2016-17ನೇ ಸಾಲಿನ ಬಸವ ಕೃಷಿ ಪ್ರಶಸ್ತಿಗೆ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಆಯ್ಕೆ
ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ವತಿಯಿಂದ ನೀಡಲಾಗುವ ರಾಷ್ಟ್ರಮಟ್ಟದ ಪ್ರಸ್ತಕ ಸಾಲಿನ ಬಸವ ಕೃಷಿ ಪ್ರಶಸ್ತಿಗೆ ತ್ರಿಪುರ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರನ್ನು ಆಯ್ಕೆಮಾಡಲಾಗಿದೆ. ಪ್ರಶಸ್ತಿಯನ್ನು ಜನವರಿ 15ರ ಸಂಕ್ರಾಂತಿಯಂದು ಕೂಡಲ ಸಂಗಮದ ಸಭಾಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
ಮಾಣಿಕ್ ಸರ್ಕಾರ್:
- ಜನವರಿ 22, 1949ರಲ್ಲಿ ಜನಿಸಿರುವ ಮಾಣಿಕ್ ಸರ್ಕಾರ್ ರವರು 11ನೇ ಮಾರ್ಚ್ 1998 ರಿಂದ ತ್ರಿಪುರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
- 2013 ರಲ್ಲಿ ನಾಲ್ಕನೇ ಬಾರಿಗೆ ತ್ರಿಪುರದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
- ದೇಶದಲ್ಲೆ ಅತ್ಯಂತ ಸರಳವಾಗಿ ಜೀವನ ನಡೆಸುತ್ತಿರುವ ಮುಖ್ಯಮಂತ್ರಿ ಎಂಬ ಖ್ಯಾತಿ ಸರ್ಕಾರ್ ಗೆ ಸಂದಿದೆ. ಸರ್ಕಾರ್ ರವರು ಮುಖ್ಯಮಂತ್ರಿಯಾಗಿದ್ದರು ಸ್ವಂತ ಮನೆ, ಕಾರು ತಮ್ಮ ಹೆಸರಿನಲ್ಲಿ ಹೊಂದಿಲ್ಲ.
- ಕೃಷಿಕರ, ಕಾರ್ಮಿಕರ ಅಭಿವೃದ್ಧಿಗೆ ಸಲ್ಲಿಸಿರುವ ಸೇವೆಯನ್ನು ಗಮನಿಸಿ ಇವರನ್ನು ಬಸವ ಕೃಷಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
ಬಸವಕೃಷಿ ಪ್ರಶಸ್ತಿ:
- ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ವತಿಯಿಂದ ಬಸವ ಕೃಷಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿ 1 ಲಕ್ಷ ರೂ. ನಗದು, ತಾಮ್ರಪತ್ರ ಸ್ಮರಣಿಕೆ ಒಳಗೊಂಡಿರುತ್ತದೆ.
- ಈಗಾಗಲೇ ಈ ಪ್ರಶಸ್ತಿಯನ್ನು ಜಲತಜ್ಞ ರಾಜೇಂದ್ರಸಿಂಗ್, ಗಾಂಧಿವಾದಿ ಅಣ್ಣಾ ಹಜಾರೆ, ಪರಿಸರ ವಾದಿ ಮೇಧಾ ಪಾಟ್ಕರ್ ಹಾಗೂ ಉದ್ಯೋಗಖಾತ್ರಿ ಯೋಜನೆಯ ರೂವಾರಿ ಡಾ.ಬಾಬಾ ಅಡಾವೆ ಅವರಿಗೆ ಪ್ರದಾನ ಮಾಡಲಾಗಿದೆ.
ಮೈಸೂರು ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಹಕ್ಕಿಜ್ವರ ಪತ್ತೆ
ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಹಕ್ಕಿಜ್ವರ ಪತ್ತೆಯಾಗಿದೆ (ಎಚ್5ಎನ್8 ವೈರಾಣು). . ಮೃಗಾಲಯದಲ್ಲಿ ವಲಸೆ ಹಕ್ಕಿಗಳು ಮೃತಪಟ್ಟಿದ್ದು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಆಂಡ್ ಅನಿಮಲ್ ಡಿಸೀಸ್ (ಎನ್ಐಎಚ್ಎಸ್ಎಡಿ) ಸಂಸ್ಥೆಯು ಮೃತಪಟ್ಟ ಹಕ್ಕಿಗಳಲ್ಲಿ ಎಚ್5ಎನ್8 ವೈರಾಣು ಇರುವುದನ್ನು ದೃಢಪಡಿಸಿರುವ ಹಿನ್ನೆಲೆಯಲ್ಲಿ ಮೃಗಾಲಯವನ್ನು 125 ವರ್ಷಗಳ ಇತಿಹಾ ಸದಲ್ಲಿ ಇದೇ ಮೊದಲ ಬಾರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಜ.4 ರಿಂದ ಫೆ.2ರವರೆಗೆ ಬಂದ್ ಮಾಡಲಾಗುತ್ತಿದೆ.
ಪ್ರಮುಖಾಂಶಗಳು:
- ಮೃಗಾಲಯದಲ್ಲಿ 1 ಸ್ಪಾಟ್ ಬಿಲ್ಡ್ ಪೆಲಿಕನ್ ಮತ್ತು 3 ಗ್ರೇಯ್ಲಾಗ್ ಗೂಸ್ ಮೃತಪಟ್ಟಿದ್ದವು. ಕೆಲವು ದಿನಗಳ ನಂತರ ಮತ್ತೆ 1 ಸ್ಪಾಟ್ ಬಿಲ್ಡ್ ಪೆಲಿಕಾನ್ ಮತ್ತು 1 ಗ್ರೇಯ್ಲಾಗ್ ಗೂಸ್ ಮೃತಪಟ್ಟಿರುವುದು ಕಂಡು ಬಂತು.
- ಮೃತ ಹಕ್ಕಿಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದಾಗ ಮೃತಪಟ್ಟ ಹಕ್ಕಿಗಳಲ್ಲಿ ಎಚ್5ಎನ್8 ವೈರಾಣು ಇರುವುದು ದೃಢಪಟ್ಟಿದೆ.
ಹಕ್ಕಿ ಜ್ವರದ ಬಗ್ಗೆ:
- ವೈಜ್ಞಾನಿಕವಾಗಿ ಹಕ್ಕಿ ಜ್ವರವನ್ನು ಹಕ್ಕಿ ಇನ್‌ಫ್ಲೂಯೆನ್‌ಜ ಅಥವಾ ಬರ್ಡ್ ಫ್ಲೂ ಎನ್ನುತ್ತಾರೆ. ಈ ಸೋಂಕಿಗೆ ಮುಖ್ಯ ಕಾರಣ ಎಚ್5ಎನ್ ಎಂಬ ಹೆಸರಿನ ವೈರಸ್. ಇದೊಂದು ತೀವ್ರ ಸಾಂಕ್ರಾಮಿಕ ಪಿಡುಗು. ಕೋಳಿಗಳ ಗುಂಪಿನಲ್ಲಿ ಒಂದು ಕೋಳಿಗೆ ಸೋಂಕು ಅಂಟಿದ್ದರೂ ಸಾಕು 48 ಗಂಟೆಗಳ ಒಳಗೆ ಗುಂಪಿನ ಎಲ್ಲ ಕೋಳಿಗಳೂ ಸೋಂಕಿನಿಂದ ಸತ್ತೇ ಹೋಗುತ್ತವೆ.
- ಹಕ್ಕಿ ಜ್ವರ ಹೊಸದಾಗಿ ಹುಟ್ಟಿಕೊಂಡ ಕಾಯಿಲೆಯಲ್ಲ. ನೂರಾರು ವರ್ಷಗಳ ಹಿಂದೆಯೇ ಇಟಲಿಯಲ್ಲಿ ಹಕ್ಕಿ ಜ್ವರ ಕಂಡಿರುವುದಕ್ಕೆ ಪುರಾವೆಗಳಿವೆ. 2003ರಲ್ಲಿ ದಕ್ಷಿಣ ಪೂರ್ವ ಏಷ್ಯಾದಲ್ಲಿ ಹರಡಿದ್ದ ಮಹಾಪಿಡುಗಿನಲ್ಲಿ ಕಾಯಿಲೆ ನಿಯಂತ್ರಿಸಲು ಒಂದೂವರೆ ಕೋಟಿ ಕೋಳಿಗಳನ್ನು ಕೊಲ್ಲಲಾಗಿದೆ. 2004ರಲ್ಲೂ ಮತ್ತೊಂದು ಸಣ್ಣ ಪಿಡುಗು ಉಂಟಾಗಿತ್ತು.
- ಹಕ್ಕಿ ಜ್ವರ ಹೆಚ್ಚಾಗಿ ಹಕ್ಕಿಗಳಿಗೆ ಬರುತ್ತದೆ. ಕೆಲವೊಮ್ಮೆ ಹಂದಿಗಳಿಗೂ ಅಂಟುತ್ತದೆ. ಹೀಗಾಗಿ ಈ ಕಾಯಿಲೆ ಹಂದಿ ಜ್ವರ- ಹಕ್ಕಿ ಜ್ವರ ಎಂದೇ ಹೆಸರಾಗಿದೆ. ಕೋಳಿ, ಬಾತು, ಎಮು, ವಲಸೆ ಹಕ್ಕಿಗಳು ಹಾಗೂ ಹಂದಿಯನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಾಣಿಗಳಲ್ಲಿ ಈ ಕಾಯಿಲೆ ಕಂಡುಬಂದಿರುವನಿದರ್ಶನಗಳಿಲ್ಲ.
- ಮಾನವನಿಗೆ ಈ ಕಾಯಿಲೆ ಹತ್ತಿದ ಪ್ರಪ್ರಥಮ ಪ್ರಕರಣ 1997ರಲ್ಲಿ ಹಾಂಕಾಂಗ್‌ನಲ್ಲಿ ವರದಿಯಾಗಿದೆ. ಆಗ ಅಲ್ಲಿ 18 ಜನರಿಗೆ ಕಾಯಿಲೆ ತಗುಲಿದ್ದು, ಅದರಲ್ಲಿ ಆರು ಜನ ಬಲಿಯಾಗಿದ್ದರು. 2008ರ ಮಾರ್ಚ್‌ವರೆಗೆ 48 ದೇಶಗಳಲ್ಲಿ 372 ಜನರಿಗೆ ಹಕ್ಕಿ ಜ್ವರ ತಗುಲಿದೆ. ಅವರಲ್ಲಿ 235 ಮಂದಿ ಸಾವಿಗೀಡಾಗಿದ್ದಾರೆ.
ಕಾಯಿಲೆ ಹರಡುವ ವಿಧಾನ:
- ಸೋಂಕಿಗೆ ಒಳಗಾದ ಹಕ್ಕಿಯ ಮಲ, ಮೂತ್ರ, ಸಿಂಬಳ ಮತ್ತು ಉಸಿರು ರೋಗಾಣುಗಳಿಂದ (ವೈರಸ್) ತುಂಬಿರುತ್ತದೆ. ಹಕ್ಕಿ ವಾಸಿಸುವ ಸ್ಥಳ, ಅಲ್ಲಿನ ಗಾಳಿ, ಸಾಕಣೆಗೆ ಬಳಸುವ ಉಪಕರಣ ಎಲ್ಲವೂ ವೈರಸ್‌ಮಯವಾಗಿರುತ್ತವೆ. ಇವುಗಳ ಸಂಪರ್ಕಕ್ಕೆ ಬರುವ ಎಲ್ಲ ಪಕ್ಷಿಗಳಿಗೂ ಸೋಂಕು ತಗುಲುತ್ತದೆ. ಕೋಳಿ ಫಾರಂನಲ್ಲಿ ಒಂದು ಕೋಳಿಗೆ ಸೋಂಕು ಉಂಟಾದರೆ ಕೆಲವೇ ಗಂಟೆಗಳಲ್ಲಿ ಎಲ್ಲ ಕೋಳಿಗಳಿಗೂ ಕಾಯಿಲೆ ಅಂಟಿಕೊಳ್ಳುತ್ತದೆ. ಪಕ್ಷಿಗಳಿಗೆ ಹಂದಿಯಿಂದ, ಹಂದಿಗಳಿಗೆ ಪಕ್ಷಿಗಳಿಂದ ಸೋಂಕು ಅಂಟುವುದೂ ಉಂಟು. ಅತಿ ಅಪರೂಪವಾಗಿ ಪಕ್ಷಿಗಳ ಕಾಯಿಲೆ ಮಾನವನಿಗೆ ಅಂಟುವುದೂ ಇದೆ. ಹೀಗಾಗಿ ಕೋಳಿ ಫಾರಂನಲ್ಲಿ ಕೆಲಸ ಮಾಡುವವರು, ಕೋಳಿ ಸಾಕಿರುವ ಮನೆಯವರು ಹಕ್ಕಿ ಜ್ವರಕ್ಕೆ ಸೆರೆಯಾಗುತ್ತಾರೆ. ಪಕ್ಷಿಗಳನ್ನು, ಮೊಟ್ಟೆಯನ್ನು ಮಾರುವವರಿಗೂ, ಕತ್ತರಿಸುವವರಿಗೂ, ಕೋಳಿ ಮಾಂಸದ ಅಡುಗೆ ಮಾಡುವವರಿಗೂ ಹಕ್ಕಿ ಜ್ವರ ಅಂಟುವ ಸಂಭವ ಇರುತ್ತದೆ. ರೋಗಾಣುಗಳು ಮುಖ್ಯವಾಗಿ ಉಸಿರಾಡುವ ಗಾಳಿಯೊಂದಿಗೆ ಮಾನವನ ದೇಹ ಸೇರುತ್ತವೆ. ಮನುಷ್ಯನಿಗೆ ಅಂಟಿದ ಸೋಂಕು ಮತ್ತೊಬ್ಬರಿಗೆ ಅಂಟುವುದಿಲ್ಲ. ಹಾಗೇನಾದರೂ ಆಗಿದ್ದರೆ ಸೋಂಕು ಅತ್ಯಂತ ತೀವ್ರಗತಿಯಲ್ಲಿ ಹರಡಿ ಮನುಷ್ಯರ ಮಾರಣಹೋಮವೇ ನಡೆದುಹೋಗುತ್ತಿತ್ತು.
- ವಲಸೆ ಹೋಗುವ ಹಕ್ಕಿ, ಸಮುದ್ರ ಪಕ್ಷಿ, ಅಂತರ ರಾಷ್ಟ್ರೀಯ ಆಮದು- ರಫ್ತಿಗೆ ಒಳಗಾಗುವ ಹಕ್ಕಿ, ಹಕ್ಕಿಯ ಉತ್ಪನ್ನಗಳು ವಿಶ್ವವ್ಯಾಪಿ ಹಕ್ಕಿ ಜ್ವರ ಹರಡಲು ಸಾಧನವಾಗುತ್ತವೆ. ಹಕ್ಕಿಯ ಮಲ, ಮೂತ್ರ, ಮೂಗಿನ ದ್ರವವನ್ನು ಪರೀಕ್ಷೆ ಮಾಡಿ ಕಾಯಿಲೆಯ ಇರುವಿಕೆಯನ್ನು ತಿಳಿಯಬಹುದು.
ಹಕ್ಕಿ ಜ್ವರ ನಿಯಂತ್ರಣ ಹೇಗೆ?
- ಹಕ್ಕಿ ಜ್ವರವನ್ನು ತಡೆಗಟ್ಟುವುದೆಂದರೆ ಎಚ್5ಎನ್ ವೈರಸ್‌ಗಳನ್ನು ನಾಶಪಡಿಸುವುದು ಎಂದರ್ಥ. ಹೀಗಾಗಿ ಯಾವುದೇ ಹಕ್ಕಿಗೆ ಜ್ವರ ಕಂಡರೆ ತಕ್ಷಣ ಸುತ್ತಮುತ್ತಲಿನ ಹಕ್ಕಿಗಳನ್ನೆಲ್ಲ (ಕೋಳಿ) ಹತ್ಯೆ ಮಾಡಬೇಕಾಗುತ್ತದೆ. ಹಕ್ಕಿ ಜ್ವರದ ವೈರಸ್‌ಗಳನ್ನು ಅವುಗಳ ಸಿಂಬಳ, ಮಲ, ಮೂತ್ರ ಇತ್ಯಾದಿಗಳನ್ನು ಭೋಪಾಲದಲ್ಲಿರುವ ಪ್ರಯೋಗಾಲಯದಲ್ಲಿ ಪತ್ತೆ ಮಾಡಲಾಗುತ್ತದೆ.
- ಹಕ್ಕಿ ಸಾಕುವ ಸ್ಥಳದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಹಕ್ಕಿ ಜ್ವರದಿಂದ ಸತ್ತ ಕೋಳಿಯನ್ನು ಐದಾರು ಪದರ ಸುಣ್ಣ ಹಾಗೂ ಮಣ್ಣು ಹಾಕಿ ಹೂಳಬೇಕು ಅಥವಾ ಸುಟ್ಟುಹಾಕಬೇಕು
- ಹಕ್ಕಿ ಜ್ವರ ಕಂಡುಬಂದ ಸಮಯದಲ್ಲಿ ಯಾರಿಗಾದರೂ ಅತಿಯಾದ ಜ್ವರ, ಉಸಿರಾಟದ ತೊಂದರೆ ಕಂಡರೆ ಅಲಕ್ಷಿಸದೆ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು
ಹಕ್ಕಿ ಜ್ವರ ಕಂಡುಬಂದ ಸ್ಥಳಕ್ಕೆ ಭೇಟಿ ನೀಡುವವರು ತಮಗೆ ಕಾಯಿಲೆ ಬರದಂತೆ ತಡೆಯಲು ದಿನಕ್ಕೊಂದರಂತೆ ಏಳು ದಿನ `ಟ್ಯಾಮಿಫ್ಲೂ~ ಮಾತ್ರೆ ಸೇವಿಸ ಬೇಕಾಗುತ್ತದೆ.
ಹಕ್ಕಿ ಜ್ವರದ ಲಕ್ಷಣಗಳು:
ಹಕ್ಕಿ ಜ್ವರದ ಸೋಂಕಿಗೆ ಒಳಗಾಗುವ ವ್ಯಕ್ತಿಗಳಲ್ಲಿ 2-3 ದಿನದಲ್ಲಿ ರೋಗ ಲಕ್ಷಣಗಳು ಪ್ರಕಟವಾಗುತ್ತವೆ. ಅತಿಯಾದ ಜ್ವರ, ಕೆಮ್ಮು, ತಲೆನೋವು, ಉಸಿರಾಡಲು ತೊಂದರೆಯಾಗುವುದು ಕಾಯಿಲೆಯ ಲಕ್ಷಣಗಳು. ಎಕ್ಸ್‌ರೇ ಪರೀಕ್ಷೆಯಿಂದ ಎದೆಯಲ್ಲಿ ಉಂಟಾಗಿರುವ ಬದಲಾವಣೆಗಳು ಎದ್ದು ಕಾಣುತ್ತವೆ. ಹಕ್ಕಿ ಜ್ವರದಿಂದ ಸಾವುಂಟಾಗುವುದು ಉಸಿರಾಟ ನಿಲ್ಲುವುದರಿಂದ. ರೋಗಿಯ ಮೂಗು ಮತ್ತು ಗಂಟಲಿನ ದ್ರವವನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿ ರೋಗ ಅಂಟಿರುವುದನ್ನು ದೃಢಪಡಿಸಿಕೊಳ್ಳಬಹುದು.
ಲಭ್ಯವಿರುವ ಲಸಿಕೆ:
ಟ್ಯಾಮಿಫ್ಲೂ ಮತ್ತು ರಿಲಿಂಜ್ ಎಂಬ ಔಷಧಿಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ. ಆದಾಗ್ಯೂ ಕಾಯಿಲೆ ಆರಂಭಗೊಂಡ 48 ಗಂಟೆಗಳೊಳಗೆ ಔಷಧಿ ಸೇವನೆ ಪ್ರಾರಂಭಿಸಿದರೆ ರೋಗದ ತೀವ್ರತೆ ಬಹಳಷ್ಟು ಕಡಿಮೆಯಾಗುತ್ತದೆ. ಸಾವು ಉಂಟಾಗುವ ಸಾಧ್ಯತೆ ಕ್ಷೀಣಿಸುತ್ತದೆ. ಈ ಔಷಧಿಯ ಜೊತೆ ಆ್ಯಂಟಿ ಬಯೊಟಿಕ್‌ಗಳು ಮತ್ತು ವೈದ್ಯರು- ದಾದಿಯರ ಶುಶ್ರೂಷೆ ಅತ್ಯಗತ್ಯ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಆಂಡ್ ಅನಿಮಲ್ ಡಿಸೀಸ್:
- ಎನ್ಐಎಚ್ಎಸ್ಎಡಿ ಮಧ್ಯಪ್ರದೇಶದ ಭೂಪಾಲ್ ನಲ್ಲಿದೆ. ಪ್ರಾಣಿಗಳ ವಿಲಕ್ಷಣ ಮತ್ತು ಹೊಸದಾಗಿ ಸಂಭವಿಸುವ ರೋಗಕಾರಗಳ ಮೇಲೆ ಸಂಶೋಧನೆ ನಡೆಸುವ ಭಾರತದ ಪ್ರಧಾನ ಸಂಸ್ಥೆಯಾಗಿದೆ. ಎನ್ಐಎಚ್ಎಸ್ಎಡಿ ಮುಂಚೆ ಇಂಡಿಯನ್ ವೆಟರಿನರಿ ರಿಸರ್ಚ್ ಇನ್ಸ್ಟಿಟ್ಯೂಟ್ ನಡಿ ಕಾರ್ಯನಿರ್ವಹಿಸುತ್ತಿದ್ದು, ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ ಲ್ಯಾಬೋರೆಟರಿ ಎನ್ನಲಾಗುತ್ತಿತ್ತು. 8ನೇ ಆಗಸ್ಟ್ 2014ರಿಂದ ಈ ಸಂಸ್ಥೆಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಆಂಡ್ ಅನಿಮಲ್ ಡಿಸೀಸ್ ಯೆಂದು ಮರುನಾಮಕರಣ ಮಾಡಲಾಗಿದ್ದು ಐಸಿಎಆರ್ ನಡಿ ಕಾರ್ಯನಿರ್ವಹಿಸುತ್ತಿದೆ.
ಕೊಪ್ಪಳ್ ನೀರಾವರಿ ಯೋಜನೆಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆಗೆ ಕ್ರಮ
ನಾಲೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಬಾಗಲಕೋಟೆಯ ಆಲಮಟ್ಟಿ ಬಲ ಮೇಲ್ಡಂಎ ನಾಲೆಯ ಮೇಲೆ ಸೌರ ಫಲಕ ಅಳವಡಿಸಿ ಸೌರ ವಿದ್ಯುತ್ ಉತ್ಪಾದನೆ ಯಶಸ್ವಿಯಾಗಿರುವ ಹಿನ್ನಲೆಯಲ್ಲಿ, ಇದೇ ಮಾದರಿಯನ್ನು ಅನುಸರಿಸಿ ರಾಜ್ಯ ಜಲಸಂಪನ್ಮೂಲ ಇಲಾಖೆ, ನಾರಾಯಣಪುರ ಜಲಾಶಯದ ಕೊಪ್ಪಳ್ ನೀರಾವರಿ ಯೋಜನೆಯಲ್ಲಿ ಸೌರ ಫಲಕಗಳನ್ನು ಅಳವಡಿಸಲಿದೆ.
ಆಲಮಟ್ಟಿ ಸೌರ ವಿದ್ಯುತ್ ಯೋಜನೆ:
ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಬಲ ಮೇಲ್ದಂಡೆ ನಾಲೆಯ ಮೇಲೆ 6.35ಕಿ.ಮೀ ಉದ್ದಕ್ಕೆ ಸೌರ ಫಲಕಗಳನ್ನು ಅಳವಡಿಸಿ 1 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವಲ್ಲಿ ಯಶಸ್ವಿಯಾಗಿದೆ. ವಿಜಯಪುರದಲ್ಲಿ ತಾಪಮಾನ ಅಧಿಕವಾಗಿರುವುದರಿಂದ ನಾಲೆಗಳಲ್ಲಿ ನೀರಿನ ಆವಿ ಪ್ರಮಾಣ ಅಧಿಕವಾಗಿರುತ್ತದೆ. ನಾಲೆಯ ಮೇಲೆ ಸೌರಫಲಕಗಳನ್ನು ಅಳವಡಿಸುವುದರಿಂದ ನೀರು ಆವಿಯಾಗುವುದರನ್ನು ತಪ್ಪಿಸುವುದರ ಜೊತೆಗೆ ವಿದ್ಯುತ್ ಅನ್ನು ಉತ್ಪಾದಿಸಬಹುದು. ನಾಲೆಗಳ ಮೇಲೆ ಸೌರ ಫಲಕ ಅಳವಡಿಸಿ ವಿದ್ಯುತ್ ಉತ್ಪಾದಿಸುವ ಈ ಯೋಜನೆ ದಕ್ಷಿಣ ಭಾರತದಲ್ಲಿ ಮೊದಲು ಎನ್ನಲಾಗಿದೆ.
- ಬೆಂಗಳೂರು ಮೂಲದ ಸನ್ ಎಡಿಸನ್ ಎನರ್ಜಿ ಇಂಡಿಯಾ (Sunedison Energy India) ಈ ಯೋಜನೆಯನ್ನು ಅನುಷ್ಟಾನಗೊಳಿಸಿದ್ದು, ಐದು ವರ್ಷಗಳ ಕಾಲ ನಿರ್ವಹಣೆ ಮಾಡಲಿದೆ.
- ಒಟ್ಟು 3,280 ಸೌರ ಫಲಕಗಳನ್ನು ನಾಲೆಯ ಮೇಲೆ ಅಳವಡಿಸಲಾಗಿದೆ. ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಉಕ್ಕಿನ ರಚನೆಗಳ ಮೇಲೆ ಸೌರ ಫಲಕಗಳನ್ನು ಸ್ಥಿರವಾಗಿ ಇರಿಸಲಾಗಿದೆ.
- ಈ ಯೋಜನೆಯಿಂದ ಉತ್ಪಾದನೆಯಾಗುವ ಡಿಸಿ ವಿದ್ಯುತ್ ಅನ್ನು ಪಕ್ಕದಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿರುವ ಇನ್ವರ್ಟರ್ ಗೆ ರವಾಸಿ ಎಸಿ ವಿದ್ಯುತ್ ಆಗಿ ಪರಿವರ್ತಿಸಲಾಗುವುದು.
- ಯೋಜನೆಯಿಂದ ಉತ್ಪಾದಿಸಲಾಗುವ 1 ಮೆಗಾ ವ್ಯಾಟ್ ವಿದ್ಯುತ್ ಅನ್ನು ರಾಮಪುರ ವಿದ್ಯುತ್ ಸ್ಥಾವರಕ್ಕೆ ರವಾನಿಸಲಾಗುತ್ತಿದೆ. ಮೊದಲ ಹಂತದಲ್ಲಿ 12 ಹಳ್ಳಿಗಳಿಗೆ ವಿದ್ಯುತ್ ಅನ್ನು ಸರಬರಾಜು ಮಾಡಲಾಗುವುದು. ಈ ವಿದ್ಯುತ್ ಬಳಸಿ ಎಡ ಮತ್ತು ಬಲ ಕಾಲುವೆಯಿಂದ ಪಂಪ್ ಮೂಲಕ ನೀರು ಎತ್ತಲಾಗುವುದು.
- ಉತ್ಪಾದನೆ ಹೆಚ್ಚಳವಾದರೆ ಪ್ರತಿ ಯೂನಿಟ್ ವಿದ್ಯುತ್ ಗೆ ರೂ 3.60 ದಂತೆ ಮಾರಾಟ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಹೆಸ್ಕಾಂ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಕೊಪ್ಪಳ್ ನಾಲೆಗೂ ಯೋಜನೆ: ನಾರಾಯಣಪುರ ಜಲಾಶಯ ಹಿನ್ನೀರು ಬಳಕೆಗೆ ಕೈಗೆತ್ತಿಕೊಂಡ ಕೊಪ್ಪಳ್ ನೀರಾವರಿ ಯೋಜನೆ ಹುನಗುಂದ ತಾಲೂಕಿಗೆ ಅನುಕೂಲವಾಗಲಿದೆ. ನಾಲೆಯ ಮೇಲೆ ಸುಮಾರು 10 ಕಿಲೋ ಮೀಟರ್ ಉದ್ದಕ್ಕೂ ಪ್ಯಾನಲ್ ಅಳವಡಿಕೆಯಿಂದ 10 ಮೆಗಾವಾಟ್ ವಿದ್ಯುತ್ ಉತ್ಪಾದನೆ ಯೋಜನೆಗೆ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ.
ಅನುಕೂಲಗಳೇನು?
- ನಾಲೆಯಲ್ಲಿ ಹರಿಯುವ ನೀರು ಬಿಸಿಲಿನ ಝುಳಕ್ಕೆ ಆವಿಯಾಗಿ ಹೋಗುವುದನ್ನು ತಡೆಯಬಹುದು.
- ಸುತ್ತಲಿನ ರೈತರಿಗೆ ವಿದ್ಯುತ್ ಪೂರೈಕೆ ಮತ್ತು ವಿದ್ಯುತ್ ವಿಕೇಂದ್ರೀಕರಣಕ್ಕೆ ಒತ್ತು.
- ದಕ್ಷಿಣ ರಾಜ್ಯದಲ್ಲಿಯೇ ಪ್ರಥಮವಾಗಿ ನಾಲೆ ಮೇಲೆ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
- ಸೋಲಾರ್ ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಳ್ಳುವ ಅಗತ್ಯವಿಲ್ಲ.
Thanks
It’s very helpful to me cause of my study…
Very useful
Nice