ರೈಲ್ವೆ ಸಚಿವಾಲಯದ “ಮಿಷನ್ ರೆಟ್ರೊ-ಫಿಟ್ಮೆಟ್”ಗೆ ಚಾಲನೆ

ಪ್ರಯಾಣಿಕರಿಗೆ ಹೊಸ ಅನುಭವವನ್ನು ನೀಡುವ ಸಲುವಾಗಿ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಮಿಷನ್ ರೆಟ್ರೊ-ಫಿಟ್ಮೆಂಟ್ (Retro-Fitment)ಗೆ ಚಾಲನೆ ನೀಡಿದರು.

                ಮಿಷನ್ ರೆಟ್ರೋ-ಫಿಟ್ಮೆಂಟ್ ರೈಲ್ವೆ ಸಚಿವಾಲಯದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಭಾರತದ ರೈಲು ಬೋಗಿಗಳನ್ನು ಸಜ್ಜುಗೊಳಿಸುವಿಕೆ ಮತ್ತು ಸೌಕರ್ಯಗಳ ಮಟ್ಟವನ್ನು ನವೀಕರಿಸುವ ಉದ್ದೇಶವನ್ನು ಹೊಂದಿದೆ.

                ನವೀಕರಿಸಿದ ಬೋಗಿಗಳು ರೈಲ್ವೆ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಅನುಕೂಲಕರವಾದ ಪ್ರಯಾಣವನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ಉತ್ತಮವಾದ ಸೌಕರ್ಯಗಳು ಮತ್ತು ಉತ್ತಮ ಸುರಕ್ಷತೆ ವೈಶಿಷ್ಟ್ಯಗಳನ್ನು ಹೊಂದಿರಲಿವೆ.

                ಮಿಷನ್ ರೆಟ್ರೋ-ಫಿಟ್ಮೆಂಟ್ ಅಡಿಯಲ್ಲಿ, ಮುಂದಿನ ಐದು ವರ್ಷಗಳಲ್ಲಿ 40,000 ಬೋಗಿಗಳನ್ನು ನವೀಕರಿಸಲಾಗುತ್ತದೆ. 2022-23ರ ವೇಳೆಗೆ ಒಳ ವಿನ್ಯಾಸವನ್ನು ನವೀಕರಿಸಿದ ಸುಮಾರು 40,000 ಬೋಗಿಗಳನ್ನು ಪರಿಚಯಿಸಲಾಗುವುದು. ಈ ಮಿಷನ್ ವಿಶ್ವದಲ್ಲೇ ಅತ್ಯಂತ ದೊಡ್ಡ ರೆಟ್ರೊ ಫಿಟ್ಮೆಂಟ್ ಯೋಜನೆಗಳಲ್ಲಿ ಒಂದಾಗಿದೆ. ಸಂಚಾರ ಕಾರ್ಯಾಚರಣೆಯನ್ನು ಅಡ್ಡಿಪಡಿಸದೆ ಈ ಯೋಜನೆಯನ್ನು ಕೈಗೊಳ್ಳಲಾಗುತ್ತದೆ. ಪ್ರತಿ ಬೋಗಿಗೆ ಸುಮಾರು 30 ಲಕ್ಷ ರುಪಾಯಿ ವೆಚ್ಚವನ್ನು ನಿಗದಿಪಡಿಸಲಾಗುವುದು ಎಂದು ಅಂದಾಜಿಸಲಾಗಿದೆ.

ಬೋಗಿಗಳ ವೈಶಿಷ್ಠತೆ:

ನವೀಕರಿಸಿದ ಬೋಗಿಗಳು ಈ ಕೆಳಕಂಡ ವೈಶಿಷ್ಟ್ಯಗಳನ್ನು ಹೊಂದಿರಲಿವೆ:

  • ವಿಶ್ವ ದರ್ಜೆಯ ವಿನ್ಯಾಸ, ಎಲ್ಇಡಿ ದೀಪಗಳು, ಮಾಡ್ಯುಲರ್ ಶೌಚಾಲಯಗಳು, ಬ್ರಾಂಡ್ ಫಿಟ್ಟಿಂಗ್ಗಳು, ಗೀಚುಬರಹ ವಿರೋಧಿ ಹೊದಿಕೆ.
  • ಬೆಂಕಿ ಮತ್ತು ಹೊಗೆ ಪತ್ತೆಹಚ್ಚುವಿಕೆ ವ್ಯವಸ್ಥೆ, ಗಾಯ ಆಗುವುದನ್ನು ತಡೆಯಲು ದುಂಡಾದ ಅಂಚುಗಳು, ಡಬಲ್ ಆಕ್ಟರ್ಸ್ ಕಂಪಾರ್ಟ್ಮೆಂಟ್ ಎಸಿ ಬಾಗಿಲು. ಜೈವಿಕ-ಶೌಚಾಲಯಗಳಂತಹ ಪರಿಸರ ಸ್ನೇಹಿ ವ್ಯವಸ್ಥೆಗಳು.
  • ಪಾಲಿಕಾರ್ಬೊನೇಟ್ ಎಬಿಎಸ್, ಗ್ಲಾಸ್ ಫೈಬರ್ ರಿಇನ್ಫೋರ್ಸ್ಡ್ ಪ್ಲಾಸ್ಟಿಕ್, ಸ್ಟೇನ್ಲೆಸ್ ಸ್ಟೀಲ್ ಇತ್ಯಾದಿ ಉತ್ತಮ ವಸ್ತುಗಳ ಬಳಕೆ
  • ಸುಧಾರಿತ ಪ್ರಯಾಣಿಕ ಅನುಕೂಲಕ್ಕಾಗಿ ಪ್ರಯಾಣಿಕರ ವಿಳಾಸ ಮತ್ತು ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಬ್ರೈಲ್ ಸಿಗ್ನೇಜ್ ವಿನ್ಯಾಸ ಇತ್ಯಾದಿ.

DRDO ದಿಂದ ನಾಗ್ ಕ್ಷಿಪಣಿ ಯಶಸ್ವಿ ಪರೀಕ್ಷೆ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ರಾಜಸ್ಥಾನದಲ್ಲಿ ‘ನಾಗ್’ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಪರೀಕ್ಷೆಯನ್ನು ಹೈದರಾಬಾದ್ನಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಕ್ಷಿಪಣಿ ಕಾಂಪ್ಲೆಕ್ಸ್, ಜೋಧ್ಪುರದ ರಕ್ಷಣಾ ಪ್ರಯೋಗಾಲಯ, ಪುಣೆಯಲ್ಲಿರುವ ಅರ್ಮಾಮೆಂಟ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಎಆರ್ಡಿಇ) ಮತ್ತು ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ (ಎಚ್ಇಎಮ್ಆರ್ಎಲ್)ಯ ವಿಜ್ಞಾನಿಗಳು ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಿದರು.

ಪ್ರಮುಖಾಂಶಗಳು:

ಇಂಟಿಗ್ರೇಟೆಡ್ ಗೈಡೆಡ್ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮ (ಐಜಿಎಂಡಿಪಿ) ಅಡಿಯಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದ ಐದು ಕ್ಷಿಪಣಿ ವ್ಯವಸ್ಥೆಗಳಲ್ಲಿ ನಾಗ್ (ಆಂಟಿ-ಟ್ಯಾಂಕ್) ಕ್ಷಿಪಣಿ ಒಂದಾಗಿದೆ. ಅಗ್ನಿ, ಆಕಾಶ್, ತ್ರಿಶೂಲ್ ಮತ್ತು ಪೃಥ್ವಿ ಇತರೆ ನಾಲ್ಕು ಕ್ಷಿಪಣಿಗಳನ್ನು ಈ ಕಾರ್ಯಕ್ರಮದಡಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

ಮೂರನೇ ತಲೆಮಾರಿನ  ಆಂಟಿ ಟ್ಯಾಂಕ್ ಗೈಡೆಡ್ ಮಿಸ್ಸೈಲ್ ನಾಗ್ ನಲ್ಲಿ ಇಂಟಿಗ್ರೇಟೆಡ್ ಏವಿಯೋನಿಕ್ಸ್ ತಂತ್ರಜ್ಞಾನದೊಂದಿಗೆ ಹೆಚ್ಚು ಮುಂದುವರಿದ ಇಮೇಜಿಂಗ್ ಇನ್ಫ್ರಾರೆಡ್ ರಾಡಾರ್ (ಐಆರ್ಆರ್) ಅನ್ನು ಅಳವಡಿಸಲಾಗಿದೆ.

ಸ್ತ್ರಸಜ್ಜಿತ ಮಿಲಿಟರಿ ವಾಹನಗಳನ್ನು ಹೊಡೆಯಲು ಮತ್ತು ನಾಶಮಾಡಲು ‘ನಾಗ್’ ಕ್ಷಿಪಣಿಯನ್ನು ವಿನ್ಯಾಸಗೊಳಿಸಲಾಗಿದೆ.

ನಾಗ್ ಕ್ಷಿಪಣಿಯನ್ನು ಭೂಮಿ ಮತ್ತು ವಾಯು-ಆಧಾರಿತ ವೇದಿಕೆಗಳಿಂದ ಉಡಾಯಿಸಬಹುದು. ಹೆಲಿಕಾಪ್ಟರ್ ನಿಂದ ಉಡಾಯಿಸುವ ಕ್ಷಿಪಣಿಯನ್ನು ಹೆಲಿಕಾಪ್ಟರ್-ಎನ್ಎಜಿ (ಹೆಲಿನ್) ಎಂದು ಕರೆಯಲಾಗುತ್ತಿದ್ದು, ಧೃವ್ ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್ಎಚ್) ಮತ್ತು ಎಚ್ಎಎಲ್ ರುದ್ರ ಹೆಲಿಕಾಪ್ಟರ್ನಿಂದ ದಾಳಿ ನಡೆಸಬಹುದು.

ಬಾಲ ಕಾರ್ಮಿಕ ಪದ್ದತಿಗೆ ಕಡಿವಾಣ ಹಾಕಲು ಎರಡು ಪ್ರಮುಖ ಜಾಗತಿಕ ಒಪ್ಪಂದವನ್ನು ಅನುಮೋದಿಸಿದ ಭಾರತ

ಬಾಲಕಾರ್ಮಿಕ ಪದ್ದತಿಯನ್ನು ಸಂಪೂರ್ಣವಾಗಿ ತೊಡೆದು ತೊಡೆದು ಹಾಕಲು ಭಾರತವು ಎರಡು ಪ್ರಮುಖ ಜಾಗತಿಕ ಒಪ್ಪಂದಗಳನ್ನು ಅನುಮೋದಿಸಿದೆ. ಈ ಎರಡು ಪ್ರಮುಖ ಒಪ್ಪಂದಗಳೆಂದರೆ ಬಾಲ ಕಾರ್ಮಿಕರ ಕನಿಷ್ಟ ವಯಸ್ಸಿನ ಒಪ್ಪಂದ, 1973 (ಸಂಖ್ಯೆ 138) ಮತ್ತು ಅನಿಷ್ಠ ರೀತಿಯ ಬಾಲ ಕಾರ್ಮಿಕ ಸಮಾವೇಶ, 1999 (Worst Forms of Child Labour Convention, 1999) (ಸಂಖ್ಯೆ 182).

                ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಒಪ್ಪಂದದ ನಂ 138 ಅನ್ನು ಅಂಗೀಕರಿಸಿದ  170 ನೇ ದೇಶ ಭಾರತ.  ಈ ಒಪ್ಪಂದ ಅನ್ವಯ ಸದಸ್ಯ ರಾಷ್ಟ್ರಗಳು ಕನಿಷ್ಠ ವಯಸ್ಸನ್ನು ನಿಗದಿಪಡಿಸಬೇಕಿದ್ದು, ಆ ವಯಸ್ಸಿನವರು ಯಾವುದೇ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬಾರದು.

                ಭಾರತವು ILOದ ಒಪ್ಪಂದ ಸಂಖ್ಯೆ 182 ಅನ್ನು ಅನುಮೋದಿಸಿದ 181ನೇ  ರಾಷ್ಟ್ರವೆನಿಸಿದೆ. ಈ ಒಪ್ಪಂದದಡಿ ಗುಲಾಮಗಿರಿ, ಬಲವಂತದಿಂದ ಕಾರ್ಮಿಕ ವೃತ್ತಿಗೆ ತಳ್ಳುವುದು ಮತ್ತು ಕಳ್ಳಸಾಗಣೆ ,ಸಶಸ್ತ್ರ ಸಂಘರ್ಷದಲ್ಲಿ ಮಕ್ಕಳ ಬಳಕೆ, ವೇಶ್ಯಾವಾಟಿಕೆ, ಅಶ್ಲೀಲತೆ ಮತ್ತು ಮಾದಕವಸ್ತು ಕಳ್ಳಸಾಗಣೆಗಳಂತಹ ಅಕ್ರಮ ಚಟುವಟಿಕೆಗಳಲ್ಲಿ ಮಗುವಿನ ಬಳಕೆಯಂತಹ ಅನಿಷ್ಠ ರೀತಿಯ ಬಾಲಕಾರ್ಮಿಕ ಪದ್ದತಿಯನ್ನು ನಿಷೇಧಿಸುವುದು ಮತ್ತು ನಿವಾರಿಸುವುದು ಸದಸ್ಯ ರಾಷ್ಟ್ರಗಳ ಕರ್ತವ್ಯ.

ಸರ್ಕಾರದ ಕ್ರಮ:

ಕೇಂದ್ರ ಸರ್ಕಾರ ಇತ್ತೀಚೆಗೆ ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ, 1986ಕ್ಕೆ ತಿದ್ದುಪಡಿ ತಂದಿದ್ದು, ಸೆಪ್ಟೆಂಬರ್ 2016 ರಿಂದ ಜಾರಿಗೆ ಬಂದಿದೆ. ಈ ತಿದ್ದುಪಡಿ ಅನ್ವಯ ಯಾವುದೇ ಉದ್ಯೋಗ ಅಥವಾ ಪ್ರಕ್ರಿಯೆಯಲ್ಲಿ 14 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಉದ್ಯೋಗಕ್ಕೆ ಬಳಸಿಕೊಳ್ಳುವುದು ಅಪರಾಧ. ಹದಿಹರೆಯದವರಿಗೆ (14 ರಿಂದ 18 ವರ್ಷಗಳು) ಅಪಾಯಕಾರಿ ಉದ್ಯೋಗಗಳು ಮತ್ತು ಪ್ರಕ್ರಿಯೆಗಳಲ್ಲಿ ಉದ್ಯೋಗವನ್ನು ನಿಷೇಧಿಸಲಾಗಿದೆ. ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯನ್ನೂ ಸರ್ಕಾರ ಬಲಪಡಿಸಿದೆ. ಇದು ಹದಿಹರೆಯದವರಿಗೆ  ಶಿಕ್ಷಣ ಮತ್ತು ವೃತ್ತಿ ತರಬೇತಿ ನೀಡುವ ಪುನರ್ವಸತಿ ಯೋಜನೆಯಾಗಿದೆ.

Leave a Comment

This site uses Akismet to reduce spam. Learn how your comment data is processed.