ಗ್ರಾಮೀಣ ವಸತಿ ಸೌಲಭ್ಯಕ್ಕೆ ಹೊಸ ಯೋಜನೆಯನ್ನು ಅನುಮೋದಿಸಿದ ಕೇಂದ್ರ ಸರ್ಕಾರ

ದೇಶದಲ್ಲಿ ಗ್ರಾಮೀಣ ವಸತಿ ಸೌಲಭ್ಯವನ್ನು ಪ್ರೋತ್ಸಾಹಿಸುವುದಕ್ಕಾಗಿ ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಅನುಮೋದಿಸಿದೆ. ಈ ಯೋಜನೆಯಡಿ ಗ್ರಾಮೀಣ ಭಾಗದ ಜನರು ವಸತಿ ರಹಿತರು ಹೊಸ ಮನೆಯನ್ನು ನಿರ್ಮಿಸಿಕೊಳ್ಳಬಹುದಾಗಿದೆ ಅಥವಾ ಕಚ್ಚಾ ಮನೆಯನ್ನು ವಾಸಕ್ಕೆ ಯೋಗ್ಯವಾಗುವಂತೆ ಅಭಿವೃದ್ದಿಪಡಿಸಿಕೊಳ್ಳಬಹುದಾಗಿದೆ. ಇದರಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)-ಜಿ ರಡಿ ಫಲಾನುಭವಿಗಳಾಗದವರಿಗೆ ಸರ್ಕಾರ ಬಡ್ಡಿ ಸಬ್ಸಿಡಿಯನ್ನು ನೀಡಲಿದೆ.

ಯೋಜನೆಯ ಪ್ರಮುಖಾಂಶಗಳು:

  • ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಈ ಯೋಜನೆಯನ್ನು ಅನುಷ್ಟಾನಗೊಳಿಸಲಿದೆ. ಇದರಡಿ ವಸತಿ ನಿರ್ಮಾಣಕ್ಕೆ ಫಲಾನುಭವಿಗಳಿಗೆ ರೂ 2 ಲಕ್ಷ ಸಾಲದ ವರೆಗೆ ಬಡ್ಡಿ ಸಬ್ಸಿಡಿಯನ್ನು ನೀಡಲಾಗುವುದು.
  • ಒಟ್ಟು ನಿವ್ವಳ ಬಡ್ಡಿ ಮೊತ್ತದ ಶೇ 3% ರಷ್ಟನ್ನು ಸರ್ಕಾರ ನ್ಯಾಷನಲ್ ಹೌಸಿಂಗ್ ಬ್ಯಾಂಕಿಗೆ ನೀಡಲಿದೆ. ಆ ನಂತರ ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಪ್ರಾಥಮಿಕ ಸಾಲ ಸಂಸ್ಥೆಗಳಿಗೆ ಈ ಮೊತ್ತವನ್ನು ರವಾನಿಸಲಿದೆ.
  • ಯೋಜನೆಯನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ-ಜಿ ಯಡಿ ಒಗ್ಗೂಡಿಸುವುದು ಸೇರಿದಂತೆ ಸರ್ಕಾರ ಫಲಾನುಭವಿಗಳಿಗೆ ಅಗತ್ಯ ತಾಂತ್ರಿಕ ಸಹಾಯವನ್ನು ಒದಗಿಸಲಿದೆ.
  • ಹೊಸ ಯೋಜನೆಯು ಗ್ರಾಮೀಣ ಭಾಗದಲ್ಲಿ ವಸತಿ ಸೌಕರ್ಯ ಸೇರಿದಂತೆ ಉದ್ಯೋಗವನ್ನು ಸೃಷ್ಟಿಸಲು ನೆರವಾಗಲಿದೆ.

“ರಬ್ಬರ್ ಮಣ್ಣಿನ ಮಾಹಿತಿ ವ್ಯವಸ್ಥೆ (Rubber Soil Information System)”ಗೆ ಚಾಲನೆ

ಕೇಂದ್ರ ಸರ್ಕಾರ ರಬ್ಬರ್ ಮಣ್ಣಿನ ಮಾಹಿತಿ ವ್ಯವಸ್ಥೆ (RubSIS)ಗೆ ಚಾಲನೆ ನೀಡಿದೆ. ಇದೊಂದು ಆನ್ ಲೈನ್ ವ್ಯವಸ್ಥೆಯಾಗಿದ್ದು, ರಬ್ಬರ್ ಬೆಳೆಗಾರರಿಗೆ ಮಣ್ಣಿನ ಗುಣಕ್ಕೆ ತಕ್ಕಂತೆ ರಸಗೊಬ್ಬರ ಮಿಶ್ರಣವನ್ನು ಶಿಫಾರಸ್ಸು ಮಾಡುವ ಸಲುವಾಗಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ದೇಶದ ಅತಿ ಹೆಚ್ಚು ರಬ್ಬರ್ ಬೆಳೆಯುವ ಜಿಲ್ಲೆಯಾದ ಕೇರಳದ ಕೊಟ್ಟಯಂ ನಲ್ಲಿ ವ್ಯವಸ್ಥೆಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಕೇರಳ ಹಾಗೂ ತಮಿಳುನಾಡಿನ ರಬ್ಬರ್ ಬೆಳೆಯುವ ಎಲ್ಲಾ ಪ್ರದೇಶಗಳಿಗೂ ವಿಸ್ತರಿಸಲಾಗುವುದು.

ಪ್ರಮುಖಾಂಶಗಳು:

  • RubSIS ಅನ್ನು ಭಾರತೀಯ ರಬ್ಬರ್ ಸಂಶೋಧನಾ ಮಂಡಳಿ ಅಭಿವೃದ್ದಿಪಡಿಸಿದೆ. ರಬ್ಬರ್ ಮಂಡಳಿ ಹಾಗೂ ಇತರೆ ಮೂರು ಏಜೆನ್ಸಿಗಳೊಂದಿಗೆ ಈ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಲಾಗಿದೆ.
  • ಈ ಮೂರು ಏಜೆನ್ಸಿಗಳೆಂದರೆ ಕೇರಳದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ ಫಾರಮೇಶನ್ ಟೆಕ್ನಾಲಜಿ ಅಂಡ್ ಮ್ಯಾನೇಜ್ ಮೆಂಟ್, ನ್ಯಾಷನಲ್ ಬ್ಯೂರೋ ಆಫ್ ಸಾಯಿಲ್ ಸರ್ವೇ ಅಂಡ್ ಲ್ಯಾಂಡ್ ಯೂಸ್ ಪ್ಲಾನಿಂಗ್, ಐಸಿಎಆರ್ ಮತ್ತು ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್, ಇಸ್ರೋ.
  • ಈ ವ್ಯವಸ್ಥೆಯಡಿ ರಬ್ಬರ್ ಬೆಳೆಗಾರರ ಬೆರಳ ತುದಿಯಲ್ಲಿ ರಬ್ಬರ್ ಬೆಳೆಗೆ ಅಗತ್ಯವಿರುವ ರಸಗೊಬ್ಬರ ಮಿಶ್ರಣ ಮಾಹಿತಿ ದೊರೆಯಲಿದೆ.
  • ಇದೊಂದು ರಬ್ಬರ್ ಬೆಳೆಯುವ ಮಣ್ಣಿನ ಸಮರ್ಥನೀಯ ಹಾಗೂ ವೈಜ್ಞಾನಿಕ ನಿರ್ವಹಣಗೆ ವೆಚ್ಚ ಪರಿಣಾಮಕಾರಿ ಪರಿಣಾಮಕಾರಿ ಸಾಧನವಾಗಿದೆ. ಈ ವ್ಯವಸ್ಥೆಯ ಅಳವಡಿಕೆಯಿಂದ ಅತಿಯಾದ ರಾಸಾಯನಿಕ ಗೊಬ್ಬರ ಬಳಕೆ ತಡೆದು ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದು.
  • ಅಲ್ಲದೇ ರಬ್ಬರ್ ಬೆಳಗೆ ತಗುಲುವ ವೆಚ್ಚವನ್ನು ಕಡಿಮೆಗೊಳಿಸಿ, ಉತ್ಪಾದನೆಯಲ್ಲಿ ಹೆಚ್ಚಳವಾಗುವುದರ ಜೊತೆಗೆ ಪರಿಸರ ಮಾಲಿನ್ಯ ಸಹ ಕಡಿಮೆಯಾಗಲಿದೆ.

ಟಾರ್ಗೆಟ್ ಒಲಂಪಿಕ್ ಪೋಡಿಯಂ ಯೋಜನೆಯಡಿ ಕ್ರೀಡಾಪಟುಗಳ ಆಯ್ಕೆಗೆ ಸಮಿತಿ ರಚನೆ

ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಟಾರ್ಗೆಟ್ ಒಲಂಪಿಕ್ ಪೋಡಿಯಂ (TOP) ಸಮಿತಿಯನ್ನು ಪುನರ್ ರಚಿಸಿದೆ. 2020 ಹಾಗೂ 2024 ರಲ್ಲಿ ನಡೆಯಲಿರುವ ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಸಂಭಾವ್ಯ ಕ್ರೀಡಾಪಟುಗಳನ್ನು ಗುರುತಿಸುವುದು ಈ ಸಮಿತಿಯ ಮುಖ್ಯ ಉದ್ದೇಶ. ಒಲಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರು ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅನಿಲ್ ಖನ್ನಾ, ಪ್ರಕಾಶ್ ಪಡುಕೋಣೆ, ಕರ್ಣಂ ಮಲ್ಲೇಶ್ವರಿ, ಪಿ.ಟಿ.ಉಷಾ, ಮುರಳಿಧರ್ ರಾಜಾ, ಅಂಜಲಿ ಭಾಗವತ್, ರೇಖಾ ಯಾದವ್, ಡಾ.ಎಸ್.ಎಸ್ ರಾಯ್ ಹಾಗೂ ಇಂದರ್ ಧಮಿಜ ಸಮಿತಿಯ ಸದಸ್ಯರಾಗಿದ್ದಾರೆ.

ಪ್ರಮುಖಾಂಶಗಳು:

  • ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರುವ ಸಂಸ್ಥೆಗಳಲ್ಲಿ ತರಭೇತಿ ನೀಡಲು ಹಣಕಾಸು ನೆರವು ನೀಡಲು ಹಾಗೂ ಇತರೆ ಅಗತ್ಯ ಬೆಂಬಲ ನೀಡಲು ಕ್ರೀಡಾಪಟುಗಳನ್ನು ಆಯ್ಕೆಯನ್ನು ಸಮಿತಿ ಮಾಡಲಿದೆ.
  • ಸಮಿತಿಯು ಒಂದು ವರ್ಷ ಆರಂಭಿಕ ಅವಧಿಯನ್ನು ಹೊಂದಿದ್ದು, ಅಗತ್ಯವಿದ್ದಾಗ ವಿಷಯ ತಜ್ಞರನ್ನು ಆಮಂತ್ರಿಸುವ ಹಾಗೂ ತನ್ನದೇ ಆದ ಸ್ವಂತ ವಿಧಾನಗಳಿಂದ ನಿರ್ಣಯವನ್ನು ಕೈಗೊಳ್ಳುವ ಅಧಿಕಾರವನ್ನು ಹೊಂದಿದೆ.

ಟಾರ್ಗೆಟ್ ಒಲಂಪಿಕ್ ಪೋಡಿಯಂ:

ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಟಾರ್ಗೆಟ್ ಒಲಂಪಿಕ್ ಪೋಡಿಯಂ ಯೋಜನೆಯನ್ನು ರೂಪಿಸಿದ್ದು, ರಾಷ್ಟ್ರೀಯ ಕ್ರೀಡಾ ಅಭಿವೃದ್ದಿ ನಿಧಿ ವ್ಯಾಪ್ತಿಯಲ್ಲಿ ಇದನ್ನು ಜಾರಿಗೆ ತರಲಾಗಿದೆ. 2020 ಹಾಗೂ 2024 ರಲ್ಲಿ ನಡೆಯಲಿರುವ ಒಲಂಪಿಕ್ ಕ್ರೀಡಾ ಕೂಟದಲ್ಲಿ ಅತಿ ಹೆಚ್ಚು ಪದಕಗಳನ್ನು ಗೆಲ್ಲಲ್ಲು ಕ್ರೀಡಾಪಟುಗಳನ್ನು ಸಿದ್ದಪಡಿಸುವುದು ಯೋಜನೆಯ ಉದ್ದೇಶ.  ಯೋಜನೆಯಡಿ ಆಯ್ಕೆಯಾಗುವ ಕ್ರೀಡಾಪಟುಗಳಿಗೆ ವಿಶ್ವದರ್ಜೆ ತರಭೇತಿ ಸಂಸ್ಥೆಗಳಲ್ಲಿ ತರಭೇತಿ ಪಡೆಯಲು ಹಣಕಾಸು ನೆರವನ್ನು ನೀಡಲಾಗುವುದು.

ನಳಂದ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಡಾ. ವಿಜಯ್ ಭಟ್ಕರ್ ನೇಮಕ

ಭಾರತದ ಮೊದಲ ಸೂಪರ್ ಕಂಪ್ಯೂಟರ್ ಪರಮ್ ಸರಣಿಯ ವಾಸ್ತುಶಿಲ್ಪಿ ಎನಿಸಿರುವ ಡಾ.ವಿಜಯ್ ಭಟ್ಕರ್ ಅವರನ್ನು ನಳಂದ ವಿಶ್ವವಿದ್ಯಾಲಯದ ನೂತನ ಕುಲಪತಿಯನ್ನಾಗಿ ರಾಷ್ಟ್ರಪತಿ ಪ್ರಣಭ್ ಮುಖರ್ಜಿ ಅವರು ನೇಮಕ ಮಾಡಿದ್ದಾರೆ.  ನಳಂದ ವಿಶ್ವವಿದ್ಯಾಲಯ ಕಾಯಿದೆ ಸೆಕ್ಷನ್ 11 (3) ಪ್ರಕಾರ ಭಟ್ಕರ್ ಅವರ ಅಧಿಕಾರ ಅವಧಿ ಮೂರು ವರ್ಷ ಇರಲಿದೆ. ಭಟ್ಕರ್ ಅವರು ಜಾರ್ಜ್ ಯೆಒ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಸಿಂಗಪುರದ ಮಾಜಿ ವಿದೇಶಾಂಗ ಸಚಿವರಾದ ಜಾರ್ಜ್ ಯೆಒ ರವರು ವಿಶ್ವವಿದ್ಯಾಲಯದ ಮಂಡಳಿಯನ್ನು ರಚಿಸಿದ ನಂತರ ರಾಜೀನಾಮೆಯನ್ನು ನೀಡಿದ್ದರು.

ಡಾ. ವಿಜಯ್ ಭಟ್ಕರ್:

  • ಡಾ. ವಿಜಯ್ ಭಟ್ಕರ್ ಅವರು ದೇಶದ ಪ್ರಖ್ಯಾತ ವಿಜ್ಞಾನಿಗಳಲ್ಲಿ ಒಬ್ಬರು. ಭಾರತದ ಮೊದಲ ಸೂಪರ್ ಕಂಪ್ಯೂಟರ್ “ಪರಮ್ ಸರಣಿ”ಯ ವಾಸ್ತುಶಿಲ್ಪಿ ಎಂದೇ ಇವರು ಪ್ರಸಿದ್ದರಾಗಿದ್ದಾರೆ.
  • ಭಾರತದ ಸೂಪರ್ ಕಂಪ್ಯೂಟಿಂಗ್ ಅಭಿವೃದ್ದಿ ಉಪಕ್ರಮವಾದ ಸಿ-ಡಾಕ್ (C-DAC)ನ ಸಂಸ್ಥಾಪಕ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರೆ. ಅಲ್ಲದೇ ಹಲವಾರು ರಾಷ್ಟ್ರಮಟ್ಟದ ಸಂಸ್ಥೆಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
  • ಕೇಂದ್ರ ಸರ್ಕಾರದ ಸಚಿವ ಸಂಪುಟದ ವೈಜ್ಞಾನಿಕ ಸಲಹಾ ಸಮಿತಿಯ ಸದಸ್ಯರಾಗಿ ಹಾಗೂ ಸಿಎಸ್ಐಆರ್ ನ ಆಡಳಿತ ಮಂಡಳಿಯ ಸದಸ್ಯರಾಗಿ ಸಹ ಕಾರ್ಯನಿರ್ವಹಿಸಿದ್ದರು.
  • ಭಟ್ಕರ್ ಅವರಿ ಪದ್ಮ ವಿಭೂಷಣ, ಮಹಾರಾಷ್ಟ್ರ ಭೂಷಣ, ಪದ್ಮ ಭೂಷಣ ಪ್ರಶಸ್ತಿಗಳು ಲಭಿಸಿವೆ.

ನಳಂದ ವಿಶ್ವವಿದ್ಯಾಲಯ:

  • ಪ್ರಾಚೀನ ಭಾರತದಲ್ಲಿ ವಿಶ್ವ ಪ್ರಸಿದ್ದ ಹೊಂದಿದ್ದ ಬಿಹಾರದ ರಾಜ್ ಘರ್ ನಲ್ಲಿದ್ದ ನಳಂದ ವಿಶ್ವವಿದ್ಯಾಲಯವನ್ನು ಪುನರ್ ಜ್ಜೀವನಗೊಳಿಸಿ ನಳಂದ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ.
  • ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಅವರು ಈ ವಿಶ್ವವಿದ್ಯಾಲಯದ ಪರಿಕಲ್ಪನೆಯನ್ನು ಹುಟ್ಟುಹಾಕಿದ ಮೊದಲಿಗರು.
  • ನಳಂದ ವಿಶ್ವವಿದ್ಯಾಲಯ ಕಾಯಿದೆ-2010 ರಡಿ ಸ್ಥಾಪಿಸಿಲಾಗಿದ್ದು, ವಿದೇಶಾಂಗ ವ್ಯವಹಾರ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದೆ.

ಪ್ರಾಚೀನ ನಳಂದ ವಿಶ್ವವಿದ್ಯಾಲಯವನ್ನು 427AD ಯಲ್ಲಿ ಸ್ಥಾಪಿಸಲಾಗಿದೆ. ಗುಪ್ತರ ದೊರೆ ಸಕ್ರದಿತ್ಯ ಕಾಲದಲ್ಲಿ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಇದು ಭಾರತದ ಮೊದಲ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ಜನಪ್ರಿಯದ ಉತ್ತುಂಗದಲ್ಲಿದ್ದ ಈ ವಿಶ್ವವಿದ್ಯಾಲಯದಲ್ಲಿ ಶ್ರೀಲಂಕಾ, ಚೀನಾ, ಕೊರಿಯಾ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳಿಂದ ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದರು.

Leave a Comment

This site uses Akismet to reduce spam. Learn how your comment data is processed.