ಮಾನವ ಅಭಿವೃದ್ದಿ ಸಚಿವಾಲಯದಿಂದ ವಿತ್ತೀಯ ಸಾಕ್ಷರತ ಅಭಿಯಾನಕ್ಕೆ ಚಾಲನೆ
ನಗದು ರಹಿತ ಆರ್ಥಿಕ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕೇಂದ್ರ ಮಾನವ ಅಭಿವೃದ್ದಿ ಸಚಿವಾಲಯ ವಿತ್ತೀಯ ಸಾಕ್ಷರತ ಅಭಿಯಾನಕ್ಕೆ ಚಾಲನೆ ನೀಡಿದೆ. ಕೇಂದ್ರ ಮಾನವ ಅಭಿವೃದ್ದಿ ಸಚಿವ ಪ್ರಕಾಶ್ ಜಾವೇದಕರ್ ರವರು ಈ ಅಭಿಯಾನಕ್ಕೆ ಚಾಲನೆ ನೀಡಿದರು. ಇದು ನಗದು ರಹಿತ ಆರ್ಥಿಕ ವ್ಯವಸ್ಥೆಗೆ ಉನ್ನತ ಶಿಕ್ಷಣ ಸಂಸ್ಥೆಗಳು ನಡೆಸುವ ಅಭಿಯಾನವಾಗಿದೆ.
ಪ್ರಮುಖಾಂಶಗಳು:
- ನಗದು ರಹಿತ ಆರ್ಥಿಕ ವ್ಯವಸ್ಥೆ ಮತ್ತು ನಗದು ರಹಿತ ವಹಿವಾಟು ನಡೆಸುವ ವಿಧಾನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶ.
- ಪ್ರಧಾನಿ ಮೋದಿ ರವರು “ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ದೇಶದ ಯುವಜನತೆಗೆ ನಗದು ರಹಿತ ವಹಿವಾಟು ನಡೆಸಿ ದೇಶವನ್ನು ಡಿಜಿಟಲ್ ಆರ್ಥಿಕತೆಯಾಗಿ ಪರಿವರ್ತಿಸಲು ಕರೆ ನೀಡಿದ್ದರು. ಇದಕ್ಕೆ ಪೂರಕವಾಗಿ ಅಭಿಯಾನವನ್ನು ಜಾರಿಗೊಳಿಸಲಾಗಿದೆ.
- ಅಭಿಯಾನದಡಿ ವಿದ್ಯಾರ್ಥಿಗಳು ಮತ್ತು ಭೋದನಾ ಸಿಬ್ಬಂದಿ ಹಣ ವರ್ಗಾವಣೆಗೆ ನಗದು ರಹಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಾರ್ವಜನಿಕರನ್ನು ಪ್ರೇರೆಪಿಸಲಿದ್ದಾರೆ.
- ಇದಕ್ಕಾಗಿ ವೆಬ್ ಸೈಟ್ ಅನ್ನು ತೆರೆಯಲಾಗಿದ್ದು, ವಿದ್ಯಾರ್ಥಿಗಳು ಮತ್ತು ಭೋದನಾ ಸಿಬ್ಬಂದಿ ಅಭಿಯಾನದಡಿ ಸಕ್ರಿಯವಾಗಿ ಭಾಗವಹಿಸಲು ವೆಬ್ ಸೈಟ್ ನಲ್ಲಿ ನೋಂದಾಣಿಸಿಕೊಳ್ಳಬಹುದಾಗಿದೆ.
ಚೀನಾದ ಫ್ರೊ. ಯು ಲಾಂಗ್ ಯು ರವರಿಗೆ ಇಂಡೋಲಾಜಿಸ್ಟ್ ಪ್ರಶಸ್ತಿ
ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ ನೀಡುವ ಇಂಡೋಲಾಜಿಸ್ಟ್ (Indologist) ಪ್ರಶಸ್ತಿಯನ್ನು 2016ನೇ ಸಾಲಿನಲ್ಲಿ ಚೀನಾದ ಫ್ರೊಫೆಸರ್ ಯು ಲಾಂಗ್ ಯು ರವರಿಗೆ ನೀಡಲಾಯಿತು. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಭ್ ಮುಖರ್ಜಿ ರವರು ಪ್ರಶಸ್ತಿಯನ್ನು ಪ್ರಧಾನ ಮಾಡಿದರು.
ಯು ಲಾಂಗ್ ಯು ಬಗ್ಗೆ:
- ಫ್ರೊ. ಯು ಲಾಂಗ್ ಯು ರವರು ಶೆಂಝೆನ್ ವಿಶ್ವವಿದ್ಯಾಲಯದ “ಸೆಂಟರ್ ಫಾರ್ ಇಂಡಿಯನ್ ಸ್ಟಡೀಸ್” ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯು ಸುಮಾರು ಅರ್ಧ ಶತಕ ಕಾಲ ಇಂಡೋಲಾಜಿ ಬಗ್ಗೆ ಅಧ್ಯಾಯನ ನಡೆಸಿದ್ದಾರೆ ಹಾಗೂ ದಕ್ಷಿಣ ಚೀನಾ ಇಂಡೋಲಾಜಿಯಲ್ಲಿ ಮುಂಚೂಣಿಗರು.
ಪ್ರಶಸ್ತಿಯ ಬಗ್ಗೆ:
- ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ ಈ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಯು ಯುಎಸ್$2000 ನಗದು ಒಳಗೊಂಡಿದೆ.
- ಭಾರತದ ಇತಿಹಾಸ, ಕಲೆ, ತತ್ವಶಾಸ್ತ್ರ, ಚಿಂತನೆ, ಸಾಹಿತ್ಯ, ಭಾಷೆ ಮತ್ತು ನಾಗರಿಕತೆ ಬಗ್ಗೆ ಅಧ್ಯಾಯ ನಡೆಸುವ ವಿದೇಶಿ ಇಂಡೋಲಾಜಿಸ್ಟ್ ಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು.
- ಮೊಟ್ಟಮೊದಲ ಪ್ರಶಸ್ತಿಯನ್ನು 2015ರಲ್ಲಿ ಜರ್ಮನಿಯ ಫ್ರೊ. ಹೆನ್ರಿಚ್ ಫ್ರೆಹೆರ್ ವಾನ್ ಸ್ಟೆಟೆನ್ ಕ್ರೊನ್ ರವರಿಗೆ ನೀಡಲಾಗಿತ್ತು.
ಟೀಂ ಇಂಡಸ್ ನಿಂದ 2017ರಲ್ಲಿ ದೇಶದ ಮೊದಲ ಖಾಸಗಿ ಚಂದ್ರಯಾನ ಮಿಷನ್
ಬೆಂಗಳೂರು ಮೂಲದ ಖಾಸಗಿ ಸಂಸ್ಥೆ ‘ಟೀಂ ಇಂಡಸ್’ ಚಂದ್ರನ ಮೇಲೆ ರೋವರ್ ನೌಕೆ ಇಳಿಸಲು ಸಿದ್ಧತೆ ನಡೆಸಿದ್ದು, ಇಸ್ರೋದ ರಾಕೆಟ್ ಅನ್ನು ಡಿಸೆಂಬರ್ 28, 2017 ರಲ್ಲಿ ಚಂದ್ರನ ಮೇಲೆ ಇಳಿಸಲಿದೆ. ಆ ಮೂಲಕ ಟೀಂ ಇಂಡಸ್ ಚಂದ್ರಯಾನ ಕೈಗೊಳ್ಳಲಿರುವ ದೇಶದ ಮೊದಲ ಖಾಸಗಿ ಸಂಸ್ಥೆಯಾಗಿದೆ.
ಪ್ರಮುಖಾಂಶಗಳು:
- ಟೀಂ ಇಂಡಸ್ ತಮ್ಮ ಲ್ಯಾಂಡರ್ ಅನ್ನು ಉಡಾವಣೆ ಮಾಡಲು ಇಸ್ರೊ ಜತೆ ಒಪ್ಪಂದ ಮಾಡಿಕೊಂಡಿದೆ. ಇಸ್ರೊ ತನ್ನ ಖ್ಯಾತ ಧ್ರುವೀಯ ಉಪಗ್ರಹ ಉಡಾವಣಾ ವಾಹನ– ಪಿಎಸ್ಎಲ್ವಿಯ ಸೇವೆಯನ್ನು ಟೀಂ ಇಂಡಸ್ಗೆ ಒದಗಿಸಲಿದೆ. 2017ರ ಡಿಸೆಂಬರ್ 28ರಂದು ಪಿಎಸ್ಎಲ್ವಿ ಟೀಂ ಇಂಡಸ್ನ ನೌಕೆಗಳನ್ನು ಹೊತ್ತು ನಭಕ್ಕೆ ಜಿಗಿಯಲಿದೆ.
- ಲಾಂಚರ್ ಒಂದನ್ನು ಹೊರತುಪಡಿಸಿ ಉಳಿದೆಲ್ಲಾ ತಂತ್ರಜ್ಞಾನಗಳನ್ನು ಟೀಂ ಇಂಡಸ್ ಸ್ವಂತವಾಗಿ ಅಭಿವೃದ್ದಿಪಡಿಸಲಿದೆ.
- ಇಸ್ರೋದ ಪಿಎಸ್ಎಲ್ ವಿ ರಾಕೆಟ್ ಟೀಂ ಇಂಡಸ್ ನ ನೌಕೆಯನ್ನು ನಭಕ್ಕೆ ಹೊತ್ತೊಯ್ಯಲಿದೆ.
- ಭೂಮಿಯ ಸುತ್ತ ಸುತ್ತಿದ ನಂತರ ಈ ನೌಕೆ ಚಂದ್ರನ ವಾಯುವ್ಯ ಗೋಳಾರ್ಧದಲ್ಲಿರುವ ಮರೆ ಇಂಬ್ರಿಯಂ (Mare Imbrium) ಮೇಲೆ ಇಳಿಯಲಿದೆ.
- ಒಂದು ವೇಳೆ ಈ ಮಿಷನ್ ಯಶಸ್ವಿಯಾದರೆ ಇಸ್ರೋದ ಉದ್ದೇಶಿತ ಚಂದ್ರಯಾನ ಮಿಷನ್-2 ಅನ್ನು ಹಿಂದಿಕ್ಕಲಿದೆ. ಚಂದ್ರಯಾನ 2 ಉಡಾವಣಾ ದಿನವನ್ನು ಇಸ್ರೋ ನಿಗದಿಪಡಿಸಿಲ್ಲ.
ಹಿನ್ನಲೆ:
ಗೂಗಲ್ ಲೂನಾರ್ ಎಕ್ಸ್ಪ್ರೈಸ್ ಸ್ಪರ್ಧೆಯ ಅಂಗವಾಗಿ ಟೀಂ ಇಂಡಸ್ ಈ ಸಾಹಸಕ್ಕೆ ಕೈಹಾಕಿದೆ. ಗೂಗಲ್ ಲೂನಾರ್ ಎಕ್ಸ್ಪ್ರೈಸ್ (Xprize) ಸ್ಪರ್ಧೆಗೆ ಪ್ರವೇಶ 2010ರಲ್ಲೇ ಮುಗಿದಿದೆ. ಸ್ಪರ್ಧೆಗೆ ಪ್ರವೇಶ ಪಡೆದಿರುವ ಮೊದಲ ನಾಲ್ಕು ತಂಡಗಳಲ್ಲಿ ಟೀಂ ಇಂಡಸ್ ನಾಲ್ಕನೆಯದು. ಉಳಿದ ಮೂರು ತಂಡಗಳೆಂದರೆ ಅಮೆರಿಕದ ಮೂನ್ ಎಕ್ಸಪ್ರೆಸ್ ಮತ್ತು ಸಿನರ್ಜಿ ಮೂನ್ ಹಾಗೂ ಇಸ್ರೇಲ್ ನ ಸ್ಪೇಸ್ 1 L ಸಂಸ್ಥೆ.
ಯುನೆಸ್ಕೋದ ಅಗ್ರಾಹ್ಯ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಯೋಗ ಸೇರ್ಪಡೆ
ವಿಶ್ವಸಂಸ್ಥೆಯ ಶೈಕ್ಷಣೆಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಯೋಗವನ್ನು ತನ್ನ ಅಗ್ರಾಹ್ಯ ಸಾಂಸ್ಕೃತಿಕ ಪರಂಪರೆ (Intangible Cultural Heritage list) ಪ್ರಾತಿನಿಧಿಕ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಇಥೋಪಿಯಾದ ಅಡಿಸ್ ಅಬಾಬದಲ್ಲಿ ನಡೆದ ಅಗ್ರಾಹ್ಯ ಸಾಂಸ್ಕೃತಿಕ ಪರಂಪರೆ ಸಂರಕ್ಷಿಸುವ ಅಂತರ ಸರ್ಕಾರ ಸಮಿತಿ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ಯೋಗವನ್ನು ಪುರಾತನ ಭಾರತದಿಂದಲೂ ಅಭ್ಯಾಸಿಸಲಾಗುತ್ತದೆ, ಯೋಗ ಒಂದು ಮಾನವ ಸಂಪತ್ತು ಎಂಬ ನಿರ್ಣಯವನ್ನು ಸಭೆಯಲ್ಲಿ ಘೋಷಿಲಾಯಿತು. ಅಗ್ರಾಹ್ಯ ಸಾಂಸ್ಕೃತಿಕ ಪರಂಪರೆ ಸಂರಕ್ಷಿಸುವ ಅಂತರ ಸರ್ಕಾರ ಸಮಿತಿಯ ಎಲ್ಲಾ 24 ಸದಸ್ಯರು ಇದಕ್ಕೆ ಬೆಂಬಲ ಸೂಚಿಸಿದರು.
ಕ್ಯೂಬಾದ ರುಂಬಾ ಡ್ಯಾನ್ಸ್, ಬೆಲ್ಜಿಯಂನ ಬೆಲ್ಜಿಯಂ ಬೀರ್, ಜಪಾನಿನ ಯಾಮ, ಹೊಕೊ, ಯಟಾಯಿ ಪ್ಲೋಟ್ ಉತ್ಸವಗಳು, ಗ್ರೀಸ್ ನ ನೂತನ ವರ್ಷದ ಸಂಭ್ರಮಾಚರಣೆ, ಜರ್ಮನಿಯ ಸಹಕಾರ ಸಂಘ ಪದ್ದತಿ, ಕಝಕಸ್ತಾನದ ಕುರೇಸಿ, ಇಥೋಪಿಯಾದ ಗದ ವ್ಯವಸ್ಥೆ, ಬಾಂಗ್ಲದೇಶದ ಮಂಗಲ ಶೋಭಾಯಾತ್ರ ಸೇರಿದಂತೆ ವಿವಿಧ ಸಾಂಸ್ಕೃತಿಕ ಆಚರಣೆಗಳನ್ನು ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.
ಹಿನ್ನಲೆ:
ಪ್ರಥಮ ಅಂತಾರಾಷ್ಟ್ರೀಯ ಯೋಗ ದಿನದ (ಜೂನ್ 21, 2016) ನಂತರ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವಾಲಯ ಯೋಗ ಕಲೆಯನ್ನು ಅಗ್ರಾಹ್ಯ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಪ್ರಸ್ತಾವನೆ ಸಲ್ಲಿಸಿತ್ತು.
ಯುನೆಸ್ಕೋ ಅಗ್ರಾಹ್ಯ ಸಾಂಸ್ಕೃತಿಕ ಪರಂಪರೆ ಪಟ್ಟಿ:
- ಸಾಂಸ್ಕೃತಿಕ ವೈವಿದ್ಯತೆ ಪ್ರದರ್ಶಿಸಲು ಮತ್ತು ಅದರ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಲು ಯುನೆಸ್ಕೋ ಈ ಪಟ್ಟಿಯನ್ನು ಹೊರತಂದಿದೆ.
- ಅಗ್ರಾಹ್ಯ ಸಾಂಸ್ಕೃತಿಕ ಪರಂಪರೆ ರಕ್ಷಣೆ ಸಮಾವೇಶ 2003, ಜಾರಿಗೆ ಬಂದ ನಂತರ 2008 ರಲ್ಲಿ ಸ್ಥಾಪಿಸಲಾಯಿತು.
ಭಾರತದಿಂದ ಈ ಪಟ್ಟಿಗೆ ಸೇರ್ಪಡೆಗೊಂಡಿರುವವು:
- ಕೂಡಿಯಟ್ಟಂ: ಕೇರಳದ ಸಾಂಸ್ಕೃತಿಕ ರಂಗಭೂಮಿ
- ಮುಡಿಯೆಟ್ಟು: ಕೇರಳದ ರಂಗಭೂಮಿ ಆಚರಣೆ
- ಕಲ್ಬೆಲಿಯಾ: ರಾಜಸ್ತಾನದ ಜಾನಪದ ಗೀತೆ ಮತ್ತು ನೃತ್ಯ
- ರಾಮ್ ಲೀಲಾ: ರಾಮಾಣಯದ ಸಾಂಪ್ರದಾಯಿಕ ಪ್ರದರ್ಶನ
- ರಮ್ಮನ್: ಘರ್ವಾಲ್ ಹಿಮಾಲಯದ ಸಾಂಪ್ರಾದಾಯಿಕ ಧಾರ್ಮಿಕ ಉತ್ಸವ ಮತ್ತು ನಾಟಕ
- ಚೌ ನೃತ್ಯ: ಭಾರತದ ಪೂರ್ವ ರಾಜ್ಯಗಳ ಶಾಸ್ತ್ರೀಯ ಭಾರತೀಯ ನೃತ್ಯ
- ಲಡಾಕ್ ನ ಬುದ್ದ ಸ್ಮರಣೆ: ಜಮ್ಮು ಮತ್ತು ಕಾಶ್ಮೀರದ ಲಡಾಖ್ ನ ಪವಿತ್ರ ಬೌಧ್ದ ಗ್ರಂಥಗಳ ಭೋದನೆ
- ಸಾಂಪ್ರದಾಯಿಕ ವೈದಿಕ ಪಠಣ
Very use full for all CET computers. Thank u karunadu