ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ರವರಿಗೆ USIBC ಪ್ರಶಸ್ತಿ
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಪ್ರತಿಷ್ಠಿತ ಯುಎಸ್-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ (USIBC)ನ ಪರಿವರ್ತನ ಮುಖ್ಯಮಂತ್ರಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಭಾರತ ಮತ್ತು ಅಮೆರಿಕ ಪಾಲುದಾರಿಕೆ ಸಂಬಂಧವನ್ನು ಸುಧಾರಿಸುವಲ್ಲಿ ಶ್ರಮಿಸಿದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಮೇ 8 ರಂದು ಸಿಲಿಕಾನ್ ವ್ಯಾಲಿಯಲ್ಲಿ ನಡೆಯಲಿರುವ USIBC ವೆಸ್ಟ್ ಕೋಸ್ಟ್ ಶೃಂಗಸಭೆಯಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು. ಈ ಶೃಂಗಸಭೆಯಲ್ಲಿ ಭಾರತದ ಅಧಿಕಾರಿಗಳು ಸೇರಿದಂತೆ ಮಾಹಿತಿ ಮತ್ತು ತಂತ್ರಜ್ಞಾನ, ಆಹಾರ ಸಂಸ್ಕರಣೆ, ಆರೋಗ್ಯ, ಸ್ವಚ್ಚ ಇಂಧನ, ಡಿಜಿಟಲ್ ವ್ಯವಹಾರ ಹಾಗೂ ಇನ್ನಿತರ 150 ಕೈಗಾರಿಕೆ ವಲಯಗಳ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಇದಲ್ಲದೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅರುಣ ಸುಂದರರಾಜನ್ ಅವರಿಗೆ ಪರಿವರ್ತನ ನಾಯಕತ್ವ ಪ್ರಶಸ್ತಿಯನ್ನು ನೀಡಲಾಗುವುದು. ಕಳೆದ ವರ್ಷ ನೀತಿ ಆಯೋಗದ ಸಿಇಓ ಅಮಿತಾಬ್ ಕಾಂತ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿತ್ತು.
USIBC:
ಅಮೆರಿಕ ಮತ್ತು ಭಾರತದಲ್ಲಿ ವ್ಯವಹಾರ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ಸಲುವಾಗಿ USIBC ಯನ್ನು 1975ರಲ್ಲಿ ಸ್ಥಾಪಿಸಲಾಗಿದೆ. ಉಭಯ ರಾಷ್ಟ್ರಗಳ ನಡುವೆ ವ್ಯಾಪಾರ ಮತ್ತು ಬಂಡವಾಳವನ್ನು ಪ್ರೋತ್ಸಾಹಿಸುವಲ್ಲಿ ಈ ಸಂಸ್ಥೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತದ ಪ್ರಮುಖ ವ್ಯಾಪಾರ ಒಕ್ಕೂಟಗಳಾದ ಫಿಕ್ಕಿ, ಸಿಐಐ ಮತ್ತು ನಾಸ್ಕಾಂನೊಂದಿಗೆ ಪಾಲುದಾರಿಕೆ ಹೊಂದುವ ಮೂಲಕ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಮಾಸ್ಟರ್ ಕಾರ್ಡ್ ನ ಸಿಇಓ ಮತ್ತು ಅಧ್ಯಕ್ಷ ಅಜಯ್ ಬಂಗ ಅವರು USIBC ನ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.
ಮೈಕ್ರೋಸಾಫ್ಟ್ ವಿನ್ಯಾಸದ ಸ್ವಂತ ಬರಹ ಶೈಲಿ ಹೊಂದಿದ ಮೊದಲ ನಗರ
ಮೈಕ್ರೋಸಾಫ್ಟ್ ವಿನ್ಯಾಸದ ಸ್ವಂತ ಬರಹ ಶೈಲಿಯನ್ನು ಹೊಂದಿರುವ ವಿಶ್ವದ ಮೊದಲ ನಗರ ಎಂಬ ಹೆಗ್ಗಳಿಕೆಗೆ ದುಬೈ ಪಾತ್ರವಾಗಿದೆ. ಅರೇಬಿಕ್ ಮತ್ತು ಲ್ಯಾಟಿನ್ ಲಿಫಿಯನ್ನು ಈ ಬರಹ ಹೊಂದಿರಲಿದೆ. ಆಫ್ರಿಕಾನ್ಸ್, ಅರೇಬಿಕ್, ಬ್ರಿಟನಿಕ್ ಸೇರಿದಂತೆ 23 ಭಾಷೆಗಳಲ್ಲಿ ಈ ಬರಹ ಶೈಲಿ ದೊರೆಯಲಿದೆ. ದುಬೈ ದೊರೆ ಶೇಖ್ ಹಮ್ದನ್ ಬಿನ್ ಮೊಹಮ್ಮದ್ ಬಿನ್ ರಷೀದ್ ಅಲ್ ಮಕ್ಟೌಮ್ ಅವರು ಈ ಬರಹ ಶೈಲಿಗೆ ಚಾಲನೆ ನೀಡಿದರು. ದುಬೈನ ಎಲ್ಲಾ ಸರ್ಕಾರಿ ಸಂಸ್ಥೆಗಳು ಹಾಗೂ ಸುಮಾರು 100ಮಿಲಿಯನ್ ಸಂಸ್ಥೆಗಳು ಈ ಬರಹ ಶೈಲಿಯನ್ನು ಬಳಸಲಿವೆ.
ದುಬೈ ನಗರ:
- ಯುನೈಟೆಡ್ ಅರಬ್ ಎಮಿರೆಟ್ಸ್ ನಲ್ಲಿ ಅತಿ ದೊಡ್ಡ ನಗರ ದುಬೈ.
- ವಿಶ್ವ ಅತಿದೊಡ್ಡ ಕಟ್ಟಡ “ಬುರ್ಜ್ ಖಲೀಫ” ದುಬೈನಲ್ಲಿದೆ.
ಸ್ವಚ್ಚ ನಗರ ಪಟ್ಟಿ: ಇಂಧೋರ್ ಗೆ ಪ್ರಥಮ ಸ್ಥಾನ
ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ-2017 ವರದಿಯನ್ನು ಕೇಂದ್ರ ನಗರ ಅಭಿವೃದ್ದಿ ಸಚಿವ ವೆಂಕಯ್ಯ ನಾಯ್ಡು ಅವರು ಬಿಡುಗಡೆಗೊಳಿಸಿದ್ದಾರೆ. ಸಮೀಕ್ಷೆಯಲ್ಲಿ ಇಂಧೋರ್ ದೇಶದ ಅತ್ಯಂತ ಸ್ವಚ್ಚ ನಗರ ಎಂಬ ಖ್ಯಾತಿಗೆ ಪಾತ್ರವಾಗಿದ್ದರೆ, ಉತ್ತರ ಪ್ರದೇಶದ ಗೊಂಡ ದೇಶದ ಕೊಳಕು ನಗರ ಎನಿಸಿದೆ. ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ 434 ನಗರಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಕಳೆದ ವರ್ಷ ಸಮೀಕ್ಷೆಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ 73 ನಗರಗಳಲ್ಲಿ ಮಾತ್ರ ಸಮೀಕ್ಷೆ ನಡೆಸಲಾಗಿತ್ತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿದ ಕಾರಣ ಪಶ್ಚಿಮ ಬಂಗಾಳದ ಪಟ್ಟಣ ಹಾಗೂ ನಗರಗಳನ್ನು ಸಮೀಕ್ಷೆಗೆ ಒಳಪಡಿಸಿರಲಿಲ್ಲ.
ರಾಜ್ಯ ಪ್ರಮುಖಾಂಶಗಳು:
- ಕರ್ನಾಟಕದ ಒಟ್ಟು 27 ನಗರ/ಟೌನ್ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಸ್ವಚ್ಛ ನಗರಗಳ ಟಾಪ್ 50ರ ಪಟ್ಟಿಯಲ್ಲಿ ಕರ್ನಾಟಕದ ಮೈಸೂರು ಮಾತ್ರ ಸ್ಥಾನ ಪಡೆದಿದೆ. 2016ರಲ್ಲಿ 38ನೇ ಸ್ಥಾನದಲ್ಲಿದ್ದ ಬೆಂಗಳೂರು 210ಕ್ಕೆ ತೃಪ್ತಿಪಟ್ಟಿಕೊಂಡಿದೆ.
- 54 ನೇ ಸ್ಥಾನದಲ್ಲಿದ್ದ ಹುಬ್ಬಳ್ಳಿ–ಧಾರವಾಡ 199ಕ್ಕೆ ಇಳಿದಿದ್ದರೆ ಮಂಗಳೂರು 63ರಲ್ಲಿ ಕಾಣಿಸಿಕೊಂಡಿದೆ.
ರಾಜ್ಯದ ಟಾಪ್ ಹತ್ತು ಸ್ವಚ್ಛ ನಗರಗಳು:
ಮೈಸೂರು(5ನೇಸ್ಥಾನ) ಮಂಗಳೂರು(63), ಉಡುಪಿ(143), ಶಿವಮೊಗ್ಗ(147), ಮಂಡ್ಯ (148), ತುಮಕೂರು(152), ಗದಗ–ಬೆಟಗೇರಿ(167), ಹುಬ್ಬಳ್ಳಿ–ಧಾರವಾಡ(199), ಬಾಗಲಕೋಟೆ(203), ಬೆಂಗಳೂರು(210).
ಟಾಪ್ ಹತ್ತು ಸ್ವಚ್ಚ ನಗರಗಳು:
ಇಂಧೋರ್ (1), ಭೋಪಾಲ್ (2), ವಿಶಾಖಪಟ್ಟಣ (3), ಸೂರತ್ (4), ಮೈಸೂರು (5), ತಿರುಚರಪಲ್ಲಿ (6), ನವ ದೆಹಲಿ ಮುನಿಸಿಪಲ್ ಕೌನ್ಸಿಲ್ (7), ಮುಂಬೈ (8), ತಿರುಪತಿ (9) ಮತ್ತು ವಡೊದರ (10).
ಕೊನೆಯ ಹತ್ತು ಸ್ಥಾನ ಪಡೆದಿರುವ ನಗರಗಳು(434–424):
ಗೊಂಡಾ(ಉತ್ತರ ಪ್ರದೇಶ)(434), ಭುಸವಾಲ್(ಮಹಾರಾಷ್ಟ್ರ), ಬಗಹಾ(ಬಿಹಾರ), ಹರದೋಯಿ(ಉತ್ತರಾಖಂಡ), ಕಟಿಹಾರ್(ಬಿಹಾರ), ಬಹರಾಯಿಚ್(ಉತ್ತರ ಪ್ರದೇಶ) ಮುಕ್ತ್‌ಸರ್(ಪಂಜಾಬ್), ಅಬೋಹರ್(ಪಂಜಾಬ್), ಷಹಜಹಾನ್‌ಪುರ್(ಉತ್ತರ ಪ್ರದೇಶ), ಖುರ್ಜಾ(ಉತ್ತರ ಪ್ರದೇಶ).
ಅಗ್ನಿ-II ಖಂಡಾಂತರ ಕ್ಷಿಪಣಿ ಯಶಸ್ವಿ ಪರೀಕ್ಷಾರ್ಥ ಉಡಾವಣೆ
ಅಗ್ನಿ-II ಖಂಡಾಂತರ ಕ್ಷಿಪಣಿಯನ್ನು ಒಡಿಶಾದ ಧಮರದ ಎ.ಪಿ.ಜೆ.ಅಬ್ದುಲ್ ಕಲಾಂ ದ್ವೀಪದಲ್ಲಿ ಯಶಸ್ವಿ ಪರೀಕ್ಷಾರ್ಥ ಉಡಾವಣೆ ನಡೆಸಲಾಯಿತು. ಈ ದ್ವೀಪಕ್ಕೆ ಹಿಂದೆ ವೀಲರ್ಸ್ ದ್ವೀಪ ಎಂದು ಹೆಸರಿತ್ತು.
- ಅಗ್ನಿ-II ಕ್ಷಿಪಣಿ ಪರಮಾಣು ಶಸ್ತಾಸ್ತ್ರವಾಗಿದ್ದಯ, 2,000 ಕಿಲೋ ಮೀಟರ್ ವ್ಯಾಪ್ತಿ ಶ್ರೇಣಿಯನ್ನು ಹೊಂದಿದೆ.
- 20 ಮೀಟರ್ ಉದ್ದದ ಅಗ್ನಿ-2 ಕ್ಷಿಪಣಿ ಎರಡು ಹಂತದ ಘನ ಬ್ಯಾಲಿಸ್ಟಿಕ್ ಕ್ಷಿಪಣಿ ಚಾಲಿತವನ್ನು ಒಳಗೊಂಡಿದೆ. ಉಡಾವಣೆ ಸಂದರ್ಭದಲ್ಲಿ 17 ಟನ್ ತೂಕವನ್ನು ಹೊಂದಿದ್ದು 1000 ಕೆಜಿ ಭಾರವನ್ನು 2,000 ಕಿಲೋ ಮೀಟರ್ ವರೆಗೆ ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.
- ಅಗ್ನಿ ಸರಣಿ ಕ್ಷಿಪಣಿಗಳನ್ನು ಡಿಆರ್ ಡಿಒ ಅಭಿವೃದ್ಧಿಪಡಿಸಿದ್ದು ಪರಮಾಣು ಶಸ್ತ್ರಸಜ್ಜಿತ ನೆರೆ ರಾಷ್ಟ್ರಗಳ ವಿರುದ್ಧ ಭಾರತದ ಅತ್ಯಂತ ಅತ್ಯಾಧುನಿಕ ಶಸ್ತ್ರಾಸ್ತ್ರವಾಗಿದೆ.
- ರಸ್ತೆ ಮತ್ತು ರೈಲು ಮೊಬೈಲ್ ಉಡಾವಣ ವಾಹಕಗಳ ಮೂಲಕ ಅಗ್ನಿ-II ಕ್ಷಿಪಣಿಯನ್ನು ಉಡಾಯಿಸಬಹುದಾಗಿದೆ.
ಅಬ್ದುಲ್ ಕಲಾಂ ದ್ವೀಪ:
ಅಬ್ದುಲ್ ಕಲಾಂ ದ್ವೀಪ ಪ್ರದೇಶ ಓಡಿಶಾದಲ್ಲಿದೆ. ಓಡಿಶಾದ ಭದ್ರಕ್ ಜಿಲ್ಲೆಯಲ್ಲಿರುವ ವೀಲ್ಹರ್ ದ್ವೀಪ ಪ್ರದೇಶವನ್ನು ಅಬ್ದುಲ್ ಕಲಾಂ ದ್ವೀಪ ಪ್ರದೇಶವೆಂದು ಮರು ನಾಮಕರಣ ಮಾಡಲಾಗಿದೆ. ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರವರ ಸ್ಮರಣಾರ್ಥ ಅವರ ಹೆಸರನ್ನು ಈ ದ್ವೀಪ ಪ್ರದೇಶಕ್ಕೆ ಇಡಲಾಗಿದೆ. ಮರು ನಾಮಕರಣಕ್ಕೆ ಮುಂಚೆ ಇಂಗ್ಲೀಷ್ ಕಮಾಡೆಂಟ್ ಲೆಫ್ಟಿನೆಂಟ್ ವೀಲ್ಹರ್ ಹೆಸರಿನಿಂದ ಕರೆಯಲಾಗುತ್ತಿತ್ತು