ಸೈಯದ್ ಮೋದಿ ಗ್ರ್ಯಾನ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್ ಟೂರ್ನಿ: ಸಿಂಧು. ವರ್ಮಾಗೆ ಗೆಲುವು

ಭಾರತದ  ಪಿ.ವಿ ಸಿಂಧು ಮತ್ತು ಸಮೀರ್ ವರ್ಮಾ ಸೈಯದ್ ಮೋದಿ ಗ್ರ್ಯಾನ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಜೇತರಾಗುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಮಹಿಳಾ ಸಿಂಗಲ್ಸ್:

  • ಭಾರತದ ಸಿಂಧು 21–13, 21–14ರಲ್ಲಿ  ಇಂಡೊನೇಷ್ಯಾದ ಗ್ರೆಗೊರಿಯಾ ಮರಿಸ್ಕಾ  ಅವರನ್ನು ಮಣಿಸಿದರು. ಇದು ಸಿಂಧು ಅವರಿಗೆ ಸಂದ ಮೊದಲ ಪ್ರಶಸ್ತಿ.

ಪುರುಷರ ಸಿಂಗಲ್ಸ್:

  • ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಸಮೀರ್‌ 21–19, 21–16ರಲ್ಲಿ ಭಾರತದವರೇ ಆದ ಸಾಯಿ ಪ್ರಣೀತ್ ಅವರನ್ನು ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಮಿಶ್ರ ಡಬಲ್ಸ್:

  • ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್   ಚೋಪ್ರಾ ಮತ್ತು ಎನ್‌. ಸಿಕ್ಕಿ ರೆಡ್ಡಿ  ಪ್ರಶಸ್ತಿ ಗೆದ್ದರು. ಫೈನಲ್‌ನಲ್ಲಿ ಈ ಜೋಡಿ 22–20, 21–10ರಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಬಿ. ಸುಮೀತ್ ರೆಡ್ಡಿ ಅವರನ್ನು ಸೋಲಿಸಿದರು.

ಮಹಿಳೆಯರ ಡಬಲ್ಸ್: 

  • ಮಹಿಳೆಯರ ಡಬಲ್ಸ್‌ನಲ್ಲಿ ಕಮಿಲಾ ಜುಹಲ್ ಮತ್ತು ಕ್ರಿಸ್ಟಿನಾ ಪೆಡರ್ಸನ್ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್‌.ಸಿಕ್ಕಿ ರೆಡ್ಡಿ  ಮಣಿಸಿ ಪ್ರಶಸ್ತಿ ಗೆದ್ದುಕೊಂಡರು.

ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಟೂರ್ನಿ: ಇತಿಹಾಸ ಬರೆದ ಸೆರೆನಾ ವಿಲಿಯಮ್ಸ್

ಅಮೆರಿಕಾದ ಸೆರೆನಾ ವಿಲಿಯಮ್ಸ್‌ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಟ್ರೋಫಿ ಗೆಲ್ಲುವ ಮೂಲಕ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಗಳಲ್ಲಿ ಹೆಚ್ಚು ಪ್ರಶಸ್ತಿ ಗೆದ್ದ ಹಿರಿಮೆಗೆ ಪಾತ್ರರಾಗಿದ್ದಾರೆ. ಫೈನಲ್‌ನಲ್ಲಿ ಸೆರೆನಾ 6–4, 6–4ರಲ್ಲಿ ಅಕ್ಕ ವೀನಸ್‌ ವಿಲಿಯಮ್ಸ್‌ ಅವರನ್ನು ಸೋಲಿಸಿ ವಿಜೇತರಾದರು.

  • ಸೆರೆನಾ 23ನೇ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಜಯಿಸಿ ಜರ್ಮನಿಯ ಸ್ಟೆಫಿಗ್ರಾಫ್‌ ಹೆಸರಿನಲ್ಲಿದ್ದ  ದಾಖಲೆ  ಅಳಿಸಿ ಹಾಕಿದರು. ಅಲ್ಲದೇ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದರು.
  • ಸೆರೆನಾ ಅವರು 1999 ರಲ್ಲಿ ಮೊದಲ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಕಳೆದ ವರ್ಷ ನಡೆದ ವಿಂಬಲ್ಡನ್‌ ಟೂರ್ನಿಯಲ್ಲಿ ಟ್ರೋಫಿಗೆ ಮುತ್ತಿಕ್ಕಿ ಸ್ಟೆಫಿ ಗ್ರಾಫ್‌ ಹೆಸರಿನಲ್ಲಿದ್ದ (22 ಪ್ರಶಸ್ತಿ)  ದಾಖಲೆ ಸರಿಗಟ್ಟಿದ್ದರು.

ಪುರುಷರ ಸಿಂಗಲ್ಸ್ ಫೆಡರರ್ ಗೆ ಜಯ:

ಸ್ವಿಟ್ಜರ್ಲ್ಯಾಂಡ್ ನ ವೃತ್ತಿಪರ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ರವರು 2017 ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಫೈನಲ್ ಪಂದ್ಯದಲ್ಲಿ ಫೆಡರರ್ ಅವರು ರಫೆಲ್ ನಡಾಲ್ ಅವರನ್ನು 6-4, 3-6, 6-1, 3-6, 6-3 ಸೆಟ್ ಗಳಿಂದ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು. ಫೆಡರರ್ ಗೆ ಇದು ಐದನೇ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಹಾಗೂ ಒಟ್ಟಾರೆಯಾಗಿ 18ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ.

ಕರ್ನಾಟಕ ಲೋಕಾಯುಕ್ತರಾಗಿ ಪಿ. ವಿಶ್ವನಾಥ ಶೆಟ್ಟಿ ನೇಮಕ

ರಾಜ್ಯ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರನ್ನು ಕರ್ನಾಟಕ ಲೋಕಾಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ರಾಜ್ಯಪಾಲ ವಜುಭಾಯ್ ವಾಲಾ ಅವರು ಪಿ. ವಿಶ್ವನಾಥ ಶೆಟ್ಟಿ ಅವರ ನೇಮಕಾತಿಗೆ ಅನುಮೋದನೆ ನೀಡಿದ್ದಾರೆ. ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ವೈ. ಭಾಸ್ಕರರಾವ್‌ ಅವರು ಅಧಿಕಾರದ ದುರುಪಯೋಗ ಹಾಗೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪಕ್ಕೆ ತುತ್ತಾಗಿ 2015ರ ಡಿಸೆಂಬರ್‌ನಲ್ಲಿ ರಾಜೀನಾಮೆ ನೀಡಿದ್ದರು. ಆ ಬಳಿಕ ಈ ಸ್ಥಾನ ತೆರವಾಗಿತ್ತು.

ಪಿ. ವಿಶ್ವನಾಥ್ ಶೆಟ್ಟಿ ಬಗ್ಗೆ:

  • ನ್ಯಾ. ವಿಶ್ವನಾಥ ಶೆಟ್ಟಿ ರವರು ಉಡುಪಿ ತಾಲ್ಲೂಕಿನ ಉಪ್ಪೂರು ಗ್ರಾಮದವರು. 1944ರಲ್ಲಿ ಇವರು ಜನಿಸಿದರು. 1966ರಲ್ಲಿ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಆರಂಭಿಸಿದರು.
  • 1993ರಿಂದ ಸುಪ್ರೀಂಕೋರ್ಟ್‌ ವಕೀಲರಾಗಿ ಕರ್ತವ್ಯ ನಿರ್ವಹಿಸಿದರು. ಶ್ರೀಯುತರು ಕರ್ನಾಟಕ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದಾರೆ.
  • 1995ರಲ್ಲಿ ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶೆಟ್ಟಿ ಅವರು,  ಹೈಕೋರ್ಟ್‌ನ ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಕರ್ನಾಟಕ ಲೋಕಾಯುಕ್ತ ಬಗ್ಗೆ:

ಆಡಳಿತ ಸುಧಾರಣೆಗಳ ಆಯೋಗವು 1966 ರಲ್ಲಿ ಕೇಂದ್ರ ಸರಕಾರಕ್ಕೆ  ಸಲ್ಲಿಸಿದ ವರದಿಯಲ್ಲಿ ಕೇಂದ್ರ ಮಟ್ಟದಲ್ಲಿ ಲೋಕಪಾಲ ಮತ್ತು ರಾಜ್ಯಮಟ್ಟದಲ್ಲಿ ಲೋಕಾಯುಕ್ತ ಎಂಬ ಸಂಸ್ಥೆಗಳನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿತ್ತು. ಆ ಶಿಫಾರಸ್ಸಿನಂತೆ 1971 ರಲ್ಲಿಯೇ ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರ ಪಾತ್ರವಾಯಿತು. 1983 ರಲ್ಲಿ ಜನತಾ ಪಾರ್ಟಿಯು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಾನು ಗೆದ್ದುಬಂದರೆ ಲೋಕಾಯುಕ್ತ ಕಾನೂನನ್ನು ಜಾರಿ ಗೊಳಿಸುವುದಾಗಿ ಭರವಸೆ ನೀಡಿತ್ತು. ಅದರಂತೆ 1983 ರಲ್ಲಿ ತನ್ನ ಭರವಸೆಯಂತೆ ಅದು 1983 ರಲ್ಲಿ ಕರ್ನಾಟಕ ಲೋಕಾಯುಕ್ತ ಅಧಿನಿಯಮವನ್ನು ಅಂಗೀಕರಿಸಿ 1986 ರಲ್ಲಿ ಅದನ್ನು ಜಾರಿಗೊಳಿಸಿತು. ಕಾಯಿದೆಯಲ್ಲಿ ಒಬ್ಬ ಲೋಕಾಯುಕ್ತ, ಒಬ್ಬರು ಅಥವಾ ಒಬ್ಬರಿಗಿಂತ ಹೆಚ್ಚು ಉಪಲೋಕಾಯುಕ್ತರನ್ನು ನೇಮಕ ಮಾಡಲು ಅವಕಾಶ ನೀಡಲಾಗಿದೆ.

 ಲೋಕಾಯುಕ್ತರಾಗಲು ಬೇಕಾದ ಅರ್ಹತೆ:

  • ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ಅಥವಾ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿ ಅಥವಾ ಹೈಕೋರ್ಟ್ನಲ್ಲಿ ನ್ಯಾಯಾಧೀಶರಾಗಿ ಹತ್ತು ವರ್ಷಗಳಗಿಂತ ಕಡಿಮೆ ಇಲ್ಲದ ಅವಧಿಗೆ ಸೇವೆ ಸಲ್ಲಿಸಿದವರು ಅರ್ಹರಾಗಿರುತ್ತಾರೆ.
  • ಉಪಲೋಕಾಯುಕ್ತ: ಉಪಲೋಕಾಯುಕ್ತ ಆಗಲು ಹೈಕೋರ್ಟಿನ ನ್ಯಾಯಾಧೀಶರಾಗಿ ಕನಿಷ್ಠ ಐದು ವರ್ಷ ಸೇವೆ ಸಲ್ಲಿಸಿರಬೇಕು.

ಲೋಕಾಯುಕ್ತರನ್ನು ನೇಮಕ ಮಾಡುವವರು:

ರಾಜ್ಯಪಾಲರು ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರನ್ನು ನೇಮಕ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ.

ಆಯ್ಕೆ ಸಮಿತಿ:

ರಾಜ್ಯದ ಮುಖ್ಯಮಂತ್ರಿ ರವರ ನೇತೃತ್ವದ ಸಮಿತಿ ಲೋಕಾಯುಕ್ತರನ್ನು ನೇಮಕ ಮಾಡುತ್ತದೆ. ಈ ಸಮಿತಿಯು ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು, ಕರ್ನಾಟಕ ವಿಧಾನ ಪರಿಷತ್ತ್ ಅಧ್ಯಕ್ಷರು, ವಿಧಾನಸಭೆಯ ಸ್ಪೀಕರ್, ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿರುತ್ತದೆ.

ಅಧಿಕಾರ ಅವಧಿ: ಲೋಕಾಯುಕ್ತ ಮತ್ತು ಉಪಲೋಕಾಯುಕ್ತರವರು ಅಧಿಕಾರ ವಹಿಸಿಕೊಂಡ ದಿನದಿಂದ ಐದು ವರ್ಷಗಳ ಕಾಲ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ರಾಜೀನಾಮೆಯನ್ನು ರಾಜ್ಯಪಾಲರಿಗೆ ನೀಡಬೇಕು.

ಬಿಇಪಿಎಸ್ ಒಪ್ಪಂದಕ್ಕೆ ಹೊಸದಾಗಿ ಏಳು ರಾಷ್ಟ್ರಗಳು ಸೇರ್ಪಡೆ

ತೆರಿಗೆ ಮಾಹಿತಿಯನ್ನು ಹಂಚಿಕೊಳ್ಳುವ ಮಲ್ಟಿಲ್ಯಾಟರಲ್ ಕಾಂಪಿಟೆಂಟ್ ಆಥಾರಿಟಿ ಅಗ್ರಿಮೆಂಟ್ ಫಾರ್ ಕಂಟ್ರಿ-ಬೈ-ಕಂಟ್ರಿ (Multilateral Competent Authority Agreement for Country-by-Country CbC MCAA) ಒಪ್ಪಂದಕ್ಕೆ ಲಿಥುಯಾನಿಯ, ಗಬಾನ್, ಹಂಗೇರಿ, ಇಂಡೋನೇಷಿಯಾ, ಮಾಲ್ಟ, ಮಾರೀಷಸ್ ಹಾಗೂ ರಷ್ಯಾ ಸೇರ್ಪಡೆಗೊಂಡಿವೆ. ಆ ಮೂಲಕ ಒಪ್ಪಂದಕ್ಕೆ ಸಹಿ ಹಾಕಿದ ರಾಷ್ಟ್ರಗಳ ಸಂಖ್ಯೆ 57ಕ್ಕೆ ಏರಿಕೆ ಆಗಿದೆ. ಭಾರತ ಈ ಒಪ್ಪಂದಕ್ಕೆ ಮೇ 2015 ರಲ್ಲಿ ಸಹಿ ಹಾಕಿತ್ತು. CbC MCAA ಒಂದು ತೆರಿಗೆ ಸಹಕಾರ ಒಪ್ಪಂದವಾಗಿದ್ದು, ರಾಷ್ಟ್ರ ರಾಷ್ಟ್ರಗಳ ನಡುವೆ ತೆರಿಗೆ ಮಾಹಿತಿಯನ್ನು ಹಂಚಿಕೊಳ್ಳಲು ರೂಪಿಸಲಾಗಿದೆ.

ಪ್ರಮುಖಾಂಶಗಳು:

  • ಬಹು ರಾಷ್ಟ್ರೀಯ ಉದ್ಯಮಗಳಲ್ಲಿ ಪಾರದರ್ಶಕತೆ ತರುವ ಸಲುವಾಗಿ ಸದಸ್ಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯವಾಗಿ ಹಾಗೂ ಸ್ವಯಂಚಾಲಿತ ಮಾಹಿತಿ ವಿನಮಯನ್ನು ಒಪ್ಪಂದದಡಿ ಮಾಡಲಾಗುತ್ತದೆ.
  • OECD ಮತ್ತು ಜಿ-20 ಸದಸ್ಯ ರಾಷ್ಟ್ರಗಳು ಅಳವಡಿಸಿಕೊಂಡಿರುವ “ಬೇಸ್ ಎರೋಷನ್ ಅಂಡ್ ಪ್ರಾಫಿಟ್ ಶಿಪ್ಟಿಂಗ್ ಆಕ್ಷನ್ ಪ್ಲಾನ್(Base Erosion and Profit Shifting Action Plan)“ ರಂತೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ.

ಭಾರತೀಯ ಅಂಚೆಯಿಂದ ಪೇಮೆಂಟ್ಸ್ ಬ್ಯಾಂಕ್ ಕಾರ್ಯಾರಂಭ

ಭಾರತೀಯ ಅಂಚೆ ಇಲಾಖೆಯಡಿ (ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ) ಭಾರತೀಯ ಅಂಚೆಗೆ (ಇಂಡಿಯಾ ಪೋಸ್ಟ್) ಪೇಮೆಂಟ್ ಬ್ಯಾಂಕ್ ನಡೆಸಲು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅಂತಿಮ ಪರವಾನಗಿ ಲಭಿಸಿದೆ. ಆ ಮೂಲಕ ಏರ್ಟೆಲ್ ಮತ್ತು ಪೇಟಿಎಂ ನಂತರ ಪೇಮೆಂಟ್ ಬ್ಯಾಂಕ್ ಆರಂಭಿಸಲು ಅನುಮತಿ ಪಡೆದ ಮೂರನೇ ಸಂಸ್ಥೆ ಭಾರತೀಯ ಅಂಚೆ.

ಪ್ರಮುಖಾಂಶಗಳು:

  • ಪ್ರಸ್ತುತ ಭಾರತೀಯ ಅಂಚೆ ಇಲಾಖೆ ದೇಶದಾದ್ಯಂತ 1,55,000 ಅಂಚೆ ಕಚೇರಿಗಳನ್ನು ಹೊಂದಿದೆ. ಈ ಎಲ್ಲಾ ಕಚೇರಿಗಳಲ್ಲೂ ಪೇಮೆಂಟ್ ಬ್ಯಾಂಕ್ ಸೇವೆಯನ್ನು ಆರಂಭಿಸಲಾಗುವುದು.
  • ಇದರ ಜೊತೆಗೆ ಪೇಮೆಂಟ್ ಬ್ಯಾಂಕಿಗಾಗಿ 650 ಹೊಸ ಶಾಖೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಈ ಶಾಖೆಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಂಚೆ ಕಚೇರಿಗಳ ಬಳಿ ತೆರೆಯಲಾಗುವುದು.

ಪೇಮೆಂಟ್ ಬ್ಯಾಂಕ್ ಎಂದರೇನು?

ಸರ್ಕಾರದ ಆರ್ಥಿಕ ಸೇರ್ಪಡೆ ಗುರಿಯನ್ನು ಸಕಾರಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಹೊರತಂದಿರುವ ವಿನೂತನ ಬ್ಯಾಂಕಿಂಗ್ ಮಾದರಿಯೇ “ಪೇಮೆಂಟ್ ಬ್ಯಾಂಕ್ ವ್ಯವಸ್ಥೆ”.

  • ಈ ಬ್ಯಾಂಕುಗಳು ಬೇಡಿಕೆ ಆಧರಿಸಿದ ಠೇವಣಿ ಸಂಗ್ರಹ, ಹಣ ಜಮಾ ಸೇವೆಗಳು, ಇಂಟರ್ನೆಟ್‌ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತವೆ. ಆದರೆ ಸಾಲ ವಿತರಣೆ ಸೇವೆಗಳನ್ನು ನೀಡುವುದಿಲ್ಲ.
  • ಪೇಮೆಂಟ್‌ ಬ್ಯಾಂಕ್‌ಗಳು ಸಣ್ಣ ಉದ್ದಿಮೆಗಳು ಹಾಗೂ ವೈಯುಕ್ತಿ ಖಾತೆಗೆ ಗರಿಷ್ಠ ರೂ 1 ಲಕ್ಷದ ವರೆಗೆ ಮಾತ್ರ ಠೇವಣೆಯನ್ನು ಇರಿಸಿಕೊಳ್ಳಬಹುದು. ತಮ್ಮ ಖಾತೆದಾರರಿಗೆ ಎಟಿಎಂ ಅಥವಾ ಡೆಬಿಟ್‌ ಕಾರ್ಡ್‌, ಭಿನ್ನ ಸ್ವರೂಪದ ಪ್ರೀಪೇಯ್ಡ್‌ ಕಾರ್ಡ್‌ಗಳನ್ನು ವಿತರಿಸಬಹುದು. ಆದರೆ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸುವಾಗಿಲ್ಲ.
  • ರಿಸ್ಕ್ ಅಲ್ಲದ ಸರಳ ಆರ್ಥಿಕ ಉತ್ಪನ್ನಗಳು ಅಂದರೆ ಮ್ಯೂಚುಯಲ್ ಫಂಡ್, ವಿಮೆ ಉತ್ಪನ್ನಗಳನ್ನು ವಿತರಿಸಬಹುದು. ಅನಿವಾಸಿ ಭಾರತೀಯರು ಈ ಬ್ಯಾಂಕಿನಲ್ಲಿ ಖಾತೆ ತರೆಯುವಂತೆ ಇಲ್ಲ.
  • ಈ ವಿನೂತನ ಪೇಮೆಂಟ್ ಬ್ಯಾಂಕುಗಳು ಮೊಬೈಲ್‌ ಬ್ಯಾಂಕಿಂಗ್‌ ಸೇವೆ, ಸೂಪರ್‌ ಮಾರ್ಕೆಟ್‌ಗಳ ಸರಣಿಗೆ ಮತ್ತು ಸಣ್ಣ ಪ್ರಮಾಣದ ವಾಣಿಜ್ಯ ಸಂಸ್ಥೆಗಳ ವಹಿವಾಟಿಗೆ ಹಣ ಪಾವತಿ ಸೌಲಭ್ಯವನ್ನು ಶೀಘ್ರವಾಗಿ ಒದಗಿಸಿಕೊಡುತ್ತದೆ.

ಸ್ಪರ್ಶಿತ ಕುಷ್ಠರೋಗ ಜಾಗೃತಿ ಅಭಿಯಾನಕ್ಕೆ ಚಾಲನೆ

ಕುಷ್ಠರೋಗ ವಿರೋಧಿ ದಿನದ ಅಂಗವಾಗಿ ಕೇಂದ್ರ ಸರ್ಕಾರ ರಾಷ್ಟ್ರವ್ಯಾಪ್ತಿ ಸ್ಪರ್ಶಿತ ಕುಷ್ಠರೋಗ ಜಾಗೃತಿ ಅಭಿಯಾನ (Sparsh Leprosy Awareness Campaign)ಕ್ಕೆ ಚಾಲನೆ ನೀಡಿದೆ. ಕುಷ್ಠ ರೋಗ ವಿರೋಧಿ ದಿನವನ್ನು ಪ್ರತಿ ವರ್ಷ ಜನವರಿ 30 ರಂದು ಆಚರಿಸಲಾಗುತ್ತದೆ. ಜನವರಿ 30 ಮಹಾತ್ಮ ಗಾಂಧಿ ಅವರು ಹುತಾತ್ಮರಾದ ದಿನ. ಮಹಾತ್ಮ ಗಾಂಧಿ ಅವರು ಕುಷ್ಠರೋಗಿಗಳಿಗೆ ನೀಡಿದ ನಿಸ್ವಾರ್ಥ ಸೇವೆಯನ್ನು ಸ್ಮರಿಸಲು ಈ ದಿನದಂದು ಆಚರಿಸಲಾಗುತ್ತಿದೆ.

ಅಭಿಯಾನದ ಪ್ರಾಮುಖ್ಯತೆ:

  • ಕುಷ್ಠರೋಗವು “ಮೈಕೋಬ್ಯಾಕ್ಟೀರಿಯಂ ಲೆಪ್ರೇ” ಎಂಬ ಸೂಕ್ಷ್ಮ ಜೀವಾಣುವಿನಿಂದ ಬರುವ  ರೋಗ. ಇದು ಮುಖ್ಯವಾಗಿ ಚರ್ಮ ಮತ್ತು ನರಗಳ ಮೇಲೆ ಪ್ರಭಾವ ಬೀರುತ್ತದೆ. ಲಿಂಗ, ವಯಸ್ಸಿನ ಭೇದಭಾವವಿಲ್ಲದೆ ಯಾರಿಗಾದರೂ ಬರಬಹುದು. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಆರಂಭದಲ್ಲಿಯೇ ರೋಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಅಂಗವೈಕಲ್ಯವನ್ನು ತಡೆಗಟ್ಟಬಹುದು.
  • ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಜಗತ್ತಿನಾದ್ಯಂತ ವಾರ್ಷಿಕವಾಗಿ 2,12,000 ಜನರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಭಾರತ ಒಂದರಲ್ಲೆ 1,27, 356 ಪ್ರಕರಣಗಳು ದಾಖಲಾಗಿದ್ದು, ಜಗತ್ತಿನ ಶೇ 60% ಪ್ರಕರಣಗಳು ನಮ್ಮ ದೇಶದಲ್ಲಿ ಪತ್ತೆಯಾಗಿವೆ.
  • ವಿಶ್ವದಲ್ಲಿ ಅತಿ ಹೆಚ್ಚು ಕುಷ್ಠರೋಗ ಭಾಧಿತ 22 ರಾಷ್ಟ್ರಗಳಲ್ಲಿ ಭಾರತ ಸಹ ಒಂದಾಗಿದೆ. ಬ್ರೆಜಿಲ್ ಮತ್ತು ಇಂಡೋನೇಷಿಯಾ ಅಧಿಕ ಕುಷ್ಠರೋಗ ಪೀಡಿತ ದೇಶಗಳಾಗಿವೆ.

ಸ್ಪರ್ಶಿತ ಕುಷ್ಠರೋಗ ಜಾಗೃತಿ ಅಭಿಯಾನ:

  • ಕುಷ್ಠರೋಗ ರೋಗದ ಪ್ರಾಥಮಿಕ ಹಂತದಲ್ಲೇ ರೋಗವನ್ನು ಪರೀಕ್ಷಿಸಲು ಹಾಗೂ ಚಿಕಿತ್ಸೆ ಪಡೆಯಲು ಸಮುದಾಯವವನ್ನು ಪ್ರೇರೆಪಿಸುವುದು ಹಾಗೂ ರೋಗದ ಬಗ್ಗೆ ಅರಿವು ಮೂಡಿಸುವುದು ಅಭಿಯಾನದ ಮುಖ್ಯ ಉದ್ದೇಶ.
  • ರೋಗದ ವಿರುದ್ದ ಹೋರಾಡಲು ಪ್ರಸ್ತುತ ಜಾರಿಯಲ್ಲಿರುವ ಕೇಂದ್ರೀಕೃತ ಮೇಲಿನಿಂದ ಕೆಳಗೆ ವಿತರಣಾ ಚಾಲಿತ ವಿಧಾನದ ಬದಲಿಗೆ ವಿಕೇಂದ್ರೀಕೃತ ಸಮುದಾಯ ಆಧರಿತ ಬೇಡಿಕೆ ಚಾಲಿತ ವಿಧಾನವನ್ನು ಪ್ರೋತ್ಸಾಹಿಸುವುದು ಅಭಿಯಾನದ ಗುರಿ.
  • ಅಲ್ಲದೇ ಕುಷ್ಠರೋಗಿಗಳ ಬಗ್ಗೆ ಸಮಾಜದಲ್ಲಿರುವ ಕೀಳು ಮನೋಭಾವವನ್ನು ಹೋಗಲಾಡಿಸಲು ಸಮುದಾಯವನ್ನು ಬಲಗೊಳಿಸುವುದು ಆಗಿದೆ.

Leave a Comment

This site uses Akismet to reduce spam. Learn how your comment data is processed.