ಬ್ರಹ್ಮಾಂಡದ ಪುರಾತನ ಸುರುಳಿಯಾಕಾರದ ನಕ್ಷತ್ರಪುಂಜ ಪತ್ತೆ

ವಿಜ್ಞಾನಿಗಳು A1689B11 ಎಂದು ಕರೆಯಲ್ಪಡುವ ಅತ್ಯಂತ ಪುರಾತನ ಸುರುಳಿಯಾಕಾರದ ನಕ್ಷತ್ರಪುಂಜವನ್ನು ಕಂಡುಹಿಡಿದಿದ್ದಾರೆ. ವಿಶ್ವದಲ್ಲಿ ಇದುವರೆಗೆ ದಾಖಲಾಗಿರುವ ಅತ್ಯಂತ ಪುರಾತನ ನಕ್ಷತ್ರಪುಂಜ ಇದಾಗಿದೆ. ಹವಾಯಿಯ ಜೆಮಿನಿ ನಾರ್ತ್ ಟೆಲಿಸ್ಕೋಪ್ ಮೂಲಕ ಇನ್ಫ್ರಾರೆಡ್ ಇಂಟೆಗ್ರಲ್ ಫೀಲ್ಡ್ ಸ್ಪೆಕ್ಟ್ರೋಗ್ರಾಫ್ (ಎನ್ಐಎಫ್ಎಸ್) ನೊಂದಿಗೆ ಗುರುತ್ವಾಕರ್ಷಣೆಯ ಲೆನ್ಸಿಂಗ್ ಅನ್ನು ಸಂಯೋಜಿಸುವ ಶಕ್ತಿಯುತ ತಂತ್ರವನ್ನು ಬಳಸಿ ಇದನ್ನು ಪತ್ತೆ ಮಾಡಲಾಗಿದೆ.

  • A1689B11 ನಕ್ಷತ್ರಪುಂಜವು 11 ಶತಕೋಟಿ ವರ್ಷಗಳ ಹಿಂದೆ ಜನಿಸಿದ್ದು, ಬಿಗ್ ಬ್ಯಾಂಗ್ ಆದ ನಂತರ ಕೇವಲ 2.6 ಶತಕೋಟಿ ವರ್ಷಗಳ ನಂತರ ಅಸ್ತಿತ್ವದಲ್ಲಿತ್ತು.
  • A1689B11 ಬಹಳ ತಂಪಾದ ಮತ್ತು ತೆಳುವಾದ ಡಿಸ್ಕ್ ಹೊಂದಿದೆ, ಅದೇ ಯುಗದ ಇತರ ಗೆಲಕ್ಸಿಗಳಂತಲ್ಲದೆ ಆಶ್ಚರ್ಯಕರವಾಗಿ ಕಡಿಮೆ ಪ್ರಕ್ಷುಬ್ಧತೆಯೊಂದಿಗೆ ಶಾಂತವಾಗಿ ತಿರುಗುತ್ತದೆ.

ಜಾಗತಿಕ ಲಿಂಗ ಅಸಮಾನತೆ ಸೂಚ್ಯಂಕದಲ್ಲಿ ಭಾರತಕ್ಕೆ 108ನೇ ಸ್ಥಾನ

ವಿಶ್ವ ಆರ್ಥಿಕ ವೇದಿಕೆ (WEF) ಪ್ರಕಟಿಸಿರುವ ಜಾಗತಿಕ ಲಿಂಗ ಅಸಮಾನತೆ (ಗ್ಲೋಬಲ್‌ ಜೆಂಡರ್‌ ) ಸೂಚ್ಯಂಕದಲ್ಲಿ ಭಾರತ 144 ದೇಶಗಳ ಪಟ್ಟಿಯಲ್ಲಿ 108ನೇ ಸ್ಥಾನವನ್ನು ಪಡೆದುಕೊಂಡಿದೆ. ಸೂಚ್ಯಂಕದಲ್ಲಿ ಭಾರತ ಈ ವರ್ಷ 21 ಸ್ಥಾನಗಳ ಕುಸಿತ ಕಂಡಿದೆ. ಕಳೆದ ವರ್ಷ ಸೂಚ್ಯಂಕದಲ್ಲಿ 87ನೇ ಸ್ಥಾನವನ್ನು ಪಡೆದುಕೊಂಡಿತ್ತು. ವಿಶ್ವ ಆರ್ಥಿಕ ವೇದಿಕೆಯು ನಾಲ್ಕು ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ವಿಶ್ಲೇಷಿಸಿ ಈ ಸೂಚ್ಯಂಕ ಸಿದ್ಧಪಡಿಸಿದೆ. ನಾಲ್ಕು ಕ್ಷೇತ್ರಗಳೆಂದರೆ ಆರೋಗ್ಯ. ಶಿಕ್ಷಣ, ಉದ್ಯೋಗ ಕ್ಷೇತ್ರ ಮತ್ತು ರಾಜಕೀಯ ಪ್ರಾತಿನಿಧ್ಯ.

ಭಾರತದ ಕಳಪೆ ಸಾಧನೆಗೆ ಕಾರಣ:

ಭಾರತದ ಅರ್ಥವ್ಯವಸ್ಥೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಅವಕಾಶಗಳು ಕಡಿಮೆಯಾಗಿರುವುದು ಹಾಗೂ ಆರೋಗ್ಯ ವಿಚಾರದಲ್ಲಿ ಅಂದರೆ ಈಗಲೂ ಗಂಡು ಮಕ್ಕಳಿಗೆ ಆಸಕ್ತಿ ತೋರುವ ಕಾರಣ ಕುಸಿಯುತ್ತಿರುವ ಲಿಂಗಾನುಪಾತ ಸೂಚ್ಯಂಕದಲ್ಲಿ ಭಾರತ ಕಡಿಮೆ ಸ್ಥಾನಗೊಳಿಸಲು ಕಾರಣವಾಗಿದೆ.

  • ಭಾರತದ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ (47) ಮತ್ತು ಚೀನಾ (100) ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿವೆ.
  • ಸೂಚ್ಯಂಕ ಪಟ್ಟಿಯಲ್ಲಿ ಐಸ್‌ಲ್ಯಾಂಡ್‌ ಮೊದಲ ಸ್ಥಾನದಲ್ಲಿದೆ. ಸತತವಾಗಿ ಒಂಬತ್ತು ವರ್ಷಗಳಿಂದ ಐಸ್ ಲ್ಯಾಂಡ್ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಬರುತ್ತಿದೆ.
  • ಆರ್ಥಿಕ ಚಟುವಟಿಕೆ, ಉದ್ಯೋಗ, ಆರೋಗ್ಯ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ವಿಚಾರದಲ್ಲಿ ಭಾರತದ ಮುಂದೆ ಬಹುದೊಡ್ಡ ಸವಾಲು ಇದೆ ಎಂದು ಸೂಚ್ಯಂಕ ವರದಿ ಹೇಳಿದೆ. ಉದ್ಯೋಗ ಕ್ಷೇತ್ರದಲ್ಲಿ ಭಾರತ 139ನೇ ರ‍್ಯಾಂಕ್‌ ಗಳಿಸಿದ್ದರೆ, ಆರೋಗ್ಯ ಕ್ಷೇತ್ರದಲ್ಲಿ 141ನೇ ರ‍್ಯಾಂಕ್‌ ಪಡೆದುಕೊಂಡಿದೆ.
  • ಭಾರತದ ಅರ್ಥವ್ಯವಸ್ಥೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಭಾರಿ ಪ್ರಮಾಣದಲ್ಲಿ ಕಡಿಮೆ ಇರುವುದರಿಂದ ಮತ್ತು ಉದ್ಯೋಗದಲ್ಲಿರುವ ಮಹಿಳೆಯರಿಗೆ ಕಡಿಮೆ ವೇತನ ನೀಡುತ್ತಿರುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ಲಿಂಗ ಅಸಮಾನತೆ ಹೆಚ್ಚಾಗಿದೆ. ಕೆಲಸ ಮಾಡುತ್ತಿರುವ ಮಹಿಳೆಯರಲ್ಲಿ ಸರಾಸರಿ ಶೇ 68 ಮಂದಿಗೆ ವೇತನವೇ ನೀಡಲಾಗುತ್ತಿಲ್ಲ. ಪುರುಷರಲ್ಲಿ  ಶೇ 12ರಷ್ಟು ಮಂದಿಗೆ ಸಂಬಳ ಸಿಗುತ್ತಿಲ್ಲ’ ಎಂದು  ವಿವರಿಸಿದೆ.

ಟಾಪ್ ಹತ್ತು ರಾಷ್ಟ್ರಗಳು:

ಐಸ್‌ಲ್ಯಾಂಡ್‌, ನಾರ್ವೆ, ಫಿನ್‌ಲ್ಯಾಂಡ್, ರುವಾಂಡ, ಸ್ವೀಡನ್‌, ನಿಕರಾಗುವ, ಸ್ಲೊವೇನಿಯಾ, ಐರ್ಲೆಂಡ್‌,  ನ್ಯೂಜಿಲೆಂಡ್‌ ಮತ್ತು ಫಿಲಿಪ್ಪೀನ್ಸ್‌.

ನೊಬೆಲ್ ಪ್ರಶಸ್ತಿ ಸರಣಿ ಎರಡನೇ ಆವೃತ್ತಿ ಆತಿಥ್ಯ ವಹಿಸಲಿರುವ ಗೋವಾ

ಗೋವಾ ಸರ್ಕಾರವು ನೊಬೆಲ್ ಪ್ರಶಸ್ತಿ ಸರಣಿಯ ಎರಡನೇ ಆವೃತ್ತಿ ಆತಿಥ್ಯವಹಿಸಲು ಬಯೋಟೆಕ್ನಾಲಜಿ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ಸ್ವೀಡನಿನ ನೊಬೆಲ್ ಮೀಡಿಯಾದೊಂದಿಗೆ ತ್ರಿವಳಿ ಒಡಂಬಡಿಕೆ ಒಪ್ಪಂದಕ್ಕೆ (MoU) ಸಹಿ ಮಾಡಿದೆ. ಈ ಕಾರ್ಯಕ್ರಮವನ್ನು ಜಂಟಿಯಾಗಿ ಜೈವಿಕ ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಸ್ವೀಡನಿನ ನೊಬೆಲ್ ಮೀಡಿಯಾದ ಸಹಕಾರದೊಂದಿಗೆ ಗೋವಾ ಸರ್ಕಾರ ಆಯೋಜಿಸುತ್ತಿದೆ. ಫೆಬ್ರವರಿ 2018ರಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.

ಅಂಚೆಚೀಟಿ ಸಂಗ್ರಹಣೆ ಹವ್ಯಾಸ ಪ್ರೋತ್ಸಾಹಿಸಲು ದೀನ್ ದಯಾಳ್ ಸ್ಪರ್ಶ್ ಯೋಜನೆ

ಅಂಚೆ ಚೀಟಿ ಸಂಗ್ರಹ ಮಾಡುವ ಹವ್ಯಾಸವುಳ್ಳ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಸ್ಕಾಲರ್‌ಶಿಪ್ ನೀಡಲು ಮುಂದಾಗಿದೆ. ಅಂಚೆ ಚೀಟಿಗಳನ್ನು ಸಂಗ್ರಹಿಸುವುದು, ಅವುಗಳನ್ನು ಅಧ್ಯಯನ, ಸಂಶೋಧನೆ ಮಾಡುವ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡುವ ಸಲುವಾಗಿ ‘ದೀನ್ ದಯಾಳ್ ಸ್ಪರ್ಶ್ ಯೋಜನೆ’ಯನ್ನು ಕೇಂದ್ರ ದೂರಸಂಪರ್ಕ ಸಚಿವಾಲಯ ಪ್ರಾರಂಭಿಸಿದೆ. ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹ ಹವ್ಯಾಸಕ್ಕೆ ಉತ್ತೇಜನ ನೀಡುವ ಸಲುವಾಗಿ ಈ ಯೋಜನೆ ತರಲಾಗಿದೆ. ಸ್ಪರ್ಶ್ (SPARSH) ಎಂದರೆ Scholarship for Promotion of Aptitude & Research in Stamps as a Hobby ಎಂದರ್ಥ.

ಪ್ರಮುಖಾಂಶಗಳು:

  • ಈ ಯೋಜನೆಯಡಿ, ಉತ್ತಮ ಶೈಕ್ಷಣಿಕ ದಾಖಲೆಯನ್ನು ಹೊಂದಿರುವ ಹಾಗೂ ಅಂಚೆ ಚೀಟಿ ಸಂಗ್ರಹಣೆ ಹವ್ಯಾಸ ಹೊಂದಿರುವ ಆರನೇ ತರಗತಿಯಿಂದ ಒಂಬತ್ತನೆ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿವೇತನವನ್ನು ನೀಡಲಾಗುವುದು. ಅಂಚೆಚೀಟಿಗಳನ್ನು ಸಂಗ್ರಹಿಸುವ ಹವ್ಯಾಸವನ್ನು ರೂಢಿಸಿಕೊಂಡಿರುವ ವಿದ್ಯಾರ್ಥಿಗಳಿಗೆ 920 ವಿದ್ಯಾರ್ಥಿವೇತನಗಳನ್ನು ಸರ್ಕಾರವು ನೀಡಲಿದೆ.
  • ಪ್ರತಿ ಪೋಸ್ಟಲ್ ಸರ್ಕಲ್ ಗೆ ಗರಿಷ್ಠ 40 ಸ್ಕಾಲರ್ ಶಿಪ್ ಗಳನ್ನು ನೀಡಲಾಗುವುದು. ಆರರಿಂದ ಒಂಬತ್ತನೆ ತರಗತಿಯಿಂದ ಪ್ರತಿ ತರಗತಿಯಿಂದ 10 ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗುವುದು.
  • ಸ್ಕಾಲರ್ ಶಿಪ್ ಮೊತ್ತವು ಪ್ರತಿ ವರ್ಷಕ್ಕೆ ರೂ 6000/ ಅಂದರೆ ತಿಂಗಳಿಗೆ ರೂ 500.

3 Thoughts to “ಪ್ರಚಲಿತ ವಿದ್ಯಮಾನಗಳು-ನವೆಂಬರ್,5,2017”

  1. Siddanagouda

    It is very useful for us

Leave a Comment

This site uses Akismet to reduce spam. Learn how your comment data is processed.