ಜೇಮ್ಸ್ ಬಾಂಡ್ ಖ್ಯಾತಿಯ ರೋಜರ್ ಮೂರೆ ನಿಧನ

ಜೇಮ್ಸ್ ಬಾಂಡ್ ಪಾತ್ರಗಳಿಂದ ಪ್ರಸಿದ್ಧರಾದ ಬ್ರಿಟಿಷ್ ನಟ ರೋಜರ್ ಮೂರೆ (89) ಅವರು ಸ್ವಿಜರ್ ಲ್ಯಾಂಡ್ ನಲ್ಲಿ ನಿಧನರಾಗಿದ್ದಾರೆ. ಮೂರೆ ಅವರು 1973ರಿಂದ 1985ರ  ಜೇಮ್ಸ್ ಬಾಂಡ್ ಪಾತ್ರದ 7 ಚಿತ್ರಗಳಲ್ಲಿ ಅಭಿನಯಿಸಿದ್ದರು. ‘Live and Let Die’, “A view to Kill” ಮತ್ತು ‘The Spy Who Loved Me’ ಚಿತ್ರಗಳಲ್ಲಿ ಮೂರೆ ಅಭಿನಯಿಸಿ ಮೋಡಿ ಮಾಡಿದ್ದರು.

  • ದಕ್ಷಿಣ ಲಂಡನ್ ನ್ನಿನ ಸ್ಟಾಕ್ ವೇಕ್ ನಲ್ಲಿ ಮೂರೆ ಜನಿಸಿದ್ದ ಬಾಂಡ್ ಸಿನಿಮಾದ ಜೊತೆಗೆ ಕಿರುತೆರೆಯಲ್ಲೂ ಕೂಡ ತಮ್ಮ ಛಾಪು ಮೂಡಿಸಿದ್ದರು.
  • ಮೂರೆ ಅವರು ‘ಮೈ ವರ್ಡ್ ಇಸ್ ಮೈ ಬಾಂಡ್’ ಸೇರಿದಂತೆ ಎರಡು ಆತ್ಮಕತೆಗಳನ್ನು ಬರೆದಿದ್ದರು.
  • ಮೂರೆ ಅವರು 1962 ರಿಂದ 1969 ರವರೆಗೆ ಖ್ಯಾತ ಟಿವಿ ಸರಣಿ ಕಾರ್ಯಕ್ರಮ “ದಿ ಸೇಂಟ್”ನಲ್ಲಿ ಸಿಮೊನ್ ಟೆಂಪ್ಲರ್ ಪಾತ್ರದಲ್ಲಿ ಜನರನ್ನು ರಂಜಿಸಿದ್ದರು.

ರವಿಚಂದ್ರನ್ ಅಶ್ವಿನ್ ಗೆ ಅಂತಾರಾಷ್ಟ್ರೀಯ ವರ್ಷದ ಕ್ರಿಕೆಟಿಗ ಪ್ರಶಸ್ತಿ

ಸಿಯೆಟ್ ಕ್ರಿಕೆಟ್ ರೇಟಿಂಗ್‌ನ ಅಂತಾರಾಷ್ಟ್ರೀಯ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾರತದ ಆಫ್ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಭಾಜನರಾಗಿದ್ದಾರೆ. ಕ್ರಿಕೆಟ್ ಕ್ಲಬ್‌ ಆಫ್ ಇಂಡಿಯಾದಲ್ಲಿ ಬುಧವಾರ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಭಾರತ ತಂಡದ ಮಾಜಿ ನಾಯಕ ಸುನಿಲ್‌ ಗಾವಸ್ಕರ್ ಮತ್ತು ಆರ್‌.ಪಿ.ಜಿ ಎಂಟರ್‌ಪ್ರೈಸಸ್ ನ ಅಧ್ಯಕ್ಷ ಹರ್ಷ ಗೋಯೆಂಕಾ ಅವರು ಅಶ್ವಿನ್ಗೆ ಪ್ರಶಸ್ತಿ ಪ್ರದಾನ ಮಾಡಿದರು.

ನ್ಯೂಜಿಲ್ಯಾಂಡ್‌, ಇಂಗ್ಲೆಂಡ್‌, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಒಟ್ಟು 13 ಟೆಸ್ಟ್ ಪಂದ್ಯಗಳ ಪೈಕಿ 10ರಲ್ಲಿ ಭಾರತ ಗೆಲುವು ಸಾಧಿಸಲು ಅಶ್ವಿನ್ ಅವರ ಪಾತ್ರ ಹೆಚ್ಚಿದೆ. ಟೆಸ್ಟ್‌ ನಲ್ಲಿ ಒಂದು ವರ್ಷದಲ್ಲಿ ಬರೋಬ್ಬರಿ ಅಶ್ವಿನ್ 99 ವಿಕೆಟ್ ಕಬಳಿಸಿದ್ದಾರೆ.

ಶುಭ್ ಮಾನ್ಗಿಲ್ ಗೆ ಪ್ರಶಸ್ತಿ: ಯುವ ಬ್ಯಾಟ್ಸ್ ಮನ್‌ ಶುಭ್ ಮಾನ್‌ ಗಿಲ್ ಅವರಿಗೆ ವರ್ಷದ ಯುವ ಆಟಗಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಭಾರತ ಮತ್ತು ಸ್ಪೇನ್ ನಡುವೆ ಏಳು ಒಪ್ಪಂದಗಳಿಗೆ ಸಹಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪ್ಯಾನಿಷ್ ಮುಖಂಡ ಮೇರಿಯಾನೊ ರಾಜಾಯ್ ನಡುವೆ ಸ್ಪ್ಯಾನಿಷ್ ರಾಜಧಾನಿಯಾದ ಮಾಂಕ್ಲೋವಾದ ಅರಮನೆಯಲ್ಲಿ ನಡೆದ ಮಾತುಕತೆ ನಂತರ ಭಾರತ ಮತ್ತು ಸ್ಪೇನ್ ಏಳು ಒಪ್ಪಂದಗಳಿಗೆ ಸಹಿ ಹಾಕಿವೆ. ಸುಮಾರು 30ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಸ್ಪೇನ್ಗೆ ಭೇಟಿ ನೀಡಿದ್ದು ವಿಶೇಷ. 1988 ರಲ್ಲಿ ರಾಜೀವ್ ಗಾಂಧಿ ರವರು ಸ್ಪೇನ್ಗೆ ಭೇಟಿ ನೀಡಿದ್ದ ಭಾರತದ ಕೊನೆಯ ಪ್ರಧಾನಿ. ಈ ಮುಂಚೆ ಪ್ರಧಾನಿ ಮೋದಿ ಮತ್ತು ಸ್ಪ್ಯಾನಿಷ್ ಪ್ರಧಾನ ಮಂತ್ರಿ ರವರು ನವೆಂಬರ್ 2015ರಲ್ಲಿ ಟರ್ಕಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಭೇಟಿ ಆಗಿದ್ದರು.

            ಪ್ರಧಾನಿ ನರೇಂದ್ರ ಮೋದಿ ಅವರು ಸ್ಪೇನ್ ನ ಮೂಲಭೂತ ಸೌಕರ್ಯ, ಪ್ರವಾಸೋದ್ಯಮ, ಇಂದನ ಮತ್ತು ರಕ್ಷಣಾ ಕಂಪನಿಗಳನ್ನು ಭಾರತದ ಆದ್ಯತೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಭೇಟಿ ವೇಳೆ ಸ್ವಾಗತಿಸಿದರು. ಸ್ಪೇನ್ ಯುರೋಪಿಯನ್ ಒಕ್ಕೂಟದಲ್ಲಿ ಭಾರತದ 7 ನೇ ಅತಿ ದೊಡ್ಡ ವ್ಯಾಪಾರ ಪಾಲುದಾರಿಕೆ ರಾಷ್ಟ್ರವಾಗಿದೆ. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು 2016 ರಲ್ಲಿ 5.27 ಬಿಲಿಯನ್ ಡಾಲರ್ಗಳಷ್ಟಿತ್ತು.

ಸಹಿ ಹಾಕಲಾದ ಒಪ್ಪಂದಗಳು:

  • ಪರಸ್ಪರ ಖೈದಿಗಳ ವರ್ಗಾವಣೆಗೆ ಸಂಬಂಧಿಸಿದ ಒಪ್ಪಂದ
  • ಅಂಗಾಂಗ ಕಸಿ ಮಾಡುವಿಕೆಗೆ ಪರಸ್ಪರ ಸಹಕಾರ
  • ಸೈಬರ್ ಭದ್ರತೆಯಲ್ಲಿ ಪರಸ್ಪರ ಸಹಕಾರಕ್ಕೆ ಒಪ್ಪಂದ
  • ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಒಪ್ಪಂದ
  • ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರಕ್ಕೆ ಒಪ್ಪಂದ
  • ರಾಜತಾಂತ್ರಿಕ ಪಾಸ್ ಪೋರ್ಟ್ ಹೊಂದಿರುವವರಿಗೆ ವೀಸಾ ವಿನಾಯಿತಿ
  • ಫಾರಿಸ್ ಸರ್ವೀಸ್ ಇನ್ಸ್ಟಿಟ್ಯೂಟ್ ಮತ್ತು ಡಿಪ್ಲೊಮೆಟಿಕ್ ಅಕಾಡೆಮಿ ಆಫ್ ಇಂಡಿಯಾ ನಡುವೆ ಒಪ್ಪಂದ.

ಏರ್ಲ್ಯಾಂಡರ್ 10: ವಿಶ್ವದ ಅತಿ ದೊಡ್ಡ ವಿಮಾನನೌಕೆ ಯಶಸ್ವಿ ಪ್ರಯೋಗಾರ್ಥ ಪರೀಕ್ಷೆ

ಏರ್ಲೆಂಡರ್ 10, ವಿಶ್ವದ ಅತಿ ದೊಡ್ಡ ವಿಮಾನನೌಕೆ ಯುನೈಟೆಡ್ ಕಿಂಗ್ಡಮ್ನ ಕಾರ್ಡಿಂಗ್ಟನ್ನಲ್ಲಿ ಒಟ್ಟು 180 ನಿಮಿಷಗಳ ಕಾಲ ವಿಮಾನ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪರೀಕ್ಷಾ ಹಾರಾಟದ ಸಂದರ್ಭದಲ್ಲಿ, ವಿಮಾನ ನಿಯಂತ್ರಿಸುವ ಮತ್ತು ಸುಧಾರಿತ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಪರೀಕ್ಷಿಸಲಾಯಿತು. ಆ ಮೂಲಕ ವಾಣಿಜ್ಯ ಬಳಕೆಗೆ ಸನಿಹವಾಗಿದೆ.

ಏರ್ಲ್ಯಾಂಡರ್ 10:

ಏರ್ಲ್ಯಾಂಡರ್ 10 ಹೈಬ್ರಿಡ್ ನೌಕೆ ಅಂದರೆ ಇದು ಭಾಗಶಃ ವಿಮಾನ ಮತ್ತು ಹೀಲಿಯಂ ಅನಿಲ ತುಂಬಿದ ಭಾಗಶಃ ವಾಯುನೌಕೆಯಾಗಿದೆ. ಇದು ವಿಮಾನ, ಹೆಲಿಕಾಪ್ಟರ್ ಮತ್ತು ವಾಯುನೌಕೆಗಳ ತಂತ್ರಜ್ಞಾನಗಳ ಸಂಯೋಜನೆಯಿಂದ ವಿನ್ಯಾಸಗೊಳಿಸಲಾಗಿದೆ. ಇದು 92 ಮೀಟರ್ ಉದ್ದ ಮತ್ತು 43.5ಮೀ ಅಗಲವಿದೆ. ಗಂಟೆಗೆ 148 ಕಿಲೋಮೀಟರ್ ವೇಗದಲ್ಲಿ 6,100 ಮೀಟರ್ಗಳವರೆಗೆ ಹಾರಬಲ್ಲದಾಗಿದೆ. ಇದು 10-ಟನ್ ತೂಕವನ್ನು ಹೊತ್ತೊಯ್ಯುವ ಸಾಮರ್ಥವನ್ನು ಹೊಂದಿದೆ. ಮಾನವ ಸಹಿತ ಐದು ದಿನಗಳ ವರೆಗೆ ಹಾಗೂ ಮಾನವ ರಹಿತವಾಗಿ ಎರಡು ವಾರಗಳಿಗಿಂತಲೂ ಮೇಲ್ಪಟ್ಟು ವಾಯುಮಂಡಲದಲ್ಲಿ ಸ್ಥಿರವಾಗಿ ನಿಲ್ಲಲಿದೆ. ಇದನ್ನು ಮೊದಲ ಬಾರಿಗೆ US ಸರ್ಕಾರವು ಕಣ್ಗಾವಲು ವಿಮಾನವೆಂದು ಅಭಿವೃದ್ಧಿಪಡಿಸಿತು, ಆದರೆ ರಕ್ಷಣಾ ಯೋಜನೆಗಳಿಗೆ ಅನುದಾನವನ್ನು ಕಡಿತಗೊಳಿಸಿದ್ದಕ್ಕಾಗಿ ಯೋಜನೆಯನ್ನು  ಸ್ಥಗಿತಗೊಳಿಸಲಾಯಿತು.

ಇಸ್ರೋದೊಂದಿಗೆ ಅಮುಲ್ ಒಡಂಬಡಿಕೆ

‘ಅಮುಲ್’ ಬ್ರಾಂಡ್ ಹೆಸರಿನ ಅಡಿಯಲ್ಲಿ ತನ್ನ ಉತ್ಪನ್ನವನ್ನು ಮಾರಾಟ ಮಾಡುವ ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಉಪಗ್ರಹ ವೀಕ್ಷಣೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಂಡು ಮೇವು ವಿಸ್ತೀರ್ಣ ಮೌಲ್ಯಮಾಪನಕ್ಕಾಗಿ ISROದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಪ್ರಮುಖಾಂಶಗಳು:

ಒಡಂಬಡಿಕೆ ಪ್ರಕಾರ ಗ್ರಾಮೀಣ ಮಟ್ಟದಲ್ಲಿ ಆಹಾರ ಮತ್ತು ಮೇವು ಬೆಳೆಗಳನ್ನು ಗುರುತಿಸಲು ಇಸ್ರೋ ಸಹಾಯ ಮಾಡಲಿದೆ. ಗ್ರಾಮೀಣ ಮಟ್ಟದಲ್ಲಿ ಹಸಿರು ಮೇವು ಕೃಷಿಗಾಗಿ ಸೂಕ್ತ ಪ್ರದೇಶಗಳನ್ನು ಗುರುತಿಸಲು ಇಸ್ರೋ ಸಹಾಯ ಮಾಡಲಿದೆ. ಇಸ್ರೊದ ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್ (ಎಸ್ಎಸಿ) ಜಿಲ್ಲಾ ಮತ್ತು ಗ್ರಾಮ ಮಟ್ಟದಲ್ಲಿ ಡೈರಿ ಜಾನುವಾರುಗಳಿಗೆ ಹಸಿರು ಮೇವು ಲಭ್ಯತೆಯನ್ನು ದೂರ ಸಂವೇದನೆಯ ಮೂಲಕ ಈಗಾಗಲೇ ಗುರುತಿಸಿದೆ.

ಸ್ಪೇಸ್ ಅಪ್ಲಿಕೇಷನ್ ಸೆಂಟರ್:

ಸ್ಪೇಸ್ ಅಪ್ಲಿಕೇಶನ್ಗಳ ಸೆಂಟರ್ (ಎಸ್ಎಸಿ) ಇಸ್ರೋದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಇದನ್ನು 1972ರಲ್ಲಿ ಸ್ಥಾಪಿಸಲಾಯಿತು. ISRO ಕಾರ್ಯಾಚರಣೆಗಳಿಗಾಗಿ ಬಾಹ್ಯಾಕಾಶ ಮೂಲದ ಉಪಕರಣಗಳ ವಿನ್ಯಾಸವನ್ನು ಇಲ್ಲಿ ಮಾಡಲಾಗುತ್ತದೆ. ಇದು ಗುಜರಾತ್ನ ಅಹಮದಾಬಾದ್ನಲ್ಲಿದೆ.

GCMMF:

GCMMF ಪ್ರಪಂಚದಲ್ಲೆ ಅತಿದೊಡ್ಡ ಹಾಲು ಸಹಕಾರ ಸಂಸ್ಥೆಯಾಗಿದೆ ಮತ್ತು ಭಾರತದ ಅತಿದೊಡ್ಡ ಆಹಾರ ಉತ್ಪನ್ನಗಳ ಮಾರ್ಕೆಟಿಂಗ್ ಸಂಸ್ಥೆಯಾಗಿದ್ದು, ಇದರ ಉತ್ಪನ್ನಗಳನ್ನು ಅಮುಲ್ ಮತ್ತು ಸಾಗರ್ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುಲಾಗುತ್ತಿದೆ. ಇದನ್ನು 1973 ರಲ್ಲಿ ಡಾ. ವರ್ಜೀಸ್ ಕುರಿಯನ್ ಅವರು ಸ್ತಾಪಿಸಿದರು,. ಇಂದು ಗುಜರಾತ್ನಲ್ಲಿ 3.6 ದಶಲಕ್ಷ ಹಾಲು ಉತ್ಪಾದಕರನ್ನು ಹೊಂದಿದೆ. ಕುರಿಯನ್ ಅವರು 30 ವರ್ಷಗಳ (1973-2006 ಕಾಲ) ಇದರ ಅಧ್ಯಕ್ಷತೆ ವಹಿಸಿದ್ದರು. ಹಾಲು ಸಹಕಾರ ಸಂಘದ 70% ಕ್ಕಿಂತಲೂ ಹೆಚ್ಚಿನ ಜನರು ಸಣ್ಣ ರೈತರು ಮತ್ತು ಭೂಮಿರಹಿತ ಕಾರ್ಮಿಕರು, ಗಮನಾರ್ಹ ಜನಸಂಖ್ಯೆಯ ಬುಡಕಟ್ಟು ಜನರು ಮತ್ತು ಪರಿಶಿಷ್ಟ ಜಾತಿಗಳ ಜನರೇ ಆಗಿದ್ದಾರೆ.

ಮೇ 31: ವಿಶ್ವ ತಂಬಾಕು ವಿರೋಧಿ ದಿನ

ವಿಶ್ವದಾದ್ಯಂತ ತಂಬಾಕು ವಿರೋಧಿ ದಿನವನ್ನು ಪ್ರತಿ ವರ್ಷ ಮೇ 31 ರಂದು ಆಚರಿಸಲಾಗುತ್ತದೆ. ತಂಬಾಕು ಸೇವನೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾದ ನೀತಿಗಳನ್ನು ಜಾರಿಗೊಳಿಸುವುದು ಹಾಗೂ ತಂಬಾಕು ಸೇವೆನೆಯಿಂದ ಆರೋಗ್ಯದ ಮೇಲಾಗುವ ಅಪಾಯಕಾರಿ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. 1988 ರಲ್ಲಿ, WHOದ  ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ಮೇ 31 ರಂದು ಪ್ರತಿ ವರ್ಷ ವಿಶ್ವ ತಂಬಾಕು ದಿನವನ್ನು ಆಚರಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು. ಅಲ್ಲಿಂದೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ತಂಬಾಕು ವಿರೋಧಿ ದಿನ (ಡಬ್ಲ್ಯುಎನ್ಟಿಡಿ)ವನ್ನು ಪ್ರತಿವರ್ಷ ಆಚರಿಸಲು ಬೆಂಬಲ ನೀಡುತ್ತಿದೆ. WHO ಗುರುತಿಸಿರುವ ಎಂಟು ಅಧಿಕೃತ ಜಾಗತಿಕ ಸಾರ್ವಜನಿಕ ಆರೋಗ್ಯ ಅಭಿಯಾನಗಳಲ್ಲಿ ಇದು ಸಹ ಒಂದಾಗಿದೆ.

ಪ್ರಮುಖಾಂಶಗಳು:

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಧೂಮಪಾನ ಮತ್ತು ತಂಬಾಕು ಬಳಕೆಯು ಪ್ರತಿವರ್ಷ 7 ಮಿಲಿಯನ್ ಜನರ ಸಾವಿಗೆ ಕಾರಣವಾಗಿದೆ. ಆದ್ದರಿಂದ ತಂಬಾಕು ವಿಶ್ವದಲ್ಲಿ ತಡೆಗಟ್ಟಬಹುದಾದ ಸಾವಿನ ಕಾರಣವಾಗಿ ಹೊರಹೊಮ್ಮಿದೆ. 2030 ರ ಹೊತ್ತಿಗೆ, ತಂಬಾಕು ಕಂಪೆನಿಗಳಿಂದ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ 80% ರಷ್ಟು ಸಾವು ಸಂಭವಿಸಲಿದೆ ಎಂದು ಅಂದಾಜಿಸಲಾಗಿದೆ.

                ತಂಬಾಕು ಉತ್ಪಾದನೆ, ವಿತರಣೆ ಮತ್ತು ತ್ಯಾಜ್ಯದಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.  ಇದೇ ಮೊದಲ ಬಾರಿಗೆ ತಂಬಾಕು ಬಳಕೆಯಿಂದ ಪರಿಸರದ ಮೇಲಾಗುವ ಪರಿಣಾಮದ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ. ಅನೇಕ ರಾಷ್ಟ್ರಗಳಲ್ಲಿ ಅರಣ್ಯನಾಶದ ಹಿಂದಿನ ಮುಖ್ಯ ಕಾರಣವೆಂದರೆ ತಂಬಾಕು ಕೃಷಿ. ತಂಬಾಕು ಉದ್ಯಮ ವಾರ್ಷಿಕವಾಗಿ ಸುಮಾರು ನಾಲ್ಕು ಮಿಲಿಯನ್ ಟನ್ ಕಾರ್ಬನ್ ಡೈಆಕ್ಸೈಡ್ ಅನ್ನು ಹೊರಸೂಸುತ್ತದೆ ಎಂದು ವರದಿ ಅಂದಾಜಿಸಿದೆ.

ಸೆಪ್ಟೆಂಬರ್ ನಲ್ಲಿ ಇಂಡಿಯಾ ಮೊಬೈಲ್ ಕಾಂಗ್ರೆಸ್

ಭಾರತ ಮೊಬೈಲ್ ಕಾಂಗ್ರೆಸ್ 2017 (ಐಎಂಸಿ 2017) ನವದೆಹಲಿಯಲ್ಲಿ ಸೆಪ್ಟೆಂಬರ್ 27 ರಿಂದ 297 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಕೇಂದ್ರ ಸಂವಹನ ಸಚಿವಾಲಯ ಖಾತೆ ಸಚಿವ ಮನೋಜ್ ಸಿನ್ಹಾ ಅವರು ಘೋಷಿಸಿದ್ದಾರೆ. ಇದೇ ಮೊದಲ ಬಾರಿಗೆ ಭಾರತವು ಮೊಬೈಲ್ ಕಾಂಗ್ರೆಸ್ ಅನ್ನು ಆಯೋಜಿಸುತ್ತಿದೆ. ಚೀನಾದ ನಂತರ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. 1.18 ಶತಕೋಟಿ ಚಂದಾದಾರರ ಸಂಖ್ಯೆಯನ್ನು ಭಾರತ ಹೊಂದಿದೆ.

ಪ್ರಮುಖಾಂಶಗಳು:

ಇಂಡಿಯಾ ಮೊಬೈಲ್ ಕಾಂಗ್ರೆಸ್ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಕ್ಷೇತ್ರದ ಮತ್ತು ಸರ್ಕಾರದ ಎಲ್ಲಾ ಪಾಲುದಾರರನ್ನು ಒಗ್ಗೂಡಿಸುವ ಅತಿ ದೊಡ್ಡ ವೇದಿಕೆಯನಿಸಲಿದೆ. ಸರ್ಕಾರಿ ಸಂಸ್ಥೆಗಳು, ಟೆಲಿಕಾಂ ಸೇವೆ ಒದಗಿಸುವ ಸಂಸ್ಥೆಗಳು, ಟೆಲಿಕಾಂ ಉಪಕರಣ ತಯಾರಕರು,  ಹ್ಯಾಂಡ್ಸೆಟ್ ತಯಾರಕರು ಮತ್ತು ಅಪ್ಲಿಕೇಶನ್ ಪೂರೈಕೆದಾರರು ಭಾಗವಹಿಸಲಿದ್ದಾರೆ.

            ಶಾಂಘೈ ಮತ್ತು ಬಾರ್ಸಿಲೋನಾದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಂತಯೇ ಇಂಡಿಯಾ ಮೊಬೈಲ್ ಕಾಂಗ್ರೆಸ್ ಅನ್ನು ಆಯೋಜಿಸಲಾಗುತ್ತಿದ್ದು, ಈ ಕಾರ್ಯಕ್ರಮವು ಭಾರತೀಯ ಟೆಲಿಕಾಂ ಉದ್ಯಮವನ್ನು ಅಂತಾರಾಷ್ಟ್ರೀಯ ಉದ್ಯಮದೊಂದಿಗೆ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುವ ಉದ್ದೇಶವನ್ನು ಹೊಂದಿದೆ. ಈ ಮೊಬೈಲ್ ಕಾಂಗ್ರೆಸಿನಲ್ಲಿ ಅತ್ಯಾಕರ್ಷಕ ಹೊಸ ಉತ್ಪನ್ನಗಳು ಮತ್ತು ನಾವೀನ್ಯತೆಗಳನ್ನು ಪ್ರದರ್ಶಿಸಲಾಗುವುದು. ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (COAI) ಮತ್ತು ಇತರೆ ಪಾಲುದಾರಿಕೆ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ದೂರಸಂಪರ್ಕ ಇಲಾಖೆ ಆಯೋಜಿಸುತ್ತದೆ.

                 ಅಮೆರಿಕ, ಯುಕೆ, ಸ್ವೀಡನ್, ಫಿನ್ಲ್ಯಾಂಡ್, ಜರ್ಮನಿ, ಕೊರಿಯಾ, ಫಿಲಿಪೈನ್ಸ್, ಭೂತಾನ್ ಮತ್ತು ಜಪಾನ್ ದೇಶಗಳ 5000 ಪ್ರತಿನಿಧಿಗಳು ಕಾಂಗ್ರೆಸ್ನಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ, ಹುವಾವೇ, ಎರಿಕ್ಸನ್, ನೋಕಿಯಾ, ಭಾರ್ತಿ ಏರ್ಟೆಲ್, ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲಾರ್ಗಳಂತಹ ಟೆಲಿಕಾಂ ದೈತ್ಯ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿವೆ ಎಂದು ನಿರೀಕ್ಷಿಸಲಾಗಿದೆ.

ಹೊಸ ಒಂದು ರೂಪಾಯಿ ನೋಟು ಶೀಘ್ರ ಚಾಲನೆಗೆ

ಹೊಸ ಒಂದು ರೂಪಾಯಿ ನೋಟ್ ಗಳನ್ನು ಸರಕಾರ ಮುದ್ರಿಸಿದ್ದು, ಶೀಘ್ರದಲ್ಲೇ  ಚಲಾವಣೆಗೆ ತರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸಿದೆ. ಒಂದು ರೂಪಾಯಿ ನೋಟುಗಳನ್ನು 1994 ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಒಂದು ರೂಪಾಯಿ ನಾಣ್ಯಗಳಿಗೆ ಹೋಲಿಸಿದರೆ ನೋಟುಗಳ ಮುದ್ರಣ ದುಬಾರಿ ಎನಿಸಿದ ಕಾರಣ ಚಲಾವಣೆಯನ್ನು ನಿಲ್ಲಿಸಲಾಗಿತ್ತು. ಅಧಿಕ ಮುಖಬೆಲೆ ನೋಟುಗಳನ್ನು ಮುದ್ರಿಸುವ ಸಲುವಾಗಿ ಮುಂದಿನ ವರ್ಷಗಳಲ್ಲಿ ರೂ. 2 ಮತ್ತು ರೂ. 5 ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸುವುದಾಗಿ ಹೇಳಿದೆ. ಆದಾಗ್ಯೂ, ಈ ಹಳೆಯ ನೋಟುಗಳು ಚಲಾವಣೆಯಲ್ಲಿ ಮುಂದುವರಿಯಲಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಪ್ರಮುಖಾಂಶಗಳು:

ಹೊಸ ರೂ 1 ನೋಟುಗಳು ಗುಲಾಬಿ-ಹಸಿರು ಬಣ್ಣವನ್ನು ಹೊಂದಿರಲಿವೆ. ಈ  ನೋಟು  ರೂಪಾಯಿ ಸಂಕೇತವನ್ನು ಹೊಂದಿರಲಿದ್ದು 8.3 X 9.7 ಸೆಂಮೀ  ಇರಲಿದೆ.

ದರ್ವಾಜಾ ಬಂದ್” ಅಭಿಯಾನಕ್ಕೆ ಚಾಲನೆ

ಶೌಚಾಲಯ ಬಳಕೆ ಪ್ರೋತ್ಸಾಹಿಸುವ ಸಲುವಾಗಿ ಮತ್ತು ಹಳ್ಳಿಗಳಲ್ಲಿ ಬಯಲು ಮಲ ವಿಸರ್ಜನೆಯನ್ನು ತೊಡೆದು ಹಾಕುವ ಸಲುವಾಗಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ‘ದರ್ವಾಜಾ ಬಂದ್” ಎಂಬ ರಾಷ್ಟ್ರವ್ಯಾಪಿ ಪ್ರಚಾರವನ್ನು ಪ್ರಾರಂಭಿಸಿದೆ. ಮಹಾರಾಷ್ಟ್ರದಲ್ಲಿ ನಟ ಅಮಿತಾಬ್ ಬಚ್ಚನ್, ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ, ನರೇಂದ್ರ ಸಿಂಗ್ ತೋಮರ್ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಉಪಸ್ಥಿತಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಪ್ರಮುಖಾಂಶಗಳು:

ಈ ಅಭಿಯಾನವನ್ನು ಸ್ವಚ್ಚ ಭಾರತ ಮಿಷನ್ ಅಡಿಯಲ್ಲಿ ಜಾರಿಗೊಳಿಸಲಾಗುತ್ತಿದೆ. ಈ ಅಭಿಯಾನ ದೇಶಾದ್ಯಂತ ತಕ್ಷಣವೇ ಜಾರಿಗೆ ಬರಲಿದೆ. ದರ್ವಾಜಾ ಬಂದ್ ಎಂದರೆ ಸಾಂಕೇತಿಕವಾಗಿ ಬಯಲು ಮಲವಿಸರ್ಜನೆ ಅಭ್ಯಾಸವನ್ನು ಸಂಪೂರ್ಣವಾಗಿ ಮುಚ್ಚುವುದು ಎಂದರ್ಥ. ವಿಶ್ವ ಬ್ಯಾಂಕ್ ಈ ಪ್ರಚಾರಕ್ಕೆ ಬೆಂಬಲವನ್ನು ನೀಡಿದೆ. ಶೌಚಾಲಯಗಳನ್ನು ಹೊಂದಿದ್ದು ಬಳಕೆ ಮಾಡದ ಪುರುಷರ ವರ್ತನೆಯಲ್ಲಿ ಬದಲಾವಣೆ ತರುವ ಉದ್ದೇಶದೊಂದಿಗೆ ಅಭಿಯಾನವನ್ನು ಆರಂಭಿಸಲಾಗಿದೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈ ಅಭಿಯಾನದ ಮತ್ತೋರ್ವ ರಾಯಭಾರಿಯಾಗಿದ್ದು, ಮಹಿಳೆಯರನ್ನು ಪ್ರೋತ್ಸಾಹಿ ಮತ್ತು ಅವರ ಹಳ್ಳಿಗಳಲ್ಲಿ ನಾಯಕತ್ವ ಪಾತ್ರಗಳನ್ನು ವಹಿಕೊಳ್ಳುವ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.

ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಉಪಾಧ್ಯಕ್ಷರಾಗಿ ಜಾರ್ಜ್ ಕುರಿಯನ್ ನೇಮಕ

ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಖ್ಯಾತ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕರ್ತ ಜಾರ್ಜ್ ಕುರಿಯನ್ ಅವರನ್ನು ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಉಪ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.

                ಸಾಮಾಜಿಕ ಕಾರ್ಯಕರ್ತ ಸೈಯದ್ ಘಯೋರುಲ್ ಹಸನ್ ರಿಜ್ವಿ (ಅಧ್ಯಕ್ಷರು), ಮಹಾರಾಷ್ಟ್ರ ಮಾಜಿ ಸಚಿವ ಸುಲೇಖ ಕುಂಭರೆ, ಜೈನ್ ಧರ್ಮದ ಪ್ರತಿನಿಧಿ ಸುನೀಲ್ ಸಿಂಘಿ ಮತ್ತು ವಾ ದ ಸ್ತೂರ್ಜಿ ಖುರ್ಷೆಡ್ ಕೈಕೋಬಾದ್ ದಾಸ್ತೂರ್ ಅವರು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಇತರ ಸದಸ್ಯರಾಗಿದ್ದಾರೆ.

2014ರ ಜನವರಿಯಲ್ಲಿ ಜೈನ ಸಮುದಾಯವನ್ನು ಅಲ್ಪಸಂಖ್ಯಾತವೆಂದು ಘೋಷಿಸಿದ ನಂತರ ಮೊದಲ ಬಾರಿಗೆ ಜೈನ್ ಸದಸ್ಯರನ್ನು ಸಮಿತಿಗೆ ನೇಮಕ ಮಾಡಲಾಗಿದೆ. ಮುಸ್ಲಿಮ್, ಕ್ರಿಶ್ಚಿಯನ್, ಬೌದ್ಧ, ಸಿಖ್, ಪಾರ್ಸಿ ಮತ್ತು ಜೈನ್ ದೇಶದ ಆರು ಅಲ್ಪಸಂಖ್ಯಾತ ಸಮುದಾಯಗಳಾಗಿವೆ.

ಗೋವಾದಲ್ಲಿ ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧ

ಗೋವಾ ಸರ್ಕಾರ 50 ಮೈಕ್ರಾನ್ ಮತ್ತು ಅದಕ್ಕಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್ ಚೀಲಗಳ  ಖರೀದಿ ಮತ್ತು ಮಾರಾಟದ ಮೇಲೆ ನಿಷೇಧ ಹೇರಲು ನಿರ್ಧರಿಸಿದೆ. 40 ಮೈಕ್ರಾನ್ ಗಾತ್ರದ ಪ್ಲಾಸ್ಟಿಕ್ ಚೀಲಗಳನ್ನು ಗೋವಾ ಈಗಾಗಲೇ ನಿಷೇಧಿಸಿದೆ.

  • ನಿಷೇಧ ಜುಲೈನಿಂದ ಜಾರಿಗೆ ಬರಲಿದೆ. ಆರಂಭದಲ್ಲಿ, ನಿಷೇಧ ಉಲ್ಲಂಘಿಸಿದವರಿಗೆ ರೂ. 500 ಮತ್ತು ತರುವಾಯ ಶುಲ್ಕ ಮೊತ್ತವನ್ನು 5000 ರೂಪಾಯಿಗಳಿಗೆ ಹೆಚ್ಚಿಸಲಾಗುವುದು.
  • ಸಾರ್ವಜನಿಕ ಸ್ಥಳಗಳಲ್ಲಿ ಕಸ ಮತ್ತು ತ್ಯಾಜ್ಯ ವಿಲೇವಾರಿಯನ್ನು ನಿವಾರಿಸುವ ಉದ್ದೇಶದೊಂದಿಗೆ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ. ತೆಳುವಾದ ಪ್ಲ್ಯಾಸ್ಟಿಕ್ ಚೀಲಗಳು ಗಾಳಿಯಲ್ಲಿ ಸುಲಭವಾಗಿ ಹಾರಿ ಹೋಗುವ ಮೂಲಕ ಚರಂಡಿಗಳಲ್ಲಿ ನೀರಿನ ಹರಿಯುವಿಕೆ ಅಡ್ಡಿಯಾಗಿ ಪ್ರವಾಹದ ಉಂಟುಮಾಡುತ್ತವೆ. ಇದರಿಂದಾಗಿ ಮಳೆಗಾಲದಲ್ಲಿ ಸಾರ್ವಜನಿಕ ಸ್ಥಳಗಳ ಪ್ರವಾಹ ಸ್ಥಿತಿ ನಿರ್ಮಾಣವಾಗಲಿದೆ.
  • ಇದೇ ವೇಳೆ ಪ್ರವಾಸೋದ್ಯಮ ರಾಜ್ಯವೆನಿಸಿರುವ ಗೋವಾದಲ್ಲಿ ಶುಚಿತ್ವ ಹೆಚ್ಚಿಸಲು ರಾಜ್ಯ ಸರ್ಕಾರವು ಏಕಕಾಲದಲ್ಲಿ ಹೆದ್ದಾರಿಯ ಪಕ್ಕದಲ್ಲಿ ಸುರಿಸಿದ ಕಸವನ್ನು ಸಂಗ್ರಹಿಸಲಿದೆ.

ಕೆ ಗೋವಿಂದಭಟ್ಟರಿಗೆ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ

ಪ್ರಸಕ್ತ 2016ನೇ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ ವಾಗಿದ್ದು, ತೆಂಕುತಿಟ್ಟು ಯಕ್ಷಗಾನದ ಮೇರು ಕಲಾವಿದ ಸೂರಿಕುಮೇರಿ ಕೆ. ಗೋವಿಂದ ಭಟ್ಟರಿಗೆ ಲಭಿಸಿದೆ. ಇವರು ಈ ಸಾಲಿನ ಪ್ರಶಸ್ತಿ ಪುರಸ್ಕೃತರಾದವರ ಪೈಕಿ ಕರ್ನಾಟಕದ ಏಕೈಕ ಯಕ್ಷಗಾನ ಕಲಾವಿದರು. ತೆಂಕುತಿಟ್ಟಿನಲ್ಲಿ ಕೋಳ್ಯೂರು ರಾಮಚಂದ್ರ ರಾಯರಿಗೆ ಈ ಗೌರವ ಸಂದಿತ್ತು. ಗೋವಿಂದ ಭಟ್ಟರು 66 ವರ್ಷಗಳ ಕಾಲ ಯಕ್ಷಗಾನ ತಿರುಗಾಟದ ಅನುಭವ ಹೊಂದಿದ್ದು, 50 ವರ್ಷ ಗಳ ಕಾಲ ಧರ್ಮಸ್ಥಳ ಮೇಳವೊಂದ ರಲ್ಲೇ ಕಲಾಸೇವೆ ಮಾಡಿದ ಗೌರವಕ್ಕೆ ಪಾತ್ರರಾಗಿದ್ದಾರೆ. ಒಟ್ಟು 43 ಮಂದಿಗೆ ಪುರಸ್ಕಾರ ದೊರೆತಿದ್ದು, ಅಸ್ಸಾಂನ ಗುವಾಹಾಟಿ ಯಲ್ಲಿ ನಡೆದ ಅಕಾಡೆಮಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಸಂಗೀತ, ನಾಟಕ, ರಂಗಭೂಮಿ, ಜನಪದ, ಗೊಂಬೆಕುಣಿತ ಮೊದಲಾದ ಪ್ರಕಾರ ಗಳಿಗೆ ಈ ಗೌರವ ನೀಡಲಾಗುತ್ತದೆ. ಪ್ರಶಸ್ತಿ 1 ಲಕ್ಷ ರೂ. ನಗದು, ತಾಮ್ರ ಪತ್ರ ಒಳಗೊಂಡಿದೆ. ವಯಲಿನ್‌ ವಾದಕ ಮೈಸೂರಿನ ಎಂ. ಮಂಜು ನಾಥ್‌ ಕೂಡ ಈ ಬಾರಿಯ ಪ್ರಶಸ್ತಿ ಪುರಸ್ಕೃತರ ಸಾಲಿನಲ್ಲಿದ್ದಾರೆ.

            ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ (ಅಕಾಡೆಮಿ ಪ್ರಶಸ್ತಿ) ಸಂಗೀತ ನಾಟಕ ಅಕಾಡೆಮಿಯಿಂದ ನೀಡಲ್ಪಡುವ ಪ್ರಶಸ್ತಿಯಾಗಿದೆ. ಕಲೆನಿರತ ಕಲಾವಿದರನ್ನು ಗೌರವಿಸಲು ನೀಡಲಾಗುವ ಅತ್ಯುನ್ನತ ಪ್ರಶಸ್ತಿ ಇದಾಗಿದೆ. ಸಂಗೀತ, ನೃತ್ಯ, ರಂಗಭೂಮಿ, ಇತರ ಸಾಂಪ್ರದಾಯಿಕ ಕಲೆಗಳು ಮತ್ತು ತೊಗಲು ಬೊಂಬೆಗಳ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

One Thought to “ಪ್ರಚಲಿತ ವಿದ್ಯಮಾನಗಳು-ಮೇ,30,2017”

  1. ಸುರೇಶ್

    ಈ ಪ್ರಚಲಿತ ವಿದ್ಯಮಾನಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬಾ ಸಹಾಯವಾಗುವುದು

Leave a Comment

This site uses Akismet to reduce spam. Learn how your comment data is processed.