ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯದಿಂದ “ನಾರಿ” ಪೋರ್ಟಲ್ ಗೆ ಚಾಲನೆ
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ “ನಾರಿ (NARI)” ಪೋರ್ಟಲ್ ಅನ್ನು ಹೊರತಂದಿದೆ. ಮಹಿಳೆಯರಿಗಾಗಿ ಜಾರಿಗೆ ತಂದಿರುವ ಕಾರ್ಯಕ್ರಮಗಳ ಮಾಹಿತಿಗಳು ಸುಲಭವಾಗಿ ಲಭ್ಯವಾಗುವ ಸಲುವಾಗಿ ನಾರಿ ವೆಬ್ ಪೋರ್ಟಲ್ ಅನ್ನು ಅಭಿವೃದ್ದಿಪಡಿಸಲಾಗಿದೆ.
ಈ ಪೋರ್ಟಲ್‌ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಚಾಲನೆ ನೀಡಿದರು.
ಉದ್ದೇಶ:
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತಿರುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪೋರ್ಟಲ್ ಒಳಗೊಂಡಿದೆ. ವೆಬ್ ಪೋರ್ಟಲ್ ನಲ್ಲಿ ಯೋಜನೆಗಳನ್ನು ಒದಗಿಸುವ ಸಚಿವಾಲಯಗಳು, ಇಲಾಖೆಗಳು ಮತ್ತು ಸ್ವಾಯತ್ತ ಸಂಸ್ಥೆಗಳ ಲಿಂಕ್ಗಳು ಲಭ್ಯವಿರಲಿವೆ. ಅಲ್ಲದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮತ್ತು ದೂರುಗಳ ಪರಿಹಾರಕ್ಕೆ ಅವಕಾಶ ಕಲ್ಪಿಸಲಿದೆ.
ಇ-ಸಂವಾದ:
ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದೊಂದಿಗೆ NGO ಗಳು ಮತ್ತು ನಾಗರಿಕ ಸಂಘ ಸಂಸ್ಥೆಗಳು ಸಂವಹನ ನಡೆಸಲು ಆರಂಭಿಸಲಾಗಿರುವ ಆನ್ಲೈನ್ ವೇದಿಕೆಯಾಗಿದೆ. ಇ-ಸಂವಾದ ಪೋರ್ಟಲ್ ಮೂಲಕ ಎನ್ಜಿಒಗಳು ಮತ್ತು ಸಿವಿಲ್ ಸೊಸೈಟಿ ತಮ್ಮ ಪ್ರತಿಕ್ರಿಯೆ, ಸಲಹೆಗಳನ್ನು, ಕುಂದುಕೊರತೆಗಳನ್ನು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಬಹುದಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದೊಳಗಿನ ಹಿರಿಯ ಅಧಿಕಾರಿಗಳು ತಮ್ಮ ಸಂಬಂಧಪಟ್ಟ ವಿಷಯ ವ್ಯಾಪ್ತಿಯೊಳಗೆ ಸ್ವೀಕರಿಸಿದ ಪ್ರತಿಕ್ರಿಯೆ/ಸಲಹೆಗಳನ್ನು ವೀಕ್ಷಿಸಬಹುದಾಗಿದೆ. ಇದು ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಪರಿಣಾಮಕಾರಿಯಾದ ನೀತಿಗಳನ್ನು ಮತ್ತು ಕ್ರಮಗಳನ್ನು ರೂಪಿಸುವಲ್ಲಿ ಸಹಾಯ ಮಾಡುತ್ತದೆ.
ಭಾರತದ ಮೊದಲ ಡಿಜಿಟಲ್ ಅಂಕೊಲಾಜಿ ಟ್ಯುಟೋರಿಯಲ್ ಸರಣಿಗೆ ಚಾಲನೆ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾರತದ ಮೊದಲ ಡಿಜಿಟಲ್ ಅಂಕೊಲಾಜಿ (ಗಂಥಿಶಾಸ್ತ್ರ) ಟ್ಯುಟೋರಿಯಲ್ ಸರಣಿಗೆ ಚಾಲನೆ ಇತ್ತೀಚೆಗೆ ಚಾಲನೆ ನೀಡಿದೆ. ಡಿಜಿಟಲ್ ಅಂಕೊಲಾಜಿ (ಗಂಥಿಶಾಸ್ತ್ರ) ಟ್ಯುಟೋರಿಯಲ್ ಸರಣಿಯನ್ನು ಟಾಟಾ ಮೆಮೊರಿಯಲ್ ಸೆಂಟರ್ ಅಭಿವೃದ್ದಿಪಡಿಸಿದೆ. ಡಿಜಿಟಲ್ ಇಂಡಿಯಾದ ಭಾಗವಾಗಿ ಟಾಟಾ ಮೆಮೊರಿಯಲ್ ಸೆಂಟರ್ ರಾಜ್ಯಗಳ ಸಹಯೋಗದೊಂದಿಗೆ ದೇಶದಾದ್ಯಂತ ಆನಾವರಣಗೊಳಿಸಿದೆ.
ಅಂಕೊಲಾಜಿ: ಆಂಕೊಲಾಜಿ ವಿಜ್ಞಾನದ ಒಂದು ಶಾಖೆಯಾಗಿದ್ದು, ಗಡ್ಡೆಗಳು ಮತ್ತು ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಅಧ್ಯಯನ ನಡೆಸುವುದಾಗಿದೆ. “ಅಂಕೊ” ಎಂಬ ಪದವು ಬೃಹತ್ / ದ್ರವ್ಯರಾಶಿಯ / ಗಡ್ಡೆ ಎಂದರ್ಥ “ಲಾಜಿ” ಅಂದರೆ ಅಧ್ಯಯನ.
ಪ್ರಮುಖಾಂಶಗಳು:
- ಅಂಕೊಲಾಜಿ ಟ್ಯುಟೋರಿಯಲ್ ಸರಣಿಯು ಕ್ಯಾನ್ಸರ್ ಕುರಿತು ಆರಂಭಿಕ ಹಂತದಲ್ಲಿ ಪತ್ತೆಹಚ್ಚುವಿಕೆ, ತಡೆಗಟ್ಟುವಿಕೆ, ಪುನರ್ವಸತಿ ಮತ್ತು ವಿವಿಧ ಕ್ಯಾನ್ಸರ್ ಗಳ ಚಿಕಿತ್ಸೆಯ ಬಗ್ಗೆ ದೇಶದಾದ್ಯಂತ ವೈದ್ಯರಿಗೆ ತರಬೇತಿ ನೀಡುವ ಗುರಿ ಹೊಂದಿದೆ.
- ಒಟ್ಟಾರೆ ಕೋರ್ಸ್ ಅನ್ನು ವಿವಿಧ ಕ್ಯಾನ್ಸರ್ ಗಳ ಆಧಾರದ ಮೇಲೆ ವಿವಿಧ ಮಾಡ್ಯೂಲ್ಗಳೊಂದಿಗೆ 7 ವಾರಗಳವರೆಗೆ ವಿನ್ಯಾಸಗೊಳಿಸಲಾಗಿದೆ.
- ಸುಮಾರ 14 ಗಂಟೆಗಳ ಸಮಗ್ರ ಇ-ಕಲಿಕೆ ಇದಾಗಿದ್ದು, 40 ಕ್ಕೂ ಹೆಚ್ಚು ವಿಡಿಯೋ ಉಪನ್ಯಾಸಗಳು, ವಿಶ್ಲೇಷಣೆಗಳು, ಮೌಲ್ಯಮಾಪನ ಪ್ರಶ್ನಾವಳಿಗಳು ಮತ್ತು ಆವರ್ತಕ ಸಂವಹನಗಳನ್ನು ಒಳಗೊಂಡಿದೆ.
ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಉತ್ತರಖಂಡದಲ್ಲಿ ಐದು ನಮಾಮಿ ಗಂಗೆ ಯೋಜನೆಗೆ ಒಪ್ಪಿಗೆ
ಪಶ್ಚಿಮ ಬಂಗಾಳ, ಉತ್ತರಪ್ರದೇಶ ಮತ್ತು ಉತ್ತರಖಂಡ ರಾಜ್ಯಗಳಲ್ಲಿ ಸುಮಾರು 295.01 ಕೋಟಿ ರೂಪಾಯಿ ಮೌಲ್ಯದ ಐದು ನಮಾಮಿ ಗಂಗೆ ಯೋಜನೆಗಳಿಗೆ “ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ (ಎನ್ಎಂಸಿಜಿ)” ಅನುಮೋದನೆ ನೀಡಿದೆ. ಈ ಐದು ಯೋಜನೆಗಳಲ್ಲಿ, ಪಶ್ಚಿಮ ಬಂಗಾಳದಲ್ಲಿ ಕೊಳಚೆನೀರು ನಿರ್ವಹಣೆಗೆ ಸಂಬಂಧಿಸಿದಂತೆ ಮೂರು, ಉತ್ತರಖಂಡದಲ್ಲಿ ಚರಂಡಿ ನಿರ್ವಹಣೆಗೆ ಸಂಬಂಧಿಸಿದೆ ಒಂದು ಮತ್ತು ಉಳಿದ ಒಂದು ಯೋಜನೆ ಉತ್ತರ ಪ್ರದೇಶದಲ್ಲಿ ಘಾಟ್ ನಿರ್ವಹಣೆಗೆ ಸಂಬಂಧಿಸಿದೆ.
ಯೋಜನೆಗಳ ಬಗ್ಗೆ:
- ಉತ್ತರಖಂಡ: ಹರಿದ್ವಾರದಲ್ಲಿ ಕೆಲವು ತೆರೆದ ಪ್ರದೇಶಗಳಲ್ಲಿ ಒಳಚರಂಡಿ ಮಾರ್ಗಗಳನ್ನು ಹಾಕುವ ಯೋಜನೆ.
- ವಾರಣಾಸಿ: ಅನುಮೋದಿತ ಯೋಜನೆಯು ಹಲವಾರು ಘಾಟ್ಗಳ ದುರಸ್ತಿ ಮತ್ತು ಪುನಃ ರಚಿಸುವಿಕೆಯನ್ನು ಒಳಗೊಂಡಿದೆ.
- ಪಶ್ಚಿಮ ಬಂಗಾಳ: ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕಮರಹತಿ ಮತ್ತು ಬರಾನಗರ್ ಪುರಸಭೆಗಳಲ್ಲಿ ಒಳಚರಂಡಿ ನಿರ್ವಹಣೆ ಯೋಜನೆ ಸೇರಿದಂತೆ ಬರ್ಹಂಪುರ್ ಮುನಿಸಿಪಾಲಿಟಿ ಗಂಗಾ ನದಿ ಮಾಲಿನ್ಯ ತಡೆಯುವ ಯೋಜನೆಯನ್ನು ಅನುಮೋದಿಸಲಾಗಿದೆ.
ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ:
ಎನ್ಎಂಸಿಜಿ ಗಂಗಾ ನದಿಯ ಪುನರುಜ್ಜೀವನ, ರಕ್ಷಣೆ ಮತ್ತು ನಿರ್ವಹಣೆ ರಾಷ್ಟ್ರೀಯ ಮಂಡಳಿಯ ಅನುಷ್ಠಾನ ವಿಭಾಗವಾಗಿದೆ (ನ್ಯಾಷನಲ್ ಗಂಗಾ ಕೌನ್ಸಿಲ್ ಎಂದೂ ಸಹ ಕರೆಯಲಾಗುತ್ತದೆ). ಸೊಸೈಟಿ ನೋಂದಣಿ ಕಾಯಿದೆ-1860ರಡಿ 2011 ರಲ್ಲಿ ಸ್ಥಾಪಿಸಲಾಗಿದೆ.
ಆಡಳಿತ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯನ್ನೂ ಒಳಗೊಂಡಿರುವ ಎರಡು ಹಂತದ ನಿರ್ವಹಣೆಯ ರಚನೆಯನ್ನು ಹೊಂದಿದೆ. ಎನ್ಎಂಸಿಜಿಯ ಡೈರೆಕ್ಟರ್ ಜನರಲ್ ರವರು ಎರಡು ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ಮಿಷನ್ ನಡಿ 1000 ಕೋಟಿ ಮೌಲ್ಯದ ಯೋಜನೆಗಳನ್ನು ಅನುಮೋದಿಸುವ ಅಧಿಕಾರವನ್ನು ಕಾರ್ಯಕಾರಿ ಸಮಿತಿಯು ಹೊಂದಿದೆ.
ಜಲ ಮಾರ್ಗ ವಿಕಾಸ ಯೋಜನೆ- ಅನುಷ್ಠಾನಕ್ಕೆ ಸಚಿವ ಸಂಪುಟ ಒಪ್ಪಿಗೆ
ಗಂಗಾ ನದಿಯ ಮೇಲೆ ಹಲ್ದಿಯಾ-ವಾರಣಾಸಿ ನಡುವಿನ 1380 ಕಿ.ಮೀ ಉದ್ದದ ರಾಷ್ಟ್ರೀಯ ಜಲಮಾರ್ಗ-1(NW1)ರ ಸಂಚಾರ ಸಾಮರ್ಥ್ಯ ಹೆಚ್ಚಿಸಲು ಜಲ ಮಾರ್ಗ ವಿಕಾಸ ಯೋಜನೆ(ಜೆಎಂವಿಪಿ) ಅನುಷ್ಠಾನಕ್ಕೆ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಅನುಮೋದನೆ ನೀಡಿದೆ
ರೂ 5,370 ಕೋಟಿ ಯೋಜನೆ ಇದಾಗಿದ್ದು, ವಿಶ್ವ ಬ್ಯಾಂಕಿನ ತಾಂತ್ರಿಕ ನೆರವು ಮತ್ತು ಹೂಡಿಕೆ ಬೆಂಬಲದೊಂದಿಗೆ ಅನುಷ್ಠಾನಗೊಳಿಸಲಾಗುವುದು. ಮಾರ್ಚ್ 2023ರ ವೇಳೆಗೆ ಯೋಜನೆ ಮುಕ್ತಾಯಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ಜಲ ಮಾರ್ಗ ವಿಕಾಸ ಯೋಜನೆ:
ಗಂಗಾ ನದಿಯ ಮೇಲೆ ಕನಿಷ್ಠ 1500 ಟನ್ ಹಡಗುಗಳ ವಾಣಿಜ್ಯ ಸಂಚರಣೆ ಸಕ್ರಿಯಗೊಳಿಸಲು 2014-15ರ ಬಜೆಟ್ನಲ್ಲಿ ಜಲ ಮಾರ್ಗ ವಿಕಾಸ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿತು. ಯೋಜನೆಯಡಿ ಗಂಗಾ ನದಿಯ ಮೇಲೆ ಅಲಹಾಬಾದ್ ಮತ್ತು ಹಲ್ದಿಯಾ ನಡುವೆ 1620 ಕಿ.ಮೀ ಜಲಮಾರ್ಗವನ್ನು ಅಭಿವೃದ್ದಿಪಡಿಸಲಾಗುವುದು.
ಈ ಯೋಜನೆಯು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳವನ್ನು ಒಳಗೊಂಡಿದೆ. ವಾರಾಣಸಿ, ಬಲಿಯಾ, ಘಜಿಪುರ್, ಚಪ್ರಾ, ಬಕ್ಸಾರ್, ಪಾಟ್ನಾ, ವೈಶಾಲಿ, ಖಗೇರಿಯಾ, ಬೇಗುಸಾರೈ, ಮುಂಗರ್, ಭಾಗಲ್ಪುರ್, ಸಾಹಿಬ್ ಗಂಜ್ ಯೋಜನೆಯಡಿ ಬರುವ ಪ್ರಮುಖ ಜಿಲ್ಲೆಗಳು.
ಗಂಗಾ ನದಿಯಲ್ಲಿ 1500 ಟನ್ ಹಡಗುಗಳ ವಾಣಿಜ್ಯ ಸಂಚರಣೆ ಸಕ್ರಿಯಗೊಳಿಸಲು ಮೂರು ಮೀಟರ್ಗಳಷ್ಟು ಆಳವನ್ನು ಹೊಂದಿರುವ ಫೇರ್ ವೇ ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶ.
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನಿವೃತ್ತ ನ್ಯಾ. ಡಿ.ಎಚ್.ವಘೇಲಾ ನೇಮಕ
ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಅವರನ್ನು ರಾಜ್ಯ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಘೇಲಾ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ರಾಜ್ಯ ಮಾನವ ಹಕ್ಕು ಆಯೋಗ:
ಮಾನವ ಹಕ್ಕುಗಳ ರಕ್ಷಣೆ ಕಾಯಿದೆ, 1993, ಸೆಕ್ಷನ್ 21ರಡಿ ಮಾನವ ಹಕ್ಕುಗಳ (ತಿದ್ದುಪಡಿ) ಕಾಯಿದೆ, 2006 ರ ಪರಿಷ್ಕೃತ ತಿದ್ದುಪಡಿಯಂತೆ, ರಾಜ್ಯ ಸರ್ಕಾರವು ಈ ಕೆಳಕಂಡವರನ್ನು ಒಳಗೊಂಡ ಮಾನವ ಹಕ್ಕುಗಳ ಆಯೋಗವನ್ನು ರಚಿಸಬಹುದಾಗಿದೆ.
- ಒಬ್ಬ ಅಧ್ಯಕ್ಷರು- ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸರಬೇಕು.
- ರಾಜ್ಯದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಕನಿಷ್ಠ ಏಳು ವರ್ಷಗಳ ಅನುಭವವಿರುವ ಅಥವಾ ಹೈಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಒಬ್ಬ ಸದಸ್ಯ.
- ಮಾನವ ಹಕ್ಕುಗಳ ವಿಷಯದಲ್ಲಿ ಜ್ಞಾನ ಹೊಂದಿರುವ ಅಥವಾ ಪ್ರಾಯೋಗಿಕ ಅನುಭವ ಹೊಂದಿರುವ ವ್ಯಕ್ತಿಗಳ ಪೈಕಿ ನೇಮಕಗೊಳ್ಳಲು ಒಬ್ಬ ಸದಸ್ಯ.
- ಆಯೋಗವು ಒಬ್ಬ ಕಾರ್ಯದರ್ಶಿಯನ್ನು ಹೊಂದಿದ್ದು, ಇವರು ರಾಜ್ಯ ಆಯೋಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿರುತ್ತಾರೆ.
ಝೋಜಿಲಾ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಪಥದ ಝೋಜಿಲಾ ಪಾಸ್ ಸುರಂಗ ನಿರ್ಮಾಣಕ್ಕೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಆಯಕಟ್ಟಿನ ಸುರಂಗವು ಲೆಹ್ ಪ್ರದೇಶಕ್ಕೆ ಸರ್ವಋತು ಸಂಪರ್ಕವನ್ನು ಒದಗಿಸಲಿದೆ. ಪೂರ್ಣಗೊಂಡ ನಂತರ ಇದು ಏಷ್ಯಾದ ಅತಿದೊಡ್ಡ ಎರಡು ಪಥದ ಸುರಂಗ ಮಾರ್ಗ ಎನಿಸಲಿದೆ.
- ಝೋಜಿಲಾ ಸುರಂಗವು ಶ್ರೀನಗರ-ಕಾರ್ಗಿಲ್-ಲೇಹ್ ರಾಷ್ಟ್ರೀಯ ಹೆದ್ದಾರಿ (NH-1A) ಯಲ್ಲಿ 11,578 ಅಡಿ ಎತ್ತರದಲ್ಲಿದೆ.
- ₹6,809 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಈ ಸುರಂಗವು ಶ್ರೀನಗರ, ಕಾರ್ಗಿಲ್ ಮತ್ತು ಲೆಹ್‌ಗೆ ಸಂಪರ್ಕ ಕಲ್ಪಿಸುತ್ತದೆ. ಏಳು ವರ್ಷಗಳಲ್ಲಿ ಈ ಸುರಂಗ ನಿರ್ಮಿಸಲು ಉದ್ದೇಶಿಸಲಾಗಿದೆ.
- 15 ಕಿಲೋ ಮೀಟರ್ ಉದ್ದದ ನಾಲ್ಕು ಪಥದ ಒಂದೇ ಸುರಂಗ ಮಾರ್ಗವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
- ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸಲಿದೆ.
- ಈ ಸುರಂಗ ಮಾರ್ಗವು ಎಲ್ಲ ಋತುಗಳಲ್ಲಿ ಶ್ರೀನಗರ, ಕಾರ್ಗಿಲ್ ಮತ್ತು ಲೆಹ್‌ಗೆ ಸಂಪರ್ಕ ಕಲ್ಪಿಸುವ ಜತೆಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಈ ಪ್ರದೇಶದಲ್ಲಿ ಬದಲಾವಣೆ ತರಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
ಭಾರತ-ಮಯನ್ಮಾರ್ ಭೂ ಗಡಿ ದಾಟುವ ಒಪ್ಪಂದಕ್ಕೆ ಸಚಿವ ಸಂಪುಟ ಒಪ್ಪಿಗೆ
ಭಾರತ-ಮಯನ್ಮಾರ್ ನಡುವಿನ ಭೂ ಗಡಿ ದಾಟುವ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಉಭಯ ದೇಶಗಳ ನಡುವೆ ಗಡಿ ಭಾಗದ ಮೂಲಕ ಸಾರ್ವಜನಿಕರು ಮುಕ್ತವಾಗಿ ಸಂಚರಿಸಲು ಅನುಕೂಲ ಮಾಡುವ ಒಪ್ಪಂದ ಇದಾಗಿದೆ. ಈ ಒಪ್ಪಂದವು ಭಾರತದ ಈಶಾನ್ಯ ರಾಜ್ಯಗಳ ಹಾಗೂ ಮಯನ್ಮಾರ್ ಜನರೊಂದಿಗೆ ಸಂಪರ್ಕ ಸಾಧಿಸಲು ಹಾಗೂ ಪರಸ್ಪರ ವರ್ಧಿಸಲು ಅನುವು ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
ಮಹತ್ವ:
- ಒಪ್ಪಂದವು ಮಾನ್ಯತೆ ಹೊಂದಿರುವ ಪಾಸ್ ಪೋರ್ಟ್ ಮತ್ತು ವೀಸಾಗಳ ಆಧಾರದ ಮೇಲೆ ಜನರ ಚಲನೆಯನ್ನು ಸುಲಭಗೊಳಿಸಲಿದೆ. ಇದರಿಂದ ಉಭಯ ದೇಶಗಳ ನಡುವೆ ಆರ್ಥಿಕ ಮತ್ತು ಸಾಮಾಜಿಕ ಪರಸ್ಪರ ವರ್ಧನೆಗಳನ್ನು ಹೆಚ್ಚಲಿದೆ.
- ಒಪ್ಪಂದವು ಉಭಯ ದೇಶಗಳ ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಮುಕ್ತ ಸಂಚಾರ ಹಕ್ಕುಗಳ ನಿಯಂತ್ರಣ ಮತ್ತು ಸುಸಂಗತತೆಯನ್ನು ಸುಲಭಗೊಳಿಸಲಿದೆ.
- ಈಶಾನ್ಯ ರಾಜ್ಯಗಳಲ್ಲಿ ಆರ್ಥಿಕತೆಯನ್ನು ಸುಧಾರಿಸಲು ಹಾಗೂ ಮಯನ್ಮಾರ್ ನೊಂದಿಗೆ ಭೌಗೋಳಿಕ ಸಂಪರ್ಕವನ್ನು ಸಾಧಿಸಿ ವ್ಯಾಪಾರ-ವಹಿವಾಟು ಹೆಚ್ಚಿಸಲು ಸಾಧ್ಯವಾಗಲಿದೆ.
ಹಿನ್ನಲೆ:
ಭಾರತವು ಮಯನ್ಮಾರ್ ನೊಂದಿಗೆ 1643 ಕಿ.ಮೀ ಉದ್ದದ ಗಡಿಯನ್ನು ಹೊಂದಿದೆ. ಭಾರತದ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ನಾಗಲ್ಯಾಂಡ್, ಮಣಿಪುರ ಮತ್ತು ಮಿಜೋರಾಂ ಮಯನ್ಮಾರ್ ನೊಂದಿಗೆ ಗಡಿ ಭಾಗವನ್ನು ಹಂಚಿಕೊಂಡಿವೆ. ಪ್ರಸ್ತುತ ಎರಡೂ ದೇಶಗಳು ಗಡಿಯ ಎರಡೂ ಕಡೆಗಳಲ್ಲಿ 16 ಕಿಮೀ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ವಿಶಿಷ್ಟವಾದ ವೀಸಾ-ಮುಕ್ತ ಸಂಚಾರ ವ್ಯವಸ್ಥೆಯನ್ನು ಹೊಂದಿವೆ.
TUKARAM LAMANI TEGGI LT TQ-BILAGI Dist-BAGALKOT pincode no 587117
ಸರ್ ಪ್ರಚಲಿತಘಟನೆ update ಮಾಡಿ
Comment