ಐಎನ್ಎಸ್ ಖಾಂಡೇರಿ ಜಲಾಂತರ್ಗಾಮಿಗೆ ಚಾಲನೆ
ಸ್ಕಾರ್ಪೀನ್ ಸರಣಿಯ ಎರಡನೆಯ ಜಲಾಂತರ್ಗಾಮಿ ನೌಕೆ ‘ಖಾಂಡೇರಿ’ಯನ್ನು ಮಝಗಾನ್ ಡಾಕ್ ಶಿಪ್ ಬಿಲ್ಡರ್ ಲಿಮಿಟೆಡ್, ಮುಂಬೈ, ಮಹಾರಾಷ್ಟ್ರದಲ್ಲಿ ಉದ್ಘಾಟಿಸಲಾಯಿತು. ಸ್ಕಾರ್ಪೀನ್ ಸರಣಿಯ ಆರು ಜಲಾಂತರ್ಗಾಮಿಗಳ ಪೈಕಿ ಇದು ಎರಡನೇಯದಾಗಿದೆ. ಭಾರತೀಯ ನೌಕಪಡೆಯ “ಪ್ರಾಜೆಕ್ಟ್ 75”ರಡಿ ಮಝಗಾನ್ ಡಾಕ್ ಶಿಪ್ ಬಿಲ್ಡರ್ ಲಿಮಿಟೆಡ್ ಮತ್ತು ಫ್ರಾನ್ಸ್ ನ ಡಿಸಿಎನ್ಎಸ್ ಸಹಭಾಗಿತ್ವದಡಿ ಇದನ್ನು ಅಭಿವೃದ್ದಿಪಡಿಸಲಾಗಿದೆ.
ಖಾಂಡೇರಿ ಜಲಾಂತರ್ಗಾಮಿ ಪ್ರಮುಖಾಂಶಗಳು:
- ಛತ್ರಪತಿ ಶಿವಾಜಿ ನಿಯಂತ್ರಣದಲ್ಲಿದ್ದ ‘ಖಾಂಡೇರಿ’ ಕೋಟೆಯ ಹೆಸರನ್ನೇ ಈ ಜಲಾಂತರ್ಗಾಮಿಗೆ ಇಡಲಾಗಿದೆ. ಸಮುದ್ರದ ನಡುವೆ ಇದ್ದ ಈ ಕೋಟೆಯ ಕಾರಣದಿಂದಾಗಿ ಶಿವಾಜಿಯ ನೌಕಾದಳ 17ನೇ ಶತಮಾನದಲ್ಲಿ ಪಾರಮ್ಯ ಸಾಧಿಸಿತ್ತು ಎನ್ನಲಾಗಿದೆ. ಖಾಂಡೇರಿ ಅನ್ನುವುದು ಟೈಗರ್ ಶಾರ್ಕಿನ ಹೆಸರು ಸಹ ಆಗಿದೆ.
- ಖಾಂಡೇರಿ ಜಲಾಂತರ್ಗಾಮಿಯು ರಹಸ್ಯವಾಗಿ ಕಾರ್ಯಾಚರಣೆ ನಡೆಸುವಸಾಮರ್ಥ್ಯವನ್ನು ಹೊಂದಿದೆ.ನಿಖರ ದಾಳಿ ನಡೆಸುವ ಶಸ್ತ್ರಾಸ್ತ್ರ ಬಳಸಿ ವೈರಿಗೆ ಭಾರಿ ಹಾನಿ ಉಂಟು ಮಾಡಲಿದೆ.
- ನೌಕೆಗಳನ್ನು ಧ್ವಂಸಗೊಳಿಸುವ ಕ್ಷಿಪಣಿ, ಸ್ಫೋಟಕ ಬಳಸುವ ಸಾಮರ್ಥ್ಯವನ್ನು ಸಹ ಹೊಂದಿದೆ. ಈ ಜಲಾಂತರ್ಗಾಮಿ ಎಲ್ಲಿದೆ ಎಂದು ಪತ್ತೆ ಮಾಡುವುದು ತೀರಾ ಕಷ್ಟ. ಶತ್ರು ದೇಶದ ಕಡೆಯಿಂದ ನುಗ್ಗುವ ಜಲಾಂತರ್ಗಾಮಿಗಳನ್ನು ಹಿಮ್ಮೆಟ್ಟಿಸಲು ಸಹ ಈ ಜಲಾಂತರ್ಗಾಮಿಗಳನ್ನು ಬಳಸಿಕೊಳ್ಳಬಹುದಾಗಿದೆ.
ಹಿನ್ನಲೆ:
ಭಾರತೀಯ ನೌಕಪಡೆ “ಪ್ರಾಜೆಕ್ಟ್ 75”ರಡಿ ಫ್ರಾನ್ಸ್ ನ ಡಿಸಿಎನ್ಎಸ್ ತಂತ್ರಜ್ಞಾನ ಸಹಾಯದಡಿ ಒಟ್ಟು ಆರು ಸ್ಕಾರ್ಪೀನ್ ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತದೆ. ಈ ಒಪ್ಪಂದಕ್ಕೆ 2005ರಡಿ ಸಹಿ ಹಾಕಲಾಯಿತು. ಈ ಸರಣಿಯ ಮೊದಲ ಜಲಾಂತರ್ಗಾಮಿ “ಐಎನ್ಎಸ್ ಕಲ್ವರಿ” ಪ್ರಯೋಗಾರ್ಥ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದು, ಶೀರ್ಘವೇ ಸೇನೆಗೆ ಸೇರ್ಪಡೆಗೊಳ್ಳಲಿದೆ. ಉಳಿದ ನಾಲ್ಕು ಜಲಾಂತರ್ಗಾಮಿಗಳನ್ನು ಐಎನ್ಎಸ್ ಖಾಂಡೇರಿ ನಂತರ ಒಂಬತ್ತು ತಿಂಗಳ ಅಂತರದಂತೆ ಕಾರ್ಯಗತಗೊಳಿಸಲಾಗುವುದು. ಪ್ರಸ್ತುತ ಭಾರತದ ನೌಕಾಪಡೆಯ ಬಳಿ 13 ಸಂಪ್ರದಾಯಿಕ ನೌಕೆಗಳು ಹಾಗೂ ಎರಡು ಪರಮಾಣು ಜಲಾಂತರ್ಗಮಿಗಳಿವೆ.
ಪಂಜಾಬಿನ ಮಾಜಿ ಮುಖ್ಯಮಂತ್ರಿ ಸುರ್ಜಿತ್ ಸಿಂಗ್ ಬರ್ನಾಲಾ ನಿಧನ
ಪಂಜಾಬ್ನ ಮಾಜಿ ಮುಖ್ಯಮಂತ್ರಿ ಸುರ್ಜಿತ್ ಸಿಂಗ್ ಬರ್ನಾಲಾ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. 80ರ ದಶಕದಲ್ಲಿ ಪಂಜಾಬ್ನಲ್ಲಿ ಉಗ್ರಗಾಮಿ ಚಟುವಟಿಕೆಗಳು ಪರಾಕಾಷ್ಠೆಗೆ ತಲುಪಿದ್ದ ಸಂದರ್ಭದಲ್ಲಿ ಸುರ್ಜಿತ್ ಸಿಂಗ್ ಬರ್ನಾಲಾ ಆ ರಾಜ್ಯವನ್ನು ಮುನ್ನಡೆಸಿದ್ದರು. ಅವರು 1985 ರಿಂದ 1987ರವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಪ್ರಮುಖಾಂಶಗಳು:
- ಬರ್ನಾಲಾ, 1985ರಲ್ಲಿ ಉಗ್ರಗಾಮಿ ಚಟುವಟಿಕೆಗಳಿಂದ ಪೀಡಿತವಾಗಿದ್ದ ಪಂಜಾಬ್ನಲ್ಲಿ ಶಾಂತಿ ಸ್ಥಾಪನೆಯ ಉದ್ದೇಶದಿಂದ ಏರ್ಪಟ್ಟಿದ್ದ ರಾಜೀವ್-ಲೊಂಗೊವಾಲ ಒಪ್ಪಂದದ ಬಳಿಕ ಆ ರಾಜ್ಯದ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದರು. 1
- 991ರಲ್ಲಿ ಚಂದ್ರಶೇಖರ್ ಅಲ್ಪಾವಧಿಗೆ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬರ್ನಾಲ ತಮಿಳುನಾಡು ರಾಜ್ಯಪಾಲರಾಗಿದ್ದರು.
- ಬರ್ನಾಲ ಅವರು ಉತ್ತರಾಖಂಡ, ಆಂಧ್ರಪ್ರದೇಶ, ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು.
- 1977ರಿಂದ 1978ರವರೆಗೆ ಅವರು ಮುರಾರ್ಜಿ ದೇಸಾಯಿ ಸರಕಾರದಲ್ಲಿ ಕೃಷಿ ಸಚಿವರಾಗಿದ್ದರು. ಅಟಲ್ಬಿಹಾರಿ ವಾಜಪೇಯಿ ನೇತೃತ್ವದ ಸಂಪುಟದಲ್ಲಿಯೂ ಅವರು ರಾಸಾಯನಿಕ ಹಾಗೂ ರಸಗೊಬ್ಬರ ಸಚಿವರಾಗಿದ್ದರು.
ಪಿನಾಕ ರಾಕೆಟ್ ಉಡಾವಣೆ ಯಶಸ್ವಿಯಾಗಿ ನಡೆಸಿದ ಡಿಆರ್ಡಿಓ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ನಿಖರವಾಗಿ ಗುರಿ ತಲುಪುವ ಸಾಮರ್ಥ್ಯ ಹೊಂದಿರುವ ಗೈಡೆಡ್ ಪಿನಾಕ ರಾಕೆಟ್ ಉಡಾವಣಾ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಒಡಿಶಾದ ಚಂಡಿಪುರ್ನ ಸಮಗ್ರ ಪರೀಕ್ಷಾ ವಲಯ-ಐಟಿಆರ್ನಿಂದ ಪಿನಾಕ ರಾಕೆಟ್ ಹೊಸ ನಮೂನೆ ಉಡಾವಣೆ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಪರೀಕ್ಷೆ ಸಮಯದಲ್ಲಿ ನಿಖರವಾಗಿ ಗುರಿ ತಲುಪುವ ಮೂಲಕ ಕ್ಷಿಪಣಿ ಸಮರ್ಥವಾಗಿದೆ.
ನಿಖರ ಗುರಿ ತಲುಪುವ ಪಿನಾಕ:
- ಪಿನಾಕ ರಾಕೆಟ್ ಮಾರ್ಕ್-II ನ ಪರಿವರ್ತಿತ ಆವೃತ್ತಿಯೆ ಗೈಡೈಡ್ ಪಿನಾಕ ಅಥವಾ ನಿಖರ ಗುರಿ ತಲುಪುವ ಪಿನಾಕ. ಪಿನಾಕ ರಾಕೆಟ್ ಅನ್ನು ಡಿಆರ್ಡಿಓ, ಎರ್ಡಿಇ ಪುಣೆ ಹಾಗೂ ಆರ್ ಸಿಐ ಹೈದ್ರಾಬಾದ್ ಜಂಟಿಯಾಗಿ ಅಭಿವೃದ್ದಿಪಡಿಸಿವೆ.
- ಪಿನಾಕ ರಾಕೆಟ್ ವಾಯುಮಾರ್ಗ, ಮಾರ್ಗದರ್ಶನ ಮತ್ತು ನಿಯಂತ್ರಣ ಕಿಟ್ಗಳನ್ನು ಒಳಗೊಂಡಿದ್ದು ಗುರಿ ತಲುಪುವ ನಿಖರತೆಯನ್ನು ಹೆಚ್ಚಿಸಿದೆ.
“ಜಲ್ಲಿಕಟ್ಟು” ತಮಿಳುನಾಡಿನ ಸುಗ್ರೀವಾಜ್ಞೆಗೆ ಸಮ್ಮತಿ ಸೂಚಿಸಿದ ಕೇಂದ್ರ ಸರ್ಕಾರ
ಗೂಳಿ ಪಳಗಿಸುವ ಕ್ರೀಡೆ ಜಲ್ಲಿಕಟ್ಟು ನಡೆಸಲು ಅವಕಾಶ ತಮಿಳುನಾಡು ಸರ್ಕಾರ ಸಿದ್ಧಪಡಿಸಿರುವ ಸುಗ್ರೀವಾಜ್ಞೆ ಕರಡುವಿಗೆ ಕೇಂದ್ರ ಪರಿಸರ ಮತ್ತು ಕಾನೂನು ಸಚಿವಾಲಯ ಯಾವುದೇ ಬದಲಾವಣೆ ಸೂಚಿಸದೆ ಒಪ್ಪಿಗೆ ನೀಡಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಲ್ಲಿರುವ ಪಟ್ಟಿಯಿಂದ ಗೂಳಿಯನ್ನು ಕೈಬಿಡುವುದು ಸುಗ್ರೀವಾಜ್ಞೆಯಲ್ಲಿರುವ ಮುಖ್ಯ ಅಂಶವಾಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಲ್ಲಿರುವ ನಿರ್ಬಂಧಗಳನ್ನೆಲ್ಲ ಸೇರಿಸಿಕೊಂಡೇ ಸುಗ್ರೀವಾಜ್ಞೆಯ ಕರಡು ಸಿದ್ಧಪಡಿಸಲಾಗಿದೆ.
ಪ್ರಮುಖಾಂಶಗಳು:
- ಇದು ಸಂವಿಧಾನದ ಸಹವರ್ತಿ ಪಟ್ಟಿಯಲ್ಲಿ ಬರುವ ವಿಷಯವಾಗಿರುವುದರಿಂದ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯುವುದು ಅನಿರ್ವಾಯವಾಗಿದೆ.
- ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಲ್ಲಿರುವ ಪಟ್ಟಿಯಿಂದ ಗೂಳಿಯನ್ನು ಕೈಬಿಡುವುದು ಸುಗ್ರೀವಾಜ್ಞೆಯಲ್ಲಿರುವ ಮುಖ್ಯ ಅಂಶವಾಗಿದೆ. ಆದ್ದರಿಂದ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960 ಗೂಳಿಗೆ ಅನ್ವಯಿಸುವುದಿಲ್ಲ.
- ಸುಪ್ರೀಂಕೋರ್ಟ್ ಮೇ 2014ರಲ್ಲಿ ಜಲ್ಲಿಕಟ್ಟುವಿನ ಮೇಲೆ ವಿಧಿಸಿದ ನಿಷೇಧವನ್ನು ತಪ್ಪಿಸುವ ಸಲುವಾಗಿ ಸುಗ್ರೀವಾಜ್ಞೆಯನ್ನು ಹೊರಡಿಸಲಾಗಿದೆ.
ರಾಜ್ಯಗಳ ಕಾರ್ಯಸಾಧನೆ ಅಳೆಯಲು “ಇಂಡಿಯಾ ಇನ್ನೋವೇಶನ್ ಇಂಡೆಕ್ಸ್”
ರಾಜ್ಯಗಳ ಕಾರ್ಯಸಾಧನೆಯನ್ನು ಅಳೆಯುವ ಸಲುವಾಗಿ ವಿಶ್ವ ಆರ್ಥಿಕ ವೇದಿಕೆ (WEF), ನೀತಿ ಆಯೋಗ, ವಿಶ್ವ ಭೌದ್ದಿಕ ಆಸ್ತಿ ಸಂಸ್ಥೆ (WIPO) ಮತ್ತು ಕಾರ್ನೆಲ್ ವಿಶ್ವವಿದ್ಯಾಲಯ ಇಂಡಿಯಾ ಇನ್ನೋವೇಶನ್ ಇಂಡೆಕ್ಸ್ ಅನ್ನು ಅಭಿವೃದ್ದಿಪಡಿಸಲಿವೆ. ವಿಶ್ವ ಭೌದ್ದಿಕ ಆಸ್ತಿ ಸಂಸ್ಥೆಯ ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ ಮಾದರಿಯಲ್ಲೆ ಈ ಇಂಡೆಕ್ಸ್ ಅನ್ನು ಅಭಿವೃದ್ದಿಪಡಿಸಲಿದ್ದು, ದೇಶದ ತಳಮಟ್ಟದ ಅಭಿವೃದ್ದಿ ಮೇಲೆ ಇದು ಬೆಳಕು ಚೆಲ್ಲಲಿದೆ.
ಪ್ರಮುಖಾಂಶಗಳು:
- ಇಂಡಿಯಾ ಇನ್ನೋವೇಶನ್ ಇಂಡೆಕ್ಸ್ ನಲ್ಲಿ ದೇಶದ ರಾಜ್ಯಗಳ ನಾವೀನ್ಯತೆ ಕಾರ್ಯಸಾಧನೆ ಅಳೆಯುವ ಮೂಲಕ ರಾಜ್ಯಗಳಿಗೆ ಶ್ರೇಯಾಂಕವನ್ನು ನೀಡಲಾಗುವುದು. ಆ ಮೂಲಕ ದೇಶವನ್ನು ನಾವೀನ್ಯತೆ ಆಧರಿತ ಆರ್ಥಿಕ ರಾಷ್ಟವನ್ನಾಗಿಸುವ ಗುರಿ ಹೊಂದಲಾಗಿದೆ.
- ಈ ಸೂಚ್ಯಂಕದ ಆಧಾರ ಸ್ತಂಭಗಳೆಂದರೆ ಮಾನವ ಸಂಪನ್ಮೂಲದ ಸಾಮರ್ಥ್ಯ ಮತ್ತು ಸಂಶೋಧನೆ, ಸಂಸ್ಥೆಗಳ ಬಲವರ್ಧನೆ, ಮೂಲಸೌಕರ್ಯಗಳ ಬೆಂಬಲ ಮತ್ತು ವ್ಯಾಪಾರ ಸಂಕೀರ್ಣತೆ.
- ಈ ಸೂಚ್ಯಂಕವನ್ನು ಅಭಿವೃದ್ದಿಡಿಸಲು ಪ್ರತಿಯೊಂದು ಪಾಲುದಾರಿಕೆ ಸಂಸ್ಥೆಗಳು ಕಾರ್ಯಪಡೆ ಸದಸ್ಯರನ್ನು ನಾಮನಿರ್ದೇಶನ ಮಾಡಲಿವೆ. ಮೊದಲ ಸೂಚ್ಯಂಕವನ್ನು ಅಕ್ಟೋಬರ್ 2017ರಲ್ಲಿ ನಡೆಯಲಿರುವ ಭಾರತ ಆರ್ಥಿಕ ಶೃಂಗಸಭೆಯಲ್ಲಿ ಬಿಡುಗಡೆಗೊಳಿಸಲಾಗುವುದು.
- ರಾಜ್ಯ ರಾಜ್ಯಗಳ ನಡುವೆ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಇದು ಸಹಾಯವಾಗಲಿದೆ. ಆ ಮೂಲಕ ಸಮಗ್ರ ಬೆಳವಣಿಗೆಗೆ ನಿಯಮಗಳನ್ನು ರೂಪಿಸಲು ಅನುಕೂಲವಾಗಲಿದೆ.