ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರದಿಂದ ಕರಡು ಕಾರ್ಮಿಕ ನೀತಿ
ಸ್ವ ಉದ್ಯೋಗಿಗಳು, ಕೃಷಿ ಕಾರ್ಮಿಕರು ಸೇರಿದಂತೆ ದೇಶವ್ಯಾಪ್ತಿ ಇರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಸಲುವಾಗಿ ಕೇಂದ್ರ ಕಾರ್ಮಿಕ ಸಚಿವಾಲಯ ಕರಡು ಕಾರ್ಮಿಕ ನೀತಿಯನ್ನು ಜಾರಿಗೆ ತರಲು ಉದ್ದೇಶಿಸಿದೆ. ದೇಶದ ಸುಮಾರು 45 ಕೋಟಿ ಕಾರ್ಮಿಕರಿಗೆ ಇದರಿಂದ ಅನುಕೂಲವಾಗಲಿದೆ ಎನ್ನಲಾಗುತ್ತಿದೆ.
ಪ್ರಮುಖಾಂಶಗಳು:
- ಸಂಘಟಿತ ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರಿಗೂ ಈ ನೀತಿ ಅನ್ವಯವಾಗಲಿದೆ.
- ಆ ಮೂಲಕ ಇದೆ ಮೊದಲ ಬಾರಿಗೆ ಕೃಷಿ ಕಾರ್ಮಿಕರು ಹಾಗೂ ಸ್ವಯಂ ಉದ್ಯೋಗಿಗಳನ್ನು ಸಾಮಾಜಿಕ ಭದ್ರತೆಗೆ ಒಳಪಡಿಸಲಾಗುತ್ತಿದೆ. ಅಲ್ಲದೇ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಮಿಕನು ಸಹ ಸಾಮಾಜಿಕ ಭದ್ರತೆ ಅನುಕೂಲಗಳಿಗೆ ವಂತಿಗೆ ನೀಡಬೇಕು.
- ಎಲ್ಲಾ ತರಹದ ಕೈಗಾರಿಕೆಗಳು, ಗಣಿಗಾರಿಕೆ, ಚಾರಿಟಬಲ್ ಸಂಸ್ಥೆಗಳು, ಪೂರ್ಣ ಕಾಲಿಕ, ಅರೆ ಕಾಲಿಕವಾಗಿ ಮನೆಗಳಲ್ಲಿ ಕೆಲಸವನ್ನು ನಿರ್ವಹಿಸುವವರು ಇದರ ವ್ಯಾಪ್ತಿಗೆ ಬರಲಿದ್ದಾರೆ.
- ಯಾವುದೇ ಕೈಗಾರಿಕೆಗಳು ತಮ್ಮ ನೌಕರರಿಗೆ ಸಾಮಾಜಿಕ ಭದ್ರತೆ ಯೋಜನೆಗಳನ್ನು ಅನುಷ್ಟಾನಗೊಳಿಸಲು ವಿಫಲವಾದರೆ, ಪರಿಹಾರ ನೀಡಲು ಬದ್ದರಿರತಕ್ಕದ್ದು.
- ಪ್ರಧಾನ ಮಂತ್ರಿ ರವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಸಾಮಾಜಿಕ ಭದ್ರತೆ ಮಂಡಳಿಯನ್ನು (NSSC) ಸ್ಥಾಪಿಸಲು ನೀತಿಯಡಿ ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ಯೋಜನೆಗಳನ್ನು ಸುಲಭವಾಗಿ ಅನುಷ್ಟಾನಕ್ಕೆ ತರಲು ಸಹಾಯವಾಗಲಿದೆ.
- ಕೇಂದ್ರ ಹಣಕಾಸು ಸಚಿವರು, ಕಾರ್ಮಿಕ ಸಚಿವರು, ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಸಚಿವರು NSSC ಯ ಸದಸ್ಯರಾಗಿರಲಿದ್ದಾರೆ.
ರಾಜ್ಯ ಮತ್ತು ಕೇಂದ್ರಾಡಳಿತ ಜಿಎಸ್ಟಿ ಮಸೂದೆಗೆ ಒಪ್ಪಿಗೆ
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಜಿಎಸ್ಟಿ ಯನ್ನು ಜಾರಿಗೆ ತರಲು ರಾಜ್ಯ ಮತ್ತು ಕೇಂದ್ರಾಡಳಿತ ಜಿಎಸ್ಟಿ ಮಸೂದೆಗಳಿಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಸಭೆಯಲ್ಲಿ ಅನುಮೋದಿಸಲಾಯಿತು. ಇದು ಜಿಎಸ್ಟಿ ಮಂಡಳಿಯ 12ನೇ ಸಭೆಯಾಗಿದೆ. 2 ಪ್ರಮುಖ ವಿಷಯಗಳಾದ ಕೇಂದ್ರ ಜಿಎಸ್ಟಿ (ಸಿ-ಜಿಎಸ್ಟಿ), ಇಂಟಿಗ್ರೇಟೆಡ್ ಜಿಎಸ್ಟಿ (ಐ-ಜಿಎಸ್ಟಿ) ಹಾಗೂ ರಾಜ್ಯಗಳಿಗೆ ನಷ್ಟ ಪರಿಹಾರ ಕರಡು ಮಸೂದೆಗೆ ಮಂಡಳಿ ಈಗಾಗಲೇ ಅನುಮೋದನೆ ನೀಡಿದೆ. ಮಸೂದೆಗೆ ಅನುಮೋದನೆ ದೊರೆತಿರುವುದರಿಂದ ಜಿಎಸ್ಟಿ ಯನ್ನು ಪ್ರಾಯೋಗಿಕವಾಗ ಕೇಂದ್ರ ಮತ್ತು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗುವುದು.
ಪ್ರಮುಖಾಂಶಗಳು:
- ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಯನ್ನು ಶೇ.5, 12, 18 ಮತ್ತು 28 ಸ್ಲಾಬ್ ನಲ್ಲಿ ವಿಧಿಸಲು ಮಂಡಳಿಯಲ್ಲಿ ನಿರ್ಧರಿಸಲಾಗಿದೆ.
- ಕಪ್ಪುಹಣಕ್ಕೂ ಕಡಿವಾಣ: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದ ಕಪ್ಪುಹಣ ಹರಿವು ಕಂಡುಬಂದಿರುವುದರಿಂದ ಇದನ್ನೂ ಜಿಎಸ್ಟಿ ಅಡಿಯಲ್ಲಿ ತರಲು ನಿರ್ಧರಿಸಲಾಗಿದೆ. ಇದರಿಂದ ಕಪ್ಪುಹಣ ನಿಯಂತ್ರಣ ಸಾಧ್ಯವಾಗಲಿದೆ ಎಂದು ಕೌನ್ಸಿಲ್ ಅಭಿಪ್ರಾಯಪಟ್ಟಿದೆ.
- ಸಿ–ಜಿಎಸ್ಟಿ: ಇದರ ಪ್ರಕಾರ ಕೇಂದ್ರ ಸರ್ಕಾರಕ್ಕೆ ಸರಕು ಮತ್ತು ಸೇವೆಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವಿರಲಿದೆ. ಇದರಲ್ಲಿ ಅಬಕಾರಿ ಮತ್ತು ಸೇವಾ ತೆರಿಗೆ ಜಿಎಸ್ಟಿಯಲ್ಲೇ ಅಂತರ್ಗತಗೊಳ್ಳಲಿವೆ. ಐ-ಜಿಎಸ್ಟಿ ಅಂತಾರಾಜ್ಯ ವಹಿವಾಟಿನ ಮೇಲೆ ವಿಧಿಸುವ ತೆರಿಗೆಯಾಗಿದೆ. ಮಾರ್ಚ್ 9ರಂದು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ಮಸೂದೆ ಮಂಡನೆ ಮಾಡಲಾಗುತ್ತದೆ.
- ಎಸ್–ಜಿಎಸ್ಟಿ: ಇದು ಸರಕು ಮತ್ತು ಸೇವಾ ತೆರಿಗೆ ವಿಧಿಸಲು ರಾಜ್ಯ ಸರ್ಕಾರಕ್ಕೆ ನೀಡಿರುವ ಅಧಿಕಾರವಾಗಿರುತ್ತದೆ. ಇದರಲ್ಲಿ ರಾಜ್ಯದಿಂದ ವಿಧಿಸಲಾಗಿರುವ ಉಳಿದ ತೆರಿಗೆಗಳನ್ನು ಅಂತರ್ಗತಗೊಳಿಸಲಾಗುತ್ತದೆ. ಇದಕ್ಕೆ ರಾಜ್ಯ ವಿಧಾನಸಭೆಯಲ್ಲಿ ಅನುಮೋದನೆ ಪಡೆಯಬೇಕಿದೆ. ಯುಟಿ-ಜಿಎಸ್ಟಿ ಕೂಡಾ ಲೋಕಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಬೇಕಿದೆ.
ಯಾವ ತೆರಿಗೆಗಳು?
ಕೇಂದ್ರ ಅಬಕಾರಿ ಸುಂಕ, ಕೇಂದ್ರ ಕಂದಾಯ ತೆರಿಗೆ(ಸೇಲ್ಸ್ ಟ್ಯಾಕ್ಸ್), ಸೇವಾ ತೆರಿಗೆ ಮತ್ತು ಕೇಂದ್ರದಿಂದ ಅನ್ವಯವಾಗುವ ಪರೋಕ್ಷ ತೆರಿಗೆಗಳು ಸಿ-ಜಿಎಸ್ಟಿಯಲ್ಲಿ ಅಂತರ್ಗತಗೊಳ್ಳಲಿದೆ. ರಾಜ್ಯದಿಂದ ಅನ್ವಯವಾಗುವ ಕಂದಾಯ ತೆರಿಗೆ, ವ್ಯಾಟ್, ಐಷಾರಾಮಿ ತೆರಿಗೆ ಮತ್ತು ಮನೋರಂಜನಾ ತೆರಿಗೆಗಳು ಎಸ್-ಜಿಎಸ್ಟಿಯಲ್ಲಿ ಅಂತರ್ಗತಗೊಳ್ಳಲಿವೆ.
ಕೃಷಿಕರಿಗೂ ವಿನಾಯಿತಿ
ಕೇಂದ್ರ, ರಾಜ್ಯ ಸರ್ಕಾರಗಳು ಜಿಎಸ್ಟಿ ಅಡಿ ನೋಂದಣಿ ಮಾಡಿಕೊಳ್ಳಲು ಕೃಷಿಕರು, ಸಣ್ಣ ವ್ಯಾಪಾರಿಗಳಿಗೆ ವಿನಾಯಿತಿ ನೀಡಿವೆ. ವಾರ್ಷಿಕ ವಹಿವಾಟು -ಠಿ;20 ಲಕ್ಷ ಮೀರಿದರಷ್ಟೇ ಜಿಎಸ್ಟಿ ಅಡಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಆದಾಗ್ಯೂ ಜಿಎಸ್ಟಿ ವಿನಾಯಿತಿಯಾಗಿ ಈಶಾನ್ಯ ರಾಜ್ಯಗಳಿಗೆ ವಾರ್ಷಿಕ ವಹಿವಾಟಿನ ಮಿತಿ 10 ಲಕ್ಷ ರೂ.ಗಳಿಗೆ ನಿಗದಿಪಡಿಸಲಾಗಿದೆ.
ರೆಸ್ಟೋರೆಂಟ್ಗಳಿಗೆ ಶೇ.5 ತೆರಿಗೆ
ವಾರ್ಷಿಕ 50 ಲಕ್ಷ ರೂ.ವರೆಗೆ ವಹಿವಾಟು ಹೊಂದಿರುವ ಹೋಟೆಲ್, ರೆಸ್ಟೋರೆಂಟ್ ಮತ್ತು ದಾಬಾಗಳಿಗೆ ಶೇ.5 ತೆರಿಗೆ ವಿಧಿಸಲು ಜಿಎಸ್ಟಿ ಕೌನ್ಸಿಲ್ ನಿರ್ಧರಿಸಿದೆ. ಈ ಮೊತ್ತವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮಾನವಾಗಿ ಹಂಚಿಕೊಳ್ಳಲಿವೆ. 50 ಲಕ್ಷ ರೂಪಾಯಿಗಿಂತ ಕಡಿಮೆ ವಹಿವಾಟು ಹೊಂದಿರುವ ಉದ್ಯಮಗಳಿಗೆ ಶೇ.1 ಮತ್ತು ಶೇ.2 ತೆರಿಗೆ ವಿಧಿಸಲಾಗುತ್ತದೆ. ಸೇವೆಗಳಿಗೆ ಮಾತ್ರ ಶೇ.5ರಷ್ಟು ತೆರಿಗೆ ಇದೆ.
ರಾಷ್ಟ್ರೀಯ ಜಲಶಾಸ್ತ್ರ ಯೋಜನೆಗೆ ವಿಶ್ವಬ್ಯಾಂಕಿನಿಂದ $175 ಮಿಲಿಯನ್ ನೆರವು
ಭಾರತದ ಮಹತ್ವಕಾಂಕ್ಷಿ “ರಾಷ್ಟ್ರೀಯ ಜಲಶಾಸ್ತ್ರ ಯೋಜನೆ (National Hydrology Project)”ಗೆ ವಿಶ್ವಬ್ಯಾಂಕ್ $175 ಮಿಲಿಯನ್ ಆರ್ಥಿಕ ನೆರವನ್ನು ನೀಡಲು ಒಪ್ಪಿದೆ. ಪ್ರವಾಹ ಮುನ್ಸೂಚನೆ ಹಾಗೂ ತೀವ್ರವಾಗಿ ಕಾಡುವ ಬರಗಾಲ ಮತ್ತು ಪ್ರವಾಹದ ಭೀತಿಯನ್ನು ಕಡಿಮೆಗೊಳಿಸುವುದು ಯೋಜನೆಯ ಉದ್ದೇಶ. ಈ ನೆರವನ್ನು ಅಂತಾರಾಷ್ಟ್ರೀಯ ಪುನರ್ ನಿರ್ಮಾಣ ಹಾಗೂ ಅಭಿವೃದ್ದಿ ಬ್ಯಾಂಕ್ 23 ವರ್ಷಗಳ ವಾಯಿದೆ ಅವಧಿಗೆ ನೀಡಲಿದೆ. ಇದರಲ್ಲಿ ಮೊದಲ ಆರು ವರ್ಷಗಳ ಅವಧಿಗೆ ಯಾವುದೇ ಬಡ್ಡಿಯನ್ನು ನೀಡಬೇಕಿಲ್ಲ.
ರಾಷ್ಟ್ರೀಯ ಜಲಶಾಸ್ತ್ರ ಯೋಜನೆ:
- ರಾಷ್ಟ್ರೀಯ ಜಲಶಾಸ್ತ್ರ ಯೋಜನೆಯು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ಕೇಂದ್ರ ಸಚಿವ ಸಂಪುಟ 2016ರಲ್ಲಿ ಅನುಮೋದನೆ ನೀಡಿತು. ಆನಂತರ ವಿಶ್ವಬ್ಯಾಂಕ್ ಆಡಳಿತ ಮಂಡಳಿ ಸಹ ಯೋಜನೆಯನ್ನು ಅನುಮೋದಿಸಿತು. ಯೋಜನೆಯ ಒಟ್ಟು ವೆಚ್ಚ ರೂ 3679 ಕೋಟಿ.
- ಈ ಯೋಜನೆಯ ಒಟ್ಟು ಮೊತ್ತದಲ್ಲಿ ರೂ 3640 ಕೋಟಿಯನ್ನು ಯೋಜನೆಯ ಅನುಷ್ಟಾನಕ್ಕೆ ಬಳಸಲಾಗುವುದು. ಉಳಿದ ರೂ 39 ಕೋಟಿಯನ್ನು “ರಾಷ್ಟ್ರೀಯ ಜಲ ಮಾಹಿತಿ ಕೇಂದ್ರ (NWIC)” ಸ್ಥಾಪಿಸಲು ಬಳಸಲಾಗುವುದು. ರಾಷ್ಟ್ರವ್ಯಾಪ್ತಿ ಜಲಸಂಪನ್ಮೂಲ ಮಾಹಿತಿಯನ್ನು ಈ ಕೇಂದ್ರ ಹೊಂದಿರಲಿದೆ.
- ಹೈಡ್ರಾಲಜಿ-I ಹಾಗೂ ಹೈಡ್ರಾಲಜಿ-II ಯೋಜನೆ ಈಗಾಗಲೇ ಯಶಸ್ವಿಯಾಗಿದ್ದು, ಇದೇ ಮಾದರಿಯಲ್ಲಿ ಈ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು.
- ಹೈಡ್ರಾಲಜಿ-I ಹಾಗೂ ಹೈಡ್ರಾಲಜಿ-II ಯೋಜನೆಗಳು ದೊಡ್ಡ ನದಿಗಳಾದ ಕೃಷ್ಣ ಮತ್ತು ಸಟ್ಲೇಜ್-ಬಿಯಾಸ್ ಮಾತ್ರ ಸಂಬಂಧಿಸಿತ್ತು. ಆದರೆ ಹೊಸ ಯೋಜನೆಯನ್ನು ಗಂಗಾ-ಬ್ರಹ್ಮಪುತ್ರ ನದಿ ದಡಗಳ ರಾಜ್ಯಗಳು ಸೇರಿದಂತೆ ದೇಶವ್ಯಾಪ್ತಿ ಅನುಷ್ಟಾನಗೊಳಿಸಲಾಗುವುದು.