ಸಂತೋಷ ಸೂಚ್ಯಂಕ ಅಭಿವೃದ್ದಿಗೆ ಐಐಟಿ-ಖರಗಪುರದೊಂದಿಗೆ ಮಧ್ಯಪ್ರದೇಶ ಸರ್ಕಾರ ಒಪ್ಪಂದ
ಐಐಟಿ ಖರಗ್ಪುರದ “ರೆಕಿ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ದಿ ಹ್ಯಾಪಿನೆಸ್ ಮತ್ತು ಮಧ್ಯಪ್ರದೇಶ ಸರ್ಕಾರದ ‘ರಾಜ್ಯ ಆನಂದಂ ಸಂಸ್ಥಾನ’ (ಸಂತೋಷ ಇಲಾಖೆ)” ರಾಜ್ಯ ನಿವಾಸಿಗಳ ಯೋಗಕ್ಷೇಮವನ್ನು ಅಳತೆ ಮಾಡಲು ಸಂತೋಷ ಸೂಚ್ಯಂಕ ಅಭಿವೃದ್ಧಿಗೆ ಸಹಿ ಹಾಕಿವೆ. . ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಐಐಟಿ-ಕೆಜಿಪಿ ನಿರ್ದೇಶಕ ಪ್ರೊಫೆಸರ್ ಪಿ.ಪಿ.ಚಕ್ರಬಾರ್ತಿ ಅವರ ಉಪಸ್ಥಿತಿಯಲ್ಲಿ ಭೋಪಾಲ್ ನಲ್ಲಿ ಸಹಿ ಹಾಕಲಾಯಿತು.
ಪ್ರಮುಖಾಂಶಗಳು:
ಸಂತೋಷ ಸೂಚ್ಯಂಕವನ್ನು ಐಐಟಿ-ಕೆಜಿಪಿ ಅಭಿವೃದ್ಧಿಪಡಿಸಲಿದ್ದು, ರಾಜ್ಯ ಸರ್ಕಾರಸಂಗ್ರಹಿಸುವ ಮಾಹಿತಿಯನ್ನು ರಾಜ್ಯದ ಜನರ ಸಂತೋಷ ಮಟ್ಟವನ್ನು ನಿರ್ಣಯಿಸಲು ಮತ್ತು ರಾಜ್ಯದಲ್ಲಿ ಸಂತೋಷ ಮಟ್ಟವನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ನಿರ್ಣಯಿಸಲು ಬಳಸಲಾಗುತ್ತದೆ.
ಹಿನ್ನಲೆ:
2017 ರ ವಿಶ್ವಸಂಸ್ಥೆಯ ವಿಶ್ವ ಸಂತೋಷ ಸೂಚ್ಯಂಕ (WHI) ದಲ್ಲಿ ಭಾರತ 155 ದೇಶಗಳ ಪೈಕಿ 122 ನೇ ಸ್ಥಾನದಲ್ಲಿದೆ. 8 ಸಾರ್ಕ್ ರಾಷ್ಟ್ರಗಳಲ್ಲಿ ಪಾಕಿಸ್ತಾನ 80ನೇ ಸ್ಥಾನ, ನೇಪಾಳ 99, ಭೂತಾನ್ 97, ಬಾಂಗ್ಲಾದೇಶ 110, ಶ್ರೀಲಂಕಾ 120ನೇ ಸ್ಥಾನದಲ್ಲಿವೆ. ಈ ಪಟ್ಟಿಯ ಟಾಪ್ ಐದು ಸ್ಥಾನಗಳಲ್ಲಿ ನಾರ್ವೆ, ಡೆನ್ಮಾರ್ಕ್, ಐಸ್ಲ್ಯಾಂಡ್, ಸ್ವಿಟ್ಜರ್ಲ್ಯಾಂಡ್ ಮತ್ತು ಫಿನ್ಲ್ಯಾಂಡ್ ಇವೆ. ಅಸಮಾನತೆ, ಜೀವಿತಾವಧಿ, ತಲಾವಾರು ಜಿಡಿಪಿ, ಸಾರ್ವಜನಿಕ ನಂಬಿಕೆ ಮತ್ತು ಸಾಮಾಜಿಕ ಬೆಂಬಲದಂತಹ ಅಂಶಗಳನ್ನು ಆಧರಿಸಿ ಶ್ರೇಯಾಂಕವನ್ನು ನೀಡಲಾಗಿದೆ. 2012 ರಲ್ಲಿ ಮೊದಲ ಬಾರಿಗೆ ಸಂತೋಷ ಸೂಚ್ಯಂಕವನ್ನು ಪ್ರಕಟಿಸಲಾಗಿತ್ತು.
ಅಂತಾರಾಷ್ಟ್ರೀಯ ಸೌರ ಒಕ್ಕೂಟ ಚೌಕಟ್ಟು ಒಪ್ಪಂದವನ್ನು ಅನುಮೋದಿಸಿದ “ನೌರು” ರಾಷ್ಟ್ರ
ಪ್ರಪಂಚದ ಅತ್ಯಂತ ಚಿಕ್ಕ ಗಣರಾಜ್ಯವಾದ “ಐಲ್ಯಾಂಡ್ ಆಫ್ ನೌರು” ಅಂತಾರಾಷ್ಟ್ರೀಯ ಸೌರ ಒಕ್ಕೂಟ (ISA) ಚೌಕಟ್ಟು ಒಪ್ಪಂದವನ್ನು ಅನುಮೋದಿಸಿದೆ. ಆ ಮೂಲಕ ಈ ಒಪ್ಪಂದವನ್ನು ಅನುಮೋದಿಸಿದ ಆರನೇ ರಾಷ್ಟ್ರ ಎನಿಸಿದೆ. ಗಾಂಧಿನಗರದಲ್ಲಿ ನಡೆಯುತ್ತಿರುವ ಆಫ್ರಿಕಾ ಅಭಿವೃದ್ದಿ ಬ್ಯಾಂಕಿನ ವಾರ್ಷಿಕ ಸಭೆಯಲ್ಲಿ ಅಂತಾರಾಷ್ಟ್ರೀಯ ಸೌರ ಒಕ್ಕೂಟ (ISA) ಚೌಕಟ್ಟು ಒಪ್ಪಂದವನ್ನು ಅನುಮೋದಿಸಲು ಐದು ರಾಷ್ಟ್ರಗಳಾದ ಕೊಮೊರೊಸ್, ಕೋಟ್ ಡಿ ಐವೊಯಿರ್, ಸೊಮಾಲಿಯಾ, ಘಾನಾ ಮತ್ತು ಜಿಬೌಟಿ ಒಪ್ಪಿವೆ. ಆಫ್ರಿಕಾ ಅಭಿವೃದ್ದಿ ಬ್ಯಾಂಕಿನ ವಾರ್ಷಿಕ ಸಭೆಯನ್ನು ಭಾರತವು ಮೊದಲ ಬಾರಿಗೆ ಆಯೋಜಿಸುತ್ತಿದೆ. 1983ರಲ್ಲಿ ಭಾರತವು ಆಫ್ರಿಕಾ ಅಭಿವೃದ್ದಿ ಬ್ಯಾಂಕಿಗೆ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಗೊಂಡಿದೆ.
ನೌರು:
ನೌರು ರಾಷ್ಟ್ರ ಆಸ್ಟ್ರೇಲಿಯಾದ ಈಶಾನ್ಯ ದಿಕ್ಕಿನಲ್ಲಿರುವ ಮೈಕ್ರೋನೇಶಿಯಾದಲ್ಲಿ ಒಂದು ಸಣ್ಣ ದ್ವೀಪ ಗಣರಾಜ್ಯವಾಗಿದೆ. ನೌರು ಸರಿ ಸುಮಾರು 10,200 ಜನಸಂಖ್ಯೆಯನ್ನು ಹೊಂದಿದೆ. ದ್ವೀಪದ ಅತ್ಯಧಿಕ ಎತ್ತರದ ಪ್ರದೇಶ ಸಮುದ್ರ ಮಟ್ಟಕ್ಕಿಂತ 65 ಮೀಟರ್ಗಳಷ್ಟಿದೆ. ಹಾಗಾಗಿ, ಹವಾಮಾನ ಬದಲಾವಣೆಯ ದುಷ್ಪರಿಣಾಮ ದ್ವೀಪದಲ್ಲಿ ಸರ್ವೇಸಾಮಾನ್ಯ. ನೌರು ದೇಶವು ತನ್ನ ಶಕ್ತಿಯ ಅವಶ್ಯಕತೆಗಳಲ್ಲಿ ಸುಮಾರು 30% ರಷ್ಟು ಸೌರ ವಿದ್ಯುತ್ ಸ್ಥಾಪನೆಯ ಮೂಲಕ ಭರಿಸುತ್ತಿದೆ. ಈ ಸಣ್ಣ ರಾಷ್ಟ್ರ 2020ರೊಳಗೆ ನವೀಕರಿಸಬಹುದಾದ ಮೂಲಗಳಿಂದ ಶೇಕಡ 50 ರಷ್ಟು ಶಕ್ತಿಯ ಉತ್ಪಾದನೆ ಹೊಂದುವ ಗುರಿಯನ್ನು ಹೊಂದಿದೆ.
ಅಂತಾರಾಷ್ಟ್ರೀಯ ಸೌರ ಒಕ್ಕೂಟ:
Cconference of Parties-21 (COP-21) ಶೃಂಗಸಭೆಯ ಮೊದಲ ದಿನದಂದು, ಭಾರತೀಯ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹಾಲಾಂಡೆ ಅವರು ಹೇರಳವಾದ ಸೌರ ಶಕ್ತಿಯನ್ನು ಹೊಂದಿರುವ ದೇಶಗಳ ಒಕ್ಕೂಟವಾಗಿ ಅಂತಾರಾಷ್ಟ್ರೀಯ ಸೌರ ಒಕ್ಕೂಟವನ್ನು ಪ್ರಾರಂಭಿಸಿದರು. ಈ ಮೈತ್ರಿ ಅಡಿಯಲ್ಲಿ, ಉಷ್ಣವಲಯದ ವ್ಯಾಪ್ತಿಯಲ್ಲಿ ಬರುವ 121 ದೇಶಗಳಲ್ಲಿ ಸೌರ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಪ್ರಯತ್ನಕ್ಕೆ ಸಹಕಾರ ನೀಡಲು ಆಹ್ವಾನಿಸಲಾಗಿದೆ. ಈ ದೇಶಗಳಲ್ಲಿ ಹೆಚ್ಚಿನವು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿವೆ. ಅಂತರರಾಷ್ಟ್ರೀಯ ಸೌರ ಒಕ್ಕೂಟ ಮೂರು ಉದ್ದೇಶಗಳನ್ನು ಒಳಗೊಂಡಿದೆ. ಮೊದಲನೆಯದಾಗಿ ಬೇಡಿಕೆಯನ್ನು ಹೆಚ್ಚಿಸುವ ಮೂಲಕ ಬೆಲೆಯನ್ನು ತಗ್ಗಿಸುವುದು; ಎರಡನೆಯದು ಸೌರ ತಂತ್ರಜ್ಞಾನಗಳನ್ನು ಪ್ರಮಾಣೀಕರಿಸುವುದು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು.
ದಾಖಲೆಗಳ ಸ್ವಯಂ ಧೃಡಿಕರಣಕ್ಕೆ ಇ-ಸನದ್
ಸಿಬಿಎಸ್ಇ ಡಿಜಿಟಲ್ ರೆಪೊಸಿಟರಿಯ ‘ಪರಿನಮ್ ಮಂಜುಷಾ’ದೊಂದಿಗೆ ಇ-ಸನದ್ ಅನ್ನು ಏಕೀಕೃತಗೊಳಿಸುವ ಕಾರ್ಯಕ್ರಮಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು ಚಾಲನೆ ನೀಡಿದರು
- ಇ ಸನದ್ ಸೇವೆಯನ್ನು ದೇಶದ ನಾಗರಿಕರ ದಾಖಲೆಗಳ ಆನ್ಲೈನ್ ಪರಿಶೀಲನೆ ಮತ್ತು ದೃಢೀಕರಣಕ್ಕಾಗಿ ಜಾರಿಗೊಳಿಸಲಾಗಿದೆ.
- ಇ-ಸನಾದ್ ಡಿಜಿಟಲ್ ಇಂಡಿಯಾದ ಒಂದು ಉಪಕ್ರಮವಾಗಿದೆ. ನಗದು ರಹಿತ ವ್ಯವಹಾರ, ಕಾಗದ ರಹಿತ ಆಡಳಿತ, ಕಾಗದ ರಹಿತ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಉದ್ದೇಶ.
- ಇ-ಸನದ್ ಸೇವೆಯಿಂದ ದೇಶದ ಅಭ್ಯರ್ಥಿಗಳಿಗೆ ಮತ್ತು ವಿದೇಶಗಳಿಗೆ ಪ್ರಯಾಣಿಸುವವರಿಗೆ ಪ್ರಯೋಜನವಾಗಲಿದೆ. ಇದರಿಂದ ವಿದೇಶಿ ಸರ್ಕಾರಗಳಿಂದ ಡಿಜಿಟಲ್ ಪರಿಶೀಲನೆ ಸುಲಭವಾಗಲಿದೆ.
- ಇದರಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಸುಲಭವಾಗಲಿದೆ. ಆ ಮೂಲಕ ಅಭ್ಯರ್ಥಿಗಳ ಸಮಯ ಮತ್ತು ಹಣದ ಉಳಿತಾಯವಾಗಲಿದೆ. ಪ್ರಸ್ತುತ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಧೃಡಿಕರಿಸಲು ದೂರ ಪ್ರಯಾಣ ಮಾಡುವ ಅಗತ್ಯವಿದೆ.
WHO ಡೈರೆಕ್ಟರ್ ಜನರಲ್ ಆಗಿ ಡಾ. ಟೆಡ್ರೊಸ್ ಅಹಾನೊಮ್ ಘೆಬ್ರೆಯೆಸುಸ್ ನೇಮಕ
ಇಥೋಪಿಯಾದ ಮಾಜಿ ಆರೋಗ್ಯ ಸಚಿವ ಡಾ. ಟೆಡ್ರೊಸ್ ಅಹಾನೊಮ್ ಘೆಬ್ರೆಯೆಸುಸ್ ರವರು ವಿಶ್ವ ಆರೋಗ್ಯ ಸಂಸ್ಥೆಯ ನೂತನ ಡೈರೆಕ್ಟರ್-ಜನರಲ್ ಆಗಿ ನೇಮಕಗೊಂಡಿದ್ದಾರೆ. ಮತದಾನ ಪ್ರಕ್ರಿಯೆಯಲ್ಲಿ ವಿಶ್ವಆರೋಗ್ಯ ಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಭಾಗವಹಿಸುವಿಕೆ ಮೂಲಕ ಗಮನ ಸೆಳೆದಿದ್ದು ವಿಶೇಷವಾಗಿತ್ತು. ಡಾ. ಟೆಡ್ರಸ್ ಅಹಾನೊಮ್ ಘೆಬ್ರೆಯೆಸುಸ್ ರವರು ಇಬ್ಬರು ಸ್ಪರ್ಧಿಗಳಾದ ಯುಕೆಯ ಡಾ. ಡೇವಿಡ್ ನಬರೋ ಮತ್ತು ಪಾಕಿಸ್ತಾನದ ಡಾ. ಸಾನಿಯಾ ನಿಶ್ತಾರ್ ಸೋಲಿಸಿ ನೇಮಕಗೊಂಡಿದ್ದಾರೆ.
ಡಾ. ಟೆಡ್ರೊಸ್:
ಡಾ ಟೆಡ್ರೊಸ್ ಅವರು ಇಥಿಯೋಪಿಯಾದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ (2012-2016) ಮತ್ತು ಆರೋಗ್ಯ ಸಚಿವರಾಗಿ (2005-2012) ಕಾರ್ಯನಿರ್ವಹಿಸಿದ್ದಾರೆ. “ಬೋರ್ಡ್ ಆಫ್ ದಿ ಗ್ಲೋಬಲ್ ಫಂಡ್ ಟು ಫೈಟ್ ಏಡ್ಸ್, ಟ್ಯುಬರ್ಕ್ಯೂಲೊಸಿ ಅಂಡ್ ಮಲೇರಿಯಾದ ಅಧ್ಯಕ್ಷರಾಗಿದ್ದಾರೆ. ಅಲ್ಲದೇ “ರೋಲ್ ಬ್ಯಾಕ್ ಮಲೇರಿಯಾ (ಆರ್ಬಿಎಂ)” ಮಂಡಳಿಯ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ:
ವಿಶ್ವ ಆರೋಗ್ಯ ಸಂಸ್ಥೆ (WHO) ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿದ್ದು ಅಂತರಾಷ್ಟ್ರೀಯ ಸಾರ್ವಜನಿಕ ಆರೋಗ್ಯದ ಮೇಲೆ ಸಹಕಾರ ನೀಡುವ ಅಧಿಕಾರವನ್ನು ಹೊಂದಿದೆ. 1948ರ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. WHOದ ಕೇಂದ್ರ ಕಚೇರಿ ಜಿನೀವಾದಲ್ಲಿದೆ.
ದೇಶದ ಮೊದಲ ನೀರಿನೊಳಗಿನ ರೈಲ್ವೆ ಸುರಂಗ ಕಾಮಗಾರಿ ಪೂರ್ಣ
ದೇಶದ ಮೊದಲ ನೀರಿನೊಳಗಿನ ರೈಲ್ವೆ ಸುರಂಗ ಕಾಮಗಾರಿ ಪೂರ್ಣಗೊಂಡಿದೆ. ಹೌರಾ ಮತ್ತು ಕೋಲ್ಕತ್ತಾವನ್ನು ಸಂಪರ್ಕಿಸುವ ಸುರಂಗ ಮಾರ್ಗವನ್ನು ಹೂಗ್ಲಿ ನದಿಯಲ್ಲಿ ಕೊರೆಯಲಾಗಿದೆ. ಈಸ್ಟ್ ವೆಸ್ಟ್ ಮೆಟ್ರೊ ಭಾಗವಾಗಿ ಅಫ್ಕಾನ್ಸ್ ಟ್ರಾನ್ಸ್ಸ್ಟನ್ಸ್ಟ್ರಾಯ್ ಮತ್ತು ಕೊಲ್ಕತ್ತಾ ಮೆಟ್ರೋ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ (ಕೆಎಂಸಿಆರ್ಎಲ್) ಈ ಸುರಂಗವನ್ನು ಕೊರೆದಿವೆ.
ಕೋಲ್ಕತ್ತದ ಈಸ್ಟ್ ವೆಸ್ಟ್ ಮೆಟ್ರೊ ಉದ್ದವು 16.6 ಕಿಮೀ. ಇದರಲ್ಲಿ ಹೂಗ್ಲಿ ನದಿಯ ಅಡಿಯಲ್ಲಿ 502ಮೀಟರ್ ಸುರಂಗ ಮಾರ್ಗವಿದೆ. ಯೋಜನೆಯು ಅಫ್ಕಾನ್ಸ್ ಟ್ರಾನ್ಸ್ಟನ್ನೆಸ್ಟ್ರೋಯ್ನಿಂದ ನಿರ್ಮಿಸಲ್ಪಟ್ಟಿದೆ. ಆಫ್ಕಾನ್ಸ್ ಟ್ರಾನ್ಸ್ಟನ್ನೆಸ್ಟೊರೊ ಇಂಡೋ-ರಷ್ಯನ್ ಜಂಟಿ ಉದ್ಯಮವಾಗಿದೆ. ಯೋಜನೆಯು ಪಶ್ಚಿಮಕ್ಕೆ ಹೌರಾ ಮತ್ತು ಪೂರ್ವಕ್ಕೆ ಸಾಲ್ಟ್ ಸರೋವರವನ್ನು ಸಂಪರ್ಕಿಸುತ್ತದೆ. ನೀರೊಳಗೆ ಸುರಂಗ ಕೊರೆಯುವುದು ಯೋಜನೆಯ ನಿರ್ಣಾಯಕ ಕಾರ್ಯವಾಗಿತ್ತು. ರಚ್ನಾ ಎಂಬ ಬೃಹತ್ ಸುರಂಗ ಕೊರೆಯುವ ಯಂತ್ರವನ್ನು ಬಳಸಿ ಸುರಂಗ ಮಾರ್ಗವನ್ನು ಕೊರೆಯಲಾಗಿದೆ.
ಈಸ್ಟ್ ವೆಸ್ಟ್ ಮೆಟ್ರೊ 16.6 ಕಿ.ಮೀ ಉದ್ದವಿದ್ದು 12 ನಿಲ್ದಾಣಗಳನ್ನು ಹೊಂದಿದೆ. ಅವುಗಳಲ್ಲಿ ಆರು ಭೂಮಿಯಡಿ ಇವೆ. 2012ಕ್ಕೆ ಯೋಜನೆ ಪೂರ್ಣಗೊಳ್ಳಬೇಕಿತ್ತು ಆದರೆ ಕಾರಣಾಂತರ ಯೋಜನೆಯನ್ನು ಹಲವು ಬಾರಿ ಮುಂದೂಡಲಾಯಿತು. ಡಿಸೆಂಬರ್ 2019ರ ವೇಳೆಗೆ ಯೋಜನೆ ಲೋಕಾರ್ಪಣೆಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
IARIಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ
ಅಸ್ಸಾಂ-ಅರುಣಾಚಲ ಪ್ರದೇಶ ಗಡಿಯಲ್ಲಿರುವ ಅಸ್ಸಾಂನ ದಿಮಾಜಿ ಜಿಲ್ಲೆಯ ಗೊಗಮುಖ್ನಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಗೆ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಿದರು. ಇದು ಮೂರನೇ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (IARI). ರಾಷ್ಟ್ರೀಯ ರಾಜಧಾನಿ ನವದೆಹಲಿಯಲ್ಲಿ ಹೊರತುಪಡಿಸಿ, ಜಾರ್ಖಂಡ್ನ ರಾಂಚಿಯಲ್ಲಿ ಎರಡನೇ IARI ಸ್ಥಾಪನೆ ಕೆಲಸ ಆರಂಭವಾಗಿದೆ.
ಈಶಾನ್ಯ ಭಾರತದ ಕೃಷಿ ಕ್ಷೇತ್ರದಲ್ಲಿ ಒಟ್ಟಾರೆ ಅಭಿವೃದ್ಧಿಗಾಗಿ ಈ ಸಂಸ್ಥೆ ಸಹಾಯ ಮಾಡಲಿದೆ. ಸಂಶೋಧನಾ ಸಂಸ್ಥೆಯಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳು, ಪಶು ಸಂಗೋಪನೆ ಮತ್ತು ರೇಷ್ಮೆ ಕೀಟ ಕೃಷಿಗೆ ಸಂಬಂಧಿಸಿದ ಸೌಲಭ್ಯಗಳನ್ನು ಹೊಂದಿರಲಿದೆ.
ಈಶಾನ್ಯ ಭಾರತದ ಸಮರ್ಪಕ ಅಭಿವೃದ್ದಿ ಮತ್ತು ಸಂಪರ್ಕ ಸಾಧಿಸಲು ಪ್ರಧಾನ ಮಂತ್ರಿ ರವರು “ಪಂಚ ತತ್ವ”ದ ಬಗ್ಗೆ ಮಾತನಾಡಿದರು. ಈ ಐದು ತತ್ವಗಳೆಂದರೆ ಹೆದ್ದಾರಿಗಳು, ರೈಲ್ವೆ, ಜಲಮಾರ್ಗಗಳು, ವಾಯುಮಾರ್ಗ ಮತ್ತು I- ವೇ ಅಥವಾ ಆಪ್ಟಿಕಲ್ ಫೈಬರ್ ನೆಟ್ವರ್ಕ್.
IARI:
IARI ಕೃಷಿ ಶಿಕ್ಷಣದಲ್ಲಿ ಕೃಷಿ ಸಂಶೋಧನೆ ಮತ್ತು ಸ್ನಾತಕೋತ್ತರ ಉನ್ನತ ಅಧ್ಯಯನಗಳ ಭಾರತದ ಪ್ರಧಾನ ರಾಷ್ಟ್ರೀಯ ಸಂಸ್ಥೆಯಾಗಿದೆ. IARIನ ಆಡಳಿತ ಮತ್ತು ಹಣಕಾಸಿನ ನೆರವನ್ನು ಭಾರತೀಯ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR) ಭರಿಸುತ್ತದೆ. 1970ರ ದಶಕದಲ್ಲಿ ಭಾರತದಲ್ಲಿ ಹಸಿರು ಕ್ರಾಂತಿಗೆ ಕಾರಣವಾದ ಸಂಶೋಧನೆ ಮಾಡಿದ ಕೀರ್ತಿ IARIಗೆ ಸಲ್ಲುತ್ತದೆ.
1905ರಲ್ಲಿ ಬಿಹಾರದ ಪುಸಾದಲ್ಲಿ ಕೃಷಿ ಸಂಶೋಧನಾ ಸಂಸ್ಥೆಯಾಗಿ (ಎಆರ್ಐ) ಪ್ರಾರಂಭವಾಯಿತು. 1936ರಲ್ಲಿ ಸಂಸ್ಥೆಯನ್ನು ದೆಹಲಿಗೆ ಸ್ಥಳಾಂತರಿಸಲಾಯಿತು. ಪ್ರಸ್ತುತ, IARI ನಡಿ 5 ವಿಭಾಗಗಳು, 5 ಮಲ್ಟಿ ಡಿಸಿಪ್ಲೈನರಿ ಕೇಂದ್ರಗಳು, 8 ಪ್ರಾದೇಶಿಕ ಕೇಂದ್ರಗಳು, 3 ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆಗಳು, ಮತ್ತು 10 ರಾಷ್ಟ್ರೀಯ ಕೇಂದ್ರಗಳನ್ನು ದೇಶಾದ್ಯಂತ ಹೊಂದಿದೆ.
ಅಸ್ಸಾಂನ ಚಾಂಗಸಾರಿಯಲ್ಲಿ AIIMSಗೆ ಶಂಕುಸ್ಥಾಪನೆ ನೆರವೇರಿಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ರವರು ಅಸ್ಸಾಂನ ಕಾಮ್ರುಪ್ ಜಿಲ್ಲೆಯ ಚಾಂಗಾಸರಿಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಗೆ ಅಡಿಪಾಯ ಹಾಕಿದರು. ಗುವಾಹಾಟಿಯಿಂದ 26 ಕಿ.ಮೀ ದೂರದಲ್ಲಿ ಈ ಸಂಸ್ಥೆಯನ್ನು ನಿರ್ಮಿಸಲಾಗುತ್ತಿದೆ.
‘ಪ್ರಧಾನ್ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ’ಯ ಭಾಗವಾಗಿ ಈ ಸಂಸ್ಥೆಯನ್ನು1,123 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಮುಂದಿನ ನಾಲ್ಕು ವರ್ಷಗಳಲ್ಲಿ ಈ ಸಂಸ್ಥೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಸಂಸ್ಥೆಯು 750 ಹಾಸಿಗೆಗಳು, 16 ಆಪರೇಷನ್ ಥಿಯೇಟರ್ಗಳು ಸೇರಿದಂತೆ 22 ಸೂಪರ್ ಸ್ಪೆಶಾಲಿಟಿ ಇಲಾಖೆಗಳನ್ನು ಹೊಂದಿರಲಿದೆ. ಪ್ರತಿ ವರ್ಷವೂ 100 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮತ್ತು ಪ್ರತಿವರ್ಷ 60 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗುವುದು.
ಹಿನ್ನಲೆ:
ದೆಹಲಿಯ AIIMS ದೇಶದ ಮೂಲೆಗಳಿಂದ ರೋಗಿಗಳನ್ನು ಆಕರ್ಷಿಸುತ್ತಿದ್ದು, ಹೆಚ್ಚಿನ ಜನದಟ್ಟಣೆ ಉಂಟಾಗುತ್ತಿದೆ. ಈ ದೃಷ್ಟಿಯಿಂದ, ಜನರ ಅಗತ್ಯತೆಗಳನ್ನು ಪೂರೈಸಲು ದೇಶದ ವಿಭಿನ್ನ ಭಾಗಗಳಲ್ಲಿ ಎಐಐಎಂಎಸ್ ಸ್ಥಾಪನೆಗೆ ಸರ್ಕಾರವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಸ್ತುತ ದೆಹಲಿ, ಭೋಪಾಲ್, ಭುವನೇಶ್ವರ, ಜೋಧ್ಪುರ್, ಪಾಟ್ನಾ, ರಾಯ್ಪುರ್ ಮತ್ತು ರಿಷಿಕೇಶದಲ್ಲಿ AIIMS ಕಾರ್ಯನಿರ್ವಹಿಸುತ್ತಿವೆ.
ಕಳೆದ ವರ್ಷ, ಕೇಂದ್ರ ಸಚಿವ ಸಂಪುಟ ‘ಪ್ರಧಾನ್ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ’ಯಡಿ ಪಂಜಾಬಿನ ಬತಿಂದದಲ್ಲಿ AIIMS ಸ್ಥಾಪಿಸಲು ಅನುಮತಿ ನೀಡಿದೆ. ಜೊತೆಗೆ, ನಾಗ್ಪುರ (ಮಹಾರಾಷ್ಟ್ರ), ಮಂಗಳಗಿರಿ, ಗುಂಟೂರು (ಆಂಧ್ರ ಪ್ರದೇಶ) ಮತ್ತು ಕಲ್ಯಾಣಿಯಲ್ಲಿ (ಪಶ್ಚಿಮ ಬಂಗಾಳ) ರಲ್ಲಿ 3 ಹೊಸ ಏಮ್ಸ್ ಗಳ ಸ್ಥಾಪನೆಗೆ 2015ರಲ್ಲಿ ಅನುಮೋದನೆ ನೀಡಲಾಗಿದೆ.
ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಮ್ಎಸ್ಎಸ್ವೈ) ಆಗಸ್ಟ್ 2003 ರಲ್ಲಿ ಘೋಷಿಸಲ್ಪಟ್ಟ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. ದೇಶ ವ್ಯಾಪ್ತಿ ಪ್ರಾದೇಶಿಕ ಅಸಮತೋಲನವನ್ನು ಸರಿಪಡಿಸಿ ಕೈಗೆಟುಕುವ ಮತ್ತು ವಿಶ್ವಾಸಾರ್ಹ ತೃತೀಯ ಮಟ್ಟದ ಆರೋಗ್ಯ ಸೇವೆಯನ್ನು ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಜೊತೆಗೆ, ಕಡಿಮೆ ಅಭಿವೃದ್ದಿ ಹೊಂದಿರುವ ಅಥವಾ ಹಿಂದುಳಿದ ರಾಜ್ಯಗಳಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣ ಸೌಲಭ್ಯಗಳನ್ನು ವೃದ್ಧಿಸುವುದು ಸಹ ಆಗಿದೆ.
ಗುರುಗ್ರಹದಲ್ಲಿ ಭೂಮಿಗಾತ್ರದ ಚಂಡಮಾರುತ ಪತ್ತೆ
ನಾಸಾದ ಜುನೋ ಬಾಹ್ಯಾಕಾಶ ನೌಕೆ ಗುರುಗ್ರಹದ ಧ್ರುವಗಳಲ್ಲಿ ಭೂಮಿಯ-ಗಾತ್ರದ ಚಂಡಮಾರುತಗಳನ್ನು ಕಂಡುಹಿಡಿದಿದೆ. ಗ್ರಹದ ಅಂತರಾಳಕ್ಕೆ ಆಳವಾಗಿ ಚಲಿಸುವ ಚಂಡಮಾರುತ ವ್ಯವಸ್ಥೆಗಳ ಉಪಸ್ಥಿತಿಯನ್ನುಸಹ ಪತ್ತೆಹಚ್ಚಲಾಗಿದೆ. ಗುರುಗ್ರಹದ ಧ್ರುವಗಳೆರಡೂ ಭೂಮಿಯ ಗಾತ್ರದ ಸುತ್ತುತ್ತಿರುವ ದಟ್ಟವಾದ ಚಂಡಮಾರುತಗಳಿಂದ ಆವೃತವಾಗಿವೆ. ಕಳೆದ ವರ್ಷ ಆಗಸ್ಟ್ನಲ್ಲಿ ಜೂನೋ ನೌಕೆ ಸಂಗ್ರಹಿದ ಮಾಹಿತಿಯಿಂದ ಈ ಫಲಿತಾಂಶಗಳು ಹೊರಬಂದಿವೆ. ಗುರುಗ್ರಹದ ಸುತ್ತುತ್ತಿರುವ ಮೋಡದ ಮೇಲ್ಭಾಗದ ಸುಮಾರು 4,200 ಕಿಲೋಮೀಟರ್ಗಳಷ್ಟು ದೂರದಲ್ಲಿ ಜುನೋ ನೌಕೆ ಚಲಿಸಿ ಮಾಹಿತಿ ಸಂಗ್ರಹಿಸಿದೆ.
ಗುರು ಗ್ರಹದ ಆಯಸ್ಕಾಂತೀಯ ಕಾಂತವು ನಿರೀಕ್ಷಿಗೆಕ್ಕಿಂತ ಹೆಚ್ಚು ಬಲವಾದ ಕಾಂತೀಯ ಕ್ಷೇತ್ರವನ್ನು ಹೊಂದಿದೆ. ಗ್ರಹದಲ್ಲಿನ ಕಾಂತೀಯ ಕ್ಷೇತ್ರವು 7.766 ಗಾಸ್ (Gauss) ನಷ್ಟಿದ್ದು, ಇದು ಭೂಮಿಯ ಮೇಲೆ ಕಂಡುಬರುವ ಬಲವಾದ ಆಯಸ್ಕಾಂತೀಯ ಕ್ಷೇತ್ರಕ್ಕಿಂತ 10 ಪಟ್ಟು ಪ್ರಬಲವಾಗಿದೆ.
ಜುನೋ ಬಾಹ್ಯಕಾಶ ನೌಕೆ:
ಗುರುಗ್ರಹದ ಸಂಯೋಜನೆ ಮತ್ತು ವಿಕಾಸವನ್ನು ಅಧ್ಯಯನ ಮಾಡುವ ಸಲುವಾಗಿ ಜುನೋ ಬಾಹ್ಯಕಾಶ ನೌಕೆಯನ್ನು ಆಗಸ್ಟ್ 2011 ರಲ್ಲಿ ಹಾರಿಬಿಡಲಾಯಿತು. ಗುರುಗ್ರಹವನ್ನು ಸುತ್ತುವ ಮೊದಲ ಸೌರಶಕ್ತಿಚಾಲಿತ ಬಾಹ್ಯಾಕಾಶನೌಕೆ ಇದಾಗಿದೆ. 1995-2003ರಲ್ಲಿ ಗ್ರಹವನ್ನು ಪರಿಭ್ರಮಿಸಿದ ಗೆಲಿಲಿಯೋ ನೌಕೆ ನಂತರ ಗುರುಗ್ರಹ ಅಧ್ಯಯನಕ್ಕೆ ಕಳುಹಿಸಲಾದ ಎರಡನೇ ಬಾಹ್ಯಾಕಾಶ ನೌಕೆಯಾಗಿದೆ. ಈ ಮಾನವರಹಿತ ಬಾಹ್ಯಾಕಾಶ ನೌಕೆ ಐದು ವರ್ಷಗಳ ಪ್ರಯಾಣದ ನಂತರ ಸುಮಾರು 2ಬಿಲಿಯನ್ ಮೈಲುಗಳ ದೂರ ಕ್ರಮಿಸಿ ಗುರುಗ್ರಹದ ಕಕ್ಷೆಯನ್ನು ಜುಲೈ 2016 ರಲ್ಲಿ ಪ್ರವೇಶಿಸಿತು. ಗುರುಗ್ರಹದ ವಾಯುಮಂಡಲದ ರಚನೆ ಮತ್ತು ಮ್ಯಾಗ್ನೆಸ್ಪಿಯರ್ ರಚನೆಯ ಅಧ್ಯಯನ ಮತ್ತು ಗ್ರಹವನ್ನು ಆವರಿಸಿರುವ ಅನಿಲ ಮೋಡದಲ್ಲಿ ನೀರು ಇದಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಜುನೋ ನೌಕೆಯನ್ನು ಕಳುಹಿಸಿಕೊಡಲಾಗಿದೆ.
“ತೇಜಸ್ ಎಕ್ಸ್ ಪ್ರೆಸ್” ರೈಲಿನ ಪ್ರಥಮ ಸಂಚಾರ ಆರಂಭ
ವಿಮಾನದಂತಹ ಸೌಲಭ್ಯಗಳನ್ನು ಹೊಂದಿರುವ ‘ತೇಜಸ್ ಎಕ್ಸ್‌ಪ್ರೆಸ್’ ರೈಲು ಮುಂಬೈನಿಂದ ಗೋವಾಕ್ಕೆ ತನ್ನ ಮೊದಲ ಪ್ರಯಾಣ ಆರಂಭಿಸಿತು. ರೈಲ್ವೆ ಸಚಿವ ಸುರೇಶ್ ಪ್ರಭು ಅವರು ರೈಲಿಗೆ ಚಾಲನೆ ನೀಡಿದರು. 400 ಪ್ರಯಾಣಿಕರನ್ನು ಹೊತ್ತು ತೆರಳಿದ ಈ ಸೂಪರ್‌ಫಾಸ್ಟ್ ರೈಲು ಜನಶತಾಬ್ದಿ ರೈಲಿಗಿಂತಲೂ ಕಡಿಮೆ ಸಮಯದಲ್ಲಿ ಅಂದರೆ ಎಂಟೂವರೆ ಗಂಟೆಯಲ್ಲಿ ಗೋವಾ ತಲುಪಲಿದೆ.
ರೈಲಿನ ವಿಶಿಷ್ಠ:
- ಎಲ್‌ಇಡಿ ಪರದೆ, ಹಣ ಹಾಕಿದರೆ ಕಾಫಿ ನೀಡುವ ಯಂತ್ರ, ವೈಫೈ ಸೌಲಭ್ಯ, ಸಿ.ಸಿ.ಟಿ.ವಿ ಕ್ಯಾಮೆರಾ, ಸಹಾಯಕರನ್ನು ಕರೆಯಲು ಕರೆಗುಂಡಿ ವ್ಯವಸ್ಥೆಯನ್ನು ಬೋಗಿಗಳಿಗೆ ಅಳವಡಿಸಲಾಗಿದೆ.
- ಜರ್ಮನಿ ನಿರ್ಮಿತ 13 ಬೋಗಿಗಳನ್ನು ಹೊಂದಿದೆ. ರೈಲಿನ ಬಾಗಿಲುಗಳಿಗೆ ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆ, ಬೆಂಕಿ ಮತ್ತು ಹೊಗೆ ಪತ್ತೆ ವ್ಯವಸ್ಥೆ, ಬೋಗಿಯ ಕವಚ ನಿರ್ಮಾಣಕ್ಕೆ ಗೀಚಾಗದ ಸಾಮಗ್ರಿ ಬಳಕೆಯನ್ನು ಮಾಡಲಾಗಿದೆ.
- ಮುಂಬೈ–ಗೋವಾ ಮಾರ್ಗದಲ್ಲಿ ವಾರಕ್ಕೆ 5 ದಿನ ಪ್ರಯಾಣ ಹಾಗೂ ಮುಂಗಾರು ಅವಧಿಯಲ್ಲಿ ವಾರಕ್ಕೆ 3 ದಿನ ಪ್ರಯಾಣ ಮಾಡಲಿದೆ.
- ತೇಜಸ್ ರೈಲು ಮುಂದಿನ ದಿನಗಳಲ್ಲಿ ದೆಹಲಿ–ಚಂಡೀಗಡ ಮತ್ತು ಸೂರತ್–ಮುಂಬೈ ಮಾರ್ಗದಲ್ಲಿ ಓಡಲಿದೆ.
“ಆಪರೇಷನ್ ಬ್ಲಾಕ್ ಥಂಡರ್” ಖ್ಯಾತಿಯ ಕೆ ಪಿ ಎಸ್ ಗಿಲ್ ನಿಧನ
ಕೆ.ಪಿ.ಎಸ್ ಗಿಲ್. 1958ನೇ ಬ್ಯಾಚಿನ ಅಸ್ಸಾಂ-ಮೇಘಾಲಯ ಕೇಡರಿನ ಐಪಿಎಸ್ ಅಧಿಕಾರಿ ನಿಧನರಾದರು. ಪಂಜಾಬ್‌ನಲ್ಲಿ ತಲೆದೋರಿದ್ದ ಖಾಲಿಸ್ತಾನಿ ಉಗ್ರಗಾಮಿ ಚಟುವಟಿಕೆಯನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗಿಲ್ ಅವರು ‘ಸೂಪರ್‌ಕಾಪ್’ ಎಂದೇ ಖ್ಯಾತಿಯನ್ನು ಪಡೆದಿದ್ದರು. ಅಮೃತಸರದ “ಗೋಲ್ಡನ್ ಟೆಂಪಲ್”ನಲ್ಲಿ ಅಡಗಿರುವ ಉಗ್ರರನ್ನು ತೊಡೆದುಹಾಕಲು ಮೇ 1988ರಲ್ಲಿ ನಡೆಸಲಾದ ‘ಆಪರೇಷನ್ ಬ್ಲ್ಯಾಕ್ ಥಂಡರ್’ನ ಮುಂದಾಳತ್ವವನ್ನು ಗಿಲ್ ವಹಿಸಿದ್ದರು. ಆಪರೇಷನ್ ಬ್ಲೂ ಸ್ಟಾರ್ (1984) ಗಿಂತಲೂ ಭಿನ್ನವಾಗಿ, ಗೋಲ್ಡನ್ ಟೆಂಪಲ್ಗೆ ಸ್ವಲ್ಪವೂ ಹಾನಿ ಉಂಟಾಗುತ್ತದೆ ನಡೆಸಲಾದ ಆಪರೇಷನ್ ಬ್ಲಾಕ್ ಥಂಡರ್ ಹೆಚ್ಚು ಯಶಸ್ವಿಯಾಯಿತು. ಆಪರೇಷನ್ ಬ್ಲಾಕ್ ಥಂಡರ್ ಸುಮಾರು 67 ಸಿಖ್ಖರ ಶರಣಾಗತಿ ಮತ್ತು 43 ಉಗ್ರಗಾಮಿಗಳ ಸಾವಿಗೆ ಕಾರಣವಾಯಿತು.
- 1988ರಿಂದ 1990ರ ತನಕ ಪಂಜಾಬ್ ಪೊಲೀಸ್ ಇಲಾಖೆಯ ಮಹಾನಿರ್ದೇಶಕರಾಗಿದ್ದ ಗಿಲ್ ಅವರು 1991ರಿಂದ 1995ರ ತನಕ ಜವಾಬ್ದಾರಿ ನಿರ್ವಹಿಸಿದ್ದರು. ಈ ಅವಧಿಯಲ್ಲಿ ರಾಜ್ಯದಲ್ಲಿದ್ದ ಖಾಲಿಸ್ತಾನ ಭಯೋತ್ಪಾದಕರನ್ನು ಕಿತ್ತೊಗೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
- ಲೂಧಿಯಾನದಲ್ಲಿ ಜನಿಸಿದ ಗಿಲ್, 1958ರಲ್ಲಿ ಐಪಿಎಸ್ ಅಧಿಕಾರಿಯಾಗಿ ಅಸ್ಸಾಂ ಹಾಗೂ ಮೇಘಾಲಯದಲ್ಲಿ ಕೆಲಸ ಮಾಡಿದ್ದರು. 28 ವರ್ಷಗಳ ಈಶಾನ್ಯ ರಾಜ್ಯಗಳಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿ ದೇಶದ ಗಮನಸೆಳೆದಿದ್ದರು. ಸಿಖ್ ಉಗ್ರರ ಉಪಟಳ ಹೆಚ್ಚಾಗಿದ್ದರಿಂದ 1984ರಲ್ಲಿ ಪಂಜಾಬ್‌ಗೆ ಅವರನ್ನು ಕಳುಹಿಸಿ ಕೊಡಲಾಗಿತ್ತು. ಸಾರ್ವಜನಿಕ ವಲಯ ದಿಂದ ‘ಪಂಜಾಬ್‌ನ ಸಿಂಹ’, ‘ಸೂಪರ್ ಕಾಪ್’ ಎಂದು ಬಿರುದಾವಳಿಗಳನ್ನು ಪಡೆದಿದ್ದ ಗಿಲ್ ಅವರಿಗೆ 1989ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿತ್ತು.
BSNL ನಿಂದ ಸ್ಯಾಟ್ಲೈಟ್ ಪೋನ್ ಸೇವೆ ಆರಂಭ
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸ್ಯಾಟಲೈಟ್ ಫೋನ್ ಸೇವೆಯನ್ನು ಆರಂಭಿಸಿದೆ. ಅಂತಾರಾಷ್ಟ್ರೀಯ ಮೊಬೈಲ್ ಉಪಗ್ರಹ ಸಂಘಟನೆ (ಇನ್‌ಮಾರ್‌ಸ್ಯಾಟ್) ಮೂಲಕ ಈ ಸೇವೆ ಒದಗಿಸಲಾಗುತ್ತಿದೆ. ಈ ಸೇವೆಗೆ ಅಗತ್ಯವಾದ ಭೂ ವಿನಿಮಯ ಕೇಂದ್ರವನ್ನು ಪುಣೆಯಲ್ಲಿ ಪ್ರಾರಂಭಿಸಲಾಗಿದೆ. ಸದ್ಯ ಸ್ಯಾಟಲೈಟ್ ಫೋನ್ ಸೇವೆಯನ್ನು ಟಾಟಾ ಕಮ್ಯುನಿಕೇಷನ್ಸ್ ಲಿ. (ಟಿಸಿಎಲ್) ಒದಗಿಸುತ್ತಿದೆ. ಜೂನ್ 30ರಿಂದ ಈ ಸೇವೆ ಸ್ಥಗಿತವಾಗಲಿದೆ.
ಸ್ಯಾಟಲೈಟ್ ಫೋನ್ :
- ಸ್ಯಾಟಲೈಟ್ ಫೋನ್ ಮೊಬೈಲ್ ಫೋನ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ದೊಡ್ಡ ಉಪಕರಣ ಇರುವುದಿಲ್ಲ.
- ಈ ಪೋನ್ ಅನ್ನು ವಿಕೋಪ ಪರಿಹಾರ ಸಂಸ್ಥೆಗಳು, ಪೊಲೀಸ್, ರೈಲ್ವೆ, ಗಡಿ ಭದ್ರತಾ ಪಡೆ, ಸರ್ಕಾರದ ಇತರ ಸಂಸ್ಥೆಗಳು, ಹಡಗುಗಳು/ದೋಣಿಗಳು ಬಳಸಲಾಗುವುದು.
ಇನ್‌ಮಾರ್‌ಸ್ಯಾಟ್?
ಹಡಗುಗಳು ಸಮುದ್ರ ಮಧ್ಯೆ ಇದ್ದಾಗ ಬಂದರಿನೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅಪಾಯದ ಸಂದರ್ಭದಲ್ಲಿ ನೆರವು ಕೋರಲು 1979ರಲ್ಲಿ ಅಂತರರಾಷ್ಟ್ರೀಯ ಜಲ ಸಾರಿಗೆ ಸಂಘಟನೆ (ಐಎಂಒ) ಈ ಸೇವೆಯನ್ನು ಆರಂಭಿಸಿತು. ಇನ್‌ಮಾರ್‌ಸ್ಯಾಟ್ ಒಟ್ಟು 14 ಉಪಗ್ರಹಗಳನ್ನು ಹೊಂದಿದೆ.
ಮಹತ್ವ:
ಈ ತನಕ ವಿದೇಶಿ ಸಂಸ್ಥೆಗಳು ಪೂರೈಸಿರುವ ಉಪಕರಣಗಳನ್ನು ಭದ್ರತಾ ಸಂಸ್ಥೆಗಳು ಬಳಸುತ್ತಿದ್ದವು. ಇವುಗಳ ವಿನಿಮಯ ಕೇಂದ್ರಗಳು ಭಾರತದಿಂದ ಹೊರಗೆ ಇವೆ. ಹಾಗಾಗಿ ಇಂತಹ ಉಪಕರಣಗಳನ್ನು ಬಳಸಬಾರದು ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಸಿದ್ದವು. ದೇಶದೊಳಗೆ ವಿನಿಮಯ ಕೇಂದ್ರ ಹೊಂದುವ ಬಹುಕಾಲದ ಬೇಡಿಕೆ ಈಗ ಈಡೇರಿದೆ.
IAMAI ಅಧ್ಯಕ್ಷರಾಗಿ ಗೂಗಲ್ನ ರಾಜನ್ ಆನಂದನ್ ನೇಮಕ
ಆಗ್ನೇಯ ಏಷ್ಯಾ ಮತ್ತು ಭಾರತಕ್ಕೆ ಗೂಗಲ್ನ ಉಪಾಧ್ಯಕ್ಷರಾಗಿದ್ದ ರಾಜನ್ ಆನಂದನ್ ಅವರು ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಎಂಎಐ)ದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಫ್ರೀಚಾರ್ಜ್ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುನಾಲ್ ಷಾ ಅವರ ಉತ್ತರಾಧಿಕಾರಿಯಾಗಿ ರಾಜನ್ ನೇಮಕಗೊಂಡಿದ್ದಾರೆ. ಮೇಕ್ ಮೈ ಟ್ರಿಪ್ ಅಧ್ಯಕ್ಷ ಮತ್ತು ಗುಂಪು CEO ಡೀಪ್ ಕಲ್ರಾ ಅವರು IAMAIನ ಉಪ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಫೇಸ್ಬುಕ್ನ ವ್ಯವಸ್ಥಾಪಕ ನಿರ್ದೇಶಕ (ಭಾರತ ಮತ್ತು ದಕ್ಷಿಣ ಏಷ್ಯಾ), ಉಮಾಂಗ್ ಬೇಡಿ ಐಎಎಂಎಐನ ಹೊಸ ಖಜಾಂಚಿಯಾಗಿದ್ದು ಸಬೊ ರೇ IAMAI ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.
IAMAI ಮುಂದಿದೆ ಗುರಿ:
ಹೊಸ ಮಂಡಳಿ ಅಂತರ್ಜಾಲ ಸಂಪರ್ಕವನ್ನು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿಸಲು ಪ್ರಯತ್ನಿಸಬೇಕಿದೆ. 906 ಮಿಲಿಯನ್ ಜನಸಂಖ್ಯೆಯಲ್ಲಿ 156 ಮಿಲಿಯನ್ ಜನರು ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಾಲವನ್ನು ಬಳಸುತ್ತಿದ್ದಾರೆಂದು ಅಂದಾಜಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ 750 ಮಿಲಿಯನ್ ಬಳಕೆದಾರರಿಗೆ ಇಂಟರ್ನೆಟ್ ಸೌಲಭ್ಯ ಕಲ್ಪಿಸುವ ಕ್ರಮಗಳನ್ನು IAMAI ಕೈಗೊಳ್ಳಬೇಕಿದೆ.
IAMAI:
IAMAI ಸೊಸೈಟೀಸ್ ಆಕ್ಟ್, 1986 ಅಡಿಯಲ್ಲಿ ನೋಂದಾಯಿಸಲಾಗಿರುವ ಲಾಭರಹಿತ ಉದ್ಯಮ ಸಂಸ್ಥೆಯಾಗಿದೆ. ಇದನ್ನು 2004 ರಲ್ಲಿ ಸ್ಥಾಪಿಸಲಾಗಿದೆ. ಮೊಬೈಲ್ ಮತ್ತು ಹಲವಾರು ಆನ್ಲೈನ್ ಸೇವೆಗಳಿಗೆ ಸಂಬಂಧಿಸಿದ ಮೌಲ್ಯ ಸೇರ್ಪಡೆ ಸೇವೆಗಳನ್ನು ಸುಧಾರಿಸುವುದು ಮತ್ತು ವಿಸ್ತರಿಸುವುದು ಇದರ ಗುರಿಯಾಗಿದೆ.
ಮುಂಬೈ ಮತ್ತು ಕೋಟಾ ವಿಶ್ವದ ಜನದಟ್ಟಣೆ ನಗರಗಳು
ವಿಶ್ವ ಆರ್ಥಿಕ ವೇದಿಕೆಯು ವಿಶ್ವಸಂಸ್ಥೆ-ಆವಾಸಸ್ಥಾನದ ಮಾಹಿತಿಯನ್ನು ಉದಾಹರಿಸಿ ಭಾರತದ ಮುಂಬೈ ಮತ್ತು ಕೋಟಾವನ್ನು ವಿಶ್ವದ ಅತಿ ಹೆಚ್ಚು ಜನದಟ್ಟಣೆ ನಗರಗಳು ಎಂದು ಗುರುತಿಸಿದೆ. ಪಟ್ಟಿಯಲ್ಲಿ ಬಾಂಗ್ಲದೇಶದ ರಾಜಧಾನಿ ಢಾಕ ಮೊದಲ ಸ್ಥಾನದಲ್ಲಿದೆ. ದೇಶದ ಆರ್ಥಿಕ ರಾಜಧಾನಿ ಮುಂಬೈ ಎರಡನೇ ಸ್ಥಾನದಲ್ಲಿದೆ. ಢಾಕಾ ಪ್ರತಿ ಚದರ ಕಿಲೋಮೀಟರಿಗೆ 44,500 ಜನಸಾಂದ್ರತೆ ಹೊಂದಿದೆ. ಮುಂಬೈ ಒಂದು ಚದರ ಕಿಲೋಮೀಟರಿಗೆ 31,700 ಜನಸಾಂದ್ರತೆಯನ್ನು ಹೊಂದಿದೆ. ಭಾರತದ ಮತ್ತೊಂದು ನಗರ ರಾಜಸ್ಥಾನದ ಕೋಟಾ ಪ್ರತಿ ಚದರ ಕಿಲೋಮೀಟರಿಗೆ 12,100 ಜನಸಾಂದ್ರತೆಯನ್ನು ಹೊಂದಿದ್ದು, ಏಳನೇ ಸ್ಥಾನದಲ್ಲಿದೆ.
ಪ್ರತಿ ಚದರ ಕಿಲೋಮೀಟರಿಗೆ 19,700 ಜನಸಂಖ್ಯೆ ಹೊಂದಿರುವ ಕೊಲಂಬಿಯಾದ ಮೆಡೆಲಿನ್ ಮೂರನೇ ಸ್ಥಾನದಲ್ಲಿದೆ, ನಂತರ ಫಿಲಿಪ್ಪೀನ್ಸ್ನ ಮನಿಲಾ 14,800 ಜನಸಾಂದ್ರತೆಯೊಂದಿಗೆ 4ನೇ ಸ್ಥಾನದಲ್ಲಿದೆ; ಮೊರಾಕೊದ ಕಾಸಾಬ್ಲಾಂಕಾ 5ನೇ ಸ್ಥಾನ (14,200 ಜನಸಾಂದ್ರತೆ), ನೈಜೀರಿಯಾದ ಲಾಗೋಸ್ 6ನೇ ಸ್ಥಾನ(13,300 ಜನ ಸಾಂದ್ರತೆ), ಸಿಂಗಪುರ 8 ನೇ ಸ್ಥಾನ (10,200) ಸ್ಥಾನದಲ್ಲಿವೆ.
ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆಂದು ಅಂದಾಜಿಸಲಾಗಿದೆ. 2050ರ ಹೊತ್ತಿಗೆ ಈ ಪ್ರಮಾಣ ಶೇ.66% ಕ್ಕೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಏಷ್ಯಾ ಮತ್ತು ಆಫ್ರಿಕಾದಲ್ಲಿ ಶೇ. 90% ಹೆಚ್ಚಳವಾಗಲಿದೆ.
ವಿಶ್ವಸಂಸ್ಥೆ-ಆವಾಸಸ್ಥಾನ (UN-Habitat):
ಯುಎನ್-ಹ್ಯಾಬಿಟೇಟ್ ಅಥವಾ ಯುನೈಟೆಡ್ ನೇಷನ್ಸ್ ಹ್ಯೂಮನ್ ಸೆಟ್ಲ್ಮೆಂಟ್ಸ್ ಪ್ರೋಗ್ರಾಂ ವಿಶ್ವಸಂಸ್ಥೆಯ ವಿಶೇಷ ಏಜೆನ್ಸಿಯಾಗಿದ್ದು, ಸಮರ್ಥನೀಯ ನಗರ ಅಭಿವೃದ್ಧಿ ಮತ್ತು ಮಾನವ ನೆಲೆ ಅಭಿವೃದ್ದಿಪಡಿಸಲು ಸ್ಥಾಪಿಸಲಾಗಿದೆ. 1978 ರಲ್ಲಿ ಸ್ಥಾಪನೆಗೊಂಡಿದ್ದು, ಇದರ ಕೇಂದ್ರ ಕಚೇರಿ ಕೀನ್ಯಾದ ನೈರೋಬಿಯಲ್ಲಿದೆ.
ಅಸ್ಸಾಂನಲ್ಲಿ ದೇಶದ ಅತಿ ದೊಡ್ಡ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ
ಬ್ರಹ್ಮಪುತ್ರ ನದಿಯ ಉಪನದಿ ಲೋಹಿತ್ ಮೇಲೆ ನಿರ್ಮಿಸಲಾಗಿರುವ ದೇಶದ ಉದ್ದದ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಈ ಸೇತುವೆಗೆ ಅಸ್ಸಾಂನ ಗಾಯಕ ಭೂಪೆನ್ ಹಜಾರಿಕಾ ಅವರ ಹೆಸರನ್ನು ಇಡಲಾಗಿದೆ. ಸೇತುವೆಯ ನಿರ್ಮಾಣ 2011ರಲ್ಲಿ ಪ್ರಾರಂಭವಾಯಿತು. ಯೋಜನೆಯ ವೆಚ್ಚವು ಸುಮಾರು 2056 ಕೋಟಿ ರೂಪಾಯಿಗಳಷ್ಟಿದೆ.
- ಧೋಲಾ-ಸಾಡಿಯಾ ಸೇತುವೆ ಬ್ರಹ್ಮಪುತ್ರಾ ನದಿಯ ಉಪನದಿಯಾದ ಲೋಹಿತ್ ನದಿಗೆ ಕಟ್ಟಲಾಗಿರುವ15 ಕಿಲೋಮೀಟರಿನ ಮೂರು ಲೇನ್ ಸೇತುವೆಯಾಗಿದೆ. ನವಯುಗ ಎಂಜಿನಿಯರಿಂಗ್ ಕಂಪೆನಿ ಲಿಮಿಟೆಡ್ ಈ ಸೇತುವೆಯನ್ನು ನಿರ್ಮಿಸಿದೆ. ಮುಂಬೈಯ ಬಾಂದ್ರಾ-ವರ್ಲಿ ಸಮುದ್ರ ಸೇತುವೆಗಿಂತ ಧೋಲಾ-ಸಾಡಿಯಾ ಸೇತುವೆಯು 3.55 ಕಿ.ಮೀ. ಉದ್ದವಾಗಿದೆ. ಆಗಾಗಿ ಇದು ದೇಶದ ಅತಿ ಉದ್ದದ ಸೇತುವೆಯಾಗಿದೆ.
- ಈ ಸೇತುವೆಯು ಗುವಾಹಟಿ ಮತ್ತು ಧೋಲಾದಿಂದ 540 ಕಿ.ಮೀ ದೂರದಲ್ಲಿರುವ ಸಾಡಿಯಾವನ್ನು ಸಂಪರ್ಕಿಸುತ್ತದೆ, ಇದು ಇಟಾನಗರದಿಂದ 300 ಕಿ.ಮೀ ದೂರದಲ್ಲಿದೆ. 60-ಟನ್ ಯುದ್ಧ ಟ್ಯಾಂಕ್ ಗಳ ತೂಕವನ್ನು ತಡೆದುಕೊಳ್ಳುವಷ್ಟು ಸಮರ್ಥವಾಗಿರುವಷ್ಟು ಈ ಸೇತುವೆಯನ್ನು ವಿನ್ಯಾಸಗೊಳಿಸಲಾಗಿದೆ.
- ಈ ಸೇತುವೆಯಿಂದ ಚೀನಾ ಗಡಿ ಕೇವಲ 100 ಕಿ.ಮೀ ದೂರದಲ್ಲಿದೆ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ಸೇನಾ ವಾಹನಗಳು ಮತ್ತು ಟ್ಯಾಂಕ್‌ಗಳು ತ್ವರಿತವಾಗಿ ಗಡಿ ಭಾಗಕ್ಕೆ ತೆರಳಲು ಅನುಕೂಲವಾಗಲಿದೆ.
- ಈ ಸೇತುವೆಯ ನಿರ್ಮಾಣದಿಂದಾಗಿ ಅಸ್ಸಾಂನ ಸಾದಿಯ ಮತ್ತು ಅರುಣಾಚಲ ಪ್ರದೇಶದ ಧೋಲಾ ನಡುವಣ ಪ್ರಯಾಣದ ಅವಧಿಯಲ್ಲಿ ನಾಲ್ಕು ಗಂಟೆ ಕಡಿಮೆ ಆಗಲಿದೆ. ಇದಕ್ಕೂ ಮೊದಲು, ಇಲ್ಲಿ ನದಿಯನ್ನು ಲಾಂಚ್ ಮತ್ತು ದೋಣಿಗಳ ಮೂಲಕ ದಾಟಬೇಕಿತ್ತು.
- ಮುಂಬೈ ಇಂಡಿಯನ್ಸ್ ಗೆ ಐಪಿಎಲ್ ಕಿರೀಟ: ಇಂಡಿಯನ್ ಪ್ರೀಮಿಯರ್ ಲೀಗ್ ಹತ್ತನೇ ಆವೃತ್ತಿಯ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಮುಂಬೈ ತಂಡವು 1 ರನ್ ಅಂತರದಿಂದ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡವನ್ನು ಸೋಲಿಸಿತು. ಮುಂಬೈ ತಂಡಕ್ಕೆ ಇದು ಮೂರನೇ ಐಪಿಎಲ್ ಪ್ರಶಸ್ತಿ.
- ಪಿ ವಿ ಸಿಂಧುಗೆ BWF ಆಯೋಗದ ಸದಸ್ಯತ್ವ: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ನ ಅಥ್ಲೀಟ್ ಗಳ ಆಯೋಗದ ಸದಸ್ಯೆಯಾಗಿ ಆಯ್ಕೆ ಯಾಗಿದ್ದಾರೆ.ನಾಲ್ಕು ಸ್ಥಾನಗಳಿಗಾಗಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಮತದಾನದಲ್ಲಿ ಪಿ.ವಿ.ಸಿಂಧು 129 ಮತಗಳೊಂದಿಗೆ ಅಗ್ರ ಸ್ಥಾನ ಗಳಿಸಿದರು. ಜರ್ಮನಿಯ ಮಾರ್ಕ್ ಜ್ವಿಬ್ಲೆವರ್ (108 ಮತಗಳು), ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್ಮರ್ (103) ಮತ್ತು ಲಿಥುವೇನಿಯಾದ ಅಕ್ವಿಲೆ ಸ್ಟಾಪುಸೈಟಿಟೆ (25) ಆಯ್ಕೆಯಾದ ಇತರ ಆಟಗಾರರು.
- ಪುಷ್ಪ ಕಮಲ್ ದಹಲ್ ರಾಜೀನಾಮೆ: ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆಡಳಿತಾರೂಢ ಮಿತ್ರಪಕ್ಷ ನೇಪಾಳಿ ಕಾಂಗ್ರೆಸ್ ಜತೆ ಮಾಡಿಕೊಂಡ ಒಪ್ಪಂದದ ಅನ್ವಯ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನೇಪಾಳಿ ಕಾಂಗ್ರೆಸ್ ಪಕ್ಷದವರಿಗೆ ಹುದ್ದೆ ಹಸ್ತಾಂತರಿಸುವ ಸಲುವಾಗಿ ಅವರು ಈ ಕ್ರಮ ಕೈಗೊಂಡಿದ್ದಾರೆ. ನೇಪಾಳದ 39ನೇ ಪ್ರಧಾನಿಯಾಗಿ ಆಯ್ಕೆಯಾಗಿದ್ದ 62 ವರ್ಷದ ಪ್ರಚಂಡ ಅವರು ಕಳೆದ 9 ತಿಂಗಳಿನಿಂದ ನೇಪಾಳದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2016ರ ಆಗಸ್ಟ್ 3ರಂದು ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೆರ್ ಬಹಾದುರ್ ದೇವುಬಾ ಅವರ ಜತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಕಮ್ಯೂನಿಸ್ಟ್ ಪಾರ್ಟಿ ಆಫ್ ನೇಪಾಳ (ಸಿಪಿಎನ್) ಮುಖ್ಯಸ್ಥರಾಗಿದ್ದ ಅವರು ಪ್ರಧಾನಿಯಾಗಿದ್ದರು. ಆ ಸಂದರ್ಭ, 9 ತಿಂಗಳ ನಂತರ ಅಧಿಕಾರ ಹಸ್ತಾಂತರಿಸುವುದಾಗಿ ಅವರು ಒಪ್ಪಂದ ಮಾಡಿಕೊಂಡಿದ್ದರು.
- ಜಿನೀವಾ ಓಪನ್ ಟೆನಿಸ್ ಟೂರ್ನಿಯಲ್ಲಿ ವಾವ್ರಿಂಕ ಮುಡಿಗೆ ಪ್ರಶಸ್ತಿ: ಸ್ವಿಟ್ಜರ್ಲೆಂಡ್ನ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕ ಅವರು ಜಿನೀವಾ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.ಪುರುಷ ಸಿಂಗಲ್ಸ್ ವಿಭಾಗದ ಫೈನಲ್ ಹಣಾಹಣಿ ಯಲ್ಲಿ ವಾವ್ರಿಂಕ 4–6, 6–3, 6–3ರಲ್ಲಿ ಜರ್ಮನಿಯ ಮಿಷಾ ಜ್ವೆರೆವ್ ಅವರನ್ನು ಪರಾಭವಗೊಳಿಸಿದರು.
- ಭಾರತದ ಸಿ.ಎ. ಭವಾನಿದೇವಿ ಅವರು ಐಸ್‌ಲ್ಯಾಂಡ್‌ನಲ್ಲಿ ನಡೆದ ಟರ್ನೊಯ್ ಸ್ಯಾಟಲೈಟ್ ಫೆನ್ಸಿಂಗ್(ಕತ್ತಿವರಸೆ) ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಕ್ರೀಡಾಪಟುವೆಂಬ ಹೆಗ್ಗಳಿಕೆಗೆ ಪಾತ್ರರಾದರು. - ಸಿಂಗಾಪುರದಲ್ಲಿ ಆಪಲ್ ಸಂಸ್ಥೆ ತನ್ನ ಮಳಿಗೆಯನ್ನು ಆರಂಭಿಸಿದೆ. ಇದು ಆಗ್ನೇಯ ಏಷ್ಯಾದಲ್ಲಿ ಆಪಲ್ ಸಂಸ್ಥೆಯ ಮೊದಲ ಮಳಿಗೆ ಎನಿಸಿದೆ. ಆಪಲ್ ಈಗಾಗಲೇ ಸುಮಾರು 500 ಮಳಿಗೆಗಳನ್ನು ಜಾಗತಿಕವಾಗಿ ಹೊಂದಿದ್ದು, ದಿನನಿತ್ಯ ಒಂದು ದಶಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಿದ್ದಾರೆ. ಸಿಂಗಪೂರ್ ಹೊರತುಪಡಿಸಿ ಏಷ್ಯಾದಲ್ಲಿ ಹಾಂಗ್ ಕಾಂಗ್, ಚೀನಾ ಮತ್ತು ಜಪಾನಿನಲ್ಲಿ ಮಳಿಗೆಗಳನ್ನು ಹೊಂದಿದೆ.