ಬ್ರಬೊ (BRABO): ಪ್ರಪ್ರಥಮ ಸ್ವದೇಶಿ ನಿರ್ಮಿತ ಕೈಗಾರಿಕ ರೋಬೋಟ್
ಟಾಟಾ ಮೋಟಾರ್ಸ್ನ ಅಂಗ ಸಂಸ್ಥೆಯಾದ “ಟಿಎಎಲ್ ಮ್ಯನುಫಾಕ್ಚರಿಂಗ್ ಸಲ್ಯೂಶನ್” ಬ್ರಬೊ ಕೈಗಾರಿಕ ರೋಬೋಟ್ ಅನ್ನು ಅಭಿವೃದ್ದಿಪಡಿಸಿದೆ. ಬ್ರಬೊ ಸ್ವದೇಶಿಯವಾಗಿ ವಿನ್ಯಾಸಗೊಳಿಸಿ ಹಾಗೂ ಅಭಿವೃದ್ದಿಪಡಿಸಿರುವ ದೇಶದ ಮೊದಲ ಕೈಗಾರಿಕ ರೋಬೋಟ್ ಆಗಿದೆ. ಸೂಕ್ಷ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗಾಗಿ ಈ ರೋಬೋಟ್ ಅನ್ನು ಅಭಿವೃದ್ದಿಪಡಿಸಲಾಗಿದೆ. ಅಧಿಕ ಶ್ರಮದ ಅಗತ್ಯವಿರುವ, ಅಪಾಯ ಹಾಗೂ ಹೆಚ್ಚು ಸಮಯ ಹಿಡಿಯುವ ಕೆಲಸಗಳನ್ನು ಈ ರೋಬೋಟ್ ಸಲೀಸಾಗಿ ನಿರ್ವಹಿಸಲಿದೆ. ಕಚ್ಚಾ ಪದಾರ್ಥಗಳಿಂದ, ಪ್ಯಾಕೇಜ್ ಮಾಡಿ ಸಿದ್ದ ಉತ್ಪನ್ನಗಳನ್ನು ತಯಾರಿಸುವವರೆಗೆ ರೋಬೋಟ್ ಅನ್ನು ಬಳಸಬಹುದಾಗಿದೆ.
- ಬ್ರಬೊ ಅನ್ನು ಪುಣೆಯ ಟಿಎಎಲ್ ಫ್ಯಾಕ್ಟರಿ ಅಭಿವೃದ್ದಿಪಡಿಸಿದೆ. ರೋಬೋ ಕೈಯಲ್ಲಿ ಬಳಸುವ ಮೋಟಾರ್ ಮತ್ತು ಡ್ರೈವ್ಸ್ ಹೊರತುಪಡಿಸಿ ಮಿಕ್ಕ ಎಲ್ಲಾ ಭಾಗಗಳನ್ನು ಭಾರತದಲ್ಲಿಯೇ ತಯಾರಿಸಲಾಗಿದೆ.
- ಬ್ರಬೊ ರೋಬೋಟ್ ಕಾರ್ಯಾಚರಣೆ ಸುಲಭವಾಗಿದ್ದು, ಸಿಂಗಲ್ ಫೇಸ್ ವಿದ್ಯುತ್ ನಲ್ಲಿ ಕಾರ್ಯನಿರ್ವಹಿಸಲಿದೆ.
- ಕೈಗಾರಿಕ ರೋಬೋಟ್ ಗಳು ಉತ್ಪಾದನೆಯ ವೆಚ್ಚವನ್ನು ತಗ್ಗಿಸಲಿವೆ. ಅಲ್ಲದೆ ಉತ್ಪಾದನೆಯ ಗುಣಮಟ್ಟ ಹಾಗೂ ಉತ್ಪಾದನ ಸಾಮರ್ಥ್ಯ ಸಹ ಹೆಚ್ಚಾಗಲಿದೆ.
“457” ವೀಸಾ ನೀತಿಯನ್ನು ರದ್ದುಪಡಿಸಿದ ಆಸ್ಟ್ರೇಲಿಯಾ
ಆಸ್ಟ್ರೇಲಿಯಾದಲ್ಲಿ ಉದ್ಯೋಗ ಮಾಡಲು ಅವಕಾಶ ಕಲ್ಪಿಸುತ್ತಿದ್ದ ವಿದೇಶಿ ಉದ್ಯೋಗಿಗಳ ‘457 ವೀಸಾ’ ನೀತಿಯನ್ನು ಆಸ್ಟ್ರೇಲಿಯಾ ಸರ್ಕಾರ ರದ್ದುಪಡಿಸಿದೆ. ಈ ವೀಸಾ ನೀತಿಯಡಿ ಉಪಯೋಗಪಡೆಯುತ್ತಿರುವವರ ಸಂಖ್ಯೆ ಅತಿ ಹೆಚ್ಚಿದ್ದು, ಆಸ್ಟ್ರೇಲಿಯಾದಲ್ಲಿ ಉದ್ಬವವಾಗಿರುವ ನಿರುದ್ಯೋಗ ಸಮಸ್ಯೆಯನ್ನು ಸುಧಾರಿಸುವ ಸಲುವಾಗಿ ರದ್ದುಪಡಿಸಲಾಗಿದೆ. ಇದರ ಬದಲಾಗಿ “ಆಸ್ಟ್ರೇಲಿಯಾ ಮೊದಲು” ನೀತಿಯನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.
- ಸುಮಾರು 95,757 ಕೆಲಸಗಾರರು “457 ವೀಸಾ ನೀತಿ”ಯಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಭಾರತೀಯರು ಮೊದಲ ಸ್ಥಾನದಲ್ಲಿದ್ದು, ಯುಕೆ ಮತ್ತು ಚೀನಾ ನಂತರದ ಸ್ಥಾನದಲ್ಲಿವೆ.
- ಆಸ್ಟ್ರೇಲಿಯಾದ ಪ್ರಧಾನಿ ಟರ್ನ್ಬುಲ್ ಅವರು ಭಾರತಕ್ಕೆ ಪ್ರವಾಸ ನೀಡಿದ ವೇಳೆ ಈ ನಿರ್ಧಾರವನ್ನು ಘೋಷಿಸಿದ್ದಾರೆ. ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ ನಿಗ್ರಹ, ಶಿಕ್ಷಣ ಮತ್ತು ಇಂಧನ, ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಉಭಯ ದೇಶಗಳ ನಡುವೆ ಆರು ಒಪ್ಪಂದಗಳಿಗೆ ಸಹಿ ಹಾಕಲಾಯಿತು.
“457 ವೀಸಾ ನೀತಿ”:
457 ವೀಸಾ ನೀತಿಯಡಿ ಆಸ್ಟ್ರೇಲಿಯಾದ ಸಂಸ್ಥೆಗಳು ಕೌಶಲ್ಯ ಉದ್ಯೋಗಕ್ಕೆ ಕೆಲಸಗಾರರ ಕೊರತೆ ಇದ್ದಾಗ ವಿದೇಶಿಯರನ್ನು ನಾಲ್ಕು ವರ್ಷಗಳ ಅವಧಿಗೆ ಈ ವೀಸಾದಡಿ ಕೆಲಸಕ್ಕೆ ನೇಮಿಸಿಕೊಳ್ಳಬಹುದಾಗಿದೆ. 1996 ರಲ್ಲಿ ಅಂದಿನ ಆಸ್ಟ್ರೇಲಿಯಾದ ಪ್ರಧಾನಿ ಜಾನ್ ಹೋವರ್ಡ್ ಅವರ ಅವಧಿಯಲ್ಲಿ ಈ ವೀಸಾ ನೀತಿಯನ್ನು ಜಾರಿಗೆ ತರಲಾಯಿತು. ಈ ವೀಸಾವನ್ನು ಹೊಂದಿರುವವರು ಕುಟುಂಬ ಸದಸ್ಯರೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲಸಬಹುದು.
ಭಾರತದ ಸದ್ಯದ ಉಕ್ಕು ರಫ್ತು ಹಾಗೂ ಆಮದು ಮಾಹಿತಿ
ಕೇಂದ್ರ ಉಕ್ಕು ಸಚಿವಾಲಯದ ಜಾಯಿಂಟ್ ಪ್ಲಾಂಟ್ ಕಮಿಟಿ (Joint Plant Committee) ವರದಿಯ ಪ್ರಕಾರ 2016-17ನೇ ಸಾಲಿನ ಅವಧಿಯಲ್ಲಿ ಭಾರತದ ಉಕ್ಕು ಆಮದು ಪ್ರಮಾಣ ಗಣನೀಯವಾಗಿ ತಗ್ಗಿದೆ. ಈ ಅವಧಿಯಲ್ಲಿ ಭಾರತದ ಒಟ್ಟಾರೆ ಉಕ್ಕು ಆಮದು ಪ್ರಮಾಣ ಶೇ 36% ಅಂದರೆ 7.4 ದಶಲಕ್ಷ ಟನ್ ಗೆ ಇಳಿದಿದೆ. ಇದೆ ಅವಧಿಯಲ್ಲಿ ಉಕ್ಕು ರಫ್ತು ಪ್ರಮಾಣ 8.2 ಮಿಲಿಯನ್ ಟನ್ ಹೆಚ್ಚಳವಾಗಿದ್ದು, ಶೇ 102%ಗೆ ಏರಿಕೆಯಾಗಿದೆ. ಇದೇ ವೇಳೆ ದೇಶದ ಉಕ್ಕು ಉತ್ಪಾದನೆಯು ಸಹ ಗಣನೀಯವಾಗಿ ಹೆಚ್ಚಿದ್ದು, ಈ ಅವಧಿಯಲ್ಲಿ ಕಚ್ಚಾ ಉಕ್ಕು ಉತ್ಪಾದನೆ 97,385 ಮಿಲಿಯನ್ ಟನ್ ಉತ್ಪಾದಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಉಕ್ಕು ಉತ್ಪಾದನೆ ಶೇ 8.5% ಹೆಚ್ಚಳವಾಗಿದೆ.
ಉಕ್ಕು ವಲಯ:
- ಕಚ್ಚಾ ಉಕ್ಕು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. ಚೀನಾ ಮತ್ತು ಜಪಾನ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
- ಮುಂದಿನ ದಿನಗಳಲ್ಲಿ ಉಕ್ಕು ಉತ್ಪಾದನ ಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆಯುವ ಮಹಾದಾಸೆಯನ್ನು ಭಾರತ ಹೊಂದಿದೆ. ಇದಕ್ಕಾಗಿ ರಾಷ್ಟ್ರೀಯ ಉಕ್ಕು ನೀತಿ-2017ರ ಕರಡು ಪ್ರತಿಯನ್ನು ಸಹ ಬಿಡುಗಡೆಗೊಳಿಸಲಾಗಿದೆ. ಈ ನೀತಿಯಡಿ ದೇಶದ ಉಕ್ಕು ಉತ್ಪಾದನ ಸಾಮರ್ಥ್ಯವನ್ನು 2030-31ರ ವೇಳಗೆ 300 ಮಿಲಿಯನ್ ಟನ್ಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.