ಗಡಿ ಭದ್ರತೆ: ವರದಿ ಸಲ್ಲಿಸಿದ ಮಧುಕರ್ ಗುಪ್ತಾ ಸಮಿತಿಯಿಂದ ವರದಿ ಸಲ್ಲಿಕೆ

ಗಡಿ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚಿಸಿದ್ದ ಮಧುಕರ್ ಗುಪ್ತಾ ಸಮಿತಿ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿಯಲ್ಲಿ ಭದ್ರತೆಯನ್ನು ಬಲಗೊಳಿಸಲು ಅಗತ್ಯವಿರುವ ಕ್ರಮಗಳನ್ನು ಶಿಫಾರಸ್ಸು ಮಾಡಲು ಈ ಸಮಿತಿಯನ್ನು ರಚಿಸಲಾಗಿತ್ತು.

ಪ್ರಮುಖಾಂಶಗಳು:

  • ಗಡಿ ಭದ್ರತೆ, ಸೇನಾ ಪಡೆಗಳ ಮೌಲ್ಯಮಾಪನ, ಮೂಲಭೂತ ಸೌಕರ್ಯ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ವಿಷಯಗಳ ಮೇಲೆ ವಿಸ್ತಾರವಾದ ಶಿಫಾರಸ್ಸುಗಳನ್ನು ಸಮಿತಿ ನೀಡಿದೆ.
  • ಸಮಿತಿಯ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.

ಹಿನ್ನಲೆ:

ಮಾಜಿ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತಾ ಅವರ ನೇತೃತ್ವದ ಸಮಿತಿಯನ್ನು ಕೇಂದ್ರ ಸರ್ಕಾರ ಏಪ್ರಿಲ್ 2016 ರಲ್ಲಿ ರಚಿಸಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿಯಲ್ಲಿರುವ ನ್ಯೂನ್ಯತೆಗಳನ್ನು ಗುರುತಿಸುವುದು ಹಾಗೂ ಗಡಿ ರಕ್ಷಣೆ ಬಲಪಡಿಸಲು ಅಗತ್ಯ ಕ್ರಮಗಳನ್ನು ಶಿಫಾರಸ್ಸು ಮಾಡಲು ಸಮಿತಿಗೆ ಸೂಚಿಸಲಾಗಿತ್ತು. ಪಠಾಣ್ ಕೋಟ್ ಸೇನಾ ನೆಲೆ ಮೇಲೆ ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಸಂಘಟನೆ ದಾಳಿ ನಡೆಸಿದ ನಂತರ ಸಮಿತಿಯನ್ನು ರಚಿಸಲಾಗಿದೆ.

ಜೀವನ ಗುಣಮಟ್ಟ: ಭಾರತ ನಗರಗಳ  ಪೈಕಿ ಹೈದ್ರಾಬಾದ್ ಗೆ ಮೊದಲ ಸ್ಥಾನ

ಮರ್ಸರ್ ಕ್ವಾಲಿಟಿ ಆಫ್ ಲೀವಿಂಗ್ ಇಂಡೆಕ್ಸ್ ‘(Mercer Quality of Living Index)”-2017 ರಲ್ಲಿ ಜೀವನ ಗುಣಮಟ್ಟ ವಿಷಯದಲ್ಲಿ ಹೈದ್ರಾಬಾದ್ ಭಾರತದ ಅತ್ಯುತ್ತಮ ನಗರವಾಗಿ ಹೊರಹೊಮ್ಮಿದೆ. ಜಾಗತಲಿ ಮಟ್ಟದಲ್ಲಿ ಆಸ್ಟ್ರೀಯಾದ ವಿಯೆನ್ನಾ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಸತತವಾಗಿ ನಾಲ್ಕು ವರ್ಷ ವಿಯೆನ್ನಾ ಈ ಗೌರವಕ್ಕೆ ಪಾತ್ರವಾಗಿದೆ.

ಪ್ರಮುಖಾಂಶಗಳು:

  • ಪ್ರಸ್ತಕ ಸಾಲಿನ ಸೂಚ್ಯಂಕದಲ್ಲಿ ಯುರೋಪ್ ನ ಎಂಟು ನಗರಗಳು ಟಾಪ್ ಹತ್ತು ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿವೆ. ಅವುಗಳೆಂದರೆ ವಿಯೆನ್ನಾ(1), ಜೂರಿಚ್ (2), ಮುನಿಚ್ (4), ಡಸ್ಸೆಲ್ ಡೊರ್ಫ್ (6), ಫ್ರಾನ್ಕಫರ್ಟ್ (7), ಜಿನೆವಾ (8), ಕೊಪೆನ್ ಹೆಗ್ (9) ಮತ್ತು ಬೇಸೆಲ್ (10).
  • ಅಕ್ ಲ್ಯಾಂಡ್ ಮತ್ತು ವಾಂಕೊವರ್ ಟಾಪ್ ಹತ್ತು ನಗರಗಳ  ಪೈಕಿ ಸ್ಥಾನ ಪಡೆದಿರುವ ಯುರೋಪೇತರ ನಗರಗಳು.
  • ಏಷ್ಯಾ ಖಂಡದಲ್ಲಿ ಸಿಂಗಾಪುರ (25) ಅತಿ ಹೆಚ್ಚು ಶ್ರೇಯಾಂಕ ಪಡೆದಿರುವ ನಗರ.
  • ನಗರ ಮೂಲಸೌಕರ್ಯ ಶ್ರೇಯಾಂಕದಲ್ಲಿ ಸಿಂಗಪುರ ಮೊದಲ ಸ್ಥಾನದಲ್ಲಿದೆ. ಫ್ರಾನ್ಕಫರ್ಟ್ ಮತ್ತು ಮುನಿಚ್ ಜಂಟಿಯಾಗಿ ಎರಡನೇ ಸ್ಥಾನವನ್ನು ಪಡೆದುಕೊಂಡಿವೆ.
  • ನಗರ ಮೂಲ ಸೌಕರ್ಯ ವಿಭಾಗದಲ್ಲಿ ಮುಂಬೈ (141) ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರು 177ನೇ ಸ್ಥಾನವನ್ನು ಪಡೆಯುವ ಮೂಲಕ ಕಡೆಯ ಸ್ಥಾನದಲ್ಲಿದೆ.

ಹಿನ್ನಲೆ:

ಮರ್ಸರ್ ಒಂದು ಜಾಗತಿಕ ಮಾನವ ಸಂಪನ್ಮೂಲ ಸಲಹಾ ಸಂಸ್ಥೆಯಾಗಿದ್ದು, ಜಗತ್ತಿನಾದ್ಯಂತ 230 ನಗರಗಳಲ್ಲಿ ಸಮೀಕ್ಷೆಯನ್ನು ನಡೆಸಿ ಸೂಚ್ಯಂಕವನ್ನು ಹೊರತರುತ್ತಿದೆ.

ಶತ್ರು ಆಸ್ತಿ (ತಿದ್ದುಪಡಿ ಮತ್ತು ಪರಿಷ್ಕರಣೆ) ಮಸೂದೆ-2016ಗೆ ಸಂಸತ್ತು ಅಂಗೀಕಾರ

ಶತ್ರು ಆಸ್ತಿ ಮಸೂದೆ (Enemy Property Bill) 2016ಗೆ ಸಂಸತ್ತಿನಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ. ಈ ಮಸೂದೆಯು ಶತ್ರು ಆಸ್ತಿ ಕಾಯಿದೆ, 1968ಕ್ಕೆ ತಿದ್ದುಪಡಿ ತರಲಿದೆ. ಅಲ್ಲದೇ ರಾಷ್ಟ್ರಪತಿಯವರು ಐದು ಬಾರಿ ಹೊರಡಿಸಿದ್ದ ಸುಗ್ರೀವಾಜ್ಞೆ ಸಹ ತೆರವಾಗಲಿದೆ.

ಹಿನ್ನಲೆ:

ಲೋಕಸಭೆಯಲ್ಲಿ ಈಗಾಗಲೇ ಅನುಮೋದನೆ ನೀಡಲಾಗಿತ್ತು. ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ರಾಜ್ಯ ಸಭೆ ಕೆಲವು ಶಿಫಾರಸ್ಸುಗಳನ್ನು ಮಾಡಿತ್ತು. ಈ ತಿದ್ದುಪಡಿಗಳನ್ನು ಲೋಕಸಭೆಯಲ್ಲಿ ಅಳವಡಿಸಿಕೊಂಡು ಮಸೂದೆಯನ್ನು ಅಂಗೀಕರಿಸಲಾಗಿದೆ.

ಮಸೂದೆಯ ಪ್ರಮುಖಾಂಶಗಳು:

  • ಶತ್ರು ಆಸ್ತಿ ಬಗ್ಗೆ ವ್ಯಾಖ್ಯಾನ: ಮಸೂದೆಯಲ್ಲಿ ಶತ್ರು ಆಸ್ತಿ ಎಂದರೆ ಏನು ಎಂದು ವಿವರಿಸಲಾಗಿದೆ. ಶತ್ರುಗಳ ಪರವಾಗಿ ಯಾವುದೇ ಆಸ್ತಿಯನ್ನು ಸಂಬಂಧಿಕರು ಅಥವಾ ಸಂಸ್ಥೆ ನೋಡಿಕೊಳ್ಳುತ್ತಿದ್ದರೆ ಅದನ್ನು ಶತ್ರು ಆಸ್ತಿ ಎಂದು ಪರಿಗಣಿಸಲಾಗುವುದು. ಶತ್ರು ಎಂದರೆ 1962 ಭಾರತ-ಪಾಕ್ ಯುದ್ದದ ನಂತರ ಭಾರತವನ್ನು ಬಿಟ್ಟು ಪಾಕಿಸ್ತಾನ ಮತ್ತು ಚೀನಾ ದೇಶದಲ್ಲಿ ನೆಲೆಸಿರುವವರು.
  • ಶತ್ರು ಆಸ್ತಿಯ ಮೇಲಿನ ಹಕ್ಕು: ಮಸೂದೆಯ ಪ್ರಕಾರ ಶತ್ರುಗಳ ಸಂಬಂಧಿಕರು ಅಥವಾ ಅವರ ಪರವಾಗಿ ಯಾರು ನೋಡಿಕೊಳ್ಳುತ್ತಿರುತ್ತಾರೋ ಅವರಿಗೆ ಇನ್ನು ಮುಂದೆ ಆಸ್ತಿಯ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಈ ಆಸ್ತಿಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಒಂದು ಸಂಸ್ಥೆಯನ್ನು ಸ್ಥಾಪಿಸಲಾಗುವುದು.

Leave a Comment

This site uses Akismet to reduce spam. Learn how your comment data is processed.