ಆಹಾರ ನಿಯಂತ್ರಣ ಪೋರ್ಟಲ್ ಮತ್ತು ನಿವೇಶ್ ಬಂಧು ಪೋರ್ಟಲ್ ಗೆ ಸರ್ಕಾರದಿಂದ ಚಾಲನೆ

ಕೇಂದ್ರ ಸರ್ಕಾರ ಆಹಾರ ನಿಯಂತ್ರಣ ಪೋರ್ಟಲ್ ಮತ್ತು ಹೂಡಿಕೆದಾರರ ಸೌಲಭ್ಯ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ವರ್ಲ್ಡ್ ಫುಡ್ ಇಂಡಿಯಾ 2017 ಪ್ರದರ್ಶನ ಸಮಾರಂಭದಲ್ಲಿ ಈ ಪೋರ್ಟಲ್ ಗಳಿಗೆ ಚಾಲನೆ ನೀಡಲಾಗಿದೆ.

ಆಹಾರ ಸಂಸ್ಕರಣ ಮತ್ತು ಕೈಗಾರಿಕೆಗಳ ಸಚಿವಾಲಯ (MoFPI) ಮತ್ತು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಜಂಟಿಯಾಗಿ ಈ ಪೋರ್ಟಲ್ ಗಳನ್ನು ಪ್ರಾರಂಭಿಸಿವೆ. ಆಹಾರ ವ್ಯವಹಾರ ಕ್ಷೇತ್ರದಲ್ಲಿ ದೇಶೀಯ ಬೇಡಿಕೆಗಳು ಮತ್ತು ಆಹಾರ ಆಮದುಗಳನ್ನು ಪೂರೈಸಲು ಆಹಾರ ಇದು ಏಕೈಕ ಸಂಪರ್ಕ ಸಾಧನವಾಗಲಿದೆ.

            ಆಹಾರದ ಗುಣಮಟ್ಟ, ಸ್ಥಿರ ಜಾರಿ, ದೋಷ ಮುಕ್ತ ಆಹಾರ ಆಮದು, ವಿಶ್ವಾಸಾರ್ಹ ಆಹಾರ ಪರೀಕ್ಷೆ ಮತ್ತು ಸುರಕ್ಷಿತ ಆಹಾರ ಸಂಸ್ಕರಣ ಸಂಹಿತೆ ವಿಧಾನಗಳ ಬಗ್ಗೆ ಪೋರ್ಟಲ್ ನ ಪ್ರಮುಖ ಗುರಿಯಾಗಿದೆ.

ನಿವೇಶ್ ಬಂಧು ಪೋರ್ಟಲ್:

ವಿಶೇಷ ಪೋರ್ಟಲ್-ನಿವೇಶ್ ಬಂಧು-ಅಥವಾ ’ಹೂಡಿಕೆದಾರರ ಸ್ನೇಹಿತ” (ಇನ್ವೆಸ್ಟರ್ ಫ಼್ರೆಂಡ್ ) \ ಕೇಂದ್ರ ಮತ್ತು ರಾಜ್ಯ ಸರಕಾರದ ನೀತಿಗಳು, ಆಹಾರ ಸಂಸ್ಕರಣಾ ಕ್ಷೇತ್ರಕ್ಕೆ ಲಭ್ಯ ಇರುವ ಪ್ರೋತ್ಸಾಹಧನ ಇತ್ಯಾದಿ ಮಾಹಿತಿಗಳನ್ನು ಕ್ರೋಢಿಕರಿಸಿ ಒದಗಿಸುತ್ತದೆ. ಅದು ಸ್ತಳೀಯ ಮಟ್ಟದವರೆಗೆ ಸಂಪನ್ಮೂಲಗಳ ಪಟ್ಟಿಯನ್ನು ಸಂಸ್ಕರಣಾ ಆವಶ್ಯಕತೆಗಳೊಂದಿಗೆ ಒದಗಿಸುತ್ತದೆ. ಇದು ರೈತರಿಗೆ, ವ್ಯಾಪಾರಿಗಳಿಗೆ, ಸಂಸ್ಕರಣಗಾರರಿಗೆ ಮತ್ತು ಸಾಗಾಟ ನಿರ್ವಾಹಕರಿಗೆ ವ್ಯವಹಾರ ಜಾಲದ ವೇದಿಕೆಯಾಗಿದೆ.

ಕೋಸ್ಟಲ್ ಬರ್ತ್ ಯೋಜನೆ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ

ಮಹತ್ವಕಾಂಕ್ಷಿ ಸಾಗರಮಾಲ ಯೋಜನೆಯಡಿ ಜಾರಿಗೊಳಿಸಲಾದ ಕೋಸ್ಟಲ್ ಬರ್ತ್ ಯೋಜನೆಯ ಅವಧಿಯನ್ನು ಮಾರ್ಚ್ 2020 ರವರೆಗೆ ಕೇಂದ್ರ ಬಂದರು ಸಚಿವಾಲಯ ವಿಸ್ತರಿಸಿದೆ. ಇದಲ್ಲದೆ, ಪ್ರಮುಖ ಬಂದರುಗಳಲ್ಲಿ ಕ್ಯಾಪಿಟಲ್ ಡ್ರೆಡ್ಜಿಂಗ್ ಮತ್ತು ವಿಸ್ತಾರವಾದ ಯೋಜನೆಯ ವರದಿಯನ್ನು (ಡಿಪಿಆರ್) ತಯಾರಿಸಲು ಕೋಸ್ಟಲ್ ಬರ್ತ್ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.  ಭಾರತವು 7500 ಕಿ.ಮೀ ಕರಾವಳಿ ತೀರವನ್ನು ಹೊಂದಿದ್ದು, ಆಂತರಿಕ ಸರಕು ಸಾಗಣೆಗೆ ಇದು ಪ್ರಮುಖ ಪಾತ್ರವಹಿಸಲಿದೆ

ಪ್ರಮುಖಾಂಶಗಳು:

  • ಕೋಸ್ಟಲ್ ಬರ್ತ್ ಯೋಜನೆ ಎಂಟು ರಾಜ್ಯಗಳನ್ನು ಒಳಗೊಂಡಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 12 ಯೋಜನೆಗಳು, ಆಂಧ್ರಪ್ರದೇಶ ಮತ್ತು ಗೋವಾದಲ್ಲಿ 10, ಕರ್ನಾಟಕದಲ್ಲಿ 6, ಕೇರಳ ಮತ್ತು ತಮಿಳುನಾಡಿನಲ್ಲಿ 3, ಗುಜರಾಜ್ 2 ಮತ್ತು ಪಶ್ಚಿಮ ಬಂಗಾಳದಲ್ಲಿ 1 ಯೋಜನೆ.
  • 47 ಯೋಜನೆಗಳ ಪೈಕಿ ರೂ 1075.61 ಕೋಟಿಯ 23 ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಉಳಿದ 24 ಯೋಜನೆಗಳು ವಿವಿಧ ಹಂತದಲ್ಲಿವೆ.

ಕೋಸ್ಟಲ್ ಬರ್ತ್ ಯೋಜನೆ:

  • ರಾಷ್ಟ್ರೀಯ ಜಲಮಾರ್ಗ ಅಥವಾ ಸಮುದ್ರದ ಮೂಲಕ ಸರಕು ಸಾಗಣಿಕೆ ಮಾಡಲು ಬಂದರುಗಳಲ್ಲಿ ಮೂಲಭೂತ ಸೌಕರ್ಯವನ್ನು ಕಲ್ಪಿಸಲು ರಾಜ್ಯ ಸರ್ಕಾರ ಅಥವಾ ಬಂದರುಗಳಿಗೆ ಹಣಕಾಸಿನ ಬೆಂಬಲವನ್ನು ಒದಗಿಸುವುದು ಯೋಜನೆಯ ಉದ್ದೇಶ. ಇದರಡಿ ಯೋಜನೆಯ ಶೇ 50% ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ.
  • ಇದಲ್ಲದೆ ವಿಸ್ತಾರವಾದ ಯೋಜನೆಯ ವರದಿಯನ್ನು ಸಿದ್ದಪಡಿಸಲು ಸಹ ಕೇಂದ್ರ ಸರ್ಕಾರ ಹಣಕಾಸು ನೆರವು ನೀಡಲಿದೆ. ಉಳಿದ ಮೊತ್ತವನ್ನು ಸಂಬಂಧಿಸಿದ ಬಂದರುಗಳು ಅಥವಾ ರಾಜ್ಯ ಸರ್ಕಾರ ಭರಿಸಬೇಕು.
  • ಯೋಜನೆಯ ಅಡಿಯಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳು ಕರಾವಳಿ ತೀರಾದಲ್ಲಿ ಬಂದರು ಮೂಲಕ ಸರಕು ಸಾಗಟ ಮಾಡಲು ಅನುಕೂಲ ಮಾಡಲಿವೆ. ಆ ಮೂಲಕ ರೈಲು ಮತ್ತು ರಸ್ತೆ ಸಾಗಣಿಕೆ ಮೇಲೆ ಅವಲಂಬನೆ ಕಡಿಮೆಗೊಳ್ಳಲಿದೆ.

ಸಾಗರಮಾಲ ಯೋಜನೆ:

7500ಕಿ.ಮೀ ಉದ್ದದ ಕರಾವಳಿಯುದ್ದಕ್ಕೂ ಇರುವ ಬಂದರುಗಳನ್ನು ಅಭಿವೃದ್ಧಿಪಡಿಸುವ ಮೂಲಕ ಬಂದರು ಕೇಂದ್ರಿತ್ವ ಅಭಿವೃದ್ಧಿಯನ್ನು ಉತ್ತೇಜಿಸಲು ಸಾಗರಮಾಲ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಡಿ ಅಸ್ತಿತ್ವದಲ್ಲಿರುವ ಬಂದರುಗಳನ್ನು ಆಧುನಿಕ ವಿಶ್ವ ಮಾದರಿ ಬಂದರುಗಳನ್ನಾಗಿ ಮಾರ್ಪಡಿಸಲಾಗುವುದು ಮತ್ತು ಹೊಸ ಬಂದರುಗಳನ್ನು ಅಭಿವೃದ್ದಿಪಡಿಸಲಾಗುವುದು. ಬಂದರು ಸಚಿವಾಲಯ ಯೋಜನೆಯ ನೊಡಲ್ ಸಚಿವಾಲಯ ಆಗಿದೆ.

            ಸಾಗರಮಾಲ ಯೋಜನೆಯ ಮೂರು ಪ್ರಮುಖ ಅಂಶಗಳೆಂದರೆ ಬಂದರು ಆಧುನಿಕೀಕರಣ, ಸಮರ್ಥವಾಗಿ ಸ್ಥಳಾಂತರಿಸುವ ವ್ಯವಸ್ಥೆಮತ್ತು ಕರಾವಳಿ ಆರ್ಥಿಕ ಅಭಿವೃದ್ಧಿ.

ಸ್ವದೇಶಿ ನಿರ್ಮಿತ “ಸ್ಮಾರ್ಟ್ ಆಂಟಿ ಏರ್ಫೀಲ್ಡ್ ವೆಪನ್ (ಸಾವ್)” ಪರೀಕ್ಷೆ ಯಶಸ್ವಿ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ಸ್ಥಳೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ ಲಘು ತೂಕದ ಗ್ಲೈಡ್ ಬಾಂಬ್ “ಸ್ಮಾರ್ಟ್ ಆಂಟಿ ಏರ್ಫೀಲ್ಡ್ ವೆಪನ್ (SAAW)”ನ ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಒಡಿಶಾದ ಚಂಡಿಪುರದಲ್ಲಿ ವಿಭಿನ್ನ ಉಡಾವಣೆ ಪರಿಸ್ಥಿತಿಗಳು ಮತ್ತು ವ್ಯಾಪ್ತಿಯನ್ನು ಒಳಗೊಂಡ ಮೂರು ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ವಾಯುಪಡೆಯ ವಿಮಾನದಿಂದ ಬಾಂಬ್ ಅನ್ನು ಉಡಾಯಿಸಿ ನಿಖರ ಸಂಚರಣೆ ವ್ಯವಸ್ಥೆಯ ಮೂಲಕ ನಿಯಂತ್ರಿಸಲಾಯಿತು. 70ಕಿ.ಮೀ ವ್ಯಾಪ್ತಿಗೂ ಹೆಚ್ಚಿನ ಗುರಿ ತಲುಪುವಲ್ಲಿ ಯಶಸ್ವಿಯಾಯಿತು.

ಪ್ರಮುಖಾಂಶಗಳು:

  • SAAW ಯೋಜನೆಯು 2013ರ ಸೆಪ್ಟೆಂಬರ್ ನಲ್ಲಿ ಸರ್ಕಾರವು ಅನುಮೋದಿಸಿದ ಭಾರತದ ಮೊದಲ ಸಂಪೂರ್ಣ ಸ್ವದೇಶಿ ವೈಮಾನಿಕ ಶಸ್ತ್ರಾಸ್ತ್ರ ಯೋಜನೆಯಾಗಿದೆ.
  • SAAW ಒಂದು ದೀರ್ಘ-ಶ್ರೇಣಿಯ ಹಗುರವಾದ ಹೆಚ್ಚು ನಿಖರ-ನಿರ್ದೇಶಿತ ವಿರೋಧಿ ವಾಯುನೆಲೆ ಶಸ್ತ್ರವಾಗಿದೆ. ಈ 120 ಕೆ.ಜಿ. ತೂಕದ ಸ್ಮಾರ್ಟ್ ಅಸ್ತ್ರವು 100 ಕಿ.ಮೀ ವ್ಯಾಪ್ತಿ ವರೆಗೆ ನಿಖರವಾಗಿ ಗುರಿಯನ್ನು ತಲುಪಬಲ್ಲದಾಗಿದೆ.
  • SAAWನ ಆಳವಾಗಿ ನುಗ್ಗುವ ಸಾಮರ್ಥ್ಯ ಮತ್ತು ಹೆಚ್ಚಿನ ಸ್ಫೋಟಕ ಸಿಡಿತಲೆ ಸಾಮರ್ಥ್ಯದಿಂದ ಭಾರತದ ವಾಯುಪಡೆಗೆ (IAF) ಪೈಲಟ್ ಮತ್ತು ವಿಮಾನಕ್ಕೆ ಯಾವುದೇ ತೊಂದರೆಯಾಗದಂತೆ ಗಡಿಗಳಲ್ಲಿ ಸುಲಭವಾಗಿ ಶತ್ರುಪಡೆಯ ಮೇಲೆ ದಾಳಿ ನಡೆಸಬಹುದಾಗಿದೆ. ವಿವಿಧ ಯುದ್ದವಿಮಾನಗಳಲ್ಲಿ ಇದನ್ನು ಅಳವಡಿಸಬಹುದಾಗಿದ್ದು, ಶೀಘ್ರವೇ ಸೇನೆಪಡೆಗಳಿಗೆ ಹಸ್ತಾಂತರಿಸಲಾಗುವುದು.

ತಮಿಳುನಾಡು ರಂಗನಾಥಸ್ವಾಮಿ ದೇವಸ್ಥಾನಕ್ಕೆ ಯುನೆಸ್ಕೋ ಪ್ರಶಸ್ತಿ

ತಮಿಳುನಾಡಿನ ಶ್ರೀರಂಗಂನಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯವು ಸಾಂಸ್ಕೃತಿಕ ಪರಂಪರೆ ಸಂರಕ್ಷಣಾ ಕಾರ್ಯಕ್ರಮಕ್ಕಾಗಿ ಯುನೆಸ್ಕೋ ಏಷ್ಯಾ-ಪೆಸಿಫಿಕ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ವಿಶ್ವಸಂಸ್ಥೆಯಿಂದ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡ ತಮಿಳುನಾಡಿನ ಮೊದಲ ದೇವಾಲಯ ಇದಾಗಿದೆ. ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಸಂರಕ್ಷಣೆಗಾಗಿ ದೇವಾಲಯದ ಪ್ರಯತ್ನವನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದೇವಾಲಯದ ಆವರಣವನ್ನು ನವೀಕರಿಸಿರುವ ಸಾಂಪ್ರದಾಯಿಕ ವಿಧಾನ ಮತ್ತು ಮಳೆನೀರು ಕೊಯ್ಲು ಹಾಗೂ ಐತಿಹಾಸಿಕ ಒಳಚರಂಡಿ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಿರುವ ಪ್ರಯತ್ನಕ್ಕಾಗಿ ಪ್ರಶಸ್ತಿಯನ್ನು ನೀಡಲಾಗಿದೆ.

ಪ್ರಶಸ್ತಿಯ ಬಗ್ಗೆ:

UNESCO ಸಾಂಸ್ಕೃತಿಕ ಪರಂಪರೆ ಸಂರಕ್ಷಣಾ ಕಾರ್ಯಕ್ರಮಕ್ಕಾಗಿ ಪ್ರಶಸ್ತಿಗಳನ್ನು 2000ರಲ್ಲಿ ಪ್ರಾರಂಭಿಸಲಾಯಿತು. ಪ್ರಶಸ್ತಿಯನ್ನು ನಾಲ್ಕು ವಿಭಾಗಗಳಲ್ಲಿ ಅಂದರೆ ಅವಾರ್ಡ್ ಆಫ್ ಎಕ್ಸಲೆನ್ಸ್, ಅವಾರ್ಡ್ ಆಫ್ ಡಿಸ್ಟಿಕನ್ಷನ್, ಅವಾರ್ಡ್ ಆಫ್ ಮೆರಿಟ್ ಮತ್ತು ಅವಾರ್ಡ್ ಫಾರ್ ನ್ಯೂ ಡಿಸೈನ್ ನೀಡಲಾಗುತ್ತಿದೆ. ಅವಾರ್ಡ್ ಆಫ್ ಮೆರಿಟ್ ವಿಭಾಗದಲ್ಲಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಪ್ರಶಸ್ತಿಯನ್ನು ನೀಡಲಾಗಿದೆ.

ಶ್ರೀರಂಗನಾಥಸ್ವಾಮಿ ದೇವಸ್ಥಾನ:

ಇದು ದಕ್ಷಿಣ ಭಾರತದ ಅತ್ಯಂತ ವೈಭವ ಭರಿತ ವೈಷ್ಣವ ದೇವಾಲಯಗಳಲ್ಲಿ ಒಂದಾಗಿದೆ. ಸಂಗಮ್ ಸಾಹಿತ್ಯ ಯುಗದ ಮುಂಚೆಯೇ ಇದರ ಬಗ್ಗೆ ತಮಿಳು ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿದೆ. ಈ ದೇವಾಲಯವು ಭಾರತದ ಪ್ರಾಚೀನ ಇತಿಹಾಸದ ನಿಧಿಯನ್ನು ಹೊಂದಿದೆ. ಇದನ್ನು ತಮಿಳು ಅಥವಾ ದ್ರಾವಿಡ ಶೈಲಿಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ದಂತಕತೆಗಳ ಪ್ರಕಾರ ಇದು 108 ಪ್ರಮುಖ ವಿಷ್ಣುವಿನ ದೇವಾಲಯಗಳಲ್ಲಿ ಒಂದಾಗಿದೆ.

            ತಿರುವರಂಗ ತಿರುಪತಿ, ಭೂಲೋಕ ವೈಕುಂಡಂ, ಪೆರಿಯಾಕೋಯಿಲ್, ಭೋಗಮಂಡಬಾಮ್ ಮುಂತಾದ ಹಲವಾರು ಹೆಸರುಗಳಿಂದ ದೇವಾಲಯವನ್ನು ಕರೆಯಲಾಗುವುದು. ಈ ದೇವಾಲಯವು ಕಾವೇರಿ ಮತ್ತು ಕೋಲರೂನ್ ಎಂಬ ಎರಡು ನದಿಗಳಿಂದ ರೂಪುಗೊಂಡ ದ್ವೀಪದಲ್ಲಿ ನೆಲೆಗೊಂಡಿದೆ. ಇದರ ಸಂಕೀರ್ಣವು 156 ಎಕರೆಯಷ್ಟು ವಿಸ್ತಾರವಾಗಿದ್ದು, 4,116 ಮೀಟರ್ನಷ್ಟಿದೆ. ಇದು ಭಾರತದಲ್ಲಿನ ಅತಿದೊಡ್ಡ ದೇವಾಲಯ ಮತ್ತು ವಿಶ್ವದಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಸಂಕೀರ್ಣವಾಗಿದೆ.

ಚೂರುಪಾರು:

  • ಈಜಿಪ್ಟ್ ನಲ್ಲಿ 2017 ವಿಶ್ವ ಯುವ ವೇದಿಕೆ: ಈಜಿಪ್ಟ್ನ ಶಾರಮ್ ಎಲ್ ಶೈಕ್ನಲ್ಲಿ 2017 ವಿಶ್ವ ಯುವ ವೇದಿಕೆ ನಡೆಯಿತು. 5 ದಿನದ ವೇದಿಕೆಯನ್ನು ಈಜಿಪ್ಟ್ ಅಧ್ಯಕ್ಷ ಶ್ರೀ ಅಬ್ದೆಲ್ ಫಟ್ಟಾ ಎಲ್-ಸಿಸಿ ಅವರು ಉದ್ಘಾಟಿಸಿದರು. ಭಾರತದಿಂದ, ಯುವ ವ್ಯವಹಾರ ಮತ್ತು ಕ್ರೀಡೆಗಳ ರಾಜ್ಯ ಸಚಿವ ರಾಜ್ಯವರ್ಧನ್ ರಾಥೋರ್ ಅವರು ವೇದಿಕೆಯಲ್ಲಿ ಪಾಲ್ಗೊಂಡಿದ್ದರು.
  • BRO ದಿಂದ ವಿಶ್ವದ ಅತಿ ಎತ್ತರದ ಮೋಟಾರ್ ರಸ್ತೆ: ಗಡಿ ರಸ್ತೆಗಳ ಸಂಸ್ಥೆ(ಬಿಆರ್ಒ) ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರದೇಶದಲ್ಲಿ ವಿಶ್ವದ ಅತಿ ಹೆಚ್ಚು ಎತ್ತರದ ಮೋಟಾರು ವಾಹನ ರಸ್ತೆಯನ್ನು ನಿರ್ಮಿಸಿದೆ. ಉಮಿಂಗ್ಲಾ ಟಾಪ್ ಮೂಲಕ ಸಾಗುವ 86 ಕಿಮೀ ಉದ್ದದ ರಸ್ತೆಯನ್ನು 19,300 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ.

One Thought to “ಪ್ರಚಲಿತ ವಿದ್ಯಮಾನಗಳು-ನವೆಂಬರ್,6,2017”

Leave a Comment

This site uses Akismet to reduce spam. Learn how your comment data is processed.