ಕಾರ್ಡ್ ಪಾವತಿ ಉತ್ತೇಜನಕ್ಕೆ ಸಮಿತಿ ರಚಿಸಿದ ಕೇಂದ್ರ ಸರ್ಕಾರ

ದೇಶದಲ್ಲಿ ನಗದು ಪಾವತಿಯನ್ನು ಕಡಿಮೆಗೊಳಿಸಿ ಕಾರ್ಡ್ ಮೂಲಕ ಪಾವತಿಸುವ ವ್ಯವಸ್ಥೆಯನ್ನು ಉತ್ತೇಜಿಸಲು ಅಗತ್ಯ ಕ್ರಮಗಳನ್ನು ಶಿಫಾರಸ್ಸು ಮಾಡುವ ಸಲುವಾಗಿ ಕೇಂದ್ರ ಸರ್ಕಾರ 11 ಜನ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ. ಮಾಜಿ ಹಣಕಾಸು ಕಾರ್ಯದರ್ಶಿ ಹಾಗೂ ಹಾಲಿ ನೀತಿ ಆಯೋಗದ ಸಾಮಾಜಿಕ ವಲಯಕ್ಕೆ ಪ್ರಧಾನ ಸಲಹೆಗಾರರಾಗಿರುವ ರತನ್ ಪಿ ವಟಲ್ ಅವರು ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಸಮಿತಿಯ ಹೊಣೆಗಾರಿಕೆ:

  • ಕಾರ್ಡ್ ಮತ್ತು ಡಿಜಿಟಲ್ ಕ್ಷೇತ್ರದ ಮೂಲಕ ಹಣ ಪಾವತಿಯನ್ನು ಉತ್ತೇಜಿಸಲು ಅಗತ್ಯವಿರುವ ಕ್ರಮಗಳನ್ನು ಶಿಫಾರಸ್ಸು ಮಾಡುವುದು.
  • ಪ್ರಸ್ತುತ ದೇಶದಲ್ಲಿ ಚಾಲ್ತಿಯಲ್ಲಿರುವ ಪಾವತಿ ವ್ಯವಸ್ಥೆಯನ್ನು ಪರಾಮರ್ಶಿಸುವುದು ಮತ್ತು ಡಿಜಿಟಲ್ ಪೇಮೆಂಟ್ ಅನ್ನು ಪ್ರೋತ್ಸಾಹಿಸಲು ತೆಗೆದುಕೊಳ್ಳಬೇಕಿರುವ ಕ್ರಮಗಳನ್ನು ಶಿಫಾರಸ್ಸು ಮಾಡುವುದು.
  • ಡಿಜಿಟಲ್ ಪೇಮೆಂಟ್ ಸಂಬಂಧಿಸಿದಂತೆ ಅಧ್ಯಯನ ನಡೆಸಿ, ಅಗತ್ಯವೆನಿಸಿದರೆ ಕಾನೂನು ತಿದ್ದುಪಡಿಗೆ ಶಿಫಾರಸ್ಸು ಮಾಡುವುದು.
  • ಕಾರ್ಡ್ ಮತ್ತು ಡಿಜಿಟಲ್ ವ್ಯವಸ್ಥೆ ಮೂಲಕ ಪಾವತಿ ಮಾಡಲಾದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿಡುವ ಮೂಲಕ ಗ್ರಾಹಕ ಮತ್ತು ವ್ಯಾಪಾರಸ್ಥರಿಗೆ ಮಾಹಿತಿ ಹಂಚಿಕೊಳ್ಳಲು ಸಹಾಯವಾಗುವ ಬಗ್ಗೆ ಅಧ್ಯಯನ ನಡೆಸುವುದು.
  • ಕಾರ್ಡ್ ಮತ್ತು ಡಿಜಿಟಲ್ ವ್ಯವಹಾರಗಳ ದೃಢೀಕರಣಕ್ಕೆ ವಿಶಿಷ್ಟ ಗುರುತಿನ ಸಂಖ್ಯೆ ಅಥವಾ ಇತರೆ ಪುರಾವೆಗಳ ಬಗ್ಗೆ ಅಧ್ಯಯನ ನಡೆಸಿ ಶಿಫಾರಸ್ಸು ಮಾಡುವುದು.
  • ಎಲ್ಲಾ ರೀತಿಯ ಕಾರ್ಡ್ ಮತ್ತು ಡಿಜಿಟಲ್ ಪಾವತಿ ಸ್ವೀಕೃತಿಗೆ ಏಕರೂಪದ ಗವಾಕ್ಷಿ ವ್ಯವಸ್ಥೆಯನ್ನು ಪರಿಚಯಿಸಲು ಪರಿಶೀಲನೆ ನಡೆಸಿ ವರದಿ ಸಲ್ಲಿಸುವುದು.

ಸಮಿತಿಯು ತನ್ನ ವರದಿಯನ್ನ ಒಂದು ವರ್ಷದೊಳಗೆ ಸಲ್ಲಿಸಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಡೆಪ್ಯೂಟಿ ಗವರ್ನರ್ ಎಚ್.ಆರ್.ಖಾನ್, ಭಾರತೀಯ ಬ್ಯಾಂಕ್ಗಳ ಒಕ್ಕೂಟದ ಅಧ್ಯಕ್ಷರು, ನಾಸ್ಕಂ ಅಧ್ಯಕ್ಷರು ಮತ್ತು ಕೇಂದ್ರ ನೇರ ತೆರಿಗೆ ಮಂಡಳಿ ಅಧ್ಯಕ್ಷರು ಸಮಿತಿಯ ಸದಸ್ಯರಾಗಿದ್ದಾರೆ.

ಹಿನ್ನಲೆ:

  • ದೇಶದಲ್ಲಿ ಕಾರ್ಡ್ ಮತ್ತು ಡಿಜಿಟಲ್ ವ್ಯವಸ್ಥೆ ಮೂಲಕ ಪಾವತಿಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸಚಿವ ಸಂಪುಟ ಫೆಬ್ರವರಿ 2016 ರಲ್ಲಿ ಸಮಿತಿಯನ್ನು ರಚಿಸಲು ನಿರ್ಧರಿಸಿತ್ತು. ಕಾರ್ಡ್ ಮತ್ತು ಡಿಜಿಟಲ್ ಪಾವತಿ ಮೇಲೆ ವಿಧಿಸಲಾಗುವ ಮೇಲ್ತೆರಿಗೆ, ಸೇವಾ ಶುಲ್ಕ ಮತ್ತಿತರ ಶುಲ್ಕಗಳನ್ನು ರದ್ದುಗೊಳಿಸಲು ಸಚಿವ ಸಂಪುಟ ನಿರ್ಧರಿಸಿದೆ.

ಪದ್ಮ ಸಚ್ದೇವ್ ರವರಿಗೆ 2015 ಸರಸ್ವತಿ ಸಮ್ಮಾನ್ ಪ್ರಶಸ್ತಿ ಪ್ರಧಾನ

ಖ್ಯಾತ ಡೊಗ್ರಿ ಭಾಷೆಯ ಕವಯತ್ರಿ ಮತ್ತು ಕಾದಂಬರಿಗಾರ್ತಿ ಪದ್ಮ ಸಚ್ದೇವ್ ಅವರಿಗೆ ಪ್ರತಿಷ್ಠಿತ 2015ನೇ ಸಾಲಿನ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಸಚ್ದೇವ್ ಅವರ ಆತ್ಮಕತೆ ಚಿತ್-ಚೇಟೆ (Chit-Chete)ಗಾಗಿ ಈ ಪ್ರಶಸ್ತಿ ಆಯ್ಕೆಯಾಗಿದೆ. ಚಿತ್-ಚೇಟೆ ಕೃತಿಯನ್ನು ಡೊಗ್ರಿ ಭಾಷೆಯಲ್ಲಿ ರಚಿಸಲಾಗಿದ್ದು, 2007 ರಲ್ಲಿ ಪ್ರಕಟಗೊಂಡಿದೆ.

ಪದ್ಮ ಸಚ್ದೇವ್:

  • ಪದ್ಮ ಸಚ್ದೇವ್ ಅವರು ಡೊಗ್ರಿ ಭಾಷೆಯ ಆಧುನಿಕ ಕವಯತ್ರಿ. ಡೊಗ್ರಿ ಅಲ್ಲದೇ ಹಿಂದಿ ಭಾಷೆಯಲ್ಲೂ ಕವಿತೆಗಳನ್ನು ರಚಿಸಿದ್ದಾರೆ.
  • ಸುಮಾರು 60ಕ್ಕೂ ಹೆಚ್ಚು ಪುಸ್ತಕಗಳು ಮತ್ತು ಹಲವು ಕವನ ಸಂಕಲನಗಳನ್ನು ಸಚ್ದೇವ್ ಬರೆದಿದ್ದಾರೆ. ಅವರ “ಮೇರಿ ಕವಿತ ಮೇರಿ ಗೀತಾ” ಕವನ ಸಂಕಲನಕ್ಕೆ 1971 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
  • ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಸಚ್ದೇವ್ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1971), ಪದ್ಮಶ್ರೀ (2001), ಮಧ್ಯಪ್ರದೇಶದ ಕಬೀರ್ ಸಮ್ಮಾನ್ (2007-08) ಪ್ರಶಸ್ತಿ ಲಭಿಸಿವೆ.

ಸರಸ್ವತಿ ಸಮ್ಮಾನ್ ಪ್ರಶಸ್ತಿ:

  • ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಭಾರತೀಯ ಭಾಷೆಗಳಲ್ಲಿ ಬರೆಯುವ ಶ್ರೇಷ್ಠ ಗದ್ಯ ಮತ್ತು ಪದ್ಯ ಪ್ರಕಾರಕ್ಕೆ ಕೊಡಮಾಡಲಾಗುತ್ತದೆ. ಇದನ್ನು ವಿದ್ಯೆಯ ದೇವಿಯಾಗಿರುವ ಸರಸ್ವತಿಯ ಹೆಸರಿನಲ್ಲಿ ಸ್ಥಾಪಿತವಾಗಿರುತ್ತದೆ. ಈ ಪ್ರಶಸ್ತಿಯು 15ಲಕ್ಷ ರೂಪಾಯಿ ನಗದನ್ನು ಹೊಂದಿದೆ. ಕೆ. ಕೆ. ಬಿರ್ಲಾ ಪ್ರತಿಷ್ಥಾನವು ಈ ಪ್ರಶಸ್ತಿಯನ್ನು 1991ರಲ್ಲಿ ಸ್ಥಾಪಿಸಿದೆ.

ಆಗಸ್ಟ್ 29: ರಾಷ್ಟ್ರೀಯ ಕ್ರೀಡಾ ದಿನ (National Sports Day)

ರಾಷ್ಟ್ರೀಯ ಕ್ರೀಡಾ ದಿನವನ್ನು ಪ್ರತಿವರ್ಷ ಆಗಸ್ಟ್ 29 ರಂದು ಆಚರಿಸಲಾಗುತ್ತದೆ. ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಹುಟ್ಟಹಬ್ಬವನ್ನು ಕ್ರೀಡಾದಿನವೆಂದು ಆಚರಿಸಲಾಗುವ ಮೂಲಕ ಗೌರವಸಲ್ಲಿಸಲಾಗುವುದು. ಈ ದಿನದಂದು ರಾಷ್ಟ್ರಪತಿಗಳು ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದವರಿಗೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ವಿತರಿಸುವರು.

ಧ್ಯಾನ್ ಚಂದ್ ಬಗ್ಗೆ:

  • ಧ್ಯಾನ್ ಚಂದ್ ಅವರು ಉತ್ತರ ಪ್ರದೇಶದ ಅಲಹಬಾದ್ ನಲ್ಲಿ 29 ಆಗಸ್ಟ್ 1905 ರಂದು ಜನಿಸಿದರು.
  • ಧ್ಯಾನ್ ಚಂದ್ ಕೇವಲ ಭಾರತದಲ್ಲಷ್ಟೇ ಅಲ್ಲ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಹಾಕಿಪಟು. ಹದಿನಾರನೇ ವಯಸ್ಸಿನಲ್ಲಿ ಸೇನೆಗೆ ಸೇರಿದ ಚಂದ್ ಅಲ್ಲಿಂದಲೇ ಹಾಕಿ ಆಡುವುದನ್ನು ಮೈಗೂಡಿಸಿಕೊಂಡಿದ್ದರು.
  • “ದಿ ವಿಝರ್ಡ್ (The Wizard) ಎಂದೇ ಖ್ಯಾತರಾಗಿದ್ದು ಇವರು ತಮ್ಮ ವೃತ್ತಿಜೀವನದಲ್ಲಿ 1000ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದರು.
  • ಭಾರತ ಹಾಕಿ ತಂಡ 1928, 1932 ಮತ್ತು 1936 ರ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಗೆದ್ದಾಗ ಧ್ಯಾನ್ ಚಂದ್ ತಂಡದಲ್ಲಿ ಭಾಗವಹಿಸಿದ್ದರು, ಅಲ್ಲದೇ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು.
  • ಭಾರತ ಸರ್ಕಾರ ಇವರಿಗೆ “ಪದ್ಮ ವಿಭೂಷಣ” ಪ್ರಶಸ್ತಿಯನ್ನು ನೀಡಿದೆ. ಮರಣೋತ್ತರವಾಗಿ ಇವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕೆಂಬ ಕೂಗು ಸಹ ದೇಶದಲ್ಲೆಡೆ ಇದೆ.

Leave a Comment

This site uses Akismet to reduce spam. Learn how your comment data is processed.