ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಮುಖ್ಯಸ್ಥರಾಗಿ ವಿಕ್ರಂ ಲಿಮಯೆ ನೇಮಕ
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜಿನ (ಎನ್ಎಸ್ಇ) ಎಂಡಿ ಮತ್ತು ಸಿಇಒ ಆಗಿ ವಿಕ್ರಮ್ ಲಿಮಯೆ ನೇಮಕಾತಿಗೆ SEBI ಷರತ್ತುಬದ್ಧ ಅನುಮೋದನೆಯನ್ನು ನೀಡಿದೆ.
2017ರ ಫೆಬ್ರುವರಿಯಲ್ಲಿ ಎನ್ಎಸ್ಇ ಮುಖ್ಯಸ್ಥನ ಹುದ್ದೆಗಾಗಿ ಮೂಲಸೌಕರ್ಯ ಹಣಕಾಸು ಸಂಸ್ಥೆ IDFC ಎಂ.ಡಿ ಮತ್ತು ಸಿಇಒ ಆಗಿರುವ ಲಿಮಯೆ ಅವರನ್ನು ಆಯ್ಕೆ ಮಾಡಲಾಯಿತು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವ್ಯವಹಾರಗಳನ್ನು ನಿರ್ವಹಿಸುವ ಸಲುವಾಗಿ ಸರ್ವೋಚ್ಚ ನ್ಯಾಯಾಲಯ ನೇಮಿಸಿದ್ದ ನಾಲ್ಕು ಸದಸ್ಯರ ಸಮಿತಿಯಲ್ಲಿ ಲಿಮಯೆ ಇರುವ ಕಾರಣ ನೇಮಕಾತಿಯನ್ನು ಸೆಬಿ ಅನುಮೋದಿಸಿರಲಿಲ್ಲ.
ಬಿಸಿಸಿಐ ನಿಯೋಜನೆಯಿಂದ ಲಿಮಯೆ ಬಿಡುಗಡೆಗೊಂಡರೆ ಮಾತ್ರ ಅವರ ನೇಮಕಾತಿಗೆ SEBI ಅನುಮೋದಿಸಿದೆ. ಈ ವರ್ಷದ ಆಗಸ್ಟ್ನಲ್ಲಿ ಬಿಸಿಸಿಐಯೊಂದಿಗೆ ಲಿಮಯೆಯ ಅವಧಿಯು ಕೊನೆಗೊಳ್ಳಲಿದೆ. ಕಳೆದ ಆರು ತಿಂಗಳಿನಿಂದ ಮುಖ್ಯಸ್ಥರಿಲ್ಲದೆ ಎನ್ಎಸ್ಇ ಕಾರ್ಯನಿರ್ವಹಿಸುತ್ತಿದೆ.
ಹಿನ್ನಲೆ:
ಡಿಸೆಂಬರ್ 2016 ರಲ್ಲಿ ಚಿತ್ರಾ ರಾಮಕೃಷ್ಣ ಅವರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ವಿಕ್ರಮ್ ಲಿಮಾಯಿಯನ್ನು ರಾಷ್ಟ್ರೀಯ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ಯ ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.
ವಿಕ್ರಮ್ ಲಿಮಯೆ ಅವರು ವಾರ್ಟನ್ ಸ್ಕೂಲ್ನಿಂದ ಚಾರ್ಟೆಡ್ ಅಕೌಂಟೆಂಡ್ ಜೊತೆ ಎಂಬಿಎ ಪದವಿಯನ್ನು ಪಡೆದಿದ್ದಾರೆ. ಇದಕ್ಕೂ ಮುಂಚೆ ಶ್ರೀ ಲಿಮಯೆ ಅವರು ದೇಶದಲ್ಲಿ ಅತ್ಯುನ್ನತ ಕ್ರಿಕೆಟ್ ಮ್ಯಾನೇಜ್ಮೆಂಟ್ ಸಂಸ್ಥೆಗೆ (ಬಿಸಿಸಿಐ) ಸುಪ್ರೀಂ ಕೋರ್ಟ್ ನೇಮಕ ಮಾಡಿದ ನಾಲ್ಕು ಸದಸ್ಯರ ಸಮಿತಿಯ ಸದಸ್ಯರಾಗಿದ್ದಾರೆ.
ರಾಷ್ಟ್ರೀಯ ಮಾನವ ಹಾಲು ಬ್ಯಾಂಕ್ ಮತ್ತು ಹಾಲುಣಿಸುವ ಸಮಾಲೋಚನೆ ಕೇಂದ್ರ ಉದ್ಘಾಟನೆ
ಆರೋಗ್ಯ ಕಾರ್ಯದರ್ಶಿ ಸಿ. ಕೆ. ಮಿಶ್ರಾ ಅವರು ನವದೆಹಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನಲ್ಲಿ ‘ವಾತ್ಸಲ್ಯ-ಮಾತ್ರಿ ಅಮೃತ್ ಕೋಶ್’, ರಾಷ್ಟ್ರೀಯ ಮಾನವ ಹಾಲು ಬ್ಯಾಂಕ್ ಮತ್ತು ಹಾಲುಣಿಸುವ ಸಮಾಲೋಚನೆ ಕೇಂದ್ರವನ್ನು ಉದ್ಘಾಟಿಸಿದರು. ಈ ಕೇಂದ್ರವು ಉತ್ತರ ಭಾರತದಲ್ಲಿ ಲಭ್ಯವಿರುವ ದೊಡ್ಡ ಸಾರ್ವಜನಿಕ ವಲಯ ಮಾನವ ಹಾಲು ಬ್ಯಾಂಕ್ ಮತ್ತು ಹಾಲುಣಿಸುವ ಸಮಾಲೋಚನೆ ಕೇಂದ್ರವಾಗಿದೆ.
ಪ್ರಮುಖಾಂಶಗಳು:
- ನಾರ್ವೆ ಸರ್ಕಾರದ ಒಸ್ಲೋ ವಿಶ್ವವಿದ್ಯಾಲಯ ಮತ್ತು ನಾರ್ವೆ ಇಂಡಿಯಾ ಪಾರ್ಟ್ನರ್ಶಿಪ್ ಇನಿಶಿಯೇಟಿವ್ (ಎನ್ಐಪಿಐ) ಸಹಯೋಗದೊಂದಿಗೆ “ವಾಟ್ಸಲ್ಯ – ಮಾತ್ರಿ ಅಮೃತ್ ಕೋಶ್” ಅನ್ನು ಸ್ಥಾಪಿಸಲಾಗಿದೆ.
- ವಾತ್ಸಲ್ಯ-ಮಾತ್ರಿ ಅಮೃತ್ ಕೋಶ್ ನಲ್ಲಿ ಹಾಲುಣಿಸುವ ತಾಯಂದಿರಿಂದ ಪಡೆದ ಎದೆ ಹಾಲನ್ನು ಸಂಗ್ರಹಿಸಿ, ಪರೀಕ್ಷಿಸಿ, ಪಾಶ್ಚೀಕರಿಸಿ, ಮತ್ತು ಸುರಕ್ಷಿತವಾಗಿ ಶೇಖರಿಸಿಡುವ ಮೂಲಕ ಅಗತ್ಯವಿರುವ ಶಿಶುಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು. ಈ ಮಾನವ ಹಾಲಿನ ಬ್ಯಾಂಕ್ ಸ್ಥಾಪನೆಯೊಂದಿಗೆ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ನವಜಾತ ಶಿಶುಗಳು ತಮ್ಮ ಜನ್ಮದ ಸಂದರ್ಭಗಳಲ್ಲಿ ಜೀವ ಉಳಿಸುವ ಎದೆ ಹಾಲಿನ್ನು ಪಡೆಯಲು ಅನುಕೂಲವಾಗಲಿದೆ.
- ಕೇಂದ್ರದಲ್ಲಿ ಪ್ರತ್ಯೇಕವಾದ ಹಾಲುಣಿಸುವ ಸಲಹೆಗಾರರ ಸಹಾಯದಿಂದ ತಾಯಂದಿರಲ್ಲಿ ಎದೆಹಾಲುಣಿಸುವ ಅಭ್ಯಾಸವನ್ನು ಬೆಂಬಲಿಸಲಾಗುವುದು. ತಾಯಂದಿರಲ್ಲಿ ಸ್ತನ್ಯಪಾನ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈಗಾಗಲೇ ತಾಯಂದಿರ ಸಂಪೂರ್ಣ ವಾತ್ಸಲ್ಯ (MAA) ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
UNCTAD: ವಿದೇಶಿ ನೇರ ಬಂಡವಾಳ ಹೂಡಿಕೆಯ ಟಾಪ್ ರಾಷ್ಟ್ರಗಳಲ್ಲಿ ಭಾರತ
UNCTAD ವಿಶ್ವ ಬಂಡವಾಳ ಹೂಡಿಕೆ ವರದಿ 2017ರ ಪ್ರಕಾರ, ವಿದೇಶಿ ಹೂಡಿಕೆದಾರರಿಗೆ ತೆರಿಗೆ ಸಂಬಂಧಿತ ಕಳವಳಗಳ ನಡುವೆಯೂ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಭಾರತವು ನೆಚ್ಚಿನ ತಾಣವಾಗಿದೆ.
ಪ್ರಮುಖಾಂಶಗಳು:
- ವರದಿ ಪ್ರಕಾರ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಯುಎಸ್, ಚೀನಾ ಮತ್ತು ಭಾರತ ನೆಚ್ಚಿನ ತಾಣಗಳಾಗಿವೆ.
- ಏಷ್ಯಾಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ ಒಳಹರಿವು 2016ರಲ್ಲಿ ಶೇ.15% ರಿಂದ 443 ಬಿಲಿಯನ್ ಡಾಲರ್ಗಳಿಗೆ ಕುಸಿದಿದೆ. 2012 ರಿಂದೀಚೆಗೆ ಮೊದಲ ಬಾರಿಗೆ ಕುಸಿತಕಂಡಿದೆ. ದಕ್ಷಿಣ ಏಷ್ಯಾವನ್ನು ಹೊರತುಪಡಿಸಿ, ಏಷ್ಯಾದ ಮೂರು ಉಪಪ್ರದೇಶಗಳಲ್ಲಿ ಎಫ್ಡಿಐ ಕುಸಿದಿದೆ. ಆದಾಗ್ಯೂ ಅಸಿಯಾನ್, ಚೀನಾ ಮತ್ತು ಭಾರತದಂತಹ ಪ್ರಮುಖ ಆರ್ಥಿಕತೆಗಳಲ್ಲಿ ಸುಧಾರಣೆ ಹೊಂದಿರುವುದು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.
- ದಕ್ಷಿಣ ಏಷ್ಯಾದಲ್ಲಿ, ಎಫ್ಡಿಐ ಒಳಹರಿವು ಶೇ.6% ಹೆಚ್ಚಳವಾಗಿ 54 ಶತಕೋಟಿ ಡಾಲರ್ಗೆ ಏರಿಕೆ ಆಗಿದೆ ಮತ್ತು ಹೊರಹರಿವು 29% ಇಳಿಕೆಯಾಗಿ 6 ಶತಕೋಟಿ ಡಾಲರ್ಗೆ ಇಳಿದಿದೆ.
- ಭಾರತಕ್ಕೆ ಎಫ್ಡಿಐ ಒಳಹರಿವು 44 ಬಿಲಿಯನ್ ಯುಎಸ್ ಡಾಲರ್ ನಷ್ಟಿದ್ದು, ಸ್ಥಿರವಾಗಿ ನಿಂತಿದೆ. ಭಾರತದ ಹೊರ ಹರಿವು ಸುಮಾರು ಮೂರನೇ ಒಂದು ಭಾಗದಷ್ಟು ಕುಸಿತಕಂಡಿದೆ.
- ಮೊದಲ ಬಾರಿಗೆ, ಚೀನಾ ವಿದೇಶ ನೇರ ಬಂಡವಾಳ ಹೂಡಿಕೆಯಲ್ಲಿ ವಿಶ್ವದ ಎರಡನೇ ದೊಡ್ಡ ಹೂಡಿಕೆದಾರನಾಗಿ ಹೊರಹೊಮ್ಮಿದೆ.
- ಜಾಗತಿಕ ಜಿಡಿಪಿಯ ಶೇ. 22% ರಷ್ಟು ಭಾಗವನ್ನು ಹೊಂದಿರುವ ಬ್ರಿಕ್ಸ್ ರಾಷ್ಟ್ರಗಳು (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಜಾಗತಿಕ ಎಫ್ಡಿಐ ಒಳಹರಿವಿನ ಕೇವಲ 11% ರಷ್ಟನ್ನು ಪಡೆದಿವೆ.
ವಿಶ್ವ ಬಂಡವಾಳ ಹೂಡಿಕೆ:
ವಿಶ್ವ ಹೂಡಿಕೆ ವರದಿಯನ್ನು 1991 ರಿಂದೀಚೆಗೆ ಪ್ರತಿವರ್ಷ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆಫ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (UNCTAD) ಪ್ರಕಟಿಸುತ್ತಿದೆ. ಪ್ರಾದೇಶಿಕ ಮತ್ತು ರಾಷ್ಟ್ರ ಮಟ್ಟಗಳಲ್ಲಿ ವಿಶ್ವಾದ್ಯಂತ ವಿದೇಶಿ ನೇರ ಹೂಡಿಕೆಯ (ಎಫ್ಡಿಐ) ಪ್ರವೃತ್ತಿಯನ್ನು ಈ ವರದಿಯು ಕೇಂದ್ರೀಕರಿಸಿದೆ. 1964ರಲ್ಲಿ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆಫ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (UNCTAD) ಅನ್ನು ಸ್ಥಾಪಿಸಲಾಯಿತು.