ಭಾರತ-ಬ್ರೆಜಿಲ್ ಸಾಮಾಜಿಕ ಭದ್ರತೆ ಒಪ್ಪಂದಕ್ಕೆ ಅನುಮೋದನೆ
ಭಾರತ ಮತ್ತು ಬ್ರೆಜಿಲ್ ನಡುವಿನ ಸಾಮಾಜಿಕ ಭದ್ರತೆ ಒಪ್ಪಂದಕ್ಕೆ ಉಭಯ ದೇಶಗಳು ಅನುಮೋದನೆ ನೀಡಿವೆ. 2018ರ ಪ್ರಾರಂಭದಲ್ಲಿ ಈ ಒಪ್ಪಂದ ಜಾರಿಗೆ ಬರಲಿದೆ. ಬ್ರಿಕ್ಸ್ ರಾಷ್ಟ್ರವೊಂದರ ಜೊತೆ ಭಾರತ ಇಂತಹ ಒಪ್ಪಂದಕ್ಕೆ ಸಹಿ ಹಾಕುತ್ತಿರುವುದು ಇದೇ ಮೊದಲು. ಈ ಒಪ್ಪಂದ ಗೋವಾದಲ್ಲಿ ನಡೆದ 8ನೇ ಬ್ರಿಕ್ಸ್ ಶೃಂಗಸಭೆಯ ಫಲವೆಂದು ಬಣ್ಣಿಸಲಾಗಿದೆ.
ಒಪ್ಪಂದದ ಪ್ರಮುಖಾಂಶಗಳು:
- ತಮ್ಮ ದೇಶಗಳಿಂದ ಬೇರ್ಪಟ್ಟು ಎರಡು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕೊಡುಗೆಯಿಂದ ವಿನಾಯಿತಿ ನೀಡಲಾಗಿದೆ. ತಮ್ಮ ಸ್ವಂತ ದೇಶದಲ್ಲಿ ಸಾಮಾಜಿಕ ಭದ್ರತೆಗೆ ಕೊಡುಗೆ ನೀಡುವವರೆಗೆ ಮಾತ್ರ ಈ ವಿನಾಯಿತಿ ಜಾರಿಯಲ್ಲಿರುತ್ತದೆ.
- ಉಭಯ ದೇಶಗಳ ಪ್ರಜೆಗಳಿಗೆ ಸಮಾನ ಹಕ್ಕು ಮತ್ತು ನಿರ್ಬಂಧಗಳನ್ನು ವಿಧಿಸಲಾಗಿದೆ.
ಹಿನ್ನಲೆ:
ಭಾರತ ಇಲ್ಲಿಯವರೆಗೆ ಒಟ್ಟು 18 ರಾಷ್ಟ್ರಗಳೊಂದಿಗೆ ಸಾಮಾಜಿಕ ಭದ್ರತಾ ಒಪ್ಪಂದಕ್ಕೆ ಸಹಿ ಹಾಕಿದೆ. ಈ ರಾಷ್ಟ್ರಗಳೆಂದರೆ ಆಸ್ಟ್ರೇಲಿಯಾ, ಬೆಲ್ಜಿಯಂ, ಆಸ್ಟ್ರೀಯಾ, ಕೆನಡಾ, ಡೆನ್ಮಾರ್ಕ್, ಫಿನ್ಲ್ಯಾಂಡ್, ಝೆಜ್ ರಿಪಬ್ಲಿಕ್, ಫ್ರಾನ್ಸ್, ಜರ್ಮನಿ, ಜಪಾನ್, ಲುಕ್ಸಂಬರ್ಗ್, ಹಂಗೇರಿ, ನೆದರ್ ಲ್ಯಾಂಡ್, ಪೋರ್ಚುಗಲ್, ಸ್ವೀಡನ್, ನಾರ್ವೆ, ಸ್ವಿಟ್ಜರ್ಲ್ಯಾಂಡ್ ಮತ್ತು ದಕ್ಷಿಣ ಕೊರಿಯ.
ವಿಶ್ವಸಂಸ್ಥೆಗೆ ಭಾರತ ನೀಡುವ ದೇಣಿಗೆಯಲ್ಲಿ ಶೇ 55% ಹೆಚ್ಚಳ
ವಿಶ್ವಸಂಸ್ಥೆಯ ನಿಯಮಿತ ಹಾಗೂ ಶಾಂತಿ ಪಾಲನೆ ಬಜೆಟ್ ಗೆ ಭಾರತ ನೀಡುವ ದೇಣಿಗೆಯಲ್ಲಿ ಭಾರಿ ಹೆಚ್ಚಳವಾಗಿದೆ. 2015-16ನೇ ಸಾಲಿನಲ್ಲಿ ಭಾರತ ವಿಶ್ವಸಂಸ್ಥೆಗೆ ರೂ 256 ಕೋಟಿ ದೇಣಿಗೆ ನೀಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 55% ಹೆಚ್ಚಳವಾಗಿದೆ. 2014-15 ರಲ್ಲಿ ಭಾರತ 157 ಕೋಟಿಯನ್ನು ನೀಡಿತ್ತು. ಈ ಮಾಹಿತಿಯನ್ನು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರು ಲೋಕಸಭೆಗೆ ತಿಳಿಸಿದ್ದಾರೆ. ಇದೇ ಅವಧಿಯಲ್ಲಿ ರೂ 22 ಕೋಟಿ ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಗಳಿಗೆ ಭಾರತ ವೈಯುಕ್ತಿಕವಾಗಿ ದೇಣಿಗೆಯನ್ನು ನೀಡಿದೆ.
ವಿಶ್ವಸಂಸ್ಥೆಗೆ ದೇಣಿಗೆ ಹೇಗೆ ನೀಡಲಾಗುತ್ತದೆ?
- ವಿಶ್ವಸಂಸ್ಥೆಯ ನಿಯಮಿತ ಹಾಗೂ ಶಾಂತಿ ಪಾಲನ ಕಾರ್ಯಾಚರಣೆಗಳಿಗೆ ಸದಸ್ಯ ರಾಷ್ಟ್ರಗಳು ಕಡ್ಡಾಯವಾಗಿ ನಿಗದಿತ ದೇಣಿಗೆಯನ್ನು ನೀಡಬೇಕು.
- ಎಷ್ಟು ಮೊತ್ತವನ್ನು ನೀಡಬೇಕು ಎಂಬದನ್ನು ಆ ರಾಷ್ಟ್ರದ ಸಾಮರ್ಥ್ಯವನ್ನು ಅನುಸರಿಸಿ ನಿಗದಿಪಡಿಸಲಾಗುತ್ತದೆ.
- ರಾಷ್ಟ್ರದ ಒಟ್ಟಾರೆ ಆದಾಯವನ್ನು ಜಾಗತಿಕ ಮಟ್ಟದ ಆದಾಯಕ್ಕೆ ಹೋಲಿಸಿ ದೇಶದ ಸಾಮರ್ಥ್ಯವನ್ನು ಅಳೆಯಲಾಗುವುದು.
ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿ ಮನ್ಹರ್ ವಾಲ್ಜಿಬಾಯ್ ಝಲ ನೇಮಕ
ಗುಜರಾತಿನ ಮಾಜಿ ಬಿಜೆಪಿ ಶಾಸಕ ಮನ್ಹರ್ ವಾಲ್ಜಿಬಾಯ್ ಝಲ ಅವರು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇವರ ಜೊತೆಗೆ ಮಹಾರಾಷ್ಟ್ರದ ದಿಲೀಪ್ ಕಲ್ಲು ಹಥಿವೆದ್ ಹಾಗೂ ಉತ್ತರ ಪ್ರದೇಶದ ಮಂಜು ದಿಲೆರ್ ಅವರು ಆಯೋಗದ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ?
- ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗವನ್ನು 1994ರಲ್ಲಿ ಸ್ಥಾಪಿಸಲಾಗಿದೆ. ಸಫಾಯಿ ಕರ್ಮಚಾರಿಗಳ(ಮಲ ಹೊರುವವರು, ಚರಂಡಿ ಸ್ವಚ್ಚಗೊಳಿಸುವವರು) ಕುಂದು ಕೊರತೆಗಳ ನಿವಾರಣೆ ಮಾಡುವ ಜವಾಬ್ದಾರಿಯನ್ನು ಆಯೋಗ ಹೊಂದಿದೆ.
- ಇದೊಂದು ಸಂವಿಧಾನಿಕ ಸಂಸ್ಥೆಯಾಗಿದ್ದು, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಕಾಯಿದೆ-1993ರಡಿ ಸ್ಥಾಪನೆಗೊಂಡಿದೆ. ಸಫಾಯಿ ಕರ್ಮಚಾರಿಗಳ ಹಿತಾಸಕ್ತಿ ಕಾಪಾಡುವುದು ಇದರ ಧ್ಯೇಯ.
- ಆಯೋಗವು ನಾಲ್ಕು ಸದಸ್ಯರು ಹಾಗೂ ಒಬ್ಬ ಅಧ್ಯಕ್ಷರನ್ನು ಒಳಗೊಂಡಿದೆ.