ವಾಸಯೋಗ್ಯ ನಗರ ಸೂಚ್ಯಂಕ ಹೊರತರಲಿರುವ ಕೇಂದ್ರ ಸರ್ಕಾರ
ಕೇಂದ್ರ ನಗರಾಭಿವೃದ್ದಿ ಸಚಿವಾಲಯ ದೇಶದ ವಾಸಯೋಗ್ಯ ನಗರ ಸಮೀಕ್ಷೆಯನ್ನು ಮುಂದಿನ ತಿಂಗಳು ಆರಂಭಿಸಲಿದೆ. ಸ್ಥಳೀಯವಾಗಿ ಅಭಿವೃದ್ದಿಪಡಿಸಲಾಗಿರುವ ವಿಧಾನವನ್ನು ಆಧರಿಸಿ ಸೂಚ್ಯಂಕವನ್ನು ಹೊರತರಲಾಗುವುದು. ನಗರಾಭಿವೃದ್ಧಿ ಸಚಿವಾಲಯವು ಈಗಾಗಲೇ “ನಗರಗಳಲ್ಲಿನ ಜೀವವೈವಿಧ್ಯ ಮಾನದಂಡಗಳ ಸಂಗ್ರಹ ಮತ್ತು ಗಣನೆಗೆ ಸಂಬಂಧಿಸಿದ ವಿಧಾನ” ದ ಬಗ್ಗೆ ವಿವರವಾದ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಸೂಚ್ಯಂಕವು 140 ನಗರಗಳ ವಾಸಯೋಗ್ಯ ಗುಣಮಟ್ಟವನ್ನು ಅಳೆಯಲಿದೆ. ಇದರಲ್ಲಿ 1 ಮಿಲಿಯನ್ ಮತ್ತು ಹೆಚ್ಚಿನ ಜನಸಂಖ್ಯೆ ಇರುವ 53 ನಗರಗಳು ಇರಲಿವೆ. ಮೌಲ್ಯಮಾಪನ ಕೈಗೊಳ್ಳಲು, ನಗರಭಿವೃದ್ದಿ ಸಚಿವಾಲಯ ಅರ್ಹ ಸಂಸ್ಥೆಗಳಿಂದ ಬಿಡ್ ಆಹ್ವಾನಿಸಿದೆ.
ದೇಶದಲ್ಲಿನ ನಗರಗಳು ಮತ್ತು ಪಟ್ಟಣಗಳ ನಡುವೆ ಆರೋಗ್ಯಕರ ಸ್ಪರ್ಧೆಯ ಪ್ರಜ್ಞೆಯನ್ನು ಹುಟ್ಟುಹಾಕಲು ಮತ್ತು ಆಡಳಿತ ಮತ್ತು ಮೂಲಸೌಕರ್ಯ ಲಭ್ಯತೆಯನ್ನು ಸುಧಾರಿಸುವಲ್ಲಿ ತಮ್ಮ ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುವುದು ಮೌಲ್ಯಮಾಪನ ಗುರಿಯಾಗಿದೆ.
ಸಮೀಕ್ಷೆಯ ಮಾನದಂಡ:
40% -ಭೌತಿಕ ಮೂಲಸೌಕರ್ಯ ಸೂಚ್ಯಂಕ (ನೀರು, ಇಂಧನ, ತ್ಯಾಜ್ಯ ನೀರು, ಘನ ತ್ಯಾಜ್ಯ, ವಸತಿ, ಬಯಲು ಪ್ರದೇಶ, ಸಂಚಾರ ವ್ಯವಸ್ಥೆ ಮತ್ತು ಮಾಲಿನ್ಯ ನಿಯಂತ್ರಣ), 30% -ಆಡಳಿತ ಸೂಚ್ಯಂಕ, 20% – ಸಾಮಾಜಿಕ ಸೂಚ್ಯಂಕ (ಆರೋಗ್ಯ, ಶಿಕ್ಷಣ, ಸಂಸ್ಕೃತಿ ಮತ್ತು ಸುರಕ್ಷತೆ), 10% -ಆರ್ಥಿಕ ಸೂಚ್ಯಂಕ (ನಿರುದ್ಯೋಗದ ಪ್ರಮಾಣ, ವಾಣಿಜ್ಯ ಸಂಸ್ಥೆಗಳ ಸಂಖ್ಯೆ ).
ಸುಪ್ರೀಂಕೋರ್ಟ್ ICMIS ವ್ಯವಸ್ಥೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಸುಪ್ರೀಂ ಕೋರ್ಟ್ನ ಇಂಟಿಗ್ರೇಟೆಡ್ ಕೇಸ್ ಮ್ಯಾನೇಜ್ಮೆಂಟ್ ಇನ್ಫರ್ಮೇಷನ್ ಸಿಸ್ಟಮ್ (ಐಸಿಎಂಐಎಸ್) ಅನ್ನು ಉದ್ಘಾಟಿಸಿದ್ದಾರೆ. ಈ ಡಿಜಿಟಲ್ ಫೈಲಿಂಗ್ ಸಿಸ್ಟಮ್ ಸುಪ್ರೀಂ ಕೋರ್ಟ್ ಅನ್ನು ಮೊದಲ ಬಾರಿಗೆ ಕಾಗದ ರಹಿತ, ಡಿಜಿಟಲ್ ಕೋರ್ಟ್ ಆಗಿ ಮಾರ್ಪಡಿಸಲಿದೆ. ಪ್ರಧಾನಿ ಮೋದಿ ಸುಪ್ರೀಂ ಕೋರ್ಟ್ ವೆಬ್ಸೈಟ್ನೊಂದಿಗೆ ಇಂಟಿಗ್ರೇಟೆಡ್ ಕೇಸ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅನ್ನು ಅಪ್ಲೋಡ್ ಮಾಡುವ ಉದ್ಘಾಟನಾ ಕಾರ್ಯವನ್ನು ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿತ್ತು. ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಮತ್ತು ಸುಪ್ರೀಂ ಕೋರ್ಟ್ನ ಇತರ ನ್ಯಾಯಾಧೀಶರು ಸಮಾರಂಭದಲ್ಲಿ ಹಾಜರಿದ್ದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ಐಸಿಎಂಐಎಸ್ ಅನ್ನು ಮಹತ್ವದ ಸುಧಾರಣೆ ಎಂದು ಪ್ರಶಂಸಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಹೈಕೋರ್ಟ್ಗಳು, ಜಿಲ್ಲಾ ನ್ಯಾಯಾಲಯಗಳು, ಉಪ-ವಿಭಾಗ ನ್ಯಾಯಾಲಯಗಳು ಹೊಸ ವ್ಯವಸ್ಥೆಯೊಂದಿಗೆ ಸಂಯೋಜಿಸಲ್ಪಡುತ್ತವೆ. ನಂತರ, ದೇಶದ ಎಲ್ಲ ಜೈಲುಗಳನ್ನು ಐಸಿಎಂಐಎಸ್ ಸಾಫ್ಟ್ವೇರ್ ನೊಂದಿಗೆ ಜೋಡಣೆ ಮಾಡಲಾಗುವುದು.
ICMIS ಮಹತ್ವ:
ಐಸಿಎಂಐಎಸ್ ವ್ಯವಸ್ಥೆಯಡಿ ದೂರುದಾರರು ಮಾಹಿತಿಯನ್ನು ಪಡೆಯಲು, ಅರ್ಜಿ ದಾಖಲಿಸಲು ಮತ್ತು ವಿಳಂಬ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆಯಲು ಸಹಾಯವಾಗಲಿದೆ. ಇದು ದೇಶದ ಎಲ್ಲ ನ್ಯಾಯಾಲಯಗಳ ಏಕೀಕರಣಕ್ಕೆ ದಾರಿ ಮಾಡಿಕೊಡುತ್ತದೆ. ಈ ವ್ಯವಸ್ಥೆಯಡಿ ಇನ್ನು ಮುಂದೆ ಮೇಲ್ಮನವಿ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ ಬದಲಿಗೆ ವಿಚಾರಣಾ ನ್ಯಾಯಾಲಯಗಳು ಮತ್ತು ಉನ್ನತ ನ್ಯಾಯಾಲಯಗಳಿಂದ ವಿದ್ಯುನ್ಮಾನವಾಗಿ ದಾಖಲೆಗಳನ್ನು ತೆಗೆದುಕೊಳ್ಳಲಾಗುವುದು. ಈ ವ್ಯವಸ್ಥೆಯಡಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಸಹಾಯವಾಗಲಿದೆ.
ವಿಶ್ವಾಸರ್ಹ ಉದ್ಯೋಗ ಮಾಹಿತಿಯನ್ನು ಸೃಷ್ಟಿಸಲು ಕಾರ್ಯಪಡೆ ರಚನೆ
ಸಮಯೋಚಿತ ಮತ್ತು ವಿಶ್ವಾಸಾರ್ಹ ಉದ್ಯೋಗ ಮಾಹಿತಿಯನ್ನು ಸೃಷ್ಟಿಸಲು ಸೂಕ್ತ ವಿಧಾನವನ್ನು ಅಭಿವೃದ್ದಿಪಡಿಸಲು ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಾಗರಿಯಾ ನೇತೃತ್ವದ ಟಾಸ್ಕ್ ಫೋರ್ಸ್ ಅನ್ನು ಸರ್ಕಾರ ಸ್ಥಾಪಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವತಃ ಈ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು ಮತ್ತು ಅದಷ್ಟು ಬೇಗನೆ ತನ್ನ ಶಿಫಾರಸನ್ನು ಸಲ್ಲಿಸಲು ಕಾರ್ಯಪಡೆಗೆ ಸೂಚಿಸಲಾಗಿದೆ. ಕಾರ್ಯಪಡೆಯ ಇತರ ಸದಸ್ಯರು ಕಾರ್ಮಿಕ ಕಾರ್ಯದರ್ಶಿ ಎ. ಸತ್ಯಾವತಿ, ಸಂಖ್ಯಾಶಾಸ್ತ್ರ ಇಲಾಖೆಯ ಕಾರ್ಯದರ್ಶಿ ಟಿ.ಸಿ.ಎ. ಅನಂತ್, ನೀತಿ ಆಯೋಗದ ಪುಲಕ್ ಘೋಷ್ ಮತ್ತು ಟೀಮ್ಲೈಸ್ ಸರ್ವಿಸಸ್ ಲಿಮಿಟೆಡ್ ಅಧ್ಯಕ್ಷ ಮತ್ತು ಸಹ ಸಂಸ್ಥಾಪಕ ಮನೀಶ್ ಸಭರ್ವಾಲ್.
ಅಗತ್ಯತೆ:
ಭಾರತದಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತೆ ವಿಶ್ವಾಸಾರ್ಹ ಮಾಹಿತಿ ಇಲ್ಲ. ಪ್ರಸ್ತುತ ಲಭ್ಯವಿರುವ ಮಾಹಿತಿ ಅವಧಿಯನ್ನು ಮೀರಿದೆ. ದೇಶದ ಬಹುಪಾಲು ಉದ್ಯೋಗಿಗಳನ್ನು ನೇಮಕ ಮಾಡುವ ಅನೌಪಚಾರಿಕ ವಲಯದಲ್ಲಿನ ಉದ್ಯೋಗಗಳ ಮೇಲಿನ ಮಾಹಿತಿಯು ಸುಲಭವಾಗಿ ಲಭ್ಯವಾಗುವುದಿಲ್ಲ. ಅಲ್ಲದೆ, ಲೇಬರ್ ಬ್ಯೂರೋ ಬಿಡುಗಡೆ ಮಾಡುವ ಮಾಹಿತಿ ಸಂಘಟಿತ ವಲಯಕ್ಕೆ ಮಾತ್ರ ಮೀಸಲು. ಉದ್ಯೋಗಗಳಲ್ಲಿ ಲಭ್ಯವಿರುವ ಅತ್ಯಂತ ಸಮಗ್ರವಾದ ದತ್ತಾಂಶವಾದ ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ (ಎನ್ಎಸ್ಎಸ್ಒ) ಮಾಹಿತಿಯನ್ನು ಸಮಯ ವಿಳಂಬದೊಂದಿಗೆ ಹೊರತರಲಾಗುತ್ತಿದೆ.