ಗೇಲ್ (GAIL) ನಿಂದ ದೇಶದ ಎರಡನೇ ಅತಿದೊಡ್ಡ ಮೇಲ್ಛಾವಣಿ ಸೌರ ವಿದ್ಯುತ್ ಘಟಕ
ಸರ್ಕಾರಿ ಸ್ವಾಮ್ಯದ ಗೇಲ್ ಇಂಡಿಯಾ ಲಿಮಿಟೆಡ್ ಭಾರತದ ಎರಡನೇ ಅತಿದೊಡ್ಡ ಮೇಲ್ಛಾವಣಿ ಸೌರ ವಿದ್ಯುತ್ ಸ್ಥಾವರವನ್ನು ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಆನಾವರಣಗೊಳಿಸಿದೆ. ಇದು 5.76 ಮೆಗಾ ವ್ಯಾಟ್ ಪೀಕ್ ಸಾಮರ್ಥ್ಯದ ಘಟಕವಾಗಿದ್ದು, ಉತ್ತರ ಪ್ರದೇಶದ ಪಾಟದಲ್ಲಿರುವ ಗೇಲ್ ನ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ನಲ್ಲಿ ಸ್ಥಾಪಿಸಲಾಗಿದೆ. ಸುಮಾರು 65000 ಚದರ ಮೀಟರಿನಷ್ಟು ವಿಸ್ತೀರ್ಣವನ್ನು ಹೊಂದಿರುವ ಮೇಲ್ಛಾವಣಿಯನ್ನು ಸ್ಥಾವರ ಹೊಂದಿದೆ. ಪ್ರತಿ ವರ್ಷ 79 ಲಕ್ಷ KWh ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ.
ದೇಶದ ಅತಿದೊಡ್ಡ ಮೇಲ್ಛಾವಣಿ ಸೌರ ಸ್ಥಾವರ:
ದೇಶದ ಅತಿದೊಡ್ಡ ಮೇಲ್ಛಾವಣಿ ಸೌರ ಸ್ಥಾವರನ್ನು ಟಾಟಾ ಪವರ್ ಸಂಸ್ಥೆ ಪಂಜಾಬಿನ ಅಮೃತ್ ಸರದಲ್ಲಿ ಡಿಸೆಂಬರ್ 2015ರಲ್ಲಿ ಸ್ಥಾಪಿಸಿದೆ. ಇದು 12ಮೆಗಾವ್ಯಾಟ್ ಸೌರ ಮೇಲ್ಛಾವಣಿಯ ಯೋಜನೆಯಾಗಿದ್ದು, ವಾರ್ಷಿಕವಾಗಿ 150 ಲಕ್ಷಕ್ಕಿಂತ ಹೆಚ್ಚಿನ ಯೂನಿಟ್ ವಿದ್ಯುತ್ ಉತ್ಪಾದಿಸುತ್ತದೆ. ಈ ಯೋಜನೆಯಿಂದ ಪ್ರತಿ ವರ್ಷ 19,000 ಟನ್ ಇಂಗಾಲ ಹೊರಸೂಸುವಿಕೆ ಕಡಿಮೆಯಾಗಿದೆ.
ಹಿನ್ನಲೆ:
2022ರ ವೇಳೆಗೆ ಭಾರತದಲ್ಲಿ 40 ಗಿಗಾ ವ್ಯಾಟ್ ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ.
ಗೇಲ್ GAIL:
ಗೇಲ್ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, ನೈಸರ್ಗಿಕ ಅನಿಲ ಸಂಸ್ಕರಣೆ ಮತ್ತು ಸರಬರಾಜು ಮಾಡುವ ದೇಶದ ಅತಿದೊಡ್ಡ ಕಂಪನಿ. ಗೇಲ್ ಪ್ರಧಾನ ಕಚೇರಿ ನವದೆಹಲಿಯಲ್ಲಿದೆ. ಫೆಬ್ರವರಿ 2013ರಲ್ಲಿ ಕೇಂದ್ರ ಸರ್ಕಾರ ಗೇಲ್ ಸಂಸ್ಥೆಗೆ ಮಹಾರತ್ನ ಸ್ಥಾನಮಾನವನ್ನು ನೀಡಿದೆ.
ವಿದರ್ಭ ಮುಡಿಗೆ ರಣಜಿ ಟ್ರೋಫಿಯ ಗರಿ
ವಿದರ್ಭ ಕ್ರಿಕೆಟ್ ತಂಡ 2017 ರಣಜಿ ಟ್ರೋಪಿಯನ್ನು ಗೆದ್ದುಕೊಂಡಿತು. ವಿದರ್ಭ ತಂಡಕ್ಕೆ ಇದು ಚೊಚ್ಚಲ ರಣಜಿ ಟ್ರೋಫಿ. ಮಧ್ಯಪ್ರದೇಶದ ಇಂಧೋರಿನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡ ದೆಹಲಿ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
- ಫೈಜ್ ಫಜಲ್ ನಾಯಕತ್ವದ ವಿದರ್ಭ ತಂಡ ದೆಹಲಿ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ 29 ರನ್‌ಗಳ ಗುರಿಯನ್ನು ಬೆನ್ನತ್ತಿದ ವಿದರ್ಭ ಒಂದು ವಿಕೆಟ್ ಕಳೆದು ಕೊಂಡು ಗೆಲುವಿನ ನಗೆ ಬೀರಿತು.
ರಣಜಿ ಟ್ರೋಫಿ:
ರಣಜಿ ಟ್ರೋಫಿಯು ಪ್ರಾದೇಶಿಕ ಕ್ರಿಕೆಟ್ ಸಂಘಟನೆಗಳನ್ನು ಪ್ರತಿನಿಧಿಸುವ ತಂಡಗಳ ನಡುವೆ ಭಾರತದಲ್ಲಿ ಆಡಲಾಗುವ ಪ್ರಥಮ ದರ್ಜೆಯ ಕ್ರಿಕೆಟ್ ಚಾಂಪಿಯನ್ಶಿಪ್ ಆಗಿದೆ. ಸ್ಪರ್ಧೆಗೆ ಇಂಗ್ಲೆಂಡ್ ಮತ್ತು ಸಸೆಕ್ಸ್ ಪರ ಕ್ರಿಕೆಟ್ ಆಡಿದ ಕುಮಾರ್ ಶ್ರೀ ರಂಜಿತ್‍ಸಿಂಗ್‍ಜಿ ಹೆಸರಿಡಲಾಗಿದೆ. ಇದನ್ನು 1934 ರಲ್ಲಿ ಮೊದಲ ಬಾರಿಗೆ ಆಡಲಾಯಿತು. ಪ್ರಸ್ತುತ, 21 ರಾಜ್ಯಗಳು (29 ರಾಜ್ಯಗಳ ಪೈಕಿ) ಮತ್ತು ದೆಹಲಿ (ಕೇಂದ್ರಾಡಳಿತ ಪ್ರದೇಶ) ಸೇರಿದಂತೆ 27 ತಂಡಗಳ ನಡುವೆ ಚಾಂಪಿಯನ್ಷಿಪ್ ನಲ್ಲಿ ಭಾಗವಹಿಸುತ್ತಿವೆ. ಮುಂಬೈ 41 ಬಾರಿ ಈ ಚಾಂಪಿಯನ್ಸಿಪ್ ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಅರುಣಾಚಲ ಪ್ರದೇಶ ಬಯಲು ಮಲ ವಿಸರ್ಜನೆ ಮುಕ್ತ ರಾಜ್ಯವಾಗಿ ಘೋಷಣೆ
ಅರುಣಾಚಲ ಪ್ರದೇಶವನ್ನು ಬಯಲು ಮಲ ವಿಸರ್ಜನೆ ಮುಕ್ತ ರಾಜ್ಯವೆಂದು ಘೋಷಿಸಲಾಗಿದೆ. ಈಶಾನ್ಯ ಭಾರತದಲ್ಲಿ ಸಿಕ್ಕಿಂನ ನಂತರ ಈ ಸಾಧನೆ ಮಾಡಿದ ಎರಡನೇ ರಾಜ್ಯವೆಂಬ ಖ್ಯಾತಿಗೆ ಅರುಣಾಚಲ ಪ್ರದೇಶ ಪಾತ್ರವಾಗಿದೆ. ಅರುಣಾಚಲ ಪ್ರದೇಶವು 21 ಜಿಲ್ಲೆಗಳನ್ನು ಹೊಂದಿದೆ.
ಹಿನ್ನಲೆ:
2019ರ ಅಕ್ಟೋಬರ್ 2ರ ಅಂತ್ಯದೊಳಗೆ ಭಾರತವನ್ನು ಬಯಲು ಮಲ ವಿಸರ್ಜನೆ ಮುಕ್ತವನ್ನಾಗಿಸಲು ಗುರಿಯನ್ನು ಹೊಂದಲಾಗಿದೆ. ಆದರೆ ಅವಧಿಗೆ ಮುನ್ನವೇ ಅರುಣಾಚಲ ಪ್ರದೇಶ ಈ ಸಾಧನೆಯನ್ನು ಮಾಡಿದೆ.
ಸ್ವಚ್ಚ ಭಾರತ ಮಿಷನ್:
2019ರ ಹೊತ್ತಿಗೆ ಬಯಲು ಮಲ ವಿಸರ್ಜನೆಯನ್ನು ತಡೆಯುವುದು ಸ್ವಚ್ಚ ಭಾರತ ಅಭಿಯಾನದ ಗುರಿಯಾಗಿದೆ. 2014ರಲ್ಲಿ ಸ್ವಚ್ಚ ಭಾರತ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮುನಿಸಿಪಲ್ ಘನ ತ್ಯಾಜ್ಯ ನಿರ್ವಹಣೆ ಹಾಗೂ ನೈಮರ್ಲ್ಯತೆ ಕಾಪಾಡುವುದು ಸಹ ಯೋಜನೆಯ ಪ್ರಮುಖ ಉದ್ದೇಶ.
Nyctibatrachus mewasingh: ಪಶ್ಚಿಮ ಘಟ್ಟದಲ್ಲಿ ಹೊಸ ರಾತ್ರಿ ಕಪ್ಪೆ ಪ್ರಭೇದ ಪತ್ತೆ
ವಿಜ್ಞಾನಿಗಳು ಕೋಜಿಕೋಡೆಯ ಮಲಬಾರ್ ವನ್ಯಜೀವಿ ಅಭಯಾರಣ್ಯದಲ್ಲಿ ಹೊಸ ಕಪ್ಪೆ ಪ್ರಭೇದವನ್ನು ಪತ್ತೆಹಚ್ಚಿದ್ದು ಇದಕ್ಕೆ Nyctibatrachus mewasingh ಎಂದು ಹೆಸರಿಡಲಾಗಿದೆ. ಪೆರುವನ್ನಮುಳಿ ಅಣೆಕಟ್ಟು ಉದ್ದಕ್ಕೂ ಹರಿಯುವ ಸಣ್ಣ ನೀರಿನ ಝರಿಯಲ್ಲಿ ಹೊಸ ಕಪ್ಪೆ ಪ್ರಭೇದವನ್ನು ಪತ್ತೆ ಹಚ್ಚಲಾಗಿದೆ. ಭಾರತದ ಉದ್ದಗಲಕ್ಕೂ ಕೈಗೊಳ್ಳಲಾಗುತ್ತಿರುವ ಉಭಯಜೀವಿಗಳ ಸಂಶೋಧನೆಗೆ ಇದು ಮಹತ್ವರ ಕೊಡುಗೆಯಾಗಿದೆ.
ಮೆವಸಿಂಗ್ ರಾತ್ರಿ ಕಪ್ಪೆ ಬಗ್ಗೆ:
ಇದು ಪಶ್ಚಿಮ ಘಟ್ಟ ಪರ್ವತ ಶ್ರೇಣಿಗೆ ಮಾತ್ರ ಸ್ಥೀಮಿತವಾಗಿರುವ ನಿಕ್ಟಿಬಾಟ್ರಾಕಸ್ (ಸಾಮಾನ್ಯವಾಗಿ ರಾತ್ರಿ ಕಪ್ಪೆಗಳು ಎಂದು ಕರೆಯಲ್ಪಡುತ್ತದೆ) ಗುಂಪಿಗೆ ಸೇರಿದೆ. ಈ ಗುಂಪಿನಲ್ಲಿ ಮೆವಸಿಂಗ್ ರಾತ್ರಿ ಕಪ್ಪೆ ಸೇರಿದಂತೆ ಒಟ್ಟು 36 ಕಪ್ಪೆಗಳಿವೆ. ಪರಿಸರ ವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿರುವ ವನ್ಯಜೀವಿ ವಿಜ್ಞಾನಿ ಮೆವಸಿಂಗ್ ರವರ ಗೌರವಾರ್ಥವಾಗಿ ಈ ಹೊಸ ಪ್ರಭೇದಕ್ಕೆ ಅವರ ಹೆಸರನ್ನು ಇಡಲಾಗಿದೆ.
ಸೌದಿ ಅರೇಬಿಯಾ ಮತ್ತು ಯುಎಇ ಯಲ್ಲಿ ವ್ಯಾಟ್ ಜಾರಿ
ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್ ಒಕ್ಕೂಟವು (ಯುಎಇ) ಮೌಲ್ಯವರ್ಧಿತ ತೆರಿಗೆಯನ್ನು(ವ್ಯಾಟ್) ಜಾರಿಗೆ ತಂದಿವೆ. ಆ ಮೂಲಕ ಗಲ್ಫ್ ಸಹಕಾರ ಮಂಡಳಿ (GCC)ಯಲ್ಲಿ ಮೌಲ್ಯವರ್ಧಿತ ತೆರಿಗೆಯನ್ನು ಪರಿಚಯಿಸಿದೆ ಮೊದಲ ರಾಷ್ಟ್ರಗಳು ಎನಿಸಿವೆ. ಆರು ಸದಸ್ಯ ರಾಷ್ಟ್ರಗಳನ್ನು ಹೊಂದಿರುವ GCC ಯಲ್ಲಿ ಬಹ್ರೇನ್, ಕುವೈತ್, ಒಮಾನ್ ಮತ್ತು ಕತಾರ್ ಕೂಡ ವ್ಯಾಟ್ ಅನ್ನು ಪರಿಚಯಿಸಲು ಮುಂದಾಗಿವೆ. ಆದರೆ ಸದ್ಯದ ಮಟ್ಟಿಗೆ 2019ರ ವೇಳೆಗೆ ವ್ಯಾಟ್ ಜಾರಿಗೆ ತರುವುದನ್ನು ಮುಂದೂಡಿವೆ.
- ಪೆಟ್ರೋಲ್ ಮತ್ತು ಡೀಸೆಲ್, ಆಹಾರ, ಬಟ್ಟೆ, ಯುಟಿಲಿಟಿ ಬಿಲ್ಗಳು ಮತ್ತು ಹೋಟೆಲ್ ಕೊಠಡಿಗಳು ಸೇರಿದಂತೆ ಬಹುತೇಕ ಸರಕು ಮತ್ತು ಸೇವೆಗಳ ಮೇಲೆ 5% ರಷ್ಟು ವ್ಯಾಟ್ ದರವನ್ನು ನಿಗದಿಪಡಿಸಲಾಗಿದೆ. ವೈದ್ಯಕೀಯ ಚಿಕಿತ್ಸೆ, ಹಣಕಾಸು ಸೇವೆಗಳು ಮತ್ತು ಸಾರ್ವಜನಿಕ ಸಾರಿಗೆ ಸೇರಿದಂತೆ ಇತರೆ ಸೇವೆಗಳ ಮೇಲೆ ಶೂನ್ಯ ವ್ಯಾಟ್ ದರ ಅಥವಾ ವಿನಾಯಿತಿ ನೀಡಲಾಗಿದೆ.
ಹಿನ್ನಲೆ:
ಸೌದಿ ಅರೇಬಿಯಾದಲ್ಲಿ, ಬಜೆಟ್ ಆದಾಯ ಶೇ.90% ಕ್ಕಿಂತ ಹೆಚ್ಚು ತೈಲ ಉದ್ಯಮದಿಂದ ಬಂದರೆ, ಯುಎಇಯಲ್ಲಿ ಇದು ಸುಮಾರು 80% ಆಗಿದೆ. ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಸೇರಿದಂತೆ ಇತರೆ ಸಂಸ್ಥೆಗಳು ಬಜೆಟ್ ಆದಾಯವನ್ನು ಕೇವಲ ತೈಲ ಉದ್ಯಮದ ಮೇಲೆ ಅವಲಂಭಿತವಾಗದೆ ಇತರೆ ಮೂಲಗಳ ಕಡೆ ಗಮನ ಹರಿಸುವಂತೆ ಕರೆ ನೀಡಿದ್ದವು.
ಪರಸ್ಪರ ಪರಮಾಣು ಸ್ಥಾವರ ಮಾಹಿತಿ ವಿನಿಮಯ ಮಾಡಿಕೊಂಡ ಭಾರತ-ಪಾಕಿಸ್ತಾನ
ಭಾರತ ಮತ್ತು ಪಾಕಿಸ್ತಾನ ರಾಜತಾಂತ್ರಿಕ ಅಧಿಕಾರಿಗಳ ಮೂಲಕ ಪರಮಾಣು ಘಟಕಗಳ ಮಾಹಿತಿಗಳನ್ನು ವಿನಿಮಯ ಮಾಡಿಕೊಂಡಿವೆ. ಪರಮಾಣು ಘಟಕಗಳ ಮೇಲಿನ ದಾಳಿ ನಿರ್ಬಂಧ ಒಪ್ಪಂದದ ಅಡಿಯಲ್ಲಿ (Agreement on the Prohibition of Attack against Nuclear installations) ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಾಗಿದೆ.
ಜನವರಿ 1, 1992 ರಂದು ಮೊದಲು ಮಾಹಿತಿಯನ್ನು ವಿನಿಮಯ ಮಾಡಿಕೊಂಡ ನಂತರ ಎರಡು ದೇಶಗಳ ನಡುವೆ ಸತತ 27 ನೇ ಬಾರಿಗೆ ಅನುಕ್ರಮವಾಗಿ ಮಾಹಿತಿಯನ್ನು ವಿನಿಮಯವನ್ನು ಮಾಡಿಕೊಳ್ಳಲಾಗಿದೆ.
ಪರಮಾಣು ಘಟಕಗಳ ಮೇಲಿನ ದಾಳಿ ನಿರ್ಬಂಧ ಒಪ್ಪಂದ:
ಇದು ಭಾರತ ಮತ್ತು ಪಾಕಿಸ್ತಾನದ ನಡುವೆ ಸಹಿ ಹಾಕಲಾದ ದ್ವಿಪಕ್ಷೀಯ ಒಪ್ಪಂದವಾಗಿದ್ದು, ಉಭಯ ದೇಶಗಳಲ್ಲಿ ಸ್ಥಾಪಿತವಾಗಿರುವ ಪರಮಾಣು ಘಟಕಗಳ ಮೇಲೆ ಯಾವುದೇ ಅಚ್ಚರಿಯ ದಾಳಿಯನ್ನು ಮಾಡದಂತೆ ತಡೆಯುವುದು ಒಪ್ಪಂದದ ಧ್ಯೇಯ. 1988 ಡಿಸೆಂಬರ್ 31ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಜನವರಿ 27, 1991ರಲ್ಲಿ ಜಾರಿಗೆ ಬಂದಿದೆ.
ಭಾರತದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಮತ್ತು ಪಾಕಿಸ್ತಾನದ ಅಂದಿನ ಪ್ರಧಾನಿ ಬೆನಜೀರ್ ಭುಟ್ಟೊ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದರು. ಒಪ್ಪಂದದಂತೆ ಪ್ರತಿ ವರ್ಷ ಜನವರಿ 1 ರಂದು ಪರಮಾಣು ಘಟಕಗಳ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದು.
ಭಾರತದ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ವಿಜಯ್ ಗೋಖಲೆ ನೇಮಕ
ಭಾರತೀಯ ವಿದೇಶಾಂಗ ಸೇವೆಗಳ (ಐಎಫ್‌ಎಸ್) ಹಿರಿಯ ಅಧಿಕಾರಿ ವಿಜಯ್ ಗೋಖಲೆ ಮುಂದಿನ ವಿದೇಶಾಂಗ ಕಾರ್ಯದರ್ಶಿಯಾಗಿ ನಿಯೋಜಿತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿ ಸಚಿವ ಸಂಪುಟ ವಿಜಯ್ ಗೋಖಲೆ ಅವರನ್ನು ಈ ಹುದ್ದೆಗೆ ನೇಮಕ ಮಾಡಿದೆ. ಮುಂದಿನ ಎರಡು ವರ್ಷಗಳ ಕಾಲ ಗೋಖಲೆ ಅವರು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರ ಅಧಿಕಾ ಅವಧಿ ಜನವರಿ 28ಕ್ಕೆ ಕೊನೆಗೊಳ್ಳಲಿದೆ. ವಿಜಯ್ ಗೋಖಲೆ:
- ಗೋಖಲೆ ಅವರು 1981 ಬ್ಯಾಚಿನ ಭಾರತ ವಿದೇಶಾಂಗ ಸೇವೆಗಳ ಅಧಿಕಾರಿ. ಚೀನಾ ವಿಷಯದಲ್ಲಿ ಹೆಚ್ಚು ನೈಪುಣ್ಯತೆ ಹೊಂದಿರುವ ಗೋಖಲೆ ರವರು ಮ್ಯಾಂಡರಿನ್ ಭಾಷೆಯ ಬಳಕೆಯಲ್ಲಿ ಪರಿಣಿತಿ ಹೊಂದಿದ್ದಾರೆ.
- ಪ್ರಸ್ತುತ ಗೋಖಲೆ ಅವರು ವಿದೇಶಾಂಗ ಸಚಿವಾಲಯದಲ್ಲಿ ಕಾರ್ಯದರ್ಶಿ (ಆರ್ಥಿಕ ಸಂಬಂಧ)ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದಕ್ಕೂ ಮುಂಚೆ ಜನವರಿ 2016 ರಿಂದ 2017 ಅಕ್ಟೋಬರ್ ವರೆಗೆ ಚೀನಾಕ್ಕೆ ಭಾರತದ ರಾಯಭಾರಿಯಾಗಿದ್ದರು.
- ಕಳೆದ ವರ್ಷ ಭಾರತ ಮತ್ತು ಚೀನಾ ನಡುವೆ ತಲೆದೂರಿದ್ದ ಡೊಕ್ಲಮ್ ಗಡಿ ವಿವಾದವನ್ನು ತಿಳಿಗೊಳಿಸುವಲ್ಲಿ ಗೋಖಲೆ ರವರು ಪ್ರಮುಖ ಪಾತ್ರವಹಿಸಿದ್ದರು.
ರಾಷ್ಟ್ರೀಯ ಪೌರತ್ವ ನೋಂದಣಿಯ ಮೊದಲ ಕರಡು ಬಿಡುಗಡೆ
ಬಹುನಿರೀಕ್ಷಿತ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್‌ಆರ್‌ಸಿ) ಮೊದಲ ಕರಡು ಬಿಡುಗಡೆಗೊಂಡಿದೆ. ರಾಷ್ಟ್ರೀಯ ಪೌರತ್ವ ನೋಂದಣಿಗೆ ಅರ್ಜಿ ಸಲ್ಲಿಸಿದ್ದ 3.29 ಕೋಟಿ ಜನರಲ್ಲಿ 1.9 ಕೋಟಿ ಜನರು ಅಧಿಕೃತವಾಗಿ ಭಾರತೀಯ ಪೌರತ್ವ ಹೊಂದಿದ್ದಾರೆ ಎಂದು ಕರಡಿನಲ್ಲಿ ಗುರುತಿಸಲಾಗಿದೆ. ಬಾಂಗ್ಲಾದೇಶದ ಗಡಿಯಿಂದ ಅಕ್ರಮವಾಗಿ ಅಸ್ಸಾಂ ಪ್ರವೇಶಿಸಿದವರನ್ನು ಪತ್ತೆ ಹಚ್ಚುವ ಸಲುವಾಗಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ರೂಪಿಸಿಲಾಗಿದೆ.
ಹಿನ್ನಲೆ:
ಬಾಂಗ್ಲಾದೇಶದಿಂದ ಅಸ್ಸಾಂಗೆ ಅಕ್ರಮವಾಗಿ ವಲಸೆ ಬರುವುದನ್ನು ತಡೆಯುವ ಸಲುವಾಗಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ತಯಾರಿಸಲಾಗಿದೆ. 1951 ರಲ್ಲಿ ಮೊದಲ ಬಾರಿಗೆ ತಯಾರಿಸಲ್ಪಟ್ಟ ಎನ್ಆರ್ಸಿ ಹೊಂದಿರುವ ಏಕೈಕ ರಾಜ್ಯ ಅಸ್ಸಾಂ. ಸಂಪೂರ್ಣ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಿರುವ ಸುಪ್ರೀಂ ಕೋರ್ಟ್ ಎನ್ಆರ್ಸಿಯ ಮೊದಲ ಕರಡು ಪ್ರತಿಯನ್ನು ಡಿಸೆಂಬರ್ 31 ರೊಳಗೆ ಪ್ರಕಟಿಸುವಂತೆ ಆದೇಶಿಸಿತ್ತು.
ಏನಿದು ವಿವಾದ?
ಈ ಹಿಂದೆ ಕೊನೆಯ ಬಾರಿಗೆ 1951ರಲ್ಲಿ ಅಸ್ಸಾಂನಲ್ಲಿ ಎನ್‌ಆರ್‌ಸಿ ಪರಿಷ್ಕರಿಸಲಾಗಿತ್ತು. ಅಂದಿನ ವರದಿಯಲ್ಲಿ 80 ಲಕ್ಷ ಜನರು ಪೌರತ್ವವನ್ನು ಹೊಂದಿದ್ದರು. ನಂತರದಲ್ಲಿ ವಲಸಿಗರನ್ನು ಪತ್ತೆ ಹಚ್ಚುವ ಈ ಪ್ರಕ್ರಿಯೆ ನಡೆಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ. 1979 ರಲ್ಲಿ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (ASU) ಯಿಂದ ಅಕ್ರಮ ವಲಸಿಗರ ಗುರುತಿಸುವಿಕೆ ಮತ್ತು ಗಡೀಪಾರು ಮಾಡುವ ಆರು ವರ್ಷಗಳ ಆಂದೋಲನವನ್ನು ಪ್ರಾರಂಭಿಸಲಾಯಿತು. ಇದು ಆಗಸ್ಟ್ 15, 1985 ರಂದು ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಮುಕ್ತಾಯವಾಯಿತು.
2013ರ ಡಿಸೆಂಬರ್‌ನಲ್ಲಿ ಈ ಎನ್‌ಆರ್‌ಸಿ ಪ್ರಕ್ರಿಯೆ ಆರಂಭಗೊಂಡಿತ್ತು. ಕಳೆದ ಮೂರು ವರ್ಷಗಳಲ್ಲಿ ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ 40 ಬಾರಿ ವಿಚಾರಣೆ ನಡೆದಿದೆ.
ನಬಾರ್ಡ್ (ತಿದ್ದುಪಡಿ) ಮಸೂದೆ, 2017ಗೆ ಸಂಸತ್ತು ಅಂಗೀಕಾರ
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ತಿದ್ದುಪಡಿ) ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆಯುವ ಮೂಲಕ ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ. ಲೋಕಸಭೆಯಲ್ಲಿ ಆಗಸ್ಟ್ 2017ರಲ್ಲಿ ಈ ಮಸೂದೆ ಅಂಗೀಕಾರಗೊಂಡಿತ್ತು. ಈ ಮಸೂದೆಯು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ಕಾಯಿದೆ-1981ಕ್ಕೆ ತಿದ್ದುಪಡಿ ತರಲಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಕೃಷಿ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಸಾಲ ನೀಡುವಂತಹ ಸೌಲಭ್ಯಗಳನ್ನು ಒದಗಿಸಲು ಮತ್ತು ನಿಯಂತ್ರಿಸಲು ನಬಾರ್ಡ್ ಗೆ ಅಧಿಕಾರ ನೀಡಲಿದೆ.
ಮಸೂದೆಯ ಪ್ರಮುಖಾಂಶಗಳು:
- ನಬಾರ್ಡ್ ತಿದ್ದುಪಡಿ ಮಸೂದೆಯಿಂದಾಗಿ ಅದಕ್ಕೆ ತನ್ನ ಅಧಿಕೃತ ಬಂಡವಾಳವನ್ನು 5000 ಕೋಟಿಯಿಂದ ಆರು ಪಟ್ಟು ಹೆಚ್ಚಿಸಿ 30,000 ಕೋಟಿ ರೂ.ಗೆ ಏರಿಸಲು ಸಾಧ್ಯವಾಗಲಿದೆ. ಅಲ್ಲದೇ ಅವಶ್ಯವೆನಿಸಿದಾಗ ಕೇಂದ್ರ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕ್ ನೊಂದಿಗೆ ಸಮಾಲೋಚಿಸಿ ಅಧಿಕೃತ ಬಂಡವಾಳವನ್ನು ರೂ 30000 ಕೋಟಿಗಿಂತ ಹೆಚ್ಚಿಸಲು ಅನುವು ಮಾಡಿಕೊಡಲಿದೆ.
- ಕೇಂದ್ರ ಸರ್ಕಾರ ನಬಾರ್ಡ್ ನಲ್ಲಿ ಶೇ. 51% ಬಂಡವಾಳ ಪಾಲನ್ನು ಹೊಂದುವ ಅವಕಾಶವನ್ನು ಕಲ್ಪಿಸಿದೆ. ಅಂತೆಯೇ ಆರ್‌ಬಿಐ ಹೊಂದಿರುವ ರೂ 20ಕೋಟಿ ಮೌಲ್ಯದ ಶೇರುಗಳನ್ನು ಕೇಂದ್ರ ಸರಕಾರಕ್ಕೆ ವರ್ಗಾಯಿಸಲು ಅನುಕೂಲವಾಗಿದೆ.
- ಮಸೂದೆಯು “ಸಣ್ಣ ಉದ್ಯಮ”, “ಸಣ್ಣ ಉದ್ಯಮ ಮತ್ತು ವಿಕೇಂದ್ರಿಕೃತ ವಲಯ” ಬದಲಿಗೆ “ಸೂಕ್ಷ್ಮ ಉದ್ಯಮ”, “ಸಣ್ಣ ಉದ್ಯಮ” ಮತ್ತು ಮದ್ಯಮ ಉದ್ಯಮ” ಎಂದು ಬದಲಾಯಿಸಲಿದೆ. ಅಲ್ಲದೇ ಸೂಕ್ಷ್ಮ, ಸಣ್ಣ ಮತ್ತು ಮದ್ಯಮ ಉದ್ದಿಮೆಗಳಿಗೆ ಸಾಲ ಕೊಡಲು ಬ್ಯಾಂಕುಗಳಿಗೆ ಆರ್ಥಿಕ ನೆರವು ನೀಡಲಿದೆ.
sir jan objective current affairs haki sir
Plz let me know how to download the 1 January 2018 to 31 January 2018 current affairs
how to download this sir
just screeshot
Comment