ಅಶಿಸ್ತು ಪ್ರಯಾಣಿಕರ ಮೇಲೆ ನಿಷೇಧ ಹೇರುವ “ನೋ-ಪ್ಲೈ ಪಟ್ಟಿ” ಕರಡು ನಿಯಮ
ಅಶಿಸ್ತು ಪ್ರಯಾಣಿಕರನ್ನು ನಿಷೇಧಿಸುವ ನಿಟ್ಟಿನಲ್ಲಿ “ನೋ-ಪ್ಲೈ ಪಟ್ಟಿ (No Fly List)” ಕರಡು ನಿಯಮಗಳನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ. ಅಂತಿಮ ನಿಯಮಗಳನ್ನು ರೂಪಿಸುವ ಸಲುವಾಗಿ ಕೇಂದ್ರ ವಿಮಾನಯಾನ ಸಚಿವಾಲಯ ಸಮಿತಿಯೊಂದನ್ನು ಸಹ ರಚಿಸಿದೆ. ಹೊಸ ನಿಯಮಗಳ ಬಗ್ಗೆ ಸಲಹೆ/ಆಕ್ಷೇಪಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಒಂದು ತಿಂಗಳ ಕಾಲಾವಧಿಯನ್ನು ನೀಡಲಾಗುವುದು. ಸಲಹೆ/ಆಕ್ಷೇಪಣೆಗಳನ್ನು ಪರಿಶೀಲಿಸಿ, ಸೂಕ್ತ ಸಲಹೆಗಳನ್ನು ಪರಿಗಣಿಸಿ ಅಂತಿಮ ನಿಯಮಗಳನ್ನು ಬಿಡುಗಡೆಗೊಳಿಸಲಾಗುವುದು.
ಪ್ರಮುಖಾಂಶಗಳು:
ಮೂರು ಹಂತಗಳಲ್ಲಿ ವಿಮಾನ ಪ್ರಯಾಣ ನಿಷೇಧಿಸುವ ನಿಯಮಗಳನ್ನು ರೂಪಿಸಲಾಗಿದೆ.
ಹಂತ –1:
ಭೌತಿಕ ಸನ್ನೆಗಳಂತಹ ವಿಚ್ಛಿದ್ರಕಾರಕ ನಡವಳಿಕೆಗಳನ್ನು ತೋರುವ ಪ್ರಯಾಣಿಕರಿಗೆ ಮೂರು ತಿಂಗಳ ಕಾಲ ನಿಷೇಧ ಹೇರಲಾಗುವುದು.
ಹಂತ-2:
ದೈಹಿಕವಾಗಿ ನಿಂದಿಸುವ ಹಾಗೂ ಲೈಂಗಿಕ ಕಿರುಕುಳ ಅಪಾದಿತ ಪ್ರಯಾಣಿಕರ ಮೇಲೆ ಆರು ತಿಂಗಳ ಕಾಲ ವಿಮಾನಯಾನದ ಮೇಲೆ ನಿಷೇಧ ವಿಧಿಸಲಾಗುವುದು.
ಹಂತ-3:
ಕೊಲೆ ಬೆದರಿಕೆ,ಮಾರಣಾಂತಿಕ ಹಲ್ಲೆ, ವಿಮಾನ ಕಾರ್ಯಾಚರಣೆಗೆ ಅಡ್ಡಿಪಡಿಸುವವರಿಗೆ 2 ವರ್ಷ ಅಥವಾ ಅದಕ್ಕಿಂತಲೂ ಅಧಿಕ ಅವಧಿಯವರೆಗೆ ವಿಮಾನಯಾನ ರದ್ದುಪಡಿಸಲಾಗುವುದು.
ಈ ಮೇಲಿನ ಎಲ್ಲಾ ನಿಯಮಗಳು ಪ್ರಾದೇಶಿಕ ವಿಮಾನ ಸಂಚಾರಕ್ಕೆ ಮಾತ್ರ ಅನ್ವಯವಾಗಲಿದೆ.
ಹಿನ್ನಲೆ:
ಶಿವ ಸೇನಾ ಪಕ್ಷದ ಸಂಸದ ರವೀಂದ್ರ ಗಾಯಕ್ವಾಡ್ ಅವರು ಏರ್ ಇಂಡಿಯಾ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದು ದೇಶದಾದ್ಯಂತ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತಿಸಿದೆ.
ಫೇಸ್ಬುಕ್ ನಿಂದ “ಎಕ್ಸ್ ಪ್ರೆಸ್ ವೈ-ಫೈ”ಗೆ ಚಾಲನೆ
ಪ್ರಸಿದ್ದ ಸಾಮಾಜಿಕ ಜಾಲತಾಣ ಫೇಸ್ಬುಕ್ ಭಾರತದಲ್ಲಿ “ಎಕ್ಸ್ ಪ್ರೆಸ್ ವೈ-ಫೈ” ಅಂತರ್ಜಾಲ ಸೇವೆಗೆ ಚಾಲನೆ ನೀಡಿದೆ. ಪ್ರಸ್ತುತ ಉತ್ತರಖಂಡ, ಗುಜರಾತ್, ರಾಜಸ್ತಾನ ಮತ್ತು ಮೇಘಾಲಯ ಈ ನಾಲ್ಕು ರಾಜ್ಯಗಳ 700 ಸ್ಥಳಗಳಲ್ಲಿ ಈ ಸೇವೆ ಲಭ್ಯವಿದೆ.
ಯೋಜನೆಯನ್ನು ವಿಸ್ತರಿಸುವ ಸಲುವಾಗಿ ಭಾರತಿ ಏರ್ಟಲ್ ನೊಂದಿಗೆ ಫೇಸ್ಬುಕ್ ಒಪ್ಪಂದಕ್ಕೆ ಸಹಿಹಾಕಿದೆ. ಈ ಪಾಲುದಾರಿಕೆಯಡಿ ದೇಶದಾದ್ಯಂತ 20000 ಹಾಟ್ ಸ್ಪಾಟ್ ಗಳನ್ನು ಸ್ಥಾಪಿಸುವ ಮೂಲಕ ಮಿಲಿಯನ್ ಭಾರತೀಯರಿಗೆ ಅಂತರ್ಜಾಲ ಸೇವೆಯನ್ನು ಓದಗಿಸಲಾಗುವುದು.
ಭಾರತ ರಾಷ್ಟ್ರವನ್ನು ಹೊರತುಪಡಿಸಿ “ಎಕ್ಸ್ ಪ್ರೆಸ್ ವೈ-ಫೈ” ಸೇವೆಯನ್ನು ಇಂಡೋನೇಷಿಯಾ, ಕೀನ್ಯಾ, ನೈಜೀರಿಯಾ ಮತ್ತು ತಾಂಜಾನಿಯಾದಲ್ಲಿ ಫೇಸ್ಬುಕ್ ಜಾರಿಗೊಳಿಸಿದೆ.
ಪ್ರಮುಖಾಂಶಗಳು:
“ಎಕ್ಸ್ ಪ್ರೆಸ್ ವೈ-ಫೈ” ಸೇವೆ ಬಳಕೆದಾರರಿಗೆ ಅಂತರ್ಜಾಲ ಬಳಕೆ, ಆ್ಯಪ್ ಡೌನ್ ಲೋಡ್ ಸೇರಿದಂತೆ ಇನ್ನಿತರ ಸೇವೆಯನ್ನು ನೀಡಲಿದೆ. ಬಳಕೆದಾರರು ಮೊದಲು “ಎಕ್ಸ್ ಪ್ರೆಸ್ ವೈ-ಫೈ” ನೆಟ್ ವರ್ಕ್ ಗೆ ನೋಂದಾಯಿಸಿಕೊಂಡು ಆನಂತರ ಡಾಟಾ ಪ್ಯಾಕ್ ಖರೀದಿಸುವ ಮೂಲಕ ಬಳಸಬಹುದಾಗಿದೆ.
ದೇಶದ ಮೊದಲ ಖಾಸಗಿ ವಲಯದ ಸಣ್ಣ ಶಸ್ತಾಸ್ತ್ರ ಉತ್ಪಾದನಾ ಘಟಕ ಕಾರ್ಯಾರಂಭ
ಭಾರತದ ಮೊದಲ ಖಾಸಗಿ ವಲಯದ ಸಣ್ಣ ಶಸ್ತಾಸ್ತ್ರ ತಯಾರಿಕಾ ಘಟಕವನ್ನು ಮಧ್ಯಪ್ರದೇಶದಲ್ಲಿ ಆರಂಭಿಸಲಾಗಿದೆ. ವಿಶ್ವದರ್ಜೆಯ ಅತ್ಯಾಧುನಿಕ ಶಸ್ತಾಸ್ತ್ರಗಳನ್ನು ಭಾರತೀಯ ಸೇನೆಗೆ ಈ ಘಟಕ ಪೂರೈಸಲಿದೆ. ಭಾರತದ ಪುಂಜ್ ಲಾಯ್ಡ್ ಮತ್ತು ಇಸ್ರೇಲ್ ವೆಪನ್ ಸಿಸ್ಟಂ ನಡುವಿನ ಜಂಟಿ ಉಧ್ಯಮ ಇದಾಗಿದೆ. ಈ ಘಟಕದಲ್ಲಿ ಪ್ರಮುಖವಾಗಿ ನಾಲ್ಕು ಶಸ್ತಾಸ್ತ್ರಗಳಾದ X95 ಕಾರ್ಬೈನ್ & ಅಸಾಲ್ಟ್ ರೈಫಲ್, ಗಲಿಲ್ ಸ್ನಿಪರ್ ರೈಫಲ್, ಟವೊರ್ ಅಸಾಲ್ಟ್ ರೈಫಲ್ ಮತ್ತು ನೆಗೆವ್ ಲೈಟ್ ಮಷಿನ್ ಗನ್ ತಯಾರಿಸಲಾಗುವುದು.
ಈ ಘಟಕಕ್ಕೆ “ಪುಂಜ್ ಲಾಯ್ಡ್ ರಕ್ಷಾ ಸಿಸ್ಟಂ” ಎಂದು ಹೆಸರಿಡಲಾಗಿದೆ.
- ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಭೇಟಿ ನೀಡುತ್ತಿರುವಾಗಲೇ ಈ ಘಟಕವನ್ನು ಆರಂಭಿಸಲಾಗಿದ್ದು, ಇಸ್ರೇಲ್ ನೊಂದಿಗೆ ಮತ್ತಷ್ಟು ರಕ್ಷಣಾ ಒಪ್ಪಂದಗಳನ್ನು ನಿರೀಕ್ಷಿಸಲಾಗಿದೆ.
- ಬಾರತ ಇಸ್ರೇಲ್ ನಿಂದ ಅತಿ ಹೆಚ್ಚು ಮಿಲಿಟರಿ ಹಾರ್ಡ್ ವೇರ್ ಖರೀದಿಸುತ್ತಿರುವ ರಾಷ್ಟ್ರವಾಗಿದೆ.
- ಕಳೆದ ಕೆಲವು ವರ್ಷಗಳಲ್ಲಿ ವಿವಿಧ ಶಸ್ತಾಸ್ತ್ರಗಳನ್ನು ಇಸ್ರೇಲ್ ನಿಂದ ಭಾರತ ಖರೀದಿಸಿದೆ.
ದಕ್ಷಿಣ ಏಷ್ಯಾ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದ ಭಾರತ
ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಒಕ್ಕೂಟ (ಸಾರ್ಕ್) ರಾಷ್ಟ್ರಗಳು ಬಳಸುವ ಸಂಪರ್ಕ ಉಪಗ್ರಹ ಜಿಸ್ಯಾಟ್–9 ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಉಪಗ್ರಹ ಉಡಾವಣೆ ಯಶಸ್ಸನ್ನು ಪ್ರಧಾನಿ ನರೇಂದ್ರ ಮೋದಿ ಅವರು, ‘ಐತಿಹಾಸಿಕ ಕ್ಷಣ’ ಎಂದು ಬಣ್ಣಿಸಿದ್ದಾರೆ. ಜತೆಗೆ, ‘ಇದು ತನ್ನ ನೆರೆಯ ರಾಷ್ಟ್ರಗಳಿಗೆ ಭಾರತ ನೀಡಿದ, ಬೆಲೆಕಟ್ಟಲಾಗದಂತಹ ಉಡುಗೊರೆ. ದಕ್ಷಿಣ ಏಷ್ಯಾದ ಆರ್ಥಿಕ ಪ್ರಗತಿಗೆ ಇದು ನೆರವಾಗಲಿದೆ’ ಎಂದು ಬಣ್ಣಿಸಿದ್ದಾರೆ. 2014ರಲ್ಲಿ ನೇಪಾಳದಲ್ಲಿ ನಡೆದ ಸಾರ್ಕ್ ಶೃಂಗಸಭೆಯಲ್ಲಿ ಈ ಉಪಗ್ರಹದ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅದರಂತೆ ಪಾಕಿಸ್ತಾನ ಹೊರತುಪಡಿಸಿ ಉಳಿದ ಸಾರ್ಕ್ ರಾಷ್ಟ್ರಗಳು ಯೋಜನೆಗೆ ಬೆಂಬಲ ಸೂಚಿಸಿದ್ದವು. ಆಗಾಗಿ ಪಾಕಿಸ್ತಾನವನ್ನು ಹೊರತುಪಡಿಸಿ ಉಳಿದ ಸಾರ್ಕ್ ರಾಷ್ಟ್ರಗಳಾದ ನೇಪಾಳ, ಭೂತಾನ್, ಬಾಂಗ್ಲದೇಶ, ಅಪ್ಘಾನಿಸ್ತಾನ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಈ ಉಪಗ್ರಹದ ಉಪಯೋಗ ಪಡೆಯಲಿವೆ. ಉಪಗ್ರಹ ಉಡಾವಣೆಗೆ ರೂ 235 ಕೋಟಿ ತಗುಲಿದ್ದು, ಭಾರತ ಸರ್ಕಾರ ಭರಿಸಿದೆ.
ಪ್ರಮುಖಾಂಶಗಳು:
- 2230 ಕೆ. ಜಿ ತೂಕವಿರುವ ಉಪಗ್ರಹವನ್ನು ಜಿಸ್ಯಾಟ್–9 ಎಂದು ಹೆಸರಿಡಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಈ ಉಪಗ್ರಹವನ್ನು ಅಭಿವೃದ್ದಿಪಡಿಸಿದೆ.
- ಜಿಸ್ಯಾಟ್-9 ಉಪಗ್ರಹ 12 ಕು-ಬ್ಯಾಂಡ್ ಟ್ರಾನ್ಸಪಾಂಡರ್ ಗಳನ್ನು ಹೊಂದಿದೆ.
- GSLV Mk-II ಉಡಾವಣ ರಾಕೆಟ್ ಬಳಸಿ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದ ಉಪ್ರಹವನ್ನು ಕಕ್ಷೆಗೆ ಸೇರಿಸಲಾಯಿತು.
- 12 ವರ್ಷ ಉಪಗ್ರಹದ ಕಾರ್ಯಾವಧಿ.
ಮಹತ್ವ:
ದೂರಸಂಪರ್ಕ ಮತ್ತು ಪ್ರಸರಣ ಕ್ಷೇತ್ರದಲ್ಲಿ ಮಹತ್ವದ ಪಾತ್ರವನ್ನು ಈ ಉಪಗ್ರಹ ವಹಿಸಲಿದೆ. ಡಿಟಿಎಚ್, ಉಪಗ್ರಹ ಆಧರಿತ ಶಿಕ್ಷಣ, ಉಪಗ್ರಹ ಆಧರಿತ ವೈದ್ಯಕೀಯ ಸೇವೆ ಮತ್ತು ವಿಪತ್ತು ನಿರ್ವಹಣೆ ಸೇವೆಗಳನ್ನು ಫಲಾನುಭವಿ ರಾಷ್ಟ್ರಗಳಿಗೆ ಒದಗಿಸಲಿದೆ.
ವಿಸ್ಡನ್-ಎಂಸಿಸಿ ವರ್ಷದ ಛಾಯಾಗ್ರಾಹಕ ಪ್ರಶಸ್ತಿಗೆ ಕಾಶ್ಮೀರದ ಸಾಕ್ವಿ ಮಜೀದ್ ಆಯ್ಕೆ
ಕಾಶ್ಮೀರ ಮೂಲದ ಛಾಯಾಗ್ರಾಹಕ ಸಾಕ್ವಿ ಮಜೀಬ್ ಅವರಿಗೆ ಪ್ರತಿಷ್ಠಿತ “ವಿಸ್ಡನ್-ಎಂಸಿಸಿ ವರ್ಷದ ಛಾಯಾಗ್ರಾಹಕ” ಪ್ರಶಸ್ತಿ ಲಭಿಸಿದೆ. ಶ್ರೀನಗರದ ಹೊರವಲಯದಲ್ಲಿರುವ ನಿಶಾತ್ ತೋಟದಲ್ಲಿ ಕ್ರಿಕೆಟ್ ಆಡುವ ಹುಡುಗರ ಚಿತ್ರವನ್ನು ಅದ್ಬುತವಾಗಿ ಸೆರೆಹಿಡಿದಿರುವುದಕ್ಕೆ ಈ ಪ್ರಶಸ್ತಿ ಲಭಿಸಿದೆ. ಆ ಮೂಲಕ ಸಾಕ್ವಿ ಅವರು ಈ ಪ್ರಶಸ್ತಿಯನ್ನು ಪಡೆದ ಏಷ್ಯಾದ ಎರಡನೇ ವ್ಯಕ್ತಿ ಹಾಗೂ ಕಾಶ್ಮೀರದ ಮೊದಲಿಗೆ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.
- ಅತುಲ್ ಕಾಂಬ್ಳೆ ಅವರು ಈ ಪ್ರಶಸ್ತಿಯನ್ನು ಪಡೆದ ಏಷ್ಯಾದ ಮೊದಲಿಗ.
- ಸಾಕ್ವಿ ಮಜೀಬ್ ಅವರು ವೃತ್ತಿಯಲ್ಲಿ ಎಂಜನಿಯರ್ ಆಗಿದ್ದಾರೆ.
- ಪ್ರತಿ ವರ್ಷ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ (ಎಂಸಿಸಿ) “ವಿಸ್ಡೆನ್ ಕ್ರಿಕೆಟರ್ ಅಲ್ಮ್ಯಾಕ್” ಹೆಸರಿನ ಪುಸ್ತಕವನ್ನು ಪ್ರಕಟಿಸುತ್ತಿದೆ. ಕ್ರಿಕೆಟ್ ಕ್ರೀಡೆಗೆ ಸಂಬಂಧಿಸಿದ ಅದ್ಭುತ ಪೋಟೊಗಳನ್ನು ಈ ಪುಸ್ತಕ ಒಳಗೊಂಡಿರಲಿದೆ. ಈ ವರ್ಷದ ಪುಸ್ತಕವು ಸಾಕ್ವಿ ಮಜೀದ್ ಅವರು ಸೆರೆಹಿಡಿದಿರುವ ಪೋಟೊವನ್ನು ಒಳಗೊಂಡಿದೆ.
ಹೈಕೋರ್ಟ್ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ನ್ಯಾ.ಲೀಲಾ ಸೇಠ್ ನಿಧನ
ಭಾರತದಲ್ಲಿ ರಾಜ್ಯ ಹೈಕೋರ್ಟ್ ಒಂದರ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ನ್ಯಾ.ಲೀಲಾ ಸೇಠ್(86) ರಾತ್ರಿ ನಿಧನರಾದರು. ಹೃದಯಾಘಾತದಿಂದ ನೋಯಿಡಾದಲ್ಲಿನ ತನ್ನ ನಿವಾಸದಲ್ಲಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಲೀಲಾ ಸೇಠ್ ನಿಧನರಾಗಿದ್ದಾರೆ. ಪ್ರಸಿದ್ದ ಲೇಖಕ ವಿಕ್ರಮ್ ಸೇಠ್ ಇವರ ಮೂವರು ಮಕ್ಕಳಲ್ಲಿ ಒಬ್ಬರು.
- ಲೀಲಾ ಸೇಠ್ ಅವರು 1959ರಲ್ಲಿ ಕಲ್ಕತ್ತಾ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ ಅಡ್ವೋಕೆಟ್ ಆಗಿ ವೃತ್ತಿಯನ್ನು ಆರಂಭಿಸಿದರು.
- ಲಂಡನ್ ಬಾರ್ ಎಗ್ಸಾಮ್‌ನಲ್ಲಿ ಟಾಪರ್ ಆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
- ಬಿಹಾರ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳ ವಕೀಲರ ಸಮಿತಿಯ ಸದಸ್ಯರಾಗಿದ್ದರು.
- 1980ರಲ್ಲಿ ದೆಹಲಿ ಹೈಕೋರ್ಟಿನ ನ್ಯಾಯಾಧೀಶೆಯಾಗಿ ನೇಮಕ.
- 1991ರಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ನೇಮಕ.
- ದೆಹಲಿ ಹೈಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿ ಹಾಗೂ ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ (ಹಿಮಾಚಲ ಪ್ರದೇಶ ರಾಜ್ಯ ಹೈಕೋರ್ಟ್) ಎಂಬ ಹೆಗ್ಗಳಿಕೆ ಲೀಲಾ ಅವರದು.
- ಲೀಲಾ ಸೇಠ್ ಅವರು 15ನೇ ಕಾನೂನು ಆಯೋಗ (1997-2000) ಸದಸ್ಯರಾಗಿ ಸಹ ಕಾರ್ಯನಿರ್ವಹಿಸಿದ್ದರು.
- ದೆಹಲಿ ಗ್ಯಾಂಗ್ ರೇಪ್ ಹಿನ್ನಲೆಯಲ್ಲಿ ಕ್ರಿಮಿನಲ್ ಕಾನೂನುಗಳ ತಿದ್ದುಪಡಿ ತರಲು ರಚಿಸಲಾದ ನ್ಯಾ. ವರ್ಮಾ ಸಮಿತಿಯ ಸದಸ್ಯರು ಸಹ ಆಗಿದ್ದರು.
- ‘On Balance’, ‘We, the Children of India’ (2010), ‘Talking of Justice: People’s Rights in Modern India’ (2014) ಸೇಠ್ ಅವರು ಬರೆದಿರುವ ಪುಸ್ತಕಗಳು.
- ಕರ್ಣಾಟಕ ಬ್ಯಾಂಕಿಗೆ ಪ್ರಶಸ್ತಿ: ಮಾನವರಹಿತ ವ್ಯವಸ್ಥೆಯಡಿ ಹಣಕಾಸು ವಹಿವಾಟಿಗೆ ನಡೆಸುವಲ್ಲಿ ಕರ್ಣಾಟಕ ಬ್ಯಾಂಕ್‌ಗೆ ಮೆಲ್ಲೊನ್‌ನ ಬ್ಯಾಂಕ್ ಆಫ್ ನ್ಯೂಯಾರ್ಕ್ ವತಿಯಿಂದ ನೀಡುವ ಸ್ಟ್ರೇಟ್ ಥ್ರೂ ಪ್ರೊಸೆಸ್ (ಎಸ್‌ಟಿಪಿ) ಪ್ರಶಸ್ತಿ ಲಭಿಸಿದೆ. ಪ್ರತಿ ವರ್ಷ ತನ್ನ ಗ್ರಾಹಕ ಆರ್ಥಿಕ ಸಂಸ್ಥೆಗಳು ನಡೆಸುವ ಮಾನವರಹಿತ ವಹಿವಾಟಿನ ದರವನ್ನು ಬ್ಯಾಂಕ್ ಆಫ್ ನ್ಯೂಯಾರ್ಕ್ ಲೆಕ್ಕ ಹಾಕುತ್ತಿದೆ. ಇದರ ಅಂಗವಾಗಿ 2016 ರಲ್ಲಿ ಕರ್ಣಾಟಕ ಬ್ಯಾಂಕ್ ನಡೆಸಿದ ಮಾನವರಹಿತ ಆರ್ಥಿಕ ವಹಿವಾಟು ದರ ಶೇ23 ರಷ್ಟಿದ್ದು, ಎರಡನೇ ಅತಿ ಹೆಚ್ಚು ಅಂಕ ಪಡೆದ ಬ್ಯಾಂಕ್ ಎಂಬ ಹೆಗ್ಗಳಿಕೆ ಪಡೆದಿದೆ.