ಬಾಂಗ್ಲದೇಶದ ಸ್ವಾತಂತ್ರ ಹೋರಾಟಗಾರರ ಮಕ್ಕಳಿಗೆ ರೂ 35 ಕೋಟಿ ನೀಡಲಿರುವ ಭಾರತ
ಬಾಂಗ್ಲದೇಶದ ಸ್ವಾತಂತ್ರ ಹೋರಾಟಗಾರರ ಮಕ್ಕಳಿಗೆ “ಮುಕ್ತಿಜೋಧ ವಿದ್ಯಾರ್ಥಿ ವೇತನ”ದಡಿ ರೂ 35 ಕೋಟಿಯನ್ನು ಮುಂದಿನ ಐದು ವರ್ಷಗಳ ಕಾಲ ಭಾರತ ನೀಡಲಿದೆ. ಈ ಯೋಜನೆಯಡಿ ಉನ್ನತ ಮಾಧ್ಯಮಿಕ ವಿದ್ಯಾರ್ಥಿಗಳು ರೂ 15,370 (20000 ಬಾಂಗ್ಲ ಟಕ್ಕ) ವಿದ್ಯಾರ್ಥಿ ವೇತನವನ್ನು ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳು ರೂ 38, 430 (50000 ಟಕ್ಕ) ವಿದ್ಯಾರ್ಥಿ ವೇತನವನ್ನು ಒಂದು ಬಾರಿಗೆ ಪಡೆಯಲಿದ್ದಾರೆ. ಇದರ ಜೊತೆಗೆ ಸ್ವಾತಂತ್ರ ಹೋರಾಟಗಾರರಿಗೆ ವಿಶೇಷ ವಿಸಾ ಸಿಗಲಿದ್ದು,ಇದನ್ನು ಬಳಸಿ ಅನೇಕ ಬಾರಿ ಭಾರತಕ್ಕೆ ಬರಬಹುದಾಗಿದೆ. ಅಷ್ಟೇ ಅಲ್ಲದೆ ಪ್ರತಿ ವರ್ಷ 100 ಸ್ವಾತಂತ್ರ ಹೋರಾಟಗಾರರಿಗೆ ಭಾರತದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ ಸಹ ಸಿಗಲಿದೆ.
ಹಿನ್ನಲೆ:
- ಮುಕ್ತಜೋಧ ಯೋಜನೆಯನ್ನು 2006ರಲ್ಲಿ ಆರಂಭಿಸಲಾಗಿದ್ದು, 1971ರ ಸ್ವಾತಂತ್ರ ಹೋರಾಟಗಾರರ ಅವಲಂಭಿತರನ್ನು ಬೆಂಬಲಿಸುವುದು ಇದರ ಉದ್ದೇಶ. ಇದುವರೆಗೂ ಸುಮಾರು 10,000 ವಿದ್ಯಾರ್ಥಿ ವೇತನವನ್ನು ಯೋಜನೆಯಡಿ ವಿತರಿಸಲಾಗಿದೆ. 1971ರ ಯುದ್ದದಲ್ಲಿ ಪಾಕಿಸ್ತಾನದ ವಿರುದ್ದ ಬಾಂಗ್ಲದೇಶ ಗೆಲುವು ಸಾಧಿಸಲು ಭಾರತ ಮಹತ್ವದ ಪಾತ್ರವಹಿಸಿತ್ತು.
ಇತ್ತೀಚೆಗೆ ಬಾಂಗ್ಲದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು “ಮುಕ್ತಿಜೋಧ ಯೋಜನೆ”ಯಡಿ ಹೆಚ್ಚುವರಿ 10,000 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದಾಗಿ ಘೋಷಿಸಿದ್ದರು. ಹಸೀನಾ ಅವರು ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಉಭಯ ದೇಶಗಳ ನಡುವೆ ರಕ್ಷಣಾ ಕ್ಷೇತ್ರ, ಪರಮಾಣ ಸಹಕಾರ ಸೇರಿದಂತೆ 22 ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು.
ಬಾಂಗ್ಲದೇಶ ಯುದ್ದ ವಿಮೋಚನೆ ಸ್ನೇಹ ಪ್ರಶಸ್ತಿ:
ಬಾಂಗ್ಲದೇಶ ಯುದ್ದದ ವೇಳೆ ಬೆಂಬಲ ನೀಡಿದ ವ್ಯಕ್ತಿ/ಸಂಸ್ಥೆಗಳಿಗೆ ಬಾಂಗ್ಲದೇಶ ಸರ್ಕಾರ ಬಾಂಗ್ಲದೇಶ ಯುದ್ದ ವಿಮೋಚನೆ ಸ್ನೇಹ ಪ್ರಶಸ್ತಿ (ಫ್ರೆಂಡ್ಸ್ ಆಫ್ ಬಾಂಗ್ಲದೇಶ ಲಿಬರೇಷನ್ ವಾರ್ ಆವಾರ್ಡ್) ನೀಡುತ್ತಿದೆ. ಮಾಜಿ ಪ್ರಧಾನಿ ಇಂಗಿರಾ ಗಾಂಧಿ ಅವರು ಈ ಪ್ರಶಸ್ತಿಯನ್ನು ಪಡೆದ ಮೊದಲಿಗರು. ರಾಷ್ಟ್ರಪತಿ ಪ್ರಣಭ್ ಮುಖರ್ಜಿ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ಪ್ರಶಸ್ತಿಯನ್ನು ಪಡೆದ ಇತರರು.
ಮನೆ ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತಂದು ಗ್ರಾಹಕರ ಹಿತ ರಕ್ಷಣೆ ಕಾಯುವ ಸಲುವಾಗಿ ರೂಪಿಸಲಾಗಿರುವ ರಿಯಲ್ ಎಸ್ಟೇಟ್ ಕಾಯಿದೆ-2016 ಮೇ 1 ರಿಂದ ಜಾರಿಗೆ ಬರಲಿದೆ. ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ ಸಾಧ್ಯವಾದಷ್ಟು ಬೇಗ ಕಾಯಿದೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ಭೂಮಿ ರಾಜ್ಯ ಪಟ್ಟಿಯಲ್ಲಿರುವ ವಿಷಯವಾಗಿರುವುದರಿಂದ ರಾಜ್ಯ ಸರ್ಕಾರಗಳ ಅಡಿ ಬರಲಿದೆ.
ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ದಿ) ಕಾಯಿದೆ-2016 ಕಳೆದ ವರ್ಷ ಮಾರ್ಚ್ ನಲ್ಲಿ ಸಂಸತ್ತಿನ ಅನುಮೋದನೆ ಪಡೆದುಕೊಂಡಿತ್ತು. ಕಾಯಿದೆಯ 92 ಸೆಕ್ಷನ್ ನಲ್ಲಿ 59 ಸೆಕ್ಷನ್ ಗಳು ಕಳೆದ ವರ್ಷ ಮೇ 1 ರಿಂದಲೇ ಜಾರಿಗೆ ಬಂದಿವೆ. ಉಳಿದ ಸೆಕ್ಷನ್ ಗಳು ಇದೀಗ ಜಾರಿಗೆ ಬರಲಿವೆ. ಆಂಧ್ರಪ್ರದೇ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ 13 ರಾಜ್ಯಗಳಲ್ಲಿ ಈಗಾಗಲೇ ಈ ಕಾಯಿದೆ ಜಾರಿಗೆ ಬಂದಿದೆ.
ಕಾಯಿದೆಯ ವಿಶಿಷ್ಠತೆ:
- ಯೋಜನೆಯ ಅಥವಾ ಕಾಯಿದೆಯ ಉಲ್ಲಂಘನೆಯಾದರೆ “ಮೇಲ್ಮನವಿ ನ್ಯಾಯಮಂಡಳಿ ಮತ್ತು ನಿಯಂತ್ರಣ ಪ್ರಾಧಿಕಾರದ ಮೊರೆ ಹೋಗಿ ಪರಿಹಾರ ಪಡೆದುಕೊಳ್ಳಬಹುದಾಗಿದೆ.
- ರಿಯಲ್ ಎಸ್ಟೇಟ್ ಏಜೆಂಟ್ ಗಳು ಹಾಗೂ ಗೃಹ ನಿರ್ಮಾಣ ಯೋಜನೆಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು.
- ಗ್ರಾಹಕರಿಂದ ಸಂಗ್ರಹಿಸಿದ ಹಣದ ಶೇ 70ರಷ್ಟನ್ನು ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ಠೇವಣಿಇಡಬೇಕು ಹಾಗೂ ಈ ಮೊತ್ತವನ್ನು ನಿರ್ಮಾಣ ಕೆಲಸಕ್ಕೆ ಮಾತ್ರ ಬಳಸಬೇಕು.
- ಸಕಾಲದಲ್ಲಿ ಯೋಜನೆ ಪೂರ್ಣಗೊಳಿಸುವುದು ಕಡ್ಡಾಯ
- ಯೋಜನೆ ವಿಳಂಬವಾದರೆ, ಕಟ್ಟಡ ನಿರ್ಮಾಣಗಾರರಿಗೆ ದಂಡ ವಿಧಿಸುವ ಅವಕಾಶವನ್ನು ನೀಡಲಾಗಿದೆ.
- ಯೋಜನೆಗಳ ವಿವರ ಮತ್ತು ಪ್ರಗತಿಯನ್ನು ನಿಯಂತ್ರಣ ಸಂಸ್ಥೆಯ ಅಂತರ್ಜಾಲ ತಾಣದಲ್ಲಿ ಪ್ರಕಟಣೆ ಮಾಡುವುದು ಕಡ್ಡಾಯ.
- ಯೋಜನೆ ವಿಳಂಬವಾದರೆ ಖರೀದಿದಾರ ಪಡೆದ ಬ್ಯಾಂಕ್ ಸಾಲದ ತಿಂಗಳ ಬಡ್ಡಿಯನ್ನು ಕಟ್ಟಡ ನಿರ್ಮಾಣಗಾರ ಭರಿಸಬೇಕು.
- ಮೇಲ್ಮನವಿ ನ್ಯಾಯಮಂಡಳಿ ಮತ್ತು ನಿಯಂತ್ರಣ ಪ್ರಾಧಿಕಾರಗಳ ಆದೇಶ ಉಲ್ಲಂಘಿಸಿದರೆ ಡೆವಲಪರ್ಸ್‌ಗೆ 3 ವರ್ಷ ಮತ್ತು ಏಜೆಂಟ್ ಹಾಗೂ ಖರೀದಿದಾರರಿಗೆ 1 ವರ್ಷ ಜೈಲು ಶಿಕ್ಷೆ
- ರಾಜ್ಯಗಳು ಕಡ್ಡಾಯವಾಗಿ ಪ್ರಾಧಿಕಾರ ರಚಿಸಬೇಕು.
ಮಹತ್ವ:
ರಿಯಲ್ ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ತರುವಲ್ಲಿ ಕಾಯಿದೆ ಮಹತ್ವದ ಪಾತ್ರವಹಿಸಲಿದೆ. ‘ಕಾಯ್ದೆಯು ರಿಯಲ್ ಎಸ್ಟೇಟ್ ವಹಿವಾಟಿನ ವಿಶ್ವಾಸಾರ್ಹತೆ, ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಿಸಲಿದೆ. ಖರೀದಿದಾರ ಮತ್ತು ಗೃಹ ನಿರ್ಮಾಣ ವಸತಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಕಟ್ಟಡ ನಿರ್ಮಾಣಗಾರರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ವ್ಯಾಖ್ಯಾನಿಸಲಿದೆ’. ರಿಯಲ್ ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆ ಹೆಚ್ಚಿಸಲಿರುವ ಕಾಯ್ದೆಯು, ದೇಶಿ ಮತ್ತು ವಿದೇಶಿ ಹೂಡಿಕೆದಾರರ ಆತ್ಮವಿಶ್ವಾಸ ಹೆಚ್ಚಿಸಲಿದೆ.
ರೈತರಿಗಾಗಿ ಸ್ವಯಂಚಾಲಿತ ಹವಾಮಾನ ಘಟಕಗಳನ್ನು ಸ್ಥಾಪಿಸಿದ ಮಹಾರಾಷ್ಟ್ರ
ಮಹಾರಾಷ್ಟ್ರದ ಮೊದಲ ಸ್ವಯಂಚಾಲಿತ ಹವಾಮಾನ ಘಟಕವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನಾಗ್ಪುರದ ಡೊಂಗಾರ್ಗೌನಲ್ಲಿ ಉದ್ಘಾಟಿಸಿದರು. ಇಂತಹದೇ ಮಾದರಿಯ ಸುಮಾರು 2,065 ಘಟಕಗಳನ್ನು ಸರ್ಕಾರಿ-ಖಾಸಗಿ ಪಾಲುದಾರಿಕೆಯಡಿ ಮಹಾರಾಷ್ಟ್ರ ಸರ್ಕಾರ ಈ ವರ್ಷದಲ್ಲಿ ನಿರ್ಮಿಸಲು ನಿರ್ಧರಿಸಿದೆ. ಮುಂದಿನ ವರ್ಷದಲ್ಲಿ 1000 ಘಟಕಗಳನ್ನು ಸ್ಥಾಪಿಸಲಾಗುವುದು. ಗಾಳಿಯ ವೇಗ, ದಿಕ್ಕು, ಉಷ್ಣತೆ, ಸಾಪೇಕ್ಷ ಆರ್ದ್ರತೆ ಮತ್ತು ಮಳೆ ಪ್ರಮಾಣಗಳನ್ನು ಅಳತೆ ಮಾಡಲು ಈ ಘಟಕಗಳು ಸಹಕಾರಿಯಾಗಲಿವೆ.
ಈ ಘಟಕಗಳು ಸಂಗ್ರಹಿಸುವ ಮಾಹಿತಿಯನ್ನು ಮಹಾರಾಷ್ಟ್ರ ಕೃಷಿ ಹವಾಮಾನ ಮಾಹಿತಿ ಜಾಲದಲ್ಲಿ ಅಳವಡಿಸುವ ಮೂಲಕ ರೈತರಿಗೆ ತಲುಪಿಸಲಾಗುವುದು. ಇದರ ಜೊತೆಗೆ ಮೊಬೈಲ್ ಅಪ್ಲಿಕೇಶನ್ ಸ್ಕೈಮೆಟ್ ನಲ್ಲೂ ಸಹ ಮಾಹಿತಿಯನ್ನು ರವಾನಿಸಲಾಗುವುದು.
ಉಪಯೋಗ:
- ಸರಿಯಾದ ಸಮಯದಲ್ಲಿ ಹವಾಮಾನದ ಬಗ್ಗೆ ರೈತರಿಗೆ ಮಾಹಿತಿ ದೊರೆಯುವುದರಿಂದ ಹವಾಮಾನಕ್ಕೆ ತಕ್ಕಂತೆ ರೈತರು ಕೃಷಿ ಚಟುವಟಿಕೆಯನ್ನು ಕೈಗೊಳ್ಳಬಹುದಾಗಿದೆ.
- ಐಎಂಡಿ ಹವಾಮಾನ ವರದಿ ಕೇವಲ ನಾಲ್ಕು ವಲಯಕ್ಕೆ ಸೀಮಿತ ಆಗಿದೆ. ಆದರೆ ಈ ಘಟಕಗಳು ತಾಲ್ಲೂಕು ಮಟ್ಟದಲ್ಲಿ ಮಾಹಿತಿಯನ್ನು ನೀಡಲಿವೆ.
ರಫೆಲ್ ನಡಾಲ್ ಮಡಿಲಿಗೆ ಬಾರ್ಸಿಲೋನಾ ಓಪನ್ ಪ್ರಶಸ್ತಿ
ಸ್ಪೇನ್ ನ ರಫೆಲ್ ನಡಾಲ್ ಅವರು ಬಾರ್ಸಿಲೋನಾ ಓಪನ್‌ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು. ರಫೆಲ್ ಅವರಿಗಿದು 10ನೇ ಪ್ರಶಸ್ತಿ ಆಗಿದೆ. ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಸ್ಪೇನ್‌ನ ನಡಾಲ್ 6–4, 6–1ರಲ್ಲಿ ನೇರ ಸೆಟ್‌ಗಳಿಂದ ಆಸ್ಟ್ರಿಯಾದ ಡಾಮ್ನಿಕ್ ಥೀಮ್ ಅವರನ್ನು ಸೋಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು.
- 2005ರಿಂದ 2009 ಹಾಗೂ 2011ರಿಂದ 2013ರ ವರೆಗೆ ಹಾಗೂ ಈಗ 2016 ಮತ್ತು 2017ರಲ್ಲಿ ನಡಾಲ್ ಸತತವಾಗಿ ಇಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
- ಕಳೆದ ವಾರ ಮಾಂಟೆ ಕಾರ್ಲೊ ಮಾಸ್ಟರ್ಸ್‌ನಲ್ಲಿ ನಡಾಲ್ ಅವರು ಪ್ರಶಸ್ತಿ ಗೆದ್ದಿದ್ದರು.
ಏಷ್ಯನ್ ಸ್ಕ್ವಾಷ್ ಟೂರ್ನಿ: ಜೋಷ್ನಾ ಚಿಣ್ಣಪ್ಪ ಐತಿಹಾಸಿಕ ಸಾಧನೆ
ಜೋಷ್ನಾ ಚಿಣ್ಣಪ್ಪ ಅವರು ಏಷ್ಯನ್ ಸ್ಕ್ವಾಷ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ಮಾಡಿದ್ದಾರೆ. ಏಷ್ಯನ್ ಸ್ಕ್ವಾಷ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಸ್ಪರ್ಧಿ ಎಂಬ ಶ್ರೇಯ ಅವರ ಪಾಲಾಯಿತು.
- ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಜೋಷ್ನಾ 13–15, 12–10, 11–13, 11–4, 14ರಲ್ಲಿ ಭಾರತದವರೇ ಆದ ದೀಪಿಕಾ ಪಳ್ಳಿಕಲ್ ಅವರನ್ನು ಸೋಲಿಸಿದರು.
- ಇದೇ ಮೊದಲ ಬಾರಿಗೆ ಈ ಇಬ್ಬರು ಆಟಗಾರ್ತಿಯರು ಈ ಟೂರ್ನಿ ಯಲ್ಲಿ ಫೈನಲ್ ಆಡಿರುವುದು ವಿಶೇಷ.
- ವಿಶ್ವ ಶ್ರೇಯಾಂಕದಲ್ಲಿ ಜೋಷ್ನಾ ಅವರು 14ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
- ಘೋಷಾಲ್‌ಗೆ ಸೋಲು: ಸೌರವ್ ಘೋಷಾಲ್ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ 11–5, 4–11, 8–11, 7–11ರಲ್ಲಿ ಅಗ್ರಶ್ರೇಯಾಂಕದ ಆಟಗಾರ ಮ್ಯಾಕ್ಸ್ ಲೀ ಅವರಿಗೆ ಮಣಿದರು.
- ಐಜ್ವಾಲ್ ತಂಡಕ್ಕೆ ಐಲೀಗ್ ಪುಟ್ಬಾಲ್ ಕಿರೀಟ: ಪ್ರತಿಷ್ಠಿತ ಐಲೀಗ್ ಫುಟ್‌ಬಾಲ್ ಟೂರ್ನಿಯ ಕಿರೀಟವನ್ನು ಐಜ್ವಾಲ್ ತಂಡ ಮುಡಿಗೇರಿಸಿಕೊಂಡಿದೆ. ಶಿಲ್ಲಾಂಗ್ ಲಜಾಂಗ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಐಜ್ವಾಲ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಆ ಮೂಲಕ ಐಲೀಗ್ ಪುಟ್ಬಾಲ್ ಕಿರೀಟವನ್ನು ಗೆದ್ದುಕೊಂಡ ಈಶಾನ್ಯ ಭಾಗದ ಮೊದಲ ಪುಟ್ಬಾಲ್ ತಂಡ ಇದಾಗಿದೆ.
- ತಲ್ಲಹಸ್ಸಿ ಚಾಲೆಂಜರ್ ಟೆನಿಸ್ ಟೂರ್ನಿ ಫೇಸ್ ಜೋಡಿಗೆ ಪ್ರಶಸ್ತಿ: ಭಾರತದ ಲಿಯಾಂಡರ್ ಪೇಸ್ ಹಾಗೂ ಅಮೆರಿಕದ ಸ್ಕಾಟ್ ಲಿಪ್ಸಿಕಿ ಅವರ ಜೋಡಿಯು ತಲ್ಲಹಸ್ಸಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಪೇಸ್ ಈ ಋತುವಿನಲ್ಲಿ ಗೆದ್ದುಕೊಂಡ ಎರಡನೇ ಚಾಲೆಂಜರ್ ಪ್ರಶಸ್ತಿ ಇದಾಗಿದೆ. ಈ ಮೊದಲು ಅದಿಲ್ ಶಮಸ್‌ಡಿನ್ ಅವರೊಂದಿಗೆ ಲಿಯೊನ್ ಚಾಲೆಂಜರ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಅಗ್ರಗಣ್ಯ ಜೋಡಿ ಪೇಸ್ ಹಾಗೂ ಸ್ಕಾಟ್ ಪುರುಷರ ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ 4–6, 7–6, 10–7ರಲ್ಲಿ ಅರ್ಜೆಂಟೀನಾದ ಮೂರನೇ ಶ್ರೇಯಾಂಕದ ಲಿಯನಾರ್ಡೊ ಮಯರ್ ಮತ್ತು ಮ್ಯಾಕ್ಸಿಮೊ ಗೊಂಜಲೆಜ್ ಅವರನ್ನು ಮಣಿಸಿದೆ.