ರಾಜಸ್ತಾನ ಸರ್ಕಾರದಿಂದ ಅನ್ನಪೂರ್ಣ ರಸೊಯಿ ಯೋಜನೆ
ತಮಿಳುನಾಡು ಸರ್ಕಾರದ ಮಾದರಿಯಲ್ಲೇ ರಾಜಸ್ತಾನ ಸರ್ಕಾರ ಅನ್ನಪೂರ್ಣ ರಸೊಯಿ ಯೋಜನೆಯನ್ನು ಜಾರಿಗೆ ತಂದಿದೆ. ಬಡವರಿಗೆ ಗುಣಮಟ್ಟದ ಆಹಾರವನ್ನು ಕಡಿಮೆ ದರದಲ್ಲಿ ಪೂರೈಸುವ ಉದ್ದೇಶದಿಂದ ಯೋಜನೆಯನ್ನು ಜಾರಿಗೊಳಿಸಲಾಗಿದೆ. ರಾಜಸ್ತಾನದ ಮುಖ್ಯಮಂತ್ರಿ ವಸುಂದರ ಬಜೆ ಅವರು ಈ ಯೋಜನೆಗೆ ಜೈಪುರ ಮುನಿಸಿಪಾಲ್ ಕಾರ್ಪೋರೇಶನ್ ಆವರಣದಲ್ಲಿ ಚಾಲನೆ ನೀಡಿದರು. “ಎಲ್ಲರಿಗೂ ಆಹಾರ ಮತ್ತು ಎಲ್ಲರಿಗೂ ಗೌರವ” ಇದು ಈ ಯೋಜನೆಯ ಧ್ಯೇಯವಾಕ್ಯ.
ಯೋಜನೆಯ ವಿಶೇಷತೆಗಳು:
- ಈ ಯೋಜನೆಯಡಿ ಆಹಾರವನ್ನು ಸಬ್ಸಿಡಿ ದರದಲ್ಲಿ ನೀಡಲಾಗುವುದು. ಇದರಡಿ 5 ರೂ ಗೆ ಉಪಹಾರ ಹಾಗೂ 8 ರೂ ಗೆ ಊಟ ದೊರೆಯಲಿದೆ.
- ರಾಜಸ್ತಾನದ ಸ್ಥಳೀಯ ಸ್ವ ಸರ್ಕಾರ ಇಲಾಖೆ ಈ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದೆ. ನುರಿತ ಅನುಭವ ಹೊಂದಿರುವ ಸಿಬ್ಬಂದಿ ಆಹಾರವನ್ನು ತಯಾರಿಸಲಿದ್ದಾರೆ.
- 80 ವಾಹನಗಳಲ್ಲಿ ಆಹಾರವನ್ನು ನಿಗದಿಪಡಿಸಿದ ಸ್ಥಳಕ್ಕೆ ರವಾನಿಸಲಾಗುವುದು.
- ರಿಕ್ಷಾ ಎಳೆಯುವವರು, ಆಟೋ ಚಾಲಕರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳಾ ಕಾರ್ಮಿಕರು ಹಾಗೂ ಹಿರಿಯರು ಮತ್ತು ದುರ್ಬಲ ವರ್ಗದವರು ಯೋಜನೆಯ ಫಲಾನುಭವಿಗಳು.
- ಮೊದಲ ಹಂತದಲ್ಲಿ ಯೋಜನೆಯನ್ನು 12 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು. ಎರಡನೇ ಹಂತದಲ್ಲಿ ಉಳಿದ 21 ಜಿಲ್ಲೆಗಳಲ್ಲಿ ಚಾಲನೆ ನೀಡಲಾಗುವುದು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಜಾರಿ
ನೋಟು ರದ್ದತಿ ನಂತರ ಕಾಳಧನವನ್ನು ಬಿಳಿ ಮಾಡಿಕೊಳ್ಳುವ ಕೇಂದ್ರ ಸರ್ಕಾರ ಮಹತ್ವಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಹಾಗೂ ತೆರಿಗೆ ಕಾನೂನು (ಎರಡನೇ ತಿದ್ದುಪಡಿ) ಕಾಯಿದೆ-2016 ಡಿಸೆಂಬರ್ 17, 2016 ರಿಂದ ಜಾರಿಗೆ ಬರಲಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಕೇಂದ್ರ ಸರ್ಕಾರದ ಎರಡನೇ ಆದಾಯ ಘೋಷಣೆ ಯೋಜನೆಯಾಗಿದ್ದು, ತೆರಿಗೆ ವಂಚಿತರು ಅಘೋಷಿತ ತೆರಿಗೆಯಿಂದ ಹೊರ ಬರಲು ಅವಕಾಶ ನೀಡಲಿದೆ. ಅಘೋಷಿತ ಕಪ್ಪು ಹಣದ ಆದಾಯದ ಮೇಲೆ ಶೇ. 50 ತೆರಿಗೆ ಹಾಗೂ ಇತರೆ ಹೆಚ್ಚುವರಿ ತೆರಿಗೆಯನ್ನು ವಿಧಿಸುವ ಅವಕಾಶವನ್ನು ಯೋಜನೆಯಡಿ ಕಲ್ಪಿಸಲಾಗಿದೆ.
- ಈ ಯೋಜನೆಯಡಿ ಯಾವುದೇ ವ್ಯಕ್ತಿ ನಗದು ಅಥವಾ ಬ್ಯಾಂಕಿನಲ್ಲಿರುವ ಅಘೋಷಿತ ಹಣವನ್ನು ಘೋಷಿಸಿಕೊಳ್ಳಬಹುದು.
- ಹೀಗೆ ಘೋಷಿಸಲಾದ ಹಣದ ಮೇಲೆ ಶೇ 30% ತೆರಿಗೆ, ಶೇ 10% ದಂಡ ಹಾಗೂ ತೆರಿಗೆ ಮೇಲೆ ಶೇ 33% ಪ್ರಧಾನಿ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಸೆಸ್ ಅನ್ನು ವಿಧಿಸಲಾಗುವುದು.
- ಇದಲ್ಲದೇ ಅಘೋಷಿತ ಹಣದ ಶೇ 25% ರಷ್ಟನ್ನು ಶೂನ್ಯ ಬಡ್ಡಿ ದರದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಡಿಪಾಸಿಟ್ ಯೋಜನೆ-2016 ಯಡಿ ನಾಲ್ಕು ವರ್ಷ ಲಾಕ್ ಇನ್ ಅವಧಿಯಲ್ಲಿ ಇಡಬೇಕು.
- ಯೋಜನೆಯಡಿ ಮಾಡಲಾಗುವ ಘೋಷಣೆಯನ್ನು ರಹಸ್ಯವಾಗಿ ಇಡಲಾಗುವುದು.
- ಬಹಿರಂಗಪಡಿಸದ ನಗದು ಅಥವಾ ಖಾತೆಗಳಲ್ಲಿ ಠೇವಣೆ ಇಟ್ಟಿರುವ ಹಣಕ್ಕೆ ಯೋಜನೆಯಡಿ ತೆರಿಗೆ, ಹೆಚ್ವುವರಿ ತೆರಿಗೆ ಹಾಗೂ ಸೆಸ್ ಸೇರಿ ಒಟ್ಟಾರೆ ಶೇ 77.5% ರಷ್ಟನ್ನು ವಿಧಿಸಲಾಗುವುದು.
ಯೋಜನೆಯಡಿ ಸಂಗ್ರಹಿಸಲಾಗುವ ಹಣವನ್ನು ಬಡವರ ಕಲ್ಯಾಣಕ್ಕಾಗಿ ಬಳಸಲಾಗುವುದು. ಮುಖ್ಯವಾಗಿ ನೀರಾವರಿ ಯೋಜನೆ, ಮೂಲಭೂತ ಸೌಕರ್ಯ, ಪ್ರಾಥಮಿಕ ಶಿಕ್ಷಣ, ವಸತಿ, ಶೌಚಾಲಯ ಮತ್ತು ಜೀವನೋಪಾಯಕ್ಕೆ ಬಳಸಲಾಗುವುದು.
ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಸೇನಾ ಪಡೆಯ ನೂತನ ಮುಖ್ಯಸ್ಥ
ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಅವರನ್ನು ಸೇನಾ ಪಡೆಯ ನೂತನ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಸೇನಾ ಪಡೆ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅಧಿಕಾರಾವಧಿ ಡಿಸೆಂಬರ್ 31ಕ್ಕೆ ಕೊನೆಗೊಳ್ಳಲಿದ್ದು, ರಾವತ್ ಅವರು ಸುಹಾಗ್ ಸ್ಥಾನವನ್ನು ತುಂಬಲಿದ್ದಾರೆ. ಸೇನಾ ಪಡೆಯ ಉಪ ಮುಖ್ಯಸ್ಥರಾಗಿರುವ ರಾವತ್ ಅವರು, ಇಬ್ಬರು ಹಿರಿಯ ಅಧಿಕಾರಿಗಳನ್ನು (ಅತ್ಯಂತ ಹಿರಿಯ ಸೇನಾ ಕಮಾಂಡರ್, ಪೂರ್ವ ಕಮಾಂಡ್ನ ಮುಖ್ಯಸ್ಥ ಪ್ರವೀಣ್ ಬಕ್ಷಿ ಮತ್ತು ದಕ್ಷಿಣ ಕಮಾಂಡ್ನ ಮುಖ್ಯಸ್ಥ ಪಿ.ಎಂ. ಹರಿಜ್) ಹಿಂದಿಕ್ಕಿ ಭೂ ಸೇನೆಯ ಮುಖ್ಯಸ್ಥರ ಹುದ್ದೆಗೆ ನೇಮಕವಾಗಿದ್ದಾರೆ.
ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್:
- ಬಿಪಿನ್ ರಾವತ್ ಜನಿಸಿದ್ದು ಯೋಧರ ಕುಟುಂಬದಲ್ಲಿ. ಬಿಪಿನ್ ರಾವತ್ ತಂದೆ ಲೆ|ಜ| ಎಲ್.ಎಸ್. ರಾವತ್ ಕೂಡಾ ಸೇನೆಯಲ್ಲಿ ಸೇವೆ ಸಲ್ಲಿಸಿದವರು.
- ‘ಇಂಡಿಯನ್ ಮಿಲಿಟರಿ ಅಕಾಡೆಮಿ’ಯಲ್ಲಿ 1978ರಲ್ಲಿ ತರಬೇತಿ ಪಡೆದು ಉತ್ತೀರ್ಣರಾಗುವಾಗಿ ಅಲ್ಲಿ ‘ಸೋರ್ಡ್ ಆಫ್ ಆನರ್’ ಗೌರವಕ್ಕೆ ಪಾತ್ರರಾದರು.
- 1978ರಲ್ಲಿ 11 ಗೋರ್ಖಾ ರೈಫಲ್ಸ್’ನ 5ನೇ ಬೆಟಾಲಿಯನ್’ಗೆ ಸೇರಿ ಸೇವೆ ಆರಂಭ. 37 ವರ್ಷಗಳ ಸೇವೆಯಲ್ಲಿ ಭಾರತದ ವಿವಿಧ ಭಾಗಗಳಲ್ಲಿ, ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಣೆ. ಭಾರತದ ಪೂರ್ವ ಗಡಿ ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ.
- ಈ ಮಧ್ಯೆ ವಿಶ್ವಸಂಸ್ಥೆಯ ಮಿಶನ್ ಮೇಲೆ ಕಾಂಗೋದಲ್ಲಿ ಕಠಿಣ ಸವಾಲುಗಳ ನಡುವೆಯೂ ಅಪ್ರತಿಮ ಸೇವೆ ಸಲ್ಲಿಸಿ ಅಂತರಾಷ್ಟ್ರೀಯ ಗೌರವಗಳಿಗೆ ಪಾತ್ರವಾಗಿದ್ದಾರೆ. ಭಾರತದಲ್ಲಿಯೂ ಹಲವಾರು ಗೌರವ ಹಾಗೂ ಶೌರ್ಯ ಪ್ರಶಸ್ತಿಗಳಿಗೆ ಭಾಜನ. 1 ಜನವರಿ 2016ರಿಂದ ಭೂಸೇನೆಯ ಉಪ-ಮುಖ್ಯಸ್ಥನಾಗಿ ಅಧಿಕಾರ ಸ್ವೀಕಾರ
- 17 ಡಿಸೆಂಬರ್ 2016ಗೆ ನೂತನ ಭೂಸೇನಾ ಮುಖ್ಯಸ್ಥರಾಗಿ ನೇಮಕ.
ಸೇವೆಯಲ್ಲಿರುವ ಹಿರಿಯ ಅಧಿಕಾರಿಯನ್ನು ಹಿಂದಿಕ್ಕಿ ಕಿರಿಯ ಅಧಿಕಾರಿಯನ್ನು ಈ ಹುದ್ದೆಗೆ ನೇಮಕ ಮಾಡಿರುವುದು ಇದೇ ಮೊದಲಲ್ಲ. 1983 ರಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ರವರು ಲೆ.ಜ. ಎಸ್.ಕೆ ಸಿನ್ಹಾ ರವರ ಹೊರತಾಗಿ ಲೆಫ್ಟಿನೆಂಟ್ ಜನರಲ್ ಎ.ಎಸ್.ವೈದ್ಯ ರವರನ್ನು ಭೂ ಸೇನಾ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದರು. ಇದನ್ನು ವಿರೋಧಿಸಿ ಲೆ.ಜ. ಎಸ್.ಕೆ ಸಿನ್ಹಾ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದರು.