ಉಡಾನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ

ಸಾಮಾನ್ಯ ಜನರಿಗೂ ಕಡಿಮೆ ದರದಲ್ಲಿ ವಿಮಾನ ಯಾನ ಸೌಲಭ್ಯ ಕಲ್ಪಿಸುವ ಕೇಂದ್ರ ಸರ್ಕಾರದ ಮಹತ್ವದ ಉಡಾನ್ ಯೋಜನೆಗೆ ಶಿಮ್ಲಾದ ಹೊರವಲಯದಲ್ಲಿರುವ ಜುಬ್ಬರಹಟ್ಟಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ನವದೆಹಲಿ-ಶಿಮ್ಲಾ ನಡುವಿನ ಪ್ರಪ್ರಥಮ ಉಡಾನ್ ವಿಮಾನ ಹಾರಾಟವನ್ನು ಮೋದಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಡಪಾ-ಹೈದರಾಬಾದ್ ಮತ್ತು ನಾಂದೇಡ್-ಹೈದರಾಬಾದ್ ಉಡಾನ್ ಉದ್ಘಾಟನಾ ಹಾರಾಟಕ್ಕೆ ಚಾಲನೆ ನೀಡಲಾಯಿತು.

ಉಡಾನ್ ಯೋಜನೆ:

  • ಸಾಮಾನ್ಯ ಜನರಿಗೂ ವಿಮಾನಯಾನ ಸೇವೆ ಕಲ್ಪಿಸಲು ದೇಶದ 45 ಬಳಸದ ಹಾಗೂ ಕಡಿಮೆ ಬಳಸಿರುವ ವಿಮಾನ ನಿಲ್ದಾಣಗಳಿಗೆ ಉಡಾನ್ ಯೋಜನೆಯಡಿ ಸಂಪರ್ಕ ಕಲ್ಪಿಸಲಾಗುವುದು. ಈ ಯೋಜನೆಯಡಿ ಸಂಪರ್ಕ ಕಲ್ಪಿಸಲಿರುವ ಕೆಲವು ವಿಮಾನ ನಿಲ್ದಾಣಗಳೆಂದರೆ ಭಾತಿಂದ, ಭಾವನಗರ್, ದುರ್ಗಾಪುರ, ಜೈಸ್ಲ್ಮೇರ್, ಪುದುಚೇರಿ ಮತ್ತು ಶಿಮ್ಲಾ.
  • ಈ ಯೋಜನೆಯಡಿ ಐದು ವಿಮಾನಯಾನ ಸಂಸ್ಥೆಗಳು 128 ಮಾರ್ಗಗಳ ಮೂಲಕ ಸೇವೆಯನ್ನು ಒದಗಿಸಲಿವೆ. ಈ ಐದು ಸಂಸ್ಥೆಗಳೆಂದರೆ ಏರ್ ಇಂಡಿಯಾ ಮತ್ತು ಅಂಗ ಸಂಸ್ಥೆಗಳು, ಏರ್ ಡೆಕ್ಕನ್, ಏರ್ ಓಡಿಶಾ, ಟರ್ಬೊ ಮೆಗಾ ಮತ್ತು ಸ್ಪೈಸ್ ಜೆಟ್. ಏರ್ ಒಡಿಶಾ -50, ಏರ್ ಡೆಕ್ಕನ್- 34, ಟರ್ಬೊ ಮೇಘಾ ಏರ್‍‍ ವೇಸ್ -18, ಏರ್ ಇಂಡಿಯಾದ ಅಲಯನ್ಸ್ ಏರ್ -15 ಮತ್ತು ಸ್ಪೈಸ್ ಜೆಟ್- 11 ವಿಮಾನ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲಿವೆ.
  • ಯೋಜನೆಯಡಿ 500 ಕಿ.ಮೀ ದೂರದ ಒಂದು ಗಂಟೆ ಪ್ರಯಾಣಕ್ಕೆ ರೂ 2500 ನಿಗದಿ ಪಡಿಸಲಾಗಿದೆ. ಇದಕ್ಕಿಂತ ದೂರದ ಪ್ರಯಾಣ ಮತ್ತು ಸಮಯಕ್ಕೆ ಬೇರೆ ಬೇರೆ ದರ ಅನ್ವಯವಾಗಲಿದೆ.
  • ಒಬ್ಬ ವ್ಯಕ್ತಿಯು 9 ರಿಂದ 40 ಸೀಟುಗಳಿಗೆ ಟಿಕೆಟ್ ಗಳನ್ನು ಖರೀದಿಸಬಹುದಾಗಿದೆ. ಆದರೆ ಇದರಲ್ಲಿ ಶೇ 50% ಟಿಕೆಟ್ ಗಳಿಗೆ ಮಾತ್ರ ರೂ 2500/ಗಂಟೆಗೆ ಅನ್ವಯವಾಗಲಿದೆ.

ಉಡಾನ್:

ಉಡಾನ್ “ಉಡೇ ದೇಶ್ ಕಾ ಅಮ್ ನಾಗರೀಕ್” ಪ್ರಾದೇಶಿಕ ವಿಮಾನಯಾನ ಕಲ್ಪಿಸುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದ್ದು ಅಕ್ಟೋಬರ್ 2016 ರಂದು ಚಾಲನೆ ನೀಡಲಾಯಿತು. ಜೂನ್ 15, 2016 ರಲ್ಲಿ ಬಿಡುಗಡೆಗೊಳಿಸಿದ ರಾಷ್ಟ್ರೀಯ ನಾಗರಿಕ ವಿಮಾನಯಾನ ನೀತಿ”ಯ ಪ್ರಮುಖ ಭಾಗ ಉಡಾನ್ ಯೋಜನೆ. ಜನಸಾಮಾನ್ಯರು ವಿಮಾನಯಾನ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಮಾಡುವುದು ಯೋಜನೆಯ ಉದ್ದೇಶ. ದೇಶದಲ್ಲಿ ಬಳಸದ ಹಾಗೂ ಅತಿ ಕಡಿಮೆ ಬಳಸಿರುವ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಿ ವಿಮಾನ ಯಾನವನ್ನು ಕೈಗೆಟುಕುವಂತೆ ಮಾಡಲು ಉಡಾನ್ ಯೋಜನೆಯನ್ನು ಜಾರಿಗೆ ತರಲಾಗಿದೆ.

ಭಾರತದ ಸೃಷ್ಟಿ ಕೌರ್ ಅವರಿಗೆ  2017ನೇ ಸಾಲಿನ ಮಿಸ್ ಟೀನ್ ಯೂನಿವರ್ಸ್ ಕಿರೀಟ

ನೋಯ್ಡಾದ ನಿವಾಸಿ ಸೃಷ್ಟಿ ಕೌರ್ 2017ನೇ ಸಾಲಿನ ಮಿಸ್ ಟೀನ್ ಯೂನಿವರ್ಸ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ನಿಕಾರುಗ್ವ ರಾಷ್ಟ್ರದ ರಾಜಧಾನಿ ಮನಗುವಾದಲ್ಲಿ ನಡೆದ ಸ್ಪರ್ಧೆಯಲ್ಲಿ ಕೌರ ಕಿರೀಟವನ್ನು ತನ್ನದಾಗಿಸಿಕೊಂಡರು. ರಾಷ್ಟ್ರೀಯ ಉಡುಗೆ ವಿಭಾಗದಲ್ಲೂ ಸೃಷ್ಟಿ ಅವರು ಪ್ರಶಸ್ತಿಯನ್ನು ಗೆದ್ದುಕೊಂಡರು. ಭಾರತದ ರಾಷ್ಟ್ರಪಕ್ಷಿ ನವಿಲು ಚಿತ್ರವಿರುವ ಉಡುಗೆಗೆ ಪ್ರಶಸ್ತಿ ದೊರೆತಿದೆ. ಇದೇ ವರ್ಷದ ಆರಂಭದಲ್ಲಿ ಸೃಷ್ಟಿ 29 ಸ್ಪರ್ಧಿಗಳನ್ನ ಹಿಂದಿಕ್ಕಿ ಮಿಸ್ ಟೀನ್ ಟಿಯಾರಾ ಇಂಟರ್‍ನ್ಯಾಷನಲ್ ಪಟ್ಟವನ್ನ ತನ್ನದಾಗಿಸಿಕೊಂಡಿದ್ದರು.

ಮಿಸ್ ಟೀನ್ ಯೂನಿರ್ವಸ್:

ಈ ಸೌಂದರ್ಯ ಸ್ಪರ್ಧೆಯನ್ನ 6 ವರ್ಷಗಳ ಹಿಂದೆ ಪ್ರಾರಂಭಿಸಲಾಗಿದ್ದು 15 ರಿಂದ 19 ವರ್ಷ ವಯಸ್ಸಿನವರಿಗಾಗಿ ಮಿಸ್ ಯೂನಿವರ್ಸ್ ಸಂಸ್ಥೆ ಈ ಸ್ಪರ್ಧೆಯನ್ನ ಆಯೋಜಿಸುತ್ತದೆ.

 ಹಿರಿಯ ನಟ ವಿನೋದ್ ಖನ್ನಾ ನಿಧನ

ಹಿಂದಿ ಚಿತ್ರರಂಗದ ಹಿರಿಯ ನಟ ವಿನೋದ್‌ ಖನ್ನಾ (70) ನಿಧನರಾದರು. ಖನ್ನಾ ಅವರು ಪಿತ್ತಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 1946ರ ಅಕ್ಟೋಬರ್ 6ರಂದು ಜನಿಸಿದ ಅವರು 1968ರಲ್ಲಿ ಸಿನಿಮಾದಲ್ಲಿ ನಟಿಸಲು ಆರಂಭಿಸಿದ್ದರು. 140ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಮೇರೆ ಅಪ್ನೆ, ಇನ್ ಸಾಫ್, ‘ಅಮರ್ ಅಕ್ಬರ್ ಅಂಥೋನಿ’, ‘ದಿ ಬರ್ನಿಂಗ್ ಟ್ರೈನ್’ ಮತ್ತಿತರ ಪ್ರಸಿದ್ಧ ಚಿತ್ರಗಳಲ್ಲಿ ಅವರು ನಟಿಸಿದ್ದರು. 2015 ರಲ್ಲಿ ತೆರೆಕಂಡ ಶಾರೂಖ್ ಖಾನ್ ನಾಯಕತ್ವದ ದಿಲ್ವಾಲೆ ಅವರ ಕೊನೆಯ ಸಿನಿಮಾ. 1968ರಲ್ಲಿ ತೆರೆಕಂಡ “ಮನ್ ಕ ಮೀಟ್” ಅವರ ಮೊದಲ ಸಿನಿಮಾ.

  • ಖನ್ನಾ ಅವರು ಪಂಜಾಬ್‌ನ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರತಿನಿಧಿಯಾಗಿದ್ದಾರೆ.
  • ಪ್ರಸಿದ್ಧ ಸಿನಿಮಾಗಳಾದ ಮೇರೇ ಅಪ್ನೆ, ಮೇರಾ ಗಾಂವ್ ಮೇರಾ ದೇಶ್, ಗದರ್, ಜೈಲ್ ಯಾತ್ರಾ, ಇನ್‌ಕಾರ್, ಅಮರ್ ಅಕ್ಬರ್ ಅಂಥೋನಿ, ರಜ್‌ಪೂತ್‌ಗಳಲ್ಲಿ ಖನ್ನಾ ನಟಿಸಿದ್ದಾರೆ.
  • 1997ರಲ್ಲಿ ರಾಜಕೀಯ ಪ್ರವೇಶಿಸಿದ್ದ ಅವರು ಮರುವರ್ಷ ಬಿಜೆಪಿಯಿಂದ ಟಿಕೆಟ್ ಪಡೆದು ಪಂಜಾಬ್‌ನ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧಿಸಿ ಆಯ್ಕೆಯಾಗಿದ್ದರು.
  • ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, 2002ರಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನಂತರ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
  • 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲನುಭವಿಸಿದ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಜಯ ಸಾಧಿಸಿದ್ದರು.

ಶನಿ ಗ್ರಹದ ಉಂಗುರುಗಳ ನಡುವೆ ಯಶಸ್ವಿಯಾಗಿ ಸಂಚರಿಸಿದ ಕ್ಯಾಸಿನಿ ನೌಕೆ

ನಾಸಾದ ಕ್ಯಾಸಿನಿ ಬಾಹ್ಯಕಾಶ ನೌಕೆ ಶನಿ ಗ್ರಹ ಮತ್ತು ಅದರ ಉಂಗುರಗಳ ನಡುವೆ ಅತಿ ಕಿರು ಅಂತರದಲ್ಲಿ ನುಸುಳಿಕೊಂಡು ಹೋಗುವ ತನ್ನ ಪ್ರಪ್ರಥಮ ಪ್ರಯತ್ನದಲ್ಲಿ ಕ್ಯಾಸಿನಿ ಯಶಸ್ವಿಯಾಗಿದೆ. ಕ್ಯಾಸಿನಿ ಬಾಹ್ಯಕಾಶ ನೌಕೆ 22 ಕಕ್ಷೆಯಲ್ಲಿ ಅಂತಿಮ ಕಕ್ಷೆಯಲ್ಲಿ ಸಂಚಾರ ಪ್ರಾರಂಭಿಸಿದೆ. ಸೆಪ್ಟೆಂಬರ್ 15, 2017ರಂದು ಶನಿಗ್ರಹವನ್ನು ಸಂಪರ್ಕಸಲಿದ್ದು, 20 ವರ್ಷಗಳ ಪ್ರಯಾಣವನ್ನು ಅಂತಿಮಗೊಳಿಸಲಿದೆ.  ಕ್ಯಾಸಿನಿ ಉಪಗ್ರಹ ಈಗಾಗಲೇ ಶನಿ ಗ್ರಹ ಮತ್ತು ಅದರ ಉಂಗುರಗಳ ನಡುವೆ ಯಶಸ್ವಿಯಾಗಿ ಸಂಚರಿಸಿದೆ. ಈ ಹಿಂದೆ ಯಾವುದೇ ಬಾಹ್ಯಕಾಶ ನೌಕೆ ಈ ಸಾಧನೆಯನ್ನು ಮಾಡಿರಲಿಲ್ಲ. ಇನ್ನು 21 ಬಾರಿ ಶನಿ ಮತ್ತು ಅದರ ಉಂಗುರಗಳ ನಡುವೆ ಹಾದುಹೋಗಲಿದ್ದು,  ಈ ಸಂದರ್ಭದಲ್ಲಿ ಶನಿ ಮತ್ತು ಅದರ ಉಂಗುರ ರಚನೆಗಳ ಬಗ್ಗೆ ಮಾಹಿತಿಯನ್ನು ರವಾನಿಸಲಿದೆ.

ಕ್ಯಾಸಿನಿ ಬಾಹ್ಯಕಾಶ ನೌಕೆ:

  • ಕ್ಯಾಸ್ಸಿನಿ ಬಾಹ್ಯಾಕಾಶ ನೌಕೆಗೆ 17 ನೇ ಶತಮಾನದ ಖಗೋಳಶಾಸ್ತ್ರಜ್ಞ ಜಿಯೊವನ್ನಿ ಕ್ಯಾಸ್ಸಿನಿ ಅವರ ಹೆಸರನ್ನಿಡಲಾಗಿದೆ.
  • ಅಕ್ಟೋಬರ್ 1997ರಲ್ಲಿ ಬಾಹ್ಯಾಕಾಶಕ್ಕೆ ಈ ನೌಕೆಯನ್ನು ಹಾರಿಬಿಡಲಾಯಿತು . ಇದು ನಾಸಾ, ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ಮತ್ತು ಇಟಾಲಿಯನ್ ಸ್ಪೇಸ್ ಏಜೆನ್ಸಿ, ಏಜೆನ್ಜಿಯಾ ಸ್ಪಾಸಿಯಾಲ್ ಇಟಲಿನಾ (ಎಎಸ್ಐ)ಯ ಜಂಟಿ ಪ್ರಯತ್ನವಾಗಿದೆ.
  • ಶನಿ ಗ್ರಹಕ್ಕೆ ಭೇಟಿ ನೀಡಿದ ನಾಲ್ಕನೇ ಬಾಹ್ಯಕಾಶ ನೌಕೆ ಹಾಗೂ ಶನಿ ಗ್ರಹದ ಕಕ್ಷೆಯನ್ನು ಪ್ರವೇಶಿಸಿದ ಮೊದಲ ಬಾಹ್ಯಕಾಶ ನೌಕೆಯಾಗಿದೆ.

ಭುವನೇಶ್ವರ ನಗರಕ್ಕೆ ಪಿಯರೆ ಎಲ್’ಎನ್ಪಾಂಟ್ ಇಂಟರ್ನ್ಯಾಷನಲ್ ಪ್ಲಾನಿಂಗ್ ಪ್ರಶಸ್ತಿ

ಅಮೆರಿಕ ಪ್ಲಾನಿಂಗ್ ಅಸೋಸಿಯೇಷನ್ ನೀಡುವ ಪಿಯರೆ ಎಲ್’ಎನ್ಪಾಂಟ್ ಇಂಟರ್ನ್ಯಾಷನಲ್ ಪ್ಲಾನಿಂಗ್ ಪ್ರಶಸ್ತಿ (Pierre L’enfant International Planning excellence award-2017 ) ಓಡಿಶಾದ ಭುವನೇಶ್ವರ ನಗರಕ್ಕೆ ಲಭಿಸಿದೆ. ಆ ಮೂಲಕ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಭಾರತದ ಮೊದಲ ನಗರ  ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉತ್ತಮ ಹಾಗೂ ಸುಧಾರಿತ ನಗರ ವಿನ್ಯಾಸಕ್ಕಾಗಿ ಈ ಪ್ರಶಸ್ತಿಯನ್ನು ಭುವನೇಶ್ವರ್ ನಗರಕ್ಕೆ ನೀಡಲಾಗಿದೆ.

ಪ್ರಶಸ್ತಿಯ ಬಗ್ಗೆ:

  • ಪಿಯರೆ ಎಲ್’ಎನ್ಪಾಂಟ್ ಫ್ರೆಂಚ್ ಮೂಲದ ಅಮೆರಿಕದ ವಾಸ್ತುಶಿಲ್ಪಿ ಹಾಗೂ ಸಿವಿಲ್ ಎಂಜನಿಯರ್.
  • ಅಮೆರಿಕದ ವಾಷಿಂಗ್ಟನ್ ಡಿ ಸಿ ನಗರದಲ್ಲಿ ರಸ್ತೆಗಳನ್ನು ವಿನ್ಯಾಸಗೊಳಿಸಿದ ಕೀರ್ತಿ ಪಿಯರೆ ಅವರಿಗೆ ಸಲ್ಲುತ್ತದೆ.
  • ಅಂತಾರಾಷ್ಟ್ರೀಯ ಮನ್ನಣೆ ಪಡೆದ ನಗರ ವಿನ್ಯಾಸವನ್ನು ಗೌರವಿಸಲು ಅಮೆರಿಕ ಪ್ಲಾನಿಂಗ್ ಅಸೋಸಿಯೇಷನ್ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಿಳಾ ಬೆಟಾಲಿಯನ್ ನಿಯೋಜನೆಗೆ ಕೇಂದ್ರ ಚಿಂತನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಮಹಿಳಾ ಬೆಟಾಲಿಯನ್ ಗಳನ್ನು ಕರ್ತವ್ಯಕ್ಕೆ ನಿಯೋಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇತ್ತೀಚೆಗೆ ವಿದ್ಯಾರ್ಥಿನಿಯರು ರಕ್ಷಣಾ ಪಡೆಗಳ ಕಡೆ ಕಲ್ಲು ತೂರಾಟ ನಡೆಸಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ತಂತ್ರಗಾರಿಕೆಯ ಮೊರೆ ಹೋಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷ 5 ಇಂಡಿಯಾ ರಿಸರ್ವ್ಡ್ ಬೆಟಾಲಿಯನ್ ಪಡೆಗಳನ್ನು ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಒಂದೊಂದು ಬೆಟಾಲಿಯನ್ ನಲ್ಲೂ 1,000 ಮಹಿಳಾ ವಿಶೇಷ ಪಡೆಗಳಿರಲಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನಕಾರರನ್ನು ನಿಯಂತ್ರಿಸುವುದು ಈ ಮಹಿಳಾ ಪಡೆಯ ಪ್ರಮುಖ ಉದ್ದೇಶ.

  • ಮಹಿಳಾ ಬೆಟಾಲಿಯನ್ ಗಳ ನಿಯೋಜನೆ ಕುರಿತಂತೆ ಗೃಹ ಸಚಿವ ರಾಜನಾಥ ಸಿಂಗ್ ಅವರು ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದು, ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.
  • ಇದರಂತೆ ಐಆರ್’ಬಿಎಸ್ (ಇಂಡಿಯಾ ರಿಸರ್ವ್ಡ್ ಬೆಟಾಲಿಯನ್’) ನಿಯೋಜಿಸಲು ಕೇಂದ್ರ ತೀರ್ಮಾನಿಸಿದ್ದು, ಇದರಿಂದ ಶೇ.60 ರಷ್ಟು ಸ್ಥಳೀಯ ಯುವಕರಿಗೆ ಉದ್ಯೋಗವಾಕಾಶ ದೊರಕಲಿದೆ. ಬೆಟಾಲಿಯಿನ್ ಪಡೆಗಳನ್ನು ನೋಡಿಕೊಳ್ಳಲು ರೂ.61 ಕೋಟಿ ವೆಚ್ಚ ತಗುಲಲಿದ್ದು, ಶೇ.75ರಷ್ಟನ್ನು ಕೇಂದ್ರ ಸರ್ಕಾರವೇ ನೋಡಿಕೊಳ್ಳಲಿದೆ.

ಮೇ 2 ರಂದು ಗಂಗಾ ಸ್ವಚ್ಚತಾ ಸಂಕಲ್ಪ ದಿವಸ ಆಚರಣೆಗೆ ನಿರ್ಧಾರ

ಸ್ವಚ್ಚ ಗಂಗಾ ರಾಷ್ಟ್ರೀಯ ಮಿಷನ್ ಗಂಗಾ ಸ್ಚಚ್ಚತಾ ಸಂಕಲ್ಪ ದಿವಸವನ್ನು ಮೇ 2, 2017 ರಂದು ದೇಶದ 12 ನಗರಗಳಲ್ಲಿ ಆಚರಿಸಲು ನಿರ್ಧರಿಸಿದೆ. ಈ 12 ಸ್ಥಳಗಳೆಂದರೆ ಕಾನ್ಪುರ, ಅಲಹಬಾದ್, ವಾರಣಾಸಿ, ಪಾಟ್ನಾ, ಭಗಲ್ಪುರ, ಸಹಿಬ್ ಗಂಜ್, ಕೊಲ್ಕತ್ತಾ, ರಾಜ್ ಘಾಟ್, ಬಿಥೂರ್, ಶ್ರೀನಗರ (ಉತ್ತರಖಂಡ), ವಿಧೂರ್ ಕುಟಿ ಮತ್ತು ದೇವ್ ಪ್ರಯಾಗ್. ಇದಲ್ಲದೇ ಸ್ಥಳೀಯ NGO ಗಳು, ಗಂಗಾ ವಿಚಾರ ವೇದಿಕೆ ಹಾಗೂ ಸ್ವಯಂ ಬೆಂಬಲಿತರು ಇತರೆ 30 ಸ್ಥಳಗಳಲ್ಲಿ ಸ್ವಚ್ಚತಾ ಸಂಕಲ್ಪ ದಿವಸವನ್ನು ಆಚರಿಸಲಿದ್ದಾರೆ.

ಸ್ವಚ್ಚ ಗಂಗಾ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಈ ಕಾರ್ಯಕ್ರಮದಲ್ಲಿ ಸಮುದಾಯ ಭಾಗವಹಿಸಲು ಪ್ರೇರೆಪಿಸುವುದು ಸಂಕಲ್ಪ ದಿವಸ ಆಚರಣೆಯ ಉದ್ದೇಶ.

ಹಿನ್ನಲೆ:

ಮಾರ್ಚ್ 17, 2017 ರಂದು ಸ್ವಚ್ಚ ಗಂಗಾ ರಾಷ್ಟ್ರೀಯ ಮಿಷನ್ ಗಂಗಾ ನದಿ ಪಾತ್ರದ ಐದು ರಾಜ್ಯಗಳಲ್ಲಿ 16 ದಿನಗಳ ಕಾಲ ಅವಧಿಯ “ಗಂಗಾ ಸ್ವಚ್ಚತಾ ಪಖ್ವಾಡ” ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಭಾರಿ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಈ ಕಾರ್ಯಕ್ರಮ ಯಶಸ್ವಿಯಾಗಿತ್ತು. ಈ ಕಾರ್ಯಕ್ರಮದ ಯಶಸ್ಸಿನಿಂದ ಪ್ರೇರೆಪಿತಗೊಂಡು ಇದೀಗ ಗಂಗಾ ಸ್ವಚ್ಚತಾ ಸಂಕಲ್ಪ ದಿವಸವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಬಸವ ಸಮಿತಿಯ ಸುವರ್ಣ ಮಹೋತ್ಸವಕ್ಕೆ ಪ್ರಧಾನಿ ಚಾಲನೆ         

ಬಸವ ಜಯಂತಿ ಸಮಾರಂಭ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬಸವ ಸಮಿತಿಯ ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ.ಇದೇ ವೇಳೆ ಪ್ರಧಾನಿ ಮೋದಿ ಅವರು ಬಸವಣ್ಣನವರ “ವಚನ”ಗಳ ಭಾಷಾಂತರ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಭಾರತದ 23 ಭಾಷೆಗಳಲ್ಲಿ ವಚನಗಳ ಪುಸ್ತಕವನ್ನು ಹೊರತರಲಾಗಿದೆ. ದಿವಂಗತ ಎಂ ಎಂ ಕಲ್ಬುರ್ಗಿ ಅವರು ವಚನಗಳನ್ನು ಸಂಪಾದಿಸಿದ್ದು, ಸುಮಾರು 200 ಜನರು ವಚನಗಳನ್ನು ಭಾಷಾಂತರಗೊಳಿಸಲು ಶ್ರಮಿಸಿದ್ದಾರೆ. ಇದೇ ವೇಳೆ ಡಿಜಿಟಲ್ ರೂಪದ ಆವೃತ್ತಿಯನ್ನು ಸಹ ಪ್ರಧಾನಿ ಅವರು ಬಿಡುಗಡೆಗೊಳಿಸಿದರು. ಇದೇ ಮೊದಲ ಬಾರಿಗೆ ಬಸವ ಜಯಂತಿಯನ್ನು ಮೊಟ್ಟ ಮೊದಲ ಬಾರಿಗೆ ರಾಷ್ಟ್ರಮಟ್ಟದಲ್ಲಿ ನವದೆಹಲಿಯಲ್ಲಿ ಆಚರಿಸಲಾಯಿತು. ಸುಮಾರು 2.5 ಕೋಟಿ ವೆಚ್ಚದಲ್ಲಿ ವಚನಗಳ ಭಾಷಾಂತರವನ್ನು ಬಸವ ಸಮಿತಿ ಕೈಗೊಂಡಿದ್ದು, ಕರ್ನಾಟಕ ಸರ್ಕಾರ ಇದಕ್ಕಾಗಿ ರೂ 1 ಕೋಟಿಯನ್ನು ನೀಡಿದೆ. ಬಸವ ಸಮಿತಿಯ ಸುವರ್ಣ ಮಹೋತ್ಸವವನ್ನು ಸಹ ಈ ವೇಳೆ ಆಚರಿಸಲಾಯಿತು. ಬಸವಣ್ಣನವರ ಸಂದೇಶವನ್ನು ವಿಶ್ವಕ್ಕೆ ಸಾರುವ ಸಲುವಾಗಿ ಮಾಜಿ ರಾಷ್ಟ್ರಪತಿ ಬಿ ಡಿ ಜತ್ತಿ ಅವರು ಬಸವ ಸಮಿತಿಯನ್ನು 1964ರಲ್ಲಿ ಸ್ಥಾಪಿಸಿದರು.

ಬಸವಣ್ಣ:

  • ಶ್ರೀ ಬಸವೇಶ್ವರ (ಶ್ರೀ ಬಸವ ಅಥವಾ ಬಸವಣ್ಣನವರು) ಶರಣ ಶರಣೆಯರ ಲಿಂಗಾಯತ ದರ್ಶನ ಪ್ರತಿಪಾದಕರು. ಬಸವಣ್ಣನವರು 12 ನೆಯ ಶತಮಾನದ ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರು. ಬಸವಣ್ಣನವರು ಮತ್ತು ಶರಣ ಶರಣೆಯರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ ವೊದಲಾದ ನೂರಾರು ಶರಣ ಶರಣೆಯರು ವಚನಗಳ ಮೂಲಕ ಭಕ್ತಿಪಥ ಮತ್ತು ಜೀವನದ ಬಗ್ಗೆ ಹೊಸ ದೃಷ್ಟಿ ಬೀರಿದರು.
  • ಬಸವಣ್ಣನವರು 1134 ರಲ್ಲಿ ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ಗ್ರಾಮದಲ್ಲಿ ಜನಿಸಿದರು.
  • ಅವರ ದೃಷ್ಟಿಯಲ್ಲಿ ದೇವನು ಒಬ್ಬ ಮತ್ತು ಅವನು ಮಾನವನಲ್ಲಿದ್ದಾನೆಯೇ ಹೊರತು ಗುಡಿ-ಗುಂಡಾರಗಳಲ್ಲಿ ಅಲ್ಲ. ಕೆಲಸ ಮಾಡಿ ಜೀವನ ನಡೆಸಬೇಕು, ಆಲಸಿ ಜೀವನ ಸಲ್ಲ. ಸುಳ್ಳು ಹೇಳುವುದು, ವಂಚಿಸುವುದು, ಕೊಲೆ-ಸುಲಿಗೆ ಮಾಡುವುದು, ಪ್ರಾಣಿಬಲಿ ನೀಡುವುದು, ಪರಧನ ಹರಣ, ಪರಸ್ತ್ರೀ ವ್ಯಾಮೋಹ ಹೊಂದುವುದು ಘೋರ ಅಪರಾಧ.
  • ಬಸವಣ್ಣನವರು ನಾಣ್ಯದ ಮೇಲೆ ಪ್ರಕಟಿಸಲ್ಪಟ್ಟವರಲ್ಲಿ ಪ್ರಥಮ ಕನ್ನಡಿಗ ರಾಗಿದ್ದಾರೆ.ಗುರು ಬಸವಣ್ಣವರ ಅಶ್ವಾರೂಢ ಮೂರ್ತಿಯನ್ನು ದೆಹಲಿಯಲ್ಲಿರುವ ಪಾರ್ಲಿಮೆಂಟ್ ನಲ್ಲಿ 24ನೇ ಎಪ್ರಿಲ್ 2003ರಲ್ಲಿ ಅನಾವರಣಗೊಳಿಸಲಾಯತು. 2015ರಲ್ಲಿ ಪ್ರಧಾನಿ ಮೋದಿ ಅವರು ಬಸವಣ್ಣನವರ ಪ್ರತಿಮೆಯನ್ನು ಲಂಡನ್ ನ ಥೇಮ್ಸ್ ನದಿಯ ದಡದಲ್ಲಿ ಉದ್ಘಾಟಿಸಿದರು.

ಮಹಾರಾಷ್ಟ್ರದ ಬಿಲಾರ್ ಗ್ರಾಮ ದೇಶದ ಮೊದಲ ಪುಸ್ತಕ ಗ್ರಾಮ

ಮಹಾರಾಷ್ಟ್ರದ ಸತಾರ್ ಜಿಲ್ಲೆಯ ಪುಟ್ಟ ಗ್ರಾಮ “ಬಿಲಾರ್” ದೇಶದ ಮೊದಲ ಪುಸ್ತಕ ಗ್ರಾಮವೆಂಬ ಗೌರವವಕ್ಕೆ ಪಾತ್ರವಾಗಲಿದೆ. ಬ್ರಿಟನ್‍ನ ವೇಲ್ಸ್ ಪಟ್ಟಣದಲ್ಲಿ ಹೇ-ಆನ್-ವೈ ಎಂಬ ಪರಿಕಲ್ಪನೆಯಿಂದ ಪ್ರೇರಿತವಾಗಿ ಈ ಗ್ರಾಮದಲ್ಲಿ ಪುಸ್ತಕಗಳ ಹಳ್ಳಿ ಸ್ಥಾಪನೆಗೊಂಡಿದೆ. ಈ ವಿನೂತನ ಕಾರ್ಯಕ್ರಮದಡಿ ಪ್ರವಾಸಿಗರು ಹಾಗೂ ಸ್ಥಳೀಯರು ವಿವಿಧ ಪುಸ್ತಕಗಳು, ಕಾದಂಬರಿಗಳು, ನಿಯತಕಾಲಿಗಳು ಹಾಗೂ ಸುದ್ದಿ ಪತ್ರಿಕೆಗಳನ್ನು ಓದಬಹುದಾಗಿದೆ.

  • ಮರಾಠಿ ಪುಸ್ತಕಗಳಿಗಾಗಿಯೇ ಮೀಸಲಾದ ಈ ಗ್ರಾಮಕ್ಕೆ ಪುಸ್ತಕಾಂಚೆಗಾವ್ ಎಂದು ಹೆಸರಿಡಲಾಗಿದೆ.  ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಪುಸ್ತಕ ಗ್ರಾಮವನ್ನು ಲೋಕಾರ್ಪಣೆ ಮೇ 2 ರಂದು ಮಾಡಲಿದ್ದಾರೆ.
  • ಮರಾಠಿ ಭಾಷೆಯ 15 ಸಾವಿರಕ್ಕೂ ಹೆಚ್ಚು ಅಪರೂಪದ ಪುಸ್ತಕಗಳು ಮತ್ತು ನಿಯತಕಾಲಿಕೆಗಳು ಒಂದೇ ವೇದಿಕೆಯಲ್ಲಿ ಲಭಿಸಲಿವೆ.
  • ಇದೊಂದು ನವೀನ ಕಲ್ಪನೆಯ ಪುಸ್ತಕೋದ್ಯಮದ ಸಾಹಸ ಸಾಹಿತ್ಯ, ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳ ಪುಸ್ತಕಗಳು ಒಂದೇ ಸೂರಿನಡಿ ಲಭಿಸುತ್ತಿವೆ. ಈ ಮೂಲಕ ಮರಾಠಿ ಭಾಷೆಯ ಸಂರಕ್ಷಣೆ ಮತ್ತು ಉತ್ತೇಜನಕ್ಕೆ ನೆರವಾಗಿದೆ.

ಬಿಲಾರ್:

ಬಿಲಾರ್ ಗ್ರಾಮ ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿದ್ದು 2 ಕಿ.ಮೀ. ವಿಸ್ತಾರವಿರುವ ಈ ಗ್ರಾಮವು ಪ್ರಸಿದ್ದ ಪಂಚಗಣಿ ಗಿರಿಧಾಮದಿಂದ ಕೇವಲ 8 ಕಿ.ಮೀ. ದೂರದಲ್ಲಿದೆ. ಸ್ಟ್ರಾಬೆರಿ ಗೆ ಈ ಗ್ರಾಮ ಪ್ರಸಿದ್ದಿ ಹೊಂದಿದೆ. ಹಳ್ಳಯ ಸಮೀಪದಲ್ಲೆ ಬ್ರಿಟಿಷರ ಕಾಲದ ಪ್ರಸಿದ್ದ ಮಹಾಬಲೇಶ್ವರ ಗಿರಿಧಾಮವಿದೆ. ಬಿಲಾರ್ ಗ್ರಾಮದಲ್ಲಿ ಪ್ರತಿವರ್ಷ 100 ಟನ್ ಸ್ಟ್ರಾಬೆರಿ ಬೆಳೆಯಲಾಗುತ್ತಿದೆ.

ಅಗ್ನಿ-3 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ

ಅಣ್ವಸ್ತ್ರ ಒಯ್ಯಬಲ್ಲ ಸಾಮರ್ಥ್ಯದ ಮಧ್ಯಂತರ ಶ್ರೇಣಿಯ ಖಂಡಾಂತರ ಕ್ಷಿಪಣಿ ಅಗ್ನಿ–3 ಅನ್ನು ಒಡಿಶಾ ಕರಾವಳಿಯ ಅಬ್ದುಲ್‌ ಕಲಾಂ ದ್ವೀಪದಲ್ಲಿ ಭಾರತ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಿದೆ. ಸೇನೆಯ ಕ್ಷಿಪಣಿ ನಿರ್ವಹಣಾ ಘಟಕ ‘ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್’ ಹಾಗೂ ಡಿಆರ್‌ಡಿಒ ಸಹಯೋಗದಲ್ಲಿ ಈ ಪರೀಕ್ಷೆ ನಡೆಸಲಾಯಿತು. ಅಗ್ನಿ ಕ್ಷಿಪಣಿಯ ಕಾರ್ಯಾಚರಣೆ ಸಾಮರ್ಥ್ಯವನ್ನು ಧೃಡಪಡಿಸಿಕೊಳ್ಳುವ ಸಲುವಾಗಿ ಈ ಪರೀಕ್ಷೆಯನ್ನು ಕೈಗೊಳ್ಳಲಾಗಿತ್ತು. ಅಗ್ನಿ-III ಕ್ಷಿಪಣಿಯನ್ನು ಜೂನ್ 2011ರಲ್ಲಿ ಸೇನೆಗೆ ಸೇರ್ಪಡೆಗೊಳಿಸಲಾಗಿದೆ.

ವೈಶಿಷ್ಠ್ಯತೆ:

  • ಅಗ್ನಿ-III ಕ್ಷಿಪಣಿ ಎರಡು ಹಂತದ ಘನ ನೋದಕ ವ್ಯವಸ್ಥೆಯನ್ನು ಹೊಂದಿದೆ. ಅತಿ ವೇಗದಲ್ಲಿ ವಾತಾವರಣವನ್ನು ಪುನರ್ ಪ್ರವೇಶಿಸುವ ಸಾಮರ್ಥ್ಯವನ್ನು ಹೊಂದಿದೆ. 17 ಮೀಟರ್‌ ಉದ್ದ ಹಾಗೂ 2 ಮೀಟರ್‌ ವ್ಯಾಸ ಹೊಂದಿರುವ ಇದು 2,200 ಕಿ.ಗ್ರಾಂ ತೂಕವಿದೆ. 3000ಕಿ.ಮೀ.ಗಿಂತಲೂ ದೂರದ ಗುರಿ ತಲುಪಬಲ್ಲ ಈ ಕ್ಷಿಪಣಿ 1.5 ಟನ್‌ ತೂಕದ ಪರಮಾಣು ಸಿಡಿತಲೆಯನ್ನೂ ಸಹ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ.
  • ಅಣ್ವಸ್ತ್ರ ಒಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿರುವ ಈ ಕ್ಷಿಪಣಿ 3000 – 5000 ಕಿ.ಮೀ ವರೆಗೆ ಸಾಗಲಿದೆ.

ಹೆಚ್ಐವಿ ಪರೀಕ್ಷೆ ಮತ್ತು ಚಿಕಿತ್ಸೆ ನೀತಿಗೆ ಚಾಲನೆ

ಹೆಚ್ಐವಿ/ಏಡ್ಸ್ ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರದ “ಹೆಚ್ಐವಿ ಪರೀಕ್ಷೆ ಮತ್ತು ಚಿಕಿತ್ಸೆ (HIV Test and Treat Policy)” ನೀತಿಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಚಾಲನೆ ನೀಡಿದರು. ಹೊಸ ನೀತಿಯ ಪ್ರಕಾರ ಹೆಚ್ಐವಿ ಪರೀಕ್ಷೆಗೆ ಒಳಪಟ್ಟು ಹೆಚ್ಐಪಿ ಪಾಸಿಟಿವ್ ಆಗಿದ್ದಾರೆ ಅಂತವರಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುವುದು. ಹೆಚ್ಐವಿ ಪಾಸಿಟಿವ್ ಆಗಿರುವುದು ಪತ್ತೆಯಾದರೆ ಅಂತವರಿಗೆ “ART (Anti Retroviral Therapy)” ಚಿಕಿತ್ಸೆಯನ್ನು ನೀಡಲಾಗುವುದು. ಇದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. ಇದರಡಿ ಹೆಚ್ಐವಿ ಬಾಧಿತ ಪುರುಷರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಉಚಿತವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ.

ಹೆಚ್ಐವಿ ಯು ಮಾನವ ದೇಹದಲ್ಲಿರುವ CD4 T ಕೋಶಗಳನ್ನು ನಾಶಪಡಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ.

  • ಯಾವುದೇ ವ್ಯಕ್ತಿಯ CD4 T ಕೋಶಗಳ ಸಂಖ್ಯೆ 200 ಕ್ಕಿಂತ ಕಡಿಮೆ ಇದ್ದಾಗ ಗಂಭೀರವಾದ ಕಾಯಿಲೆಗಳಿಗೆ ತುತ್ತಾಗುವ ಸಂಬಂಧ ಹೆಚ್ಚಿರುತ್ತದೆ.
  • ಈ ನೀತಿಯಡಿ CD4 T ಕೋಶಗಳ ಸಂಖ್ಯೆ 400 ಕ್ಕಿಂತ ಕಡಿಮೆ ಇರುವಂತಹರಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುವುದು.
  • ಭಾರತದಲ್ಲಿ ಸುಮಾರು 21 ಲಕ್ಷ ಹೆಚ್ಐವಿ/ಏಡ್ಸ್ ಬಾಧಿತರು ಇರುವುದಾಗಿ ಅಂದಾಜಿಸಲಾಗಿದೆ. ಆದರೆ ಕೇವಲ 14 ಲಕ್ಷ ಜನರನ್ನು ಮಾತ್ರ ಗುರುತಿಸಲಾಗಿದೆ.

ಚೂರು ಪಾರು:

  • CRPF ನೂತನ ಡೈರೆಕ್ಟರ್ ಜನರಲ್ ರಾಜೀವ್ ರಾಯ್ ಭಟ್ನಾಗರ್ ನೇಮಕ: ಐಪಿಎಸ್ ಅಧಿಕಾರಿ ರಾಜೀವ್ ರಾಯ್ ಭಟ್ನಾಗರ್ ಅವರು ಕೇಂದ್ರ ಮೀಸಲು ಪೊಲೀಸ್ ಪಡೆಯ ನೂತನ ಡೈರೆಕ್ಟರ್ ಜನರಲ್ ಆಗಿ ನೇಮಕಗೊಂಡಿದ್ದಾರೆ. ಕೆ. ದುರ್ಗಾ ಪ್ರಸಾದ್ ಅವರು ಫೆಬ್ರವರಿ 28, 2017 ರಂದು ನಿವೃತ್ತರಾದ ದಿನದಿಂದ ಈ ಹುದ್ದೆ ಖಾಲಿ ಉಳಿದಿತ್ತು. ಭಟ್ನಾಗರ್ ಅವರು ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊದ ಡೈರೆಕ್ಟರ್ ಜನರಲ್ ಆಗಿದ್ದಾರೆ.
  • ITBP ಡೈರೆಕ್ಟರ್ ಜನರಲ್ ಆಗಿ ಆರ್.ಕೆ.ಪ್ರಚಂಡ ನೇಮಕ: ಐಪಿಎಸ್ ಅಧಿಕಾರಿ ಆರ್.ಕೆ. ಪ್ರಚಂಡ ಅವರು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ನ ಡೈರೆಕ್ಟರ್ ಜನರಲ್ ಆಗಿ ನೇಮಕಗೊಂಡಿದ್ದಾರೆ. ಪ್ರಚಂಡ ಅವರು 1983ನೇ ಬ್ಯಾಚಿನ ಪಶ್ಚಿಮ ಬಂಗಾಳ ಕೇಡರ್ ನ ಅಧಿಕಾರಿ. ಕೃಷ್ಣಾ ಚೌಧರಿ ಅವರು ಜೂನ್ ತಿಂಗಳ ಕೊನೆಯಲ್ಲಿ ನಿವೃತ್ತರಾಗಲಿದ್ದು, ಅವರ ಸ್ಥಾನವನ್ನು ಪ್ರಚಂಡ ಅವರು ವಹಿಸಿಕೊಳ್ಳಲಿದ್ದಾರೆ.
  • ನಾಗ್ಪುರದಲ್ಲಿ E-taxiಯ ಪ್ರಾಯೋಗಿಕ ಚಾಲನೆ:  ದೇಶದ ಮೊದಲ ಎಲೆಕ್ಟ್ರಿಕ್ ಟ್ಯಾಕ್ಸಿಯ ಪ್ರಯೋಗಾರ್ಥ ಸಂಚಾರ ನಾಗ್ಪುರದಲ್ಲಿ ಮೇ 24 ರಿಂದ ನಡೆಯಲಿದೆ. ನಾಗ್ಪುರ ಮುನಿಸಿಪಾಲ್ ಕಾರ್ಪೋರೇಶನ್ ಪ್ರಾಯೋಜಕತ್ವದಲ್ಲಿ ಇದು ನಡೆಯಲಿದೆ. ಈ ವಿನೂತನ ಕಾರ್ಯಕ್ರಮಕ್ಕೆ ಮಹೀಂದ್ರಾ ಅಂಡ್ ಮಹೀಂದ್ರಾ 200 ಟ್ಯಾಕ್ಸಿಗಳನ್ನು ನೀಡಲಿದೆ.

2 Thoughts to “ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,30,2017”

  1. Mahesh

    April monthaly current update madi sir

  2. Thank you for current affairs update. It helps to my study. Thank you once again to Karunadu exam website.

    Guruprasad Hattigoudar
    http://www.jnanamukhi.blogspot.com

    YouTube channel: Guru Globe

Leave a Comment

This site uses Akismet to reduce spam. Learn how your comment data is processed.