ESPN ವರ್ಲ್ಡ್ ಫೇಮ್ 100 ಪಟ್ಟಿಯಲ್ಲಿ ಭಾರತದ ನಾಲ್ವರಿಗೆ ಸ್ಥಾನ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಎಡಗೈ ಬ್ಯಾಟ್ಸ್ಮನ್ಗಳಾದ ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ESPN ವಿಶ್ವದ 100 ಅತ್ಯಂತ ಪ್ರಸಿದ್ಧ ಕ್ರೀಡಾಪಟುಗಳ ಶ್ರೇಯಾಂಕದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

            ಪಟ್ಟಿಯಲ್ಲಿ ವಿರಾಟ್ ಕೋಹ್ಲಿ 13 ನೇ ಸ್ಥಾನದಲ್ಲಿದ್ದಾರೆ. ಧೋನಿ 15 ನೇ ಸ್ಥಾನ ಮತ್ತು ಯುವರಾಜ್ ಮತ್ತು ರೈನಾ ಕ್ರಮವಾಗಿ 90 ಮತ್ತು 95 ನೇ ಸ್ಥಾನದಲ್ಲಿದ್ದಾರೆ.

                ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಮೊದಲ ಸ್ಥಾನದಲ್ಲಿದ್ದು, ಲೆಬ್ರಾನ್ ಜೇಮ್ಸ್, ಸಾಕರ್ ಸ್ಟಾರ್ ಲಿಯೋನೆಲ್ ಮೆಸ್ಸಿ, ಟೆನಿಸ್ ಸ್ಟಾರ್ ರೋಜರ್ ಫೆಡರರ್, ಫಿಲ್ ಮಿಕಲ್ಸನ್, ನೇಮ್ಮಾರ್, ಉಸೇನ್ ಬೋಲ್ಟ್, ಕೆವಿನ್ ಡ್ಯುರಾಂಟ್, ರಾಫೆಲ್ ನಡಾಲ್ ಮತ್ತು ಟೈಗರ್ ವುಡ್ಸ್ ಕ್ರಮವಾಗಿ ನಂತರದ ಸ್ಥಾನಗಳಲಿದ್ಧಾರೆ.

                ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಇತರ ಪ್ರಮುಖ ಕ್ರೀಡಾಪಟುಗಳೆಂದರೆ ರಯಾನ್ ಲೊಕ್ಟೆ, ಫಾರ್ಮುಲಾ ಒನ್ ಚಾಂಪಿಯನ್ ಲೆವಿಸ್ ಹ್ಯಾಮಿಲ್ಟನ್, ಸೆರೆನಾ ವಿಲಿಯಮ್ಸ್, ನೊವಾಕ್ ಜೊಕೊವಿಕ್, ಆಂಡಿ ಮುರ್ರೆ ಮೊದಲಾದವರು ಇದ್ದಾರೆ.

ಶ್ರೇಯಾಂಕ ಹೇಗೆ?

ಶ್ರೇಣೀಕರಣ ವ್ಯವಸ್ಥೆಯು ಇಎಸ್ಪಿಎನ್ ಕ್ರೀಡಾ ವಿಶ್ಲೇಷಕ ಬೆನ್ ಅಲಾಮರ್ ವಿನ್ಯಾಸಗೊಳಿಸಿರುವ ಸೂತ್ರವನ್ನು ಆಧರಿಸಿದೆ. ಒಡಂಬಡಿಕೆಗಳು, ಸಾಮಾಜಿಕ ಮಾಧ್ಯಮ ತಲುಪುವಿಕೆ ಮತ್ತು ಇತರ ಮಾಹಿತಿಗಳನ್ನು ಆಧರಿಸಿ ಶ್ರೇಯಾಂಕವನ್ನು ತಯಾರಿಸಲಾಗುತ್ತದೆ. ಕ್ರೀಡೆಗಳಲ್ಲಿ ಅತಿದೊಡ್ಡ ಹೆಸರುಗಳಿಸಿರುವ ಇಎಸ್ಪಿಎನ್ ನ ಎರಡನೇ ವಾರ್ಷಿಕ ಶ್ರೇಯಾಂಕ ಇದಾಗಿದೆ. ಈ ಪಟ್ಟಿಯ ಮೊದಲ ಆವೃತ್ತಿಯನ್ನು 2016 ರಲ್ಲಿ ಪ್ರಕಟಿಸಲಾಯಿತು.

ಬಿಸಿಸಿಐ ಆಡಳಿತ ಮಂಡಳಿಗೆ ರಾಮಚಂದ್ರ ಗುಹಾ ರಾಜೀನಾಮೆ

ಇತಿಹಾಸಕಾರ ರಾಮ ಚಂದ್ರ ಗುಹಾ ಅವರು ವೈಯುಕ್ತಿಕ ಕಾರಣಗಳಿಂದ ಬಿಸಿಸಿಐ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ಗುಹಾ ಅವರು ತಮ್ಮ ರಾಜೀನಾಮೆ ಪತ್ರವನ್ನು ಬಿಸಿಸಿಐ ಆಡಳಿತ ಮಂಡಳಿಯ ಮುಖ್ಯಸ್ಥರಾದ ವಿನೋದ್ ರಾಯ್ ಅವರಿಗೆ ಸಲ್ಲಿಸಿದ್ದಾರೆ.

            ಬಿಸಿಸಿಐ ವ್ಯವಹಾರಗಳನ್ನು ನೋಡಿಕೊಳ್ಳಲು ಜನವರಿ 30 ರಂದು ಸುಪ್ರೀಂ ಕೋರ್ಟ್ ನೇಮಕ ಮಾಡಿದ ನಾಲ್ಕು ಆಡಳಿತಗಾರರ ಪೈಕಿ ರಾಮಚಂದ್ರ ಗುಹಾ ಒಬ್ಬರಾಗಿದ್ದರು. ನಾಲ್ಕು ಸದಸ್ಯರ ಸಮಿತಿಗೆ ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವಿನೋದ್ ರೈ ಅವರು ನೇತೃತ್ವ ವಹಿಸಿದ್ದಾರೆ. ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಫೈನಾನ್ಸ್ ಕಂಪನಿ (IDFC)ಯ ಮ್ಯಾನೇಜಿಂಗ್ ಡೈರೆಕ್ಟರ್ ವಿಕ್ರಮ್ ಲಿಮಾಯೆ ಮತ್ತು ಮಾಜಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಇನ್ನಿತರ ಇಬ್ಬರು ಸದಸ್ಯರು.

ಹಿನ್ನಲೆ:

ಜನವರಿ 2, 2017 ರಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ಆಡಳಿತ ಮಂಡಳಿಯಿಂದ ವಜಾಗೊಳಿಸಿತು. ನ್ಯಾಯಮೂರ್ತಿ ಲೋಧಾ ಸಮಿತಿಯ ಹೊಸ ನಿಯಮಗಳನ್ನು ಜಾರಿಗೆ ತರುವಲ್ಲಿ ವಿಫಲರಾದ ಕಾರಣ ಸುಪ್ರೀಂಕೋರ್ಟ್ ಈ ಮಹತ್ವದ ಆದೇಶವನ್ನು ನೀಡಿತ್ತು. ಆ ನಂತರ ಬಿಸಿಸಿಐ ಆಡಳಿತ ವ್ಯವಹಾರ ಮೇಲ್ವಿಚಾರಣೆಗೆ ವಿನೋದ್ ರಾಯ್ ನೇತೃತ್ವದ ನಾಲ್ಕು ಜನ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು.

ರಾಮಚಂದ್ರ ಗುಹಾ:

ರಾಮಚಂದ್ರ ಗುಹ ಪ್ರಸಿದ್ಧ ಇತಿಹಾಸಕಾರ ಮತ್ತು ಬರಹಗಾರ. ಸಾಮಾಜಿಕ, ರಾಜಕೀಯ, ಪರಿಸರ ಮತ್ತು ಕ್ರಿಕೆಟ್ ಇತಿಹಾಸದ ಅವರ ಸಂಶೋಧನೆಗಳು ಬೆಳಕು ಚೆಲ್ಲುತ್ತವೆ . ಗುಹಾ ಅವರು “ದಿ ಟೆಲಿಗ್ರಾಫ್”, “ಹಿಂದೂಸ್ಥಾನ್ ಟೈಮ್ಸ್” ಹಾಗೂ ಪ್ರಜಾವಾಣಿ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಅಂಕಣಕಾರರಾಗಿದ್ದಾರೆ. “ಗಾಂಧಿ ಬಿಫೋರ್ ಇಂಡಿಯಾ (2013), ಪೇಟ್ರಿಯಾಟ್ಸ್ ಮತ್ತು ಪಾರ್ಟಿಸನ್ಸ್ (2012), ಮೇಕರ್ಸ್ ಆಫ್ ಮಾರ್ಡನ್ ಇಂಡಿಯಾ (2010), ಇಂಡಿಯಾ ಆಫ್ಟರ್ ಗಾಂಧಿ: ದಿ ಹಿಸ್ಟರಿ ಆಫ್ ವರ್ಲ್ಡ್ ಲಾರ್ಜೆಸ್ಟ್ ಡೆಮಾಕ್ರಸಿ (2007)”  ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

ತೆಲಂಗಾಣ ಸರ್ಕಾರದಿಂದ “ಟಿ-ವ್ಯಾಲೆಟ್” ಜಾರಿ

ಸಾರ್ವಜನಿಕ ಮತ್ತು ಖಾಸಗಿ ಹಣಕಾಸು ವಹಿವಾಟು ಮಾಡಲು ಸಾರ್ವಜನಿಕರಿಗೆ ಟಿ-ವಾಲೆಟ್ ಹೆಸರಿನ ಡಿಜಿಟಲ್ ವ್ಯಾಲೆಟ್ ಅನ್ನು ತೆಲಂಗಾಣ ಸರ್ಕಾರ ಪ್ರಾರಂಭಿಸಿದೆ.

ಪ್ರಮುಖಾಂಶಗಳು:

  • “ಪ್ರತಿಯೊಬ್ಬರಿಗೂ ಎಲ್ಲಿಯಾದರೂ ಯಾವಾಗದರೂ ಡಿಜಿಟಲ್ ಪಾವತಿ ಆಯ್ಕೆ” ಎಂದು ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವೊಂದು ಇಂತಹ ಪ್ರಯತ್ನವನ್ನು ಕೈಗೊಂಡಿದೆ.
  • ಮೊಬೈಲ್ ಫೋನ್ ಇಲ್ಲದವರು ಸಹ ಈ ಸೇವೆಯನ್ನು ಸಹ ಪಡೆಯಬಹುದಾಗಿದೆ. ಸ್ಮಾರ್ಟ್ಪೋನ್ ಹೊಂದಿರದ ಸಾರ್ವಜನಿಕರು ಮೀಸೆವಾ (MeeSeva) ಕೇಂದ್ರಗಳನ್ನು ಉಪಯೋಗಿಸಿಕೊಂಡು ವ್ಯವಹಾರವನ್ನು ನಡೆಸಬಹುದು. ಮೀಸೇವಾ ಕೇಂದ್ರಗಳನ್ನು ಬಳಸಿಕೊಂಡು ಸಾರ್ವಜನಿಕರು ಟಿ-ವ್ಯಾಲೆಟ್ ತೆರೆಯಬಹುದು, ಹಣವನ್ನು ತುಂಬುವುದು ಮತ್ತು ಪಾವತಿಸಬಹುದಾಗಿದೆ.

Leave a Comment

This site uses Akismet to reduce spam. Learn how your comment data is processed.