ಹರಿಯಾಣ ಸರ್ಕಾರದಿಂದ ಹಿರಿಯ ನಾಗರಿಕರಿಗೆ ತೀರ್ಥ ದರ್ಶನ ಯೋಜನೆ

ಹಿರಿಯ ನಾಗರಿಕರಿಗೆ ಹರಿಯಾಣ ಸರ್ಕಾರ ತೀರ್ಥ ದರ್ಶನ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ರಾಜ್ಯ ಸರ್ಕಾರದ ಹಣದಲ್ಲಿ ತೀರ್ಥಯಾತ್ರೆಯನ್ನು ಕೈಗೊಳ್ಳಬಹುದು. ಬಜೆಟ್ ಅಧಿವೇಶನದ ವೇಳೆ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತರ್ ಅವರು ಈ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.

ಪ್ರಮುಖಾಂಶಗಳು:

  • ಈ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಸೇರಿದ ಹಿರಿಯ ನಾಗರಿಕರು ಕೈಗೊಳ್ಳುವ ತೀರ್ಥಯಾತ್ರೆಯ ಖರ್ಚನ್ನು ಸರ್ಕಾರವೇ ಸಂಪೂರ್ಣವಾಗಿ ಭರಿಸಲಿದೆ.
  • ಒಂದು ವೇಳೆ ಬಿಪಿಎಲ್ ವರ್ಗಕ್ಕೆ ಸೇರಿದ ದಂಪತಿಗಳು ತೀರ್ಥಯಾತ್ರೆ ಕೈಗೊಂಡಿದ್ದಾರೆ ದಂಪತಿಗಳ ಖರ್ಚನ್ನು ಸರ್ಕಾರವೇ ಭರಿಸಲಿದೆ. ಜೊತೆಗೆ ತಮಗೆ ನೆರವಾಗಲು ಸಹಾಯಕರನ್ನು ಕರೆದುಕೊಂಡು ಹೋಗಬಹುದು.
  • ಹಿರಿಯ ನಾಗರಿಕರು ಬಿಪಿಎಲ್ ಕುಟುಂಬಕ್ಕೆ ಸೇರಿಲ್ಲವಾದರೆ ಶೇ 70% ಖರ್ಚನ್ನು ಸರ್ಕಾರ ಭರಿಸುತ್ತದೆ. ತೀರ್ಥಯಾತ್ರೆಗೆ ಹಿರಿಯ ನಾಗರಿಕರನ್ನು ಲಾಟರಿ ಎತ್ತುವ ಮೂಲಕ ಆಯ್ಕೆಮಾಡಲಾಗುವುದು.
  • ಯೋಜನೆಯಡಿ ಸುಮಾರು 400 ಪುಣ್ಯಕ್ಷೇತ್ರಗಳನ್ನು ನೋಡಬಹುದು. ಪ್ರತಿ ವರ್ಷ ಕೇವಲ 250 ಜನರು ಮಾತ್ರ ಯೋಜನೆಯ ಉಪಯೋಗಪಡೆದುಕೊಳ್ಳಬಹುದು. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ತೀರ್ಥಯಾತ್ರಿಗಳನ್ನು ಆಯ್ಕೆಮಾಡುತ್ತದೆ.

ಕೆನಡಾದ ಕ್ಯೂಬೆಕ್ ನಲ್ಲಿ ವಿಶ್ವದ ಅತ್ಯಂತ ಹಳೆಯ ಪಳೆಯುಳಿಕೆ ಪತ್ತೆ

ಕೆನಡಾದ ಕ್ಯೂಬೆಕ್ ನಲ್ಲಿ ಭೂಮಿಯ ಮೇಲಿನ ಅತ್ಯಂತ ಹಳೆಯ ಪಳೆಯುಳಿಕೆಯನ್ನು ಪತ್ತೆಹಚ್ಚಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ. ಕಾರ್ಬನ್ ಡೇಟಿಂಗ್ ತಂತ್ರಜ್ಞಾನದ ಪ್ರಕಾರ ಈ ಪಳೆಯುಳಿಕೆ ಸುಮಾರು 3.8 ಬಿಲಿಯನ್ ವರ್ಷ ಅಥವಾ ಅದಕ್ಕಿಂತಲೂ ಅಂದರೆ 4.3 ಬಿಲಿಯನ್ ವರ್ಷದಷ್ಟು ಹಳೆಯದಿರಬಹುದು ಎಂದು ಅಂದಾಜಿಸಲಾಗಿದೆ.

ಪ್ರಮುಖಾಂಶಗಳು:

  • ಪಳೆಯುಳಿಕೆಗಳು ಸಣ್ಣದಾಗಿ, ಕೊಳವೆ ರೀತಿಯಲ್ಲಿದ್ದು, ಸುಮಾರು ಅರ್ಧ ಮಿಲಿಮೀಟರ್ ಉದ್ದವಿದೆ. ಮಾನವ ಕೂದಲಿನ ಅರ್ಧದಷ್ಟು ಅಗಲವನ್ನು ಹೊಂದಿವೆ.
  • ಈ ಪಳೆಯುಳಿಕೆಗಳು ಬ್ಯಾಕ್ಟೀರಿಯಾದ ಅವಶೇಷ ಎನ್ನಲಾಗಿದೆ. ಈ ಬ್ಯಾಕ್ಟೀರಿಯಾದ ಸಮುದ್ರದ ತಳದಲ್ಲಿ ಖನಿಜ ಭರಿತ ಬಿಸಿ ನೀರಿನ ಬುಗ್ಗೆಗಳ ಬಳಿ ವಾಸವಾಗಿದ್ದವು ಎನ್ನಲಾಗಿದೆ.
  • ಹೆಮಾಟೈಟ್ (ಐರನ್ ಆಕ್ಸೈಡ್ ನ ವಿಧ) ನಿಂದ ಈ ಪಳೆಯುಳಿಕೆಗಳು ರಚನೆಗೊಂಡಿವೆ.
  • ಪಳೆಯುಳಿಕೆ ಪತ್ತೆಯಾಗಿರುವ ಶಿಲೆಗಳು ರೂಪಾಂತರ ಶಿಲೆಗಳಾಗಿವೆ. ಅಂದರೆ ಅತಿ ಉಷ್ಣತೆ ಮತ್ತು ಒತ್ತಡಕ್ಕೆ ಒಳಪಟ್ಟು ರಚನೆಗೊಂಡಿವೆ.

ಸಂಶೋಧನೆಯ ಮಹತ್ವ:

  • ಭೂಮಿಯ ಮೇಲೆ ಜೀವಿಗಳ ಉಗಮ ಭೂಮಿ ರಚನೆಯಾದ ಮೇಲೆ ಸಮುದ್ರ ತಳದಲ್ಲಿನ ಬಿಸಿ ಬುಗ್ಗೆಗಳಿಂದ ಉಂಟಾಗಿದೆ ಎಂಬುದಕ್ಕೆ ಈ ಸಂಶೋಧನೆ ಪುಷ್ಠಿ ನೀಡುವಂತಿದೆ. ಆ ಮೂಲಕ ಭೂಮಿಯ ಮೇಲೆ ಜೀವಿಗಳು ಮೊದಲು ಉಗಮವಾದದ್ದು, ಸಾಗರ ತಳದಲ್ಲಿ ಪೋಷಕಾಂಶ ಭರಿತ ಬಿಸಿ ನೀರಿನ ಚಿಲುಮೆಗಳ ಬಳಿ ಎನ್ನುವುದಕ್ಕೆ ಬಲವಾದ ಪುರಾವೆ ದೊರೆತಂತೆ ಆಗಿದೆ.

ಭಾರತ-ನೇಪಾಳ ಮಿಲಿಟರಿ ಸಮರಭ್ಯಾಸ ಸೂರ್ಯ ಕಿರಣ್-XI ಗೆ ಚಾಲನೆ

ಭಾರತ ಮತ್ತು ನೇಪಾಳ ನಡುವಿನ 11ನೇ ಮಿಲಿಟರಿ ಸಮರಭ್ಯಾಸ ಸೂರ್ಯ ಕಿರಣ್-XI ಉತ್ತರಖಂಡದ ಪಿಥೊರಗರ್ ನಲ್ಲಿ ಆರಂಭಗೊಂಡಿದೆ. ಉಭಯ ದೇಶಗಳ ಸೇನೆ ನಡುವೆ ಎರಡು ವಾರಗಳ ಕಾಲ ನಡೆಯುವ ಸಮರಭ್ಯಾಸ ಇದಾಗಿದೆ. ನೈಸರ್ಗಿಕ ವಿಪತ್ತು ನಿರ್ವಹಣೆ, ಒಳನಸುಳುವಿಕೆಯನ್ನು ತಡೆಯುವುದು ಹಾಗೂ ಅರಣ್ಯ ಸಮರಕ್ಕೆ ಅಗತ್ಯ ಕೌಶಲ್ಯಗಳ ಮೇಲೆ ಸಮರಭ್ಯಾಸದಲ್ಲಿ ಕೇಂದ್ರಿಕರಿಸಲಾಗುವುದು.

ಪ್ರಮುಖಾಂಶಗಳು:

  • ಸೂರ್ಯ ಕಿರಣ್-XI ಸಮರಭ್ಯಾಸದಲ್ಲಿ ಬಂಡುಕೋರರ ನಿಗ್ರಹ ಕಾರ್ಯಾಚರಣೆ ಬಗ್ಗೆ ವಿವಿಧ ಪ್ರದೇಶಗಳಲ್ಲಿ ಎರಡು ದೇಶದ ಸೇನಾ ಪಡೆಗಳಿಗೆ ತರಭೇತಿಯನ್ನು ನೀಡಲಾಗುವುದು.
  • ನೈಸರ್ಗಿಕ ವಿಕೋಪ ಸಂದರ್ಭಗಳಲ್ಲಿ ಮಾನವೀಯ ನೆರವು ನೀಡುವುದು ಸೇರಿದಂತೆ ಪರಿಸರ ಸಂರಕ್ಷಣೆಗೂ ಈ ಸಮರಭ್ಯಾಸದಲ್ಲಿ ಒತ್ತು ನೀಡಲಾಗುವುದು.
  • ಈ ಸಮರಭ್ಯಾಸದಲ್ಲಿ ಭಾರತೀಯ ಸೇನಾಪಡೆ ಅಧಿಕಾರಿಗಳು ಹಾಗೂ ಪಂಜಾಬ್ ಸೇನಾತುಕಡಿಯ ಎಕ್ತಾ ಶಕ್ತಿ ಬೆಟಾಲಿಯನ್ ಭಾಗವಹಿಸಲಿವೆ. ಇನ್ನು ನೇಪಾಳದ ಪರವಾಗಿ ದುರ್ಗ ಬಕ್ಷ್ ಬೆಟಾಲಿಯನ್ ಭಾಗವಹಿಸಲಿದೆ.
  • ಸಮರಭ್ಯಾಸದಲ್ಲಿ ಉಭಯ ದೇಶಗಳ ಸೇನಾ ಪಡೆಗಳು ತಮ್ಮ ಅನುಭವ ಹಾಗೂ ಕೌಶಲ್ಯವನ್ನು ಹಂಚಿಕೊಳ್ಳುವ ಮೂಲಕ ಎರಡು ದೇಶಗಳ ನಡುವಿನ ಸ್ನೇಹ ಸಂಬಂದ ಬಲಗೊಳಿಸಲು ನೆರವಾಗಲಿವೆ.

ಹಿನ್ನಲೆ:

  • ಸೂರ್ಯ ಕಿರಣ್ ಸಮರಭ್ಯಾಸ ಭಾರತ ಮತ್ತು ನೇಪಾಳ ಸೇನಾ ಪಡೆಗಳ ನಡುವೆ ವಾರ್ಷಿಕ ಎರಡು ಬಾರಿ ನಡೆಯುವ ಸಮರಭ್ಯಾಸ. ಸೂರ್ಯ ಕಿರಣ್ ಸಮರಭ್ಯಾಸದ 10ನೇ ಆವೃತಿ ಕಳೆದ ನವೆಂಬರ್ 2016 ರಲ್ಲಿ ನೇಪಾಳದ ಸಲ್ಜಹಂಡಿಯಲ್ಲಿ ನಡೆದಿತ್ತು.

ಹಿಮಾಚಲ ಪ್ರದೇಶದಲ್ಲಿ ಭಾರತ-ಒಮನ್ ಜಂಟಿ ಸಮರಭ್ಯಾಸ ಅಲ್-ನಗಹ್-II 2017

ಭಾರತ ಮತ್ತು ಒಮನ್ ನಡುವಿನ ಜಂಟಿ ಸಮರಭ್ಯಾಸ್ ಅಲ್-ನಗಹ್-II, 2017 ಹಿಮಾಚಲ ಪ್ರದೇಶದ ದೌಲಧರ್ ಶ್ರೇಣಿ ಪ್ರದೇಶದಲ್ಲಿ ಜರುಗಿತು. ಉಭಯ ದೇಶಗಳ ನಡುವೆ ಮಿಲಿಟರಿ ಸಂಬಂಧವನ್ನು ಬಲಪಡಿಸುವುದು ಸಮರಭ್ಯಾಸದ ಧ್ಯೇಯವಾಗಿದೆ. ಅಲ್-ನಗಹ್-I ಸಮರಭ್ಯಾಸ ಒಮೆನ್ ನ ಮಸ್ಕಟ್ ನಲ್ಲಿ 2015 ರಲ್ಲಿ ಆಯೋಜಿಸಲಾಗಿತ್ತು.

ಪ್ರಮುಖಾಂಶಗಳು:

  • ಒಳನುಸುಳುವಿಕೆ ಹಾಗೂ ಭಯೋತ್ಪಾದನೆಯನ್ನು ಹತ್ತಿಕ್ಕುವ ಕಾರ್ಯಾಚರಣೆಯನ್ನು ಉಭಯ ದೇಶಗಳ ಸೇನಾ ಪಡೆಗಳು ಸಮರಭ್ಯಾಸದಲ್ಲಿ ತಾಲೀಮು ನಡೆಸಲಿವೆ. ಒಟ್ಟು 14 ದಿನಗಳ ಕಾಲ ಸಮರಭ್ಯಾಸ ನಡೆಯಲಿದೆ.
  • ಸುಮಾರು 60 ಮಿಲಿಟರಿ ಪಡೆಗಳು ಸಮರಭ್ಯಾಸದಲ್ಲಿ ಭಾಗವಹಿಸಲಿವೆ.

3 Thoughts to “ಪ್ರಚಲಿತ ವಿದ್ಯಮಾನಗಳು-ಮಾರ್ಚ್,7,2017”

  1. shivanand

    sir plz send gk sortcuts……

Leave a Comment

This site uses Akismet to reduce spam. Learn how your comment data is processed.