ಮಣಿಪುರ, ಗೋವಾ, ಉತ್ತರಖಂಡ್, ಉತ್ತರ ಪ್ರದೇಶ ಮತ್ತು ಪಂಜಾಬ್ ಗೆ ನೂತನ ಮುಖ್ಯಮಂತ್ರಿಗಳು
ಮಣಿಪುರ
ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಎನ್. ಬಿರೇನ್ ಸಿಂಗ್ ಅವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇಂಫಾಲದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಬಿರೇನ್ ಅವರೊಂದಿಗೆ ಇತರ ಇಬ್ಬರ ಚುನಾಯಿತ ಸದಸ್ಯರಾದ ವಿಶ್ವಜೀತ್ ಸಿಂಗ್ ಮತ್ತು ಜೋಯ್ ಕುಮಾರ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಜೋಯ್ ಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಮಣಿಪುರ ರಾಜ್ಯಪಾಲ ನಜ್ಮಾ ಹೆಫ್ತುಲ್ಲಾ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಮೂಲಕ ಮಣಿಪುರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಂತಾಗಿದೆ. ಬಿರೇನ್ ಸಿಂಗ್ ಅವರು ಮುಖ್ಯಮಂತ್ರಿ ಹುದ್ದೆಗೆ ಹೇರಿದ ಮೊದಲ ಬಿಎಸ್ಎಫ್ ಯೋಧ.
ಪಂಜಾಬ್
ಪಂಜಾಬ್ ನ ನೂತನ ಮುಖ್ಯಮಂತ್ರಿಯಾಗಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಅಮರೀಂದರ್ ಸಿಂಗ್ ಜೊತೆ ನವಜೋತ್ ಸಿಂಗ್ ಸಿಧು, ಮನ್ ಪ್ರೀತ್ ಬಾದಲ್, ಬ್ರಹ್ಮ ಮಹೀಂದ್ರಾ, ಚರಂಜಿತ್ ಚನ್ನಿ, ರಾಣಾ ಗುರ್ಜಿತ್, ಸಾಧು ಸಿಂಗ್ ಧರಮ್ಸೋತ್, ತ್ರಿಪಾಠ್ ಬಜ್ವಾ ಸಚಿವರಾಗಿಪ್ರಮಾಣವಚನ ಸ್ವಿಕರಿಸಿದರು. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾಗವಹಿಸಿದ್ದರು.
ಉತ್ತರ ಪ್ರದೇಶ
ಉತ್ತರ ಪ್ರದೇಶದ ನೂತನ ಮುಖ್ಯ ಮಂತ್ರಿಯಾಗಿ ಯೋಗಿ ಆದಿತ್ಯನಾಥ್ ರವರು ಪ್ರಮಾಣ ವಚನ ಸ್ವೀಕರಿಸಿದರು. ಯೋಗಿ ಆದಿತ್ಯನಾಥ್ ಹಿಂದು ಯುವ ವಾಹಿನಿ ಎಂಬ ಸಂಘದ ಸ್ಥಾಪಕರು. ಯೋಗಿಜೀ ಗೋರಕ್ ಪುರದ ಗೋರಕ್ ನಾಥ ಮಠದ ಪ್ರಧಾನ ಅರ್ಚಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಯೋಗಿ ಆದಿತ್ಯನಾಥ್ ತಮ್ಮ 26ನೆ ವಯಸ್ಸಿನಲ್ಲಿಯೇ ಉತ್ತರ ಪ್ರದೇಶದ ಗೋರಕ್ ಪುರದ ಮೂಲಕ ಲೋಕಸಭೆಗೆ ಆಯ್ಕೆಯಾಗಿದ್ದರು. 1998, 1999, 2004, 2009 ಮತ್ತು 2014ರ ಲೋಕಸಭಾ ಚುನಾವಣೆಗಳಲ್ಲಿ ಸತತವಾಗಿ ಜಯ ಗಳಿಸುತ್ತಾ ಬಂದಿದ್ದಾರೆ. ಯೋಗಿ ಅವರು ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯಾಗಿದ್ದಾರೆ.
ಗೋವಾ
ಗೋವಾದ ನೂತನ ಮುಖ್ಯಮಂತ್ರಿಯಾಗಿ ಪರ್ಸೇಕರ್ ಅವರೊಂದಿಗೆ ಇತರೆ 9 ಮಂದಿ ಸಚಿವರು ಸಹ ಪ್ರಮಾಣ ವಚನ ಸ್ವೀಕರಿಸಿದರು. ಪರ್ಸೇಕರ್ ಅವರು ಮನೋಹರ್ ಪರಿಕ್ಕರ್ ಸಚಿವ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದರು. ಉಪ ಮುಖ್ಯಮಂತ್ರಿ ಫ್ರಾನ್ಸಿಸ್ ಡಿಸೋಜಾ ಕೂಡ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದರು.
ಉತ್ತರಖಂಡ
ಉತ್ತರಖಂಡ್ ನ ಮಾಜಿ ಬಿಜೆಪಿ ಅಧ್ಯಕ್ಷ ತ್ರಿವೇಂದ್ರ ಸಿಂಗ್ ರಾವತ್ ಅವರು ಉತ್ತರಖಂಡದ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ. ಉತ್ತರಖಂಡ ವಿಧಾನಸಭೆ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ 57 ಕ್ಷೇತ್ರಗಳಲ್ಲಿ ಜಿಜೆಪಿ ಗೆಲುವು ಸಾಧಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ರಾವತ್ ಅವರು ಉತ್ತರಖಂಡದ 9ನೇ ಮುಖ್ಯಮಂತ್ರಿ.
ಪ್ರಪ್ರಥಮ ಸ್ವದೇಶಿ ನಿರ್ಮಿತ “ಮೇಧಾ” ರೈಲಿಗೆ ಚಾಲನೆ
ಭಾರತದಲ್ಲಿ ಮಾಡಿ (ಮೇಕ್ ಇನ್ ಇಂಡಿಯಾ) ಅಭಿಯಾನದಡಿ ಸಂಪೂರ್ಣವಾಗಿ ಸ್ವದೇಶದಲ್ಲೆ ತಯಾರಿಸಲಾದ “ಮೇಧಾ” ರೈಲಿಗೆ ಚಾಲನೆ ನೀಡಲಾಯಿತು. ಮುಂಬೈನ ದದರ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ವಿಡಿಯೋ ಸಂವಾದದ ಮೂಲಕ ರೈಲಿಗೆ ಚಾಲನೆ ನೀಡಿದರು. ಈ ರೈಲಿನ ಬೋಗಿಗಳನ್ನು ರೂ 43.23 ಕೋಟಿ ವೆಚ್ಚದಲ್ಲಿ ತಯಾರಿಸಲಾಗಿದ್ದು, ಜರ್ಮನಿಯಿಂದ ಆಮದು ಮಾಡಿಕೊಳ್ಳುವ ಬೋಗಿಗಳಿಗೆ ಹೋಲಿಸಿದಾಗ ರೂ 1 ಕೋಟಿ ಉಳಿತಾಯವಾಗಲಿದೆ. ಅಲ್ಲದೇ ವಿದೇಶಿ ವಿನಿಮಯದಿಂದ ಸರಿ ಸುಮಾರು $50 ಲಕ್ಷ ಉಳಿತಾಯವಾಗಲಿದೆ.
ಪ್ರಮುಖಾಂಶಗಳು:
- ಮೇಧಾ ರೈಲು ತಮಿಳುನಾಡಿನ ರಾಜಧಾನಿಯಾದ ಚೆನ್ನೈನಲ್ಲಿ ಇರುವ ಇಂಟೆಗ್ರಾಲ್ ಕೋಚ್ ಫ್ಯಾಕ್ಟರಿ(ICF)ಯಲ್ಲಿ ನಿರ್ಮಾಣಗೊಂಡಿದೆ.
- 12 ಬೋಗಿಗಳನ್ನು ಒಳಗೊಂಡಿರುವ ಮೇಧಾ ರೈಲಿನಲ್ಲಿ 6,050 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ ಹಾಗೂ 1,168 ಆಸನಗಳನ್ನು ಒಳಗೊಂಡಿದೆ.
- ಗಂಟೆಗೆ 110 ಕಿ.ಮೀ ಚಲಿಸುವ ಸಾಮರ್ಥ್ಯವನ್ನು ಮೇಧಾ ರೈಲು ಹೊಂದಿದೆ. ಇತರೆ ರೈಲುಗಳು 90 ರಿಂದ 100 ಕಿ.ಮೀ ವೇಗದಲ್ಲಿ ಚಲಿಸಬಲ್ಲವು.
- ಪ್ರತಿ ಬೋಗಿಗಳಲ್ಲಿ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದ್ದು, 30-35% ಇಂಧನ ಉಳಿತಾಯ ಆಗಲಿದೆ.
- ಈ ರೈಲಿನಲ್ಲಿ ಜಿಪಿಎಸ್ ಅಳವಡಿಸಲಾಗಿದ್ದು, ರೈಲು ನಿಲ್ದಾಣಗಳ ಬಗ್ಗೆ ಪೂರ್ವ ಮಾಹಿತಿಯನ್ನು ಪ್ರಯಾಣಿಕರಿಗೆ ಒದಗಿಸಲಿದೆ.
ಖ್ಯಾತ ಪವನಶಾಸ್ತ್ರಜ್ಞ “ದೇವ್ ರಾಜ್ ಸಿಕ್ಕಾ” ನಿಧನ
ಖ್ಯಾತ ಪವನಶಾಸ್ತ್ರಜ್ಞ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಫಿಕಲ್ ಮೆಟಿಯೊರಲಾಜಿಯ ಮಾಜಿ ನಿರ್ದೇಶಕ ದೇವ್ ರಾಜ್ ಸಿಕ್ಕಾ ಅವರು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಸಿಕ್ಕಾ ಅವರು ಭಾರತ ಪವನಶಾಸ್ತ್ರದ ಪಿತಾಮಹ ಹಾಗೂ ಮಾನ್ಸೂನ್ ಮ್ಯಾನ್ ಎಂದೇ ಪ್ರಸಿದ್ದರಾಗಿದ್ದರು. ಎಲ್ ನಿನೊ ವಿದ್ಯಮಾನ ಹಾಗೂ ಭಾರತದ ಮಾನ್ಸೂನ್ ಗೆ ಇರುವ ಸಂಬಂಧವನ್ನು 1982ರಲ್ಲೆ ಪ್ರತಿಪಾದಿಸಿದ್ದರು. ಆದರೆ ಅಂದಿನ ದಿನಗಳಲ್ಲಿ ಈ ಸಂಶೋಧನೆಗೆ ಅಷ್ಟೊಂದು ಮಹತ್ವವನ್ನು ನೀಡಲಾಗಿಲ್ಲ.
ದೇವ್ ರಾಜ್ ಸಿಕ್ಕಾ ಬಗ್ಗೆ:
- ಸಿಕ್ಕಾ ಅವರು ಮಾರ್ಚ್ 1, 1932 ರಲ್ಲಿ ಇಂದಿನ ಪಾಕಿಸ್ತಾನದ ಭಾಗವಾದ ಜಾಂಗ್ ನಲ್ಲಿ ಜನಿಸಿದರು. ದೇಶ ವಿಭಜನೆ ನಂತರ ಭಾರತಕ್ಕೆ ವಲಸೆ ಬಂದರು.
- ಆಗ್ರಾ ವಿಶ್ವವಿದ್ಯಾಲಯದಲ್ಲಿ ಭೌತಿಕ ರಸಾಯನಶಾಸ್ತ್ರದಲ್ಲಿ ಮಾಸ್ಟರ್ ಆಫ್ ಸೈನ್ಸ್ (ಎಂ.ಎಸ್ಸಿ) ಪದವಿ ಪಡೆದಿರುವ ಇವರು 1954ರಲ್ಲಿ ಭಾರತೀತ ಪವನ ಇಲಾಖೆಗೆ ಸೇರ್ಪಡೆಗೊಂಡರು.
- 1964ರಲ್ಲಿ ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಟಿಯೊರಲಾಜಿಗೆ ಸೇರ್ಪಡೆಗೊಂಡು, ಇದೇ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
- ಹವಾಮಾನ ಮುನ್ಸೂಚನೆಗೆ ಸಂಬಂಧಿಸಿದ ವಿನೂತನ ಮಾದರಿಗಳನ್ನು ಅಭಿವೃದ್ದಿಪಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
- ಕೇಂದ್ರ ಭೂ ವಿಜ್ಞಾನ ಸಚಿವಾಲಯದ “ಮಾನ್ಸೂನ್ ಮಿಷನ್”ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
- ಸಿಕ್ಕಾ ಅವರು ಪವನಶಾಸ್ತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಐಎಂಡಿ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಸರ್ ಗಿಲ್ಬರ್ಟ್ ವಾಕರ್ ಗೋಲ್ಡ್ ಮೆಡಲ್ ಲಭಿಸಿದೆ.
ಹತ್ತು ರೂ ಮುಖಬೆಲೆಯ ಪ್ಲಾಸ್ಟಿಕ್ ನೋಟು ಮುದ್ರಿಸಲು ಆರ್ಬಿಐ ಗೆ ಅನುಮತಿ
ಹತ್ತು ರೂಪಾಯಿ ಮುಖಬೆಲೆಯ ಪ್ಲಾಸ್ಟಿಕ್ ನೋಟುಗಳನ್ನು ಪ್ರಾಯೋಗಿಕವಾಗಿ ಚಲಾವಣೆಗೆ ತರಲು ಆರ್ಬಿಐಗೆ ಕೇಂದ್ರ ಹಣಕಾಸಯ ಸಚಿವಾಲಯ ಅನುಮತಿ ನೀಡಿದೆ. ಈ ಬಗ್ಗೆ ಹಣಕಾಸು ಸಚಿವಾಲಯದ ಸಹಾಯಕ ಸಚಿವ ಅರ್ಜುನ್ ರಾಮ್ ಮೇಘಾವಾಲ್ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ಪ್ರಮುಖಾಂಶಗಳು:
- ವಿಶಿಷ್ಟ ಭೌಗೋಳಿಕ ಹಾಗೂ ಹವಾಮಾನ ಗುಣಗಳನ್ನು ಹೊಂದಿರುವ ದೇಶದ ಐದು ನಗರಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುವುದು.
- ಪ್ಲಾಸ್ಟಿಕ್ ನೋಟುಗಳ ಮುದ್ರಣಕ್ಕೆ ಬೇಕಾದ ಪ್ಲಾಸ್ಟಿಕ್ ಅನ್ನು ಖರೀದಿಸಲು ಹಾಗೂ ಪ್ರಾಯೋಗಿಕವಾಗಿ ಮುದ್ರಿಸಲು ಹಣಕಾಸು ಸಚಿವಾಲಯ ಭಾರತೀಯ ರಿಸರ್ವ್ ಬ್ಯಾಂಕಿಗೆ ಅನುಮತಿ ನೀಡಿದೆ.
- ಪ್ಲಾಸ್ಟಿಕ್ ನೋಟುಗಳು ಕಾಗದದ ನೋಟುಗಳಿಗಿಂತ ಸುರಕ್ಷಿತವಾಗಿ ಇರಲಿದ್ದು, ದೀರ್ಘಕಾಲ ಬಾಳಿಕೆ ಬರಲಿವೆ. ಕನಿಷ್ಠ ಐದು ವರ್ಷಗಳ ಕಾಲ ಇವು ಬಾಳಿಕೆ ಬರಲಿದ್ದು, ನಕಲಿ ಮಾಡುವುದು ಸಹ ಕಷ್ಟ.
- ಪ್ಲಾಸ್ಟಿಕ್ ನೋಟುಗಳನ್ನು 1988 ರಲ್ಲಿ ಆಸ್ಟ್ರೇಲಿಯಾ ಮೊದಲ ಬಾರಿಗೆ ಅಳವಡಿಸಿಕೊಂಡಿತು. ಪ್ರಸ್ತುತ 20ಕ್ಕೂ ಹೆಚ್ಚು ದೇಶಗಳು ಪ್ಲಾಸ್ಟಿಕ್ ನೋಟುಗಳನ್ನು ಕರೆನ್ಸಿಯಾಗಿ ಅಳವಡಿಸಿಕೊಂಡಿವೆ.
ಹಿನ್ನಲೆ:
ಪ್ಲಾಸ್ಟಿಕ್ ನೋಟುಗಳನ್ನು ಮೊದಲು ಪ್ರಾಯೋಗಿಕವಾಗಿ ಚಲಾವಣೆಗೆ ತಂದು, ನಂತರ ದೇಶದಾದ್ಯಂತ ಚಲಾವಣೆಗೆ ತರುವ ಬಗ್ಗೆ ಆರ್ಬಿಐ ಈ ಮೊದಲೇ ಯೋಜನೆ ರೂಪಿಸಿತ್ತು. ಮೈಸೂರು, ಕೊಚ್ಚಿ, ಜೈಪುರ, ಶಿಮ್ಲಾ ಹಾಗೂ ಭುವನೇಶ್ವರದಲ್ಲಿ 10 ರೂ. ಮುಖಬೆಲೆಯ 100 ಕೋಟಿ ನೋಟನ್ನು ಪ್ರಾಯೋಗಿಕವಾಗಿ ಚಲಾವಣೆಗೆ ತರುವುದಾಗಿ ಬಿಜೆಪಿ ಸರ್ಕಾರ 2014ರಲ್ಲಿ ಸಂಸತ್ತಿಗೆ ಮಾಹಿತಿ ನೀಡಿತ್ತು. ಆದರೆ ಇನ್ನೂ ಅದು ಜಾರಿಗೆ ಬಂದಿಲ್ಲ. ಪ್ಲಾಸ್ಟಿಕ್ ನೋಟುಗಳನ್ನು ಸುಲಭವಾಗಿ ನಕಲು ಮಾಡಲು ಸಾಧ್ಯವಿಲ್ಲ.
- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾರತ ಹಾಗೂ ಮಧ್ಯ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೆದರ್ಲೆಂಡ್ ನ ಆ್ಯಮ್ ಸ್ಟರ್ಡ್ಯಾಮ್ ನಲ್ಲಿ ನಡೆದ ವಿಶ್ವದ ಏರ್ಪೋರ್ಟ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಲಾಗಿದೆ. ಪ್ರಯಾಣಿಕರ ಅಭಿಪ್ರಾಯ ಪಡೆದು ಸಮೀಕ್ಷೆ ನಡೆಸಿ 2017ರ ಏರ್ಪೋರ್ಟ್ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಜುಲೈ 2016ರಿಂದ 2017ರವರೆಗೆ ಜಗತ್ತಿನ 550 ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಭವವನ್ನು ಸಂಗ್ರಹಿಸಿ ಈ ಸಮೀಕ್ಷೆ ಮಾಡಲಾಗಿದೆ. ಚೆಕ್ ಇನ್, ಅರೈವಲ್, ಟ್ರಾನ್ಸ್ ಫರ್, ಶಾಪಿಂಗ್, ಸೆಕ್ಯೂರಿಟಿ, ಇಮಿಗ್ರೇಶನ್ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.
chief minister of goa manohar parrikkar
It’s very useful to the people Thank you for this contribution