ಭಾರತ-ಬಾಂಗ್ಲದೇಶ ನಡುವೆ 22 ಒಪ್ಪಂದಗಳಿಗೆ ಸಹಿ
ಭಾರತ ಮತ್ತು ಬಾಂಗ್ಲದೇಶ ನಡುವೆ 22 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲದೇಶದ ಪ್ರಧಾನಿ ಶೇಖ್ ಹಸೀನಾ ಅವರ ನಡುವೆ ನವದೆಹಲಿಯಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಅಲ್ಲದೆ, ಮೂಲಸೌಕರ್ಯ ಯೋಜನೆಗಳಿಗಾಗಿ ಬಾಂಗ್ಲಾದೇಶಕ್ಕೆ ಭಾರತ ₹ 30,600 ಕೋಟಿ ಸಾಲ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ರಕ್ಷಣಾ ಉಪಕರಣಗಳ ಖರೀದಿಗಾಗಿ ₹ 3,200 ಕೋಟಿ ಸಾಲ ನೀಡುವುದಾಗಿಯೂ ಭಾರತ ಹೇಳಿದೆ.
ಪ್ರಮುಖ ಒಪ್ಪಂದಗಳು:
- ರಕ್ಷಣಾ ಕ್ಷೇತ್ರದಲ್ಲಿ ಸಹಕಾರಕ್ಕೆ ಒಪ್ಪಂದ
- ದ್ವಿಪಕ್ಷೀಯ ನ್ಯಾಯಾಂಗ ವಲಯ ಸಹಕಾರಕ್ಕೆ ಒಪ್ಪಂದ
- ಮಾಸ್ ಮೀಡಿಯಾ ಕ್ಷೇತ್ರದಲ್ಲಿ ಸಹಕಾರಕ್ಕೆ ಒಪ್ಪಂದ
- ಸೈಬರ್ ಭದ್ರತೆ ಕ್ಷೇತ್ರದಲ್ಲಿ ಒಪ್ಪಂದ
- ಅಣುಶಕ್ತಿಯ ಶಾಂತಿಯುತ ಬಳಕೆಗೆ ಒಪ್ಪಂದ
- ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಒಪ್ಪಂದ
- ರಕ್ಷಣಾ ಕ್ಷೇತ್ರಕ್ಕೆ ರೂ 3,200 ಕೋಟಿ ಸಾಲ
- ಭಾರತ ಮತ್ತು ಬಾಂಗ್ಲದೇಶ ಗಡಿಯಲ್ಲಿ ಗಡಿ ಮಾರುಕಟ್ಟೆಗಳನ್ನು ಸ್ಥಾಪಿಸಲು ಒಪ್ಪಂದ
- ಮೋಟಾರು ವಾಹನ ಪ್ಯಾಸೇಂಜರ್ ಟ್ರಾಫಿಕ್ ನಿಯಂತ್ರಣ ಒಪ್ಪಂದ
- ಬಾಂಗ್ಲದೇಶದಲ್ಲಿ ಅಣು ವಿದ್ಯುತ್ ಸ್ಥಾವರಗಳ ಸ್ಥಾಪನೆಗೆ ಒಪ್ಪಂದ
ಚಂಪಾರಣ್ ಸತ್ಯಾಗ್ರಹಕ್ಕೆ 100 ವರ್ಷ: ವಸ್ತುಪ್ರದರ್ಶನ ಉದ್ಘಾಟಿಸಿದ ಮೋದಿ
ಭಾರತ ಸ್ವಾತಂತ್ರ ಹೋರಾಟದಲ್ಲಿ ಪ್ರಮುಖ ಭಾಗವೆನಿಸಿರುವ ಚಂಪಾರಣ್ ಸತ್ಯಾಗ್ರಹಕ್ಕೆ 100 ವರ್ಷ ಆದ ಕಾರಣ ಪ್ರಧಾನಿ ಮೋದಿ ಅವರು “ಸ್ವಚ್ಚಗ್ರಹ್ – ಬಾಪು ಕೊ ಕಾರ್ಯಾಂಜಲಿ – ಏಕ್ ಅಭಿಯಾನ್, ಏಕ್ ಪ್ರದರ್ಶನಿ” ಹೆಸರಿನ ಪ್ರದರ್ಶನಕ್ಕೆ ನವದೆಹಲಿಯಲ್ಲಿ ಚಾಲನೆ ನೀಡಿದರು. ಪ್ರದರ್ಶನದಲ್ಲಿ ಚಂಪಾರಣ್ ಸತ್ಯಾಗ್ರಹ ಹಾಗೂ ಅದಕ್ಕೆ ಸಂಬಂಧಿಸಿದ ತತ್ವಗಳು, ಜೊತೆಗೆ ಸ್ವಚ್ಚ ಭಾರತ ಅಭಿಯಾನದ ಬಗ್ಗೆಯು ಪ್ರದರ್ಶನಗೊಳ್ಳಲಿದೆ.
ಚಂಪಾರಣ್ ಸತ್ಯಾಗ್ರಹ:
- ಚಂಪಾರಣ್ ಸತ್ಯಾಗ್ರಹ ಮಹಾತ್ಮಗಾಂಧಿ ಅವರು ಕೈಗೊಂಡ ಮೊಟ್ಟಮೊದಲ ಸತ್ಯಾಗ್ರಹ. ಈಗಿನ ಬಿಹಾರ ರಾಜ್ಯದ ತಿರುಹುತ್ ವಿಭಾಗದ ಚಂಪಾರಣ್ ಜಿಲ್ಲೆಯಲ್ಲಿ ಗಾಂಧಿಯವರ ನೇತೃತ್ವದಲ್ಲಿ ಏಪ್ರಿಲ್ 1917ರಲ್ಲಿ ಈ ಸತ್ಯಾಗ್ರಹ ನಡೆಯಿತು.
- ನೀಲಿಯನ್ನು ಬೆಳೆಯುತ್ತಿದ್ದ ರೈತರ ಕಷ್ಟದ ನಿವಾರಣೆಗಾಗಿ ಈ ಸತ್ಯಾಗ್ರಹವನ್ನು ಕೈಗೊಳ್ಳಲಾಯಿತು.
- ಯೂರೋಪಿಯನ್ ತೋಟಗಾರರು ರೈತರಿಗೆ ಬಹಳ ಕಠಿಣವಾದ ನಿಬಂಧನೆಗಳ ಮೇಲೆ ಜಮೀನನ್ನು ಸಾಗುವಳಿಗೆ ಕೊಟ್ಟಿದ್ದರು. ಪ್ರತಿ ರೈತನೂ ತನಗೆ ಇಷ್ಟವಿರಲಿ ಇಲ್ಲದಿರಲಿ, ಪ್ರತಿ ಇಪ್ಪತ್ತು ಕಟ್ಠೆ (ಒಂದು ಎಕರೆ) ಜಮೀನಿನಲ್ಲಿ ಮೂರುಕಟ್ಠೆಯಷ್ಟು ನೆಲದಲ್ಲಾದರೂ ನೀಲಿಯನ್ನು ಬಿತ್ತಿ ಬೆಳೆದು ಅದನ್ನು ತೋಟಗಾರ ನಿರ್ಣಯಿಸಿದ ಬೆಲೆಗೆ ಅವನ ಕಾರ್ಖಾನೆಗೆ ಮಾರಬೇಕಾಗಿತ್ತು. ಹಾಗೆ ಮಾಡದೆ ತಪ್ಪಿದರೆ ಅವನಿಗೆ ದಂಡ ವಿಧಿಸಲಾಗುತ್ತಿತ್ತು. ಈ ಪದ್ಧತಿಗೆ ತೀನ್ ಕಠಿಯಾ ಎಂದು ಹೆಸರಿತ್ತು.
- ಗಯಾ ಕಾಂಗ್ರೆಸ್ ನಲ್ಲಿ ರಾಜಕುಮಾರ ಶುಕ್ಲನೆಂಬ ಚಂಪಾರಣ್ಯದ ಒಬ್ಬ ರೈತ ಗಾಂಧೀಜಿಯವರನ್ನು ಸಂಧಿಸಿ, ನೀಲಿ ಬೆಳೆಯುವ ರೈತರ ಕಷ್ಟಗಳನ್ನು ವಿವರಿಸಿ, ಗಾಂಧೀಜಿ ಚಂಪಾರಣ್ಯಕ್ಕೆ ಬಂದು ನೋಡಿ ಪರಿಹಾರ ಮಾರ್ಗವನ್ನು ಸೂಚಿಸಬೇಕೆಂದು ಬೇಡಿದ. ಗಾಂಧಿಯವರು ಮುಜಫರ್ ಪುರಕ್ಕೆ 1917ರ ಏಪ್ರಿಲ್ 10 ರಂದು ಹೋದರು. ಅಲ್ಲಿಯ ಪರಿಸ್ಥಿತಿಯನ್ನೂ ರೈತರ ಸಮಸ್ಯೆಯನ್ನೂ ಅವರು ಅಧ್ಯಯನ ಮಾಡಿದಾಗ, ಇದು ಸತ್ಯಾಗ್ರಹ ಮಾಡಲು ಅರ್ಹವಾದ ಸಮಸ್ಯೆ ಎಂಬುದು ಅವರಿಗೆ ಮನವರಿಕೆಯಾಯಿತು. ರೈತರ ಸ್ಥಿತಿಗತಿಗಳನ್ನು ವಿಚಾರಿಸಿ ತಿಳಿದುಕೊಳ್ಳಲು ಗಾಂಧೀಯವರು ಉದ್ದೇಶಿಸಿದರು.
- ಆದರೆ ಮಹಾತ್ಮಗಾಂಧಿ ಅವರ ವಿರುದ್ದ ಕಾನೂನು ಉಲ್ಲಂಘನೆ ಆರೋಪ ಹೊರೆಸಿ, ಚಂಪಾರಣ್ ಬಿಡಲು ಅಲ್ಲಿನ ಕಮೀಷನರ್ ಆದೇಶಿಸಿದರು. ಆದರೆ ಗಾಂಧೀಜಿ ಅವರು ಚಂಪಾರಣ್ ತೊರೆಯಲು ನಿರಾಕರಿಸಿದರು.
- ಏಪ್ರಿಲ್ 18, 1917 ರಲ್ಲಿ ಗಾಂಧೀಜಿ ಅವರು ಮೋತಿಹರಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾದರು. ಸುಮಾರು 2000ಕ್ಕೂ ಹೆಚ್ಚು ಜನ ಅವರ ಬೆಂಬಲಕ್ಕೆ ಬಂದಿದ್ದರು. ತೀರ್ಪು ರೈತರ ಪರವಾಗಿ ಬಂದಿತು.
- ಅಂದಿನ ಬಿಹಾರದ ಲೆಫ್ಟಿನೆಂಟ್ ಗವರ್ನರ್ ಅವರು ಗಾಂದೀಜಿ ಅವರ ಮೇಲೆ ಹೂಡಿದ್ದ ಕೇಸನ್ನು ಹಿಂಪಡೆಯುವಂತೆ ಆದೇಶಿಸಿದರು. ಅಲ್ಲದೇ ರೈತರ ಸಂಕಷ್ಟ ಬಗ್ಗೆ ಆಲಿಸಲು ಗಾಂಧೀಜಿ ಅವರಿಗೆ ಮುಕ್ತ ಸ್ವಾತಂತ್ರ ನೀಡಲಾಯಿತು.
ಮೋಟಾರು ವಾಹನ (ತಿದ್ದುಪಡಿ) ಮಸೂದೆ 2016: ಪ್ರಮುಖಾಂಶಗಳು
ರಸ್ತೆ ಸುರಕ್ಷತೆ, ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕುವ ಸಲುವಾಗಿ ಜಾರಿಗೆ ಬರಲಿರುವ ಮೋಟಾರು ವಾಹನ (ತಿದ್ದುಪಡಿ) ಮಸೂದೆ 2016ಕ್ಕೆ ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕಾರ ದೊರೆತಿದೆ. ಈ ಮಸೂದೆಯು ಮೋಟಾರು ವಾಹನ ಕಾಯಿದೆ-1988ಕ್ಕೆ ತಿದ್ದುಪಡಿ ತರಲಿದೆ.
ಮಸೂದೆಯ ಪ್ರಮುಖಾಂಶಗಳು:
- ರಾಷ್ಟ್ರೀಯ ಸಾರಿಗೆ ನೀತಿ: ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳೊಂದಿಗೆ ಸಮಲೋಚಿಸಿ ರಾಷ್ಟ್ರೀಯ ಸಾರಿಗೆ ನೀತಿಯನ್ನು ರಚಿಸಬೇಕು.
- ವಾಹನಗಳನ್ನು ಹಿಂಪಡೆಯುವುದು: ಯಾವುದೇ ವಾಹನ ದೋಷಪೂರಿತವಾಗಿದ್ದು, ಪರಿಸರ, ಡ್ರೈವರ್ ಅಥವಾ ದಾರಿ ಹೋಕರಿಗೆ ಅದರಿಂದ ತೊಂದರೆ ಇರುವುದಾಗಿ ತಿಳಿದುಬಂದರೆ ಕೇಂದ್ರ ಸರ್ಕಾರ ಅಂತಹ ವಾಹನಗಳನ್ನು ಹಿಂಪಡೆಯಬಹುದು.
- ಮೋಟಾರು ವಾಹನ ಅಪಘಾತ ನಿಧಿ: ಈ ಮಸೂದೆಯಡಿ ಕೇಂದ್ರ ಸರ್ಕಾರ ಕಡ್ಡಾಯವಾಗಿ ಮೋಟಾರು ವಾಹನ ಅಪಘಾತ ನಿಧಿಯನ್ನು ಸ್ಥಾಪಿಸಬೇಕು. ಆ ಮೂಲಕ ಕಡ್ಡಾಯ ವಿಮೆ ಸೌಲಭ್ಯವನ್ನು ಪ್ರತಿಯೊಬ್ಬ ಚಾಲಕರಿಗೆ ಕಲ್ಪಿಸಬೇಕು.
- ರಸ್ತೆ ಅಪಘಾತಗೊಳಗಾದವರಿಗೆ ಚಿಕಿತ್ಸೆ: ಕೇಂದ್ರ ಸರ್ಕಾರ ರಸ್ತೆ ಅಪಘಾತಗೊಳಗಾದವರಿಗೆ ನಗದು ರಹಿತ ಚಿಕಿತ್ಸೆ ನೀಡಲು ಯೋಜನೆಯನ್ನು ಕಲ್ಪಿಸಲಿದೆ. ಅಪಘಾತ ನಡೆದ “ಒಂದು ಗಂಟೆ ಅವಧಿಯೊಳಗೆ (Golden Hour)” ಉಚಿತ ನಗದು ರಹಿತ ಚಿಕಿತ್ಸೆ ದೊರೆಯಲಿದೆ.
- ಸಾವಿಗೆ ಪರಿಹಾರ: ಹಿಟ್ ಆಂಡ್ ರನ್ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿಗೆ 2 ಲಕ್ಷ ರೂ. ಹಾಗೂ ಗಾಯಗೊಂಡರೆ 50 ಸಾವಿರ ರೂ. ಪರಿಹಾರ ಅಥವಾ ಕೇಂದ್ರ ಸರ್ಕಾರ ನಿಗಧಿಪಡಿಸಿದಷ್ಟು ಪರಿಹಾರ ಸಿಗಲಿದೆ.
- ಉತ್ತಮ ದಯಾಳುವಿಗೆ ರಕ್ಷಣೆ: ಅಪಘಾತಕ್ಕೆ ಒಳಗಾದವರಿಗೆ ತುರ್ತು ವೈದ್ಯಕೀಯ ಅಥವಾ ವೈದ್ಯಕೀಯೇತರ ನೆರವಿಗೆ ಧಾವಿಸುವ ದಯಾಳುಗಳಿಗೆ ಸೂಕ್ತ ರಕ್ಷಣೆ ನೀಡುವ ಅವಕಾಶವನ್ನು ಮಸೂದೆಯಲ್ಲಿ ಕಲ್ಪಿಸಲಾಗಿದೆ.
- ಅಪಘಾತವೆಸಗಿ ಪ್ರಾಣಹಾನಿ ಉಂಟು ಮಾಡಿದರೆ ಅವರ ಪೋಷಕರು ಅಥವಾ ಹೆತ್ತವರಿಗೂ ಮೂರು ವರ್ಷ ಜೈಲು ಶಿಕ್ಷೆಯ ಜತೆಗೆ ಲಕ್ಷ ರೂ.ಗಳಿಗಿಂತ ಹೆಚ್ಚಿನ ದಂಡ ಬೀಳಲಿದೆ.
- ಅಪಘಾತಕ್ಕೊಳಗಾದ ವ್ಯಕ್ತಿ ಮೃತಪಟ್ಟರೆ ಅಂಥವರ ಕುಟುಂಬಕ್ಕೆ ಅಪಘಾತ ಎಸಗಿದವರು 10 ಲಕ್ಷ ರೂ. ಹಾಗೂ ಗಂಭೀರ ಗಾಯಗಳಾದರೆ 5 ಲಕ್ಷ ರೂ. ಪರಿಹಾರ ನೀಡಬೇಕು
- ಸಂತ್ರಸ್ತರಿಗೆ 4 ತಿಂಗಳೊಳಗಾಗಿ ದಂಡ ಪಾವತಿಸುವುದು ಕಡ್ಡಾಯ
- ಮದ್ಯ ಸೇವಿಸಿ ಸಿಕ್ಕಿಬಿದ್ದರೆ ದಂಡದ ಪ್ರಮಾಣ 2ರಿಂದ 10 ಸಾವಿರ ರೂ.ಗೆ ಹೆಚ್ಚಳ