ಪೆರಿಹೆಲಿಯನ್ (Perihelion)

ಜನವರಿ 3 ರಂದು ಭೂಮಿಯು ಸೂರ್ಯನಿಗೆ ಹತ್ತಿರವಿರಲಿದೆ ಈ ವಿದ್ಯಮಾನವನ್ನು ‘ಪೆರಿಹೆಲಿಯನ್’ ಎನ್ನಲಾಗುವುದು. ಆದರೆ ಭೂಮಿಯ ಮೇಲಿಂದ ಈ ವಿದ್ಯಮಾನವನ್ನು ನೋಡಲು ಆಗುವುದಿಲ್ಲ. ಜನವರಿ 3 ರಂದು 11.05 ಗಂಟೆಗೆ ಭೂಮಿಯು ತನ್ನ ವಾರ್ಷಿಕ ಅಂಡಾಕಾರದ ಕಕ್ಷೆಯಲ್ಲಿ ಸೂರ್ಯನಿಗೆ 14,70,97,237 ಕಿ.ಮೀ ದೂರದಲ್ಲಿರಲಿದೆ.

ಪೆರಿಹೆಲಿಯನ್ ಮಹತ್ವ:

ಪೆರಿಹೆಲಿಯನ್ ಸಂಶೋಧನೆ ಮತ್ತು ಶೈಕ್ಷಣಿಕ ಉದ್ದೇಶಗಳಲ್ಲಿ ಪ್ರಮುಖ ಘಟನೆಯಾಗಿದೆ. ಸಾಮಾನ್ಯವಾಗಿ ಸೂರ್ಯನಿಂದ ಭೂಮಿಯ ದೂರವು ಋತು ಅಥವಾ ತಾಪಮಾನವನ್ನು ಭೂಮಿಯ ಮೇಲೆ ನಿರ್ಧರಿಸುತ್ತದೆ ಎಂದು ನಂಬಲಾಗಿದೆ. ಆದರೆ ಇದು ಸತ್ಯವಲ್ಲ. ಭೂಮಿಯು ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ (ಅಂದಾಜು 23.5 ಡಿಗ್ರಿ) ಸುತ್ತುವ ಕ್ರಿಯೆಯು ಭೂಮಿಯ ಮೇಲೆ ಋತುಗಳನ್ನು ನಿಯಂತ್ರಿಸುತ್ತದೆ,

            ಆದ್ದರಿಂದ ಭೂಮಿಯು ಜನವರಿ ಸಮಯದಲ್ಲಿ ಸೂರ್ಯನ ಸಮೀಪದಲ್ಲಿರುವುದರಿಂದ ಭಾರತ ಸೇರಿದಂತೆ ಉತ್ತರ ಗೋಳಾರ್ಧದಲ್ಲಿರುವ ದೇಶಗಳಲ್ಲಿ ಚಳಿಗಾಲ. ಹಾಗೆಯೇ ದಕ್ಷಿಣ ಗೋಳಾರ್ಧದಲ್ಲಿರುವ ದೇಶಗಳಲ್ಲಿ ಬೇಸಿಗೆ ಕಾಲವಿರುತ್ತದೆ.

            ಜುಲೈ 6 ರಂದು ಸೂರ್ಯನಿಂದ 15,20,95,571 ಕಿ.ಮೀ. ದೂರದಲ್ಲಿರಲಿದೆ ಈ ವಿದ್ಯಮಾನವನ್ನು ‘ಅಫೀಲಿಯನ್ (Aphelion)’ ಎನ್ನಲಾಗುವುದು. ಅಂದರೆ ಈ ದಿನದಂದು ಭೂಮಿಯು ಸೂರ್ಯನಿಂದ ಅತ್ಯಂತ ದೂರದಲ್ಲಿರುತ್ತದೆ.

ನ್ಯಾಷನಲ್ ನಾಲೆಜ್ಡ್ ನೆಟ್ವರ್ಕ್ (ರಾಷ್ಟ್ರೀಯ ಜ್ಞಾನ ಜಾಲ)

ರಾಷ್ಟ್ರೀಯ ಜ್ಞಾನ ಜಾಲ ಎಂಬುದು ಬಹು-ಗಿಗಾಬಿಟ್ ಪ್ಯಾನ್-ಇಂಡಿಯಾ ನೆಟ್ವರ್ಕ್ಯಾಗಿದ್ದು, ಭಾರತದ ಸಂವಹನ ಮೂಲಸೌಕರ್ಯದ ಅಭಿವೃದ್ಧಿಯನ್ನು ಸುಗಮಗೊಳಿಸುವುದು, ಸಂಶೋಧನೆಗಳನ್ನು ಉತ್ತೇಜಿಸುವುದು ಮತ್ತು ಮುಂದಿನ ಪೀಳಿಗೆಯ ಸೇವೆಗಳನ್ನು ರಚಿಸುವ ಉದ್ದೇಶವನ್ನು ಹೊಂದಿದೆ.

ಏಕೆ ಸುದ್ದಿಯಲ್ಲಿದೆ?

ನ್ಯಾಷನಲ್ ನಾಲೆಜ್ಡ್ ನೆಟ್ವರ್ಕ್ ಅನ್ನು ಸಾರ್ಕ್ ರಾಷ್ಟ್ರಗಳಿಗೆ ವಿಸ್ತರಿಸಲು ಭಾರತ ಯೋಜನೆಯನ್ನು ರೂಪಿಸಲು ಮುಂದಾಗಿದೆ. ಇದಕ್ಕಾಗಿ ಟೆಲಿಕಾಂ ಸಂಸ್ಥೆಯನ್ನು ನೇಮಕ ಮಾಡಿಕೊಳ್ಳಲು ಚಾಲನೆಯನ್ನು ನೀಡಲಾಗಿದೆ. ಸಾರ್ಕ್ ರಾಷ್ಟ್ರಗಳ ಪೈಕಿ ಪಾಕಿಸ್ತಾನವನ್ನು ಹೊರತುಪಡಿಸಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾ ದೇಶಗಳ ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಗಳಿಗೆ ಎನ್.ಕೆ.ಎನ್ ವಿಸ್ತರಿಸಲಾಗುವುದು.

            ಎನ್.ಕೆ.ಎನ್ ಅಫ್ಘಾನಿಸ್ತಾನದಿಂದ ದೆಹಲಿ ಅಥವಾ ಮುಂಬೈಗೆ, ಬಾಂಗ್ಲಾದೇಶದಿಂದ ಕೋಲ್ಕತಾ ಅಥವಾ ದೆಹಲಿ, ಭೂತಾನ್ದಿಂದ ಕೋಲ್ಕತಾ ಅಥವಾ ದೆಹಲಿ, ನೇಪಾಳದಿಂದ ಕೋಲ್ಕತ್ತಾ ಅಥವಾ ದೆಹಲಿ, ಮಾಲ್ಡೀವ್ಸ್ನಿಂದ ಚೆನ್ನೈ ಅಥವಾ ಮುಂಬೈವರೆಗೆ ಮತ್ತು ಶ್ರೀಲಂಕಾದಿಂದ ಚೆನ್ನೈ ಅಥವಾ ಮುಂಬೈವರೆಗೆ ಸಂಪರ್ಕವನ್ನು ಹೊಂದಿರಲಿದೆ. ಅಫ್ಘಾನಿಸ್ತಾನ, ಮಾಲ್ಡೀವ್ಸ್ ಮತ್ತು ಶ್ರೀಲಂಕಾದೊಂದಿಗೆ ಅಂತರರಾಷ್ಟ್ರೀಯ ಸಂಪರ್ಕವನ್ನು ಜಲಾಂತರ್ಗಾಮಿ ಕೇಬಲ್ ಮೂಲಕ ಸಾಧಿಸಲಾಗುವುದು.

ಪಾಕಿಸ್ತಾನ ಹೊರಗೆ ಏಕೆ?

ಗಡಿಭಾಗದಲ್ಲಿ ಭಯೋತ್ಪಾದಕ ದಾಳಿಗೆ ಪಾಕಿಸ್ತಾನ ಪ್ರಚೋಧನೆ ನೀಡುತ್ತಿರುವುದರಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದ್ದು, ಭಾರತ ಈಗಾಗಲೇ ಪಾಕಿಸ್ತಾನ ಜೊತೆಗೆ ಮಾತುಕತೆಯನ್ನು ನಿಲ್ಲಿಸಿದೆ.

ಮೊದಲ ಬಾರಿಗೆ ಬಾಹ್ಯಕಾಶದಲ್ಲಿ ಸೂಕ್ಷ್ಮಜೀವಿಗಳನ್ನು ಪತ್ತೆಹಚ್ಚಿದ ವಿಜ್ಞಾನಿಗಳು

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ನಲ್ಲಿರುವ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಸೂಕ್ಷ್ಮಜೀವಿಗಳನ್ನು ಮೊದಲ ಬಾರಿಗೆ ಪತ್ತೆಹಚ್ಚಿದ್ದಾರೆ.

ಮಹತ್ವ:

ಬಾಹ್ಯಾಕಾಶದಲ್ಲಿ ಸೂಕ್ಷ್ಮಜೀವಿಗಳನ್ನು ಗುರುತಿಸುವ ಸಾಮರ್ಥ್ಯ ನೈಜ ಸಮಯದಲ್ಲಿ ಗಗನಯಾತ್ರಿ ಕಾಯಿಲೆಗಳನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡಲಿದೆ, ಜೊತೆಗೆ ಇತರ ಗ್ರಹಗಳ ಮೇಲೆ ಡಿಎನ್ಎ-ಆಧಾರಿತ ಜೀವನವನ್ನು ಗುರುತಿಸುವಲ್ಲಿ ಮಹತ್ವದ ಪಾತ್ರವಹಿಸಲಿದೆ. ಪರಿಭ್ರಮಿಸುವ ಪ್ರಯೋಗಾಲಯದಲ್ಲಿ ಇದು ಇತರ ಪ್ರಯೋಗಗಳಿಗೂ ಸಹ ಪ್ರಯೋಜನಕಾರಿಯಾಗಲಿದೆ.

ಅಂತರರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣ:

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS )(ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್) ಎಂಬುದು ಅಂತರರಾಷ್ಟ್ರೀಯವಾಗಿ ಅಭಿವೃದ್ಧಿಪಡಿಸಲಾದ ಸಂಶೋಧನಾ ಸೌಲಭ್ಯವಾಗಿದ್ದು, ಇದನ್ನು ಪೃಥ್ವಿಯ ನಿಕಟವರ್ತಿ ಕಕ್ಷೆಯಲ್ಲಿ ಸ್ಥಾಪಿಸಲಾಗಿದೆ.

            ಐಎಸ್ಎಸ್ ಸೂಕ್ಷ್ಮ ಗುರುತ್ವ ಮತ್ತು ಬಾಹ್ಯಾಕಾಶ ಪರಿಸರ ಸಂಶೋಧನಾ ಪ್ರಯೋಗಾಲಯವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಸಿಬ್ಬಂದಿಗಳು ಜೀವಶಾಸ್ತ್ರ, ಮಾನವ ಜೀವಶಾಸ್ತ್ರ, ಭೌತಶಾಸ್ತ್ರ, ಖಗೋಳಶಾಸ್ತ್ರ, ಹವಾಮಾನಶಾಸ್ತ್ರ ಮತ್ತು ಇತರ ಕ್ಷೇತ್ರಗಳಲ್ಲಿ ಪ್ರಯೋಗಗಳನ್ನು ನಡೆಸುತ್ತಾರೆ. ಬಾಹ್ಯಾಕಾಶ ನೌಕೆ ವ್ಯವಸ್ಥೆಗಳ ಹಾಗೂ ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಅಗತ್ಯವಾದ ಉಪಕರಣಗಳ ಪರೀಕ್ಷೆಗೆ ಈ ನಿಲ್ದಾಣವು ಸೂಕ್ತವಾಗಿರುತ್ತದೆ. ನಿಲ್ದಾಣವನ್ನು 330 ಕಿ.ಮೀ ಯಿಂದ 460 ಕಿ.ಮೀ ರಷ್ಟು ಎತ್ತರದ ಕಕ್ಷೆಯೊಳಗೆ ಸ್ಥಾಪಿಸಲಾಗಿದೆ. ಅಲ್ಲದೇ ಸರಿಸುಮಾರು 27,743.8 km/h (17,239.2 mph) ವೇಗದಲ್ಲಿ ಒಂದು ದಿನಕ್ಕೆ 15.7 ರಷ್ಟು ಕಕ್ಷೆಯನ್ನು ಕ್ರಮಿಸುವ ಮೂಲಕ ಪ್ರಯಾಣ ಮಾಡಲಾಗುತ್ತದೆ.

ಐದು ಸಹಭಾಗಿತ್ವದ ಬಾಹ್ಯಾಕಾಶ ಸಂಸ್ಥೆಗಳ ಜಂಟಿ ಯೋಜನೆಯ ರೂಪದಲ್ಲಿ ನಿರ್ವಹಿಸಲಾಗುತ್ತದೆ. ಈ ಐದು ಸಂಸ್ಥೆಗಳೆಂದರೆ ಅಮೆರಿಕದ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA)(ನಾಸಾ), ಯುರೋಪಿಯನ್ ಸ್ಪೇಸ್ ಏಜೆನ್ಸಿ(ESA)(ಯುರೋಪಿನ ಬಾಹ್ಯಾಕಾಶ ಸಂಸ್ಥೆ), ರಷ್ಯಾನ್ ಫೆಡರಲ್ ಸ್ಪೇಸ್ ಏಜೆನ್ಸಿ (RKA), ಜಪಾನ್ ಏರೋಸ್ಪೇಸ್ ಎಕ್ಸ್ ಪ್ಲೋರೇಷನ್ (JAXA) ಮತ್ತು ಕೆನಡಿಯನ್ ಸ್ಪೇಸ್ ಏಜೆನ್ಸಿ (CSA). ನಿಲ್ದಾಣದ ಮಾಲಿಕತ್ವ ಮತ್ತು ಬಳಕೆಯನ್ನು ಅಂತರ ಸರ್ಕಾರೀ ಒಪ್ಪಂದಗಳು ಮತ್ತು ಕರಾರುಗಳಲ್ಲಿ ದೃಢಪಡಿಸಲಾಗಿದೆ. ಇದು ರಷ್ಯನ್ ಫೆಡರೇಷನ್ ಗೆ, US ಆರ್ಬಿಟಲ್ ಸೆಗ್ಮೆಂಟ್ ನೊಂದಿಗೆ ರಷ್ಯನ್ ಆರ್ಬಿಟಲ್ ಸೆಗ್ಮೆಂಟ್ (ರಷ್ಯನ್ ಕಕ್ಷೆಯ ಭಾಗ)ನಲ್ಲಿರುವ ಅದರ ಘಟಕಗಳ ಮೇಲೆ ಸಂಪೂರ್ಣ ಹಕ್ಕನ್ನು ಉಳಿಸಿಕೊಳ್ಳಲು ಅವಕಾಶ ನೀಡಿದೆ.

ಸೋವಿಯತ್, ರಷ್ಯಾದ ಸಲ್ಯಟ್, ಅಲ್ಮಾಜ್, ಮತ್ತು ಮಿರ್ ಸ್ಟೇಶನ್ಗಳು ಮತ್ತು ಯು.ಎಸ್.ನ ಸ್ಕೈಲ್ಯಾಬ್ ನಂತರ ಸಿಬ್ಬಂದಿಗಳು ನೆಲೆಸಲು ರಚಿಸಲಾದ ಒಂಬತ್ತನೇ ಬಾಹ್ಯಕಾಶ ನಿಲ್ದಾಣ ಇದಾಗಿದೆ.

ಚಂದ್ರನ ಅಧ್ಯಯನಕ್ಕೆ ಚೀನಾದಿಂದ “ಚಾಂಗೆ-4” ಯೋಜನೆ

ಭೂಮಿಗೆ ಕಾಣದಿರುವ ಚಂದ್ರನ ಮತ್ತೂಂದು ಮಗ್ಗುಲಿನ ಮೇಲೆ ತನ್ನ ಉಪಗ್ರಹವನ್ನು ಇಳಿಸಲು ಚೀನಾಯೋಜನೆ ರೂಪಿಸಿದ್ದು, 2018ರಲ್ಲಿ ಕಾರ್ಯಗತವಾಗಲಿದೆ. ಈ ಯೋಜನೆಗೆ “ಚಾಂಗೆ 4” ಎಂದು ಹೆಸರಿಡಲಾಗಿದೆ.

ಮಿಷನ್ ಬಗ್ಗೆ:

ಚಂದ್ರನ ಅಧ್ಯಯನಕ್ಕೆ ಚೀನಾ ಅಭಿವೃದ್ದಿಪಡಿಸುತ್ತಿರುವ ನಾಲ್ಕನೇ ಮಿಷನ್ ಇದಾಗಿದೆ. ಚೀನಾದ ಚಂದ್ರನ ದೇವತೆಯ ಹೆಸರನ್ನು ಈ ಮಿಷನ್ ಗೆ ಇಡಲಾಗಿದೆ.

            ಲಾಂಗ್ ಮಾರ್ಚ್ 4ಸಿ ರಾಕೆಟ್ 425 ಕಿಲೋಗ್ರಾಂ ತೂಕದ ರಿಲೇ ಉಪಗ್ರಹವನ್ನು ಹೊತ್ತು ಚಂದ್ರನ ಹಿಂಭಾಗದಲ್ಲಿ 60,000 ಕಿಲೋಮೀಟ ತನಕ ಚಲಿಸಲಿದೆ. ಈ ಉಪಗ್ರಹವು ಭೂಮಿಯ ಮತ್ತು ಚಂದ್ರನ ದೂರದ ಭಾಗಗಳ ನಡುವಿನ ಆರಂಭಿಕ ಸಂವಹನ ಸಂಪರ್ಕವಾಗಿ ಕಾರ್ಯನಿರ್ವಹಿಸುತ್ತದೆ. ಚೀನಾದ ಬಾಹ್ಯಾಕಾಶ ಸಂಸ್ಥೆ ಲಿಂಕ್ ಅನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದಾಗ, ಚೀನಾವು ಮಿಷನ್ನ ಎರಡನೇ ಭಾಗವನ್ನು ಪ್ರಚೋದಿಸುತ್ತದೆ, ಅಂದರೆ ಚಂದ್ರನ ಪರೀಕ್ಷಿತ ಪ್ರದೇಶಕ್ಕೆ ಲ್ಯಾಂಡರ್ ಮತ್ತು ರೋವರ್ ಅನ್ನು ಕಳುಹಿಸುತ್ತದೆ.

ಮಹತ್ವ:

ಈ ಹಿಂದೆ, ಅಮೆರಿಕ, ರಷ್ಯಾ ದೇಶಗಳು ಚಂದ್ರನಲ್ಲಿಗೆ ತಮ್ಮ ನೌಕೆಗಳನ್ನು ಕಳುಹಿಸಿ ಅಲ್ಲಿನ ಮಣ್ಣು, ಕಲ್ಲು ಇತ್ಯಾದಿಗಳನ್ನು ಪರೀಕ್ಷೆಗಾಗಿ ಭೂಮಿಗೆ ತಂದಿದ್ದವು. ಆದರೆ, ನಾವು ಕಾಣದ ಚಂದ್ರನ ಮಗ್ಗುಲಿಗೆ ಉಪಗ್ರಹವನ್ನು ಕಳುಹಿಸಿರಲಿಲ್ಲ. ಇದೀಗ, ಆ ಕೆಲಸಕ್ಕೆ ಚೀನ ಕೈ ಹಾಕಿದೆ. ಚಂದ್ರನ ಮಗ್ಗಲು ಪ್ರದೇಶವನ್ನು “ಸೌಥ್ ಪೋಲ್-ಐಟ್ಕೆನ್ ಬೇಸಿನ್” ಎಂದು ಕರೆಯಲಾಗುತ್ತದೆ. ಈ ಭಾಗ ಬಾಹ್ಯಕಾಶ ವಿಜ್ಞಾನಿಗಳಿಗೆ ನಿಗೂಡವಾಗಿ ಉಳಿಸಿದೆ. ಈ ಯೋಜನೆ ಯಶಸ್ವಿಯಾದರೆ, ಚಂದ್ರನ ಅಧ್ಯಯನದಲ್ಲಿ ಅಮೆರಿಕ, ರಷ್ಯಾ ಮಾಡಿರುವ ಸಾಧನೆಗಳನ್ನು ಚೀನ ಹಿಂದಿಕ್ಕಿದಂತಾಗುತ್ತದೆ. ಆದರೆ ಭೂಮಿಯಿಂದ ಸಂಪರ್ಕವನ್ನು ಸಾಧಿಸುವುದು ಸುಲಭದ ಮಾತಲ್ಲ.

ಚಂದ್ರಯಾನದಲ್ಲಿ ಚೀನಾದ ಸಾಧನೆ:

ಚೀನಾವು ಚಂದ್ರನ ಪರಿಶೋಧನಾ ಕಾರ್ಯಕ್ರಮವನ್ನು 2007 ರಲ್ಲಿ ‘ಚಾಂಗ್’ಇ 1 ಎಂಬ ಸರಳ ಉಪಗ್ರಹವನ್ನು ಉಡಾಯಿಸುವ ಮೂಲಕ ಪ್ರಾರಂಭಿಸಿತು. ‘ಚಾಂಗ್’ಇ 2 ಎಂಬ ಮಿಷನ್ ಅನ್ನು 2010 ರಲ್ಲಿ ಪ್ರಾರಂಭಿಸಲಾಯಿತು, ನಂತರ ‘ಚಾಂಗ್’ಇ 3” ಮಿಷನ್ ಆರಂಭಿಸಿತು. ‘ಚಾಂಗ್’ಇ 3” ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ವಿಶ್ವದಾದ್ಯಂತ ಸುದ್ದಿಯನ್ನು ಮಾಡಿತ್ತು.

 

ಐಸ್ ಲ್ಯಾಂಡಿನಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನ

ಐಸ್​​ಲ್ಯಾಂಡ್ ಸರ್ಕಾರ ಮೊಟ್ಟ ಮೊದಲ ಬಾರಿಗೆ ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನ ನೀಡುವ ಕಾನೂನನ್ನು ರೂಪಿಸಿದೆ. ಆ ಮೂಲಕ ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನ ಕಾನೂನು ಜಾರಿಗೆ ತಂದ ಮೊದಲ ರಾಷ್ಟ್ರವೆನಿಸಿದೆ.

  • ಹೊಸ ನಿಯಮದ ಅಡಿಯಲ್ಲಿ, ಕನಿಷ್ಠ 25 ಜನರನ್ನು ನೇಮಕ ಮಾಡುವ ಕಂಪನಿಗಳು ಮತ್ತು ಸರ್ಕಾರಿ ಏಜೆನ್ಸಿಗಳು ತಮ್ಮ ಸಮಾನ-ವೇತನ ನೀತಿಯ ಸರ್ಕಾರಿ ಪ್ರಮಾಣೀಕರಣವನ್ನು ಪಡೆಯಬೇಕಾಗುತ್ತದೆ. ಸಮಾನ ವೇತನ ಸಾಬೀತುಪಡಿಸುವಲ್ಲಿ ವಿಫಲವಾದವರು ದಂಡವನ್ನು ತೆರಬೇಕಾಗುತ್ತದೆ.
  • ಐಸ್​​ಲ್ಯಾಂಡ್ ನಲ್ಲಿ 2022 ರ ವೇಳೆಗೆ ಲಿಂಗ ವೇತನದ ಅಂತರವನ್ನು ನಿರ್ಮೂಲನೆ ಮಾಡುವ ಉದ್ದೇಶದೊಂದಿಗೆ ಈ ಕಾನೂನು ತರಲಾಗಿದೆ. ಪ್ರಸ್ತುತ ಐಸ್​​ಲ್ಯಾಂಡ್ ನಲ್ಲಿ ಶೇ.38% ರಷ್ಟು ಸಂಸತ್ ಸದಸ್ಯರು ಸ್ತ್ರೀಯರಾಗಿದ್ದಾರೆ. ಇದು ಜಾಗತಿಕ ಸರಾಸರಿಗಿಂತಲೂ ಕಡಿಮೆ ಇದೆ. ಪ್ರಧಾನ ಮಂತ್ರಿ ಕ್ಯಾಟ್ರಿನ್ ಜಾಕೋಬ್ಸ್ಡೊಟ್ಟಿರ್ ರವರು ದೇಶದ ಮೊದಲ ಮಹಿಳಾ ಪ್ರಧಾನಿ.

ಐಸ್​​ಲ್ಯಾಂಡ್:

ಐಸ್​​ಲ್ಯಾಂಡ್ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿರುವ ಒಂದು ದ್ವೀಪ ರಾಷ್ಟ್ರವಾಗಿದ್ದು, ಸುಮಾರು 323,000 ಜನಸಂಖ್ಯೆಯನ್ನು ಹೊಂದಿದೆ. ಪ್ರವಾಸೋದ್ಯಮ ಮತ್ತು ಮೀನುಗಾರಿಕೆ ಇಲ್ಲಿನ ಆರ್ಥಿಕತೆಯ ಮೂಲ ಆಧಾರ. ಕಳೆದ ಒಂಬತ್ತು ವರ್ಷಗಳಿಂದ, ವಿಶ್ವ ಆರ್ಥಿಕ ವೇದಿಕೆ (WEF)ಯ ವಿಶ್ವದ ಅತ್ಯಂತ ಲಿಂಗ-ಸಮಾನತೆ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ.

  • ಅಮೆರಿಕದ ಮಿನ್ನೆಸೋಟ ರಾಜ್ಯದಲ್ಲಿ ಈಗಾಗಲೇ ಸಮಾನ ವೇತನ ನೀಡಲಾಗುತ್ತಿದೆ. ಆದರೆ, ಖಾಸಗಿ ಮತ್ತು ಸರ್ಕಾರಿ ಉದ್ದಿಮೆಗಳಲ್ಲಿ ಕೂಡ ಈ ನಿಯಮವನ್ನು ಜಾರಿಗೆ ತಂದ ಮೊದಲ ರಾಷ್ಟ್ರ ಐಸ್​ಲ್ಯಾಂಡ್ ಆಗಿದೆ.

ಪಾಕಿಸ್ತಾನವನ್ನು “ವಿಶೇಷ ವೀಕ್ಷಣೆ ಪಟ್ಟಿ”ಗೆ ಸೇರ್ಪಡೆ ಮಾಡಿದ ಅಮೆರಿಕ

ಧಾರ್ಮಿಕ ಸ್ವಾತಂತ್ರ್ಯದ “ತೀವ್ರ ಉಲ್ಲಂಘನೆ” ಮಾಡಿರುವ ಹಿನ್ನಲೆಯಿಂದಾಗಿ ಪಾಕಿಸ್ತಾನವನ್ನು ಹೊಸದಾಗಿ ರಚಿಸಿರುವ “ವಿಶೇಷ ವೀಕ್ಷಣೆ ಪಟ್ಟಿ (Special Watch List)”ಗೆ ಅಮೆರಿಕ ಸೇರ್ಪಡೆ ಮಾಡಿದೆ.

ವಿಶೇಷ ವೀಕ್ಷಣೆ ಪಟ್ಟಿ:

ವಿಶೇಷ ವೀಕ್ಷಣೆ ಪಟ್ಟಿಯು ತೀವ್ರವಾದ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುವ ಅಥವಾ ಸಹಿಸಬಲ್ಲ ರಾಷ್ಟ್ರಗಳಿಗೆ ಆದರೆ ‘ನಿರ್ದಿಷ್ಟ ಕಾಳಜಿಯ ದೇಶಗಳು’ (ಸಿಪಿಸಿ) ಒಳಗೊಂಡಿರದ ಪಟ್ಟಿಯಾಗಿದೆ.

ಹಿನ್ನಲೆ:

ವಿಶೇಷ ವೀಕ್ಷಣೆ ಪಟ್ಟಿ 2016 ಫ್ರಾಂಕ್ ಆರ್ ವೂಲ್ಫ್ ಇಂಟರ್ನ್ಯಾಷನಲ್ ರಿಲೀಜಿಯಸ್ ಫ್ರೀಡಮ್ ಆಕ್ಟ್ ಅಡಿಯಲ್ಲಿ ಹೊಸದಾಗಿ ರಚಿಸಲಾಗಿದೆ. ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ(IRF) ತಿದ್ದುಪಡಿ ಮಾಡಿ ಫ್ರಾಂಕ್ ಆರ್ ವೂಲ್ಫ್ ಇಂಟರ್ನ್ಯಾಷನಲ್ ರಿಲೀಜಿಯಸ್ ಫ್ರೀಡಮ್ ಆಕ್ಟ್ ಜಾರಿಗೆ ತರಲಾಗಿದೆ. ಇದರಡಿ ಅಮೆರಿಕದ ಅಧ್ಯಕ್ಷರು ಧಾರ್ಮಿಕ ಸ್ವಾತಂತ್ರ ಉಲ್ಲಂಘನೆಯಾಗುತ್ತಿರುವ ದೇಶವನ್ನು ವಿಶೇಷ ವೀಕ್ಷಣೆ ಪಟ್ಟಿಗೆ ಸೇರ್ಪಡೆ ಮಾಡಬಹುದಾಗಿದೆ.

ಪಾಕಿಸ್ತಾನದ ಸೇರ್ಪಡೆ ಏಕೆ?

ಪಾಕಿಸ್ತಾನವು ಅದರ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಿರುಕುಳ ಮಾಡುವುದನ್ನು ಮುಂದುವರೆಸಿದೆ, ಅಹಮದಿಗಳಂತಹ ಗುಂಪುಗಳ ವಿರುದ್ಧ ತಾರತಮ್ಯವನ್ನು ಹೊಂದಿದೆ. ದೂಷಣೆಯನ್ನು ಪ್ರಶ್ನೆಸುವವರ ವಿರುದ್ದ ಕಾನೂನು ಮೂಲಕ ಹಿಂಸೆಯನ್ನು ನೀಡುತ್ತಿರುವ ಕಾರಣ ವಿಶೇಷ ವೀಕ್ಷಣೆ ಪಟ್ಟಿಗೆ ಸೇರಿಸಲಾಗಿದೆ.

‘ನಿರ್ದಿಷ್ಟ ಕಾಳಜಿಯ ದೇಶಗಳು’ (Countries of Particular Concern” (CPC):

ಅಮೆರಿಕ ರಾಜ್ಯ ಇಲಾಖೆಯು ಧಾರ್ಮಿಕ ಸ್ವಾತಂತ್ರ್ಯದ ವಿರುದ್ಧ ಅಪರಾಧಿಗಳೆಂದು ಪರಿಗಣಿಸಲ್ಪಟ್ಟ ರಾಷ್ಟ್ರಗಳ ಪಟ್ಟಿಯನ್ನು ಅನಾವರಣಗೊಳಿಸಿದೆ. ಈ ರಾಷ್ಟ್ರಗಳನ್ನು “ನಿರ್ದಿಷ್ಟ ಕಾಳಜಿಯ ರಾಷ್ಟ್ರಗಳು” (CPC) ಎಂದು ಕರೆಯಲಾಗುತ್ತದೆ.

ಈ ಪಟ್ಟಿಯಲ್ಲಿರುವ ದೇಶಗಳು: ಬರ್ಮಾ, ಚೀನಾ, ಎರಿಟ್ರಿಯಾ, ಇರಾನ್, ಉತ್ತರ ಕೊರಿಯಾ, ಸುಡಾನ್, ಸೌದಿ ಅರೇಬಿಯಾ, ತಜಾಕಿಸ್ತಾನ್, ತುರ್ಕಮೆನಿಸ್ತಾನ್, ಮತ್ತು ಉಜ್ಬೇಕಿಸ್ತಾನ್.

  • ಧಾರ್ಮಿಕ ಸ್ವಾತಂತ್ರ್ಯದ “ವ್ಯವಸ್ಥಿತ, ಮುಂದುವರಿದ ಮತ್ತು ಅತಿರೇಕದ” ಉಲ್ಲಂಘನೆಗಳಲ್ಲಿ ತೊಡಗಿದ ನಂತರ ಒಂದು ರಾಷ್ಟ್ರವನ್ನು ಸಿಪಿಸಿ ಎಂದು ಗುರುತಿಸಲಾಗುವುದು. 1998ರ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಗೆ ಅನುಗುಣವಾಗಿ ಘೋಷಿಸಲಾಗುವುದು.

ಪರಿಣಾಮ:

ಸಿಪಿಸಿ ಗಳೆಂದು ಕರೆಯಲ್ಪಡುವ ರಾಷ್ಟ್ರಗಳು ಅಮೆರಿಕ ಅಧ್ಯಕ್ಷರ ನಿರ್ಧಾರಕ್ಕೆ ಒಳಪಟ್ಟಿರುತ್ತದೆ. ಅಂದರೆ ಅಂತಹ ದೇಶಗಳ ಮೇಲೆ ಆರ್ಥಿಕ ಅಥವಾ ರಾಜಕೀಯ ನಿರ್ಬಂಧವನ್ನು ಹೇರಬಹುದು. ಅಂತಹ ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯ ಸ್ಥಿತಿಯನ್ನು ಸುಧಾರಿಸಲು ಇದರ ಉದ್ದೇಶ.

ಚೂರು ಪಾರು:                          

  • ಚೀನಾದಲ್ಲಿ ಪರಿಸರ ತೆರಿಗೆ ಸಂಗ್ರಹಣೆಗೆ ಚಾಲನೆ: ಚೀನಾದ ಪರಿಸರ ಸಂರಕ್ಷಣಾ ತೆರಿಗೆ ಕಾನೂನು ಜನವರಿ 1, 2018 ರಂದು ಜಾರಿಗೆ ಬಂದಿದ್ದು, ಇದರಡಿ ಪರಿಸರವನ್ನು ಉತ್ತಮಗೊಳಿಸಲು ಮತ್ತು ಮಾಲಿನ್ಯಕಾರಕಗಳ ವಿಸರ್ಜನೆಯನ್ನು ತಡೆಯಲು ಪರಿಸರ ತೆರಿಗೆಯನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಇದು ಪರಿಸರ ರಕ್ಷಣೆಗಾಗಿ ಸ್ಪಷ್ಟವಾಗಿ ವಿನ್ಯಾಸಗೊಳಿಸಲಾದ ಚೀನಾದ ಮೊದಲ ತೆರಿಗೆ ವ್ಯವಸ್ಥೆಯಾಗಿದೆ. ಕಾಯಿದೆಯಡಿ ಸಂಸ್ಥೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳು ಮಾಲಿನ್ಯಕಾರಕಗಳನ್ನು ನೇರವಾಗಿ ಪರಿಸರಕ್ಕೆ ಬಿಡುಗಡೆ ಮಾಡಿದರೆ ಹಾಗೂ ಕಂಪೆನಿಗಳು ಶಬ್ದ, ಗಾಳಿ ಮತ್ತು ನೀರು ಮಾಲಿನ್ಯಕಾರಕಗಳನ್ನು ಮತ್ತು ಘನ ತ್ಯಾಜ್ಯವನ್ನು ಉತ್ಪಾದಿಸುವುದಕ್ಕೆ ತೆರಿಗೆಯನ್ನು ಪಾವತಿಸಬೇಕು. ಈ ಕಾಯಿದೆ ಉದ್ಯಮಗಳು, ಸಾರ್ವಜನಿಕ ಸಂಸ್ಥೆಗಳು ಮತ್ತು ಇತರ ವ್ಯವಹಾರ ನಿರ್ವಾಹಕರುಗಳಿಗೆ ಮಾತ್ರ ಅನ್ವಯಿಸುತ್ತದೆ.

  • ನಿಲಂಬೂರ್ ಟೀಕ್ ಗೆ GI ಟ್ಯಾಗ್: ಕೇರಳದ ನಿಲಂಬೂರ್ ಟೀಕ್ ಅಥವಾ ಮಲಬಾರ್ ಟೀಕ್ ಗೆ ಭೌಗೋಳಿಕ ಸೂಚನೆಗಳು (ಜಿಐ) ರಿಜಿಸ್ಟ್ರಿಯಲ್ಲಿ ಸ್ಥಾನ ಲಭಿಸಿದೆ. GI ಟ್ಯಾಗ್ ಉತ್ಪನ್ನಗಳ ಗುಣಮಟ್ಟ ಮತ್ತು ಮೂಲವನ್ನು ಸೂಚಿಸುತ್ತದೆ. ನಿಲಂಬೂರ್ ಟೀಕ್ ಮರವು ಕಾಂಡದ ವಿಸ್ತೀರ್ಣ, ಆಕೃತಿಯಿಂದ ವಿಶ್ವದಾದ್ಯಂತ ಮರದ ಉದ್ದಿಮೆಯಲ್ಲಿ ಹೆಸರುವಾಸಿಯಾಗಿದೆ.

  • ಮಧ್ಯಪ್ರದೇಶದಲ್ಲಿ ಜಲಮಹೋತ್ಸವ: ಮಧ್ಯಪ್ರದೇಶದ ಹನುವಾಂಟಿಯಾ ದ್ವೀಪದಲ್ಲಿ ಭಾರತದ ಅತಿ ದೊಡ್ಡ ಜಲಮಹೋತ್ಸವವನ್ನು ಆಯೋಜಿಸಲಾಗಿತ್ತು. ಮಧ್ಯಪ್ರದೇಶದ ಇಂದಿರಾ ಸಾಗರ್ ಅಣೆಕಟ್ಟು ದಂಡೆಯಲ್ಲಿರುವ ಅವಾಂಟಿಯಾ ದ್ವೀಪವು ಜಲ ಮಹೋತ್ಸವವನ್ನು ಆಯೋಜಿಸಲಾಗುತ್ತದೆ.

  • 26ನೇ ವಿಶ್ವ ಪುಸ್ತಕ ಮೇಳ: ನವದೆಹಲಿಯಲ್ಲಿ 26ನೇ ಪುಸ್ತಕ ಮೇಳವನ್ನು ಆಯೋಜಿಸಲಾಗಿತ್ತು. “ಪರಿಸರ ಮತ್ತು ಹವಾಮಾನ ಬದಲಾವಣೆ” ಈ ವರ್ಷದ ಥೀಮ್. ಈ ವರ್ಷದ ಗೌರವಾನಿತ್ವ ಗೌರವ ರಾಷ್ಟ್ರವೆಂದು “ಐರೋಪ್ಯ ಒಕ್ಕೂಟ”ವನ್ನು ಗುರುತಿಸಲಾಗಿದೆ.

 

5 Thoughts to “ಪ್ರಚಲಿತ ವಿದ್ಯಮಾನಗಳು -ಜನವರಿ,7,8,2018”

  1. vasudev bagali

    ojectives janevary month bidi sir

  2. Renu

    Super information

    1. Mahesh K Lokure

      What is the Indian frist education mantri.

  3. Sachin S H

    February month Current affairs upload madi sir.

Leave a Comment

This site uses Akismet to reduce spam. Learn how your comment data is processed.