ಡಿಸೆಂಬರ್ 22: ರಾಷ್ಟ್ರೀಯ ಗಣಿತ ದಿನ
ರಾಷ್ಟ್ರೀಯ ಗಣಿತ ದಿನವನ್ನು ಪ್ರತಿ ವರ್ಷ ಡಿಸೆಂಬರ್ 22 ರಂದು ಆಚರಿಸಲಾಗುತ್ತದೆ. ಪ್ರಸಿದ್ದ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ ರವರ ಜನ್ಮದಿನವನ್ನು ರಾಷ್ಟ್ರೀಯ ಗಣಿತ ದಿನವೆಂದು ಆಚರಿಸಲಾಗುತ್ತದೆ. ಈ ವರ್ಷ ರಾಮಾನುಜನ ರವರ 129ನೇ ಜನ್ಮದಿನ.
ಶ್ರೀನಿವಾಸ ರಾಮಾನುಜನ್:
- ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್ ಅಥವಾ ಜನಪ್ರಿಯವಾಗಿ ಶ್ರೀನಿವಾಸ ರಾಮಾನುಜನ್ ಎಂದು ಹೆಸರುವಾಸಿಯಾದ ಇವರು 19987ರ ಡಿಸೆಂಬರ್ 22 ರಂದು ತಮಿಳುನಾಡಿನ ಈರೋಡಿನಲ್ಲಿ ಜನಿಸಿದರು. ಕೇವಲ 32ನೇ ವರ್ಷದಲ್ಲಿ ಅಂದರೆ 26ನೇ ಏಪ್ರಿಲ್, 1920 ರಲ್ಲಿ ಮರಣ ಹೊಂದಿದರು.
- ಯಾವುದೇ ಕ್ರಮಬದ್ದವಾದ ತರಭೇತಿ ಇಲ್ಲದೇ ಸಂಖ್ಯಾ ಶಾಸ್ತ್ರ, ಗಣಿತ ಶಾಸ್ತ್ರೀಯ ವಿಶ್ಲೇಷಣೆ, ಸೂತ್ರ ಮತ್ತು ಸಮೀಕರಣಗಳನ್ನು ರಚಿಸಿದ ಸಿದ್ದಾಂತ ವರಿಷ್ಠ ಎಂದು ಇವರನ್ನು ಪರಿಗಣಿಸಲಾಗಿದೆ.
- ಗಣಿತಶಾಸ್ತ್ರದ ಮೇರು ಪ್ರತಿಭೆಯಾದ ರಾಮಾನುಜನ್ ರವರು ಸುಮಾರು 3900 ಕ್ಕೂ ಗಣಿತ ಫಲಿತಾಂಶ ಮತ್ತು ಸಮೀಕರಣಗಳನ್ನು ಸಂಗ್ರಹಿಸಿದ್ದರು.
- ಇವರ ರಾಮಾನುಜನ್ ಫ್ರೈಮ್ ಮತ್ತು ರಾಮಾನುಜನ್ ಥೀಟಾ ಸಂಶೋಧನೆ ಗಣಿತಶಾಸ್ತ್ರದಲ್ಲಿ ಮತ್ತಷ್ಟು ಆಳವಾಗಿ ಸಂಶೋಧನೆ ನಡೆಸಲು ಪ್ರೇರೆಪಿಸಿದವು.
- ರಾಮಾನುಜನ್ನರ ಸಂಶೋಧನೆ ಅವರಿಗೆ ಉನ್ನತ ಪ್ರಶಂಸೆ ಮತ್ತು ಪ್ರತಿಷ್ಠೆಗಳನ್ನು ತಂದುಕೊಟ್ಟವು. ಬ್ರಿಟನ್ ಮತ್ತು ಅಂದಿನ ಬ್ರಿಟಿಷ್ ಸಾಮ್ರಾಜ್ಯದ ವಿಜ್ಞಾನ ಪ್ರಪಂಚದಲ್ಲಿ ಅತ್ಯುನ್ನತ ಗೌರವವಾದ ರಾಯಲ್ ಸೊಸೈಟಿಯ ಫೆಲೋ ಆಗಿ ಫೆಬ್ರುವರಿ 28, 1918ರಲ್ಲಿ ಶ್ರೀನಿವಾಸ ರಾಮಾನುಜನ್ ಚುನಾಯಿತರಾದರು. 1841ರಲ್ಲಿ ಸರ್ ಆರ್ ದೇಸೀರ್ ಕರ್ ಸೇಟ್ಜಿ ಅವರು ರಾಯಲ್ ಸೊಸೈಟಿಗೆ ಚುನಾಯಿತರಾಗಿದ್ದನ್ನು ಬಿಟ್ಟರೆ ಈ ಗೌರವ ಪಡೆದ ಪ್ರಥಮರು ರಾಮಾನುಜನ್ ಅವರೇ.
ಹಿನ್ನಲೆ:
ರಾಮಾನುಜನ್ ರವರ 125ನೇ ಜನ್ಮದಿನಾಚರಣೆ ಅಂಗವಾಗಿ 2011 ರಲ್ಲಿ ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನವೆಂದು ಕೇಂದ್ರಸರ್ಕಾರ ಘೋಷಿಸಿತು. ಅಲ್ಲದೇ 2012ನೇ ವರ್ಷವನ್ನು ರಾಷ್ಟ್ರೀಯ ಗಣಿತ ವರ್ಷವೆಂದು ಆಚರಿಸಲಾಯಿತು.
ಚೆಕ್ ಮೂಲಕ ವೇತನ ಪಾವತಿ “ಸುಗ್ರಿವಾಜ್ಞೆ”ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ನಗದು ರಹಿತ ವ್ಯವಸ್ಥೆ ಉತ್ತೇಜನಕ್ಕೆ ಮತ್ತೊಂದು ಹೆಜ್ಜೆ ಇಟ್ಟಿರುವ ಸರ್ಕಾರ ಈಗ ದೇಶದ ಎಲ್ಲ ನೌಕರರ ವೇತವನ್ನು ನಗದು ರಹಿತವಾಗಿ ಮಾಡಲು ನಿರ್ಧರಿಸಿದೆ. ಅದರಂತೆ ನಗದು ರಹಿತ ವೇತನ ಪಾವತಿ ಕುರಿತಂತೆ ಕರಡು “ಸುಗ್ರೀವಾಜ್ಞೆ”ಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಕೂಡ ಪಡೆದಿದೆ. ಉದ್ದೇಶಿತ ಸುಗ್ರಿವಾಜ್ಞೆಯು ವೇತನ ಪಾವತಿ ಕಾಯಿದೆ-1936ರ ಪ್ರಕರಣ 6ಕ್ಕೆ ತಿದ್ದುಪಡಿ ತರಲಾಗುವುದು. ಸಂವಿಧಾನದ 123ನೇ ವಿಧಿಯಡಿ ರಾಷ್ಟ್ರಪತಿ ರವರ ಅನುಮೋದನೆ ದೊರೆತರೆ ಕಾಯಿದೆಯಾಗಿ ಜಾರಿಗೆ ಬರಲಿದೆ.
- ಮಾಸಿಕ ರೂ 18,000 ರವರೆಗೆ ವೇತನ ಪಡೆಯಲಿರುವ ನೌಕರರ ವೇತನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಅಥವಾ ಚೆಕ್ ಮೂಲಕ ಪಾವತಿ ಮಾಡಬಹುದು. ಇದಕ್ಕೆ ನೌಕರರ ಒಪ್ಪಿಗೆ ಅಗತ್ಯವಿಲ್ಲ.
- ಕಾರ್ಮಿಕರ ವಿಷಯ ಸಹವರ್ತಿ ಪಟ್ಟಿಯಲ್ಲಿರುವ ಕಾರಣ ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯ ಸರ್ಕಾರಗಳು ಅಧಿಸೂಚನೆ ಹೊರಡಿಸುವ ತನಕ ಹೊಸ ವ್ಯವಸ್ಥೆ ಕೇವಲ ಐಚ್ಚಿಕವಾಗಿರಲಿದೆ.
- ಪ್ರಸ್ತುತ ವೇತನ ಪಾವತಿ ಕಾಯಿದೆ-1936 ರ ಪ್ರಕಾರ ವೇತನ ಪಾವತಿಯನ್ನು ನಗದು ರೂಪದಲ್ಲಿ ಮಾಡಬೇಕು. ಬ್ಯಾಂಕ್ ಖಾತೆ ಮೂಲಕ ಅಥವಾ ಚೆಕ್ ಮೂಲಕ ಪಾವತಿ ಮಾಡಬೇಕಾದರೆ ಉದ್ಯೋಗದಾತರು ಕಾರ್ಮಿಕರಿಂದ ಲಿಖಿತವಾಗಿ ಮನವಿಯನ್ನು ಸ್ವೀಕರಿಸಬೇಕು.
- ಕೇಂದ್ರ ಸರ್ಕಾರದ ಈ ನಿರ್ಧಾರರಿಂದ ಎರಡು ರೀತಿಯ ಉಪಯೋಗ ಕಾರ್ಮಿಕರಿಗೆ ದೊರೆಯಲಿದೆ. ಮೊದಲನೇಯದಾಗಿ ವಿಳಂಬ ವೇತನ ಪಾವತಿ ಅಥವಾ ಕನಿಷ್ಟ ವೇತನ ಪಾವತಿಗಿಂತ ಕಡಿಮೆ ವೇತನ ನೀಡುವುದರ ಮೇಲೆ ನಿಗಾ ಇಡಬಹುದಾಗಿದೆ. ಎರಡನೇಯದಾಗಿ ನಗದು ರಹಿತ ಆರ್ಥಿಕ ವ್ಯವಸ್ಥೆಗೆ ಹೊಂದಿಕೊಳ್ಳಲು ಸಹಕಾರಿಯಾಗಲಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸ್ಕಾಚ್ ಪ್ರಶಸ್ತಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಗೆ ಸ್ಕಾಚ್ ಆರ್ಡರ್ ಆಫ್ ಮೆರಿಟ್ ಮತ್ತು ಸ್ಮಾರ್ಟ್ ಮೊಬಿಲಿಟಿ ವಿಭಾಗದ ಅಡಿಯಲ್ಲಿ ಒಟ್ಟು 20 ಪ್ರಶಸ್ತಿಗಳು ಲಭಿಸಿವೆ. ಕೆಎಸ್ಆರ್ಟಿಸಿ ಅನುಷ್ಠಾನಗೊಳಿಸಿರುವ ಅತ್ಯುತ್ತಮ ಯೋಜನೆಗಳನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ. ನವದೆಹಲಿಯಲ್ಲಿ ನಡೆದ 46ನೇ ರಾಷ್ಟ್ರೀಯ ‘ಸ್ಮಾರ್ಟ್ ಮೊಬಿಲಿಟಿ ಸ್ಕಾಚ್’ ಶೃಂಗಸಭೆಯಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಈವರೆಗೆ 150 ಪ್ರಶಸ್ತಿಗಳು ಲಭಿಸಿವೆ.
- ಸ್ಕಾಚ್ ಆರ್ಡರ್ ಆಫ್ ಮೆರಿಟ್ ವಿಭಾಗದಡಿ ಚತುರ ಸಾರಿಗೆ ವ್ಯವಸ್ಥೆ (ಐಟಿಎಸ್), ಮೊಬೈಲ್ ಆ್ಯಪ್, ಇದು ನನ್ನ ಬಸ್, ಸುಧಾರಿತ ರಸ್ತೆ ಸುರಕ್ಷತಾ ಕ್ರಮ, ಫ್ಲೈ ಬಸ್, ಸಿಬ್ಬಂದಿ ಕೆಲಸ ಮತ್ತು ರಜೆ ನಿರ್ವಹಣಾ ವ್ಯವಸ್ಥೆ, ಕಾರ್ಯಸ್ಥಳಗಳಲ್ಲಿ ಸ್ವಚ್ಛತೆ, ಶೇ 100ರಷ್ಟು ಪರ್ಯಾಯ ಇಂಧನ ಬಳಸಿ ಓಡಿಸುವಂತಹ ‘ಬಯೋ ಬಸ್’ ಅಳವಡಿಕೆಗಾಗಿ ಪ್ರಶಸ್ತಿ ಲಭಿಸಿದೆ.
- ಸ್ಮಾರ್ಟ್ ಮೊಬಿಲಿಟಿ ವಿಭಾಗದಡಿಯಲ್ಲಿ ಸಣ್ಣ ಹಾಗೂ ಮಧ್ಯಮ ನಗರಗಳ ಸಾರಿಗೆ ಸೇವೆ, ಮದ್ಯಪಾನ ತಡೆಗೆ ಕಾರ್ಯಕ್ರಮ ಸೇರಿ ಒಟ್ಟು 20 ಪ್ರಶಸ್ತಿ ನೀಡಲಾಗಿದೆ.
ಜಾಗತಿಕ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ನಿಗಾವಹಿಸಲು ಚೀನಾದಿಂದ ಉಪಗ್ರಹ
ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಜಾಗತಿಕ ಇಂಗಾಲ ಡೈ ಆಕ್ಸೈಡ್ (CO2) ಪರಿವೀಕ್ಷಣಾ ಟಾನ್ ಸ್ಯಾಟ್ (TanSat) ಉಪಗ್ರಹವನ್ನು ಚೀನಾ ಯಶಸ್ವಿಯಾಗಿ ಹಾರಿಸಿದೆ. ಅದು ವಾಯುವ್ಯದಲ್ಲಿ ಚೀನಾದ ಗೋಬಿ ಮರುಭೂಮಿಯಲ್ಲಿ ಜಿಯೊಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್ 2D ರಾಕೆಟ್ ಬಳಸಿ ಈ ಉಪಗ್ರಹವನ್ನು ಉಡಾಯಿಸಲಾಯಿತು. ಇದು ಲಾಂಗ್ ಮಾರ್ಚ್ ರಾಕೆಟ್ ಸರಣಿಯ 243ನೇ ಉಡಾವಣೆಯಾಗಿದೆ. ಹಸಿರು ಮನೆ ಅನಿಲ ಮೇಲೆ ನಿಗಾವಹಿಸುವ ಉಪಗ್ರಹಗಳನ್ನು ಈಗಾಗಲೇ ಅಮೆರಿಕ ಮತ್ತು ಜಪಾನ್ ಹೊಂದಿದ್ದು, ಚೀನಾ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದೆ.
ಟಾನ್ ಸ್ಯಾಟ್ ಉಪಗ್ರಹದ ಬಗ್ಗೆ:
- ಟಾನ್ ಸ್ಯಾಟ್ ಉಪಗ್ರಹ ಪ್ರತಿ 16 ಗಂಟೆಗಳಿಗೊಮ್ಮೆ ಜಾಗತಿಕ ಇಂಗಾಲ ಡೈ ಆಕ್ಸೈಡ್ ಮಟ್ಟದ ಮೇಲೆ ನಿಗಾವಹಿಸಲಿದೆ.
- ಟಾನ್ ಸ್ಯಾಟ್ ಉಪಗ್ರಹದ ತೂಕ 620 ಕೆ.ಜಿ. ಭೂಮಿಯ ಮೇಲೆ 700 ಕಿ.ಮೀ ದೂರದಲ್ಲಿ ಸೂರ್ಯ ಸ್ಥಾಯಿ ಕಕ್ಷೆಯಲ್ಲಿ ಕಾರ್ಯನಿರ್ವಹಿಸಲಿದೆ. ಈ ಉಪಗ್ರಹದ ಕಾರ್ಯಾವದಿ ಮೂರು ವರ್ಷ.
- ಈ ಉಪಗ್ರಹದಿಂದ ಹವಾಮಾನ ಬದಲಾವಣೆ ಕುರಿತು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಅಲ್ಲದೇ ಚೀನಾದ ಪರಿಸರ ತಜ್ಷರಿಗೆ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯ ಸೂಕ್ತ ಮಾಹಿತಿಯನ್ನು ರವಾನಿಸಲಿದೆ. ಜಗತ್ತಿನಾದ್ಯಂತ ಸಂಶೋಧಕರು ಇದರ ಮಾಹಿತಿಯನ್ನು ಪಡೆದಕೊಳ್ಳಬಹುದಾಗಿದೆ.
- ಉಪಗ್ರಹದಿಂದ ಹವಾಮಾನ ಬದಲಾವಣೆ ಮತ್ತು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ತಗ್ಗಿಸಲು ಮತ್ತು ಕಾರ್ಬನ್ ಟ್ರೇಡಿಂಗ್ ನಡೆಸಲು ಚೀನಾಗೆ ವರದಾನವಾಗಲಿದೆ.