ಆಂಧ್ರಪ್ರದೇಶದ ವಿಶಾಖಪಟ್ಟಣ ದೇಶದ ಅತ್ಯಂತ ಸ್ವಚ್ಚ ರೈಲ್ವೆ ನಿಲ್ದಾಣ

ಆಂಧ್ರಪ್ರದೇಶದ ವಿಶಾಖಪಟ್ಟಣ ದೇಶದಲ್ಲೇ ಅತ್ಯಂತ ಸ್ವಚ್ಛ ರೈಲ್ವೆ ನಿಲ್ದಾಣ ಎನ್ನುವ ಕೀರ್ತಿಗೆ ಪಾತ್ರವಾಗಿದೆ.

ತೆಲಂಗಾಣದ ಸಿಕಂದರಾಬಾದ್‌ ಜಂಕ್ಷನ್‌  ಮತ್ತು ಜಮ್ಮು ತವಿ ರೈಲ್ವೆ ನಿಲ್ದಾಣಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿವೆ. ರೈಲ್ವೆ ನಿಲ್ದಾಣಗಳ ಸ್ವಚ್ಛತೆ ಕುರಿತ ಸಮೀಕ್ಷಾ ವರದಿಯನ್ನು ರೈಲ್ವೆ ಸಚಿವ ಸುರೇಶ್‌ ಪ್ರಭು ಬುಧವಾರ ಇಲ್ಲಿ ಬಿಡುಗಡೆ ಮಾಡಿದರು.

ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಯ ಭಾರತೀಯ ಗುಣಮಟ್ಟ ನಿಯಂತ್ರಣ ವಿಭಾಗ ಈ ಸಮೀಕ್ಷೆಯನ್ನು 407 ರೈಲ್ವೆ ನಿಲ್ದಾಣಗಳಲ್ಲಿ ಕೈಗೊಂಡಿತ್ತು.

ವಾರ್ಷಿಕ ₹50 ಕೋಟಿಗೂ ಹೆಚ್ಚು ಆದಾಯ ಹೊಂದಿರುವ ರೈಲ್ವೆ ನಿಲ್ದಾಣಗಳಿಗೆ ‘ಎ1’ ವಿಭಾಗದಲ್ಲಿ ರ‍್ಯಾಂಕಿಂಗ್‌ ನೀಡಲಾಗಿದೆ. ವಾರ್ಷಿಕ ₹6 ಕೋಟಿಯಿಂದ 50ಕೋಟಿವರೆಗೆ ಆದಾಯ ಹೊಂದಿರುವ ನಿಲ್ದಾಣಗಳನ್ನು ‘ಎ’ ವಿಭಾಗಕ್ಕೆ ಸೇರಿಸಲಾಗಿದೆ. ‘ಎ1’ ಮತ್ತು ‘ಎ’ ವಿಭಾಗದ ರೈಲ್ವೆ ನಿಲ್ದಾಣಗಳಿಗೆ ಪ್ರತ್ಯೇಕ ರ‍್ಯಾಂಕಿಂಗ್‌ ನೀಡಲಾಗಿದೆ. ‘ಎ1’ ವಿಭಾಗದಲ್ಲಿ ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ 10ನೇ ರ‍್ಯಾಂಕ್‌ ಮತ್ತು ಯಶವಂತಪುರ ರೈಲ್ವೆ ನಿಲ್ದಾಣ 32ನೇ ರ‍್ಯಾಂಕ್‌ ಪಡೆದಿದೆ.

ಕರ್ನಾಟಕದಲ್ಲಿ ಈ ಎರಡು ನಿಲ್ದಾಣಗಳು ಮಾತ್ರ ‘ಎ1’ ವಿಭಾಗದಲ್ಲಿ ಅರ್ಹತೆ ಪಡೆದಿವೆ. ಪಂಜಾಬ್‌ನ ಬೀಯಾಸ್‌ ‘ಎ‘ ವಿಭಾಗದಲ್ಲಿ ಪ್ರಥಮ ರ‍್ಯಾಂಕ್‌ ಪಡೆದಿದೆ. ತೆಲಂಗಾಣದ ಕಮ್ಮಮ್ ಮತ್ತು ಮಹಾರಾಷ್ಟ್ರದ ಅಹ್ಮದನಗರ ಕ್ರಮವಾಗಿ ಎರಡು ಮತ್ತು ಮೂರನೇ ರ‍್ಯಾಂಕ್‌ ಪಡೆದಿವೆ.

ಕರ್ನಾಟಕದಲ್ಲಿ ಮೈಸೂರು 14 ಮತ್ತು  ಬಂಗಾರಪೇಟೆ 35ನೇ ರ‍್ಯಾಂಕ್‌ ಪಡೆದಿವೆ. ಬಿಹಾರದ ದರ್ಭಾಂಗ ಜಂಕ್ಷನ್‌ ‘ಎ1’ ವಿಭಾಗದಲ್ಲಿ 75ನೇ ಸ್ಥಾನ ಹಾಗೂ ‘ಎ’ ವಿಭಾಗದಲ್ಲಿ ಅದೇ ರಾಜ್ಯದ ಜೋಗ್ಬಾನಿ 332ನೇ ಸ್ಥಾನ ಪಡೆದಿದೆ. ಪಾರ್ಕಿಂಗ್‌ ಪ್ರದೇಶ, ಶೌಚಾಲಯ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಮುಖ್ಯ ಪ್ರವೇಶ ದ್ವಾರದ ಪ್ರದೇಶದಲ್ಲಿನ ಸ್ವಚ್ಛತೆ ಸೇರಿದಂತೆ ಹಲವಾರು ಅಂಶಗಳನ್ನು ಸಮೀಕ್ಷೆಯಲ್ಲಿ ಪರಿಗಣಿಸಲಾಗಿದೆ. ಜತೆಗೆ ರೈಲ್ವೆ ಪ್ರಯಾಣಿಕರ ಅಭಿಪ್ರಾಯಗಳನ್ನು ಸಹ ಪಡೆಯಲಾಗಿದೆ ಎಂದು ಸಚಿವ ಸುರೇಶ್‌ ಪ್ರಭು ತಿಳಿಸಿದರು.

ಫ್ರಾನ್ಸ್ ನ ನೂತನ ಪ್ರಧಾನಿಯಾಗಿ ಎಡ್ವರ್ಡ್ ಫಿಲಿಪ್ಪೆ ನೇಮಕ

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಫ್ರಾನ್ಸ್ನ ಹೊಸ ಪ್ರಧಾನಿಯಾಗಿ ಎಡ್ವರ್ಡ್ ಫಿಲಿಪ್ಪೆ ಅವರನ್ನು ನೇಮಕ ಮಾಡಿದ್ದಾರೆ.

  • 46 ವರ್ಷದ ಎಡ್ವರ್ಡ್ ಫಿಲಿಪ್ಪೆ ಅವರು ಲಾರ್ಡ್ ಫೇಬಿಯಸ್ (1984 ರಿಂದ 1986) ಅವರ ನಂತರ ಫ್ರಾನ್ಸ್ನ ಎರಡನೇ ಅತಿ ಕಿರಿಯ ಪ್ರಧಾನಿಯಾಗಿದ್ದಾರೆ.
  • ಫೇಬಿಯಸ್ ಅವರು ತಮ್ಮ 37ನೇ ವರ್ಷದಲ್ಲಿ ಪ್ರಧಾನಿಯಾಗಿದ್ದರು.
  • ಫಿಲಿಪ್ಪೆ 2010 ರಿಂದ ಪೋರ್ಟ್ ಸಿಟಿ ಲೆ ಹಾವ್ರೆಯ ಮೇಯರ್ ಆಗಿದ್ದು, ಲೆಸ್ ರಿಪಬ್ಲಿಕನ್ಸ್ ಪಕ್ಷದ ಸದಸ್ಯರಾಗಿದ್ದಾರೆ.

“ನರ್ಮದಾ ಸೇವಾ ಮಿಷನ್”ಗೆ ಪ್ರಧಾನಿ ಮೋದಿ ಚಾಲನೆ

ಪ್ರಧಾನಿ ನರೇಂದ್ರ ಮೋದಿರವರು ನರ್ಮದಾ ನದಿಯ ಸಂರಕ್ಷಣೆಗಾಗಿ ನರ್ಮದಾ ಸೇವಾ ಮಿಷನ್ ಗೆ ಚಾಲನೆ ನೀಡಿದರು. ಮಧ್ಯಪ್ರದೇಶದ ಅನೂಪ್ಪುರ್ ಜಿಲ್ಲೆಯ ಅಮರ್ಕಾಂತಕ್ನಲ್ಲಿ ಈ ಮಿಷನ್ಗೆ ಚಾಲನೆ ನೀಡಲಾಯಿತು. ನರ್ಮದಾ ನದಿ ಮಧ್ಯ ಪ್ರದೇಶದ ಜೀವನದಿ ಆಗಿದೆ.  ನರ್ಮದಾ ನದಿಯ ಸಂರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಮಾರ್ಗಸೂಚಿ ನಕ್ಷೆಯನ್ನು ಸಹ ಬಿಡುಗಡೆಗೊಳಿಸಲಾಯಿತು. ಪರಿಸರವಾದಿಗಳು, ನದಿ ಸಂರಕ್ಷಣೆ ತಜ್ಞರು ಸೇರಿದಂತೆ ಇತರೆ ಪ್ರಮುಖರೊಂದಿಗೆ ವ್ಯಾಪಕವಾದ ಸಮಾಲೋಚನೆಗಳ ನಂತರ ಈ ಮಾರ್ಗಸೂಚಿಯನ್ನು ರೂಪಿಸಲಾಗಿದೆ. ಇದೇ ವೇಳೆ ‘ನಮಮಿ ದೇವಿ ನರ್ಮದೆ ಸೇವಾ ಯಾತ್ರಾ’ ಸಮಾರಂಭವನ್ನೂ ಮುಕ್ತಯಗೊಳಿಸಲಾಯಿತು.

‘ನಮಮಿ ದೇವಿ ನರ್ಮದೆ ಸೇವಾ ಯಾತ್ರಾ’:

ನಮಮಿ ದೇವಿ ನರ್ಮದೆ ಸೇವಾ ಯಾತ್ರೆಯನ್ನು ನರ್ಮದಾ ನದಿ ಮೂಲದ ಅಮರ ಕಂಟಾಕ್ನಿಂದ ಡಿಸೆಂಬರ್ 11, 2016 ರಂದು ಪ್ರಾರಂಭಿಸಲಾಯಿತು. ಈ ಯಾತ್ರೆಯು 1,100ಕ್ಕೂ ಹೆಚ್ಚು ಗ್ರಾಮಗಳು ಮತ್ತು ಪಟ್ಟಣಗಳನ್ನು ಹಾದುಹೋಗಿ 3,344 ಕಿ.ಮೀ. ದೂರ ಚಲಿಸುವ ಮೂಲಕ  ಮೇ 15, 2017ರಂದು ಮುಕ್ತಾಯವಾಯಿತು. ಈ ಯಾತ್ರೆಯನ್ನು “ಸಾರ್ವಜನಿಕರು ಭಾಗವಹಿಸಿದ್ದ ವಿಶ್ವದ ಅತಿದೊಡ್ಡ ನದಿ ಸಂರಕ್ಷಣೆ ಅಭಿಯಾನ” ಎಂದು ಪ್ರಶಂಸಿಸಲಾಗಿದೆ.

ಹಿನ್ನಲೆ:

ನರ್ಮದಾ ನದಿ ಮೈಕಲ್ ಹಿಲ್ಸ್ನಲ್ಲಿ ಹುಟ್ಟಿ, 1,312 ಕಿ.ಮೀ ಹರಿದು ಗಲ್ಫ್ ಆಫ್  ಖಂಬಾತ್ ಮೂಲಕ ಅರಬ್ಬೀ ಸಮುದ್ರಕ್ಕೆ ಸೇರುತ್ತದೆ. ನರ್ಮದಾ, ತಪತಿ ಮತ್ತು ಮಾಹಿ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ದೇಶದ ಮೂರು ಪ್ರಮುಖ ನದಿಗಳು. ನರ್ಮದಾ ನದಿ ಸುಮಾರು 17 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಿ ನಾಲ್ಕು ಕೋಟಿ ಜನರಿಗೆ ಕುಡಿಯುವ ನೀರನ್ನು ಒದಗಿಸುತ್ತದೆ. ನರ್ಮದಾ ನದಿಯ ಮೇಲಿರುವ ಜಲವಿದ್ಯುತ್ ಘಟಕಗಳಿಂದ ಸುಮಾರು 2400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

            ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಇತ್ತೀಚಿಗೆ ನರ್ಮದಾ  ನದಿಯ ಕೆಲವು ಭಾಗಗಳಲ್ಲಿ ನೀರಿನ ಗುಣಮಟ್ಟ ಸ್ನಾನಕ್ಕೆ ಯೋಗ್ಯವಲ್ಲವೆಂದು ವರದಿ ಮಾಡಿತ್ತು. ನರ್ಮದಾ ಕಣಿವೆ ಅಭಿವೃದ್ಧಿಗಾಗಿ ಮಧ್ಯಪ್ರದೇಶ ರಾಜ್ಯ ಸರಕಾರವು 2016-17ರ ಬಜೆಟ್ ಅಂದಾಜಿನ ಪ್ರಕಾರ 2095.31 ರೂ. ಮೀಸಲಿಟ್ಟಿದೆ. ಮಧ್ಯಪ್ರದೇಶ ರಾಜ್ಯದಲ್ಲಿ 700 ಕ್ಕೂ ಹೆಚ್ಚು ನರ್ಮದಾ ಸೇವಾ ಸಮಿತಿಗಳು ಮತ್ತು 74000 ನರ್ಮದಾ ಸೇವಾಕರು ನದಿಯನ್ನು ರಕ್ಷಿಸಲು ನೋಂದಾಯಿಸಿದ್ದಾರೆ.

ಭಾರತೀಯ ನೌಕಪಡೆ ಮತ್ತು ರಿಪಬ್ಲಿಕ್ ಆಫ್ ಸಿಂಗಾಪುರ ನಡುವೆ ಸಿಂಬೆಕ್ಸ್-17 ಆರಂಭ

ಭಾರತೀಯ ನೌಕಾಪಡೆ ಮತ್ತು ರಿಪಬ್ಲಿಕ್ ಆಫ್ ಸಿಂಗಾಪುರ್ ನೌಕಾಪಡೆ ಮಧ್ಯೆ 24ನೇ ದ್ವಿಪಕ್ಷೀಯ ಕಡಲ ಅಭ್ಯಾಸ ಸಿಂಬೆಕ್ಸ್ -17 ದಕ್ಷಿಣ ಚೀನಾ ಸಮುದ್ರದಲ್ಲಿ ಆರಂಭಗೊಂಡಿದೆ. ಸಿಂಬೆಕ್ಸ್ ಎಂದರೆ Singapore-India Bilateral Maritime Exercise” ಈ ಅಭ್ಯಾಸ ಮೇ 18, 2017 ರಿಂದ  ಮೇ 24, 2017 ರವರೆಗೆ ನಡೆಯಲಿದೆ.

  • ಈ ವರ್ಷದ ದ್ವಿಪಕ್ಷೀಯ ಕಡಲ ವ್ಯಾಯಾಮ, ರಿಪಬ್ಲಿಕ್ ಆಫ್ ಸಿಂಗಾಪುರ್ ಮತ್ತು ಐಎನ್ ಮಧ್ಯೆ ಹೆಚ್ಚುತ್ತಿರುವ ಪರಸ್ಪರ ಕಾರ್ಯಸಾಧ್ಯತೆ ಮತ್ತು ಕಡಲ ಭದ್ರತೆ ಕಾರ್ಯಾಚರಣೆಗಳಿಗಾಗಿ ಸಾಮಾನ್ಯ ತಿಳುವಳಿಕೆ ಮತ್ತು ಕಾರ್ಯವಿಧಾನಗಳನ್ನು ಹೆಚ್ಚಿಸಲು ಆಗಿದೆ.
  • ಕಡಲ ಅಭ್ಯಾಸವನ್ನು ಎರಡು ಹಂತಗಳಾಗಿ ವಿಭಾಗಿಸಲಾಗಿದೆ. ಬಂದರು ಹಂತ ಮೇ 20ರವರೆಗೆ ಮತ್ತು ಸಮುದ್ರ ಹಂತ ಮೇ 21ರಿಂದ ಮೇ 24ರವರೆಗೆ ನಡೆಯಲಿದೆ.
  • ಭಾರತೀಯ ನೌಕಾ ಹಡಗುಗಳಾದ ಶಿವಾಲಿಕ್, ಸಹ್ಯಾದ್ರಿ, ಜ್ಯೋತಿ ಮತ್ತು ಕಮೊರ್ತ, ಪಿ8-1 ಕಡಲ ಗಸ್ತು ಮತ್ತು ಜಲಾಂತರ್ಗಾಮಿ ವಿರೋಧಿ ಯುದ್ಧ ವಿಮಾನ ಕಡಲಾಭ್ಯಾಸದಲ್ಲಿ ಭಾಗವಹಿಸಲಿವೆ.
  • ಐಎನ್ಎಸ್ ಸಹ್ಯಾದ್ರಿ ಮತ್ತು ಐಎನ್ಎಸ್ ಕಮಾರ್ತ ಮೇ 12ಕ್ಕೆ ಆಗಮಿಸಿದ್ದರೆ, ಐಎನ್ಎಸ್ ಶಿವಾಲಿಕ್ ಮತ್ತು ಐಎನ್ಎಸ್ ಜ್ಯೋತಿ ಸಮುದ್ರ ಹಂತದಲ್ಲಿ ನೇರವಾಗಿ ಭಾಗವಹಿಸಲಿವೆ.

ಐಐಟಿ-ದೆಹಲಿ ವಿಜ್ಞಾನಿಗಳಿಂದ ಅಗ್ಗ ದರದ ಉಸಿರಾಟದ ಫಿಲ್ಟರ್ ಅಭಿವೃದ್ದಿ

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ದೆಹಲಿಯ ವಿಜ್ಞಾನಿಗಳು ‘ನಾಸೊಫಿಲ್ಟರ್’ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು 95%ನಷ್ಟು ಧೂಳು ಮತ್ತು ವಾಯು ಮಾಲಿನ್ಯಕಾರಕಗಳನ್ನು ನಿರ್ಬಂಧಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ವಿನ್ಯಾಸದ ವೆಚ್ಚ ರೂ10 ಆಗಿದ್ದು, ಅಗ್ಗದ ನಾಸೊಫಿಲ್ಟರ್ ಆಗಿದೆ. ನ್ಯಾನೊ-ರೆಸ್ಪಿರೇಟರಿ ಫಿಲ್ಟರ್ ಈಗ ಮಾರಾಟಕ್ಕೆ ಸಿದ್ಧವಾಗಿದೆ. ಇದರ ಸಂಶೋಧನೆ ತಂಡಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು “ನ್ಯಾಷನಲ್ ಸ್ಟಾರ್ಟ್ ಆಫ್ ಪ್ರಶಸ್ತಿ” ನೀಡಿ ಗೌರವಿಸಿದ್ದಾರೆ.

ವಿಶೇಷತೆ:

ನಾಸೋ-ಫಿಲ್ಟರ್ ಅನ್ನು ಅಸಾಮಾನ್ಯ ಫಿಲ್ಟರ್ ತಂತ್ರಜ್ಞಾನವನ್ನು ಬಳಸಿ ವಿನ್ಯಾಸಗೊಳಿಸಲಾಗಿದ್ದು, ಆ ಮೂಲಕ ಸೂಕ್ಷ ಮಾಲಿನ್ಯಕಾರಕ ಕಣಗಳು ಅದರಲ್ಲೂ ವಿಶೇಷವಾಗಿ PM2.5 ಸಾಂದ್ರತೆಯ ವಿರುದ್ಧ ರಕ್ಷಣೆ ನೀಡುತ್ತದೆ. ಇದು ಕನಿಷ್ಟ ಎಂಟು ಗಂಟೆಗಳ ಕಾಲ ರಕ್ಷಣೆ ನೀಡುಲಿದ್ದು, ಉಸಿರಾಟದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಸಾಧನವು ಲಕ್ಷಾಂತರ ಸಣ್ಣ ಗಾತ್ರದ ರಂಧ್ರಗಳ ಜೋಡಣೆಯನ್ನು ಹೊಂದಿದ್ದು, ಸಣ್ಣ ಕಣಗಳನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿರುವ ತೆಳುವಾದ ಪೊರೆಯನ್ನು ವಿನ್ಯಾಸಗೊಳಿಸಲಾಗಿದೆ.

ಹಿನ್ನಲೆ:

ಹೆಲ್ತ್ ಎಫೆಕ್ಟ್ಸ್ ಇನ್ಸ್ಟಿಟ್ಯೂಟ್ ಬಿಡುಗಡೆ ಮಾಡಿರುವ ಜಾಗತಿಕ ವಾಯುಮಾಲಿನ್ಯದ ಹೊಸ ಅಧ್ಯಯನದ ಪ್ರಕಾರ, ಭಾರತದಲ್ಲಿ ವಾಯು ಮಾಲಿನ್ಯದ ಪ್ರಮಾಣ ವಿಶ್ವದಲ್ಲೇ ಅತ್ಯಂತ ಹೆಚ್ಚು ಪ್ರಾಣಾಂತಿಕವಾಗಿದ್ದು, ಚೀನಾವನ್ನು ಮೀರಿಸಿದೆ. ವಾಯು ಮಾಲಿನ್ಯದಿಂದಾಗಿ ಸುಮಾರು 1.1 ದಶಲಕ್ಷ ಜನರು ಭಾರತದಲ್ಲಿ ಪ್ರತಿವರ್ಷವೂ ಅಕಾಲಿಕವಾಗಿ ಮರಣ ಹೊಂದುತ್ತಿದ್ದಾರೆ.

            ಸೂಕ್ಷ ಕಣಗಳು (Particulate Matters) ಮಾನವನ ಕೂದಲಿನ ಗಾತ್ರಕ್ಕಿಂತ ಅತ್ಯಂತ ಕಡಿಮೆ ಕಡಿಮೆ ಗಾತ್ರದ ಸೂಕ್ಷ್ಮ ಕಣಗಳಾಗಿವೆ. ವಾಹನಗಳು, ವಿಶೇಷವಾಗಿ ಡೀಸೆಲ್ ಇಂಜಿನ್ಗಳು, ಕೈಗಾರಿಕೆಗಳು, ಮತ್ತು ನೈಸರ್ಗಿಕ ಮೂಲಗಳಿಂದ ಈ ಕಣಗಳು ಪರಿಸರಕ್ಕೆ ಬಿಡುಗಡೆಯಾಗುತ್ತವೆ. ಸೂಕ್ಷ ಕಣಗಳು ಶ್ವಾಸಕೋಶದ ಮೂಲಕ ರಕ್ತಸಂಚಲನೆ ವ್ಯವಸ್ಥೆಗೆ ಪ್ರವೇಶಿಸಿ ಸ್ಟ್ರೋಕ್, ಹೃದಯ ವೈಫಲ್ಯ ಮತ್ತು ಹೃದಯ ರೋಗಗಳ ಅಪಾಯವನ್ನು ಹೆಚ್ಚಿಸುತ್ತವೆ. ಇದಲ್ಲದೆ ನ್ಯುಮೋನಿಯಾ ಮತ್ತು ಆಸ್ತಮಾದಂತಹ ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತವೆ

ಐಸಿಸಿ ಟೆಸ್ಟ್ ಶ್ರೇಯಾಂಕ: ಅಗ್ರಸ್ಥಾನದಲ್ಲಿ ಭಾರತ

ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 123 ಅಂಕಗಳೊಂದಿಗೆ ಭಾರತ ಕ್ರಿಕೆಟ್ ತಂಡವು ತನ್ನ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ದಕ್ಷಿಣ ಆಫ್ರಿಕಾವು ಎರಡನೇ ಸ್ಥಾನದಲ್ಲಿದೆ. 100 ಅಂಕಗಳೊಂದಿಗೆ ಆಸ್ಟ್ರೇಲಿಯಾ ತಂಡ ಮೂರನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ತಂಡ (99) ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ನ್ಯೂಜಿಲೆಂಡ್ 5 ನೇ ಸ್ಥಾನ (97 ಅಂಕಗಳು), ಪಾಕಿಸ್ತಾನ 6 ನೇ ಸ್ಥಾನ (93 ಅಂಕಗಳು), ಶ್ರೀಲಂಕಾ 7 ನೇ ಸ್ಥಾನ (91 ಅಂಕಗಳು), ವೆಸ್ಟ್ ಇಂಡೀಸ್ 8 ನೇ ಸ್ಥಾನ (75 ಅಂಕಗಳು), ಬಾಂಗ್ಲಾದೇಶ 9 ನೇ ಸ್ಥಾನ (69 ಅಂಕಗಳು) ಮತ್ತು ಜಿಂಬಾಬ್ವೆ 10 ನೇ ಸ್ಥಾನದಲ್ಲಿದೆ.

            ಇತ್ತೀಚಿನ ಪಂದ್ಯಗಳಲ್ಲಿ ಭಾರತ ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯನ್ನು ಗೆದ್ದಿದೆ ಮತ್ತು ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ದ ಭಾರತದಲ್ಲಿ ನಡೆದ ಪಂದ್ಯಗಳಲ್ಲಿ ಗೆಲುವು ಕಂಡಿದೆ. ಭಾರತದಲ್ಲಿ ಆಡಿದ ಒಟ್ಟು 13 ಪಂದ್ಯಗಳಲ್ಲಿ, ಭಾರತ ತಂಡವು 10 ಗೆಲುವು, 2 ಸೋಲು ಮತ್ತು ಒಂದು ಡ್ರಾವನ್ನು ದಾಖಲಿಸಿದೆ.

ಇತರೆ ಶ್ರೇಯಾಂಕ:

  • ಐಸಿಸಿ ಏಕದಿನ ಚಾಂಪಿಯನ್ಷಿಪ್ ಶ್ರೇಯಾಂಕಗಳಲ್ಲಿ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಂತರ ಭಾರತೀಯ ತಂಡವನ್ನು ಮೂರನೇ ಸ್ಥಾನದಲ್ಲಿದೆ.
  • ಐಸಿಸಿ ಟ್ವೆಂಟಿ -20 ಚಾಂಪಿಯನ್ಶಿಪ್ ಶ್ರೇಯಾಂಕದಲ್ಲಿ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಪಾಕಿಸ್ತಾನದ ನಂತರ ಭಾರತವು ನಾಲ್ಕನೇ ಸ್ಥಾನದಲ್ಲಿದೆ.
  • ಐಸಿಸಿ ಮಹಿಳಾ ಚಾಂಪಿಯನ್ಶಿಪ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಂತರ ಭಾರತೀಯ ಮಹಿಳಾ ತಂಡ ನಾಲ್ಕನೇ ಸ್ಥಾನದಲ್ಲಿದೆ.

Leave a Comment

This site uses Akismet to reduce spam. Learn how your comment data is processed.