ನಿರ್ಭಯ ನಿಧಿಯಡಿ ರೈಲ್ವೆ ನಿಲ್ದಾಣಗಳಲ್ಲಿ ಸಿಸಿಟಿವಿ ಅಳವಡಿಸಲು ತೀರ್ಮಾನ

ಮಹಿಳೆಯರು ಸೇರಿದಂತೆ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ನಿರ್ಭಯ ನಿಧಿಯ ಅಡಿಯಲ್ಲಿ ರೂ. 500 ಕೋಟಿ ವೆಚ್ಚದಲ್ಲಿ 19,000 ಹೈ ಡೆಫಿನಿಷನ್ ಸಿಸಿಟಿವಿ ಕ್ಯಾಮೆರಾಗಳನ್ನು ದೇಶಾದ್ಯಂತ 983 ರೈಲು ನಿಲ್ದಾಣಗಳಲ್ಲಿ ಸ್ಥಾಪಿಸಲು ತೀರ್ಮಾನಿಸಿದೆ. ರೈಲ್ವೆ ಪ್ಲಾಟ್ ಫಾರಂ ಮತ್ತು ಪ್ರಯಾಣಿಕರು ಕಾಯುವ ಪ್ರದೇಶಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ತರಬೇತಿ ಪಡೆದ ರೈಲ್ವೆ ಪೊಲೀಸ್ ಸಿಬ್ಬಂದಿಗಳು ಸಿ.ಸಿ.ಟಿ.ವಿ ದೃಶ್ಯಗಳ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿರಲಿದ್ದಾರೆ.

            ಭಾರತೀಯ ರೈಲ್ವೆ ಸುಮಾರು 8,000 ರೈಲ್ವೆ ನಿಲ್ದಾಣ ಕೇಂದ್ರಗಳನ್ನು ಹೊಂದಿದೆ. ಇವುಗಳಲ್ಲಿ ಕೇವಲ 344 ಕೇಂದ್ರಗಳಿಗೆ ಮಾತ್ರ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದಲ್ಲದೆ, ಶಾನ್-ಇ-ಪಂಜಾಬ್ ಎಕ್ಸ್ಪ್ರೆಸ್ ಸಂಪೂರ್ಣವಾಗಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಹೊಂದಿದೆ. ಮುಂಬಯಿ ಉಪನಗರ ಸೇವೆಯ ಕೆಲವೊಂದು ರೈಲುಗಳಲ್ಲಿ ಮಹಿಳೆಯರ ಬೋಗಿಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಪ್ರಾಯೋಗಿಕ ಅಳವಡಿಸಲಾಗಿದೆ. ಅದೇ ರೀತಿ, ಹಮ್ಸಾಫರ್ ಎಕ್ಸ್ಪ್ರೆಸ್ ಮತ್ತು ಮುಂಬರುವ ತೇಜಸ್ ಎಕ್ಸ್ಪ್ರೆಸ್ ರೈಲಿಗಳು ಕೂಡ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಹೊಂದಿರಲಿವೆ.

ನಿರ್ಭಯಾ ನಿಧಿ:

ಡಿಸೆಂಬರ್ 16, 2012 ರಂದು ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ಘಟನೆಯ ನಂತರ ಯುಪಿಎ ಸರ್ಕಾರ ರೂ 1000 ಕೋಟಿಯ ನಿರ್ಭಯಾ ನಿಧಿಯನ್ನು ಘೋಷಿಸಿತು. ಅದರಂತೆ 2013ರ ಕೇಂದ್ರ ಬಜೆಟ್ನಲ್ಲಿ ದೇಶದ ಮಹಿಳೆಯರ ಘನತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸರ್ಕಾರಿ ಮತ್ತು ಎನ್ಜಿಒಗಳ ಪ್ರಯತ್ನಗಳನ್ನು ಬೆಂಬಲಿಸಲು ನಿರ್ಭಯಾ ನಿಧಿಯನ್ನು ಘೋಷಿಸಲಾಯಿತು. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ (DEA) ಈ ನಿಧಿಯನ್ನು ನಿರ್ವಹಿಸುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಈ ನಿಧಿಯ ನೋಡೆಲ್ ಇಲಾಖೆ.

2017ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ 7.3%: ವಿಶ್ವಸಂಸ್ಥೆ

ವಿಶ್ವ ಸಂಸ್ಥೆ ಬಿಡುಗಡೆಗೊಳಿಸಿರುವ “ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ಮುನ್ನೋಟ” ಶೀರ್ಷಿಕೆಯ ವರದಿಯಲ್ಲಿ, 2017 ರಲ್ಲಿ ಭಾರತದ ಜಿಡಿಪಿ ಶೇ 7.3%ರಷ್ಟು ಬೆಳವಣಿಗೆಯನ್ನು ಕಾಣಲಿದೆ. ವಿಶ್ವಸಂಸ್ಥೆ ಕಳೆದ ಜನವರಿಯಲ್ಲಿ ಬಿಡುಗಡೆಗೊಳಿಸಿದ  ವರದಿಯಲ್ಲಿ 2017ರಲ್ಲಿ ಶೇ 7.7% ರಷ್ಟು ಬೆಳವಣಿಗೆ ಇರಲಿದೆ ಎಂದು ಅಂದಾಜಿಸಲಾಗಿತ್ತು. ಪರಿಷ್ಕೃತ ವರದಿಯಲ್ಲಿ 2018ನೇ ವರ್ಷದಲ್ಲಿ ಶೇ 7.9% ನಷ್ಟು ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಜನವರಿಯಲ್ಲಿ ಬಿಡುಗಡೆಗೊಂಡ ವರದಿಯಲ್ಲಿ ಶೇ.7.6%ರಷ್ಟು ಅಂದಾಜಿಸಲಾಗಿತ್ತು.

ಪ್ರಮುಖಾಂಶಗಳು:

ಪರಿಷ್ಕೃತ ವರದಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಕುಂಠಿತಗೊಳ್ಳಲಿದೆ ಎಂದು ಹೇಳಲಾದರೂ, ಭಾರತವು ವೇಗವಾಗಿ ಬೆಳೆಯುತ್ತಿರುವ ಅಭಿವೃದ್ಧಿಶೀಲ ಆರ್ಥಿಕ ವ್ಯವಸ್ಥೆಯಲ್ಲಿ ಒಂದಾಗಿದ್ದು, ಚೀನಾಕ್ಕಿಂತಲೂ ಮುಂದಿದೆ. 2017 ಮತ್ತು 2018 ರಲ್ಲಿ ಚೀನಾವು 6.5% ರಷ್ಟು ಬೆಳೆಯಲಿದೆ ಎಂದು ವರದಿ ಹೇಳಿದೆ. ನೋಟು ರದ್ದತಿ ನೀತಿಯಿಂದ ಉಂಟಾದ ತಾತ್ಕಾಲಿಕ ಅಡೆತಡೆಗಳ ಹೊರತಾಗಿಯೂ, ಹಣಕಾಸು ಮತ್ತು ಆರ್ಥಿಕ ನೀತಿಗಳಿಂದ ಆರ್ಥಿಕ ಪರಿಸ್ಥಿತಿಗಳು ದೃಢವಾಗಿದೆ.

ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ಮುನ್ನೋಟ:

ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ಮುನ್ನೋಟ ವಿಶ್ವಸಂಸ್ಥೆ ಹೊರತರುವ ಪ್ರಮುಖ ವರದಿಯಾಗಿದೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ (UN / DESA), ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆಫ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (UNCTAD) ಮತ್ತು ಐದು ಯುನೈಟೆಡ್ ನೇಷನ್ಸ್ ಪ್ರಾದೇಶಿಕ ಆಯೋಗಗಳಾದ: ಆಫ್ರಿಕಾದ ಆರ್ಥಿಕ ಆಯೋಗ(ಇಸಿಎ), ಯುರೋಪಿಯನ್ ಎಕನಾಮಿಕ್ ಕಮಿಷನ್ (ಇಸಿಇ), ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್ ಆರ್ಥಿಕ ಇಲಾಖೆ (ಇಸಿಎಲ್ಸಿಸಿ), ಏಷ್ಯಾ ಮತ್ತು ಪೆಸಿಫಿಕ್ (ಇಎಸ್ಸಿಎಪಿ) ಆರ್ಥಿಕ ಮತ್ತು ಸಾಮಾಜಿಕ ಆಯೋಗ ಮತ್ತು ಪಶ್ಚಿಮ ಏಷ್ಯಾ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ಇಎಸ್ಸಿಡಬ್ಲ್ಯೂಎ) ಜಂಟಿಯಾಗಿ ವರದಿಯನ್ನು ಹೊರತರುತ್ತಿವೆ. ಮೇಲಿನ ಸಂಸ್ಥೆಗಳು ಹೊರತುಪಡಿಸಿ, ಯುನೈಟೆಡ್ ನೇಷನ್ಸ್ ವರ್ಲ್ಡ್ ಟೂರಿಸಮ್ ಆರ್ಗನೈಸೇಶನ್ (ಯುಎನ್ಡಬ್ಲ್ಯೂಟಿಒ) ಸಹ ವರದಿಗೆ ಕೊಡುಗೆ ನೀಡುತ್ತದೆ.

ಮೂರು ವರ್ಷಗಳ ನಂತರ “ಮೌಂಟ್ ಲಾಟ್ಸೆ” ಪರ್ವತಾರೋಹಣ

ಮೂರು ವರ್ಷಗಳ ನಂತರ “ಮೌಂಟ್ ಲಾಟ್ಸೆ” ಪರ್ವತಾರೋಹಣಕ್ಕೆ ಮುಕ್ತವಾಗಿದೆ. ಮೌಂಟ್ ಲಾಟ್ಸೆ ವಿಶ್ವದ ನಾಲ್ಕನೇ ಅತಿ ಎತ್ತರದ ಪರ್ವತ. ಭಾರತದ ಪರ್ವತರೋಹಿ ಡೆಬಶಿಶ್ ಬಿಸ್ವಾಸ್ ಮತ್ತು ನ್ಯೂಜಿಲೆಂಡ್ನ ಮಹಿಳಾ ಪರ್ವತಾರೋಹಿ ಮೌಂಟ್ ಲೋಟ್ಸೆ ಏರಿದ ಮೊದಲಿಗರು. ಐಸ್ಲ್ಯಾಂಡ್ನ ಜಾನ್ ಸ್ನೋರಿ ಸಿಗರ್ಸ್ಸನ್ ಮತ್ತು ಐರ್ಲೆಂಡ್ನ ಸಿಯಾನ್ ಒ ಬ್ರೋಲ್ಚೈನ್ ಸಹ ಮೌಂಟ್ ಲಾಟ್ಸೆ ಏರುವ ಮೂಲಕ ತಮ್ಮ ದೇಶಗಳಿಂದ ಮೌಂಟ್ಸ್ ಲಾಟ್ಸೆ ಏರಿದ ಮೊದಲ ಪರ್ವತಾರೋಹಿಗಳು ಎನಿಸಿದ್ದಾರೆ.

            2014 ರಲ್ಲಿ ಹಿಮಪಾತ ಉಲ್ಬಣಗೊಂಡಿದ್ದರಿಂದ ಹಾಗೂ 2015 ರಲ್ಲಿ ವಿನಾಶಕಾರಿ ಭೂಕಂಪಗಳು ಸಂಭವಿಸಿದ ಕಾರಣ ಕಳೆದ ಮೂರು ವರ್ಷಗಳಲ್ಲಿ ಮೌಂಟ್ ಲೋಟ್ಸೆಗೆ ಪರ್ವತಾರೋಹಣವನ್ನು ರದ್ದುಪಡಿಸಲಾಗಿತ್ತು. ಕಳೆದ ವರ್ಷ “ಆಂಗ್ ಫರ್ಬಾ ಶೆರ್ಪಾ” ಮರಣ ಹೊಂದಿದ ಕಾರಣ  ಸ್ಥಗಿತಗೊಳಿಸಲಾಗಿತ್ತು. ಈ ಋತುವಿನಲ್ಲಿ, 100 ಕ್ಕಿಂತ ಹೆಚ್ಚಿನ ಪರ್ವತಾರೋಹಿಗಳು ತಮ್ಮ ಬೆಂಬಲಿಗಲಿರೊಂದಿಗೆ ಮೌಂಟ್ ಲೋಟ್ಸೆ ಪರ್ವತಾರೋಹಣದಲ್ಲಿ ಭಾಗವಹಿಸಲಿದ್ದಾರೆ.

ಮೌಂಟ್ ಲಾಟ್ಸೆ:

ಮೌಂಟ್ ಎವರೆಸ್ಟ್, ಕೆ 2 ಮತ್ತು ಕಾಂಚನಜುಂಗಾ ನಂತರ ಮೌಂಟ್ ಲಾಟ್ಸೆ (8,516 ಮೀಟರ್) ವಿಶ್ವದ ನಾಲ್ಕನೇ ಅತ್ಯುನ್ನತ ಪರ್ವತವಾಗಿದೆ. ಇದು ಟಿಬೆಟ್ ಮತ್ತು ನೇಪಾಳದ ಖುಂಬು ಪ್ರದೇಶಗಳ ನಡುವಿನ ಗಡಿಭಾಗದಲ್ಲಿದೆ. ಮುಖ್ಯ ಶಿಖರಕ್ಕೆ ಹೆಚ್ಚುವರಿಯಾಗಿ, ಪರ್ವತವು ಲೋಟ್ಸೆ ಮಿಡಲ್ (8,414 ಮೀ), ಲಾಟ್ಸೆ ಶಾರ್ (8,383 ಮೀ) ನಂತಹ ಸಣ್ಣ ಶಿಖರಗಳನ್ನು ಒಳಗೊಂಡಿದೆ. ಮುಖ್ಯ ಶಿಖರವನ್ನು ಮೊದಲ ಬಾರಿಗೆ 1856 ರ ಮೇ 18 ರಂದು ಅರ್ನ್ಸ್ಟ್ ರೀಸ್ ಮತ್ತು ಫ್ರಿಟ್ಜ್ ಲುಚಿಂಗರ್ರ ಸ್ವಿಸ್ ತಂಡ ಯಶಸ್ವಿಯಾಗಿ ಏರಿತ್ತು.

ಮೇ 22: ವಿಶ್ವ ಜೀವ ವೈವಿಧ್ಯ ದಿನ (World Biological Diversity Day)

ಪ್ರತಿ ವರ್ಷ, ಮೇ 22 ಅನ್ನು ಅಂತಾರಾಷ್ಟ್ರೀಯ ಜೀವವೈವಿಧ್ಯ ಅಥವಾ ವಿಶ್ವ ಜೀವ ವೈವಿಧ್ಯ ದಿನವೆಂದು ಆಚರಿಸಲಾಗುತ್ತದೆ. ಮೇ 22, 1992 ರಂದು ನೈರೋಬಿಯ UNEP ಪ್ರಧಾನ ಕಚೇರಿಯಲ್ಲಿ ಜೈವಿಕ ವೈವಿಧ್ಯದ ಒಪ್ಪಂದದ ಅಳವಡಿಸಿಕೊಳ್ಳಲಾಯಿತು. 2000ರಲ್ಲಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ನಿರ್ಣಯ ಸಂಖ್ಯೆ 55/201 ರಂತೆ ಮೇ 22ರಂದು ವಿಶ್ವ ಜೀವ ವೈವಿಧ್ಯ ದಿನವನ್ನು ಆಚರಿಸಲು ತೀರ್ಮಾನಿಸಲಾಯಿತು. ಈ ಹಿಂದೆ ಡಿಸೆಂಬರ್ 29ರಂದು ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನವನ್ನು ಆಚರಿಸಲಾಗುತ್ತಿತ್ತು.

ಥೀಮ್:

ವಿಶ್ವ ಜೀವವೈವಿಧ್ಯ ದಿನ-2017 ರ ಥೀಮ್ “ಜೀವವೈವಿಧ್ಯ ಮತ್ತು ಸುಸ್ಥಿರ ಪ್ರವಾಸೋದ್ಯಮ” ಆಗಿದೆ. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ 2017ನೇ ವರ್ಷವನ್ನು ರ “ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ದಿ ಅಂತಾರಾಷ್ಟ್ರೀಯ ವರ್ಷವೆಂದು” ಘೋಷಿಸಿದ್ದು, ಅದಕ್ಕೆ ಪೂರಕವಾಗಿ ಈ ಥೀಮ್ ಹೊಂದಾಣಿಕೆಯಾಗಿದೆ. ಜೀವವೈವಿಧ್ಯತೆಯ ವಿನಾಶವನ್ನು ಕಡಿಮೆ ಮಾಡಿ ಉತ್ತೇಜಿಸಲು 2011-20 ದಶಕವನ್ನು ವಿಶ್ವಸಂಸ್ಥೆಯ ಜೀವವೈವಿಧ್ಯತೆ ದಶಕ ಎಂದು ವಿಶ್ವಸಂಸ್ಥೆ ಘೋಷಿಸಿದೆ.

ಜೀವ ವೈವಿಧ್ಯತೆ:

ಜೀವ ವೈವಿಧ್ಯತೆ ಎಂಬ ಪದವನ್ನು ಮೊದಲ ಬಾರಿಗೆ 1968 ರಲ್ಲಿ ವನ್ಯಜೀವಿ ವಿಜ್ಞಾನಿ ಮತ್ತು ಸಂರಕ್ಷಕ ರೇಮಂಡ್ ಎಫ್. ಡಸ್ಮಾನ್ ಅವರು ಸೃಷ್ಟಿಸಿದರು. ಈ ಪದವು 1980ರ ದಶಕದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿತ್ತು. ಜೀವವೈವಿಧ್ಯತೆಯು “ಒಂದು ಪ್ರದೇಶದ ಜೀನ್ಗಳು, ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆಗಳ ಸಂಪೂರ್ಣತೆ” ಯನ್ನು ಉಲ್ಲೇಖಿಸುತ್ತದೆ. ಜೀವವೈವಿಧ್ಯತೆಯಲ್ಲಿ ಮೂರು ಹಂತಗಳಿವೆ. ಪ್ರಭೇದ ವೈವಿಧ್ಯತೆ, ಪರಿಸರ ವೈವಿಧ್ಯತೆ ಮತ್ತು ತಳಿ ವೈವಿಧ್ಯತೆ. ಹವಾಮಾನ ಬದಲಾವಣೆ ಯಿಂದಾಗುವ ಪರಿಣಾಮಗಳಾದ ಜೀವಿಗಳ ನಷ್ಟ, ಆವಾಸಸ್ಥಾನಗಳ ನಾಶ, ಆಕ್ರಮಣಶೀಲ ಜಾತಿಗಳು, ಆನುವಂಶಿಕ ಮಾಲಿನ್ಯ, ಶೋಷಣೆ ಮತ್ತು ಪರಿಣಾಮಗಳು ಸೇರಿದಂತೆ ಪರಿಸರ ಸಂರಕ್ಷಣೆಯಲ್ಲಿ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಜೀವವೈವಿದ್ಯತೆ ಪದವನ್ನು ಬಳಸಲಾಗುತ್ತದೆ.

ಇರಾನ್ ಅಧ್ಯಕ್ಷರಾಗಿ ಹಸನ್ ರೌಹನಿ ಮರು ಆಯ್ಕೆ

ಹಸನ್ ರೌಹಾನಿ ಅವರು ಇರಾನಿನ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ರೌಹನಿ 2013 ರಲ್ಲಿ ತಮ್ಮ ಮೊದಲ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇರಾನಿನ ಪ್ರತ್ಯೇಕತೆಯನ್ನು ಅಂತ್ಯಗೊಳಿಸಲು ಮತ್ತು ದೇಶದಲ್ಲಿ ನಾಗರಿಕ ಹಕ್ಕುಗಳ ಸುಧಾರಣೆಯನ್ನು ಪ್ರತಿಪಾದಿಸುವ ಮೂಲಕ 2013ರ ಚುನಾವಣೆಯಲ್ಲಿ ಜಯಗಳಿಸಿದರು. ರೌಹಾನಿ ಅವರು ಸೆಹ್ನಾನ್ ಪ್ರಾಂತ್ಯದಲ್ಲಿ ನವೆಂಬರ್ 12, 1948 ರಂದು ಜನಿಸಿದರು. ಟೆಹ್ರಾನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ಸ್ಕಾಟ್ಲೆಂಡ್ನ ಗ್ಲ್ಯಾಸ್ಗೋ ಕ್ಯಾಲೆಡೋನಿಯನ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪಡೆದಿದ್ದಾರೆ. 68 ವರ್ಷ ವಯಸ್ಸಿನ ರೌಹಾನಿ ವಕೀಲ, ಶಿಕ್ಷಣ ತಜ್ಞ ಮತ್ತು ಮಾಜಿ ರಾಜತಾಂತ್ರಿಕರಾಗಿದ್ದಾರೆ.

ರೌಹನಿ 1980-88 ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದ್ದರು. ಇರಾನಿನ ಅತ್ಯುನ್ನತ ಭದ್ರತಾ ಹುದ್ದೆಯಾದ  ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ನ ಕಾರ್ಯದರ್ಶಿಯಾಗಿ 16 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.. ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಇರಾನಿನ ಸಂಬಂಧಗಳನ್ನು ಪುನರ್ನಿರ್ಮಿಸಲು ರೌಹಾನಿ ನಿರಂತರವಾಗಿ ಕೆಲಸ ಮಾಡಿದರು. ಸೆಪ್ಟೆಂಬರ್ 2013ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಇರಾನಿನ ಮೊದಲ ಮುಖಂಡ.

Leave a Comment

This site uses Akismet to reduce spam. Learn how your comment data is processed.