ಪುಣೆಯಲ್ಲಿ ಭಾರತದ ಮೊದಲ ಜೈವಿಕ ಶುದ್ದೀಕರಣ ಘಟಕ
ದೇಶದ ಮೊದಲ ಸಮಗ್ರ ಜೈವಿಕ ಶುದ್ದೀಕರಣ ಘಟಕವನ್ನು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಶಿಪ್ಪಿಂಗ್ ಖಾತೆ ಸಚಿವ ನಿತಿನ್ ಗಡ್ಕರಿರವರು ಉದ್ಘಾಟಿಸಿದರು. ಈ ಘಟಕದಲ್ಲಿ ನವೀಕರಿಸಬಹುದಾದ ಇಂಧನ ಮತ್ತು ರಾಸಾಯನಿಕಗಳನ್ನು ಶುದ್ದೀಕರಿಸಿ ವಿವಿಧ ಬಗೆಯ ಜೈವಿಕ ತ್ಯಾಜ್ಯಗಳಿಂದ ಎಥೆನಾಲ್ ಉತ್ಪಾದಿಸಬಹುದಾಗಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ರಾಹು ಎಂಬಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದೆ. ಪ್ರಜ್ ಇಂಡಸ್ಟ್ರೀಸ್ ಈ ಪ್ರಾಯೋಗಿಕ ಘಟಕವನ್ನು ಅಭಿವೃದ್ದಿಪಡಿಸಿದೆ.
- ಒಂದು ಮಿಲಿಯನ್ ಲೀಟರ್ ಎಥನಾಲ್ ಉತ್ಪಾದಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ.
- ಭತ್ತ ಮತ್ತು ಗೋಧಿಯ ಹುಲ್ಲು, ಹತ್ತಿಯ ಕಾಂಢ, ಕಬ್ಬಿನ ತ್ಯಾಜ್ಯ ಮುಂತಾದ ಜೈವಿಕ ತ್ಯಾಜ್ಯಗಳನ್ನು ಬಳಸಿ ಎಥೆನಾಲ್ ತಯಾರಿಸಬಹುದು.
ಎಥೆನಾಲ್:
ಎಥೆನಾಲ್ ಕಡಿಮೆ ವೆಚ್ಚದ ಹಾಗೂ ಮಾಲಿನ್ಯ ಮುಕ್ತ ಇಂಧನವಾಗಿದೆ. ಎಥೆನಾಲ್ ಅನ್ನು ಪೆಟ್ರೋಲ್ ನೊಂದಿಗೆ ಮಿಶ್ರಣ ಮಾಡಿ ಅನೇಕ ರಾಷ್ಟ್ರಗಳಲ್ಲಿ ಬಳಸಲಾಗುತ್ತಿದೆ. ಪರಿಸರ ಮಾಲಿನ್ಯ ತಡೆಯುವ ಸಲುವಾಗಿ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಎಥೆನಾಲ್ ಮಿಶ್ರಿತ ಇಂಧನ ಬಳಕೆ ಒತ್ತುನೀಡಲಾಗುತ್ತಿದೆ.
ಭಾರತೀಯ ಮೂಲದ ಮೂವರು ವಿಜ್ಞಾನಿಗಳಿಗೆ ಯುಕೆ ರಾಯಲ್ ಸೊಸೈಟಿ ಫೆಲೋಶಿಪ್ ಗೌರವ
ಬ್ರಿಟನ್ನಿನ ಪ್ರತಿಷ್ಠಿತ ವಿಜ್ಞಾನ ಸಂಸ್ಥೆ “ದಿ ರಾಯಲ್ ಸೊಸೈಟಿ”ಯ ಫೆಲೋ ಗೌರವಕ್ಕೆ ಭಾರತೀಯ ಮೂಲದ ಮೂವರು ವಿಜ್ಞಾನಿಗಳನ್ನು ಆಯ್ಕೆಮಾಡಲಾಗಿದೆ. ಯುಕೆ ಅಥವಾ ಕಾಮನ್ ವೆಲ್ತ್ ರಾಷ್ಟ್ರಗಳಲ್ಲಿ ನೆಲೆಸಿರುವ ಅಥವಾ ಕಾರ್ಯನಿರ್ವಹಿಸುತ್ತಿದ್ದು, ವಿಜ್ಞಾನ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡುವ ಎಂಜನಿಯರ್ ಗಳು, ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳಿಗೆ ಪ್ರತಿ ವರ್ಷ ಈ ಗೌರವವನ್ನು ನೀಡಲಾಗುವುದು.
ಕೃಷ್ಣ ಚಟರ್ಜಿ: ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕೃಷ್ಣ ಚಟರ್ಜಿ ಅವರು ಥೈರಾಯಿಡ್ ಗ್ರಂಥಿ ರಚನೆಯ ಆನುವಂಶಿಕ ಅಸ್ವಸ್ಥತೆಗಳು, ಹಾರ್ಮೋನ್ ಸಂಶ್ಲೇಷಣೆ ಮತ್ತು ಹಾರ್ಮೋನು ಕ್ರಿಯೆಯ ನಿಯಂತ್ರಣಕ್ಕಾಗಿ ನಡೆಸಿದ ಸಂಶೋಧನೆಗೆ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಚಟರ್ಜಿ ಅವರು ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಕ್ಲಿನಿಕಲ್ ರಿಸರ್ಚ್ ಸೌಲಭ್ಯಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಸುಭಾಷ್ ಖೋಟ್: ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ಸುಭಾಷ್ ಖೊಟ್ ಸೈದ್ಧಾಂತಿಕ ಕಂಪ್ಯೂಟರ್ ವಿಜ್ಞಾನಿಯಾಗಿದ್ದು, ಅವರು “ವಿಶಿಷ್ಟ ಆಟಗಳ (Unique Games)” ಸಮಸ್ಯೆಯ ವ್ಯಾಖ್ಯಾನಕ್ಕಾಗಿ ಹೆಸರುವಾಸಿಯಾಗಿದ್ದಾರೆ.
ಯದ್ವಿಂದರ್ ಮಲ್ಹಿ: ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಯದ್ವಿಂದರ್ ಮಲ್ಹಿ ಪರಿಸರವಿಜ್ಞಾನಿಯಾಗಿದ್ದು, ಭೂಮಿಯ ಪರಿಸರ ವ್ಯವಸ್ಥೆಗಳ ಕಾರ್ಯಚಟುವಟಿಕೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದರಿಂದಾಗುವ ಹವಾಮಾನ ಬದಲಾವಣೆ, ಪ್ರಾಣಿಗಳ ಅವನತಿ ಬಗ್ಗೆ ನಡೆಸಿದ ಸಂಶೋಧನೆಗೆ ಈ ಗೌರವ ಲಭಿಸಿದೆ.
ರಾಯಲ್ ಸೊಸೈಟಿ:
ರಾಯಲ್ ಸೊಸೈಟಿ ವಿಜ್ಞಾನ, ಔಷಧ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳ ಎಲ್ಲ ಕ್ಷೇತ್ರಗಳಿಂದ ಪಡೆದ ವಿಶ್ವದ ಅತ್ಯಂತ ವಿಶೇಷವಾದ ವಿಜ್ಞಾನಿಗಳ ಸ್ವಯಂ ಆಡಳಿತ ಫೆಲೋಶಿಪ್ ಸಂಸ್ಥೆ. ಇದು ವಿಶ್ವದ ಅತ್ಯಂತ ಹಳೆಯ ವೈಜ್ಞಾನಿಕ ಅಕಾಡೆಮಿಯಾಗಿದೆ ಮತ್ತು ಇದನ್ನು 1660 ರಲ್ಲಿ ಸ್ಥಾಪಿಸಲಾಯಿತು. ವಿಜ್ಞಾನದಲ್ಲಿ ಶ್ರೇಷ್ಠತೆಯನ್ನು ಗುರುತಿಸುವುದು, ಬೆಂಬಲಿಸುವುದು ಮತ್ತು ಉತ್ತೇಜಿಸುವುದು ಮತ್ತು ಮಾನವೀಯತೆಯ ಪ್ರಯೋಜನಕ್ಕಾಗಿ ವಿಜ್ಞಾನದ ಅಭಿವೃದ್ಧಿಯನ್ನು ಮತ್ತು ಬಳಕೆಯನ್ನು ಪ್ರೋತ್ಸಾಹಿಸುವುದು ಇದರ ಗುರಿಯಾಗಿದೆ. ರಾಯಲ್ ಸೊಸೈಟಿ ಪ್ರತಿವರ್ಷ ಹೊಸ ಫೆಲೋಗಳು ಮತ್ತು ವಿದೇಶಿ ಸದಸ್ಯರನ್ನು ಆಯ್ಕೆ ಮಾಡುತ್ತದೆ, ಇವರು ಎಂಜಿನಿಯರಿಂಗ್ ವಿಜ್ಞಾನ, ಗಣಿತ ಮತ್ತು ವೈದ್ಯಕೀಯ ವಿಜ್ಞಾನ ಸೇರಿದಂತೆ ನೈಸರ್ಗಿಕ ಜ್ಞಾನದ ಸುಧಾರಣೆಗೆ ಗಣನೀಯ ಕೊಡುಗೆ ನೀಡಿದ್ದಾರೆ. ಅದರ ಅಡಿಪಾಯದಿಂದ ಸುಮಾರು 8,000 ಫೆಲೋಗಳನ್ನು ಆಯ್ಕೆ ಮಾಡಲಾಗಿದೆ. 1841 ರಲ್ಲಿ ಎಂಜಿನಿಯರ್ ಅರ್ಡಸೇರ್ ಕರ್ಸೆಟ್ಜಿಯವರು ಆಯ್ಕೆಯಾದ ಮೊದಲ ಭಾರತೀಯ ಮತ್ತು ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮನುಜನ್, 1918 ರಲ್ಲಿ ಸೊಸೈಟಿಗೆ ಆಯ್ಕೆಯಾದ ಎರಡನೇ ಭಾರತೀಯ.
UN-Habitat ಅಧ್ಯಕ್ಷ ಸ್ಥಾನಕ್ಕೆ ಭಾರತ ಆಯ್ಕೆ
ವಿಶ್ವಸಂಸ್ಥೆ-ಆವಾಸಸ್ಥಾನ ಅಧ್ಯಕ್ಷ ಸ್ಥಾನಕ್ಕೆ ಭಾರತ ಅವಿರೋಧವಾಗಿ ಆಯ್ಕೆಯಾಗಿದೆ. UN-Habitat ವಿಶ್ವಸಂಸ್ಥೆ ಸಂಘಟನೆಯ ಅಂಗಸಂಸ್ಥೆ (UNO)ಯಾಗಿದ್ದು, ವಿಶ್ವಸಂಸ್ಥೆಯ ಸಾಮಾನ್ಯ ಮಂಡಳಿಗೆ ವರದಿ ಮಾಡಿಕೊಳ್ಳಲಿದೆ. ವಿಶ್ವದಾದ್ಯಂತ ಸಾಮಾಜಿಕ ಮತ್ತು ಪರಿಸರ ಸಮರ್ಥನೀಯ ಮಾನವ ವಸತಿಗಳನ್ನು ಉತ್ತೇಜಿಸುವುದು ಈ ಸಂಸ್ಥೆಯ ಮುಖ್ಯ ಧ್ಯೇಯ. ಹತ್ತು ವರ್ಷಗಳ ನಂತರ ಭಾರತ ಈ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದೆ. ಮೂರನೇ ಬಾರಿ ಭಾರತಕ್ಕೆ ಅಧ್ಯಕ್ಷ ಸ್ಥಾನ ದಕ್ಕಿದ್ದು, ಈ ಹಿಂದೆ 2007 ಮತ್ತು 1988 ರಲ್ಲಿ ಆಯ್ಕೆಯಾಗಿತ್ತು. UN-Habitat ಅನ್ನು 1978ರಲ್ಲಿ ಸ್ಥಾಪಿಸಲಾಗಿದೆ.
UN-Habitat ಆಡಳಿತ ಮಂಡಳಿ ಅಂತರ-ಸರ್ಕಾರಿ ನೀತಿ ಮತ್ತು ನಿರ್ಣಯ ಮಾಡುವ ಅಂಗವಾಗಿದ್ದು, ಮಾನವನ ವಸತಿಗಳಿಗೆ ಅವಿಭಾಜ್ಯ ಮತ್ತು ಸಮಗ್ರವಾದ ಮಾರ್ಗವನ್ನು ಉತ್ತೇಜಿಸುವ ಉದ್ದೇಶದಿಂದ, ಮಾನವ ಪರಿಹಾರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದೇಶಗಳು ಮತ್ತು ಪ್ರದೇಶಗಳಿಗೆ ಸಹಾಯ ಮಾಡಲು ಮತ್ತು ಮಾನವ ಸಮಸ್ಯೆಯ ಕುರಿತು ದೇಶಗಳಲ್ಲಿ ಸಹಕಾರವನ್ನು ಬಲಪಡಿಸುತ್ತದೆ. ಚುನಾವಣೆ ತರುವಾಯ, ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವ ಎಂ.ವೆಂಕಯ್ಯ ನಾಯ್ಡು ಮುಂದಿನ ಎರಡು ವರ್ಷಗಳಲ್ಲಿ UN-Habitat ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಅಂತೆಯೇ ಅವರು ಕೀನ್ಯಾದ ನೈರೋಬಿಯಲ್ಲಿ ನಡೆಯಲಿರುವ UN-Habitat ನ 58 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಆಡಳಿತ ಮಂಡಳಿಯ 26 ನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯ ಚರ್ಚಾ ವಿಷಯವು “ಹೊಸ ನಗರಾಭಿವೃದ್ಧಿ ಕಾರ್ಯಸೂಚಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಅವಕಾಶಗಳು” ಆಗಿದೆ.
UN-Habitat:
UN-Habitat, ಯುನೈಟೆಡ್ ನೇಷನ್ಸ್ ಹ್ಯೂಮನ್ ಸೆಟ್ಲ್ಮೆಂಟ್ಸ್ ಪ್ರೋಗ್ರಾಂ ಎಂದೂ ಕರೆಯಲ್ಪಡುವ ವಿಶ್ವಸಂಸ್ಥೆಯ ಅಂಗಸಂಸ್ಥೆ. ಸಮರ್ಥನೀಯ ನಗರ ಅಭಿವೃದ್ಧಿ ಮತ್ತು ಮಾನವ ವಸಾಹತುಗಳ ನಿರ್ಮಾಣದ ಹೊಣೆಗಾರಿಕೆಯನ್ನು ಹೊಂದಿದೆ. ಇದು 1978 ರಲ್ಲಿ ಸ್ಥಾಪನೆಗೊಂಡಿದ್ದು ಮತ್ತು ಕೀನ್ಯಾದ ನೈರೋಬಿಯ ವಿಶ್ವಸಂಸ್ಥೆಯ ಕಚೇರಿಯಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿದೆ. ಎಲ್ಲರಿಗೂ ಸಾಕಷ್ಟು ಆಶ್ರಯ ಒದಗಿಸುವ ಗುರಿಯೊಂದಿಗೆ ಸಾಮಾಜಿಕ ಮತ್ತು ಪರಿಸರ ಸುಸ್ಥಿರ ಪಟ್ಟಣಗಳು ಮತ್ತು ನಗರಗಳನ್ನು ಉತ್ತೇಜಿಸಲು ವಿಶ್ವಸಂಸ್ಥೆ ಸಾಮಾನ್ಯ ಮಂಡಳಿಯಡಿ ಇದು ಕಾರ್ಯನಿರ್ವಹಿಸುತ್ತಿದೆ.