ರಾಷ್ಟ್ರೀಯ ಜಲಮಾರ್ಗ-1 ಅಭಿವೃದ್ದಿಗೆ ವಿಶ್ವಬ್ಯಾಂಕಿನಿಂದ 375 ಮಿಲಿಯನ್ ಡಾಲರ್ ನೆರವು

ರಾಷ್ಟ್ರೀಯ ಜಲಮಾರ್ಗ-1ರ ಸಾಮರ್ಥ್ಯವನ್ನು ಹೆಚ್ಚಿಸುವ ಮಹಾತ್ವಕಾಂಕ್ಷಿ ಯೋಜನೆಗೆ ವಿಶ್ವಬ್ಯಾಂಕ್ $375 ಮಿಲಿಯನ್ ಡಾಲರ್ ನೆರವು ಘೋಷಿಸಿದೆ. ವಿಶ್ವಬ್ಯಾಂಕಿನ ನೆರವಿನಿಂದ ಪಶ್ಚಿಮ ಬಂಗಾಳದ ಹಾಲ್ದಿಯಾದಿಂದ ಉತ್ತರಪ್ರದೇಶದ ವಾರಣಾಸಿ ನಡುವಿನ ರಾಷ್ಟ್ರೀಯ ಜಲಮಾರ್ಗ-1ರನ್ನು “ಜಲ ಮಾರ್ಗ ವಿಕಾಸ ಯೋಜನೆ”ಯಡಿ ಅಭಿವೃದ್ದಿಪಡಿಸಲಾಗುವುದು.  ಯೋಜನೆಯಿಂದ ಸುಮಾರು 1,390 ಕಿ.ಮೀ ಉದ್ದದ ಜಲಮಾರ್ಗದಲ್ಲಿ 1500-2000 ಟನ್ ತೂಕದ ಸರಕು ಹಡುಗುಗಳು ಮುಕ್ತವಾಗಿ ಸಂಚಾರ ಮಾಡಬಹುದಾಗಿದೆ. ಯೋಜನೆ ಅಂಗವಾಗಿ ಭಾರತೀಯ ಒಳನಾಡು ಜಲಮಾರ್ಗಗಳ ಪ್ರಾಧಿಕಾರ ರಾಷ್ಟ್ರೀಯ ಜಲಮಾರ್ಗ-1ರಲ್ಲಿ “ನದಿ ಮಾಹಿತಿ ಸೇವಾ ಸಂಸ್ಥೆ”ಯನ್ನು ಸ್ಥಾಪಿಸಲಿದೆ. ಈ ವ್ಯವಸ್ಥೆ ದೇಶದಲ್ಲೆ ಪ್ರಥಮ ಎನಿಸಲಿದೆ.

ಅವಶ್ಯಕತೆ:

ಟ್ರಾಫಿಕ್ ಸಮಸ್ಯೆಯಿಂದಾಗಿ ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಸರಕು ಸಾಗಣೆ ದುಸ್ಥರವಾಗಿದೆ. ಆಗಾಗಿ ರಾಷ್ಟ್ರೀಯ ಜಲಮಾರ್ಗ-1 ಅಭಿವೃದ್ದಿಯು ಪರ್ಯಾಯ, ಕಾರ್ಯಸಾಧುವಾದ, ಆರ್ಥಿಕ, ಸಮರ್ಥ ಮತ್ತು ಪರಿಸರ-ಸ್ನೇಹಿ ಸಾರಿಗೆ ವಿಧಾನಕ್ಕೆ ದಾರಿಮಾಡಿಕೊಡಲಿದೆ.

ರಾಷ್ಟ್ರೀಯ ಜಲಮಾರ್ಗ-1:

ರಾಷ್ಟ್ರೀಯ ಜಲಮಾರ್ಗ-1 ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಮೂಲಕ ಹಾದು ಹೋಗುತ್ತದೆ. ಆ ಮೂಲಕ ಈ ರಾಜ್ಯಗಳ ಪ್ರಮುಖ ನಗರಗಳಾದ ಹಾಲ್ದಿಯಾ, ಹೌರ, ಕೊಲ್ಕತ್ತ, ಭಗಲ್ಪುರ, ಪಾಟ್ನಾ, ಘಾಜಿಪುರ, ವಾರಾಣಾಸಿ ಮತ್ತು ಅಲಹಬಾದ್ ನಗರಗಳಿಗೆ ಸರಕು ಸಾಗಣೆ ಸೇವೆಯನ್ನು ಒದಗಿಸುತ್ತಿದೆ.

ರಾಷ್ಟ್ರೀಯ ಒಳನಾಡು ಜಲಮಾರ್ಗಗಳ ಪ್ರಾಧಿಕಾರ:

ರಾಷ್ಟ್ರೀಯ ಒಳನಾಡು ಜಲಮಾರ್ಗಗಳ ಪ್ರಾಧಿಕಾರ ಒಂದು ಶಾಸನಬದ್ದ ಸಂಸ್ಥೆಯಾಗಿದ್ದು, ಜಲಮಾರ್ಗಗಳ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಹೊಂದಿದೆ. ಇದರ ಕೇಂದ್ರ ಕಚೇರಿ ಉತ್ತರ ಪ್ರದೇಶದ ನೋಯ್ಡಾದಲ್ಲಿದೆ.

ಜಲ ಮಾರ್ಗ ವಿಕಾಸ ಯೋಜನೆ:

ಜಲ ಮಾರ್ಗ ವಿಕಾಸ ಯೋಜನೆಯು ಗಂಗಾನದಿಯಲ್ಲಿ ಅಲಹಾಬಾದ್ ಮತ್ತು ಹಾಲ್ದಿಯಾ ನಡುವೆ 1630 ಕಿ.ಮೀ ಉದ್ದದ ಜಲಮಾರ್ಗವನ್ನು ಅಭಿವೃದ್ದಿಪಡಿಸುವ ಉದ್ದೇಶವನ್ನು ಹೊಂದಿದೆ. ಸರಿಸುಮಾರು 1500 ಟನ್ ತೂಕದ ನೌಕೆಗಳು ವಾಣಿಜ್ಯ ಉದ್ದೇಶಕ್ಕಾಗಿ ಮುಕ್ತವಾಗಿ ಸಂಚಾರ ನಡೆಸುವಂತೆ ಅಭಿವೃದ್ದಿಪಡಿಸುವುದು ಯೋಜನೆಯ ಗುರಿ.

LPG ಆಮದು: ವಿಶ್ವದಲ್ಲಿ ಭಾರತಕ್ಕೆ ಎರಡನೇ ಸ್ಥಾನ

ಅಡುಗೆ ಅನಿಲ ಆಮದು ಮಾಡಿಕೊಳ್ಳುವಲ್ಲಿ ಭಾರತ ವಿಶ್ವದಲ್ಲೆ ಎರಡನೇ ಸ್ಥಾನದಲ್ಲಿದೆ. ಈ ಮುಂಚೆ ಜಪಾನ್ LPGಯನ್ನು ಆಮದು ಮಾಡಿಕೊಳ್ಳುವ ವಿಶ್ವದ ಎರಡನೇ ದೇಶವೆನಿಸಿತ್ತು. ಪ್ರಸ್ತುತ ಚೀನಾ ವಿಶ್ವದಲ್ಲೆ ಮೊದಲ ಸ್ಥಾನದಲ್ಲಿದೆ. ಪೆಟ್ರೋಲಿಯಂ ಪ್ಲಾನಿಂಗ್ & ಅನಾಲಿಸಿಸ್ ಸೆಲ್ ಈ ವರದಿಯನ್ನು ಬಿಡುಗಡೆಗೊಳಿಸಿದ್ದು, 2016-17ನೇ ಸಾಲಿನ ಆರ್ಥಿಕ ವರ್ಷದಲ್ಲಿ ದೇಶದ LPG ಆಮದು ಪ್ರಮಾಣದಲ್ಲಿ ಶೇ 23% ರಷ್ಟು ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಚಿತ ಅನಿಲ ಸಂಪರ್ಕ ಯೋಜನೆಗಳಿಂದಾಗಿ LPG ಆಮದು ಹೆಚ್ಚಳವಾಗಲು ಪ್ರಮುಖ ಕಾರಣ ಎನ್ನಲಾಗಿದೆ. ಕಡು ಬಡ ಕುಟುಂಬ ಮಹಿಳೆಯರು ಮರದ ಕಟ್ಟಿಗೆ ಹಾಗೂ ಸಗಣೆ ಬೆರಣಿಯನ್ನು ಉರುವಲಾಗಿ ಬಳಸುವುದನ್ನು ತಡೆಯಲು ಮೇ 2016ರಿಂದ ಉಚಿತ ಅನಿಲ ಸಂಪರ್ಕ  ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದರಿಂದಾಗಿ ದೇಶದಲ್ಲಿ ಸಕ್ರಿಯವಾಗಿ LPG ಬಳಸುವವರ ಸಂಖ್ಯೆ 200 ಮಿಲಿಯನ್ ರಷ್ಟಿದ್ದು, ಜಪಾನಿಗಿಂತ ಶೇ 60% ರಷ್ಟು ಹೆಚ್ಚು. ವಿಶ್ವಸಂಸ್ಥೆಯ ವರದಿ ಪ್ರಕಾರ ಮಾಲಿನ್ಯಕಾರಕ ಉರುವಲು ಬಳುಸುವುದರಿಂದ ಪ್ರತಿ ವರ್ಷ ಭಾರತದಲ್ಲಿ 1.3 ಮಿಲಿಯನ್ ಸಾವು ಸಂಭವಿಸುತ್ತಿದೆ. 2019ರ ವೇಳೆಗೆ ದೇಶದ ಶೇ80% ರಷ್ಟು ಕುಟುಂಬಗಳಿಗೆ ಅಡುಗೆ ಅನಿಲ ಸೌಲಭ್ಯವನ್ನು ಕಲ್ಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉಜ್ವಲ ಯೋಜನೆಗೆ ಮೇ 2016 ರಂದು ಚಾಲನೆ ನೀಡಿದರು. “ಸ್ವಚ್ಚ ಇಂಧನ, ಉತ್ತಮ ಜೀವನ” ಯೋಜನೆಯ ಟ್ಯಾಗ್ ಲೈನ್. ಯೋಜನೆಯ ಉದ್ದೇಶಗಳು:

  • ದೇಶದ ಎಲ್ಲ ನಾಗರಿಕರಿಗೂ ಎಲ್ ಪಿಜಿ ಸಂಪರ್ಕ ಸಿಕ್ಕಿದಂತೆ ಮಾಡುವುದು
  • ಮಹಿಳೆಯರ ಆರೋಗ್ಯ ಸೂಧಾರಣೆ ಮಾಡುವುದು
  • ಮಾಲಿನ್ಯ ನಿಯಂತ್ರಣ

ಪಂಚಾಯತ್ ರಾಜ್ ಇಲಾಖೆಯಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆಗೆ ರಾಜ್ಯಕ್ಕೆ “ಇ-ಪುರಸ್ಕಾರ”

ಕರ್ನಾಟಕ ಪಂಚಾಯತ್‌ ರಾಜ್‌ ಇಲಾಖೆಗೆ 2015-16ನೇ ಸಾಲಿನ “ಇ-ಪುರಸ್ಕಾರ” ಪ್ರಶಸ್ತಿ ಲಭಿಸಿದೆ. ಇಲಾಖೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ಐಸಿಟಿ) ಸಮರ್ಥ ಬಳಕೆಗಾಗಿ ಈ ಪ್ರಶಸ್ತಿ ಲಭಿಸಿದೆ. ಏಪ್ರಿಲ್ 24ರಂದು ಲಖನೌದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ

  • ಸತತ ಮೂರನೇ ಬಾರಿ ‘ಇ–ಪುರಸ್ಕಾರ’ ರಾಜ್ಯಕ್ಕೆ ಲಭಿಸಿದೆ.
  • ಪಂಚಾಯತ್ ರಾಜ್ ಇಲಾಖೆಯಲ್ಲಿ ಅಭಿವೃದ್ದಿ ಕಾಮಗಾರಿಗಳಲ್ಲಿ ಪಾರದರ್ಶಕತೆ ಸಾಧಿಸಲು “ಗಾಂಧಿ ಸಾಕ್ಷಿ ಕಾಯಕ” ಜಾರಿಗೆ ತರಲಾಗಿದೆ.
  • ಇದೇ ವೇಳೆ ರಾಜ್ಯಮಟ್ಟದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ, ಪುತ್ತೂರು ಮತ್ತು ಸಾಗರ ತಾಲ್ಲೂಕು ಪಂಚಾಯಿತಿ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಗ್ರಾಮ ಪಂಚಾಯಿತಿಗೆ ಇ–ಪುರಸ್ಕಾರ ಲಭಿಸಿದೆ.

Leave a Comment

This site uses Akismet to reduce spam. Learn how your comment data is processed.