ಹಿಮಾಚಲ ಪ್ರದೇಶದ ಮಂಡಿ, ಮಹಾರಾಷ್ಟ್ರದ ಸಿಂಧುದುರ್ಗ ದೇಶದ ಸ್ವಚ್ಚ ಜಿಲ್ಲೆಗಳು

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆ ಮತ್ತು ಮಹಾರಾಷ್ಟ್ರದ ಸಿಂಧುದುರ್ಗ ಗ್ರಾಮೀಣ ಸ್ವಚ್ಚ ಸರ್ವೇಕ್ಷಣಾದಲ್ಲಿ ದೇಶದ ಸ್ವಚ್ಚ ಜಿಲ್ಲೆಗಳಾಗಿ ಹೊರಹೊಮ್ಮಿವೆ. ಬಯಲು ಪ್ರದೇಶ ಜಿಲ್ಲೆಗಳ ವಿಭಾಗದಲ್ಲಿ ಮಹಾರಾಷ್ಟ್ರದ ಸಿಂಧುದುರ್ಗ ಸ್ವಚ್ಚ ಜಿಲ್ಲೆಯೆನಿಸಿದರೆ, ಗುಡ್ಡಗಾಡು ಪ್ರದೇಶಗಳ ಜಿಲ್ಲೆಗಳ ಪೈಕಿ ಹಿಮಾಚಲ ಪ್ರದೇಶದ ಮಂಡಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಕೇಂದ್ರ ಕುಡಿಯುವ ನೀರು, ನೈರ್ಮಲ್ಯ, ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವಾಲಯ ಗ್ರಾಮೀಣ ಸ್ವಚ್ಚ ಸರ್ವೇಕ್ಷಣಾ ವರದಿಯನ್ನು ಬಿಡುಗಡೆಗೊಳಿಸಿದೆ.

ಗುಡ್ಡಗಾಡು ಪ್ರದೇಶ:

  • ಪ್ರಥಮ ಸ್ಥಾನ: ಮಂಡಿ, ಹಿಮಾಚಲ ಪ್ರದೇಶ
  • ದ್ವೀತಿಯ ಸ್ಥಾನ: ಪಶ್ಚಿಮ ಸಿಕ್ಕಿಂ, ಸಿಕ್ಕಿಂ
  • ತೃತೀಯ ಸ್ಥಾನ: ಶಿಮ್ಲಾ, ಹಿಮಾಚಲ ಪ್ರದೇಶ

ಬಯಲು ಪ್ರದೇಶ:

  • ಪ್ರಥಮ ಸ್ಥಾನ: ಸಿಂಧುದುರ್ಗ, ಮಹಾರಾಷ್ಟ್ರ
  • ದ್ವೀತಿಯ ಸ್ಥಾನ: ನಾದಿಯ, ಪಶ್ಚಿಮ ಬಂಗಾಳ
  • ತೃತೀಯ ಸ್ಥಾನ: ಸತರಾ, ಮಹಾರಾಷ್ಟ್ರ

ಕರ್ನಾಟಕ:

  • ಕರ್ನಾಟಕದ ಆರು ಜಿಲ್ಲೆಗಳಾದ ಉಡುಪಿ, ಕೊಡಗು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಮತ್ತು ಗದಗ ಜಿಲ್ಲೆಗಳಿಗೆ ಈ ಶ್ರೇಯಸ್ಸು ಲಭಿಸಿದೆ.
  • ಬಯಲು ಪ್ರದೇಶದ ವಿಭಾಗದಲ್ಲಿ ಉಡುಪಿ ಶೇಕಡ 91 ಅಂಕ ಗಳಿಸಿ 7ನೇ ಸ್ಥಾನ ಪಡೆದಿದೆ. ಕೊಡಗು ಮತ್ತು ಬೆಂಗಳೂರು ಗ್ರಾಮಾಂತರ ಕ್ರಮವಾಗಿ 11 ಮತ್ತು 17ನೇ ಸ್ಥಾನ ಪಡೆದಿವೆ. ರಾಮನಗರ 23ನೇ ಹಾಗೂ ಮಂಡ್ಯ 26ನೇ ಸ್ಥಾನ ಪಡೆದಿದೆ.

ದೇಶದ ಮೊದಲ ದ್ವೀಪ ಜಿಲ್ಲೆಯಾಗಿ ಅಸ್ಸಾಂನ “ಮಜುಲಿ

ವಿಶ್ವದ ಅತಿ ದೊಡ್ಡ ನದಿ ದ್ವೀಪ ಪ್ರದೇಶವೆಂದೇ ಖ್ಯಾತಿ ಪಡೆದಿರುವ ಮಜುಲಿ ಈಗ ಅಧಿಕೃತವಾಗಿ ಜಿಲ್ಲೆಯಾಗಿದೆ. ಅಸ್ಸಾಂ ಮುಖ್ಯಮಂತ್ರಿ ಸರ್ಬನಂದ ಸೊನೊವಾಲ್ ಅವರು ಮಜುಲಿಯನ್ನು ಅಸ್ಸಾಂನ 35ನೇ ಜಿಲ್ಲೆಯಾಗಿ ಅಧಿಕೃತವಾಗಿ ಘೋಷಣೆ ಮಾಡಿ ಉದ್ಘಾಟಿಸಿದರು. ಅಸ್ಸಾಂನ ಹೆಸರಾಂತ ಸಂಗೀತಗಾರ ಮತ್ತು ದಾದಾಸಾಹೇಬ್ ಪಾಲ್ಕೆ ಪುರಸ್ಕೃತ ಭೂಪೆನ್ ಹಜಾರಿಕ ಅವರ 90ನೇ ಜನ್ಮವಾರ್ಷಿಕೋತ್ಸವದಂದೇ ಮಜುಲಿಯನ್ನು ಜಿಲ್ಲೆಯಾಗಿ ಘೋಷಿಸಲಾಗಿದೆ. ಕಳೆದ ಸೆಪ್ಟೆಂಬರ್ 2016 ರಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಜುಲಿಯನ್ನು ವಿಶ್ವದ ಅತಿದೊಡ್ಡ ದ್ವೀಪ ಪ್ರದೇಶವೆಂದು ಘೋಷಿಸಿತ್ತು.

  • ಜಿಲ್ಲೆಯಾಗಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಅಸ್ಸಾಂ ವಿಶೇಷ ಕ್ಯಾಬಿನೆಟ್ ಸಭೆ ಮಜುಲಿಯಲ್ಲಿ ನಡೆಯಿತು. ಇದೇ ಮೊದಲ ಬಾರಿಗೆ ಗುಹವಾಟಿಯ ಹೊರಗೆ ಕ್ಯಾಬಿನೆಟ್ ಸಭೆಯನ್ನು ಆಯೋಜಿಸಲಾಗಿತ್ತು.
  • ರಾಜ್ಯದ ಕಲೆ ಮತ್ತು ಸಂಸ್ಕೃತಿ ಅಧ್ಯಯನಕ್ಕಾಗಿ ಮಜುಲಿಯಲ್ಲಿ ಸಾಂಸ್ಕೃತಿಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಉದ್ದೇಶಿಸಿರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.
  • ಮರುಕಳಿಸುತ್ತಿರುವ ಪ್ರವಾಹ ಮತ್ತು ಭೂ ಸವೆತವನ್ನು ತಡೆಯಲು ಪರಿಹಾರ ಒದಗಿಸುವ ಸಲುವಾಗಿ ಮಜುಲಿಯಲ್ಲಿ ಜಲ ಸಂಪನ್ಮೂಲ ಕೇಂದ್ರವನ್ನು ಸ್ಥಾಪಿಸುವುದಾಗಿಯು ಸರ್ಕಾರ ತಿಳಿಸಿದೆ.

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿದೆ ಭಾರತದ ಮೊದಲ ಲಿಗೊ ಲ್ಯಾಬೋರೆಟರಿ

ಭಾರತದ ಮೊದಲ ಲಿಗೊ (ಲೇಸರ್‌ ಇಂಟರ್‌ಫೆರೊಮೀಟರ್‌ ಗ್ರಾವಿಟೇಷನಲ್‌ ವೇವ್‌ ಅಬ್ಸರ್ವೇಟರಿ) ಲ್ಯಾಬೋರೆಟರಿ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಔಂಧಾದಲ್ಲಿ ತಲೆಯತ್ತಲಿದೆ. ಅಮೆರಿಕಾ ನಂತರ ವಿಶ್ವದ ಬೇರೆ ದೇಶಗಳಲ್ಲಿ ಸ್ಥಾಪನೆಯಾಗುತ್ತಿರುವ ಮೊದಲ ಲ್ಯಾಬೋರೆಟರಿ ಇದಾಗಲಿದೆ. ಈಗಾಗಲೇ ಅಮೆರಿಕಾದ ವಾಷಿಂಗಟನ್ ನ ಹ್ಯಾನ್ ಪೋರ್ಡ್ ಮತ್ತು ಲೂಸಿಯಾನದ ಲಿವಿಂಗ್ ಸ್ಟನ್ ನಲ್ಲಿ ಎರಡು ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಭಾರತದಲ್ಲಿ ಸ್ಥಾಪನೆಯಾಗುತ್ತಿರುವುದು ಮೂರನೇಯದಾಗಿದೆ.

ಪ್ರಮುಖಾಂಶಗಳು:

  • ಹಿಂಗೋಲಿ ಜಿಲ್ಲೆಯ ಔಂಧ್ ಬಳಿ ಗುರುತ್ವಾಕರ್ಷಕ ಅಲೆಗಳು ಇರುವಿಕೆ ಧೃಡಪಟ್ಟಿರುವ ಕಾರಣ ಮಹತ್ವಾಕಾಂಕ್ಷಿ ಲಿಗೊ ಪ್ರಯೋಗಾಲಯವನ್ನು ಸ್ಥಾಪಿಸಲು ಆಯ್ಕೆಮಾಡಲಾಗಿದೆ.
  • ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಆಧಾರದ ಮೇಲೆ ಈ ಸ್ಥಳವನ್ನು ಆರಿಸಲಾಗಿದೆ.
  • ಇದಕ್ಕಾಗಿ 8 ಕಿ.ಮೀ ಉದ್ದದ ಹೈ ವ್ಯಾಕ್ಯೂಂ ಕೊಳವೆಯನ್ನು ಸಮತಟ್ಟದ ಪ್ರದೇಶದಲ್ಲಿ ನಿರ್ಮಿಸಲಾಗುವುದು.
  • ಪ್ರಯೋಗಾಲಯದ ನಿರ್ಮಾಣದಿಂದ ಗುರುತ್ವಾಕರ್ಷಣ ಅಲೆ ಖಭೌತಶಾಸ್ತ್ರದಲ್ಲಿ ಭಾರತಕ್ಕೆ ಮಹತ್ವದ ಸ್ಥಾನ ದೊರೆಯಲಿದೆ. ವಿವಿಧ ಕ್ಷೇತ್ರಗಳ ವಿಜ್ಞಾನಿಗಳಿಗೆ ಅಪಾರ ಅವಕಾಶ ಮತ್ತು ಉದ್ಯಮ ಕ್ಷೇತ್ರಕ್ಕೆ ಅತ್ಯಾಧುನಿಕ ಉಪಕರಣಗಳನ್ನು ಅಭಿವೃದ್ಧಿಪಡಿಸುವ ಅವಕಾಶ ಸೃಷ್ಟಿಯಾಗಲಿದೆ. ಅಲ್ಲದೇ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಆಸಕ್ತಿ ಹೆಚ್ಚಿಸುತ್ತದೆ.

ಹಿನ್ನಲೆ:

  • ಗುರುತ್ವಾಕರ್ಷಣ ಅಲೆಗಳ ಸಂಶೋಧನೆ ನಡೆಸುವ ಸಲುವಾಗಿ ಲಿಗೊ-ಭಾರತ ಮಹಾ ವಿಜ್ಞಾನ ಯೋಜನೆಗೆ ಕೇಂದ್ರ ಸರ್ಕಾರ ಫೆಬ್ರವರಿ 2016 ರಲ್ಲಿ ಒಪ್ಪಿಗೆ ಸೂಚಿಸಿತ್ತು. ಅದರಂತೆ ಲಿಗೊ-ಭಾರತ ಯೋಜನೆ ಪ್ರಾರಂಭಿಸುವ ಸಲುವಾಗಿ ಅಮೆರಿಕಾ ನ್ಯಾಷನಲ್ ಸೈನ್ಸ್ ಫೌಂಡೇಶನ್ ಮತ್ತು ಭಾರತದ ಪರಮಾಣು ಇಂಧನ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡುವೆ ಏಪ್ರಿಲ್ 2016 ರಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಗಿತ್ತು.

Leave a Comment

This site uses Akismet to reduce spam. Learn how your comment data is processed.