯಜೀವ ವರ್ಷವೆಂದು ಘೋಷಿಸಿದ ಕರ್ನಾಟಕ ಪ್ರವಾಸೋದ್ಯಮ ಇಲಾಖೆ
ಕರ್ನಾಟದಲ್ಲಿ ವನ್ಯ ಜೀವಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರವಾಸೋದ್ಯಮ ಇಲಾಖೆ 2017 ಅನ್ನು ‘ವನ್ಯ ವರ್ಷ’ ವನ್ನಾಗಿ ಆಚರಿಸಲು ನಿರ್ಧರಿಸಿದೆ. ವನ್ಯವರ್ಷ ಅಭಿಯಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಪ್ರಾರಂಭಿಸಿದರು.
ಪ್ರಮುಖಾಂಶಗಳು:
- ಜಂಗಲ್ ಟ್ರಾಕ್, ನಿತ್ಯಹರಿದ್ವರ್ಣ ಪಶ್ಚಿಮ ಘಟ್ಟಗಳ ಕಾಡುಗಳನ್ನು ಹಾಗೂ ಹೇರಳವಾದ ಪ್ರಾಣಿ ಹಾಗೂ ಸಸ್ಯ ಸಂಕುಲಗಳನ್ನು ಸಂರಕ್ಷಿಸುವುದು ಹಾಗೂ ಚಾರಣಿಗರು ಮತ್ತು ಪ್ರವಾಸಿಗರ ಆಕರ್ಷಕ ಕೇಂದ್ರವನ್ನಾಗಿಸುವುದು ಅಭಿಯಾನದ ಗುರಿಯಾಗಿದೆ.
- ಪ್ರವಾಸೋದ್ಯಮ ಇಲಾಖೆ ಪಶ್ಚಿಮಘಟ್ಟದಲ್ಲಿ 9 ಟ್ರಕ್ಕಿಂಗ್ ಮಾರ್ಗಗಳನ್ನು ಗುರುತಿಸಿದ್ದು, ಶೀಘ್ರವೇ ಪ್ರವಾಸಿಗರು ಹಾಗೂ ಚಾರಣಿಗರಿಗೆ ಮುಕ್ತವಾಗಲಿದೆ. ಈ ಮಾರ್ಗಗಳಲ್ಲಿ ಟ್ರಕ್ಕಿಂಗ್ ಪರಿಣಿತರಿಂದ ಪ್ರವಾಸದ ತರಬೇತಿ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು ಅಭಿಯಾನದ ಉದ್ದೇಶ.
- ಅಭಿಯಾನದ ಭಾಗವಾಗಿ ಟ್ರಕ್ಕಿಂಗ್ನಲ್ಲಿ ಅನೇಕ ಚಟುವಟಿಕೆಗಳ ಪಟ್ಟಿಯನ್ನು ತಯಾರಿಸಿದ್ದು, ಮೈಸೂರಿನಲ್ಲಿ ಏರೋ ಕ್ರೀಡಾ ಉತ್ಸವ, ಉಡುಪಿ ಮತ್ತು ಮಂಗಳೂರಿನಲ್ಲಿ ಬೀಚ್ ಸರ್ಪಿಂಗ್ ಇನ್ನು ಮುಂತಾದ ಚಟುವಟಿಕೆಗಳಿವೆ.
Thanks