ನೇಪಾಳ-ಚೀನಾ “ಸಾಗರಮಾತ ದೋಸ್ತಿ-2017” ಮಿಲಿಟರಿ ಅಭ್ಯಾಸ

ನೇಪಾಳ ಮತ್ತು ಚೀನಾ ನಡುವಿನ ಪ್ರಪ್ರಥಮ ಮಿಲಿಟರಿ ಸಮರಾಭ್ಯಾಸ “ಸಾಗತಮಾತ ದೋಸ್ತಿ-2017” ಏಪ್ರಿಲ್ 17 ರಿಂದ ಏಪ್ರಿಲ್ 24 ರವರೆಗೆ ನಡೆಯಲಿದೆ. ಹತ್ತು ದಿನಗಳ ಕಾಲ ನಡೆಯಲಿರುವ ಈ ಮಿಲಿಟರಿ ಅಭ್ಯಾಸದಲ್ಲಿ ಭಯೋತ್ಪಾದನೆ ನಿಗ್ರಹ ಹಾಗೂ ವಿಪತ್ತು ನಿರ್ವಹಣೆ ತಾಲೀಮು ನಡೆಸಲಾಗುವುದು. ಅಮೆರಿಕ ಮತ್ತು ಚೀನಾ ಜೊತೆ ನೇಪಾಳ ಈಗಾಗಲೇ ಮಿಲಿಟರಿ ಅಭ್ಯಾಸ ನಡೆಸುತ್ತಿದೆ ಆದರೂ ಇದೇ ಮೊದಲ ಬಾರಿಗೆ ಚೀನಾದೊಂದಿಗೆ ಜಂಟಿ ಮಿಲಿಟರಿ ಸಮರಾಭ್ಯಾಸ ನಡೆಸುತ್ತಿದೆ. ಚೀನಾದ ರಕ್ಷಣಾ ಸಚಿವ ಜನರಲ್ ಚಾಂಗ್ ವಾಂಕನ್ ಅವರು ನೇಪಾಳಕ್ಕೆ ಭೇಟಿ ನೀಡಿದ್ದ ವೇಳೆ ಈ ಸಮರಾಭ್ಯಾಸ ನಡೆಸುವ ಕುರಿತು ಚರ್ಚಿಸಲಾಗಿತ್ತು. ಚೀನಾ ಜೊತೆ ನೇಪಾಳ ಮಿಲಿಟರಿ ಸಮರಾಭ್ಯಾಸ ನಡೆಸುತ್ತಿರುವುದು ಭಾರತ-ನೇಪಾಳ ಶಾಂತಿ ಮತ್ತು ಸ್ನೇಹ ಒಪ್ಪಂದ-1950 ರ ಉಲ್ಲಂಘನೆಯಾಗದೆ ಇದ್ದರು ಸಹ ನೇಪಾಳದೊಂದಿಗೆ ಚೀನಾದ ಸಂಬಂಧ ಭಾರತಕ್ಕೆ ಗಡಿ ಸಮಸ್ಯೆಯನ್ನು ತಂದೊಡ್ಡಲಿದೆ ಎನ್ನಲಾಗಿದೆ.

ಭಾರತ-ನೇಪಾಳ ಶಾಂತಿ ಮತ್ತು ಸ್ನೇಹ ಒಪ್ಪಂದ-1950:

ಭಾರತ-ನೇಪಾಳ ಶಾಂತಿ ಮತ್ತು ಸ್ನೇಹ ಒಪ್ಪಂದ-1950ಕ್ಕೆ ಉಭಯ ದೇಶಗಳ ನಡುವೆ ಕಠ್ಮಂಡುವಿನಲ್ಲಿ ಜುಲೈ 31, 1950 ರಲ್ಲಿ ಸಹಿ ಹಾಕಲಾಯಿತು. ಉಭಯ ದೇಶಗಳ ನಡುವೆ ಸಾರ್ವಜನಿಕರ ಹಾಗೂ ಸರಕುಗಳ ಮುಕ್ತ ಸಂಚಾರ ಮತ್ತು ರಕ್ಷಣಾ ಹಾಗೂ ವಿದೇಶಾಂಗ ವ್ಯವಹಾರವನ್ನು ಸುಗುಮಗೊಳಿಸುವುದು ಒಪ್ಪಂದದ ಉದ್ದೇಶ. ಒಪ್ಪಂದವು ಒಟ್ಟು 10 ಪರಿಚ್ಚೇದಗಳನ್ನು ಒಳಗೊಂಡಿದ್ದು, ಉಭಯ ದೇಶಗಳ ನಡುವೆ ಶಾಶ್ವತ ಶಾಂತಿ ಮತ್ತು ಸ್ನೇಹ ಸಂಬಂಧವನ್ನು ಪ್ರೋತ್ಸಾಹಿಸುವುದಾಗಿದೆ.

ಶನಿಯ ಚಂದ್ರ ಎನ್ಸೆಲಾಡಸ್ ವಾಸಕ್ಕೆ ಯೋಗ್ಯ: ನಾಸಾ

ಶನಿಯ ಆರನೇ ಅತಿದೊಡ್ಡ ಉಪಗ್ರಹ ಎನ್ಸೆಲಾಡಸ್ (Enceladus) ಹಾಗೂ ಗುರು ಗ್ರಹದ ನಾಲ್ಕನೇ ಅತಿ ದೊಡ್ಡ ಉಪಗ್ರಹ ಯುರೋಪ ಜೀವಿಗಳು ವಾಸಿಸಲು ಬೇಕಾದ ಅಂಶಗಳಿಂದ ಕೂಡಿದ್ದು, ವಾಸಕ್ಕೆ ಯೋಗ್ಯವೆಂದು ನಾಸಾ ಹೇಳಿದೆ. ಜೀವನಾಧರಕ್ಕೆ ಅಗತ್ಯವಿರುವ ನೀರು, ಚಯಾಪಚಯಕ್ಕೆ ಶಕ್ತಿ ಮೂಲ, ಕಾರ್ಬನ್, ಹೈಡ್ರೋಜನ್, ನೈಟ್ರೋಜನ್, ಆಮ್ಲಜನಕ, ಸಲ್ಫರ್ ಸೇರಿದಂತೆ ಅಗತ್ಯ ರಾಸಾಯನಿಕ ಪದಾರ್ಥಗಳನ್ನು ಈ ಉಪಗ್ರಹಗಳು ಹೊಂದಿವೆ ಎನ್ನಲಾಗಿದೆ. ಕ್ಯಾಸ್ಸಿನಿ ಹೈಗೆನ್ಸ್ ಮಾನವರಹಿತ ಬಾಹ್ಯಕಾಶ ನೌಕೆ ಮತ್ತು ಹಬಲ್ಸ್ ದೂರದರ್ಶಕ ಬಳಸಿ ಈ ಸಂಶೋಧನೆಯನ್ನು ಮಾಡಲಾಗಿದೆ. ಶನಿ ಗ್ರಹ ಮತ್ತು ಅದರ ಉಂಗುರ ರಚನೆಯನ್ನು ತಿಳಿಯಲು ಕ್ಯಾಸ್ಸಿನಿ ಹೈಗೆನ್ಸ್ ಮಾನವರಹಿತ ಬಾಹ್ಯಕಾಶ ನೌಕೆಯನ್ನು 1997ರಲ್ಲಿ ಹಾರಿಬಿಡಲಾಗಿತ್ತು.

ಪ್ರಮುಖಾಂಶಗಳು:

  • ಗುರು ಗ್ರಹದ ಯುರೋಪ ಉಪಗ್ರಹಗಿಂತ ಶನಿ ಗ್ರಹದ ಎನ್ಸೆಲಾಡಸ್ ಉಪಗ್ರಹ ಜೀವಿಗಳ ಉಗಮಕ್ಕೆ ಹೆಚ್ಚು ಸೂಕ್ತವಾಗಿದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.
  • ಎನ್ಸೆಲಾಡಸ್ ಒಂದು ಚಿಕ್ಕ ಹಿಮಾವೃತವಾಗಿರುವ ಉಪಗ್ರಹವಾಗಿದ್ದು, ಅತಿ ಹೆಚ್ಚು ಹೈಡ್ರೋಜನ್ ಕಣಗಳನ್ನು ಹೊಂದಿದೆ.
  • ಶೇ 98% ರಷ್ಟು ಅನಿಲವು ನೀರು ಹಾಗೂ ಶೇ 1% ರಷ್ಟು ಜಲಜನಕದಿಂದ ಕೂಡಿದ್ದು, ಇಂಗಾಲದ ಡೈ ಆಕ್ಸೈಡ್ , ಮಿಥೇನ್ ಮತ್ತು ಅಮೋನಿಯ ಅಣುಗಳ ಮಿಶ್ರಣಗಳ ಕೂಡಿದೆಯೆಂದು ಹೇಳಲಾಗಿದೆ.

12 ರಾಜ್ಯಗಳಲ್ಲಿ ಮಾದರಿ ನಗದು ರಹಿತ ಟೌನ್ ಷಿಪ್ಗೆ ಚಾಲನೆ 

ದೇಶದ ಹನ್ನೆರಡು ರಾಜ್ಯಗಳಲ್ಲಿ 81 ಮಾದರಿ ನಗದು ರಹಿತ/ಕಡಿಮೆ ನಗದು ಟೌನ್ ಷಿಪ್ ಗಳಿಗೆ ಪ್ರಧಾನಿ ಮೋದಿ ಅವರು ನಾಗಲ್ಯಾಂಡಿನಲ್ಲಿ ಚಾಲನೆ ನೀಡಿದರು. 81 ಟೌನ್ ಷಿಪ್ಗಳ ಪೈಕಿ ಗುಜರಾತಿನಲ್ಲಿ 56 ಹಾಗೂ ದೆಹಲಿ, ಗುಜರಾತ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ಬಿಹಾರ ಸೇರಿದಂತೆ 11 ರಾಜ್ಯಗಳಲ್ಲಿ ಉಳಿದ 25 ಟೌನ್ ಷಿಪ್ ಗಳು ಇರಲಿವೆ. ನಗದು ರಹಿತ/ಕಡಿಮೆ ನಗದು ಟೌನ್ ಷಿಪ್ಗಳ ಮಾದರಿಯನ್ನು ಗುಜರಾತ್ ನರ್ಮದಾ ವ್ಯಾಲಿ ಫರ್ಟಿಲೈಸರ್ ಅಂಡ್ ಕೆಮಿಕಲ್ಸ್ ಲಿಮಿಟೆಡ್ (GNFC) ನೀತಿ ಆಯೋಗದ ನೆರವಿನೊಂದಿಗೆ ಈ ರಾಜ್ಯಗಳಲ್ಲಿ ಅಭಿವೃದ್ದಿಪಡಿಸಿದೆ. ನೋಟು ಅಪಮೌಲ್ಯಗೊಳಿಸಿದ ನಂತರ ಗುಜರಾತಿನ ಭರುಚ್ ನಲ್ಲಿರುವ GNFC ಟೌನ್ ಷಿಪ್ ದೇಶದ ಮೊದಲ 100% ನಗದು ರಹಿತ ಟೌನ್ ಷಿಪ್ ಎನಿಸಿತ್ತು. ಈ 81 ನಗದು ರಹಿತ ಟೌನ್ ಷಿಪ್ ಗಳಿಂದ ಪ್ರತಿದಿನ 2.5 ಲಕ್ಷ ನಗದು ರಹಿತ ವ್ಯವಹಾರ ನಡೆಯಲಿದೆ ಎಂದು ಅಂದಾಜಿಸಲಾಗಿದೆ.

ನಗದು ರಹಿತ ಟೌನ್ ಷಿಪ್:

GNFC ಮಾದರಿಯ ನಗದು ರಹಿತ ಟೌನ್ ಷಿಪ್ ಅನ್ನು “ಪ್ರೈಸ್ ವಾಟರ್ ಕೂಪರ್ಸ್” ಸಂಸ್ಥೆಯ ಸಮೀಕ್ಷೆಯ ಮೇರೆಗೆ ಆಯ್ಕೆ ಮಾಡಲಾಗುತ್ತದೆ. ಈಗ ಆಯ್ಕೆ ಮಾಡಲಾಗಿರುವ 81 ಟೌನ್ ಷಿಪ್ ಗಳು ಸರ್ಕಾರ ಸ್ವಾಮ್ಯದ ಸಂಸ್ಥೆಗಳಾದ  ONGC, NTPC, SAIL, BHEL, NMDC, CRPF, BSF ಹಾಗೂ ಖಾಸಗಿ ಸಂಸ್ಥೆಗಳ ಟೌನ್ ಷಿಪ್ ಗಳಾದ ರಿಲಾಯನ್ಸ್, ಎಸ್ಸಾರ್, ಅದಾನಿಗೆ ಸೇರಿವೆ.

ನಗದು ರಹಿತ ಟೌನ್ ಷಿಪ್ ಎನಿಸಲು ಮಾನದಂಡಗಳು:

  • ಪೇಮೆಂಟ್ ಸ್ವೀಕರಿಸುವ ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕು.
  • ಟೌನ್ ಷಿಪ್ ನಲ್ಲಿ ವಾಸವಿರುವ ಎಲ್ಲಾ ಕುಟುಂಬಗಳಿಗೆ ನಗದು ರಹಿತ ವ್ಯವಹಾರದ ಬಗ್ಗೆ ತರಭೇತಿಯನ್ನು ನೀಡಿರಬೇಕು.
  • ನಿಗಧಿ ಪಡಿಸಿದ ಅವಧಿಯಲ್ಲಿ ಶೇ 80% ವಹಿವಾಟು ಡಿಜಿಟಲ್ ಮೂಲಕ ಆಗಿರಬೇಕು.

Leave a Comment

This site uses Akismet to reduce spam. Learn how your comment data is processed.