ಫೆಬ್ರವರಿ 28: ರಾಷ್ಟ್ರೀಯ ವಿಜ್ಞಾನ ದಿನ (National Science Day)
ಪ್ರತಿ ವರ್ಷ ಫೆಬ್ರವರಿ 28 ರಂದು “ರಾಷ್ಟ್ರೀಯ ವಿಜ್ಞಾನ ದಿನ”ವನ್ನು ಆಚರಿಸಲಾಗುತ್ತದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ. “Science and Technology for Specially Abled Persons” ಇದು ಈ ವರ್ಷದ ರಾಷ್ಟ್ರೀಯ ವಿಜ್ಞಾನ ದಿನ ಧ್ಯೇಯವಾಕ್ಯವಾಗಿದೆ. ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರ ಅಪೂರ್ವ ಸಾಧನೆಯ ನೆನಪಿನಲ್ಲಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಗುರುತಿಸಲಾಗಿದೆ. 1928ರ ಫೆಬ್ರವರಿ 28ರಂದು ‘ರಾಮನ್ ಇಫೆಕ್ಟ್’ ಎಂದೇ ಪ್ರಸಿದ್ಧವಾದ ತಮ್ಮ ಅಧ್ಯಯನದ ವಿವರಗಳನ್ನು ಜಗತ್ತಿಗೆ ತಿಳಿಸಿದ್ದರು. ರಾಮನ್ ಅವರ ಈ ಆವಿಷ್ಕಾರಕ್ಕಾಗಿ 1930 ರಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿತ್ತು.
ಹಿನ್ನಲೆ:
- 1986 ರಿಂದ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ.
- ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯೂನಿಕೇಷನ್ ಸರ್ಕಾರಕ್ಕೆ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ಫೆಬ್ರವರಿ 28 ಅನ್ನು ರಾಷ್ಟ್ರೀಯ ವಿಜ್ಞಾನ ದಿನವೆಂದು ಘೋಷಿಸಲಾಯಿತು.
- ಮೊಟ್ಟ ಮೊದಲ ರಾಷ್ಟ್ರೀಯ ವಿಜ್ಞಾನ ದಿನವನ್ನು 28ನೇ ಫೆಬ್ರವರಿ 1987 ರಂದು ಆಚರಿಸಲಾಯಿತು.
ರಾಮನ್ ಎಫೆಕ್ಟ್ ಎಂದರೇನು?
ಯಾವುದೇ ಪಾರದರ್ಶಕ ರಾಸಾಯನಿಕ ವಸ್ತುವಿನ ಮೂಲಕ ಬೆಳಕನ್ನು ಹಾಯಿಸಿದಾಗ ಅದರಿಂದ ಹೊರಬರುವ ಕಿರಣಗಳು ಒಳಬರುವ ಕಿರಣಗಳಿಗಿಂತ ಭಿನ್ನವಾದ ದಿಕ್ಕಿನತ್ತ ಹೊರಳಿರುವುದನ್ನು ನಾವು ನೋಡಬಹುದು (ಗಾಜಿನ ಪಟ್ಟಕದ ಮೂಲಕ ಬೆಳಕನ್ನು ಹಾಯಿಸುವ ಉದಾಹರಣೆ ನೆನಪಿಸಿಕೊಳ್ಳಿ). ಹೀಗೆ ಚದುರಿದ ಬಹುಪಾಲು ಕಿರಣಗಳ ಸ್ವರೂಪ ಮೂಲ ಕಿರಣದಂತೆಯೇ ಇರುತ್ತದಾದರೂ ಒಂದಷ್ಟು ಭಾಗದ ಕಿರಣಗಳ ತರಂಗಾಂತರ ಮೂಲಕ್ಕಿಂತ ಬದಲಾಗಿರುತ್ತದೆ. ಇದನ್ನು ರಾಮನ್ ಪರಿಣಾಮವೆಂದು ಕರೆಯಲಾಗುತ್ತದೆ.
ದೇಶದ ಮೊದಲ ಸಮಗ್ರ ಹೆಲಿಪೋರ್ಟ್ (Heliport)ಗೆ ನವದೆಹಲಿಯಲ್ಲಿ ಚಾಲನೆ
ಭಾರತದ ಮೊದಲ ಸಮಗ್ರ ಹೆಲಿಪೋರ್ಟ್ ಗೆ ಉತ್ತರ ದೆಹಲಿಯ ರೋಹಿಣಿ ಬಳಿ ಚಾಲನೆ ನೀಡಲಾಯಿತು. ಪವನ್ ಹನ್ಸ್ ಲಿಮಿಟೆಡ್ ಈ ಹೆಲಿಪೋರ್ಟ್ ಅನ್ನು ಅಭಿವೃದ್ದಿಪಡಿಸಿದೆ. ಕಡಲಾಚೆಗಿನ ಸಾರಿಗೆ ಸೇರಿದಂತೆ ಅಂಡಮಾನ್ & ನಿಕೋನರ್ ನ ಕೆಲವು ದುರ್ಗಮ ದ್ವೀಪ ಪ್ರದೇಶಗಳಿಗೆ ಸಂಚಾರ ಕಲ್ಪಿಸಲು ಈ ಹೆಲಿಪೋರ್ಟ್ ಮಹತ್ವದ ಪಾತ್ರವಹಿಸಲಿದೆ.
ಪ್ರಮುಖಾಂಶಗಳು:
- ಸುಮಾರು 25 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಈ ಹೆಲಿಪೋರ್ಟ್ ಅನ್ನು ಅಭಿವೃದ್ದಿಪಡಿಸಲಾಗಿದೆ. 150 ಪ್ರಯಾಣಿಕರ ಸಾಮರ್ಥ್ಯದ ಟರ್ಮಿನಲ್ಸ್ ಹಾಗೂ 16 ಹೆಲಿಕಾಪ್ಟರ್ ಗಳನ್ನು ನಿಲ್ಲಿಸಬಹುದಾದ ವ್ಯವಸ್ಥೆಯನ್ನು ಇದು ಒಳಗೊಂಡಿದೆ.
- ಹೆಲಿಕಾಪ್ಟರ್ ಗಳ ನಿರ್ವಹಣೆ, ರಿಪೇರಿ ಹಾಗೂ ಸಂಪೂರ್ಣ ದುರಸ್ಥಿ ವ್ಯವಸ್ಥೆಯನ್ನು ಸಹ ಇಲ್ಲಿ ಕಲ್ಪಿಸಲಾಗಿದೆ.
- ವಿಪತ್ತು ನಿರ್ವಹಣೆ, ತುರ್ತು ವೈದ್ಯಕೀಯ ಸೇವೆ, ಕಾನೂನು ಸುವ್ಯವಸ್ಥೆ ಮತ್ತು ಪೈಲಟ್ ಹಾಗೂ ಎಂಜನಿಯರ್ ಗಳ ಕೌಶಲ್ಯ ಅಭಿವೃದ್ದಿಗೆ ಗಣನೀಯ ಕೊಡುಗೆ ನೀಡಲಿದೆ.
- ಎಲ್ಲಕ್ಕಿಂತ ಮುಖ್ಯವಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ಗಳ ಸಂಚಾರ ದಟ್ಟಣೆಯಲ್ಲಿ ಗಣನೀಯವಾಗಿ ಇಳಿಕೆಯಾಗಲಿದೆ. ಪ್ರಸ್ತುತ ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರತಿ ದಿನ 40-50 ಹೆಲಿಕಾಪ್ಟರ್ ಗಳು ಹಾರಾಟ ನಡೆಸುತ್ತಿವೆ.
ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿ ನಂದ್ ಕುಮಾರ್ ಸಾಯ್ ಅಧಿಕಾರ ಸ್ವೀಕಾರ
ಹಿರಿಯ ಬುಡಕಟ್ಟು ಜನಾಂಗದ ನಾಯಕ ಹಾಗೂ ಮಾಜಿ ಸಂಸದ ನಂದ್ ಕುಮಾರ್ ಸಾಯ್ ಅವರು “ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ (National Commission for Schedule Tribes)”ದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ರಾಮೇಶ್ವರ್ ಒರಯನ್ ಅವರ ಅಧಿಕಾರ ಅವಧಿ ಅಕ್ಟೋಬರ್ 31, 2016 ರಂದು ಅಂತ್ಯಗೊಂಡಿದ್ದು, ಅವರ ಉತ್ತರಾಧಿಕಾರಿಯಾಗಿ ಸಾಯ್ ನೇಮಕಗೊಂಡಿದ್ದಾರೆ. ಸಾಯ್ ಅವರು ಮುಂದಿನ ಮೂರು ವರ್ಷಗಳ ಕಾಲ ಸೇವೆಯಲ್ಲಿ ಇರಲಿದ್ದು, ಕೇಂದ್ರ ಸಂಪುಟ ಸಚಿವರ ಸ್ಥಾನಮಾನವನ್ನು ಹೊಂದಿರಲಿದ್ದಾರೆ.
ನಂದ್ ಕುಮಾರ್ ಸಾಯ್:
- ಬುಡಕಟ್ಟು ಜನಾಂಗದವರಲ್ಲಿ ಶೈಕ್ಷಣಿಕ ಪ್ರಸಾರ ಮಾಡುವಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಬುಡಕಟ್ಟು ಜನರ ವಿರುದ್ದ ಶೋಷಣೆ ಮತ್ತು ದೌರ್ಜನ್ಯವನ್ನು ವಿರೋಧಿಸಲು ವಿವಿಧ ಚಳುವಳಿಗಳಲ್ಲಿ ಭಾಗವಹಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ.
- ಸಾಯ್ ಅವರು 1977, 1985 ಹಾಗೂ 1998 ರಲ್ಲಿ ಮಧ್ಯಪ್ರದೇಶ ವಿಧಾನ ಸಭೆಗೆ ಆಯ್ಕೆಯಾಗಿದ್ದರು. 2000 ರಲ್ಲಿ ಚತ್ತೀಸಘರ್ ವಿಧಾನಸಭೆಗೆ ಆಯ್ಕೆಯಾಗಿದ್ದರು. ಚತ್ತೀಸ್ ಘರದ ವಿಧಾನಸಭೆಯ ವಿರೋಧ ಪಕ್ಷದ ಮೊದಲ ನಾಯಕ.
- 1989, 1996 ಮತ್ತು 2004 ರಲ್ಲಿ ಲೋಕಸಭೆಗೆ ಹಾಗೂ 2009 ಮತ್ತು 10 ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ:
- ಪರಿಶಿಷ್ಠ ಪಂಗಡಗಳ ರಾಷ್ಟ್ರೀಯ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಸಂವಿಧಾನದ ವಿಧಿ 338ಎ ರಡಿ ರಚಿಸಲಾಗಿದೆ. ಈ ಮುಂಚೆ ಇದ್ದ ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗವನ್ನು ಬೇರ್ಪಡಿಸಿ ಪ್ರತ್ಯೇಕವಾಗಿ ಈ ಆಯೋಗವನ್ನು ಸ್ಥಾಪಿಸಲಾಗಿದೆ.
- ಮೊದಲ ಆಯೋಗವನ್ನು 2004 ರಲ್ಲಿ ಸ್ಥಾಪಿಸಲಾಯಿತು. ಕುನ್ವರ್ ಸಿಂಗ್ ಆಯೋಗದ ಮೊದಲ ಅಧ್ಯಕ್ಷರು.
- ಆಯೋಗವು ಒಬ್ಬ ಅಧ್ಯಕ್ಷ, ಒಬ್ಬ ಉಪಾಧ್ಯಕ್ಷ ಹಾಗೂ ಮೂವರು ಪೂರ್ಣ ಕಾಲಿಕ ಸದಸ್ಯರನ್ನು ಒಳಗೊಂಡಿದೆ. ಇವರ ಅಧಿಕಾರ ಅವಧಿ ಅಧಿಕಾರ ಸ್ವೀಕಾರವಾದ ದಿನದಿಂದ ಮೂರು ವರ್ಷಗಳ ಕಾಲ ಇರಲಿದೆ.
89ನೇ ಅಕಾಡೆಮಿ ಪ್ರಶಸ್ತಿಗಳು (ಆಸ್ಕರ್ ಪ್ರಶಸ್ತಿ) ಪ್ರಕಟ
89ನೇ ಅಕಾಡೆಮಿ ಪ್ರಶಸ್ತಿ ಅಥವಾ ಆಸ್ಕರ್ ಪ್ರಶಸ್ತಿಯೆಂದೇ ಪ್ರಸಿದ್ದವಾಗಿರುವ ಪ್ರಶಸ್ತಿಗಳನ್ನು ಲಾಸ್ ಏಂಜಲೀಸ್ ನ ಡಾಲ್ಬಿ ಥಿಯೇಟರ್ ನಲ್ಲಿ ವಿತರಿಸಲಾಯಿತು. ಅಕಾಡೆಮಿ ಆಫ್ ಮೋಷನ್ ಪಿಕ್ಟರ್ ಆರ್ಟ್ಸ್ ಅಂಡ್ ಸೈನ್ಸ್ (AMPAS) ಪ್ರಶಸ್ತಿಗಳನ್ನು ಒಟ್ಟು 24 ವಿಭಾಗಗಳಲ್ಲಿ ನೀಡುತ್ತಿದೆ. ಸಂಗೀತ ನಾಟಕ ‘ಲಾ ಲಾ ಲ್ಯಾಂಡ್” ಚಿತ್ರ ಒಟ್ಟು ಆರು ವಿಭಾಗದಲ್ಲಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಅತ್ಯಂತ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಗೌರವಕ್ಕೆ ಪಾತ್ರವಾಯಿತು.
ಪ್ರಶಸ್ತಿ ವಿಭಾಗ:
- ಅತ್ಯುತ್ತಮ ಚಿತ್ರ : ಮೂನ್ ಲೈಟ್
- ಅತ್ಯುತ್ತಮ ನಟಿ: ಲಾ ಲಾ ಲ್ಯಾಂಡ್ ನಟಿ ಎಮ್ಮಾ ಸ್ಟೋನ್
- ಅತ್ಯುತ್ತಮ ನಟ : ಕ್ಯಾಸಿ ಅಫ್ಲೆಕ್ (ಮ್ಯಾಂಚೆಸ್ಟರ್ ಬೈ ದಿ ಸೀ)
- ಅತ್ಯುತ್ತಮ ನಿರ್ದೇಶನ: ಲಾ ಲಾ ಲ್ಯಾಂಡ್ ಚಿತ್ರಕ್ಕೆ ಡೇನಿಯಲ್ ಛಾಜೆಲ್
- ಅತ್ಯುತ್ತಮವಾಗಿ ಅಳವಡಿಸಿಕೊಂಡ ಚಿತ್ರ ಕಥೆ: ಮೂನ್ ಲೈಟ್
- ಅತ್ಯುತ್ತಮ ಮೂಲ ಚಿತ್ರಕಥೆ: ಮ್ಯಾಂಚೆಸ್ಟರ್ ಬೈ ದಿ ಸಿಟಿ
- ಅತ್ಯುತ್ತಮ ಡ್ಯಾಕುಮೆಂಟರಿ (ಕಿರು ಚಿತ್ರ) : ದಿ ವೈಟ್ ಹೆಲ್ಮೆಟ್ಸ್
- ಅತ್ಯುತ್ತಮ ಸಂಗೀತ (ಮೂಲ) : ಲಾ ಲಾ ಲ್ಯಾಂಡ್ (ಜಸ್ಟೀನ್ ಹರ್ವಿಟ್ಜ್)
- ಅತ್ಯುತ್ತಮ ಗೀತೆ: ಸಿಟಿ ಆಫ್ ಸ್ಟಾರ್ಸ್ : ಲಾ ಲಾ ಲ್ಯಾಂಡ್ , ಜಸ್ಟೀನ್ ಹರ್ವಿಟ್ಜ್ ಸಂಗೀತ, ಬೆನ್ಜ್ ಪಸೆಕ್ ಹಾಗೂ ಜಸ್ಟೀನ್ ಪಾಲ್ ಗೀತ ರಚನೆ
- ಅತ್ಯುತ್ತಮ ಕಿರುಚಿತ್ರ (ಲೈವ್ ಆಕ್ಷನ್) : ಸಿಂಗ್, ಕ್ರಿಸ್ಟೊಫ್ ಡೀಕ್ ಹಾಗೂ ಅನ್ನಾ ಉದ್ವಾರ್ಡಿ
- ಅತ್ಯುತ್ತಮ ಸಿನಿಮಾಟೋಗ್ರಾಫಿ: ಲಾ ಲಾ ಲ್ಯಾಂಡ್ ಚಿತ್ರ
- ಅತ್ಯುತ್ತಮ ಸಂಕಲನ : ಹಾಕ್ಸಾ ರಿಡ್ಜ್ ಚಿತ್ರ
- ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್ : ದಿ ಜಂಗಲ್ ಬುಕ್
- ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಲಾ ಲಾ ಲ್ಯಾಂಡ್
- ಅತ್ಯುತ್ತಮ ಅನಿಮೇಷನ್ ಚಿತ್ರ: ಜೂಟೊಪಿಯಾ
- ಅತ್ಯುತ್ತಮ ವಿದೇಶಿ ಚಿತ್ರ: ದಿ ಸೇಲ್ಸ್ ಮನ್ (ಇರಾನ್)
- ಪೋಷಕ ಪಾತ್ರ ನಟಿ: ವಿಯೋಲಾ ಡೇವಿಸ್ (ಫೆನ್ಸಸ್)
- ಅತ್ಯುತ್ತಮ ಸೌಂಡ್ ಎಡಿಟಿಂಗ್ : ಅರೈವಲ್
- ಅತ್ಯುತ್ತಮ ಸೌಂಡ್ ಮಿಕ್ಸಿಂಗ್ : ಹಾಕ್ಸಾ ರಿಡ್ಜ್