ನೀತಿ ಆಯೋಗದಿಂದ “ಸಾಥ್ (SATH)” ಕಾರ್ಯಕ್ರಮಕ್ಕೆ ಚಾಲನೆ
ನೀತಿ ಆಯೋಗ ಸಾಥ್ SATH-Sustainable Action for Transforming Human Capital ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.
ಪ್ರಮುಖಾಂಶಗಳು:
ಸಾಥ್ ಕಾರ್ಯಕ್ರಮದಡಿ ನೀತಿ ಆಯೋಗ ಆರೋಗ್ಯ ವ್ಯವಸ್ಥೆಗಳಿಗೆ ಮೂರು ಭವಿಷ್ಯದ ‘ಮಾದರಿ ರಾಜ್ಯಗಳ”ನ್ನು ಗುರುತಿಸಲಿದೆ. ಮೂರು ರಾಜ್ಯಗಳನ್ನು ಗುರುತಿಸಿದ ನಂತರ ಈ ಮೂರು ರಾಜ್ಯಗಳ ಸರ್ಕಾರಗಳೊಂದಿಗೆ ನಿಕಟ ಸಹಯೋಗದೊಂದಿಗೆ ಕೆಲಸ ಮಾಡಲಿದೆ. ಆ ಮೂಲಕ ದೃಢವಾದ ಮಾರ್ಗಸೂಚಿಯನ್ನು ವಿನ್ಯಾಸಗೊಳಿಸಲು, ಕಾರ್ಯಕ್ರಮದ ಆಡಳಿತ ರಚನೆಯನ್ನು ಅಭಿವೃದ್ಧಿಪಡಿಸುವುದು, ಮೇಲ್ವಿಚಾರಣೆ ಮತ್ತು ಟ್ರ್ಯಾಕಿಂಗ್ ಕಾರ್ಯವಿಧಾನಗಳನ್ನು ಸ್ಥಾಪಿಸುವುದು, ಮತ್ತು ಅಂತಿಮ ಉದ್ದೇಶಗಳನ್ನು ಸಾಧಿಸಲು ರಾಜ್ಯ ಸಂಸ್ಥೆಗಳಿಗೆ ಬೆಂಬಲವನ್ನು ನೀಡಲಿದೆ.
SATH ಕಾರ್ಯಕ್ರಮವನ್ನು ಮೆಕಿನ್ಸೆ & ಕಂಪನಿ ಮತ್ತು IPE ಗ್ಲೋಬಲ್ ಕನ್ಸೋರ್ಟಿಯಂನೊಂದಿಗೆ NITI ಆಯೋಗ ಜಾರಿಗೊಳಿಸಲಿದೆ.
ರಾಜ್ಯಗಳ ಆಯ್ಕೆ:
ಮೂರು ಮಾದರಿ ರಾಜ್ಯಗಳನ್ನು ಆಯ್ಕೆ ಮಾಡಲು ನೀತಿ ಆಯೋಗ ಮೂರು ಹಂತದ ಪ್ರಕ್ರಿಯೆಯನ್ನು ಉಚ್ಚರಿಸಿದೆ, ಅವುಗಳೆಂದರೆ ಆಸಕ್ತಿಯ ಅಭಿವ್ಯಕ್ತಿ, ರಾಜ್ಯಗಳ ಪ್ರಸ್ತುತಿಗಳು ಮತ್ತು ಆರೋಗ್ಯ ಕ್ಷೇತ್ರ ಸುಧಾರಣೆಗೆ ಬದ್ಧತೆಯ ಮೌಲ್ಯಮಾಪನ.
ಅದರಂತೆ 16 ರಾಜ್ಯಗಳು ಆಸಕ್ತಿಯನ್ನು ವ್ಯಕ್ತಪಡಿಸಿದ್ದು, ಇವುಗಳಲ್ಲಿ 14 ರಾಜ್ಯಗಳಾದ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಚಂಡೀಗಢ, ಗೋವಾ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ಪಂಜಾಬ್, ತೆಲಂಗಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳು ಯೋಜನೆಯನ್ನು ಪ್ರಸ್ತಾವಿಸಿವೆ.
ಈ ಹದಿನಾಲ್ಕು ರಾಜ್ಯಗಳಿಂದ ನೀತಿ ಆಯೋಗ 5 ರಾಜ್ಯಗಳನ್ನು ಆಯ್ಕೆ ಮಾಡಲಿದೆ. ತರುವಾಯದ ತಪಾಸಣೆ ಮತ್ತು ಮೌಲ್ಯಮಾಪನಗಳ ನಂತರ, ಮೂರು ರಾಜ್ಯಗಳನ್ನು ಆಯ್ಕೆ ಮಾಡಲಾಗುತ್ತದೆ. ಸಂಭಾವ್ಯ ಪ್ರಭಾವವನ್ನು ನಿರ್ಧರಿಸಲು MMR, IMR, ನಿಯಮಾವಳಿಗಳಂತಹ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ ಮತ್ತು ವೈದ್ಯರ ಸಾಂದ್ರತೆ ಮತ್ತು ದಾದಿಯರು, IPHS ಮಾನದಂಡಗಳ ಅನುಸರಣೆ ಮುಂತಾದ ಮಾಪನಗಳನ್ನು ಯಶಸ್ಸಿನ ಸಾಧ್ಯತೆಯನ್ನು ನಿರ್ಧರಿಸಲು ಬಳಸಲಾಗುತ್ತದೆ.
ಈ ಮೂರು ಆಯ್ದ ರಾಜ್ಯಗಳ ಜೊತೆ ಒಪ್ಪಂದಕ್ಕೆ ಸಹಿ ಮಾಡಿದ ನಂತರ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು.
ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ: 2018
ಕ್ವಾಕ್ವೆರೆಲ್ಲಿ ಸೈಮಂಡ್ಸ್ (ಕ್ಯೂಎಸ್) ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2018 ಅನ್ನು ಬಿಡುಗಡೆ ಮಾಡಲಾಗಿದೆ. ಪಟ್ಟಿಯಲ್ಲಿ, ಮೂರು ಭಾರತೀಯ ವಿಶ್ವವಿದ್ಯಾನಿಲಯಗಳು ಅಗ್ರ 200 ವಿಶ್ವವಿದ್ಯಾನಿಲಯಗಳಲ್ಲಿ ಕಾಣಿಸಿಕೊಂಡಿವೆ.
ಪ್ರಮುಖಾಂಶಗಳು:
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) -ಬಾಂಬೆ, ಐಐಟಿ-ದೆಹಲಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ), ಬೆಂಗಳೂರು, ಅಗ್ರ 200 ಜಾಗತಿಕ ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದಿವೆ. ಇದೇ ಮೊದಲ ಬಾರಿಗೆ QS ಶ್ರೇಯಾಂಕಗಳಲ್ಲಿ ಅಗ್ರ 200 ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಮೂರು ಭಾರತೀಯ ಸಂಸ್ಥೆಗಳು ಸ್ಥಾನ ಪಡೆದಿವೆ. ಐಐಎಸ್ಸಿ ಬೆಂಗಳೂರು ಕಳೆದ ವರ್ಷ 152 ನೇ ಸ್ಥಾನಪಡೆದುಕೊಂಡಿದ್ದು, ಈ ವರ್ಷ 190ನೇ ಸ್ಥಾನವನ್ನು ಗಳಿಸಿದೆ. ಐಐಟಿ ದೆಹಲಿ 185 ರಿಂದ 172 ಕ್ಕೆ ಏರಿದೆ ಮತ್ತು ಐಐಟಿ ಬಾಂಬೆ ಈ ವರ್ಷ 219 ರಿಂದ 179 ಕ್ಕೆ ಏರಿದೆ.
ಐಐಎಸ್ಸಿ, ಬೆಂಗಳೂರು 2018ರ ಶ್ರೇಯಾಂಕದಲ್ಲಿ “Citation for Faculty (ಭೋದಕ ಸಿಬ್ಬಂದಿಯಿಂದ ಸಂಶೋಧನಾ ಪೇಪರ್ ಮಂಡನೆ)” 959 ವಿಶ್ವವಿದ್ಯಾನಿಲಯಗಳಲ್ಲಿ 6ನೇ ಸ್ಥಾನದಲ್ಲಿದೆ. ವಿಶ್ವವಿದ್ಯಾಲಯದಿಂದ ಎಷ್ಟು ಬಾರಿ ಸಂಶೋಧನಾ ಪೇಪರ್ಗಳನ್ನು ಇತರರ ಸಂಶೋಧನಾ ಕಾರ್ಯದಲ್ಲಿ ಉಲ್ಲೇಖಿಸಲಾಗಿದೆ ಮತ್ತು ಬೋಧನಾ ಸಾಮರ್ಥ್ಯದ ಮಾಪನಾಂಕ ನಿರ್ಣಯಿಸಿ ಲೆಕ್ಕಹಾಕಲಾಗುತ್ತದೆ.
ಮೊದಲ ಬಾರಿಗೆ ದೆಹಲಿ ಯುನಿವರ್ಸಿಟಿ (ಡಿಯು) ಅಗ್ರ 500 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ದಕ್ಕಿಸಿಕೊಂಡಿದೆ.
ಜಾದವ್ಪುರ್ ವಿಶ್ವವಿದ್ಯಾನಿಲಯ (601-650 ಬ್ಯಾಂಡ್ನಲ್ಲಿ ಸ್ಥಾನ ಪಡೆದಿದೆ), ಹೈದರಾಬಾದ್ ವಿಶ್ವವಿದ್ಯಾನಿಲಯ (601-650), ಅಣ್ಣಾ ವಿಶ್ವವಿದ್ಯಾಲಯ (651-700), ಮಣಿಪಾಲ್ ವಿಶ್ವವಿದ್ಯಾನಿಲಯ (701-750), ಅಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯ (800-1000), ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (800-1000) ಸ್ಥಾನ ಪಡೆದುಕೊಂಡಿವೆ.
ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು (ಎಂಐಟಿ) ಸತತ ಆರನೆಯ ವರ್ಷ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾನಿಲಯವಾಗಿದೆ. ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯ ಕ್ರಮವಾಗಿ ಶ್ರೇಯಾಂಕಗಳಲ್ಲಿ ಎರಡನೆಯ ಮತ್ತು ಮೂರನೇ ಸ್ಥಾನವನ್ನು ಆಕ್ರಮಿಸಿಕೊಂಡಿವೆ.
ಕ್ಯೂಎಸ್ ಶ್ರೇಯಾಂಕ:
ಕ್ವಾಕ್ವೆರೆಲ್ಲಿ ಸೈಮಂಡ್ಸ್ ಬ್ರಿಟಿಷ್ ಸಂಸ್ಥೆಯಾಗಿದ್ದು, ಪ್ರತಿವರ್ಷ ವಿಶ್ವದಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಶ್ರೇಯಾಂಕವನ್ನು ನೀಡುತ್ತಿದೆ. ಸಂಸ್ಥೆಯು ಸಂಶೋಧನೆ, ಬೋಧನೆ, ಉದ್ಯೋಗ ಮತ್ತು ಅಂತರಾಷ್ಟ್ರೀಯೀಕರಣದಂತಹ ಆರು ಕಾರ್ಯಕ್ಷಮತೆಯ ಮಾನದಂಡಗಳನ್ನು ಆಧರಿಸಿ ಶ್ರೇಯಾಂಕವನ್ನು ನೀಡುತ್ತಿದೆ.
ಮ್ಯಾನ್ಮರ್ರಿನಲ್ಲಿ ಕಲಾಡನ್ ಯೋಜನೆ ಪೂರ್ಣಗೊಳಿಸಲು ಗುತ್ತಿಗೆ ನೀಡಿದ ಸರ್ಕಾರ
ಮ್ಯಾನ್ಮಾರ್ನಲ್ಲಿ ಭಾರತ ಅನುಷ್ಠಾನಗೊಳಿಸುತ್ತಿರುವ ಕಲಾಡನ್ ಯೋಜನೆಗೆ ಕೇಂದ್ರ ಸರ್ಕಾರ ಗುತ್ತಿಗೆಯನ್ನು ಅನುಮೋದಿಸಿದೆ. 484 ಮಿಲಿಯನ್ ಡಾಲರ್ ಕಲಾಡನ್ ಬಹು-ಮಾದರಿ ಸಾರಿಗೆ (ಕೆಎಂಟಿಟಿ) ಯೋಜನೆಯಡಿ ಪ್ಯಾಲೇಟ್ವಾ ನದಿ ಟರ್ಮಿನಲ್ ಅನ್ನು ಮಿಜೋರಾಮ್ ಗಡಿಯಲ್ಲಿನ ಜೋರಿನ್ಪೂಯಿಗೆ ಸಂಪರ್ಕ ಕಲ್ಪಿಸುವ 109 ಕಿ.ಮೀ. ರಸ್ತೆ ನಿರ್ಮಿಸಲಾಗುವುದು. ಈ ಯೋಜನೆಯ ವೆಚ್ಚ ರೂ 1,600 ಕೋಟಿ ರೂ. ಈ ಯೋಜನೆಯಿಂದ ಮಿಜೋರಾಮ್ ಮತ್ತು ಮಯನ್ಮಾರ್ ನಡುವೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ.
ಪ್ರಮುಖಾಂಶಗಳು:
ಕಲಾಡನ್ ಬಹು-ಮಾದರಿ ಸಾರಿಗೆ ಯೋಜನೆಯು ಮ್ಯಾನ್ಮಾರ್ನಲ್ಲಿ ಭಾರತೀಯ ಸರ್ಕಾರ ಕೈಗೊಂಡ ಮೊದಲ ಪ್ರಮುಖ ಯೋಜನೆಯಾಗಿದೆ.
ಈ ಯೋಜನೆಯಡಿ ಈಗಾಗಲೇ ಮ್ಯಾನ್ಮಾರಿನ ರಾಖಿನೆ ರಾಜ್ಯದಲ್ಲಿ ಭಾರತ ಸಿಟ್ವೆ ಬಂದರನ್ನು ನಿರ್ಮಿಸಿ ಮುಗಿಸಿದೆ. ಅಲ್ಲದೆ, ಐಝಾಲ್-ಸೈಹ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಯು ಅಂತಾರಾಷ್ಟ್ರೀಯ ಗಡಿಪ್ರದೇಶದಲ್ಲಿ ಜೊರಿನ್ಪೂಯಲ್ಲಿ ಭಾರತೀಯ ಭಾಗದಲ್ಲಿ ಪೂರ್ಣಗೊಳ್ಳುವ ಹಂತದಲ್ಲಿದೆ. ಇದರ ಜೊತೆಗೆ, ಸಿಟ್ವೆ ಮತ್ತು ಐಜಾಲ್ ನಡುವೆ ಸರಕುಗಳನ್ನು ತ್ವರಿತವಾಗಿ ಸಾಗಿಸಲು 300 ಕಿಮೀ ಐಝಾಲ್-ಟುಪಿಪಾಂಗ್ ಹೆದ್ದಾರಿಯ ನಾಲ್ಕು-ಹಾದಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ.