ಭಾರತದ ವಿಜ್ಞಾನಿ ಶ್ರೀನಿವಾಸ್ ಕುಲಕರ್ಣಿ ರವರಿಗೆ ಡಾನ್ ಡೇವಿಡ್ ಪ್ರಶಸ್ತಿ
ಭಾರತದ ವಿಜ್ಞಾನಿ ಶ್ರೀನಿವಾಸ ಕುಲಕರ್ಣಿ ರವರಿಗೆ ಪ್ರತಿಷ್ಠಿತ ಡಾನ್ ಡೇವಿಡ್ ಪ್ರಶಸ್ತಿ ಲಭಿಸಿದೆ. ಖಗೋಳ ವಿಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಅಮೆರಿಕದ ಪಸಾಡೆನಾದ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಖಗೋಳಭೌತಶಾಸ್ತ್ರ ಮತ್ತು ಗ್ರಹ ವಿಜ್ಞಾನ ವಿಭಾಗದಲ್ಲಿ ಕುಲಕರ್ಣಿ ಪ್ರೊಫೆಸರ್ ಆಗಿದ್ದಾರೆ.ಈ ಪ್ರಶಸ್ತಿಯು ಒಂದು ದಶಲಕ್ಷ ಡಾಲರ್ (6 ಕೋಟಿ 70 ಲಕ್ಷ ರೂ.ಗಳು) ಬಹುಮಾನ ಒಳಗೊಂಡಿದೆ. ಮೇ 21ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಖಗೋಳ ವಿಜ್ಞಾನದ ವಿದ್ಯುತ್-ಆಯಸ್ಕಾಂತ ಪರಿಣಾಮಗಳ ಅಧ್ಯಯನದಲ್ಲಿ ವಿಶೇಷ ಪರಿಣತಿ ಹೊಂದಿರುವ ಇವರು ಪರಿವರ್ತಿನೀಯ ಮತ್ತು ಅಸ್ಥಿರ ವಿದ್ಯಮಾನಗಳ ಅನ್ವೇಷಣೆಗಾಗಿ ರಾತ್ರಿ ಆಗಸದ ಬೃಹತ್ ಸಮೀಕ್ಷೆಯ ಪಲ್ಮೋರ್ ಟ್ರಾಸಿಯೆಂಟ್ ಫ್ಯಾಕ್ಟರಿಯನ್ನು ನಿರ್ಮಿಸಿ ಆಳವಾದ ಅಧ್ಯಯನ ನಡೆಸಿದ್ದಾರೆ. ಆಗಸದಲ್ಲಿ ಕಂಡುಬರುವ ನಕ್ಷತ್ರ ಸ್ಫೋಟ ಸೇರಿದಂತೆ ಕುತೂಹಲಕಾರಿ ಸೌರ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲುವ ಅನೇಕ ಅಧ್ಯಯನಗಳನ್ನು ನಡೆಸಿದ್ದಾರೆ.
ಡಾನ್ ಡೇವಿಡ್ ಪ್ರಶಸ್ತಿ:
ಡಾನ್ ಡೇವಿಡ್ ಫೌಂಡೇಶನ್ ಅನ್ನು 2000ರಲ್ಲಿ ಅಂತಾರಾಷ್ಟ್ರೀಯ ಉದ್ಯಮಿ ಮತ್ತು ಲೋಕೋಪಕಾರಿ ದಿವಂಗತ ಡಾನ್ ಡೇವಿಡ್ ಸ್ಥಾಪಿಸಿದರು. ವಿಜ್ಞಾನ, ಮಾನವೀಯತೆ ಅಥವಾ ನಾಗರಿಕ ಕ್ಷೇತ್ರಗಳಿಗೆ ಆದರ್ಶಪ್ರಾಯವಾದ ಕೊಡುಗೆಗಳನ್ನು ನೀಡಿದ ಜನರಿಗೆ “Past,” “Present” ಮತ್ತು “Future” ವರ್ಗಗಳಲ್ಲಿ ಪ್ರತಿ ವರ್ಷ $ 1 ದಶಲಕ್ಷ ಮೊತ್ತದ ಮೂರು ಡಾನ್ ಡೇವಿಡ್ ಪ್ರಶಸ್ತಿಗಳು ನೀಡಲಾಗುತ್ತದೆ.
- Past ವಿಭಾಗ: ಇತಿಹಾಸ, ಪುರಾತತ್ತ್ವ ಶಾಸ್ತ್ರ, ಜೀವನಚರಿತ್ರೆ, ಇತ್ಯಾದಿ ಕ್ಷೇತ್ರದಿಂದ ಪ್ರಶಸ್ತಿಗೆ ಆಯ್ಕೆಮಾಡಲಾಗುತ್ತದೆ.
- Present ವಿಭಾಗ: ಕಲೆ, ಮಾಧ್ಯಮ, ಪಾಲಿಸಿ, ಅರ್ಥಶಾಸ್ತ್ರ ಇತ್ಯಾದಿ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗುತ್ತದೆ.
- Future ವಿಭಾಗ: ನೈಸರ್ಗಿಕ ವಿಜ್ಞಾನದಿಂದ ಆಯ್ಕೆ ಮಾಡಲಾಗುತ್ತದೆ.
- ಪ್ರಶಸ್ತಿ ಪುರಸ್ಕೃತರು ತಮ್ಮ ಕ್ಷೇತ್ರಗಳಲ್ಲಿ ಪದವೀಧರ ಅಥವಾ ಸ್ನಾತಕೋತ್ತರ ಸಂಶೋಧಕರಿಗೆ ವಿದ್ಯಾರ್ಥಿವೇತನವನ್ನು ಒದಗಿಸಲು ತಮ್ಮ ಬಹುಮಾನದ ಹಣದಲ್ಲಿ ಶೇ 10% ಹಣವನ್ನು ಕಡ್ಡಾಯವಾಗಿ ದಾನ ಮಾಡಬೇಕು.
- ಭಾರತೀಯರಾದ ಲೇಖಕ ಅಮಿತವ್ ಘೋಷ್, ಸಂಗೀತ ಸಂಯೋಜಕ ಜುಬಿನ್ ಮೆಹ್ತಾ ಹಾಗೂ ಖ್ಯಾತ ರಾಸಾಯನಿಕ ತಜ್ಞ ಸಿ.ಎನ್.ರಾವ್ ಅವರೂ ಈ ಹಿಂದೆ ಡಾನ್ ಡೇವಿಡ್ ಪ್ರಶಸ್ತಿ ಗಳಿಸಿದ್ದಾರೆ.
ಸಂಜಯ್ ಗುಬ್ಬಿಮತ್ತು ಪೂರ್ಣಿಮಾ ದೇವಿ ಬರ್ಮನ್ ಅವರಿಗೆ “ವೈಟ್ಲಿ ಪ್ರಶಸ್ತಿ”
ಕರ್ನಾಟಕದ ಸಂಜಯ್ ಗುಬ್ಬಿ ಮತ್ತು ಅಸ್ಸಾಂನ ಪೂರ್ಣಿಮಾ ಬರ್ಮಾನ್ ಅವರಿಗೆ ವನ್ಯಜೀವಿ ಸಂರಕ್ಷಣೆಯಲ್ಲಿ ಕೊಡುಗೆಗಾಗಿ ಪ್ರತಿಷ್ಠಿತ ವೈಟ್ಲಿ ಪ್ರಶಸ್ತಿ ಲಭಿಸಿದೆ. ವೈಟ್ಲಿ ಪ್ರಶಸ್ತಿಯನ್ನು “ಗ್ರೀನ್ ಆಸ್ಕರ್” ಎಂದೇ ಕರೆಯಲಾಗುತ್ತದೆ. 66 ದೇಶಗಳಿಂದ 169 ಅಭ್ಯರ್ಥಿಗಳ ಪೈಕಿ ಆಯ್ಕೆಯಾದ ಎಂಟು ಜನರಲ್ಲಿ ಇಬ್ಬರು ಭಾರತೀಯರು.
ಪೂರ್ಣಿಮಾ ದೇವಿ ಬರ್ಮನ್ ಅವರನ್ನು ಗ್ರೇಟರ್ ಅಡ್ಜುಟೆಂಟ್ ತಳಿಯ ಕೊಕ್ಕರೆ (ಹರ್ಗಿಲಾ) ಮತ್ತು ಅದರ ಆವಾಸಸ್ಥಾನದ ಸಂರಕ್ಷಣೆಯ ಪ್ರಯತ್ನಗಳಿಗಾಗಿ ಆಯ್ಕೆ ಮಾಡಲಾಗಿದೆ. ಬರ್ಮನ್ ಅವರು ಕೊಕ್ಕರೆಗಳ ಸಂರಕ್ಷಣೆಗಾಗಿ ಕಾಮ್ರಪ್ ಜಿಲ್ಲೆಯ ಮೂರು ಹಳ್ಳಿಗಳಲ್ಲಿ ಮಹಿಳೆಯರ ಜಾಲವನ್ನು ಸೃಷ್ಟಿಸಿದ್ದಾರೆ. ಗ್ರೇಟರ್ ಅಡ್ಜುಟೆಂಟ್ ತಳಿ ಕೊಕ್ಕರೆಗಳು ಜಾಗತಿಕವಾಗಿ 1200-1800 ರಷ್ಟಿದೆ. ಇವುಗಳಲ್ಲಿ ಸುಮಾರು 800 ಅಸ್ಸಾಂನಲ್ಲಿ ಮತ್ತು 150 ಬಿಹಾರದಲ್ಲಿ ಕಾಣಸಿಗುತ್ತವೆ.
ಕರ್ನಾಟಕದಲ್ಲಿ ಹುಲಿ ಕಾರಿಡಾರ್ಗಳನ್ನು ಸಂರಕ್ಷಿಸುತ್ತಿರುವ ಕಾರ್ಯಕ್ಕೆ ಸಂಜಯ್ ಗುಬ್ಬಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜೀವಶಾಸ್ತ್ರಜ್ಞ ಮತ್ತು ವಿಜ್ಞಾನಿ ಆಗಿರುವ ಗುಬ್ಬಿ ಅವರು ಮೈಸೂರು ಮೂಲದ ನೇಚರ್ ಕನ್ಸರ್ವೇಷನ್ ಫೌಂಡೇಶನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುಬ್ಬಿ ಅವರು ರಾಜ್ಯ ವನ್ಯಜೀವಿಗಳ ಮಂಡಳಿಯ ಸದಸ್ಯರು ಸಹ ಆಗಿದ್ದಾರೆ. 1970 ರಿಂದ ಭಾರತದಲ್ಲಿ ಸಂರಕ್ಷಿತ ಪ್ರದೇಶಗಳ ಅತಿದೊಡ್ಡ ವಿಸ್ತರಣೆಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕರ್ನಾಟಕದಲ್ಲಿ ಸಂರಕ್ಷಿತ ಪ್ರದೇಶಗಳ ಗಾತ್ರವನ್ನು ಶೇ 37% ಹೆಚ್ಚಿಸುವಲ್ಲಿ ಅವರ ಕೊಡುಗೆ ಅಪಾರ.
ವೈಟ್ಲಿ ಪ್ರಶಸ್ತಿ:
ಯುಕೆ ಮೂಲದ ವೈಟ್ಲಿ ಫಂಡ್ ಫಾರ್ ನೇಚರ್ ಈ ಪ್ರಶಸ್ತಿಯನ್ನು ನೀಡುತ್ತಿದೆ. ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಗಣನೀಯ ಕೊಡುಗೆ ನೀಡಿದವರನ್ನು ಪ್ರೋತ್ಸಾಹಿಸಲು ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ₹29ಲಕ್ಷ ನಗದು ಪುರಸ್ಕಾರ ಒಳಗೊಂಡಿದೆ.
- ಲಾಟನ್ ನಗರದ ಮೇಯರ್ ಆಗಿ ಭಾರತದ ಫಿಲಿಪ್ ಆಯ್ಕೆ: ಲಂಡನಿನ ಲಾಟನ್ ನಗರದ ಮೇಯರ್ ಆಗಿ ಭಾರತದ ಫಿಲಿಪ್ ಅಬ್ರಹಾಂ ಆಯ್ಕೆಯಾಗಿದ್ದಾರೆ. ಒಂದು ವರ್ಷದಿಂದ ಉಪ ಮೇಯರ್ ಆಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. 2012ರಲ್ಲಿ ಪ್ರಥಮ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು 2016ರಲ್ಲಿ ಮರು ಆಯ್ಕೆಗೊಂಡಿದ್ದರು. ಕೇರಳದವರಾದ ಫಿಲಿಪ್ ಅವರು ಲಂಡನ್ನಲ್ಲಿರುವ ಭಾರತೀಯರ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ.
- ರಾಫೆಲ್ ನಡಾಲ್ ತೆಕ್ಕೆಗೆ ಮ್ಯಾಡ್ರಿಡ್ ಓಪನ್ ಟೈಟಲ್: ರಾಫೆಲ್ ನಡಾಲ್ ಅವರು ಡೊಮಿನಿಕ್ ಥೀಮ್ ಅವರನ್ನು ಸೋಲಿಸುವ ಮೂಲಕ ಐದನೇ ಬಾರಿಗೆ ಮ್ಯಾಡ್ರಿಡ್ ಓಪನ್ ಟೈಟಲ್ ಗೆದ್ದುಕೊಂಡರು. ಈ ವಿಜಯದೊಂದಿಗೆ, ಬಾರ್ಸಿಲೋನಾ ಓಪನ್ ಮತ್ತು ಮಾಂಟೆ ಕಾರ್ಲೋ ಮಾಸ್ಟರ್ಸ್ ನಂತರ ಮೂರು ನೇರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
- ಭಾರತದ ಉಕ್ಕು ಉದ್ಯಮಿ ಸಂಜೀವ ಗುಪ್ತ ಅವರಿಗೆ ‘ಪ್ಲಾಟ್ಸ್ ಗ್ಲೋಬಲ್ ಮೆಟಲ್ಸ್ ಪ್ರಶಸ್ತಿ’: ಭಾರತದ ಉಕ್ಕು ಉದ್ಯಮಿ ಸಂಜೀವ ಗುಪ್ತ ರವರಿಗೆ ಪ್ಲಾಟ್ಸ್ ಗ್ಲೋಬಲ್ ಮೆಟಲ್ಸ್ ಪ್ರಶಸ್ತಿ ಲಭಿಸಿದೆ. ‘ಉಕ್ಕು ಉದ್ಯಮಕ್ಕೆ ನೀಡಿರುವ ಕೊಡುಗೆಗೆ ಈ ಪ್ರಶಸ್ತಿ ಲಭಿಸಿದೆ. ಭಾರತದ ಉಕ್ಕು ಉದ್ಯಮಿಗಳಾದ ಸಜ್ಜನ್ ಜಿಂದಾಲ್, ಪ್ರಕಾಶ್ ಕುಮಾರ್ ಸಿಂಗ್ ಅಂತಿಮ ಪಟ್ಟಿಯಲ್ಲಿದ್ದರು.
- ಹಿರಿಯ ನಿರ್ದೇಶಕ “ಭಗವಾನ್”ರವರಿಗೆ ಡಾ.ರಾಜ್ ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿ: ಹಿರಿಯ ಸಿನಿಮಾ ನಿರ್ದೇಶಕ ಎಸ್.ಕೆ.ಭಗವಾನ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೀಡುವ ಡಾ.ರಾಜ್ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿಯನ್ನು ಹಿರಿಯ ನಟಿ ಜಯಂತಿ ಪ್ರದಾನ ಮಾಡಿದರು. ಪ್ರಶಸ್ತಿಯು ಸ್ಮರಣಿಕೆ, ಪ್ರಮಾಣಪತ್ರ ಹಾಗೂ ₹ 35 ಸಾವಿರ ನಗದು ಬಹುಮಾನವನ್ನು ಒಳಗೊಂಡಿದೆ.