ಮಾರ್ಚ್ 3: ವಿಶ್ವ ವನ್ಯಜೀವಿ ದಿನ (World Wildlife Day)
ವಿಶ್ವ ವನ್ಯಜೀವಿ ದಿನವನ್ನು ಪ್ರತಿ ವರ್ಷ ಮಾರ್ಚ್ 3 ರಂದು ಆಚರಿಸಲಾಗುತ್ತದೆ. ಜಗತ್ತಿನ ಸಸ್ಯ ಹಾಗೂ ಪ್ರಾಣಿ ಪ್ರಬೇಧಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ವನ್ಯಜೀವಿ ದಿನಾಚರಣೆಯ ಧ್ಯೇಯ. 2013ರ ವಿಶ್ವಸಂಸ್ಥೆ ಸಮಾವೇಶದಲ್ಲಿ ಮಾರ್ಚ್ 3ನ್ನು ವಿಶ್ವ ವನ್ಯಜೀವಿಗಳ ದಿನವೆಂದು ಘೊಷಿಸಲಾಗಿದೆ. ಸಿಐಟಿಇಎಸ್ (Convention on International Trade in Endangered Species of Wild Fauna and Flora (CITES)) ಒಪ್ಪಂದಕ್ಕೆ ಮಾರ್ಚ್ 3, 1973ರಲ್ಲಿ ಸಹಿ ಹಾಕಲಾದ ಸ್ಮರಣಾರ್ಥ ಮಾರ್ಚ್ 3 ರಂದು ವನ್ಯಜೀವಿ ದಿನವನ್ನು ಆಚರಿಸಲಾಗುತ್ತಿದೆ.
ಈ ದಿನದ ಮಹತ್ವ: ವನ್ಯಜೀವಿಗಳ ಬೇಟೆ ಅಲ್ಲದೆ ಅವುಗಳ ಚರ್ಮ, ಉಗುರು, ಕೊಂಬು, ದಂತಗಳ ಮಾರಾಟ ಅಕ್ರಮವಾಗಿ ಎಗ್ಗಿಲ್ಲದೆ ಸಾಗಿದೆ. ಇದರಿಂದ ಹಲವು ವನ್ಯಜೀವಿಗಳ ಸಂತತಿ ಅಳಿವಿನಂಚಿಗೆ ಸಾಗುತ್ತಿದೆ. ಅರಣ್ಯ ಪ್ರದೇಶದ ಒತ್ತುವರಿ, ಮರಗಳ ಮಾರಣಹೋಮದಿಂದ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳ ಮೇಲೆ ಲಗ್ಗೆಯಿಡುತ್ತಿವೆ. ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಪ್ರಕೃತಿಯಲ್ಲಿ ಅಸಮತೋಲನ ಕಂಡುಬರಲಿದೆ. ಈ ಹಿನ್ನೆಲೆಯಲ್ಲಿ ವನ್ಯಜೀವಿಗಳು ಮತ್ತು ಅರಣ್ಯಸಂಪತ್ತಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಮಹತ್ವ.
2017 ಧ್ಯೇಯ:
- Listen to the Young Voice (ಯುವಕರ ದನಿಗೆ ಕಿವಿಕೊಡಿ) ಇದು ಈ ವರ್ಷದ ಧ್ಯೇಯವಾಕ್ಯ. ಸಸ್ಯ ಪ್ರಾಣಿ ಸಂಕುಲಗಳ ಸಂರಕ್ಷಣೆಗೆ ಯುವಕರನ್ನು ಪ್ರೇರೆಪಿಸುವುದು ಈ ವರ್ಷದ ಆಚರಣೆಯ ಧ್ಯೇಯದ ಹಿನ್ನಲೆ.
CITES ಬಗ್ಗೆ:
- CITES ಒಂದು ಅಂತಾರಾಷ್ಟ್ರೀಯ ಒಪ್ಪಂದವಾಗಿದ್ದು, ವಿಶ್ವದಾದ್ಯಂತ ಸಸ್ಯ ಹಾಗೂ ವನ್ಯ ಜೀವಿ ಸಂಕುಲಗಳ ವಾಣಿಜ್ಯ ವ್ಯಾಪಾರವನ್ನು ನಿಯಂತ್ರಿಸುವ ಗುರಿ ಹೊಂದಿದೆ.
- ಅಂತಾರಾಷ್ಟ್ರೀಯ ಮಾರಾಟದಿಂದ ಜಗತ್ತಿನಲ್ಲಿ ಉಳಿದಿರುವ ಯಾವುದೇ ಜೀವ ಸಂಕುಲಗಳ ಮೇಲೆ ಹಾನಿ ಆಗದಂತೆ ನಿಗಾವಹಿಸುವುದು CITESನ ಮುಖ್ಯ ಉದ್ದೇಶ.
- CITES ಒಪ್ಪಂದ 1975 ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಇದು ಒಂದು ಕಾನೂನು ಬದ್ದ (Legally Binding)ವಾದ ಒಪ್ಪಂದವಾಗಿದ್ದು, ಸದಸ್ಯ ರಾಷ್ಟ್ರಗಳು ಒಪ್ಪಂದದ ಗುರಿಯನ್ನು ಕಾರ್ಯಗತಗೊಳಿಸಲು ಸ್ಥಳೀಯವಾಗಿ ಕಾನೂನು ರೂಪಿಸಲು ಬದ್ದವಾಗಿರಬೇಕು.
- ಈ ಒಪ್ಪಂದದಡಿ ಪ್ರಾಣಿ ಹಾಗೂ ಸಸ್ಯ ಸಂಕುಲಗಳನ್ನು ಮೂರು ವಿಧವಾಗಿ ವಿಂಗಡಿಸಲಾಗುತ್ತದೆ. ಅವುಗಳೆಂದರೆ.
- Appendix I: ಗಂಭೀರವಾಗಿ ಅಳಿವಿನ ಅಂಚಿನಲ್ಲಿರುವ ಪ್ರಾಣಿ, ಸಸ್ಯ ಪ್ರಭೇದಗಳನ್ನು ಇದರಡಿ ಸೇರಿಸಲಾಗಿದೆ. ಈ ಪಟ್ಟಿಯಲ್ಲಿರುವ ಜೀವಿಗಳನ್ನು ಯಾವುದೇ ರೀತಿ ವಾಣಿಜ್ಯ ವ್ಯಾಪಾರ ಮಾಡತಕ್ಕದ್ದಲ್ಲ. ವೈಜ್ಞಾನಿಕ ಅಥವಾ ಶೈಕ್ಷಣಿಕ ಅಧ್ಯಯನಕ್ಕೆ ಅತ್ಯಂತ ಅಗತ್ಯವೆನಿಸಿದರೆ ಮಾತ್ರ ಬಳಸಬಹುದು.
- Appendix II: ಅಪಾಯದ ಅಂಚಿನಲ್ಲಿ ಇರದ ಆದರೆ ಇವುಗಳ ವಾಣಿಜ್ಯ ಮಾರಾಟದ ಮೇಲೆ ನಿಗಾವಹಿಸದೆ ಇದ್ದರೆ ಅಳಿವಿನ ಅಂಚಿಗೆ ತಲುಪುವ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳನ್ನು ಇದರಡಿ ಪಟ್ಟಿ ಮಾಡಲಾಗಿದೆ.
- Appendix III: CITES ನ ಯಾವುದಾದರು ಒಂದು ಸದಸ್ಯ ರಾಷ್ಟ್ರದಲ್ಲಿ ಸಂರಕ್ಷಿತವಾಗಿರುವ ಪ್ರಭೇದಗಳು ಹಾಗೂ ಆ ಪ್ರಭೇದಗಳ ಮೇಲೆ ಅಂತಾರಾಷ್ಟ್ರೀಯ ವ್ಯಾಪಾರದ ಮೇಲೆ ಹತೋಟಿಗೆ ತರುವಂತೆ ಇತರೆ ಸದಸ್ಯ ರಾಷ್ಟ್ರಗಳಿಗೆ ಸಹಾಯ ನೀಡುವಂತೆ ಮನವಿ ಸಲ್ಲಿಸಿರುವ ಪ್ರಭೇದಗಳನ್ನು ಇದರಡಿ ಪಟ್ಟಿಮಾಡಲಾಗಿರುತ್ತದೆ.
ಶತ್ರು ಶಸ್ತಾಸ್ತ್ರ ಪತ್ತೆ ಹಚ್ಚುವ ರಾಡರ್ “ಸ್ವಾತಿ” ಸೇನೆಗೆ ಸೇರ್ಪಡೆ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (ಡಿಆರ್ಡಿಓ) ಸ್ವದೇಶಿ ನಿರ್ಮಿತ ಶಸ್ತಾಸ್ತ್ರ ಪತ್ತೆಹಚ್ಚುವ ರಾಡರ್ “ಸ್ವಾತಿ(SWATHI)”ಯನ್ನು ಸೇನೆಗೆ ಹಸ್ತಾಂತರ ಮಾಡಿದೆ. ಇದೇ ವೇಳೆ ರಕ್ಷಣಾ ಇಲಾಖೆಯ ವಿಜ್ಞಾನಿಗಳು ಅಭಿವೃದ್ದಿಪಡಿಸಿರುವ ವಿಶೇಷ ವಾಹನ `ಎನ್ಬಿಸಿಆರ್ ವಿ` ಯನ್ನು ಸಹ ಸೇನೆಗೆ ಹಸ್ತಾಂತರಗೊಳಿಸಲಾಯಿತು, ಇದು ನ್ಯೂಕ್ಲಿಯರ್, ಜೈವಿಕ, ರಾಸಾಯನಿಕ ಸೇರಿದಂತೆ ಯಾವುದೇ ಮಾದರಿಯ ಯುದ್ಧವನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ.
ಸ್ವಾತಿ ರಾಡರ್ ಬಗ್ಗೆ:
- ಡಿಆರ್ಡಿಓ ದ ಎಲೆಕ್ಟ್ರಾನಿಕ್ಸ್ ಮತ್ತು ರಾಡರ್ ಡೆವಲಪ್ಮೆಂಟ್ ಎಸ್ಟಬ್ಲಿಷ್ಮೆಂಟ್ (LADE) ಈ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿದೆ. ಇದರ ವ್ಯಾಪ್ತಿ 50 ಕಿ.ಮೀ. ಪ್ರಸ್ತುತ ಜಗತ್ತಿನಾದ್ಯಂತ ಬಳಕೆಯಲ್ಲಿರುವ ಫಿರಂಗಿ ಬಂದೂಕುಗಳನ್ನು ತನ್ನ ವ್ಯಾಪ್ತಿಯಡಿ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
- ಎದುರಾಳಿ ಶಸ್ತಾಸ್ತ್ರಗಳನ್ನು ಪತ್ತೆಹಚ್ಚುವ ಹಾಗೂ ನಿಖರವಾಗಿ ಹೊಡೆದು ಉರುಳಿಸುವ ಕಾರ್ಯವನ್ನು ಇದು ಮಾಡಲಿದೆ.
- ಇದು ಅತ್ಯಂತ ನಿಖರವಾಗಿ ಮತ್ತು ಕ್ಷಿಣವಾಗಿ ಕ್ಷಿಪಣಿ, ಶೆಲ್, ಮಾರ್ಟಲ್ಸ್ ಮತ್ತು ರಾಕೆಟ್ಗಳನ್ನು ಪತ್ತೆಹಚ್ಚಿ ವಿಫಲಗೊಳಿಸುವ ಸಾಮರ್ಥ್ಯ ಹೊಂದಿದೆ.
- ಪ್ರಸ್ತುತ ಇಂತಹ ನಾಲ್ಕು ವ್ಯವಸ್ಥೆಗಳನ್ನು ಸೇನೆ ಹೊಂದಿದ್ದು, ಇನ್ನು 30 ಅನ್ನು ಖರೀದಿಸಲು ಆದೇಶ ಹೊರಡಿಸಲಾಗಿದೆ.
- ಭಾರತೀಯ ಸೇನೆಗೆ ಇಂತಹ ವ್ಯವಸ್ಥೆ ಅತ್ಯಂತ ಅವಶ್ಯವೆನಿಸಿತ್ತು. ಕಾರ್ಗಿಲ್ ಯುದ್ಧದಂತಹ ನಂತರ ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿತ್ತು.
ವಿಶೇಷ ರಕ್ಷಣಾ ವಾಹನ ಎಂಕೆ-1:
ಡಿಆರ್ಡಿಓ ದ ವೆಹಿಕಲ್ಸ್ ರಿಸರ್ಚ್ ಮತ್ತು ಡೆವಲಪ್ಮೆಂಟ್ ಎಸ್ಟಬ್ಲಿಷ್ಮೆಂಟ್ ಇದನ್ನು ಅಭಿವೃದ್ದಿಪಡಿಸಿದೆ. ಈ ವಾಹನ ಯಾವುದೇ ಮಾದರಿಯ ಭೂಪ್ರದೇಶದೊಳಗೆ ನುಗ್ಗಬಲ್ಲದು. ಕೆಮಿಕಲ್, ನ್ಯೂಕ್ಲಿಯರ್, ಜೈವಿಕ ಸೇರಿದಂತೆ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿ ತಲುಪಿಸುತ್ತದೆ. ಈ ಮಾದರಿಗಳನ್ನು ಡಿಆರ್ ಡಿಒಗಳನ್ನು ಪರಿಶೀಲಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬಹುದಾಗಿದೆ.
“ದಿ ಸ್ಪೆಸಿಫೈಡ್ ಬ್ಯಾಂಕ್ ನೋಟ್ಸ್ ಆಕ್ಟ್, 2017” ಅಧಿಸೂಚನೆ ಹೊರಡಿಸಿದ ಸರ್ಕಾರ
ಅಮಾನ್ಯಗೊಂಡಿರುವ 500 ಮತ್ತು 1,000 ಮುಖಬೆಲೆಯ ನೋಟುಗಳನ್ನು ಡಿಸೆಂಬರ್ 31, 2016 ರಿಂದ ಇಟ್ಟುಕೊಳ್ಳುವುದು, ವ್ರಗಾವಣೆ ಮಾಡುವುದು ಹಾಗೂ ಸ್ವೀಕರಸಿವುದನ್ನು ನಿರ್ಬಂಧಿಸುವ “ದಿ ಸ್ಪೆಸಿಫೈಡ್ ಬ್ಯಾಂಕ್ ನೋಟ್ಸ್ ಆಕ್ಟ್-2017” ಅನ್ನು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅದರಂತೆ ಅಮಾನ್ಯಗೊಂಡಿರುವ 500 ಹಾಗೂ 1000 ಮುಖಬೆಲೆಯ ನೋಟುಗಳ ಬಳಕೆ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುವುದು.
ಕಾಯಿದೆಯ ಪ್ರಮುಖಾಂಶಗಳು:
- ಅಮಾನ್ಯಗೊಂಡಿರುವ ರೂ 500 ಹಾಗೂ ರೂ 1000 ಮುಖಬೆಲೆಯ ನೋಟುಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಭಾರತ ಸರ್ಕಾರದ ಹೊಣೆಗಾರಿಕೆ ಅಂತ್ಯಗೊಳ್ಳಲಿದೆ.
- ಡಿಸೆಂಬರ್ 31, 2016ರಿಂದ ಅಮಾನ್ಯಗೊಂಡಿರುವ 500 ಮತ್ತು 1,000 ಮುಖಬೆಲೆಯ ನೋಟುಗಳನ್ನು ಇಟ್ಟುಕೊಳ್ಳುವುದು, ವ್ರಗಾವಣೆ ಮಾಡುವುದು ಹಾಗೂ ಸ್ವೀಕರಸಿವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುವುದು. ಪ್ರಥಮ ದರ್ಜೆ ನ್ಯಾಯಾಧೀಶರಿಗೆ ದಂಡ ವಿಧಿಸುವ ಅವಕಾಶವನ್ನು ಕಾಯಿದೆಯಡಿ ಕಲ್ಪಿಸಲಾಗಿದೆ.
- ಒಬ್ಬ ವ್ಯಕ್ತಿಯು 10ಕ್ಕಿಂತ ಹೆಚ್ಚು ಅಮಾನ್ಯಗೊಂಡ ನೋಟುಗಳನ್ನು ಅಥವಾ ವಿದ್ಯಾಭ್ಯಾಸ, ಸಂಶೋಧನೆಗೊಸ್ಕರ 25ಕ್ಕೂ ಹೆಚ್ಚು ನೋಟುಗಳನ್ನು ಇಟ್ಟುಕೊಂಡರೆ, 10 ಸಾವಿರ ರೂ. ಅಥವಾ ಅವನಲ್ಲಿರುವ ನಗದಿನ 5 ಪಟ್ಟು ದಂಡವನ್ನು ಪಾವತಿಸಬೇಕು.
- ಇನ್ನು ಅಪನಗದೀಕರಣದ ಅವಧಿಯಲ್ಲಿ ವಿದೇಶಗಳಲ್ಲಿ ಇದ್ದ ಭಾರತೀಯರಿಗೆ ಹಳೇ ನೋಟುಗಳ ಠೇವಣಿಗೆ ಮಾ.31ರವರೆಗೆ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ, ಇವರು ಸುಳ್ಳು ಮಾಹಿತಿ ನೀಡಿ ಠೇವಣಿ ಇಡಲು ಮುಂದಾಗಿದ್ದು ಗೊತ್ತಾದರೆ, ಅಂಥವರಿಗೆ 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಕಾಯ್ದೆಯಲ್ಲಿ ಹೇಳಲಾಗಿದೆ.