ತಮಿಳುನಾಡು, ಹಿಮಾಚಲ ಪ್ರದೇಶ ಮತ್ತು ತ್ರಿಪುರಗೆ 2015-16ನೇ ಸಾಲಿನ ಕೃಷಿ ಕರ್ಮನ್ ಪ್ರಶಸ್ತಿ

2015-16ನೇ ಸಾಲಿನ ಕೃಷಿ ಕರ್ಮನ್ ಪ್ರಶಸ್ತಿ ಪ್ರಕಟಗೊಂಡಿದ್ದು, 2015-16ನೇ ಸಾಲಿನಲ್ಲಿ ಅತಿ ಹೆಚ್ಚು ಆಹಾರ ಧಾನ್ಯಗಳ ಉತ್ಪಾದನೆಗಾಗಿ ತಮಿಳುನಾಡು, ಹಿಮಾಚಲ ಪ್ರದೇಶ ಹಾಗೂ ತ್ರಿಪುರ ರಾಜ್ಯಗಳನ್ನು ಕೃಷಿ ಕರ್ಮನ್ ಪ್ರಶಸ್ತಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಆಯ್ಕೆಮಾಡಿದೆ. ಈ ರಾಜ್ಯಗಳಲ್ಲದೆ, ಒಟ್ಟು ಆಹಾರ ಧಾನ್ಯಗಳ ಉತ್ಪಾದನೆಗಾಗಿ ಮೇಘಾಲಯ ರಾಜ್ಯಕ್ಕೆ ಪ್ರಶಂಸನೀಯ ಪ್ರಶಸ್ತಿಯನ್ನು ನೀಡಲಾಗಿದ್ದು, ಪ್ರಶಸ್ತಿಯು ರೂ 1 ಕೋಟಿ ನಗದು ಒಳಗೊಂಡಿದೆ.

  • ತಮಿಳುನಾಡು ರಾಜ್ಯವನ್ನು ದೊಡ್ಡ ಮಟ್ಟ (10 ದಶಲಕ್ಷ ಟನ್ ಗಳ ಉತ್ಪಾದನೆ) ವಿಭಾಗ, ಹಿಮಾಚಲ ಪ್ರದೇಶ ಮಧ್ಯಮ ವರ್ಗ (1 ರಿಂದ 10 ದಶಲಕ್ಷ ಟನ್ ಗಳಷ್ಟು ಉತ್ಪಾದನೆ) ಹಾಗೂ ತ್ರಿಪುರಾವನ್ನು ಸಣ್ಣ ಮಟ್ಟದ ಉತ್ಪಾದನೆ (1 ದಶಲಕ್ಷ ಟನ್ ಗಳಿಗಿಂತ ಕಡಿಮೆ) ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
  • ತಮಿಳುನಾಡಿನಲ್ಲಿ 2015-16ನೇ ಸಾಲಿನಲ್ಲಿ 130 ಲಕ್ಷ ಟನ್ ಆಹಾರ ಧಾನ್ಯಗಳನ್ನು ಉತ್ಪಾದಿಸಲಾಗಿದೆ. ಈ ಪ್ರಮಾಣ ಕಳೆದ ಐದು ವರ್ಷಗಳಲ್ಲೆ ಅತ್ಯಂತ ಹೆಚ್ಚು. ಇನ್ನು ಇಳುವರಿ ವಿಚಾರದಲ್ಲೂ ಸಹ ತಮಿಳುನಾಡು ರಾಷ್ಟ್ರೀಯ ಸರಾಸರಿ ಇಳುವರಿ ಪ್ರಮಾಣಕ್ಕಿಂತ ಮುಂದಿದೆ. ತಮಿಳುನಾಡಿನಲ್ಲಿ ಪ್ರತಿ ಹೆಕ್ಟೇರ್ ಗೆ 3.38 ಟನ್ ಇಳುವರಿ ಇದ್ದರೆ ರಾಷ್ಟ್ರ ಮಟ್ಟದಲ್ಲಿ ಈ ಪ್ರಮಾಣ 2.028 ರಷ್ಟಿದೆ. ವಿನೂತನ, ಪರಿಸರ-ಸ್ನೇಹಿ ಸಮಗ್ರ ಕೀಟ ನಿರ್ವಹಣೆ ಪದ್ದತಿಯನ್ನು ಅಳವಡಿಸಿಕೊಂಡಿರುವುದು ಈ ಸಾಧನೆಗೆ ಹಾದಿಯಾಗಿದೆ.
  • ಈ ಸಾಧನೆಗಾಗಿ ತಮಿಳುನಾಡು ಸರ್ಕಾರಕ್ಕೆ ರೂ 5 ಕೋಟಿ ಪ್ರಶಸ್ತಿ ಲಭಿಸಲಿದೆ. ತಮಿಳುನಾಡು ಸರ್ಕಾರ ಈ ಹಿಂದೆ ಮೂರು ಬಾರಿ ಈ ಪ್ರಶಸ್ತಿಗೆ ಭಾಜನವಾಗಿತ್ತು.
  • ಸಣ್ಣ ರಾಜ್ಯಗಳ ವಿಭಾಗದಲ್ಲಿ ಅತಿ ಹೆಚ್ಚು ಆಹಾರ ಧಾನ್ಯಗಳನ್ನು ಉತ್ಪಾದಿಸುವ ಮೂಲಕ ತ್ರಿಪುರ ಸರ್ಕಾರ 2015-16ನೇ ಸಾಲಿನ ಕೃಷಿ ಕರ್ಮನ್ ಪ್ರಶಸ್ತಿಗೆ ಪಾತ್ರವಾಗಿದೆ. ಪ್ರಶಸ್ತಿಯು ರೂ 5 ಕೋಟಿ ನಗದನ್ನು ಒಳಗೊಂಡಿದ್ದು, ಎರಡನೇ ಬಾರಿ ತ್ರಿಪುರ ಸರ್ಕಾರ ಈ ಪ್ರಶಸ್ತಿಯನ್ನು ಪಡೆದುಕೊಂಡತಾಗಿದೆ.

ಕೃಷಿ ಕರ್ಮನ್ ಪ್ರಶಸ್ತಿ:

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ 2010-11ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ. ಆಹಾರ ಧಾನ್ಯಗಳ ಉತ್ಪಾದನೆ ಹಾಗೂ ಭತ್ತ, ಗೋದಿ, ಧಾನ್ಯಗಳು ಮತ್ತು ಬೇಳೆಕಾಳುಗಳ ಅಧಿಕ ಉತ್ಪಾದನೆ ಮಾಡುವ ರಾಜ್ಯಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಮೇ 1 ರಿಂದ ಕೆಂಪು ದೀಪಗಳ ವಾಹನಗಳ ಬಳಕೆ ಮೇಲೆ ನಿಷೇಧ

ಕೆಂಪು ದೀಪದ ವಾಹನ ಬಳಕೆ ಮೇಲೆ ಕೇಂದ್ರ ಸಚಿವ ಸಂಪುಟ ನಿಷೇಧವೇರುವ ಮಹತ್ವದ ನಿರ್ಣಯವನ್ನು ಕೈಗೊಂಡಿದ್ದು, ಮೇ 1ರಿಂದ ಈ ನಿರ್ಧಾರ ಜಾರಿಗೆ ಬರಲಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಸುಪ್ರೀಂಕೋರ್ಟಿನ ಮುಖ್ಯನ್ಯಾಯಾಧೀಶರಿಗೆ ಮಾತ್ರ ಈ ನಿಷೇಧ ಅನ್ವಯವಾಗುವುದಿಲ್ಲ. ಅಲ್ಲದೆ ತುರ್ತು ವಾಹನಿಗಳಾದ ಅಗ್ನಿಶಾಮಕ ದಳ, ಅಂಬುಲೆನ್ಸ್, ಪೊಲೀಸ್ ವಾಹನಗಳು ಕೆಂಪು ದೀಪದ ವಾಹನವನ್ನು ಬಳಸಬಹುದಾಗಿದೆ. ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರು, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರುಗಳಿಗೆ ಈ ನಿಷೇಧ ಅನ್ವಯವಾಗಲಿದೆ. ದೇಶದಲ್ಲಿ ಜಾರಿಯಲ್ಲಿರುವ ವಿಐಪಿ ಸಂಸ್ಕೃತಿಯನ್ನು ತೊಡೆದುಹಾಕುವ ಸಲುವಾಗಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಹಿನ್ನಲೆ:

ಸುಪ್ರೀಂಕೋರ್ಟ್ 2013 ರಲ್ಲಿ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದು ಕೆಂಪು ದೀಪ ವಾಹನ ಬಳಕೆ ಮೇಲೆ ನಿಷೇಧವೇರುವಂತೆ ರಾಜ್ಯಗಳಿಗೆ ಸೂಚಿಸಿತ್ತು. ಕೇವಲ ಸಂವಿಧಾನತ್ಮಕ ಅಧಿಕಾರಿಗಳಿಗೆ ಮಾತ್ರ ಕೆಂಪು ದೀಪದ ವಾಹನ ಬಳಸಲು ಆದೇಶ ನೀಡಲಾಗಿತ್ತು. 2001ರಲ್ಲಿ ಸಂಸತ್ತಿನ ಮೇಲೆ ದಾಳಿ ನಡೆಸಿದ ನಂತರ ಕೇಂದ್ರ ಸಚಿವ ಸಂಪುಟದ ಈ ನಿರ್ಣಯ ಮಹತ್ವದಾಗಿದೆ. ಏಕೆಂದರೆ ಭಯೋತ್ಪಾದಕರು ಕೆಂಪು ದೀಪ ವಾಹನ ಬಳಸಿ ಸಂಸತ್ತಿಗೆ ಪ್ರವೇಶಿಸಿದ್ದರು.

  • ಈಗಾಗಲೇ ದೆಹಲಿ, ಪಂಜಾಬ್‌, ಉತ್ತರ ಪ್ರದೇಶ ರಾಜ್ಯಗಳಲ್ಲಿ ಕೆಂಪು ದೀಪದ ವಾಹನ ಬಳಸುವುದನ್ನು ನಿಷೇಧಿಸಲಾಗಿದೆ.

ಚೂರು ಪಾರು:

  • ಸಾಯಿ ಪ್ರಣೀತ್ ಗೆ ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಪ್ರಶಸ್ತಿ: ಸಿಂಗಪುರ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಬಿ. ಸಾಯಿಪ್ರಣೀತ್‌ ಅವರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಸಾಯಿ ಪ್ರಣೀತ್ ಮತ್ತು ಕೆ. ಶ್ರೀಕಾಂತ್‌ ನಡುವೆ ನಡೆದ ಫೈನಲ್‌ ಹೋರಾಟದಲ್ಲಿ ಸಾಯಿಪ್ರಣೀತ್‌ ಜಯ ಸಾಧಿಸಿದ್ದಾರೆ. ಬ್ಯಾಡ್ಮಿಂಟನ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಟೂರ್ನಿಯೊಂದರ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಭಾರತದ ಇಬ್ಬರು ಮುಖಾಮುಖಿಯಾಗಿರುವ ಅಪರೂಪದ ಸಾಧನೆ ಮಾಡಿದ್ದರು.
  • ಎಸ್.ಎಲ್.ಭೈರಪ್ಪರವರಿಗೆ ಶ್ರೀಕೃಷ್ಣದೇವರಾಯ ಪ್ರಶಸ್ತಿ: ಕನ್ನಡದ ಸಾಹಿತಿ ಎಸ್‌.ಎಲ್.ಭೈರಪ್ಪ ಹಾಗೂ ತೆಲುಗು ಚಿತ್ರನಟ ರಾಜೇಂದ್ರ ಪ್ರಸಾದ್‌ ಅವರಿಗೆ ಈ ಸಾಲಿನ ಶ್ರೀಕೃಷ್ಣ ದೇವರಾಯ ಪ್ರಶಸ್ತಿ ನೀಡಲು ತೆಲುಗು ವಿಜ್ಞಾನ ಸಮಿತಿ ನಿರ್ಧರಿಸಿದೆ.
    ಇದೊಂದು ಗೌರವ ಪ್ರಶಸ್ತಿ. ಪುರಸ್ಕೃತರಿಗೆ ನಗದು ನೀಡುವುದಿಲ್ಲ.
  • “ಗುಬ್ಬಿ ವೀರಣ್ಣ ಪ್ರಶಸ್ತಿಗೆ ಚಿಂದೋಡಿ ಶ್ರೀಕಂಠೇಶ್ ಆಯ್ಕೆ: ದಾವಣಗೆರೆ ಕೆ.ಬಿ.ಆರ್. ಡ್ರಾಮಾ ಕಂಪನಿಯ ಮಾಲೀಕ ಚಿಂದೋಡಿ ಶ್ರೀಕಂಠೇಶ್ ಅವರನ್ನು ಗುಬ್ಬಿ ವೀರಣ್ಣ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ರಂಗಭೂಮಿ ಕ್ಷೇತ್ರದ ಅತ್ಯುತ್ತಮ ಸಾಧನೆಗೆ ರಾಜ್ಯ ಸರ್ಕಾರ   ‘ಗುಬ್ಬಿ ವೀರಣ್ಣ’  ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಯು ರೂ 3ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಇದೇ ವೇಳೆ ಬಿ.ವಿ. ಕಾರಂತ ಪ್ರಶಸ್ತಿ’ಗೆ ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ ಮತ್ತು ‘ಬಸವ ರಾಷ್ಟ್ರೀಯ ಪ್ರಶಸ್ತಿ’ಗೆ ಪುಣೆಯ ಸಾಮಾಜಿಕ ಕಾರ್ಯಕರ್ತೆ ಸಿಂಧೂತಾಯಿ ಸಪ್ಕಾಳ್ ಅವರನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಗಳು ತಲಾ ₹ 3 ಲಕ್ಷ ನಗದು ಮತ್ತು ಸ್ಮರಣಿಕೆಗಳನ್ನು ಒಳಗೊಂಡಿದೆ.
  • ಬೇಲೂರು ಚನ್ನಕೇಶವ ದೇವಾಲಯಕ್ಕೆ 900 ವರ್ಷ: ವಿಶ್ವ ಪ್ರಸಿದ್ದ ಚನ್ನಕೇಶವ ದೇವಾಲಯಕ್ಕೆ ಈಗ 900 ವರ್ಷ. 900 ವರ್ಷಗಳಾದ ಪ್ರಯುಕ್ತ ದೇವಾಲಯದಲ್ಲಿ ‘900 ವರ್ಷಪೂರ್ತಿ ಪ್ರತಿಷ್ಠಾಪನಾ ದಿನೋತ್ಸವ’ಕ್ಕೆ ಚಾಲನೆ ನೀಡಲಾಯಿತು. ಚನ್ನಕೇಶವ ದೇವಾಲಯವನ್ನು ಹೊಯ್ಸಳರ ದೊರೆ ವಿಷ್ಣುವರ್ಧನನು ಕ್ರಿ.ಶ.117ರಲ್ಲಿ ನಿರ್ಮಿಸಿದನು.
  • ರಂಗಕರ್ಮಿ ಸಿ. ಲಕ್ಷಣ್ ನಿಧನ: ರಂಗಕರ್ಮಿ ಸಿ.ಲಕ್ಷ್ಮಣ್ ನಿಧನರಾದರು. ಲಕ್ಷ್ಮಣ್ ಅವರು ಮಸಣದ ಮಕ್ಕಳು, ನನ್ನ ಗೋಪಾಲ, ಕಾರಣಿಕ ಶಿಶು (ರಾಜ್ಯ ಪ್ರಶಸ್ತಿ), ಸಂತೆ ಚಲನಚಿತ್ರಗಳನ್ನು ನಿರ್ದೇಶಿಸಿದ್ದಲ್ಲದೆ ಅವುಗಳಲ್ಲಿ ಅಭಿನಯಿಸಿದ್ದರು. 40 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಅವರು ‘ರಂಗಕಹಳೆ ಮಕ್ಕಳ ನಾಟಕ ಕೇಂದ್ರ’ ಸ್ಥಾಪಿಸಿ ದೇಶದಾದ್ಯಂತ ಮಕ್ಕಳ ನಾಟಕಗಳ ಪ್ರದರ್ಶನ ನಡೆಸಿದ್ದರು. 2012ನೇ ಸಾಲಿನ ಶಿಕ್ಷಕ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕಾರ ಪಡೆದಿದ್ದರು
  • ಎಚ್.ಎಸ್. ಶಿವಪ್ರಕಾಶ್ ಗೆ 2017-18ನೇ ಸಾಲಿನ ಕುಸುಮಾಗ್ರಜ ಪ್ರಶಸ್ತಿ: 2017-18ನೇ ಸಾಲಿನ ಪ್ರತಿಷ್ಠಿತ ‘ಕುಸುಮಾಗ್ರಜ ರಾಷ್ಟ್ರೀಯ ಭಾಷಾ ಸಾಹಿತ್ಯ ಪುರಸ್ಕಾರ’ಕ್ಕೆ ಕನ್ನಡದ ಹಿರಿಯ ಕವಿ- ನಾಟಕಕಾರ-  ವಿಮರ್ಶಕ ಪ್ರೊ. ಎಚ್.ಎಸ್.ಶಿವಪ್ರಕಾಶ್ ಆಯ್ಕೆಯಾಗಿದ್ದಾರೆ. ‘ಕುಸುಮಾಗ್ರಜ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ ಮರಾಠಿ ಲೇಖಕ ದಿವಂಗತ ವಿಷ್ಣು ವಾಮನ ಶಿರ್ವಾಡ್ಕರ್ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಮರಾಠಿಯೇತರ ಭಾರತೀಯ ಭಾಷಾ ಬರಹಗಾರರಿಗೆ ನೀಡಲಾಗುತ್ತದೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಮತ್ತು ಸಮ್ಮಾನ ಚಿಹ್ನೆಯನ್ನು ಒಳಗೊಂಡಿದೆ.

2 Thoughts to “ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,20,2017”

  1. Sharanappa

    Please update the science Study material

Leave a Comment

This site uses Akismet to reduce spam. Learn how your comment data is processed.