ಐಎನ್ಎಸ್ ತಿಲಾನ್ ಚಾಂಗ್ ಸೇನಾನೌಕೆ ಕಾರ್ಯಾರಂಭ

ಐಎನ್ಎಸ್ ತಿಲಾನ್‌ಚಾಂಗ್ ಸೇನಾನೌಕೆಯು ಕಾರವಾರದ ಸೀಬರ್ಡ್‌ ನೌಕಾನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಿದೆ. ನೌಕಾಸೇನೆಯ ಪಶ್ವಿಮ ವಿಭಾಗದ ವೈಸ್ ಅಡ್ಮಿರಲ್ ಗಿರೀಶ್ ಲೂಥ್ರಾ ನೌಕೆಗೆ ಐಎನ್ಎಸ್ ತಿಲಾನ್‌ಚಾಂಗ್ ಚಾಲನೆ ನೀಡಿದರು.

ಪ್ರಮುಖಾಂಶಗಳು:

  • ಐಎನ್ಎಸ್ ತಿಲಾನ್‌ಚಾಂಗ್ ಸೇನಾನೌಕೆಯನ್ನು ಕೊಲ್ಕತ್ತದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಅಂಡ್ ಎಂಜಿನಿಯರ್ಸ್ (GRSE) ಸಂಸ್ಥೆ ಅಭಿವೃದ್ದಿಪಡಿಸಿದೆ. ಇದು ಮೂರನೇ ನೌಕೆಯಾಗಿದ್ದು, ಇನ್ನೆರಡು ವಿಶಾಖಪಟ್ಟಣ ನೌಕಾನೆಲೆಯಲ್ಲಿ 2016ರಿಂದ ಕಾರ್ಯನಿರ್ವಹಿಸುತ್ತಿವೆ.
  • ಇದು ಗಂಟೆಗೆ 35 ನಾಟಿಕಲ್ ಮೈಲು(50 ಕಿ.ಮೀ.) ವೇಗದಲ್ಲಿ ಕಡಲಲ್ಲಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.
  • ಈ ನೌಕೆಯ ಉದ್ದ9 ಮೀಟರ್‌ ಇದ್ದು, 50 ಸಿಬ್ಬಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
  • ಈ ನೌಕೆಯನ್ನು ಕಡಲತೀರದಲ್ಲಿ ಭಯೋತ್ಪಾದನೆ, ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಹಾಗೂ ದಾಳಿ ನಡೆಸಲು ಬಳಸಲಾಗುತ್ತದೆ. ಕಡಲಲ್ಲಿ ದುರಂತ ಸಂಭವಿಸಿದಾಗ ರಕ್ಷಣೆ ಹಾಗೂ ಹುಡುಕಾಟ ಕಾರ್ಯಚರಣೆಯಲ್ಲೂ ಈ ನೌಕೆ ಭಾಗಿಯಾಗಲಿದೆ.

ಏಷ್ಯಾ-ಫೆಸಿಫಿಕ್ ರಾಷ್ಟ್ರಗಳ ಪೈಕಿ ಭಾರತ ಅತ್ಯಂತ ಭ್ರಷ್ಟ ರಾಷ್ಟ್ರ: ಸಮೀಕ್ಷೆ

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಇತ್ತೀಚಿನ ವರದಿಯ ಪ್ರಕಾರ ಏಷ್ಯಾ ಪೆಸಿಫಿಕ್ ರಾಷ್ಟ್ರಗಳಲ್ಲಿ ಭಾರತದಲ್ಲೇ ಹೆಚ್ಚು ಭ್ರಷ್ಟಾಚಾರವಿದೆ ಎನ್ನಲಾಗಿದೆ. ಜುಲೈ 2015 ರಿಂದ ಜನವರಿ 2017ರವರೆಗೆ ನಡೆಸಲಾದ ಸಮೀಕ್ಷೆಯಲ್ಲಿ 16 ಏಷ್ಯಾ-ಫೆಸಿಫಿಕ್ ರಾಷ್ಟ್ರಗಳ ಪೈಕಿ ಭ್ರಷ್ಟಾಚಾರದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಸರಿಸುಮಾರು 21000 ಜನರನ್ನು ಈ ವಲಯದಲ್ಲಿ ಸಮೀಕ್ಷೆಗೆ ಒಳಪಡಿಸಲಾಗಿದ್ದು,  ಪ್ರತಿ ನಾಲ್ವರಲ್ಲಿ ಒಬ್ಬರು ಮೂಲಭೂತ ಸೇವೆಗಳಿಗೆ ಲಂಚ ಕೊಡಲೇಬೇಕಾದ ಪರಿಸ್ಥಿತಿಯಿದೆ.

ಪ್ರಮುಖಾಂಶಗಳು:

  • ಅತಿ ಹೆಚ್ಚು ಭ್ರಷ್ಟಾಚಾರವಿರುವ ರಾಷ್ಟ್ರಗಳು: ಭಾರತದಲ್ಲಿ ಸಮೀಕ್ಷೆಗೆ ಒಳಪಡಿಸಲಾದ ಗುಂಪುಗಳ ಪೈಕಿ ಶೇ 69% ರಷ್ಟು ಜನರು ಲಂಚ ನೀಡಿರುವುದಾಗಿ ಹೇಳಿದ್ದಾರೆ. ನಂತರದ ಸ್ಥಾನದಲ್ಲಿ ವಿಯೆಟ್ನಾಂ (ಶೇ 65%), ಥಾಯ್ಲೆಂಡ್ (ಶೇ 41%) ಮತ್ತು ಪಾಕಿಸ್ತಾನ (ಶೇ 40%). ಚೀನಾದಲ್ಲಿ ಶೇ 26% ರಷ್ಟು ಅತಿ ಕಡಿಮೆ ವರದಿಯಾಗಿದೆ.
  • ಅತಿ ಕಡಿಮೆ ಭ್ರಷ್ಟಾಚಾರವಿರುವ ರಾಷ್ಟ್ರಗಳು: ಜಪಾನ್ (ಶೇ 0.2%), ದಕ್ಷಿಣ ಕೊರಿಯಾ

ಮತ್ತು ಆಸ್ಟ್ರೇಲಿಯಾ (ಶೇ 3%) ಮತ್ತು ತೈವಾನ್ ಶೇ 6%.

  • ಭಾರತಕ್ಕೆ ಸಂಬಂಧಿಸಿದಂತೆ: ಭಾರತದಲ್ಲಿ ಪ್ರತಿ 10 ಜನರಲ್ಲಿ 7 ಜನರು ಸಾರ್ವಜನಿಕ ಸೇವೆಯನ್ನು ಪಡೆದುಕೊಳ್ಳುವಾಗ ಲಂಚ ನೀಡುತ್ತಿರುವುದಾಗಿ ಹೇಳಿದ್ದಾರೆ.
  • ಶೇ 46-60% ಜನರು ಸಾರ್ವಜನಿಕ ಸೇವೆಗಳಾದ ಸರ್ಕಾರಿ ಶಾಲೆ, ಆಸ್ಪತ್ರೆ, ಇತರೆ ಅನುಮತಿ ಪಡೆಯುವ ವೇಳೆ ಲಂಚವನ್ನು ನೀಡುತ್ತಿದ್ದಾರೆ.
  • ಸಾಂಸ್ಥಿಕವಾಗಿ: ಪೊಲೀಸ್ ಇಲಾಖೆ ಅತ್ಯಂತ ಭ್ರಷ್ಟಾಚಾರ ಹೊಂದಿರುವ ಇಲಾಖೆ ಎನ್ನಲಾಗಿದೆ. ಐದು ಜನರ ಪೈಕಿ ಇಬ್ಬರು ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ವರದಿ ನೀಡಿದ್ದಾರೆ.

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್:

ಇದೊಂದು ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾಗಿದ್ದು, ಜರ್ಮನಿಯ ಬರ್ಲಿನ್ ನಲ್ಲಿದೆ. ಪ್ರತಿ ವರ್ಷ ಈ ಸಂಸ್ಥೆ ಗ್ಲೋಬಲ್ ಕರ್ಪಶನ್ ಬರೋಮೀಟರ್ ಹಾಗೂ ಕರ್ಪಶನ್ ಪರ್ಸೆಪಶನ್ ಇಂಡೆಕ್ಸ್ ಹೊರತರುತ್ತಿದೆ.

ಭಾರತ ಮತ್ತು ವಿಶ್ವಸಂಸ್ಥೆ ಮಹಿಳಾ ಸಬಲೀಕರಣ ನಡುವಿನ ಒಪ್ಪಂದಕ್ಕೆ ಕೇಂದ್ರ ಸಂಪುಟ ಒಪ್ಪಿಗೆ

ಭಾರತ ಮತ್ತು ವಿಶ್ವ ಸಂಸ್ಥೆ ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣ (UN-Women) ನಡುವಿನ ಒಪ್ಪಂದವನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಒಪ್ಪಂದ ಅನ್ವಯ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯ ಹಾಗೂ ಯುಎನ್-ವುಮೆನ್ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲು ಪರಸ್ಪರ ಜಂಟಿಯಾಗಿ ಕಾರ್ಯನಿರ್ವಹಿಸಲಿವೆ.

ಪ್ರಮುಖಾಂಶಗಳು:

  • ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಲಿಂಗ ಸಮಾನತೆ ಕಾಪಾಡಲು ಅಗತ್ಯವಿರುವ ತಾಂತ್ರಿಕ ಬೆಂಬಲವನ್ನು ಪಂಚಾಯತ್ ರಾಜ್ ಸಚಿವಾಲಯಕ್ಕೆ ನೀಡುವ ಉದ್ದೇಶವನ್ನು ಒಪ್ಪಂದ ಹೊಂದಿದೆ.
  • ಲಿಂಗ ಪ್ರತಿಕ್ರಿಯಾಶೀಲ ಆಡಳಿತವನ್ನು ಉತ್ತೇಜಿಸಲು ನಿಯಮ ಹಾಗೂ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಟಾನಕ್ಕೆ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯ ಹಾಗೂ ಯುಎನ್-ವುಮೆನ್ ಕೈಜೋಡಿಸಲಿವೆ.
  • MoPR ಮತ್ತು ಯುಎನ್ ವುಮೆನ್ ಜಂಟಿಯಾಗಿ ಗುರುತಿಸಲಾಗಿರುವ ನಿರ್ದಿಷ್ಟ ಚಟುವಟಿಕೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಿ ಫಲಿತಾಂಶಗಳು ಸಾಧಿಸಲು ಒಪ್ಪಂದ ಅನುಕೂಲ ಮಾಡಲಿದೆ.
  • ಒಪ್ಪಂದದಡಿ ಗುರುತಿಸಲಾಗಿರುವ ಚಟುವಟಿಕೆಗಳನ್ನು ಆರು ರಾಜ್ಯಗಳಲ್ಲಿ ಜಿಲ್ಲಾ ಹಾಗೂ ಜಿಲ್ಲಾ ಮಟ್ಟಕ್ಕಿಂತ ಕೆಳಹಂತಗಳಲ್ಲಿ ಅನುಷ್ಟಾನಗೊಳಿಸಲಾಗುವುದು. ಈ ಆರು ರಾಜ್ಯಗಳೆಂದರೆ ಒಡಿಶಾ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಣ, ರಾಜಸ್ತಾನ ಮತ್ತು ಮಧ್ಯ ಪ್ರದೇಶ.

One Thought to “ಪ್ರಚಲಿತ ವಿದ್ಯಮಾನಗಳು-ಮಾರ್ಚ್,9,2017”

  1. Shivanand

    ಸರ್ ಇನ್ನೂ ಬೇಗ ಪ್ರಚಲಿತ ವಿದ್ಯಮಾನಗಳ ಕ್ವಿಜ್ ಹಾಕಿದ್ರೆ ಇನ್ನೂ ಚೆನ್ನಾಗಿರುತ್ತೆ ಸರ್ ಪ್ಲೀಜ್

Leave a Comment

This site uses Akismet to reduce spam. Learn how your comment data is processed.