ಏರ್ಟೆಲ್ ನೊಂದಿಗೆ ಟೆಲಿನಾರ್ ಸಂಸ್ಥೆ ವಿಲೀನಕ್ಕೆ “ಸೆಬಿ” ಒಪ್ಪಿಗೆ
ಉದ್ದೇಶಿತ ಟೆಲಿನಾರ್ (ಇಂಡಿಯಾ) ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ನ ವಿಲೀನ ಯೋಜನೆಗೆ ಭಾರತೀಯ ಷೇರು ವಿನಿಮಯ ನಿಯಂತ್ರಣ ಮಂಡಳಿ (ಸೆಬಿ), ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯಾ (ಎನ್ಎಸ್ಇ) ಯಿಂದ ಅನುಮೋದನೆ ದೊರೆತಿರುವುದಾಗಿ ಭಾರ್ತಿ ಏರ್ಟೆಲ್ ಹೇಳಿದೆ. ಭಾರ್ತಿ ಏರ್ಟೆಲ್ ಈಗ ನ್ಯಾಶನಲ್ ಕಂಪೆನಿ ಲಾ ಟ್ರಿಬ್ಯೂನಲ್ ನ ನವದೆಹಲಿ ಪೀಠದಲ್ಲಿ ಜಂಟಿ ಕಂಪನಿಯ ಅರ್ಜಿಯನ್ನು ಅನುಮೋದನೆಗಾಗಿ ಸಲ್ಲಿಸಿದೆ. ಫೆಬ್ರವರಿ 2017ರಲ್ಲಿ ಭಾರ್ತಿ ಏರ್ಟೆಲ್ ಸಂಸ್ಥೆ ಟೆಲಿನಾರ್ ದಕ್ಷಿಣ ಏಷ್ಯಾ ಇನ್ವೆಸ್ಟ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ನೊಂದಿಗೆ ತನ್ನ ಉದ್ದೇಶಿತ ವಿಲೀನ ಯೋಜನೆಯನ್ನು ಘೋಷಿಸಿತು.
ಪ್ರಮುಖಾಂಶಗಳು:
- ಈ ವಿಲೀನ ಪ್ರಕ್ರಿಯೆಯಿಂದ ಟೆಲಿನಾರ್ ಭಾರತದ ಎಲ್ಲಾ ಸ್ವತ್ತುಗಳು ಮತ್ತು ಗ್ರಾಹಕರು ಏರ್ಟೆಲ್ ಸಂಸ್ಥೆಗೆ ವರ್ಗಾವಣೆ ಆಗಲಿದ್ದಾರೆ. ಇದರಿಂದಾಗಿ ಏರ್ಟೆಲ್ನ ಒಟ್ಟಾರೆ ಗ್ರಾಹಕರ ವೃಂದ ಮತ್ತು ನೆಟ್ವರ್ಕ್ ವ್ಯಾಪ್ತಿ ವಿಸ್ತಾರಗೊಳ್ಳಲಿದೆ.
- ವಿಲೀನ ಪ್ರಕ್ರಿಯೆಯು ಭಾರತೀಯ ಸ್ಪರ್ಧಾತ್ಮಕ ಆಯೋಗದ ಶಾಸನಾತ್ಮಕ ಅನುಮೋದನೆಗಳಿಗೆ ಒಳಪಟ್ಟಿರಲಿದೆ.
- ಆಂಧ್ರಪ್ರದೇಶ, ಬಿಹಾರ, ಮಹಾರಾಷ್ಟ್ರ, ಗುಜರಾತ್, ಯುಪಿ (ಪೂರ್ವ), ಯುಪಿ (ಪಶ್ಚಿಮ) ಮತ್ತು ಅಸ್ಸಾಂ ಸೇರಿದಂತೆ ಏಳು ವಲಯಗಳಲ್ಲಿ ಏರ್ಟೆಲ್ನ ಪ್ರಬಲ ಸ್ಪೆಕ್ಟ್ರಮ್ ಹೊಂದಲು ವಿಲೀನ ಪ್ರಕ್ರಿಯೆ ಅನುಕೂಲವಾಗಲಿದೆ. ಬೃಹತ್ ಜನಸಂಖ್ಯೆಯನ್ನು ಹೊಂದಿರುವ ಏಳು ವಲಯಗಳಲ್ಲಿ ಏರ್ಟೆಲ್ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಲಿದೆ.
ಸೆಬಿ:
ಭಾರತೀಯ ಷೇರು ವಿನಿಮಯ ನಿಯಂತ್ರಣ ಮಂಡಳಿ (ಸೆಬಿ) ಯನ್ನು 1988 ರಲ್ಲಿ ಸ್ಥಾಪಿಸಲಾಗಿದೆ. ಸೆಬಿ ಕಾಯಿದೆ, 1992 ರ ಅಡಿಯಲ್ಲಿ ಸೆಬಿಯು ಶಾಸನಬದ್ಧ ಆದೇಶ ಮತ್ತು ಅಧಿಕಾರವನ್ನು ಪಡೆದುಕೊಂಡಿತು. ಷೇರುಪೇಟೆಗಳಲ್ಲಿ ಹೂಡಿಕೆದಾರರ ಹಿತಾಸಕ್ತಿಗಳನ್ನು ಕಾಪಾಡುವುದು ಮತ್ತು ಷೇರು ಮಾರುಕಟ್ಟೆಯ ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ನಿಯಂತ್ರಿಸುವುದು ಸೆಬಿಯ ಪ್ರಮುಖ ಕರ್ತವ್ಯವಾಗಿದೆ.
ಜಾಗತಿಕ ಶಾಂತಿ ಸೂಚ್ಯಂಕ: ಭಾರತಕ್ಕೆ 137ನೇ ಸ್ಥಾನ
ಜಾಗತಿಕ ಶಾಂತಿ ಸೂಚ್ಯಂಕ 2017ರಲ್ಲಿ 163 ರಾಷ್ಟ್ರಗಳ ಪೈಕಿ ಭಾರತ 137ನೇ ಸ್ಥಾನ ಪಡೆದುಕೊಂಡಿದೆ.. ಕಳೆದ ವರ್ಷದ ಸೂಚ್ಯಂಕದಲ್ಲಿ ಭಾರತವು 141ನೇ ಸ್ಥಾನವನ್ನು ಪಡೆದುಕೊಂಡಿತ್ತು. ಇದು ಗ್ಲೋಬಲ್ ಪೀಸ್ ಇಂಡೆಕ್ಸ್ (ಜಿಪಿಐ)ನ ಹನ್ನೊಂದನೆಯ ಆವೃತ್ತಿಯಾಗಿದೆ. ಸಿಡ್ನಿ ಮೂಲದ ಚಿಂತಕರ ಚಾವಡಿ ಇನ್ಸ್ಟಿಟ್ಯೂಟ್ ಫಾರ್ ಇಕನಾಮಿಕ್ಸ್ ಆಂಡ್ ಪೀಸ್ ಪ್ರತೀ ವರ್ಷ ಈ ಸೂಚ್ಯಂಕವನ್ನು ಹೊರತರುತ್ತಿದೆ.
ಜಾಗತಿಕ ಶಾಂತಿ ಸೂಚ್ಯಂಕವು ಶಾಂತಿ, ಅದರ ಆರ್ಥಿಕ ಮೌಲ್ಯ, ಮತ್ತು ಶಾಂತಿಯುತ ಸಮಾಜಗಳನ್ನು ಅಭಿವೃದ್ಧಿಪಡಿಸುವುದು ಹೇಗೆ ಎಂಬ ಪ್ರವೃತ್ತಿಗಳನ್ನು ಸೆರೆಹಿಡಿಯುವ ಅತ್ಯಂತ ವಿಸ್ತೃತವಾದ ವಿಶ್ಲೇಷಣೆ ಆಗಿದೆ.
ಜಾಗತಿಕ ಶಾಂತಿ ಸೂಚ್ಯಂಕವನ್ನು ಸಾಮಾಜಿಕ ಸುರಕ್ಷತೆ ಮತ್ತು ಭದ್ರತೆಯ ಮಟ್ಟ; ದೇಶಿಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಸಂಘರ್ಷದ ವ್ಯಾಪ್ತಿ; ಮತ್ತು ಮಿಲಿಟರೀಕರಣದ ಮಟ್ಟ ಸೇರಿದಂತೆ 23 ಗುಣಾತ್ಮಕ ಮತ್ತು ಪರಿಮಾಣಾತ್ಮಕ ಸೂಚಕಗಳನ್ನು ಬಳಸಿ ಅಭಿವೃದ್ದಿಪಡಿಸಲಾಗುತ್ತಿದೆ.
ವಿಶ್ವದ ಟಾಪ್ ಹತ್ತು ರಾಷ್ಟ್ರಗಳು:
ಐಸ್ಲ್ಯಾಂಡ್ (1), ನ್ಯೂಜಿಲೆಂಡ್ (2), ಪೋರ್ಚುಗಲ್ (3), ಆಸ್ಟ್ರಿಯಾ (4), ಡೆನ್ಮಾರ್ಕ್ (5), ಜೆಕ್ ರಿಪಬ್ಲಿಕ್ (6), ಸ್ಲೊವೇನಿಯ (7), ಕೆನಡಾ (8), ಸ್ವಿಟ್ಜರ್ಲೆಂಡ್ (9), ಐರ್ಲೆಂಡ್.
ವಿಶ್ವದ ಹತ್ತು ಅಶಾಂತಿ ರಾಷ್ಟ್ರಗಳು:
ಸಿರಿಯಾ (163), ಅಫ್ಘಾನಿಸ್ತಾನ (162), ಇರಾಕ್ (161), ದಕ್ಷಿಣ ಸುಡಾನ್ (160), ಯೆಮೆನ್ (159), ಸೋಮಾಲಿಯಾ (158), ಲಿಬಿಯಾ (157), ಸುಡಾನ್ ಮತ್ತು ಮಧ್ಯ ಆಫ್ರಿಕನ್ ರಿಪಬ್ಲಿಕ್ ಎರಡೂ ದೇಶಗಳು 155 ನೇ ಸ್ಥಾನದಲ್ಲಿದೆ. ಉಕ್ರೇನ್ (154).
ಸೂಚ್ಯಂಕವು ವಿಶ್ವದ ಜನಸಂಖ್ಯೆಯ 99.7% ರಷ್ಟನ್ನು ಆಧರಿಸಿದೆ. ಜಾಗತಿಕ ಶಾಂತಿ ಸೂಚ್ಯಂಕ 2017ರಲ್ಲಿ ಜಾಗತಿಕ ಮಟ್ಟದಲ್ಲಿ ಶಾಂತಿ ಶೇಕಡ 0.28 ರಷ್ಟು ಏರಿಕೆಯಾಗಿದೆ, 93 ರಾಷ್ಟ್ರಗಳಲ್ಲಿ ಸುಧಾರಣೆಯಾಗಿದ್ದರೆ, 68 ದೇಶಗಳಲ್ಲಿ ಕ್ಷೀಣಿಸಿದೆ.
- ರಾಜ್ಯದ ಆರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಎಂ ಆರ್ ಶ್ರೀನಿವಾಸ ಮೂರ್ತಿ ನೇಮಕ: ರಾಜ್ಯದ ಆರನೇ ವೇತನ ಆಯೋಗದ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಎಂ. ಆರ್. ಶ್ರೀನಿವಾಸಮೂರ್ತಿ ನೇಮಕಗೊಂಡಿದ್ದಾರೆ. ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದ ಅವರು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
- ಬ್ರಿಟನ್ ಸಂಸತ್ ಚುನಾ ವಣೆಯ ಅಧಿಕೃತ ಸಂಸದೀಯ ವೀಕ್ಷಕರಾಗಿ ಶೋಭಾ ಕರಂದ್ಲಾಜೆ: ಚಿಕ್ಕಮಗಳೂರು–ಉಡುಪಿ ಸಂಸದೆ ಶೋಭಾ ಕರಂ ದ್ಲಾಜೆ ಬ್ರಿಟನ್ ಸಂಸತ್ ಚುನಾ ವಣೆಯ ಅಧಿಕೃತ ಸಂಸದೀಯ ವೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಬ್ರಿಟನ್ನಲ್ಲಿ ಜೂನ್ 3ರಿಂದ 10ರವರೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಅಲ್ಲಿನ ಸಂಸದೀಯ ಸಮಿ ತಿಯು ಭಾರತದ ಸಂಸದರನ್ನು ವೀಕ್ಷಕರಾಗಿ ಕಳುಹಿಸುವಂತೆ ಲೋಕಸಭಾಧ್ಯಕ್ಷರಿಗೆ ಪತ್ರ ಬರೆದಿದೆ. ಆದ್ದರಿಂದ ವೀಕ್ಷಕರಾಗಿ ಶೋಭಾ ಕರಂದ್ಲಾಜೆ ಅವರನ್ನು ಆಯ್ಕೆಮಾಡಲಾಗಿದೆ.