ಗಣಿಗಾರಿಕೆ ಮೇಲೆ ನಿಷೇಧ ಹೇರಿದ ವಿಶ್ವದ ಮೊದಲ ರಾಷ್ಟ್ರ “ಎಲ್ ಸಲ್ವಡಾರ್”
ಸೆಂಟ್ರಲ್ ಅಮೆರಿಕದ ಸಣ್ಣ ರಾಷ್ಟ್ರ “ಎಲ್ ಸಲ್ವಡಾರ್” ಗಣಿಗಾರಿಕೆ ಮೇಲೆ ನಿಷೇಧ ಹೇರಿದ ವಿಶ್ವದ ಮೊದಲ ರಾಷ್ಟ್ರವೆಂಬ ಗೌರವಕ್ಕೆ ಪಾತ್ರವಾಗಿದೆ. ಚಿನ್ನ ಸೇರಿದಂತೆ ಇತರೆ ಲೋಹಗಳ ಗಣಿಗಾರಿಕೆ ಮೇಲೆ ನಿಷೇಧ ಹೇರುವ ಕಾನೂನನ್ನು ಸಲ್ವಡಾರ್ ಜಾರಿಗೆ ತಂದಿದೆ. ಸಾಮಾಜಿಕ ಬಿಕ್ಕಟ್ಟು ನಿವಾರಣೆ, ಪರಿಸರ ಸಂರಕ್ಷಣೆ ಹಾಗೂ ನೀರಿನ ಜಲಾಶಯಗಳನ್ನು ರಕ್ಷಿಸುವ ಸಲುವಾಗಿ ಹೊಸ ಕಾನೂನನ್ನು ಜಾರಿಗೆ ತರಲಾಗಿದೆ.
ಪ್ರಮುಖಾಂಶಗಳು:
- ತೆರೆದ ಗುಂಡಿ ಸೇರಿದಂತೆ ಎಲ್ಲಾ ರೀತಿಯ ಗಣಿಗಾರಿಕೆಯ ಮೇಲೆ ಸಂಪೂರ್ಣವಾಗಿ ನಿಷೇಧಿಸುವ ಅವಕಾಶವನ್ನು ಮಸೂದೆಯಡಿ ಕಲ್ಪಿಸಲಾಗಿದೆ.
- ಗಣಿಗಾರಿಕೆಯಲ್ಲಿ ಸೈನೆಡ್ ಹಾಗೂ ಮರ್ಕ್ಯೂರಿ ಬಳಸುವಂತಿಲ್ಲ.
- ಕಲ್ಲು ಗಣಿಗಾರಿಕೆ, ಕಲ್ಲಿದ್ದಲು ಮತ್ತು ಅಲೋಹ ಸಂಪನ್ಮೂಲಗಳಿಗೆ ಹೊಸ ಕಾಯಿದೆ ಅನ್ವಯಿಸುವುದಿಲ್ಲ.
ಹಿನ್ನಲೆ:
ವಿಶ್ವಸಂಸ್ಥೆಯ ಪ್ರಕಾರ ಎಲ್ ಸಲ್ವಡಾರ್ ವಿಶ್ವದ ಅತ್ಯಂತ ಹೆಚ್ಚು ಜನಸಂದಣಿ ಇರುವ ರಾಷ್ಟ್ರ. ಅಮೆರಿಕಾ ಖಂಡದಲ್ಲಿ ಹೈಟಿ ನಂತರ ದುರ್ಬಲ ಪರಿಸರ ವ್ಯವಸ್ಥೆ ಹೊಂದಿರುವ ರಾಷ್ಟ್ರ ಎನಿಸಿದೆ. ಗಣಿಗಾರಿಕೆ ಇಲ್ಲಿನ ದುರ್ಬಲ ಪರಿಸರ ವ್ಯವಸ್ಥೆಗೆ ಪ್ರಮುಖ ಕಾರಣವೆನಿಸಿದೆ.
ಹೊಸ ಯೂರಿಯಾ ನೀತಿ (NUP)-2015ಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ಹೊಸ ಯೂರಿಯಾ ನೀತಿ-2015ರ ಪ್ಯಾರ 5ಕ್ಕೆ ತಿದ್ದುಪಡಿ ತರಲು ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. ಪುನರ್ ನಿರ್ಧರಿಸಲ್ಪಟ್ಟ ಸಾಮರ್ಥ್ಯ ಮೀರಿ ಉತ್ಪಾದಿಸುವುದು ಹಾಗೂ ಹೊಸ ಪ್ಯಾರ 8 ಅನ್ನು ಸೇರ್ಪಡೆಗೊಳಿಸುವುದು ತಿದ್ದುಪಡಿಯ ಉದ್ದೇಶವಾಗಿದೆ. ಆ ಮೂಲಕ ಸ್ಥಳೀಯ ಯೂರಿಯಾ ಘಟಕಗಳನ್ನು ಪ್ರೋತ್ಸಾಹಿಸಿ ಸ್ಥಳೀಯವಾಗಿ ಯೂರಿಯಾ ಉತ್ಪಾದನೆಯನ್ನು ಹೆಚ್ಚಿಸುವುದಾಗಿದೆ.
ಹೊಸ ಯೂರಿಯಾ ನೀತಿ-2015:
ಹೊಸ ಯೂರಿಯಾ ನೀತಿಯನ್ನು ಮೇ 2015ರಲ್ಲಿ ಪ್ರಕಟಗೊಳಿಸಲಾಯಿತು. ಸಮಗ್ರವಾದ ನೂತನ ಯೂರಿಯಾ ನೀತಿ –2015ಕ್ಕೆ ಒಪ್ಪಿಗೆ ನೀಡಿರುವ ಕೇಂದ್ರ ಸಚಿವ ಸಂಪುಟವು, ಮುಂದಿನ ನಾಲ್ಕು ವರ್ಷಗಳಲ್ಲಿ ಸ್ಥಳೀಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ತಯಾರಿಸಲು ಹಾಗೂ ಯೂರಿಯಾ ಘಟಕಗಳಲ್ಲಿನ ವಿದ್ಯುತ್ ಬಳಕೆಯಲ್ಲಿ ದಕ್ಷತೆ ಕಾಪಾಡಿಕೊಳ್ಳುವ ಮೂಲಕ ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡುವುದು ನೀತಿಯ ಗುರಿಯಾಗಿದೆ.
ಭಾರತ ಸದ್ಯಕ್ಕೆ 22 ಲಕ್ಷ ಟನ್ ಯೂರಿಯಾವನ್ನು ದೇಶಿಯವಾಗಿ ತಯಾರಿಸುತ್ತಿದ್ದರೆ, ವಿದೇಶಗಳಿಂದ 8 ಮೆಟ್ರಿಕ್ ಟನ್ ಆಮದು ಮಾಡಿಕೊಳ್ಳುತ್ತಿದೆ. ಹೊಸ ನೀತಿಯಿಂದಾಗಿ ರೈತರಿಗೆ ಸಕಾಲದಲ್ಲಿ ಯೂರಿಯಾ ಪೂರೈಸಬಹುದಾಗಿದೆ.
ಕೊರೊನರಿ ಸ್ಟೆಂಟ್ ದರ ಶೇ 2% ಹೆಚ್ಚಳಗೊಳಿಸಿದ NPPA
ರಾಷ್ಟ್ರೀಯ ಔಷಧ ದರ ನಿಗದಿ ಪ್ರಾಧಿಕಾರವು ಹೃದಯ ಶಸ್ತ್ರ ಚಿಕಿತ್ಸೆಯಲ್ಲಿ ಬಳಸುವ ಕೊರೊನರಿ ಸ್ಟೆಂಟ್ ಗಳ ದರವನ್ನು ಶೇ 2% ರಷ್ಟು ಹೆಚ್ಚಳಗೊಳಿಸಿದೆ. ಒಟ್ಟಾರೆ ಸಗಟು ಸೂಚ್ಯಂಕವನ್ನು ಪರಿಗಣನೆಗೆ ತೆಗೆದುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ಲೋಹದ ಸ್ಟೆಂಟ್‌ಗಳ ಬೆಲೆ ₹7,260 ರಿಂದ ₹7400 ಕ್ಕೆ ಹೆಚ್ಚಳವಾಗಲಿದೆ ಹಾಗೂ ಔಷಧ ರವಾನೆ ಮಾಡಲು ಬಳಸುವ ಸ್ಟೆಂಟ್‌ಗಳ ಬೆಲೆ ₹29,600 ರಿಂದ 30,180ಕ್ಕೆ ಹೆಚ್ಚಳವಾಗಲಿದೆ.
ಕೊರೊನರಿ ಸ್ಟೆಂಟ್ ಎಂದರೇನು?
- ಕೊರೊನರಿ ಸ್ಟೆಂಟ್ ಹೃದಯಕ್ಕೆ ರಕ್ತ ಸರಬರಾಜು ಮಾಡಲು ಅಪಧಮನಿಗಳಲ್ಲಿ ಅಳವಡಿಸಲಾಗುವ ಕೊಳವೆ ಆಕಾರದ ಸಣ್ಣ ಉಪಕರಣವಾಗಿದೆ.
- ಕೊರೊನರಿ ಸ್ಟೆಂಟ್ ಗಳಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ ಲೋಹದ ಸ್ಟೆಂಟ್ ಹಾಗೂ ಔಷಧಿ ರವಾನೆ ಮಾಡುವ ಸ್ಟೆಂಟ್.
ಹಿನ್ನಲೆ:
- ಜುಲೈ 2016 ರಲ್ಲಿರಾಷ್ಟ್ರಮಟ್ಟದಲ್ಲಿ ಅಗತ್ಯವಿರುವ ಔಷಧಗಳ ಪಟ್ಟಿಗೆ (ಎನ್‌ಎಲ್‌ಇಎಂ) ಸೇರ್ಪಡೆಗೊಳಿಸಲಾಯಿತು. ಆ ಮೂಲಕ ದರ ನಿಯಂತ್ರಣದಡಿ ತರಲಾಗಿದೆ. ದರ ನಿಯಂತ್ರಣದಡಿ ತರಲಾದ ಮೊದಲ ವೈದ್ಯಕೀಯ ಉಪಕರಣ ಇದಾಗಿದೆ.
ರಾಷ್ಟ್ರೀಯ ಔಷಧ ದರ ನಿಗದಿ ಪ್ರಾಧಿಕಾರ:
- ರಾಷ್ಟ್ರೀಯ ಔಷಧ ದರ ನಿಗದಿ ಪ್ರಾಧಿಕಾರವು ದೇಶದಲ್ಲಿ ಔಷಧಿ ಉತ್ಪನ್ನಗಳ ದರಗಳನ್ನು ನಿಯಂತ್ರಿಸುವ ಸ್ವಾಯತತೆ ಸಂಸ್ಥೆಯಾಗಿದ್ದು, ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದೆ.
- ಔಷಧ ನೀತಿ, ಔಷಧಿಗಳ ದರ ನಿಗದಿ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಲಹೆ/ಸೂಚನೆ ನೀಡುವುದು ಪ್ರಾಧಿಕಾರದ ಕರ್ತವ್ಯ.
ಭಾರತ ಮತ್ತು NDB ನಡುವೆ $350 ಮಿಲಿಯನ್ ಸಾಲ ಒಪ್ಪಂದಕ್ಕೆ ಸಹಿ
ಮಧ್ಯ ಪ್ರದೇಶದ ಜಿಲ್ಲಾ ರಸ್ತೆಗಳ ಅಭಿವೃದ್ದಿ ಹಾಗೂ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು ನ್ಯೂ ಡೆವೆಲ್ಪಮೆಂಟ್ ಬ್ಯಾಂಕ್ ನೊಂದಿಗೆ ಭಾರತ ಸರ್ಕಾರ ಸಹಿ ಹಾಕುತ್ತಿರುವ ಮೊದಲ ಒಪ್ಪಂದವಾಗಿದೆ. ಮಧ್ಯ ಪ್ರದೇಶ ರಾಜ್ಯದ ಪ್ರಮುಖ ಜಿಲ್ಲಾ ರಸ್ತೆಗಳನ್ನು ಅಭಿವೃದ್ದಿಪಡಿಸುವ ಮೂಲಕ ರಾಜ್ಯದ ಅಂತರ ರಸ್ತೆಗಳನ್ನು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳೊಂದಿಗೆ ಸಂಪರ್ಕ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶ.
- ಮಧ್ಯ ಪ್ರದೇಶದ ಸುಮಾರು 1500 ಕಿ.ಮೀ ಉದ್ದದ ರಸ್ತೆಯನ್ನು ಉನ್ನತೀಕರಿಸುವುದು ಹಾಗೂ ಅಭಿವೃದ್ದಿಪಡಿಸುವುದು ಮತ್ತು ಸರ್ವ ಋತು ಗುಣಮಟ್ಟದ ರಸ್ತೆಗಳನ್ನಾಗಿ ಮಾರ್ಪಡಿಸುವುದು ಒಪ್ಪಂದದಡಿ ಒಳಗೊಂಡಿದೆ.
ನ್ಯೂ ಡೆವಲಪ್ಮೆಂಟ್ ಬ್ಯಾಂಕ್:
- ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಸೇರಿ ನ್ಯೂ ಡೆವೆಲ್ಪಮೆಂಟ್ ಬ್ಯಾಂಕ್ ಅನ್ನು ಸ್ಥಾಪಿಸಿವೆ.
- ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಿ ಸುಸ್ಥಿರ ಅಭಿವೃದ್ದಿ ಕಾಯ್ದುಕೊಳ್ಳಲು ಸಾಲ ಸೌಕರ್ಯ ಕಲ್ಪಿಸುವುದು ಈ ಬ್ಯಾಂಕಿನ ಕರ್ತವ್ಯ.
- 2015ರಲ್ಲಿ ಬ್ಯಾಂಕ್ ಅನ್ನು ಸ್ಥಾಪಿಸಲಾಗಿದ್ದು, ಇದರ ಕೇಂದ್ರ ಕಚೇರಿ ಚೀನಾದ ಶಾಂಘೈನಲ್ಲಿದೆ.
- ಭಾರತದ ಖ್ಯಾತ ಬ್ಯಾಂಕಿಗ ಕೆ.ವಿ,ಕಾಮತ್ ಅವರು ಈ ಬ್ಯಾಂಕಿನ ಮೊದಲ ಅಧ್ಯಕ್ಷರು.
ಶಿವಕುಮಾರ ಸ್ವಾಮೀಜಿಯವರಿಗೆ ಭಗವಾನ್ ಮಹಾವೀರ ಪ್ರಶಸ್ತಿ
ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿರವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಇದೇ ಮೊದಲ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ ನೀಡಲಾಗುತ್ತಿದೆ.
- ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಮಲ್ಲಿಕಾ ಘಂಟಿ ಅವರನ್ನು 2016ನೇ ಸಾಲಿನ ಅಕ್ಕಮಹಾದೇವಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಾ. ಮಲ್ಲಿಕಾ ಘಂಟಿ ಅವರು ಮಹಿಳಾ ಪರವಾದ ಹೋರಾಟಗಳಿಗೆ ಹೆಸರುವಾಸಿಯಾಗಿದ್ದಾರೆ.
- ಈ ಎರಡೂ ಪ್ರಶಸ್ತಿಗಳನ್ನು ಮೊದಲ ಬಾರಿಗೆ ನೀಡಲಾಗುತ್ತಿದ್ದು, ಎರಡೂ ಪ್ರಶಸ್ತಿಗಳು ತಲಾ ₹ 3 ಲಕ್ಷ ನಗದು ಹಾಗೂ ಸ್ಮರಣ ಫಲಕಗಳನ್ನು ಒಳಗೊಂಡಿದೆ.
- ಶಿವಕುಮಾರಸ್ವಾಮೀಜಿ
ಶಿವಕುಮಾರ ಸ್ವಾಮೀಜಿ 110 ವರ್ಷಗಳನ್ನು ಪೂರೈಸಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸಿದ್ದಗಂಗೆ ಪೀಠದ ನೇತೃತ್ವ ವಹಿಸಿಕೊಂಡು ತ್ರಿವಿಧ ದಾಸೋಹದಿಂದ ಜಾತಿ, ಮತ, ಪಂಥಗಳ ಬೇಧವಿಲ್ಲದೇ ಅಕ್ಷರ, ವಸತಿ ಮತ್ತು ಅನ್ನದಾಸೋಹದ ಕೇಂದ್ರವಾಗಿ ಸಿದ್ದಗಂಗಾ ಮಠವನ್ನು ಬೆಳೆಸಿದರು. - ಗ್ರಾಮೀಣ ಮಕ್ಕಳಿಗೆ ವಿಶೇಷ ಆದ್ಯತೆ ನೀಡಿ ಅವರ ಬದುಕನ್ನು ರೂಪಿಸುವಲ್ಲಿ ಶ್ರೀಗಳು ಮಾಡಿದ ಕೆಲಸ ಅಸಮಾನ್ಯವಾದದ್ದು. ಅವರ ಸೇವೆಯನ್ನು ಪರಿಗಣಿಸಿ ಮಹಾವೀರ ಶಾಂತಿ ಪ್ರಶಸ್ತಿಗೆ ಡಾ. ಶಿವಕುಮಾರ ಸ್ವಾಮೀಜಿಯವರನ್ನು ಆಯ್ಕೆ ಮಾಡಲಾಗಿದೆ.
- ಈ ಪ್ರಶಸ್ತಿಯನ್ನು ಏಪ್ರಿಲ್ 9ರಂದು ನಡೆಯಲಿರುವ ಮಹಾವೀರ ಜಯಂತಿ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು.
April month complete add maadi plz sir