ಫುಟ್‌ಬಾಲ್ ಶ್ರೇಯಾಂಕ: ಭಾರತಕ್ಕೆ ನೂರನೇ ಸ್ಥಾನ
ಫಿಫಾ ಅಂತಾರಾಷ್ಟ್ರೀಯ ಪುಟ್ಬಾಲ್ ಶ್ರೇಯಾಂಕದಲ್ಲಿ ಭಾರತ ನೂರನೇ ಸ್ಥಾನ ಪಡೆದುಕೊಳ್ಳುವ ಮೂಲಕ ಟಾಪ್ ನೂರು ರಾಷ್ಟ್ರಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಭಾರತದ ಪಾಲಿಗೆ ಇದೊಂದು ಐತಿಹಾಸಿಕ ಸಾಧನೆ. ಏಕೆಂದರೆ 21 ವರ್ಷಗಳ ನಂತರ ಭಾರತ ಟಾಪ್ 100 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನಪಡೆದಿದೆ. ನಿಕಾರಗುವಾ, ಲಿಥುಯಾನಿಯಾ, ಈಸ್ಟೋನಿಯಾ ರಾಷ್ಟ್ರಗಳ ಜೊತೆ 331 ಅಂಕಗಳನ್ನು ಪಡೆಯುವ ಮೂಲಕ ಭಾರತ 100ನೇ ಸ್ಥಾನವನ್ನು ಪಡೆದುಕೊಂಡಿದೆ.
- ಏಪ್ರಿಲ್ 2017ರ ಅಂತ್ಯಕ್ಕೆ ಭಾರತ 101ನೇ ಸ್ಥಾನವನ್ನು ಪಡೆದುಕೊಂಡಿತ್ತು. ಆದರೆ ಕಾಂಬೋಡಿಯಾ ಮತ್ತು ಮ್ಯಾನ್ಮಾರ್ ದೇಶಗಳ ವಿರುದ್ದ ಗೆಲುವು ಸಾಧಿಸಿದ ಕಾರಣ ಒಂದು ಸ್ಥಾನ ಏರಿಕೆ ಆಗಿದೆ.
- ಮಾರ್ಚ್ 2015ರ ವರದಿಗೆ ಹೋಲಿಸಿದರೆ ಭಾರತ ತಂಡ ಅಮೋಘ ಸಾಧನೆ ಮಾಡಿದೆ. ಮಾರ್ಚ್ 2015 ರಲ್ಲಿ ಭಾರತ 173ನೇ ಸ್ಥಾನವನ್ನು ಪಡೆದುಕೊಂಡಿತ್ತು.
- 1996ರಲ್ಲಿ 94ನೇ ಸ್ಥಾನ ಗಳಿಸಿದ್ದು ಭಾರತ ಫುಟ್‌ಬಾಲ್ ತಂಡದ ಇದುವರೆಗಿನ ಸಾಧನೆಯಾಗಿದೆ.
- ಬ್ರೆಜಿಲ್, ಅರ್ಜೆಂಟೀನಾ, ಜರ್ಮನಿ, ಚಿಲಿ ಹಾಗೂ ಕೊಲಂಬಿಯಾ ತಂಡಗಳು ಕ್ರಮವಾಗಿ ಅಗ್ರ ಐದು ಸ್ಥಾನಗಳಲ್ಲಿ ಕಾಣಿಸಿಕೊಂಡಿವೆ.
ಕಾಫಿ ಮತ್ತು ಟೀ ಮಂಡಳಿಗೆ ಹೊಸ ಅಧ್ಯಕ್ಷರ ನೇಮಕಕ್ಕೆ ಅಸ್ತು
ಕೇಂದ್ರ ಕ್ಯಾಬಿನೆಟ್ ನೇಮಕ ಸಮಿತಿ ಟೀ ಮಂಡಳಿ ಹಾಗೂ ಕಾಫಿ ಮಂಡಳಿಯ ಅಧ್ಯಕ್ಷರ ನೇಮಕಾತಿಯನ್ನು ಅನುಮೋದಿಸಿದೆ. ಟೀ ಮಂಡಳಿಯ ಅಧ್ಯಕ್ಷರಾಗಿ ಪ್ರಭಾತ್ ಕಮಲ್ ಬೆಝ್ಬೊರ್ ಹಾಗೂ ಕಾಫಿ ಮಂಡಳಿಯ ಅಧ್ಯಕ್ಷರಾಗಿ ಎಂ.ಎಸ್.ಬೋಜೆ ಗೌಡ ಅವರನ್ನು ನೇಮಕ ಮಾಡಲಾಗಿದೆ. ಪ್ರಭಾತ್ ಕಮಲ್ ಅವರು ಚಹಾ ಒಕ್ಕೂಟದ ಮುಂಚೂಣಿ ಉದ್ಯಮಿ. ಈ ಹಿಂದೆ ಅಮೆರಿಕದಲ್ಲಿ ಬ್ಯಾಂಕರ್ ಆಗಿದ್ದರು. ಪ್ರಸ್ತುತ ಇವರು ಚಹಾ ಸಂಶೋಧನಾ ಒಕ್ಕೂಟದ ಮುಖ್ಯಸ್ಥ ಸಹ ಆಗಿದ್ದಾರೆ. ಅಸ್ಸಾಂ ಟೀ ಬೆಳೆಗಾರರ ಒಕ್ಕೂಟದ ಅಧ್ಯಕ್ಷರು ಸಹ ಆಗಿದ್ದರು.
- ಪ್ರಭಾತ್ ಕಮಲ್ ಅವರು ಟೀ ಮಂಡಳಿಯ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ ಮೊದಲ ಐಎಎಸ್ ಯೇತರ ಅಧಿಕಾರಿ.
- ನವೆಂಬರ್ 1, 2018ರ ತನಕ ಇವರು ಅಧಿಕಾರದಲ್ಲಿ ಇರಲಿದ್ದಾರೆ.
- ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆ ಪ್ರಕಾರ ಕೇಂದ್ರ ವಾಣಿಜ್ಯ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕೃಷಿ ಮಂಡಳಿಗಳ ಅಧ್ಯಕ್ಷರುಗಳು ಐಎಎಸ್ ಅಲ್ಲದ ಹಾಗೂ ಉದ್ಯಮಿಗಳು ಮಾತ್ರ ಆಗಿರಬೇಕು. ಆದರೆ ಉಪಾಧ್ಯಕ್ಷರುಗಳು ಐಎಎಸ್ ಅಧಿಕಾರಿಗಳು ಆಗಿರತಕ್ಕದ್ದು.
ಟೀ ಮಂಡಳಿ:
ಟೀ ಮಂಡಳಿಯ ಕೇಂದ್ರ ಕಚೇರಿ ಕಲ್ಕತ್ತಾದಲ್ಲಿದೆ. ಟೀ ಬೆಳೆಯುವುದು ಹಾಗೂ ರಫ್ತುಮಾಡುವುದನ್ನು ನಿಯಂತ್ರಿಸುವುದು ಮಂಡಳಿಯ ಪ್ರಮುಖ ಕರ್ತವ್ಯ. ಪ್ರಸ್ತುತ ದೇಶದ ಟೀ ಉದ್ಯಮ ಅಧಿಕ ಉತ್ಪಾದನಾ ವೆಚ್ಚ, ಸಾಮಾಜಿಕ ಜವಾಬ್ದಾರಿ, ಕಾರ್ಮಿಕರ ಸಮಸ್ಯೆ ಹಾಗೂ ವೇತನಗಳ ಸಮಸ್ಯೆಯಿಂದ ಭಾದಿತವಾಗಿದೆ.
ಎಂ ಎಸ್ ಬೋಜೆಗೌಡ:
ಪ್ರಖ್ಯಾತ ಕಾಫಿ ಬೆಳೆಗಾರ ಎಂ ಎಸ್ ಬೋಜೆಗೌಡ ಅವರನ್ನು ಕಾಫಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಬೋಜೆಗೌಡ ಅವರು ಡಿಸೆಂಬರ್ 14, 2018 ರವರೆಗೆ ಅಧಿಕಾರದಲ್ಲಿ ಇರಲ್ಲಿದ್ದಾರೆ. ಬೆಂಗಳೂರು ಮೂಲಕ ಕಾಫಿ ಮಂಡಳಿ ಕಾಫಿ ಬೆಳೆಗಾರರ ಹಿತಾಸಕ್ತಿಯನ್ನು ಕಾಯುವ ಉದ್ದೇಶವನ್ನು ಹೊಂದಿದೆ.
ಕನ್ನಡ ಮತ್ತು ನೇಪಾಳಿ ಸಾಹಿತ್ಯ ನಡುವೆ ಒಪ್ಪಂದ
ಕನ್ನಡ ಮತ್ತು ನೇಪಾಳಿ ಸಾಹಿತ್ಯವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮಹತ್ವದ ಒಪ್ಪಂದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಸಹಿ ಹಾಕಿದೆ. ನೇಪಾಳದ ಕಲಾ ಡಾಟ್ ಕಾಂ ಪ್ರತಿಷ್ಠಾನದ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ನಡುವೆ ಸಹಿ ಹಾಕಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಹಾಗೂ ನೇಪಾಳಿ ಕಲಾ ಡಾಟ್ ಕಾಂ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಮೊಮಿಲ ಜೋಶಿ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
- ಈ ಒಪ್ಪಂದದ ಪ್ರಕಾರ ಕನ್ನಡದ 50 ಕವಿಗಳ 50 ಕವನಗಳನ್ನು ನೇಪಾಳಿ ಭಾಷೆಗೆ ಭಾಷಾಂತರಿಸಲಾಗುವುದು. ಇದೇ ರೀತಿ ನೇಪಾಳದ 50 ಕವಿತೆಗಳನ್ನು ಕನ್ನಡಕ್ಕೆ ಭಾಷಾಂತರಿಸಬೇಕು.
- ಕನ್ನಡ ಸಾಹಿತ್ಯ ಪರಿಷತ್ತು ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿದೆ. ಎಂದು
ಕನ್ನಡ ಸಾಹಿತ್ಯ ಪರಿಷತ್ತು:
ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ 1915 ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ 1938ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ. ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸಲು ಈ ಹಿಂದೆ ಸಾಧ್ಯವಾಗಿಸಿದೆ. ಈ ಸಂಸ್ಥೆಯ ಈಗಿನ ಅಧ್ಯಕ್ಷರಾಗಿ ಡಾ. ಮನು ಬಳಿಗಾರ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
- ಬಿಡಿಎ ಗೆ ಹುಡ್ಕೊ ಪ್ರಶಸ್ತಿ: ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ನಿಗಮ ನೀಡುವ ಹುಡ್ಕೊ ಪ್ರಶಸ್ತಿಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಲಭಿಸಿದೆ. ನವದೆಹಲಿಯಲ್ಲಿ ನಡೆದ ನಿಗಮದ 47ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಹಾಗೂ ಎಂಜಿನಿಯರಿಂಗ್ ಅಧಿಕಾರಿ ಎನ್.ಜಿ.ಗೌಡಯ್ಯ ಅವರು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
- ಸುನೀಲ್ ಚೆಟ್ರಿಗೆ ಐಲೀಗ್ ಉತ್ತಮ ಆಟಗಾರ ಪ್ರಶಸ್ತಿ: ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡದ ನಾಯಕ ಸುನಿಲ್ ಚೆಟ್ರಿ ಈ ಬಾರಿಯ ಐಲೀಗ್‌ನಲ್ಲಿ ‘ಉತ್ತಮ ಆಟಗಾರ’ ಪ್ರಶಸ್ತಿ ಪಡೆದಿದ್ದಾರೆ.ಐಲೀಗ್ ಫುಟ್‌ಬಾಲ್ ಟೂರ್ನಿ ಯಲ್ಲಿ ಚೆಟ್ರಿ ಒಟ್ಟು ಏಳು ಗೋಲು ಗಳನ್ನು ದಾಖಲಿಸಿದ್ದರು. ಮೋಹನ್ ಬಾಗನ್ ತಂಡದ ದೇವಜಿತ್ ಮಜುಮ್‌ದಾರ್‌ಗೆ ‘ಶ್ರೇಷ್ಠ ಗೋಲ್ ಕೀಪರ್’ ಪ್ರಶಸ್ತಿ ಲಭಿಸಿದೆ. ಬಾಗನ್ ತಂಡದ ಅನಾಸ್ ಎದತೋಡಿಕಾ ‘ಉತ್ತಮ ಡಿಫೆಂಡರ್’ ಹಾಗೂ ಐಜ್ವಾಲ್ ಎಫ್‌ಸಿ ಆಟಗಾರ ಅಲ್ಫ್ರೆಡ್ ಕೆಮಹ್ ಜರಾಯನ್ ‘ ಮಿಡ್‌ಫೀಲ್ಡರ್’ ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ಉತ್ತಮ ಸ್ಟ್ರೈಕರ್’ ಪ್ರಶಸ್ತಿ ಶಿಲ್ಲಾಂಗ್ ಲಜಾಂಗ್ ತಂಡದ ಪೆರಿಕ್ ದಿಪಿಂದಾ ಡೆಕಾ ಅವರ ಪಾಲಾಗಿದೆ.
- ‘ದಿ ಒನ್ ರುಪೀ ಟ್ರಿಕ್’ ಸರಣಿ ವರದಿಗೆ ‘ತನಿಖಾ ಪತ್ರಿಕೋದ್ಯಮ–2016’ ಪ್ರಶಸ್ತಿ: ಈ ಸಾಲಿನ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ (ಎಸಿಜೆ) ಪ್ರಶಸ್ತಿಗಳು ಪ್ರಕಟವಾಗಿದ್ದು, ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಪತ್ರಕರ್ತರಾದ ಶ್ಯಾಮಲಾಲ್ ಯಾದವ್ ಮತ್ತು ಜಯ್ ಮಜುಮ್‌ದಾರ್ ಅವರು, ‘ತನಿಖಾ ಪತ್ರಿಕೋದ್ಯಮ–2016’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ‘ಜನಧನ’ ಯೋಜನೆಯ ಫಲಾನುಭವಿಗಳಿಗೆ ಬ್ಯಾಂಕ್ ಅಧಿಕಾರಿಗಳು ನೀಡುತ್ತಿದ್ದ ಕಿರುಕುಳ ಸಂಬಂಧ ಈ ಇಬ್ಬರೂ ಮಾಡಿದ್ದ ‘ದಿ ಒನ್ ರುಪೀ ಟ್ರಿಕ್’ ಸರಣಿ ವರದಿಗಳಿಗೆ ಈ ಪ್ರಶಸ್ತಿ ಸಂದಿದೆ. ಪ್ರಶಸ್ತಿಯು ಪ್ರಶಸ್ತಿ ಪತ್ರ ಮತ್ತು ₹ 2 ಲಕ್ಷ ನಗದು ಒಳಗೊಂಡಿದೆ.