ನೀಲಿ ಕ್ರಾಂತಿ ಸಾಧಿಸಲು ಕೇಂದ್ರ ಸರ್ಕಾರದ “ಮಿಷನ್ ಫಿಂಗರ್ಲಿಂಗ್” ಜಾರಿ
ದೇಶದಲ್ಲಿ ಮೀನುಗಾರಿಕೆ ವಲಯದ ಸಮಗ್ರ ಅಭಿವೃದ್ದಿ ಮತ್ತು ನಿರ್ವಹಣೆಗಾಗಿ ಕೇಂದ್ರ ಕೃಷಿ ಸಚಿವಾಲಯ “ಮಿಷನ್ ಫಿಂಗರ್ಲಿಂಗ್ (Mission Fingerling)” ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಇದಕ್ಕಾಗಿ 52000 ಲಕ್ಷ ಹಣವನ್ನು ಮೀಸಲಿಡಲಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ 2014-15ನೇ ಸಾಲಿನಲ್ಲಿ 10.79 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟಿರುವ ಮೀನು ಉತ್ಪಾದನೆಯನ್ನು 2020-21ನೇ ಅವಧಿಗೆ 15 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟು ಹೆಚ್ಚಿಸುವುದಾಗಿದೆ.
ಪ್ರಮುಖಾಂಶಗಳು:
- ಮೀನು ಉತ್ಪಾದನೆಗೆ ಹೇರಳ ಅವಕಾಶವಿರುವ 20 ರಾಜ್ಯಗಳನ್ನು ಕೇಂದ್ರ ಸರ್ಕಾರ ಈ ಯೋಜನೆಯಡಿ ಗುರುತಿಸಿದ್ದು, ಮೀನು ಮರಿಗಳ ಉತ್ಪಾದನೆ ಹಾಗೂ ಮೀನು ಉತ್ಪಾದನೆ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸಲಾಗುವುದು.
- ಮೀನು ಮರಿಗಳು, ಶ್ರಿಂಪ್ ಮತ್ತು ಕ್ರಾಬ್ ಗಳ ಉತ್ಪಾದನೆಗೆ ಹೊಂಡಗಳ ನಿರ್ಮಾಣಗಳನ್ನು ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು.
- ಇದರಿಂದ ಪ್ರತಿ ವರ್ಷ 20 ಲಕ್ಷ ಟನ್ ಮೀನು ಉತ್ಪಾದನೆ ಹಾಗೂ ಸುಮಾರು 4 ಮಿಲಿಯನ್ ಕುಟುಂಬಗಳಿಗೆ ಅನುಕೂಲವಾಗಲಿದೆ.
ನೀಲಿ ಕ್ರಾಂತಿ:
ದೇಶದಲ್ಲಿ ಲಭ್ಯವಿರುವ ಅಪಾರ ಮೀನುಗಾರಿಕೆ ಸಂಪನ್ಮೂಲವನ್ನು ಗುರುತಿಸಿ ಸಮಗ್ರವಾಗಿ ಬಳಸಿಕೊಳ್ಳುವ ಸಲುವಾಗಿ ನೀಲಿ ಕ್ರಾಂತಿಯನ್ನು ಆರಂಭಿಸಲಾಗಿದೆ. ಜೊತೆಗೆ ಮೀನುಗಾರಿಕೆ ಕ್ಷೇತ್ರವನ್ನು ಸುಸ್ಥಿರವಾಗಿ ಅಭಿವೃದ್ದಿಪಡಿಸುವುದು ನೀಲಿ ಕ್ರಾಂತ್ರಿಯ ಗುರಿ.
ಬ್ರಹ್ಮೋಸ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ
‘ಬ್ರಹ್ಮೋಸ್ ಸೂಪರ್ ಸಾನಿಕ್’ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಒಡಿಶಾ ಕಡಲತೀರದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ‘ಬ್ರಹ್ಮೋಸ್ ಸೂಪರ್ ಸಾನಿಕ್’ ಕ್ಷಿಪಣಿಯ ಸುಧಾರಿತ ಭಾಗ ಇದಾಗಿದ್ದು, ಸಿಡಿತಲೆಗಳನ್ನು ಸಾಗಿಸುವ ಕ್ಷಿಪಣಿ ದೂರವನ್ನು 290 ಕಿಲೋ ಮೀಟರ್ನಿಂದ 450 ಕಿಲೋ ಮೀಟರ್ಗೆ ಹೆಚ್ಚಿಸಲಾಗಿದೆ.
ಬ್ರಹ್ಮೋಸ್ ಕ್ಷಿಪಣಿ:
- ಬ್ರಹ್ಮೋಸ್ ಕ್ಷಿಪಣಿಯನ್ನು ಬ್ರಹ್ಮೋಸ್ ಏರೋಸ್ಪೇಸ್, ರಷ್ಯಾ ಮತ್ತು ಭಾರತದ ಜಂಟಿ ಸಂಸ್ಥೆ ಅಭಿವೃದ್ದಿಪಡಿಸಿದೆ.
- ಭಾರತದ ಬ್ರಹ್ಮಪುತ್ರ ಹಾಗೂ ರಷ್ಯಾದ ಮಾಸ್ಕ್ವ ನದಿಯ ಹೆಸರನ್ನು ಈ ಕ್ಷಿಪಣಿಗೆ ಇಡಲಾಗಿದೆ.
- ಬ್ರಹ್ಮೋಸ್ ಕ್ಷಿಪಣಿ ಮ್ಯಾಕ್-2 ಗರಿಷ್ಠ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
- ಸುಮಾರು 300 ಕೆ.ಜಿ ತೂಕದ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.
- ಈ ಹಿಂದೆ 290 ಕಿ.ಮೀ ದೂರ ಚಲಿಸುವ ಸಾಮರ್ಥ್ಯವನ್ನು ಹೊಂದಿತ್ತು. 2016ರಲ್ಲಿ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಗೆ (ಎಂಟಿಸಿಆರ್) ಸೇರ್ಪಡೆಗೊಂಡ ನಂತರ ಭಾರತ ಬ್ರಹ್ಮೋಸ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿ ಕ್ರಮಿಸುವ ದೂರವನ್ನು 450 ಕಿ.ಮೀಗೆ ಹೆಚ್ಚಿಸಿ ಪರೀಕ್ಷೆ ನಡೆಸಿದೆ.
ಕೇರಳದಲ್ಲಿ ದೇಶದ ಅತಿದೊಡ್ಡ ತೇಲುವ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆ
ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್ ಲಿಮಿಟೆಡ್ (NTPCL) ದೇಶದ ಅತಿದೊಡ್ಡ ತೇಲುವ ಸೌರ ವಿದ್ಯುತ್ ಘಟಕವನ್ನು ಕೇರಳದ ಕಾಯಂಕುಲಂನಲ್ಲಿ ಸ್ಥಾಪಿಸಿದೆ. 100 ಕಿಲೋ ವ್ಯಾಟ್ ಪೀಕ್ (Kwp) ಸಾಮರ್ಥ್ಯದ ಈ ಸೌರ ವಿದ್ಯುತ್ ಘಟಕವನ್ನು ಮೇಕ್ ಇನ್ ಇಂಡಿಯಾ ಅಭಿಯಾನದಡಿ ಸ್ವದೇಶಿ ತಂತ್ರಜ್ಞಾನದೊಂದಿಗೆ ಅಭಿವೃದ್ದಿಪಡಿಸಲಾಗಿದೆ.
ಪ್ರಮುಖಾಂಶಗಳು:
- NTPCಯ ಸಂಶೋಧನೆ ಮತ್ತು ಅಭಿವೃದ್ದಿ ವಿಭಾಗದ ಅಂಗವಾದ NETRA (NTPC Energy Technology Reliance Alliance) ಹಾಗೂ ಚೆನ್ನೈ ಮೂಲದ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಎಂಜನಿಯರಿಂಗ್ & ಟೆಕ್ನಾಲಜಿ (CIPET)ಈ ಸೌರವಿದ್ಯುತ್ ಘಟಕವನ್ನು ಅಭಿವೃದ್ದಿಪಡಿಸಿವೆ.
- ಚೆನ್ನೈ ಮೂಲದ “ಸ್ವೆಲೆಕ್ಟ್ ಎನರ್ಜಿ ಸಿಸ್ಟಮ್ಸ್ ಲಿಮಿಟೆಡ್” ಈ ಘಟಕವನ್ನು CIPET & NETRA ಸಂಸ್ಥೆಗಳ ಸಹಯೋಗದೊಂದಿಗೆ ಕೇವಲ 22 ದಿನಗಳಲ್ಲಿ ಅನುಷ್ಟಾನಗೊಳಿಸಿದೆ.
- ತೇಲುವ ಸೌರ ವಿದ್ಯುತ್ ಘಟಕಗಳು ಭೂಮಿಯ ಮೇಲೆ ಸ್ಥಾಪಿಸುವ ಸಾಂಪ್ರದಾಯಿಕ ಸೌರ ವಿದ್ಯುತ್ ಘಟಕಗಳಿಗೆ ಉದಯೋನ್ಮುಖ ಪರ್ಯಾಯ ವ್ಯವಸ್ಥೆಯಾಗಿ ಜನಪ್ರಿಯಗೊಳ್ಳುತ್ತಿವೆ. ಈ ಘಟಕಗಳನ್ನು ನೀರಿನ ಮೇಲೆ ಸ್ಥಾಪಿಸುವ ಕಾರಣ ಭೂಮಿಯ ಮೇಲೆ ಅವಲಂಭಗೊಳ್ಳುವ ಪ್ರಮೇಯವಿಲ್ಲ.
- ಇದಲ್ಲದೆ, ನೀರಿನ ಮೇಲೆ ಸ್ಥಾಪಿಸುವುದರಿಂದ ನೀರಿನ ಆವಿ ತಗ್ಗಲಿದೆ ಹಾಗೂ ಸೌರ ಫಲಕಗಳು ದೂಳಿನಿಂದ ಸ್ವಚ್ಚವಾಗಿಯೇ ಇರುವ ಕಾರಣ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೆಚ್ಚು. ಅಳವಡಿಸುವುದು ಸಹ ಸುಲಭ.
NTPC ಬಗ್ಗೆ:
- ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್ ಲಿಮಿಟೆಡ್ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, ಇಂಧನ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದೆ. ಇದು ದೇಶದ ಅತಿದೊಡ್ಡ ವಿದ್ಯುತ್ ಉತ್ಪಾದಕ ಸಂಸ್ಥೆಯಾಗಿದ್ದು, ದೇಶದ ಒಟ್ಟಾರೆ ವಿದ್ಯುತ್ ಉತ್ಪಾದನೆಯಲ್ಲಿ ಶೇ 25% ರಷ್ಟನ್ನು NTPC ಉತ್ಪಾದಿಸುತ್ತಿದೆ.
- NTPC ಕೇಂದ್ರ ಕಚೇರಿ ನವದೆಹಲಿಯಲ್ಲಿದ್ದು, 1975ರಲ್ಲಿ ಸ್ಥಾಪಿಸಲಾಗಿದೆ.